ನಿವೃತ್ತಿಗೆ ಸೂಕ್ತವಾದ ವಯಸ್ಸು ಯಾವುದೆಂಬ ಬಗ್ಗೆ ಕ್ರೀಡಾ ಜಗತ್ತಿನಲ್ಲಿ ದೊಡ್ಡ ಜಿಜ್ಞಾಸೆಯೇ ಇದೆ.
ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತರಾಗಲೇ ಬೇಕು. ಆದರೆ, ಪ್ರತಿಯೊಬ್ಬರದೂ ಸ್ವಯಂ ನಿವೃತ್ತಿ ಆಗಿರುವುದಿಲ್ಲ. ಎಲ್ಲೋ ಕೆಲವರು ಮಾತ್ರ ಸೂಕ್ತ ಸಂದರ್ಭದಲ್ಲಿ ತಮ್ಮದೇ ನಿರ್ಧಾರದಂತೆ ನಿವೃತ್ತರಾಗುತ್ತಾರೆ. ಉದಾಹರಣೆಗೆ ಅನಿಲ್ ಕುಂಬ್ಳೆ, ಮುತ್ತಯ್ಯ ಮುರಳೀಧರನ್. ಆದರೆ, ಎಲ್ಲರಿಗೂ ಈ ಅದೃಷ್ಟ ಇರುವುದಿಲ್ಲ. ಕೆಲವರಿಗೆ ಅಕಾಲ ನಿವೃತ್ತಿಯಾದರೆ, ಕೆಲವರಿಗೆ ಕ್ರೀಡೆಯ ಹಿತದೃಷ್ಟಿಯಿಂದ ಸಕಾಲಿಕವಾಗಿರುತ್ತದೆ. ಇನ್ನೂ ಕೆಲವರಿಗೆ ಬಲವಂತದ ನಿವೃತ್ತಿ. ಎಷ್ಟೋ ಮಂದಿಗೆ ನಿವೃತ್ತಿಯ ಮಾತಾಡುವ ಸಂದರ್ಭವೇ ಬರುವುದಿಲ್ಲ. ಆಡುವ ಅವಕಾಶ ದೊರೆತರೆ ತಾನೆ ನಿವೃತ್ತಿಯಾಗುವುದು?
ಸಾಮಾನ್ಯವಾಗಿ ಟೆನಿಸ್ನಂಥ ವೈಯಕ್ತಿಕ ಕ್ರೀಡೆಗಳಲ್ಲಿ ಆಟಗಾರರಿಗೆ ತಮಗೆ ಶಕ್ತಿ, ಆಕಾಂಕ್ಷೆ ಇದ್ದಷ್ಟು ಕಾಲ ಆಟವಾಡುವ, ಸಾಕೆಂದಾಗ ನಿವೃತ್ತರಾಗುವ ಸ್ವಾತಂತ್ರ್ಯ ಇರುತ್ತದೆ. ಆದರೆ, ಆಯ್ಕೆಗಾರರ ಮರ್ಜಿಗೆ ತಲೆಬಾಗುವ ತಂಡ ಕ್ರೀಡೆಗಳ ಕ್ರೀಡಾಪಟುಗಳಿಗೆ ಇಂಥ ಅದೃಷ್ಟ ಇರುವುದಿಲ್ಲ. ಅಲ್ಲಿ ಕೋಚ್ನಿಂದ ಮೊದಲ್ಗೊಂಡು, ಆಯ್ಕೆಗಾರರು, ಆಡಳಿತ ಮಂಡಳಿ ಎಲ್ಲರ ಒಲವು ಹೊಂದಿದ್ದರೆ ಮಾತ್ರ ನೆತ್ತಿಯ ಮೇಲೆ ತೂಗುಕತ್ತಿ ಇಲ್ಲದೆ ನೆಮ್ಮದಿಯಿಂದ ದೀರ್ಘಕಾಲ ಆಡಿಕೊಂಡಿರಲು ಸಾಧ್ಯ. ಇಂಗ್ಲೆಂಡ್ನ ಅತ್ಯಂತ ಜನಪ್ರಿಯ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹ್ಯಾಂರ ಅಂತಾರಾಷ್ಟ್ರೀಯ ವೃತ್ತಿಜೀವನ ಮುಗಿದಿದೆ. ಬೆಕ್ಹ್ಯಾಂ ಇನ್ನೊಮ್ಮೆ ಇಂಗ್ಲೆಂಡ್ ಸಮವಸ್ತ್ರ ಧರಿಸಿ ಆಡುವುದನ್ನು ಕಾಣಲು ಇನ್ನು ಸಾಧ್ಯವಾಗದು. ಹಾಗೆಂದು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟು ಸ್ವಯಂನಿವೃತ್ತಿಯನ್ನೇನೂ ಘೋಷಿಸಿಲ್ಲ. ಬದಲಿಗೆ ಇಂಗ್ಲೆಂಡ್ ಕೋಚ್ ಫಾಬಿಯೋ ಕ್ಯಾಪೆಲೋ ಅವರಿಗೆ ಬಲವಂತದ ನಿವೃತ್ತಿ ಕೊಡಿಸಿದ್ದಾರೆ. ‘ಬೆಕ್ಹ್ಯಾಂಗೆ ವಯಸ್ಸಾಯಿತು. ನನ್ನ ತಂಡದಲ್ಲಿನ್ನು ಅವರು ಸ್ಥಾನ ಪಡೆಯುವುದಿಲ್ಲ’ ಎಂದು ಕ್ಯಾಪೆಲೊ ಇತ್ತೀಚೆಗೆ ಟಿವಿ ಸಂದರ್ಶನದಲ್ಲಿ ಘೋಷಿಸಿದರು.
ಬೆಕ್ಹ್ಯಾಂರಂಥ ಆಟಗಾರನ ಬಗ್ಗೆ ಕ್ಯಾಪೆಲೊ ಅಷ್ಟೊಂದು ನಿರ್ದಯವಾಗಿ, ನಿಷ್ಕಾರಣುವಾಗಿ, ಸೌಜನ್ಯರಹಿತರಾಗಿ ವರ್ತಿಸುವುದನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದರೆ, ಈ ಫುಟ್ಬಾಲ್ ಎಂಬ ಆಟ ಇರುವುದೇ ಹೀಗೆ. ಅಲ್ಲಿ ತರಬೇತುದಾರನೇ ದೇವರು. ಕೋಚ್ ಬೇಡವೆಂದ ಕೆಲಸ ಮಾಡುವ ಧೈರ್ಯ ಆ ರಾಷ್ಟ್ರದ ಫುಟ್ಬಾಲ್ ಮಂಡಳಿ ಹೋಗಲಿ, ರಾಷ್ಟ್ರಾಧ್ಯಕ್ಷರಿಗೂ ಇರುವುದಿಲ್ಲ. ಹಾಗೆಂದೇ ಕ್ಯಾಪೆಲೋ ತಮ್ಮ ನಿರ್ಧಾರವನ್ನು ಟಿವಿ ಮುಂದೆ ಘೋಷಿಸುವ ಮುನ್ನ ಸೌಜನ್ಯಕ್ಕಾದರೂ, ಬೆಕ್ಹ್ಯಾಂ ಜೊತೆ ಮಾತನಾಡುವುದು ಸೂಕ್ತವೆಂದು ಯೋಚಿಸಲಿಲ್ಲ. ಅದರೊಂದಿಗೆ ಇಂಗ್ಲೆಂಡ್ ಪರ 115 ಪಂದ್ಯಗಳನ್ನಾಡಿದ್ದ ಬೆಕ್ಹ್ಯಾಂರ ವರ್ಣರಂಜಿತ ವೃತ್ತಿಜೀವನ ದಾರುಣವಾಗಿ ಕೊನೆಗೊಂಡಿತು.
