Sunday, July 24, 2011

ನಂಬಿ ಬಂದವರ ವಿಶ್ವಾಸಕ್ಕೆ ದ್ರೋಹವಾಗದಿರಲಿ...




ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು

ನಿಮ್ಮ ಮಡಿಲೊಳಗಿರಲು ತಂದಿರುವೆವು
ಕೊಳ್ಳಿರೀ ಮಗುವನ್ನು, ನಮ್ಮ ಮನೆ ಬೆಳಕನ್ನು....
-ವಿ. ಸೀತಾರಾಮಯ್ಯ



ಉತ್ತಮ ಬದುಕಿಗೆ ಅವಶ್ಯವಾದ ಎಲ್ಲಾ ಗುಣಗಳನ್ನು ಕಲಿಸುವ ಗುಣ ಕ್ರೀಡೆಗಿದೆ. ಆತ್ಮವಿಶ್ವಾಸ, ಏಕಾಗ್ರತೆ, ಪರಿಶ್ರಮ, ಸಂಯಮ, ಸಮಯಸ್ಫೂರ್ತಿ, ನ್ಯಾಯಪರತೆ, ನೈತಿಕತೆ ಇತ್ಯಾದಿ ಗುಣ-ಮೌಲ್ಯಗಳು ಯಶಸ್ವಿ ಕ್ರೀಡಾಪಟುವಾಗಲು ಅಗತ್ಯ ಎಂದು ಕ್ರೀಡೆ ಕಲಿಸುತ್ತದೆ. ಇನ್ನು ಕ್ರೀಡಾ ಸಾಧನೆಗಳಿಗೆ ಬಹುಮುಖ್ಯವಾದ ಅಡಿಪಾಯ ಪರಸ್ಪರ ವಿಶ್ವಾಸ. ಕ್ರೀಡಾಪಟುವಿಗೆ ತರಬೇತುದಾರನ ಮೇಲೆ, ತರಬೇತುದಾರನಿಗೆ ಕ್ರೀಟಾಪಟುವಿನ ಮೇಲೆ ವಿಶ್ವಾಸವಿಲ್ಲದೇ ಹೋದರೆ ಆಟ ನಡೆಯುವುದಿಲ್ಲ. ಆದರೆ, ಆ ವಿಶ್ವಾಸವೇ ಅತ್ಯಾಚಾರಕ್ಕೊಳಗಾಗುತ್ತಿರುವುದು ಕ್ರೀಡೆಯ ದುರಂತ.
ಪೋಷಕರು ತಮ್ಮ ಹಾಲುಗಲ್ಲದ ಹಸುಳೆಯನ್ನು ಕ್ರೀಡಾ ದೃಷ್ಟಿಕೋನದಿಂದ ಮಾತ್ರ ತಮಗೆ ಪರಿಚಯವಿರುವ ಒಬ್ಬ ಕೋಚ್ ಬಳಿಗೆ ತರಬೇತಿಗೆಂದು ಕಲಿಸುವುದು ವಿಶ್ವಾಸದಿಂದ. ನಮ್ಮ ಮಗಳೂ ಇವರ ಬಳಿ ಕಲಿತರೆ ದೊಡ್ಡ ಸಾಧನೆ ಮಾಡುತ್ತಾಳೆ ಎಂಬ ನಂಬಿಕೆ ಮಾತ್ರ ಅಲ್ಲಿರುತ್ತದೆ. ಆದರೆ, ಅಂಥ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವ ಕೋಚ್ಗಳ ವಿಶ್ವಾಸಘಾತದ ಪ್ರಕರಣಗಳು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿವೆ.
ತರಬೇತುದಾರನೆಂದರೆ ಗುರು. ಗುರು ದೇವರ ಸಮಾನ ಎನ್ನುವುದು ಭಾರತೀಯ ನಂಬಿಕೆ. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕೆನ್ನುವ ಏಕೈಕ ಕನಸಿನೊಂದಿಗೆ ತರಬೇತಿಗೆ ಬರುವ ಕ್ರೀಡಾಪಟುಗಳಲ್ಲಿ ನಿಶ್ಚಿತವಾಗಿಯೂ ಅನ್ಯ ಚಿಂತನೆಗಳಿರುವುದಿಲ್ಲ. ಆದರೆ, ಕೆಲವು ತರಬೇತುದಾರರು ಮುಗ್ಧ ಆಟಗಾರ್ತಿಯರನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ‘ಗುರುದಕ್ಷಿಣೆ’ ಪಡೆಯುವ ಪಿಡುಗು ಇಂದು ನಿನ್ನೆಯದೂ ಅಲ್ಲ.
