ಪಾಪದ ಹಣ
ದುಡ್ಡೇ ದುಃಖದ ಮೂಲ
ಹಣದಿಂದ ಜಗತ್ತನ್ನೇ ಖರೀದಿಸಬಹುದು. ಆದರೆ, ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳುವುದು ಅಸಾಧ್ಯ.
ವಾಮ ಮಾರ್ಗದಿಂದ ಪಡೆದುಕೊಳ್ಳುವ ಹಣ ಜೇನುಗೂಡಿನಂತೆ. ಜೇನಿನ ಆಸೆಯಿಂದ ಕೈಹಾಕುವವರು ಜೇನುನೊಣಗಳಿಂದ ಕಚ್ಚಿಸಿಕೊಳ್ಳಲೂ ಸಿದ್ಧರಿರಬೇಕು.
ಪಾಪದ ಹಣ ಯಾವತ್ತಿದ್ದರೂ ಶಾಪವೇ.
ಪಾಕಿಸ್ತಾನದ ಕ್ರಿಕೆಟಿಗರು ಇದನ್ನೆಲ್ಲಾ ಒಪ್ಪಿಕೊಳ್ಳುತ್ತಾರೋ ಇಲ್ಲವೋ. ಆದರೆ, ಸದ್ಯಕ್ಕಂತೂ ಅವರಿಗೆ ಶಾಪ ತಟ್ಟಿದೆ.
ಒಟ್ಟಾರೆ ಕ್ರಿಕೆಟ್ಗಿದು ಸಂಕಷ್ಟದ ಕಾಲ. ಅದರ ವಿಶ್ವಾಸಾರ್ಹತೆಯೇ ಸದ್ಯ ಪ್ರಶ್ನಾರ್ಹವಾಗಿದೆ.
ಹಿಂದೆಲ್ಲಾ ಅತಿಮಾನುಷವೆಂಬಂಥ ಪ್ರದರ್ಶನಗಳು ಆಟದ ರೋಮಾಂಚನ ಹೆಚ್ಚಿಸುತ್ತಿದ್ದವು. ಆದರೆ, ಈಗೀಗ ಆಟಗಾರರ ಅಂಥ ಪ್ರದರ್ಶನಗಳು ಪ್ರೇಕ್ಷಕರಲ್ಲಿ ರೋಮಾಂಚನದ ಬದಲು ಅನುಮಾನ ಹುಟ್ಟುಹಾಕುತ್ತಿವೆ. ಇರ್ಫಾನ್ ಪಠಾಣ್ರಷ್ಟೇ ಒಳ್ಳೆಯ ಆಲ್ರೌಂಡರ್ ಎನ್ನಬಹುದಾದ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಪಾಕಿಸ್ತಾನದ ವಿರುದ್ಧ ಲಾರ್ಡ್ಸ್ ಟೆಸ್ಟ್ನಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸಿಗೆ ಆಗಮಿಸಿ 160 ಚಿಲ್ಲರೆ ರನ್ ಗಳಿಸಿದರೆ ಅದನ್ನು ಪ್ರಶಂಸಿಸಲು ಮನಸು ಬರುತ್ತಿಲ್ಲ. ಕಾರಣ ಬ್ರಾಡ್ ಅಂಥ ಶತಕ ಗಳಿಸಿದ್ದು ಫಿಕ್ಸಿಂಗ್ ಕಳಂಕಿತ ಪಾಕ್ ತಂಡದ ವಿರುದ್ಧ. ಸ್ಪಾಟ್ಫಿಕ್ಸಿಂಗ್ ಹಗರಣದ ಕೇಂದ್ರ ಬಿಂದುವಾಗಿರುವ ಪಾಕ್ ತಂಡದ ಇಬ್ಬರು ಪ್ರಧಾನ ವೇಗಿಗಳನ್ನು (ಆಸಿಫ್, ಆಮೀರ್) ಕ್ಲಬ್ ದರ್ಜೆ ಬೌಲರ್ಗಳೆಂಬಂತೆ ಬ್ರಾಡ್ ಹೀನಾಯವಾಗಿ ದಂಡಿಸಿದ್ದು ನಿಜವಲ್ಲ ಎಂಬ ಭಾವನೆಯೇ ಈಗಲೂ ಮೂಡುತ್ತಿದೆ.
