Tuesday, June 21, 2011
ನಂಬಿ ಕೆಟ್ಟವರಿಲ್ಲವೋ...
ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ನ ಮುಖವಾದರೆ, ರಾಹುಲ್ ದ್ರಾವಿಡ್ ಬೆನ್ನೆಲುಬು. ಇದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.
ಬಹುಶಃ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲೋ, ವೆಸ್ಟ್ ಇಂಡೀಸ್ನಲ್ಲೋ ಜನಿಸಿದ್ದರೆ ಈ ಹೊತ್ತಿಗೆ ಆ ರಾಷ್ಟ್ರದ ಸರ್ವಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳುತ್ತಿದ್ದರು ಅಥವಾ ಭಾರತದಲ್ಲೇ ಸಚಿನ್ ತೆಂಡುಲ್ಕರ್ ಸಮಕಾಲೀನರೆನಿಸದೆ ಬೇರೊಂದು ಕಾಲಘಟ್ಟದಲ್ಲಿ ಜನಿಸಿದ್ದರೆ ಅವರ ಸಾಧನೆಗಳಿಗೆ ಇನ್ನೂ ಹೆಚ್ಚಿನ ಮಹತ್ವ ಸಿಕ್ಕಿರುತ್ತಿತ್ತು.
ಯಶಸ್ಸೆಂಬ ಗಗನಚುಂಬಿ ಕಟ್ಟಡದ ತುತ್ತತುದಿಗೆ ಸಚಿನ್ ಲಿಫ್ಟ್ ಏರಿಕೊಂಡು ಶರವೇಗದಲ್ಲಿ ಏರಿದರೆ, ದ್ರಾವಿಡ್ ಒಂದೊಂದೇ ಮೆಟ್ಟಿಲು ಕ್ರಮಿಸಿಕೊಂಡು ಸ್ಥಿರವಾಗಿ ಏರಿದರು.
ದ್ರಾವಿಡ್ ಎಂದೊಡನೆ ಕಣ್ಮುಂದೆ ಸುಳಿಯುವುದು ಅವರ ಸದ್ವರ್ತನೆ, ಸೌಜನ್ಯ, ವಿಧೇಯತೆ ಮತ್ತು ಸರಳತೆ. ಅವರು ಸ್ಟೈಲಿಷ್ ಆಗಿದ್ದರೂ ಶೋಕಿಲಾಲರಲ್ಲ. ವಾಗ್ಮಿಯಾಗಿದ್ದರೂ ವಾಚಾಳಿಯಲ್ಲ. ಶಿಸ್ತಿನ ವ್ಯಕ್ತಿಯಾಗಿದ್ದರೂ ಸಿಡುಕನಲ್ಲ. ತಾಂತ್ರಿಕವಾಗಿ ಪರಿಪೂರ್ಣ ಆಟಗಾರನೆನಿಸಿದ್ದರೂ ಅಷ್ಟಕ್ಕೇ ಸೀಮಿತಗೊಂಡವರಲ್ಲ. ಅನುಭವ ಶ್ರೀಮಂತನಾದರೂ ಮೈಮರೆತವರಲ್ಲ. ದ್ರಾವಿಡ್ ಎಂದರೆ ಪರಿಪೂರ್ಣತೆಗೆ ಹತ್ತಿರ ದಲ್ಲಿರುವ, ಇನ್ನೂ ಪ್ರಕ್ರಿಯೆಯಲ್ಲಿರುವ ಒಂದು ಕಲಾಕೃತಿ. ಅವರಿಗೆ ನಿರಂತರವಾಗಿ ಯಶಸ್ಸಿನ ಹಸಿವು, ಸಾಧನೆಯ ದಾಹ, ಎತ್ತರಕ್ಕೇರುವ ತುಡಿತ. ಕ್ರಿಕೆಟ್ ಮೈದಾನದಲ್ಲಿ ಅವರೊಬ್ಬ ಸದಾ ಅನ್ವೇಷಣಶೀಲ ವಿಜ್ಞಾನಿ. ಏರಿಳಿತಗಳಿಂದ ವಿಚಲಿತಗೊಳ್ಳದ ತತ್ವಜ್ಞಾನಿ. ಆದರೆ, ಅವರ ಪ್ರಕಾರ ಶಾಶ್ವತ ವಿದ್ಯಾರ್ಥಿ. ಅವರ ವೃತ್ತಿಜೀವನ ಒಂದು ಸುದೀರ್ಘ ಕಲಿಕೆಯ ಅಭಿಯಾನ. ಒಂದೊಂದು ಪಂದ್ಯವೂ ಅವರಿಗೆ ಒಂದೊಂದು ಪರೀಕ್ಷೆ. ಪ್ರತೀ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಬದ್ಧತೆ, ಪ್ರಯತ್ನಶೀಲತೆ, ಛಲ ಅವರಲ್ಲಿ. ಅದೇ ದ್ರಾವಿಡ್ ಹಿರಿಮೆ.