ಕಳೆದ ವರ್ಷ ಹಾಕಿ ಆಟಗಾರ್ತಿ ರಂಜಿತಾ ಆಗ ರಾಷ್ಟ್ರೀಯ ಮಹಿಳಾ ತಂಡದ ಕೋಚ್ ಆಗಿದ್ದ ಮಹಾರಾಜ್ ಕಿಶನ್ ಕೌಶಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ, ಕೌಶಿಕ್ ಕೋಚ್ ಹುದ್ದೆಯಿಂದ ಅಮಾನತುಗೊಂಡಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಒಬ್ಬ ಸಾಮಾನ್ಯ ಅತ್ಯಾಚಾರಿಗೆ ಅನ್ವಯವಾಗುವ ಕಾನೂನು ಕ್ರೀಡಾ ಕೋಚ್ಗಳಿಗೆ ಯಾವತ್ತೂ ಅನ್ವಯಿಸುವುದಿಲ್ಲ. ಆರೋಪಗಳೆಲ್ಲವೂ ತಮ್ಮ ಹೆಸರು ಕೆಡಿಸಲು ಮಾಡುವ ಷಢ್ಯಂತ್ರ ಎಂಬ ನೆಪದಿಂದ ಅವರೆಲ್ಲರೂ ಜಾರಿಕೊಂಡು ಬಿಡುತ್ತಾರೆ.
ಒಲಿಂಪಿಕ್ಸ್ನಲ್ಲಿ ವೇಟ್ಲಿಫ್ಟಿಂಗ್ ಕಂಚು ಗೆದ್ದಿರುವ ಕರ್ಣಂ ಮಲ್ಲೇಶ್ವರಿ ಸಹ ಅನೇಕ ವರ್ಷಗಳಿಂದ ಕೆಲವು ವೇಟ್ಲಿಫ್ಟಿಂಗ್ ಕೋಚ್ಗಳು ಮುಗ್ಧ ಲಿಫ್ಟರ್ಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸತತ 5 ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ ಬಾಕ್ಸಿಂಗ್ನಲ್ಲೂ ಇಂಥ ಪಿಡುಗಿದೆ ಎಂದರು. ಅಥ್ಲೆಟಿಕ್ಸ್ನಲ್ಲೂ ಸಾಕಷ್ಟು ಮಾಜಿ ಅಥ್ಲೀಟ್ಗಳು ನಮ್ಮ ಕಾಲದಿಂದಲೂ ಉತ್ತಮ ಅವಕಾಶಕ್ಕೆ ಪ್ರತಿಯಾಗಿ ಲೈಂಗಿಕ ‘ಗುರುದಕ್ಷಿಣೆ’ ಪಡೆಯುವ ಪ್ರವೃತ್ತಿ ಇದೆ. ಆದರೆ, ನಮಗೆ ಅದರ ಅನುಭವ ಆಗಿಲ್ಲ ಎನ್ನುತ್ತಾರೆ. ಕೋಚ್ಗಳ ಕಾಮ ಪ್ರವೃತ್ತಿಗೆ ಬೇಸತ್ತು ಅದೆಷ್ಟೋ ಯುವ ಪ್ರತಿಭೆಗಳು ಕ್ರೀಡಾ ಕಣವನ್ನೇ ತೊರೆದು ಹೋಗಿದ್ದಾರೆ. ಕೆಲವು ಪ್ರತಿಭಾವಂತರ ಉತ್ತಮ ಸಾಧನೆಗೆ ಕೋಚ್ ಜೊತೆಗಿನ ‘ಹೊಂದಾಣಿಕೆ ಕಾರಣ’ ಎಂದು ಹೇಳುವವರೂ ಇದ್ದಾರೆ. ಕೋಚ್ ಮಾತ್ರವೇ ಅಲ್ಲ, ಆಯ್ಕೆಗಾರರು, ಒಕ್ಕೂಟಗಳ ಪದಾಧಿಕಾರಿಗಳು ವಿವಿಧ ತಂಡಗಳಿಗೆ ಆಯ್ಕೆ ಮಾಡುವಾಗ ಯಾವ ರೀತಿ ಆಟಗಾರ್ತಿಯರಿಂದ ‘ಸೇವೆ’ ಬಯಸುತ್ತಾರೆ ಎಂದು ಕಥೆ ಹೇಳಿದ ಅನೇಕರಿದ್ದಾರೆ.
ಒಟ್ಟಾರೆ, ಈ ಎಲ್ಲಾ ಪ್ರಕರಣಗಳು ಸೂಚಿಸುವುದು ಕ್ರೀಡೆಯಲ್ಲಿನ ವಿಶ್ವಾಸಘಾತ.