ಅಂತೂ ಕ್ರಿಕೆಟ್ ಕಾಶಿ ಲಾರ್ಡ್ಸ್ಗೆ ಕಳಂಕ ಮೆತ್ತಿದೆ. ಭಯೋತ್ಪಾದನೆಯ ದಳ್ಳುರಿಗೆ ಸಿಕ್ಕಿ ಕ್ರಿಕೆಟ್ ದುರ್ಬಿಕ್ಷ ಅನುಭವಿಸುತ್ತಿದ್ದ ಪಾಕಿಸ್ತಾನಕ್ಕೆ ಸಹಾಯ ಮಾಡಲು ಹೋಗಿ ಇಂಗ್ಲೆಂಡ್ ದೂರ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆದಂತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಾಕ್ ಸರಣಿಗೆ ತಟಸ್ಥ ಕೇಂದ್ರವಾಗಿ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ಗೀಗ ಅಪಾತ್ರರಿಗೆ ಸಹಾಯ ಮಾಡಿದ ವಿಷಾದಭಾವ.
ಸ್ಪಾಟ್ ಫಿಕ್ಸಿಂಗ್ ಎನ್ನುವುದು ಕೇವಲ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಲ್ಲ. ಅದು ಜಾಗತಿಕ ಸಮಸ್ಯೆ. ಮ್ಯಾಚ್ಫಿಕ್ಸಿಂಗ್ ಬುಡವನ್ನೇ ಕತ್ತರಿಸುವ ಕೊಡಲಿಯಾದರೆ, ಸ್ಪಾಟ್ಫಿಕ್ಸಿಂಗ್ ಒಳಗಿಂದೊಳಗೆ ಕೊರೆಯುವ ಕ್ರಿಮಿ. ಸ್ಪಾಟ್ಫಿಕ್ಸಿಂಗ್ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲವಾದ ಕಾರಣ ಅದು ಮ್ಯಾಚ್ಫಿಕ್ಸಿಂಗ್ಗಿಂಥ ಭಿನ್ನ. ಇದು ಪಂದ್ಯದೊಳಗಿನ ಘಟನೆಗಳಿಗೆ ಮಾತ್ರ ಸಂಬಂಧಿಸಿದ್ದಾದ ಕಾರಣ, ಕೆಲವು ನೋಬಾಲ್, ವೈಡ್ ಎಸೆದು ಹಣ ಮಾಡುವುದು ಸುರಕ್ಷಿತ ಎಂದು ಪಾಕ್ ಕ್ರಿಕೆಟಿಗರು ಭಾವಿಸಿರಬಹುದು.
ಪಾಕ್ ಕ್ರಿಕೆಟಿಗರು ಅಕ್ರಮ ಹಣದ ಆಮಿಷಕ್ಕೆ ಸಿಲುಕುವುದಕ್ಕೂ ಕಾರಣಗಳು ಇಲ್ಲದಿಲ್ಲ. ರಾಜತಾಂತ್ರಿಕ ಕಾರಣಗಳಿಂದಾಗಿ ಶ್ರೀಮಂತ ಐಪಿಎಲ್ನಿಂದಾಗಿ ಪಾಕ್ ಆಟಗಾರರು ವಂಚಿತರಾಗಿದ್ದಾರೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಇತರ ಯಾವುದೇ ತಂಡಗಳು ತಯಾರಿಲ್ಲ. ಅಲ್ಲಿನ ಕ್ರಿಕೆಟ್ ಮಂಡಳಿಗೆ ಆಟಗಾರರನ್ನು ಸಾಕುವ ಶಕ್ತಿ ಇಲ್ಲ. ಇನ್ನು ಪಾಕ್ನ ಅಗ್ರಮಾನ್ಯ ಆಟಗಾರರು ಹತ್ತು ವರ್ಷಗಳಲ್ಲಿ ಗಳಿಸುವ ಹಣವನ್ನು ಐಪಿಎಲ್ನ ಕೆಲವು ಪ್ರಖ್ಯಾತರು ಒಂದೇ ಋತುವಿನಲ್ಲಿ ಗಳಿಸುತ್ತಾರೆ. ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ವರ್ಷದಲ್ಲಿ ಅತ್ಯಂತ ಕಡಿಮೆ ಕ್ರಿಕೆಟ್ ಆಡುತ್ತಿರುವ ತಂಡ ಪಾಕಿಸ್ತಾನ. ಹೀಗೆ ಆಟದ ಬರ, ಗಂಟಿನ ಕೊರತೆ ಎದುರಿಸುತ್ತಿರುವ ಆಟಗಾರರು ಇಂಥ ಅವಕಾಶ ಸಿಕ್ಕಿದಾಗ ಹಣದ ಪ್ರಲೋಭನೆಗೆ ಒಳಗಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಹಾಗೆಂದು ಪಾಕ್ ಆಟಗಾರರು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಬೇಕಿಲ್ಲ. ಕ್ರಿಕೆಟ್ ದೃಷ್ಟಿಯಿಂದ, ನೈತಿಕ ದೃಷ್ಟಿಯಿಂದ ಅದು ಘೋರ ಅಪರಾಧ. ಈ ಪ್ರಕರಣದಲ್ಲಿ ಐಸಿಸಿ ನಿಷ್ಠುರ ಕ್ರಮ ತೆಗೆದುಕೊಳ್ಳಲೇ ಬೇಕು.
