Sunday, July 24, 2011

ಪ್ರೀಜಾ ಶ್ರೀಧರನ್ ಸಂದರ್ಶನ


ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಬಳಿಕ ಪ್ರೀಜಾ ಶ್ರೀಧರನ್ 2 ವರ್ಷ ಕಾಲ ಅಭ್ಯಾಸವನ್ನೇ ನಡೆಸಿರಲಿಲ್ಲ. ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಮೇಲೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂಬ ಭಾವನೆಯೊಂದಿಗೆ ಅವರು ಸಂತೃಪ್ತಿ ಹೊಂದಿದ್ದರು. ಆದರೆ, 2010ರ ಡೆಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸಾಧನೆ ಮಾಡುವಂತೆ ಅಮ್ಮ ಮತ್ತು ಅಣ್ಣ ಹುರಿದುಂಬಿಸಿದ್ದರ ಪರಿಣಾಮ ಪ್ರೀಜಾ ಟ್ರಾಕ್ಗೆ ಮರಳಿದ್ದರು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲಲು ವಿಫಲವಾದಾಗ ಮತ್ತೆ ನಿರಾಸಕ್ತಿ ಪ್ರೀಜಾರನ್ನು ಕಾಡಿತ್ತು. ಇನ್ನು ಎಲ್ಲಿಗೂ ಓಡುವುದಿಲ್ಲ ಎಂಬ ಹತಾಶೆಯ ಹಂತವನ್ನು ಅವರು ತಲುಪಿದ್ದರು. ಆದರೆ, ಮತ್ತೆ ಕುಟುಂಬದವರು ಮತ್ತು ಕೋಚ್ಗಳು ಹಾಗೆ ಮಾಡದಂತೆ ತಡೆದರು. ಅದರ ಪರಿಣಾಮ ಒಂದೇ ತಿಂಗಳಲ್ಲಿ ಫಲ ಸಿಕ್ಕಿತ್ತು. ಚೀನಾದ ಗುವಾಂಗ್ಝೌನಲ್ಲಿ ನಡೆದ ಏಷ್ಯಾಡ್ನಲ್ಲಿ ಪ್ರೀಜಾ 10,000 ಮೀ. ಓಟದಲ್ಲಿ ಚಿನ್ನ, 5000ಮೀ. ಓಟದಲ್ಲಿ ಬೆಳ್ಳಿ ಗೆದ್ದು ಬೀಗಿದ್ದರು.
ಈಗ ಪ್ರೀಜಾ ಏಷ್ಯಾಡ್ನಲ್ಲಿ ಗೆದ್ದ ಚಿನ್ನವನ್ನು ಲಂಡನ್ ಒಲಿಂಪಿಕ್ಸ್ನಲ್ಲಿ ಪದಕವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯೊಂದಿಗೆ ಶ್ರಮ ಪಡುತ್ತಿದ್ದಾರೆ. ಗುವಾಂಗ್ಝೌ ಏಷ್ಯಾಡ್ ಸಾಧನೆಗಾಗಿ ಅವರಿಗೆ ಭಾರತ ಸರ್ಕಾರದ ಮಹತ್ವದ ಕ್ರೀಡಾ ಪುರಸ್ಕಾರ ಅರ್ಜುನ ಪ್ರಶಸ್ತಿ ಲಭ್ಯವಾಗಿದೆ. ಆರ್ಥಿಕ ಹಿನ್ನೆಲೆಯಿಲ್ಲದೆ, ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಕೇರಳದ ಹುಡುಗಿಯನ್ನು ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಪ್ರಾಯೋಜಿಸುತ್ತಿದೆ. ಪ್ರೀಜಾ ತಮ್ಮ ಕನಸಿನ ಹಾದಿಯಲ್ಲಿ ಶರವೇಗದಲ್ಲಿ ಓಡುತ್ತಿದ್ದಾರೆ.
ಬೆಂಗಳೂರಿನ ಸಾಯ್ ದಕ್ಷಿಣ ಕೇಂದ್ರದಲ್ಲಿ ಒಲಿಂಪಿಕ್ಸ್ ತಯಾರಿನಲ್ಲಿ ಮಗ್ನರಾಗಿರುವ ಪ್ರೀಜಾ ಶ್ರೀಧರನ್ ಶನಿವಾರ ಅರ್ಜುನ ಪ್ರಶಸ್ತಿ, ತಮ್ಮ ವೃತ್ತಿಜೀವನ ಹಾಗೂ ಲಂಡನ್ ಪೂರ್ವ ತಯಾರಿಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದರು.
ಏಷ್ಯಾಡ್ನ ಸಾಧನೆ ಬಳಿಕ ಅರ್ಜುನ ಗೌರವವನ್ನು ನಾನು ನಿರೀಕ್ಷಿಸಿದ್ದೆ. ಬಹಳ ಸಂತೋಷವಾಗಿದೆ. ಈ ಪ್ರಶಸ್ತಿ ಇನ್ನೂ ದೊಡ್ಡ ಸಾಧನೆಗಳಿಗೆ ಪ್ರೇರಣೆ ಒದಗಿಸಲಿದೆ ಎಂದು ಪ್ರೀಜಾ ಖುಷಿಯಿಂದ ಹೇಳಿಕೊಂಡರು.
ನನ್ನ ಈ ಸಾಧನೆಯ ಎಲ್ಲಾ ಶ್ರೇಯ ನನ್ನ ಅಮ್ಮ, ಅಣ್ಣ ಪ್ರದೀಪ್ ಮತ್ತು ಕೋಚ್ಗಳಿಗೆ ಸಲ್ಲಬೇಕು. ನಿನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದೆ. ಅವರೆಲ್ಲರಿಗೂ ಅತ್ಯಾನಂದವಾಗಿತ್ತು. ಟಿವಿಯಲ್ಲಿ ನಿನ್ನ ಸುದ್ದಿಯನ್ನೇ ನೋಡುತ್ತಿದ್ದೇವೆ ಎಂದು ಹೇಳಿಕೊಂಡು ಸಂಭ್ರಮ ಪಟ್ಟರು ಎಂದು ಪ್ರೀಜಾ ಹೇಳಿಕೊಂಡರು.
ಪ್ರೀಜಾ ಏಷ್ಯಾಡ್ನಲ್ಲಿ ಚಿನ್ನ ಗೆದ್ದ ಸಂದರ್ಭದಲ್ಲೂ ಮೊದಲಿಗೆ ಅಮ್ಮ ಮತ್ತು ಅಣ್ಣನನ್ನು ನೆನಪಿಸಿಕೊಂಡಿದ್ದರು. ಬಡತನದ ಬೆಂಕಿಯಲ್ಲಿ ಅರಳಿದ ಹೂವು ಪ್ರೀಜಾ ಹಾಗೆ ಮಾಡುವುದು ಸಹಜವೂ ಆಗಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ಮಲ್ಲಕ್ಕಾನಂ ಹಳ್ಳಿಯ ಹುಡುಗಿ ಪ್ರೀಜಾ 4ನೇ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದರು. ಆಗಿನಿಂದಲೂ ಅಮ್ಮ ರಮಣಿ ಶ್ರೀಧರನ್ ಅವರೇ ಮನೆಗೆಲಸ ಮಾಡಿ ಮಕ್ಕಳನ್ನು ಸಾಕಿದ್ದರು. ಪ್ರೀಜಾ ಅಣ್ಣ ಪ್ರದೀಪ್ 8ನೇ ತರಗತಿಯಲ್ಲೇ ಶಾಲೆ ತೊರೆದು ಕಾರ್ಪೆಂಟರ್ ಕೆಲಸಕ್ಕೆ ಸೇರುವ ಮೂಲಕ ಕುಟುಂಬಕ್ಕೆ ನೆರವಾಗುತ್ತಿದ್ದರು. ಆದರೆ ಆ ಕಷ್ಟದ ದಿನಗಳಲ್ಲೂ ಪ್ರೀಜಾರ ಓಡುವ ಆಸಕ್ತಿಗೆ ಅವರು ನೀರೆರೆದಿದ್ದರು.
ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ಕೋಚ್ ರಣೇಂದ್ರ ಅವರ ಮನೆಯಲ್ಲೇ ಇದ್ದುಕೊಂಡು ಅಭ್ಯಾಸ ನಡೆಸಿದ್ದ ಪ್ರೀಜಾ, ಪಾಲಂನಲ್ಲಿ ಆಲ್ಫಾನ್ಸೋ ಕಾಲೇಜು ಸೇರಿದ ಮೇಲೆ ಥಂಕಚ್ಚನ್ ಮ್ಯಾಥ್ಯೂ ಅವರಿಂದ ನೆರವು ಪಡೆದಿದ್ದರು.
ಕೊನೆಗೂ ಪ್ರೀಜಾಗೆ ರೈಲ್ವೇ ಉದ್ಯೋಗ ದೊರಕಿದ ಮೇಲೆ ಅವರು ಕುಟುಂಬ ನೆಲೆ ಕಂಡುಕೊಂಡಿತು. ರೈಲ್ವೇಯಲ್ಲಿ ಕೆಲಸ ಸಿಕ್ಕಿದ್ದುನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ಎಂದು ಪ್ರೀಜಾ ಈಗಲೂ ಹೇಳುತ್ತಾರೆ.
ಪ್ರೀಜಾ ಕಳೆದ ವರ್ಷ ಏಷ್ಯಾಡ್ನಲ್ಲಿ 10,000ಮೀ. ಓಟವನ್ನು 31 ನಿಮಿಷ 50.28ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಚಿನ್ನ ಗೆದ್ದಿದ್ದರು. ಇದು ರಾಷ್ಟ್ರೀಯ ದಾಖಲೆಯೂ ಹೌದು. ಹಾಗೆ ನೋಡಿದರೆ 5000 ಮೀ. ಮತ್ತು 10,000 ಮೀ. ಓಟಗಳೆರಡರಲ್ಲೂ ರಾಷ್ಟ್ರೀಯ ದಾಖಲೆ ಪ್ರೀಜಾ ಹೆಸರಲ್ಲೇ ಇದೆ. ಮುಂದಿನ ವರ್ಷದ ಲಂಡನ್ ಒಲಿಂಪಿಕ್ಸ್ಗೆ ‘ಎ’ ಶ್ರೇಣಿಯ ಅರ್ಹತೆ ಗಳಿಸಲು ಪ್ರೀಜಾ ಗುವಾಂಗ್ಝೌನಲ್ಲಿ ದಾಖಲಿಸಿದ ಅವಧಿಯನ್ನು ಪುನರಾವರ್ತಿಸಿದರೆ ಸಾಕು. ಅವರಿಂದ ಅದು ಸಾಧ್ಯವೂ ಹೌದು. ಮುಂದಿನ ತಿಂಗಳು ಕೊರಿಯಾದಲ್ಲಿ ನಡೆಯುವ ವಿಶ್ವ ಚಾಂಪಿಯನ್ಷಿಪ್ನಲ್ಲೇ ಈ ಸಾಧನೆ ಮಾಡಿ ಲಂಡನ್ಗೆ ಟಿಕೆಟ್ ಬುಕ್ ಮಾಡುವ ವಿಶ್ವಾಸವನ್ನು ಪ್ರೀಜಾ ಹೊಂದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪದಕದ ಕನಸು ಕಾಣಲು 10,000ಮೀ. ಓಟವನ್ನು ಕನಿಷ್ಠ 29 ಪ್ಲಸ್ ನಿಮಿಷದಲ್ಲಿ ಓಡಬೇಕು. ಇನ್ನೂ ಒಂದು ವರ್ಷದಲ್ಲಿ ಆ ವೇಗ ರೂಢಿಸಿಕೊಳ್ಳಲು ಶತ ಪ್ರಯತ್ನ ಮಾಡುವುದಾಗಿ ಪ್ರೀಜಾ ಹೇಳುತ್ತಾರೆ.
