Tuesday, August 3, 2010

ಪ್ರಕ್ರಿಯೆ ಜಾರಿಯಲ್ಲಿದೆ

ಯಶಸ್ಸು ಒಂದು ಪ್ರಕ್ರಿಯೆ. ವಯಸ್ಸು ಒಂದು ಸಂಖ್ಯೆ.
ಯಶಸ್ಸಿಗೂ ವಯಸ್ಸಿಗೂ ಸಂಬಂಧವಿಲ್ಲ.
ಮಾರ್ಟಿನಾ ನವ್ರಾಟಿಲೋವಾ ತಮ್ಮ ಸುದೀರ್ಘ ವೃತ್ತಿಜೀವನದ ಕೊನೆಯ ಹಾಗೂ 58ನೇ ಗ್ರಾಂಡ್ ಸ್ಲಾಂ (ಮಿಶ್ರ ಡಬಲ್ಸ್) ಗೆದ್ದಾಗ ಅವರಿಗೆ 46 ವರ್ಷ 8 ತಿಂಗಳು.
ಆಸ್ಟ್ರೇಲಿಯಾದ ನಾರ್ಮನ್ ಬ್ರೂಕ್ಸ್ 46 ವರ್ಷ 2 ತಿಂಗಳ ಹರೆಯದಲ್ಲಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಗೆದ್ದಿದ್ದರು.
ಕೆನ್ ರೋಸ್ವಾಲ್ 1972ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಾಗ ಅವರಿಗೆ 38 ವರ್ಷ. ಲಿಯಾಂಡರ್ ಪೇಸ್ ತಮ್ಮ 37ನೇ ವಯಸ್ಸಿನಲ್ಲಿ ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಾಧನೆಯೆನ್ನುವುದು ಯಾವತ್ತಿನಿಂದಲೂ ಕ್ರಿಕೆಟಿಗರ ಪಾಲಿಗೆ ಗಗನಕುಸುಮವಾಗಿತ್ತು. ಆದರೆ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಮಾಂತ್ರಿಕ 200 ರನ್ ಗಡಿ ದಾಟಿದಾಗ ಅವರಿಗೆ 37 ವರ್ಷ.
ಮೊನ್ನೆ ಗುರುವಾರ ಶ್ರೀಲಂಕಾ ವಿರುದ್ಧ ಕೊಲಂಬೋ ಟೆಸ್ಟ್ ನಲ್ಲಿ ಸಚಿನ್ ವೃತ್ತಿಜೀವನದಲ್ಲಿ 5ನೇ ಬಾರಿ ದ್ವಿಶತಕ ಬಾರಿಸಿದಾಗ ಅವರಿಗೆ 37 ವರ್ಷ 96 ದಿನ.
ನಿಜ, ಕ್ರೀಡೆಯಲ್ಲಿ ಫಿಟ್ನೆಸ್ಗೆ ಎಲ್ಲಿಲ್ಲದ ಮಹತ್ವ. ಆದರೆ, ನಿಜವಾದ ಸಾಧಕರಿಗೆ ವಯಸ್ಸು ಯಾವತ್ತೂ ಒಂದು ಅಡೆತಡೆಯಾಗುವುದಿಲ್ಲ. ಹಾಗೆಂದೇ ಸಚಿನ್ ಮೊನ್ನೆ ಹೇಳಿದ್ದು. ಇನ್ನಾದರೂ, ನನ್ನ ವಯಸ್ಸಿನ ಬಗ್ಗೆ ಯಾರೂ ಪ್ರಶ್ನೆ ಮಾಡದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು.
ಕಳೆದ ಇಪ್ಪತ್ತೊಂದು ವರ್ಷಗಳಿಂದ ಅವರು ಕ್ರಿಕೆಟ್ ಮೈದಾನದಲ್ಲಿದ್ದರೂ, ಅವರಲ್ಲಿನ ತಾಜಾತನ ಮಾಯವಾಗಿಲ್ಲ. ರನ್ ಹಸಿವು ಇಂಗಿಲ್ಲ. ಹಾಗೆಂದು ಅವರನ್ನು ರನ್ ಮೆಷಿನ್ ಎನ್ನುವಂತಿಲ್ಲ. ಏಕೆಂದರೆ, ಅವರ ಆಟದಲ್ಲಿರುವುದು ಯಾಂತ್ರಿಕತೆಯಲ್ಲ; ಕಲಾತ್ಮಕತೆ. ಸಚಿನ್ ಆಟದಲ್ಲಿ ಕೆಲವರಿಗೆ ಚಿತ್ರಕಾರ ಕಾಣುತ್ತಾನೆ. ಕೆಲವರಿಗೆ ಸಂಗೀತಗಾರ ನೆನಪಾಗುತ್ತಾನೆ. ಅವರ ತಾದಾತ್ಮ್ಯ, ಅವರ ವಿಧೇಯತೆ, ಸ್ಥಿತಪ್ರಜ್ಞತೆ.... ಸಾಧನೆಯಲ್ಲಿ ಎಷ್ಟೇ ಎತ್ತರಕ್ಕೇರಿದ್ದರೂ ಅವರು ಬಾಗುವುದನ್ನು ಮರೆತಿಲ್ಲ. ಮೈಮರೆತು ಬೀಗುವುದನ್ನು ಕಲಿತಿಲ್ಲ. ಯಶಸ್ಸಿನ ಪ್ರಕ್ರಿಯೆ ತನ್ನ ಪಾಲಿಗಿನ್ನೂ ಮುಗಿದಿಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ ತೃಪ್ತಿ ಅವರ ಹತ್ತಿರ ಸುಳಿಯುವುದಿಲ್ಲ. ಹಾಗೆಂದು ಅತೃಪ್ತಿಯಿಂದ ತೊಳಲುವವರೂ ಅವರಲ್ಲ.