ಅತ್ತ ಪಾಕ್ ಆಟಗಾರರು ಮಾತ್ರ ಮೋಸಗಾರರು ಎಂಬ ವಿಕೃತ ಖುಷಿ ಅನುಭವಿಸುವುದೂ ಸರಿಯಲ್ಲ. ಬೆಟ್ಟಿಂಗ್ ಕಾನೂನುಬದ್ಧವಲ್ಲದ ಭಾರತದಲ್ಲಿ ಅದೊಂದು ದೊಡ್ಡ ದಂಧೆಯೇ ಆಗಿ ಬೆಳೆದಿದೆ. ಭೂಗತ ಜಗತ್ತು ಈ ಮಾಫಿಯಾವನ್ನೂ ನಿಯಂತ್ರಿಸುತ್ತಿದೆ. ಭಾರತೀಯ ಬುಕಿಗಳು ವಿಶ್ವದ ಎಲ್ಲಾ ತಂಡಗಳ ಆಟಗಾರರನ್ನು ಸಂಪರ್ಕಿಸಿದ ಬಗ್ಗೆ ಮಾಹಿತಿಗಳಿವೆ. ಕ್ರಿಕೆಟ್ ಪಂದ್ಯ ಎಲ್ಲೇ ನಡೆದರೂ, ಹಣದ ಹೊಳೆ ಹರಿಯುವುದು ಭಾರತದಲ್ಲಿ. ಅಷ್ಟಕ್ಕೂ ಭಾರತೀಯ ಆಟಗಾರೇ ಮ್ಯಾಚ್ಫಿಕ್ಸಿಂಗ್ ಹಗರಣದಲ್ಲಿ ಶಿಕ್ಷೆ ಅನುಭವಿಸಿದ್ದನ್ನು ಕ್ರಿಕೆಟ್ ಇನ್ನೂ ಮರೆತಿಲ್ಲ. ಮೋಸದಾಟದಲ್ಲಿ ಆಜೀವ ನಿಷೇಧ ಅನುಭವಿಸಿದ್ದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈಗ ಮೊರಾದಾಬಾದ್ನಿಂದ ಕಾಂಗ್ರೆಸ್ನ ಸಂಸದ. ಅಜಯ್ ಜಡೇಜಾ ಜನಪ್ರಿಯ ಟಿವಿ ಚಾನೆಲ್ ಒಂದರಲ್ಲಿ ಕ್ರಿಕೆಟ್ ವಿಶ್ಲೇಷಕ. ಮನೋಜ್ ಪ್ರಭಾಕರ್ ರಣಜಿ ತಂಡದ ಕೋಚ್. ಅಲ್ಲಿಗೆ ಅವರೆಲ್ಲರ ಅಕ್ರಮಗಳು ಸಕ್ರಮಗೊಂಡಿವೆ. ಜನ ಹಾಗೂ ವ್ಯವಸ್ಥೆ ಅವರ ತಪ್ಪನ್ನು ಮನ್ನಿಸಿಯಾಗಿದೆ.