ಕೋಚ್ರ ಬಲವಂತ ವಿದಾಯವನ್ನು ಬೆಕ್ಹ್ಯಾಂ ಒಪ್ಪಿಕೊಂಡಿಲ್ಲ. ಇಂಗ್ಲೆಂಡ್ ಪರ ಕೊಟ್ಟಕೊನೆಯ ಬಾರಿ ವಿದಾಯ ಪಂದ್ಯ ಆಡುವ ಕೋಚ್ರ ಆಹ್ವಾನವನ್ನೂ ಅವರು ತಿರಸ್ಕರಿಸಿದ್ದಾರೆ. ರಾಷ್ಟ್ರದ ಪರ ಆಡುವುದು ತಮಗೆ ಯಾವತ್ತಿಗೂ ಹೆಮ್ಮೆಯ ಸಂಗತಿ. ಅದರಿಂದ ನಿವೃತ್ತಿ ತೆಗೆದುಕೊಳ್ಳುವ ಮಾತೇ ಇಲ್ಲ. ಕೋಚ್ಗೆ ನಾನು ಬೇಡದಿರಬಹುದು. ಆದರೆ, ನನ್ನ ಸೇವೆ ಸದಾ ಲಭ್ಯ ಎಂದು ಅವರು ಹೇಳಿದ್ದಾರೆ.
ಬೆಕ್ಹ್ಯಾಂಗೆ ವಯಸ್ಸಾಗಿದೆ ಎಂದೇನೋ ಕ್ಯಾಪೆಲೋ ತೀರ್ಪು ಕೊಟ್ಟರು. ಬೆಕ್ಹ್ಯಾಂಗೀಗ 35 ವರ್ಷ. ಇದು ನಿವೃತ್ತಿಯ ವಯಸ್ಸೇ? ಹೌದು ಅಲ್ಲ ಎರಡೂ ಇದಕ್ಕೆ ಉತ್ತರ. ಮುತ್ತಯ್ಯ ಮುರಳೀಧರನ್ ನಿವೃತ್ತರಾದಾಗ ಅವರಿಗೆ 38 ವರ್ಷ. ಸಚಿನ್ ತೆಂಡುಲ್ಕರ್ 38ರ ಹತ್ತಿರದಲ್ಲಿದ್ದಾರೆ. ಶೇನ್ ವಾರ್ನ್ ನಿವೃತ್ತಿಯಾಗಿದ್ದೂ 38ನೇ ವಯಸ್ಸಿನಲ್ಲಿ. ಫುಟ್ಬಾಲ್ ವಿಷಯಕ್ಕೇ ಬಂದರೆ, 37, 38ರ ಹರೆಯದಲ್ಲೂ ಆಡುತ್ತಿರುವ ಕೆಲವು ಆಟಗಾರರಿದ್ದಾರೆ.
ಅಷ್ಟಕ್ಕೂ ಕ್ರಿಕೆಟ್, ಫುಟ್ಬಾಲ್ನಂಥ ದೈಹಿಕ ಪರಿಶ್ರಮದ ಕ್ರೀಡೆಯಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ. ಆಡುವ ಶಕ್ತಿ ಮುಖ್ಯವಾಗುತ್ತದೆ. ಕೆಲವು ಆಟಗಾರರು 30 ವರ್ಷಕ್ಕೇ ಸುಸ್ತಾಗುತ್ತಾರೆ. ಕೆಲವರು 40 ಸಮೀಪಿಸಿದರೂ ಉತ್ಸಾಹದಿಂದ ಪುಟಿಯುತ್ತಿರುತ್ತಾರೆ. ಆಡುವ ಉತ್ಸಾಹ, ಸಾಧನೆಯ ಹಸಿವು, ದೇಹದಲ್ಲಿ ಶಕ್ತಿ, ಫಾರ್ಮ್ ಇವೆಲ್ಲಾ ಜೊತೆಯಲ್ಲಿರುವವರೆಗೂ ಯಾವುದೇ ಆಟಗಾರ ವಯಸ್ಸಿನ ಬಗ್ಗೆ ಚಿಂತಿಸಬೇಕಿಲ್ಲ. ಆದರೆ, ಕೆಲವೊಮ್ಮೆ ಕೋಚ್ಗಳು ಚಿಂತಿಸುತ್ತಾರೆ.