ರಾಷ್ಟ್ರೀಯ ಆಯ್ಕೆ ಟ್ರಯಲ್ಸ್ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಉತ್ತರ ಪ್ರದೇಶದ ಅಪ್ರಾಪ್ತ ಖೋ-ಖೋ ಆಟಗಾರ್ತಿಯ ಮೇಲೆ ಗೋವಾದಲ್ಲಿ ಅತ್ಯಾಚಾರ ಎಸಗಿರುವ ಕೋಚ್ ಒಬ್ಬ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಇದು ಒಂದು ನಿದರ್ಶನ ಮಾತ್ರ. ಬೆಳಕಿಗೇ ಬರದ ಇಂಥ ಪ್ರಕರಣಗಳು ಅದೆಷ್ಟೋ ಇವೆ.
ಹುಡುಗಿಯರು ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣಕ್ಕೆ ಕ್ರೀಡಾಕೋಟಾದಲ್ಲಿ ಸ್ಥಾನ ಇತ್ಯಾದಿ ಆಕರ್ಷಣೆಗಳಿಂದ ವಿವಿಧ ಕ್ರೀಡೆಗಳನ್ನು ಆಡುತ್ತಿರುತ್ತಾರೆ. ಪೋಷಕರ ಒತ್ತಾಸೆಯೂ ಇದಕ್ಕೆ ಇರುತ್ತದೆ. ಶಾಲಾ, ಕಾಲೇಜು ಮಟ್ಟದಲ್ಲಿ ವಿವಿಧ ರಾಜ್ಯ, ರಾಷ್ಟ್ರ ಮಟ್ಟದ ಟೂರ್ನಿಗಳಿಗಾಗಿ ದೂರದೂರದ ಊರುಗಳಿಗೆ ಹೋಗಬೇಕಾಗುತ್ತದೆ. ದುರಂತವೆಂದರೆಎಷ್ಟೋ ಬಾರಿ ರಾಷ್ಟ್ರ ಮಟ್ಟದ ಟೂರ್ನಿಗಳಿಗೆ ದೂರದ ರಾಜ್ಯಗಳಿಗೆ ವಾರಗಟ್ಟಲೆ ತೆರಳುವ ಬಾಲಕಿಯರ ತಂಡದ ಜೊತೆಗೆ ಓರ್ವ ಮಹಿಳಾ ಸಹಯೋಗಿಯೂ ಇರುವುದಿಲ್ಲ. ತಂಡದ ಕೋಚ್, ಮ್ಯಾನೇಜರ್ ಎಲ್ಲರೂ ಪುರುಷರೇ ಆಗಿರುತ್ತಾರೆ. ಕೆಲವು ಪ್ರಕರಣಗಳಲ್ಲಿ ತಂಡದೊಂದಿಗೆ ತೆರಳುವ ಅಧಿಕಾರಿಗಳು, ಕೋಚ್ಗಳಿಗೆ ಸಹಕರಿಸುವಂಥ ಮಹಿಳೆಯರನ್ನೇ ಕರೆದೊಯ್ಯಲಾಗುತ್ತದೆ ಎಂಬ ಆರೋಪಗಳೂ ಇವೆ.
ಕ್ರೀಡೆಯನ್ನು ಕಾಡುತ್ತಿರುವ ಉದ್ದೀಪನ ವ್ಯಸನದ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯವೇ ಗಮನ ಹರಿಸಿದೆ. ಕ್ರೀಡೆಗೆ ಮಾರಕವಾಗಿರುವ ಲೈಂಗಿಕ ಕಿರುಕುಳದ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲು ಇದು ಸಕಾಲ. ಪ್ರತೀ ಬಾರಿ ಪ್ರಕರಣವೊಂದು ಬಯಲಿಗೆ ಬಂದಾಗ ತನಿಖಾ ಸಮಿತಿ ರಚಿಸಿ ಹಗರಣ ಮುಚ್ಚಿಹಾಕುವ ಪ್ರವೃತ್ತಿಯಿಂದ ವ್ಯವಸ್ಥೆಗೆ ಒಳ್ಳೆಯದಲ್ಲ. ಜೊತೆಗೆ ಕೇವಲ ಆಟವಾಡಲು ಬಂದಿರುವ ಆಟಗಾರ್ತಿಯರು ಹಾಗೂ ಮಕ್ಕಳನ್ನು ಕಳಿಸುವ ಪೋಷಕರ ವಿಶ್ವಾಸಕ್ಕೆ ಆಗುವ ವಜ್ರಘಾತವನ್ನು ಒಲಿಂಪಿಕ್ಸ್ ಪದಕದಿಂದಲೂ ಸರಿಪಡಿಸಲು ಸಾಧ್ಯವಿಲ್ಲ.
ಬದುಕಿಗೆ ಬಂಗಾರದ ಬೆಲೆಯೇ ಹೊರತು ಬಂಗಾರದ ಪದಕದಿಂದ ಬದುಕಿನ ಬೆಲೆ ಕಟ್ಟಲು ಸಾಧ್ಯವಿಲ್ಲ.

No comments:

Post a Comment