Monday, July 26, 2010

ಹೊಲ ಮೇಯುವ ಬೇಲಿ

ಮಹಿಳಾ ಕ್ರೀಡೆಗಳಿಗೆ ಪುರುಷ ಕೋಚ್ಗಳೇ ಏಕೆ ಬೇಕು?
2007ರಲ್ಲಿ ನಡೆದ ಮಹಿಳೆಯರ ವಾಲಿಬಾಲ್ನ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಣದಲ್ಲಿದ್ದ 24 ತಂಡಗಳ ಪೈಕಿ 23 ತಂಡಗಳಿಗೆ ಪುರುಷರೇ ಕೋಚ್ ಆಗಿದ್ದರು.
ಮುಂದಿನ ವರ್ಷ ಜರ್ಮನಿಯಲ್ಲಿ ನಡೆಯುವ ಮಹಿಳೆಯರ ಫಿಫಾ ವಿಶ್ವಕಪ್ ಫುಟ್ಬಾಲ್ನಲ್ಲಿ ಬಹುತೇಕ ತಂಡಗಳ ತರಬೇತುದಾರರು ಗಂಡಸರು. ಅಷ್ಟೇ ಏಕೆ, ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಬಹುತೇಕ ರಾಷ್ಟ್ರಗಳ ಮಹಿಳಾ ತಂಡಗಳು ಪುರುಷ ಕೋಚ್ಗಳೊಂದಿಗೆ ಆಗಮಿಸಿರುತ್ತವೆ.
ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನೇ ಪರಿಗಣಿಸುವುದಾದರೂ, ಬಾಲಕಿಯರ ಹಾಕಿ, ಖೊಖೊ, ಹ್ಯಾಂಡ್ಬಾಲ್, ಥ್ರೋಬಾಲ್, ವಾಲಿಬಾಲ್, ಬ್ಯಾಸ್ಕೆಟ್ಬಾಲ್ ಇತ್ಯಾದಿ... ತಂಡಗಳೊಂದಿಗೆ ಪುರುಷ ಕೋಚ್ಗಳೇ ಪ್ರವಾಸ ಮಾಡುತ್ತಾರೆ. ಅಥ್ಲೀಟ್ಗಳ ಗಮನವೆಲ್ಲಾ ತಮ್ಮ ಸಾಧನೆ ಹಾಗೂ ಭವಿಷ್ಯದ ಕಡೆಗಿರುತ್ತದೆ. ಪೋಷಕರು ವ್ಯವಸ್ಥೆಯ ಮೇಲಿನ ವಿಶ್ವಾಸದಿಂದ ಮಕ್ಕಳನ್ನು ದೂರದೂರಿನ ಪ್ರವಾಸಗಳಿಗೆ ಕಳಿಸಿರುತ್ತಾರೆ. ಆದರೆ, ಕ್ರೀಡಾ ವಲಯದಲ್ಲಿ ನಡೆಯುತ್ತಿರುವುದಾದರೂ ಏನು?
ಕೌಶಿಕ್ ಹಾಗೂ ಟಿಎಸ್ ರಂಜಿತಾ ಪ್ರಕರಣ ಕ್ರೀಡೆಯಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ಕಿರುಕುಳಕ್ಕೆ ಒಂದು ಹೊಸ ಸೇರ್ಪಡೆ ಅಷ್ಟೇ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಕ್ರೀಡೆ ಇರುವಲ್ಲೆಲ್ಲಾ ಇಂಥ ಪೀಡೆಯೂ ಇದ್ದೇ ಇದೆ.