ಪಾಕ್ ಕ್ರಿಕೆಟಿಗರ ಕಳಂಕ ಕೂಡ ಇನ್ನು ಕೆಲವು ದಿನ/ ತಿಂಗಳು/ ವರ್ಷಗಳಲ್ಲಿ ಮರೆತು ಹೋಗಲಿದೆ. ಏಕೆಂದರೆ, ಅಫ್ರಿದಿ ಚೆಂಡನ್ನು ಕಚ್ಚಿ ವಿರೂಪಗೊಳಿಸಿದ್ದಾಗಲೀ, ಶೋಯಿಬ್ ಅಖ್ತರ್ ಬ್ಯಾಟಿನಿಂದ ಸಹ ಆಟಗಾರನಿಗೆ ಹೊಡೆದಿದ್ದಾಗಲೀ, ಆಸಿಫ್ ದುಬೈನಲ್ಲಿ ಕೊಕೇನ್ನೊಂದಿಗೆ ಸಿಕ್ಕಿಬಿದ್ದಿದ್ದಾಗಲೀ, ಅಥವಾ ಇಂಥ ಅದೆಷ್ಟೋ ಹಗರಣಗಳು ನೆನಪಿನಲ್ಲೇ ಇಲ್ಲ. ಹಾಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲೂ ಅಷ್ಟೇ. ಸಾಕ್ಷ್ಯಗಳು ಎಷ್ಟೇ ಪ್ರಬಲವಾಗಿದ್ದರೂ, ಸದ್ಯ ಮಟ್ಟಿಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಐಸಿಸಿ ಯಾವುದೇ ದಾಕ್ಷಿಣ್ಯಗಳಿಗೆ ಕಟ್ಟುಬಿದ್ದರೆ, ಆಟದ ವಿಶ್ವಾಸಾರ್ಹತೆಯನ್ನು ಮುಂದೆ ಯಾವ ರೀತಿಯಲ್ಲೂ ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ.
ಕಳಂಕದ ದಿನಗಳಲ್ಲಿ ಕ್ರಿಕೆಟ್
ಇಂಗ್ಲೆಂಡ್, ಏಷ್ಯಾ ಉಪಖಂಡ ಮತ್ತು ಆಸ್ಟ್ರೇಲಿಯಾದ ಆಟಗಾರರಿಗೆ ಮ್ಯಾಚ್ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ನ ಕೆನ್ನಾಲಿಗೆ ಬಿಸಿ ಮುಟ್ಟಿಸುತ್ತಿರುವ ಸಂದರ್ಭದಲ್ಲೇ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಟೂರ್ನಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ. ಕ್ರಿಕೆಟ್ನ ಅತಿ ದೊಡ್ಡ ಹಗರಣ ಸ್ಪಾಟ್ ಫಿಕ್ಸಿಂಗ್ ಆಟದ ಮಾನಮರ್ಯಾದೆ ಹರಾಜು ಹಾಕಿರುವ ಈ ದಿನಗಳಲ್ಲಿ ಬೆಟ್ಟಿಂಗ್ ದಂಧೆಗೆ ಅತ್ಯಂತ ಸೂಕ್ತವಾದ ಚುಟುಕು ಮಾದರಿಯ ಜಾಗತಿಕ ಕ್ಲಬ್ ಟೂರ್ನಿ ಆರಂಭವಾಗುತ್ತಿರುವುದು ಕಾಕತಾಳೀಯವೋ, ಪರಿಸ್ಥಿತಿಯ ವ್ಯಂಗ್ಯವೋ ಎನ್ನುವುದು ನಿರ್ಧಾರವಾಗಬೇಕು.
ಭಾರತದಲ್ಲೇ ನಡೆದಿದ್ದ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಲೀಗ್ನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ಚಾಂಪಿಯನ್ ಪಟ್ಟಕ್ಕೇರಿತ್ತು. ಅತ್ಯಂತ ಸ್ಪರ್ಧಾತ್ಮಕವಾಗಿದ್ದ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ನ ಟ್ರಿನಿಡಾಡ್-ಟೊಬಾಗೊ ತಂಡ ಅನಿರೀಕ್ಷಿತವಾಗಿ ಫೈನಲ್ ತಲುಪಿ ಅಚ್ಚರಿ ಮೂಡಿಸಿತ್ತು. ಈ ಬಾರಿಯ 2ನೇ ಆವೃತ್ತಿ ಇಂಥ ಅನೇಕ ಅಚ್ಚರಿಗಳನ್ನು ಒಡಲಲ್ಲಿ ಹುದುಗಿಸಿಕೊಂಡಿರುವ ನಿರೀಕ್ಷೆ ಇದೆ.