ಮಿತ್ತಲ್ ಸಹಕಾರ: ಪ್ರೀಜಾ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪ್ರಾಯೋಜಕರ ಬೆಂಬಲವಿಲ್ಲದೆ ತಾಪತ್ರಯ ಅನುಭವಿಸಿದ್ದರು. ಆದರೆ, ಈಗ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಅವರ ಒಲಿಂಪಿಕ್ಸ್ ತಯಾರಿಯ ಪೂರ್ಣ ವೆಚ್ಚವನ್ನು ಅದು ಭರಿಸಲಿದೆ.
ಲಕ್ಷ್ಮೀ ಮಿತ್ತಲ್ ಹಾಗೂ ಅಮಿತ್ ಭಾಟಿಯಾ ಮಹತ್ವಾಕಾಂಕ್ಷೆಯ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಸ್ಥಾಪನೆಗೊಂಡಿದ್ದೇ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಪದಕ ವಿಜೇತರನ್ನು ರೂಪಿಸುವ ಕನಸಿನಿಂದ. ಆರ್ಚರಿ, ಕುಸ್ತಿ, ಶೂಟಿಂಗ್, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ನಲ್ಲಿ ಅನೇಕ ಪ್ರತಿಭಾವಂತರು ಸದ್ಯ ಎಂಸಿಟಿ ನೆರವಿನಿಂದ ಒಲಿಂಪಿಕ್ಸ್ ಪದಕದ ಕನಸು ಕಾಣುತ್ತಿದ್ದಾರೆ. ಅಭಿನವ್ ಬಿಂದ್ರಾ ಒಲಿಂಪಿಕ್ಸ್ ಸ್ವರ್ಣ ಗೆದ್ದ ಮಿತ್ತಲ್ ಟ್ರಸ್ಟ್ ಪ್ರಾಯೋಜನೆಯ ಮೊದಲ ಚಾಂಪಿಯನ್. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎಂಸಿಟಿ ಪ್ರಾಯೋಜಿತ ಅಥ್ಲೀಟ್ಗಳು 7 ಚಿನ್ನ, 7 ಬೆಳ್ಳಿ, 2ಕಂಚು, ಏಷ್ಯಾಡ್ನಲ್ಲಿ 3 ಚಿನ್ನ, 5 ಬೆಳ್ಳಿ, 8 ಕಂಚು ಗೆದ್ದಿದ್ದರು. ಈಗ ಪ್ರೀಜಾ ಎಂಸಿಟಿ ಪತಾಕೆಯನ್ನು ಲಂಡನ್ನಲ್ಲಿ ಹಾರಿಸಲು ತರಬೇತಿ ನಡೆಸಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ಗೆ ಸದ್ಯ ಕಳಂಕ ತಂದಿರುವ ಉದ್ದೀಪನ ಕಳಂಕದ ಬಗ್ಗೆ ಪ್ರೀಜಾ ಪ್ರತಿಕ್ರಿಯಿಸಲು ಇಷ್ಟ ಪಡುವುದಿಲ್ಲ. ಎಲ್ಲವೂ ಅಯೋಮಯವಾಗಿದೆ. ಅದೆಲ್ಲಾ ಹೇಗಾಯಿತೆಂದೇ ಗೊತ್ತಾಗುತ್ತಿಲ್ಲ ಎಂದು ಪ್ರೀಜಾ ಹೇಳಿಕೊಂಡರು.