‘ಕ್ರೀಡೆಯಲ್ಲಿ ಉದ್ದೀಪನ ವ್ಯಸನದ ಬಗ್ಗೆ ಎಲ್ಲಿಲ್ಲದ ಕಟ್ಟೆಚ್ಚರವಿದೆ. ಫುಟ್ಬಾಲ್ನಲ್ಲಿ 100, ಈಜಿನಲ್ಲಿ 60 ಅಥವಾ ಟೆನಿಸ್ನಲ್ಲಿ 40 ಉದ್ದೀಪನ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದರೆ ಮಾಧ್ಯಮಗಳಲ್ಲಿ ಅದೊಂದು ದೊಡ್ಡ ಸುದ್ದಿಯಾಗುತ್ತದೆ. ಕೋಲಾಹಲ ನಡೆಯುತ್ತದೆ. ಆದರೆ, ಮಹಿಳಾ ಕ್ರೀಡೆಗಳಲ್ಲಿ ಲೈಂಗಿಕ ಕಿರುಕುಳದ ಪ್ರಮಾಣ ಇಷ್ಟೇ ಸಂಖ್ಯೆಯಲ್ಲಿದ್ದರೂ, ಯಾರೂ ಗಮನ ಹರಿಸುತ್ತಿಲ್ಲ’ ಎಂದು ಇಂಗ್ಲೆಂಡ್ನ ಅಥ್ಲೀಟ್ ಸೆಲಿಯಾ ಬ್ರ್ಯಾಕೆನ್ರಿಡ್ಜ್ ಎಂಬಾಕೆ ಕೆಲವು ವರ್ಷಗಳ ಹಿಂದೆ ಹೇಳಿದ್ದರು.
‘ವೈಯಕ್ತಿಕ ಕ್ರೀಡೆಗಳಲ್ಲಿ ಅಥ್ಲೀಟ್ಗಳು ಹೆಚ್ಚು ಸುರಕ್ಷಿತ. ಆದರೆ, ತಂಡ ಕ್ರೀಡೆಗಳಲ್ಲಿ ಕೋಚ್ಗಳ ಕಾಮುಕ ಕಣ್ಣಿಗೆ ಯುವ ಕ್ರೀಡಾ ಪಟುಗಳು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ’ ಎನ್ನುವುದು ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಅಶ್ವಿನಿ ನಾಚಪ್ಪ ಅಭಿಪ್ರಾಯ.
‘ಕ್ರೀಡೆಗೆ ಗ್ಲಾಮರ್ ಯಾವತ್ತಿಗೂ ಶಾಪವಲ್ಲ. ಅಥ್ಲೀಟ್ಗಳ ಸೌಂದರ್ಯ ಕೋಚ್ಗಳಿಗೆ ಕೆಟ್ಟ ಆಲೋಚನೆ ಮೂಡಿಸಬಹುದು. ಆದರೆ, ನಮ್ಮಲ್ಲಿ ಸಂಯಮ ಇರಬೇಕು. ಮಾನಸಿಕವಾಗಿ ಗಟ್ಟಿತನ ಇರಬೇಕು. ನಮ್ಮಲ್ಲಿ ಅಂಥ ಗಡಸುತನವಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಾನೂ ದೀರ್ಘ ವೃತ್ತಿಜೀವನ ಕಳೆದಿದ್ದೇನೆ. ಆದರೆ, ನಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾರೊಬ್ಬರೂ ಬೆರಳು ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ’ ಎಂದು ಅಶ್ವಿನಿ ಹೇಳುತ್ತಾರೆ.
ಮಹಾರಾಜ ಕಿಶನ್ ಕೌಶಿಕ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ವಿಶ್ವಾಸಾರ್ಹವಾದವು ಎಂದು ಹಾಕಿ ಇಂಡಿಯಾ ಸ್ಪಷ್ಟ ಪಡಿಸಿದೆ. ಸತತ ಎರಡು ವರ್ಷಗಳಿಂದ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡಿದ್ದ ವೇಟ್ಲಿಫ್ಟಿಂಗ್ ಕೋಚ್ ಒಬ್ಬರು ದಶಕಗಳ ಕಾಲ ಕಿರಿಯ ಆಟಗಾರ್ತಿಯರಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಒಟ್ಟಾರೆ ಕೌಶಿಕ್ ಪ್ರಕರಣ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದ್ದು, ಹೊಸ ಹೊಸ ಪ್ರಕರಣಗಳು ಒಂದರ ಬೆನ್ನಿಗೊಂದು ಬೆಳಕಿಗೆ ಬರುತ್ತಿವೆ.