ಕ್ರಿಕೆಟ್ನಲ್ಲಿ ಅವರಿಗೊಲಿಯದ ಬ್ಯಾಟಿಂಗ್ ದಾಖಲೆಗಳು ಯಾವುದೂ ಬಹುಶಃ ಉಳಿದಿಲ್ಲ. ಈ ವರ್ಷದ 6 ಟೆಸ್ಟ್ಗಳಲ್ಲಿ 5 ಶತಕ ಬಾರಿಸಿರುವ ಸಚಿನ್ ಶತಕಗಳ ಶತಕದತ್ತ ಬಿರುಸಿನಿಂದಲೇ ಸಾಗುತ್ತಿದ್ದಾರೆ. ಭಾರತ ಈ ವರ್ಷ ಇನ್ನೂ 7 ಟೆಸ್ಟ್ ಆಡುವುದು ನಿಗದಿಯಾಗಿದ್ದು, 2010 ಕಳೆಯುವುದರೊಳಗೆ ಅವರು 50 ಟೆಸ್ಟ್ ಶತಕಗಳ ಗಡಿ ದಾಟುವುದರಲ್ಲಿ ಅನುಮಾನ ಉಳಿದಿಲ್ಲ.
ಸದ್ಯ ಸಚಿನ್ ಎದುರಿಗಿರುವ ಒಂದು ಸಂಭಾವ್ಯ ಸಾಧನೆಯೆಂದರೆ ಅದು ಟೆಸ್ಟ್ನಲ್ಲಿ 300 ರನ್ ಗಡಿ ದಾಟುವುದು. ಸೆಹ್ವಾಗ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಮೂರನೇ ಬಾರಿ ಹತ್ತಿರ ಬಂದಿದ್ದಾರೆ. ಆದರೆ, ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 248 (ಅಜೇಯ) ರನ್ ಗಳಿಸಿರುವುದೇ ಗರಿಷ್ಠ. ಸಂದರ್ಭ ಬಂದರೆ ಅವರು 300 ರನ್ ಗಳಿಸಿಯೇ ಬಿಡಬಹುದು. ಆದರೂ, ಆಧುನಿಕ ಯುಗದ
ಟೆಸ್ಟ್ಗಳಲ್ಲಿ ಸಚಿನ್ ಅಥವಾ ದ್ರಾವಿಡ್ 300 ರನ್ ಗಳಿಸುವಂಥ ವಾತಾವರಣ ನಿರ್ಮಾಣವಾಗುವುದೇ ಕಷ್ಟ. ಏಕೆಂದರೆ, ಈಗ ಡ್ರಾ ಉದ್ದೇಶದಿಂದ ಯಾರೂ ಟೆಸ್ಟ್ ಆಡುವುದಿಲ್ಲ. ಫಲಿತಾಂಶಕ್ಕಾಗಿಯೇ ಆಡಲಾಗುತ್ತದೆ. ಫಲಿತಾಂಶಕ್ಕಾಗಿ ಆಡುವಾಗ ವೈಯಕ್ತಿಕ ಮೈಲುಗಲ್ಲುಗಳಿಗೆ ಯತ್ನಿಸಲು ಕಾಲಾವಕಾಶ ಇರುವುದಿಲ್ಲ. ಕೊಲಂಬೋ ಟೆಸ್ಟ್ ಪಂದ್ಯವನ್ನೇ ಪರಿಗಣಿಸಿದರೆ ಸಚಿನ್ ತಮ್ಮ 203 ರನ್ಗಾಗಿ (347 ಎಸೆತ) 8 ಗಂಟೆಗೂ ಹೆಚ್ಚು ಕಾಲ ಕ್ರೀಸ್ನಲ್ಲಿದ್ದರು. ಅದರರ್ಥ ಅವರು 300 ರನ್ ಗಳಿಸಬೇಕಿದ್ದರೆ ಇನ್ನೂ ಕನಿಷ್ಠ 3 ರಿಂದ 4 ಗಂಟೆ ಕ್ರೀಸಿನಲ್ಲಿರಬೇಕಿತ್ತು. ಯಶಸ್ಸಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದು ನಿಜವೇ ಆದರೂ, ಸಚಿನ್ 37ನೇ ವಯಸ್ಸಿನಲ್ಲಿ 12 ಗಂಟೆ ಕ್ರೀಸಿನಲ್ಲಿ ಕಳೆಯುವುದು ಕಷ್ಟವೇ. ಏಕೆಂದರೆ, ದೇಹದ ಸಹಿಸುವಿಕೆಗೂ ಒಂದು ಮಿತಿಯೆನ್ನುವುದಿರುತ್ತದೆ. ಒಂದು ವೇಳೆ ಸಚಿನ್ 300 ರನ್ ಮಾಡಲೇ ಬೇಕೆಂದರೆ ಅವರು ಸೆಹ್ವಾಗ್ ಶೈಲಿಯಲ್ಲಿ ಆಡಬೇಕು. ಆಗ ಸಾಧ್ಯ. ಅದು ಅವರಿಂದ ಅಸಾಧ್ಯವೂ ಅಲ್ಲ. ಅದಕ್ಕೂ ಸಂದರ್ಭ ಬರಬೇಕು. ಅಂಥ ಸಂದರ್ಭ ಬಂದರೂ ಬರಬಹುದು.