ನಿಜ. ಕ್ರೀಡೆಗಿಂತ ಕ್ರೀಡಾಪಟು ದೊಡ್ಡವನಲ್ಲ. ಎಂಥಾ ಮಹತ್ಸಾಧಕನೇ ಆಗದ್ದರೂ, ಒಂದು ಕ್ರೀಡೆಗೆ ಅಥವಾ ತಂಡಕ್ಕೆ ಆತ ಅನಿವಾರ್ಯನಲ್ಲ. ಬ್ರಾಡ್ಮನ್, ಪೀಲೆ, ಮರಡೋನಾರಿಂದ ಬ್ರಿಯಾನ್ ಲಾರಾವರೆಗೆ ಪ್ರತಿಯೊಬ್ಬರೂ ತಮ್ಮ ಸಮಯ ಬಂದಾಗ ವಿದಾಯದ ಬಾಗಿಲು ದಾಟಿದವರೇ. ಆದರೂ, ದಶಕಗಳ ಕಾಲ ಕ್ರೀಡೆಗಾಗಿ, ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ಮುಡಿಪಾಗಿಟ್ಟ, ಕ್ರೀಡೆಯನ್ನೇ ಉಸಿರಾಡಿ ದಿಗ್ಗಜರ ಪಟ್ಟಕ್ಕೇರಿದ ಆಟಗಾರರಿಗೆ ಗೌರವಯುತವಾಗಿ ನಿವೃತ್ತಿ ಪಡೆಯುವ ಅವಕಾಶ ಮಾಡಿಕೊಡಬೇಕೆನ್ನುವುದು ಸಮಾಜದ ಅಭಿಪ್ರಾಯ. ಆದರೆ, ಬಹುತೇಕ ಕ್ರೀಡಾಪಟುಗಳಿಗೆ ಅಂಥ ಅದೃಷ್ಟ ಇರುವುದಿಲ್ಲ. ತಮ್ಮ ಉತ್ತುಂಗದ ದಿನಗಳಲ್ಲಿ ಜಗತ್ತಿನ ಸರ್ವಶ್ರೇಷ್ಠ ಆಟಗಾರರಾಗಿ ಮೆರೆದ ಬ್ರೆಜಿಲ್ನ ರೊನಾಲ್ಡೊ, ಇಟಲಿಯ ರಾಬರ್ಟೊ ಬ್ಯಾಜಿಯೊ, ಅರ್ಜೆಂಟೀನಾದ ಗೇಬ್ರಿಯಾಲ ಬ್ಯಾಟಿಸ್ಟುಟ, ಪೋರ್ಚುಗಲ್ನ ಲೂಯಿಸ್ ಫಿಗೊ, ಸ್ಪೇನ್ನ ರಾಲ್, ಹಾಲೆಂಡ್ನ ರುಡ್ ವಾನ್ ನಿಸ್ಟೆಲ್ರೂಯ್ ಇವರೆಲ್ಲರಿಗೂ ತಮ್ಮಿಚ್ಚೆಯಂತೆ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿರ್ಗಮಿಸುವ ಅವಕಾಶ ದೊರೆಯಲೇ ಇಲ್ಲ. ಅಭಿಮಾನಿಗಳ ಪಾಲಿಗೆ ತಾವೆಷ್ಟೇ ದೊಡ್ಡವರಾದರೂ, ಕೋಚ್ಗಳು ಬೇಡವೆಂದು ಕೈಬಿಟ್ಟಾಗ ತಮ್ಮ ಪಾಲಿನ ಪ್ರಾಪ್ತಿ ಇಷ್ಟೇ ಎಂದುಕೊಂಡು ಸಂತೃಪ್ತರಾಗಬೇಕಾಯಿತು. ಈಗ ಡೇವಿಡ್ ಬೆಕ್ಹ್ಯಾಂ ಹಣೆಬರಹವೂ ಇಷ್ಟೇ ಆಗಿದೆ.