ಚೊಚ್ಚಲ ಸಿಎಲ್ನಲ್ಲಿ ಭಾಗವಹಿಸಿದ್ದ ಕೇವಲ ಮೂರು ತಂಡಗಳು ಮಾತ್ರ ಈ ಬಾರಿಯೂ ಕಣದಲ್ಲಿವೆ. ಅವುಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶ್ರೀಲಂಕಾದ ವಯಾಂಬ ಇಲೆವೆನ್ ಮತ್ತು ಆಸ್ಟ್ರೇಲಿಯಾದ ವಿಕ್ಟೋರಿಯಾ. ಕಳೆದ ವರ್ಷ ಫೈನಲ್ ತಲುಪಿದ್ದ ತಂಡಗಳೆರಡೂ ಈ ವರ್ಷ ಅರ್ಹತೆಯನ್ನೇ ಪಡೆದಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಭಾರತದ ಮೂರು ತಂಡಗಳು (ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಆರ್ಸಿಬಿ), ಆಸ್ಟ್ರೇಲಿಯಾದ ಎರಡು (ವಿಕ್ಟೋರಿಯಾ, ಸೌತ್ ಆಸ್ಟ್ರೇಲಿಯಾ), ದಕ್ಷಿಣ ಆಫ್ರಿಕಾದ 2 (ಲಯನ್ಸ್, ವಾರಿಯರ್ಸ್), ಶ್ರೀಲಂಕಾ (ವಯಾಂಬ), ನ್ಯೂಜಿಲೆಂಡ್ (ಸೆಂಟ್ರಲ್ ಡಿಸ್ಟ್ರಿಕ್ಟ್ಸ್), ವೆಸ್ಟ್ ಇಂಡೀಸ್ನ (ಗಯಾನ) ತಲಾ ಒಂದು ತಂಡಗಳು (ಒಟ್ಟು 10 ತಂಡ) ಸ್ಪರ್ಧೆಯಲ್ಲಿವೆ. ವೇಳಾಪಟ್ಟಿ ಅಡಚಣೆಯಿಂದಾಗಿ ಈ ಬಾರಿ ಇಂಗ್ಲೆಂಡ್ ತಂಡಗಳಿಗೆ ಅವಕಾಶ ಸಿಕ್ಕಿಲ್ಲ. ಪಾಕ್ ತಂಡಕ್ಕೆ ಅವಕಾಶ ನೀಡಲಾಗಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ಗೂ ಚಾಂಪಿಯನ್ಸ್ ಲೀಗ್ಗೂ ಇರುವ ದೊಡ್ಡ ವ್ಯತ್ಯಾಸವೆಂದರೆ, ಐಪಿಎಲ್ ಪಕ್ಕಾ ಭಾರತೀಯ ಟೂರ್ನಿ. ಇದರಲ್ಲಿ ಭಾಗವಹಿಸುವ ತಂಡಗಳಲ್ಲಿ ಬದಲಾವಣೆ ಆಗುವುದಿಲ್ಲ. ಆಟಗಾರರಲ್ಲಿ ಬದಲಾವಣೆ ಇರುವುದಿಲ್ಲ. ಆದರೆ, ಚಾಂಪಿಯನ್ಸ್ ಲೀಗ್ನಲ್ಲಿ ಪ್ರತೀ ವರ್ಷ ತಂಡಗಳು ಬದಲಾಗುತ್ತವೆ. ಇದು ಟೂರ್ನಿಯ ಅನಿಶ್ಚಿತತೆಯನ್ನು, ರೋಚಕತೆಯನ್ನು ಹೆಚ್ಚಿಸುತ್ತವೆ. ಅನಾಮಧೇಯ ತಂಡಗಳ ಅಪರಿಚಿತ ಆಟಗಾರರ ವಿರುದ್ಧ ಆಡುವಾಗ ಗುಣಮಟ್ಟ ಹೆಚ್ಚುವ ಸಾಧ್ಯತೆ ಇರುತ್ತದೆ. ಇದು ಮ್ಯಾಚ್ಫಿಕ್ಸಿಂಗ್ನ ದಿನಗಳಾಗಿರುವುದರಿಂದ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ ಎಂದಿಗಿಂತ ಹೆಚ್ಚು ಜಾಗ್ರತವಾಗಿದೆ. ಹಾಗಾಗಿ ಕನಿಷ್ಠ ಈ ಟೂರ್ನಿ ಸ್ವಚ್ಛವಾಗಿ ನಡೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು.