ಸೆಹ್ವಾಗ್ ಕೊಲಂಬೋದಲ್ಲಿ 101 ಎಸೆತಗಳಲ್ಲಿ 99 ರನ್ ಗಳಿಸಿದ್ದರು. ಕಳೆದ ವರ್ಷ ಅವರು 293 ರನ್ ಗಳಿಸಿದ ಸಂದರ್ಭದಲ್ಲಿ 100ಕ್ಕೂ ಹೆಚ್ಚಿನ ಸ್ಟ್ರೈಕ್ರೇಟ್ ಕಾಯ್ದುಕೊಂಡಿದ್ದರು. ಬ್ರಾಡ್ಮನ್ 1930ರಲ್ಲಿ ಒಂದೇ ದಿನದ ಆಟದಲ್ಲಿ 309 ರನ್ ಗಳಿಸಿ ಅಜೇಯರಾಗುಳಿದಿದ್ದರು. ಸೆಹ್ವಾಗ್ ಕಳೆದ ವರ್ಷ ಲಂಕಾ ವಿರುದ್ಧ ಒಂದೇ ದಿನ 284 ರನ್ ಚಚ್ಚಿದ್ದರು. ಇಂಗ್ಲೆಂಡ್ನ ವ್ಯಾಲಿ ಹ್ಯಾಮ್ಮಂಡ್ 1933ರಲ್ಲಿ ಒಂದೇ ದಿನ ನ್ಯೂಜಿಲೆಂಡ್ ವಿರುದ್ಧ 295 ರನ್ ಸಿಡಿಸಿದ್ದರು. ಈ ಯುಗದಲ್ಲಿ ತ್ರಿಶತಕ ಬಾರಿಸುವುದಕ್ಕೆ ಅಂಥ ವೇಗದ ಆಟವೇ ಅವಶ್ಯಕ. ಸೆಹ್ವಾಗ್ ಪಾಕ್ ವಿರುದ್ಧ ಮೊದಲ ಬಾರಿ ತ್ರಿಶತಕ ಬಾರಿಸಿದಾಗ 364 ಎಸೆತ ಮಾತ್ರ ಆಡಿದ್ದರು. ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು. ಇದು ವೇಗದ ವಿಶ್ವದಾಖಲೆ. 300 ರನ್ ಬಾರಿಸಿದವರಾದ ಲಾರಾ, ಮ್ಯಾಥ್ಯೂ ಹೇಡನ್ ಮೊದಲಾದವರೂ ಸಿಡಿಲಿನ ವೇಗದಲ್ಲಿ ಬ್ಯಾಟ್ ಬೀಸುವವರು. ಆದರೆ, ಸಚಿನ್ ಆಡುವುದು ಲೆಕ್ಕಾಚಾರದ ಆಕ್ರಮಣವೇ ಹೊರತು ಸೆಹ್ವಾಗ್ರಂತೆ ಗೂಳಿ ಓಟವಲ್ಲ. ಹಾಗಾಗಿ ಸಚಿನ್ 300 ರನ್ ಗಡಿ ದಾಟಬೇಕಾದರೆ, ಭಾರತ ಮೂರು ದಿನ ಬ್ಯಾಟಿಂಗ್ ಮಾಡಬೇಕು ಹಾಗೂ ಅವರ ದೇಹ ಅನುಮತಿ ಕೊಡಬೇಕು.
ಆದರೆ, ಕೊನೆಗೊಂದು ದಿನ ಈ ಎಲ್ಲಾ ಲೆಕ್ಕಾಚಾರಗಳು ಸುಳ್ಳಾಗಲೂಬಹುದು. ಏಕದಿನ ಕ್ರಿಕೆಟ್ನ ದ್ವಿಶತಕ ಸಾಧನೆಯಂತೆ ಸಚಿನ್ರ ಇಚ್ಛಾಶಕ್ತಿಯ ಎದುರು ಯಾವ ಲೆಕ್ಕಾಚಾರಗಳೂ ನಿಲ್ಲುವುದಿಲ್ಲ ಎನ್ನುವುದೂ ಸುಳ್ಳಲ್ಲ.

No comments:

Post a Comment