ಕಳೆದ ವರ್ಷ ಏಷ್ಯಾಡ್ನಲ್ಲಿ ಪ್ರೀಜಾ ಗೆದ್ದ ಬಂಗಾರದ ಪದಕಕ್ಕೆ ಕೇಂದ್ರ ಸರ್ಕಾರ 10 ಲಕ್ಷ ರೂ. ನಗದು ಬಹುಮಾನ ನೀಡಿತ್ತು. ಆ ಹಣದಲ್ಲಿ ಪ್ರೀಜಾ ಪಾಲಕ್ಕಾಡ್ನ ಅಕ್ಕಥೇಥರಾದಲ್ಲಿ ಹೊಸದೊಂದು ಮನೆ ಕಟ್ಟಿಸುತ್ತಿದ್ದಾರೆ. ಮುಂದಿನ ತಿಂಗಳು ಗೃಹಪ್ರವೇಶ ನಡೆಯುವ ನಿರೀಕ್ಷೆ ಇದೆ. ನಿನಗೆ ಮದುವೆಯ ವಯಸ್ಸಾಯಿತು ಎಂದು ಅಮ್ಮ ರಮಣಿ ಒತ್ತಾಯ ಮಾಡಲಾರಂಭಿಸಿದ್ದಾರೆ. ಆದರೆ, ಸೂಕ್ತ ಹುಡುಗ ಇನ್ನೂ ಸಿಕ್ಕಿಲ್ಲ. ಅಷ್ಟಕ್ಕೂ ಅಮ್ಮ ಹುಡುಗನನ್ನು ಹುಡುಕಿದರೂ ಆತನನ್ನು ನೋಡಲು ನಾನು ಮನೆಯಲ್ಲಿರುವುದಿಲ್ಲ ಎಂದು ಪ್ರೀಜಾ ಹೇಳಿಕೊಳ್ಳುತ್ತಾರೆ.
ಸದ್ಯಕ್ಕಂತೂ ಪ್ರೀಜಾ ಗಮನವೆಲ್ಲಾ ಒಲಿಂಪಿಕ್ಸ್ ಮೇಲೆ. ಬೆಳಗ್ಗೆ , ಸಂಜೆ ತಲಾ 25 ಕಿಮೀಗಳಂತೆ ದಿನಂಪ್ರತಿ 50ಕಿಮೀ ಓಡುತ್ತಿರುವ ಪ್ರೀಜಾ ದೊಡ್ಡ ಗುರಿಯ ಕಡೆಗೆ ಚಿರತೆ ವೇಗದಲ್ಲಿ ಸಾಗುತ್ತಿದ್ದಾರೆ.

ಪ್ರೀಜಾ ಸಾಧನೆ
1998: ತಂಡ ಬೆಳ್ಳಿ - ಏಷ್ಯಾ ಗುಡ್ಡಗಾಡು ಓಟ, ಹಾಂಕಾಂಗ್
2000: 5000 ಮೀ ಚಿನ್ನ, 10,000ಮೀ. ಬೆಳ್ಳಿ- ಎಸ್ಎಎಫ್ ಗೇಮ್ಸ್
2004: ಚಿನ್ನ, ಏಷ್ಯಾ ಒಳಾಂಗಣ ಕೂಟ, ಟೆಹ್ರಾನ್
2006: 5000ಮೀ. ಬೆಳ್ಳಿ, ಏಷ್ಯನ್ ಅಥ್ಲೆಟಿಕ್ಸ್, ಜೋರ್ಡಾನ್
2008: ಒಲಿಂಪಿಕ್ಸ್ನ 10,000ಮೀ. ಓಟದಲ್ಲಿ ಭಾರತ ಪ್ರತಿನಿಧಿಸಿದ ಮೊದಲ ಮಹಿಳೆ ಎಂಬಶ್ರೇಯ.
2010: 10,000ಮೀ. ಚಿನ್ನ, 5000ಮೀ. ಬೆಳ್ಳಿ, ಗುವಾಂಗ್ಝೌ ಏಷ್ಯಾಡ್

No comments:

Post a Comment