ಫಲಿತಾಂಶದ ದೃಷ್ಟಿಯಿಂದ ಯಾವುದೇ ತಂಡವನ್ನು ಫೇವರಿಟ್ ಎಂದು ಗುರುತಿಸುವುದು ಅಸಾಧ್ಯ. ಆದರೂ, ಆಸ್ಟ್ರೇಲಿಯಾದ ಎರಡು ತಂಡಗಳು, ಭಾರತದ ಮೂರು ತಂಡಗಳು ಎಂದಿನಂತೆ ಫೇವರಿಟ್ಗಳು. ಈ ಪಟ್ಟಿಗೆ ತವರಿನ ಬೆಂಬಲ ಹೊಂದಿರುವ ದಕ್ಷಿಣ ಆಫ್ರಿಕಾ ತಂಡಗಳನ್ನೂ ಸೇರಿಸಬಹುದು. ಇನ್ನು ಶ್ರೀಲಂಕಾದ ಬಹುತೇಕ ಅಂತಾರಾಷ್ಟ್ರೀಯ ಆಟಗಾರರು ವಯಾಂಬ ತಂಡದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರರು ಟಿ20 ಮಾದರಿಯಲ್ಲಿ ಕಪ್ಪುಕುದುರೆಗಳು. ಅವರನ್ನು ಯಾವತ್ತಿಗೂ ನಿರ್ಲಕ್ಷಿಸುವಂತಿಲ್ಲ. ಇನ್ನು ಉಳಿಯುವುದು ನ್ಯೂಜಿಲೆಂಡ್ ತಂಡ ಮಾತ್ರ. ಅವರನ್ನೂ ದುರ್ಬಲವೆಂದು ಪರಿಗಣಿಸಲು ಯಾವುದೇ ಕಾರಣಗಳಿಲ್ಲ. ಶರವೇಗದ ವೇಗಿ ಶೇನ್ ಬಾಂಡ್ ಆ ತಂಡದ ಕೋಚ್.
ಆಟಗಾರರ ದೃಷ್ಟಿಯಿಂದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ಎಂಎಸ್ ಧೋನಿ, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಮೊದಲಾದವರು ಭಾರತೀಯ ತಂಡಗಳ ಆಕರ್ಷಣೆ. ಜಾಕ್ಸ್ ಕಾಲಿಸ್, ಡೇಲ್ ಸ್ಟೈನ್ ಮೊದಲಾದವರು ತವರು ತಂಡಗಳನ್ನು ಬಿಟ್ಟು ಭಾರತದ ಪರ ಆಡುತ್ತಿದ್ದಾರೆ. ಜೇಕಬ್ ಓರಮ್, ಡೇವಿಡ್ ಹಸ್ಸೆ, ಬ್ರಾಡ್ ಹಾಜ್, ಮಹೇಲ ಜಯವರ್ಧನೆ, ಕೈರನ್ ಪೊಲ್ಲಾರ್ಡ್ ಮೊದಲಾದ ಖ್ಯಾತನಾಮರು ವಿವಿಧ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.
ಒಟ್ಟಾರೆ ಚಾಂಪಿಯನ್ಸ್ ಲೀಗ್ ಅನ್ನು ಯಾರು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಯಾವ ರೀತಿ ಗೆಲ್ಲುತ್ತಾರೆಂಬ ಬಗ್ಗೆ ಹೆಚ್ಚಿನ ಗಮನವಿದೆ. ಇಂಗ್ಲೆಂಡ್ನಲ್ಲಿ ಹೋದ ಮಾನ ದಕ್ಷಿಣ ಆಫ್ರಿಕಾದಲ್ಲಿ ಬರಲಿ ಎನ್ನುವುದಷ್ಟೇ ಸದ್ಯದ ಆಶಯ.