ಭಾರತದ ಹಾಕಿ ದಿಗ್ಗಜ ಧನರಾಜ್ ಪಿಳ್ಳೆ ಸಹ ಇಂಥ ನೋವು ಅನುಭವಿಸಿದವರೇ. 15 ವರ್ಷ ಕಾಲ ಭಾರತವನ್ನು ಪ್ರತಿಧಿಸಿ, 4 ಒಲಿಂಪಿಕ್ಸ್, 4 ಚಾಂಪಿಯನ್ಸ್ ಟ್ರೋಫಿ ಹಾಗೂ 4 ಏಷ್ಯಾಡ್ಗಳಲ್ಲಿ ಆಡಿದ ಏಕೈಕ ಭಾರತೀಯರೆನಿಸಿಕೊಂಡವರು ಧನರಾಜ್. ಅವರ ನಾಯಕತ್ವದಲ್ಲಿ ಭಾರತ ತಂಡ 1998ರ ಏಷ್ಯಾಡ್ ಹಾಗೂ 2003 ಏಷ್ಯಾ ಕಪ್ ಚಿನ್ನ ಗೆದ್ದಿದೆ.
36ರ ಹರೆಯದಲ್ಲೂ ತಮ್ಮ ಅರ್ಧ ವಯಸ್ಸಿನ ಆಟಗಾರರಿಗಿಂತಲೂ ಹೆಚ್ಚಿನ ಹುರುಪಿನಿಂದ, ಚುರುಕಿನಿಂದ ಆಡುತ್ತಿದ್ದರು. ಆದರೆ, ಭಾರತೀಯ ಹಾಕಿ ಒಕ್ಕೂಟದ ಪೂರ್ವಾಗ್ರಹ ಪೀಡಿತ ಧೋರಣೆಯಿಂದಾಗಿ ಅವರಿಗೆ ಗೌರವಯುತವಾಗಿ ನಿವೃತ್ತರಾಗುವ ಅವಕಾಶ ದೊರೆಯಲೇ ಇಲ್ಲ. ಜಗಮೋಹನ್ ದಾಲ್ಮಿಯಾ ವಿರುದ್ಧ ಬಂಡೇಳದೇ ಇದ್ದರೆ ಬಹುಶಃ ಕ್ರಿಕೆಟಿಗ ಸೌರವ್ ಗಂಗೂಲಿಗೂ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ನಿವೃತ್ತಿ ಘೋಷಿಸುವ ಅವಕಾಶ ಪ್ರಾಪ್ತವಾಗುತ್ತಿರಲಿಲ್ಲ.
ಕ್ರೀಡಾಪಟುಗಳ ಜೀವನದಲ್ಲಿ ಪದಾರ್ಪಣೆ ಹಾಗೂ ನಿವೃತ್ತಿಯ ದಿನಾಂಕ ಒಂದು ಅಂಕಿ-ಅಂಶ ಅಷ್ಟೇ. ಏಕೆಂದರೆ, ಆ ನಡುವಿನ ಅವಧಿಯಲ್ಲಿ ದಾಖಲಾದ ಸಾಧನೆಗಳನ್ನು ಕ್ರೀಡೆಯ ಅಪ್ಪಟ ಅಭಿಮಾನಿಗಳು ಶಾಶ್ವತವಾಗಿ ನೆನಪಿಡುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಾರೆ ಎನಿಸಿದ್ದ ಡೇವಿಡ್ ಬೆಕ್ಹ್ಯಾಂ ಸಹ ಅವರ ಸೆಲೆಬ್ರಿಟಿ ವರ್ಚಸ್ಸು, ಮೈಮೇಲಿನ ಹಚ್ಚೆಗಳಷ್ಟೇ, ಅವರ ಗೋಲುಗಳಿಂದಲೂ ನೆನಪಾಗುತ್ತಾರೆ. 2004ರ ಯುರೋ ಕಪ್ನ ಪೆನಾಲ್ಟಿ ಶೂಟೌಟ್ನಲ್ಲಿ ವಿಫಲರಾಗಿದ್ದು ಸಹ ಬೆಕ್ಹ್ಯಾಂ ಎಂದಾಗಲೆಲ್ಲಾ ನೆನಪಾಗುತ್ತಿರುತ್ತದೆ.
No comments:
Post a Comment