ಎಷ್ಟೋ ಬಾರಿ ಕ್ರಿಕೆಟಿಗನ ಶ್ರೇಷ್ಠತೆಯನ್ನು ಕೇವಲ ಅಂಕಿ ಅಂಶದಿಂದ ಅಳೆಯಲು ಸಾಧ್ಯವಾಗುವುದಿಲ್ಲ. ದ್ರಾವಿಡ್ ವಿಷಯದಲ್ಲೂ ಅಷ್ಟೇ. ಕ್ರಿಕೆಟ್ನಲ್ಲಿ ಹರ್ಭಜನ್ ಸಿಂಗ್ ಸಹ ಎರಡು ಶತಕ ಬಾರಿಸಿದ್ದಾರೆ. ಲಕ್ಷ್ಮೀಪತಿ ಬಾಲಾಜಿಯಂಥವರು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೆಂದು ಅದೆಲ್ಲಾ ಅವರ ಬ್ಯಾಟಿಂಗ್ ಪ್ರೌಢಿಮೆಗಿಂತ ಅದೃಷ್ಟದ ಫಲ. ಮುಟ್ಟಿದ್ದೆಲ್ಲಾ ಚಿನ್ನವಾಗುವಂಥ ಎಂದೋ ಒಂದು ದಿನ ಹರ್ಭಜನ್ ಕಣ್ಣು ಮುಚ್ಚಿಕೊಂಡು ಹೊಡೆದರೂ ಔಟಾಗುವುದಿಲ್ಲ. ಬ್ಯಾಟ್ ತಾಗಿದರೆ ಸಾಕು ಚೆಂಡು ಬೌಂಡರಿಯತ್ತ ಓಡುತ್ತದೆ. ಆದರೆ, ದ್ರಾವಿಡ್ ವೃತ್ತಿಜೀವನದಲ್ಲಿ ಇಂಥ ಬಿಟ್ಟಿ ರನ್ಗಳಿಲ್ಲ. ಸೆಹ್ವಾಗ್ರಂತೆ ಎಡ್ಜ್ ಆಗಿ ಕ್ಯಾಚ್ ಆಗಬೇಕಾದ ಚೆಂಡು ಬೌಂಡರಿ, ಸಿಕ್ಸರ್ ಆದ ಉದಾಹರಣೆ ದ್ರಾವಿಡ್ ಬ್ಯಾಟಿಂಗ್ನಲ್ಲಿ ಕಾಣಸಿಗುವುದಿಲ್ಲ. ಅಂದರೆ, ಅವರು ಗಳಿಸುವ ಒಂದೊಂದು ರನ್ನಿನಲ್ಲೂ ಅವರ ಪ್ರಯತ್ನವಿರುತ್ತದೆ. ಪ್ರತಿಭೆ, ಯೋಗ್ಯತೆ, ಅಭ್ಯಾಸ, ಸಿದ್ಧಿ ಕಾಣುತ್ತದೆ. ಹೊಸದಾಗಿ ಕ್ರಿಕೆಟ್ ಕಲಿಯುವವರು ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಬ್ಯಾಟಿಂಗ್ ಮಾಡುವುದನ್ನು ನೋಡಿದರೆ ಸಾಕು. ಕ್ರೀಸ್ನಲ್ಲಿ ನಿಲುವಿನಿಂದ ಬ್ಯಾಟ್ ಹಿಡಿಯುವ ರೀತಿಯಿಂದ, ಚೆಂಡನ್ನು ನೋಡುವ, ಗ್ರಹಿಸುವ, ಮೌಲ್ಯಕ್ಕೆ ತಕ್ಕಂತೆ ಆಡುವ ಒಂದೊಂದು ಅಂಶವೂ ಒಂದೊಂದು ಪಾಠ. ಚೆಂಡಿರುವುದೇ ಚಚ್ಚುವುದಕ್ಕೆ ಎನ್ನುವ ಇಂದಿನ ಟಿ20 ಯುಗದಲ್ಲಿ ಶ್ರೇಷ್ಠ ಎಸೆತಗಳ ವಿರುದ್ಧ ಯಾವ ಯಾವ ರೀತಿ ರಕ್ಷಣಾತ್ಮಕವಾಗಿ ಆಡಬಹುದು, ಯಾವ ರೀತಿ ಆಕ್ರಮಣ ನಡೆಸಬಹುದು ಎಂಬುದನ್ನು ದ್ರಾವಿಡ್ ಆಟ ನೋಡಿ ಕಲಿಯಬಹುದು.
ದ್ರಾವಿಡ್ರ ವಿಶೇಷತೆಯೆಂದರೆ ಅವರು ಯಾವತ್ತೂ ತಮ್ಮ ಆಟ ನಿಂತ ನೀರಾಗಲು ಅವಕಾಶ ಕೊಡಲಿಲ್ಲ. ಒಂದು ಚೌಕಟ್ಟಿನೊಳಗೆ ಬಂಧಿಯಾಗಲಿಲ್ಲ. ಕೇವಲ ಟೆಸ್ಟ್ ಆಟಗಾರ ಎಂದು ಬ್ರಾಂಡ್ ಆಗಲಿಲ್ಲ. ಬರೀ ಬ್ಯಾಟ್ಸ್ಮನ್ ಆಗಿಯೂ ಉಳಿಯಲಿಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ಸ್ ುನ್ ಆಗಿ ಅವರ ರೂಪಾಂತರ, ಸ್ಲಿಪ್ ಫೀಲ್ಡರ್ ಆಗಿ ಸಾಧಿಸಿದ ತಜ್ಞತೆ, ವಿಕೆಟ್ಕೀಪರ್ ಆಗಿ ಪ್ರದರ್ಶಿಸಿದ ಉಪಯುಕ್ತತೆ ಎಲ್ಲವೂ ಭವಿಷ್ಯದ ಪೀಳಿಗೆಗೆ ಒಂದೊಂದು ಪಾಠ.
ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ಅನೇಕ ಐತಿಹಾಸಿಕ ಸಾಧನೆಗಳ ಸಂದರ್ಭದಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ಕೋಲ್ಕತ್ತದ ಐತಿಹಾಸಿಕ ಟೆಸ್ಟ್ನಿಂದ ಆಸ್ಟ್ರೇಲಿಯಾದಲ್ಲಿನ ದಿಗ್ವಿಜಯದವರೆಗೆ, ದಕ್ಷಿಣ ಆಫ್ರಿಕಾದಲ್ಲಿನ ಸಾಹಸದಿಂದ ನ್ಯೂಜಿಲೆಂಡ್ನಲ್ಲಿ ಸತತ ಶತಕ ಪರಾಕ್ರಮದವರೆಗೆ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ನಲ್ಲಿ ಸರಣಿ ವಿಜಯದವರೆಗೆ ಎಲ್ಲೆಡೆ ಭಾರತದ ಎಲ್ಲಾ ಮಹತ್ವದ ಸಾಧನೆಗಳಲ್ಲಿ ದ್ರಾವಿಡ್ ಕೊಡುಗೆಯೂ ಇದೆ. ತೆಂಡುಲ್ಕರ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆಯ ಮಹೋನ್ನತ ಸಾಹಸದ ದಿನಗಳಲ್ಲಿ ದ್ರಾವಿಡ್ ಸಹ ಕೊಡುಗೆ ಸಲ್ಲಿಸಿದ್ದಾರೆ. ತಂಡದಲ್ಲಿ ಎಲ್ಲರೂ ಭರ್ಜರಿ ಫಾರ್ಮ್ ನಲ್ಲಿರುವಾಗ ಶತಕ, ಅರ್ಧ ಶತಕ ಬಾರಿಸುವುದು ದೊಡ್ಡ ವಿಚಾರವೇನಲ್ಲ. ಆದರೆ, ದ್ರಾವಿಡ್ ಎಲ್ಲರೂ ವಿಫಲರಾದ ದಿನಗಳಲ್ಲೂ ತಾವೊಬ್ಬರೇ ಏಕಾಂಗಿಯಾಗಿ ಹೋರಾಡಿದ್ದಾರೆ. ಅಂಥ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಅಥವಾ ಸಂಪೂರ್ಣ ಶರಣಾಗತಿ ತಪ್ಪಿಸಿ ಮರ್ಯಾದೆ ಉಳಿಸಿದ್ದಾರೆ. ಮಿ. ಡಿಪೆಂಡಬಲ್ ಎಂಬ ಹೊಗಳಿಕೆ ಅವರಿಗೆ ಸುಮ್ಮನೆ ಬಂದಿದ್ದಲ್ಲ.
ದ್ರಾವಿಡ್ ಯಶಸ್ಸಿಗೆ ಸ್ವರ್ಣ ತೂಕ ಏಕೆಂದರೆ ಅವರಿಗೆ ಯಾವತ್ತೂ ಸಾಧನೆಯ ಪಿತ್ಥ ನೆತ್ತಿಗೇರಲಿಲ್ಲ. ತಮ್ಮ ಬೇರುಗಳನ್ನು ಅವರು ಮರೆಯಲಿಲ್ಲ. ಆವೇಶದ ಕೈಗೆ ವಿವೇಚನೆಯನ್ನು, ಆತುರದ ಕೈಗೆ ವಿವೇಕವನ್ನು ಅವರು ಯಾವತ್ತೂ ಕೊಡಲಿಲ್ಲ. ಸುದೀರ್ಘ ವೃತ್ತಿಜೀವನದಲ್ಲಿ ಯಾವತ್ತೂ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ. ಚೆಂಡು ವಿರೂಪದಂಥ ಆರೋಪವನ್ನು ಅವರ ತಲೆಗೆ ಕಟ್ಟಲಾದ ಸಂದರ್ಭದಲ್ಲೂ ಅವರು ಅಮಾಯಕರಾಗಿದ್ದರೆ ವಿನಃ ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿರಲಿಲ್ಲ. ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ಅವರು ಎಲ್ಲೆ ಮೀರಲಿಲ್ಲ. ಕ್ರಿಕೆಟ್ನಿಂದ ಅವರು ಗಣ್ಯರಾದಷ್ಟೇ ಕ್ರಿಕೆಟ್ಗೂ ಘನತೆ ತಂದುಕೊಟ್ಟಿದ್ದು ಅವರ ಹಿರಿಮೆ.
Subscribe to:
Post Comments (Atom)
No comments:
Post a Comment