ಚಾಂಪಿಯನ್ಸ್ ಲೀಗ್
ವೇಳಾ ಪಟ್ಟಿ
ಸೆ. 10 ಮುಂಬೈ ಇಂಡಿಯನ್ಸ್ - ಲಯನ್ಸ್
ಸೆ. 11 ವಾರಿಯರ್ಸ್ - ವಯಾಂಬ
ಸೆ. 11 ಸೆಂಟ್ರಲ್ ಡಿಸ್ಟ್ರಿಕ್ಟ್ಸ್-ಚೆನ್ನೈ
ಸೆ. 12 ಲಯನ್ಸ್ - ಸೌತ್ ಆಸ್ಟ್ರೇಲಿಯಾ
ಸೆ. 12 ಬೆಂಗಳೂರು- ಗಯಾನ
ಸೆ. 13 ವಿಕ್ಟೋರಿಯಾ-ವಾರಿಯರ್ಸ್
ಸೆ. 14 ಮುಂಬೈ- ಸೌತ್ ಆಸ್ಟ್ರೇಲಿಯಾ
ಸೆ. 15 ಸೆಂಟ್ರಲ್ ಡಿಸ್ಟ್ರಿಕ್ಟ್ಸ್- ವಿಕ್ಟೋರಿಯಾ
ಸೆ. 15 ಚೆನ್ನೈ- ವಯಾಂಬ
ಸೆ. 16 ಗಯಾನ- ಮುಂಬೈ
ಸೆ. 17 ಬೆಂಗಳೂರು- ಸೌತ್ ಆಸ್ಟ್ರೇಲಿಯಾ
ಸೆ. 18 ಸೆಂಟ್ರಲ್ ಡಿಸ್ಟ್ರಿಕ್ಟ್ಸ್- ವಾರಿಯರ್
ಸೆ. 18 ಚೆನ್ನೈ - ವಿಕ್ಟೋರಿಯಾ
ಸೆ. 19 ಲಯನ್ಸ್ - ಗಯಾನ
ಸೆ. 19 ಮುಂಬೈ-ಬೆಂಗಳೂರು
ಸೆ. 20 ವಿಕ್ಟೋರಿಯಾ - ವಯಾಂಬ
ಸೆ. 21 ಗಯಾನ-ಸೌತ್ ಆಸ್ಟ್ರೇಲಿಯಾ
ಸೆ. 21 ಲಯನ್ಸ್- ಬೆಂಗಳೂರು
ಸೆ. 22 ಸೆಂಟ್ರಲ್ ಡಿಸ್ಟ್ರಿಕ್ಟ್ಸ್- ವಯಾಂಬ
ಸೆ. 22 ಚೆನ್ನೈ- ವಾರಿಯರ್ಸ್
ಸೆ. 24 ಮೊದಲ ಸೆಮಿಫೈನಲ್
ಸೆ. 25 ಎರಡನೇ ಸೆಮಿಫೈನಲ್
ಸೆ. 26 ಫೈನಲ್
ಭಾರತದ ತಂಡಗಳು ಆಡುವ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಆರಂಭವಾಗಲಿವೆ. ಉಳಿದ ಪಂದ್ಯಗಳು ಸಂಜೆ 5 ಗಂಟೆಗೆ ಆರಂಭವಾಗುತ್ತವೆ.
ನೇರಪ್ರಸಾರ
ಸ್ಟಾರ್ ಕ್ರಿಕೆಟ್.
ಕ್ರೀಡಾಂಗಣಗಳು
ಸೆಂಚುರಿಯನ್, ಡರ್ಬನ್,
ಜೊಹಾನ್ಸ್ಬರ್ಗ್, ಪೋರ್ಟ್ ಎಲಿಜಬೆತ್.
ತಂಡಗಳು
ಎ ಗುಂಪು:
ಚೆನ್ನೈ ಸೂಪರ್ ಕಿಂಗ್ಸ್
ವಾರಿಯರ್ಸ್ (ದಕ್ಷಿಣ ಆಫ್ರಿಕಾ)
ವಿಕ್ಟೋರಿಯಾ (ಆಸ್ಟ್ರೇಲಿಯಾ)
ವಯಾಂಬ (ಶ್ರೀಲಂಕಾ)
ಸೆಂಟ್ರಲ್ ಡಿಸ್ಟ್ರಿಕ್ಟ್ಸ್ (ನ್ಯೂಜಿಲೆಂಡ್)
ಬಿ ಗುಂಪು:
ಮುಂಬೈ ಇಂಡಿಯನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಲಯನ್ಸ್ (ದಕ್ಷಿಣ ಆಫ್ರಿಕಾ)
ಸೌತ್ ಆಸ್ಟ್ರೇಲಿಯಾ
ಗಯಾನ (ವೆಸ್ಟ್ ಇಂಡೀಸ್)
No comments:
Post a Comment