ಮಹಿಳಾ ಕ್ರೀಡೆಗಳಲ್ಲಿ ಲೈಂಗಿಕ ಕಿರುಕುಳದ ವಿಷಯವಾಗಿ ಹಲವಾರು ಅಧ್ಯಯನಗಳೇ ನಡೆದಿವೆ. ಅದರ ಪ್ರಕಾರ ಮೂರು ಬಗೆಯ ಕೋಚ್ಗಳಿರುತ್ತಾರೆ. ಮೊದಲ ವರ್ಗದ ಕೋಚ್ಗಳು ಆಟಗಾರ್ತಿಯರನ್ನು ರೇಗಿಸುತ್ತ, ಫ್ಲರ್ಟ್ ಮಾಡುತ್ತ, ಅನವಶ್ಯಕವಾಗಿ ದೇಹ ಸ್ಪರ್ಶಿಸುತ್ತ ಸುಖ ಕಾಣುತ್ತಾರೆ. ಅಥ್ಲೀಟ್ಳ ತೂಕ ಎಷ್ಟು ಹೆಚ್ಚಿದೆ ಅಥವಾ ಇಳಿದೆ ಎಂದು ತಿಳಿದುಕೊಳ್ಳುವುದಕ್ಕೂ ಅವರು ಆಟಗಾರ್ತಿಯರನ್ನು ಚೂಟುತ್ತಾರೆ! ಎರಡನೇ ವರ್ಗದ ಕೋಚ್ಗಳು ‘ಎಲ್ಲಾ ಹುಡುಗಿಯರನ್ನೂ ಹಾಸಿಗೆಗೆ ಎಳೆಯುವುದೇ ನನ್ನ ಗುರಿ’ ಎಂಬಂತೆ ವರ್ತಿಸುತ್ತಾರೆ. ಮೂರನೇ ವರ್ಗದ ಕೋಚ್ಗಳು ಮಹಿಳೆಯರ ಬಗ್ಗೆ ಸದಾ ನಕಾರಾತ್ಮಕವಾಗಿರುತ್ತಾರೆ. ಬೇಕೆಂದೇ ಅಸಡ್ಡೆ ಮಾಡುವುದು, ಎಲ್ಲರೆದುರು ನಿಂದಿಸುವುದು, ತಾನೇ ಶ್ರೇಷ್ಠ ಎಂದು ತೋರಿಸಿಕೊಳ್ಳುವುದು ಇತ್ಯಾದಿ ಮಾಡುತ್ತಾರೆ.
ಸಮಾಜದಲ್ಲಿ ಗುರುವಿಗೊಂದು ವಿಶಿಷ್ಠ ಸ್ಥಾನವಿದೆ. ನಮ್ಮ ಸನಾತನ ಪರಂಪರೆ ಗುರುವಿಗೆ ದೇವರ ಸ್ಥಾನ ಕಲ್ಪಿಸಿದೆ. ಆದರೆ, ಇದೇ ಸಮಾಜ ಗುರು-ಶಿಷ್ಯೆಯರ ವಿವಾಹ ಸಂಬಂದಕ್ಕೂ ಅವಕಾಶ ಕಲ್ಪಿಸಿದೆ. ಸಮಾಜದ ಚೌಕಟ್ಟಿನಲ್ಲಿ ನಡೆಯುವ ಯಾವ ಕೆಲಸವೂ ಕಾನೂನುಬಾಹಿರ ಎನಿಸುವುದಿಲ್ಲ. ಆದರೆ, ಆಧುನಿಕ ಯುಗದ ಕೋಚ್ಗಳು ‘ಗುರುದಕ್ಷಿಣೆ ರೂಪದಲ್ಲಿ ಬೇರೇನನ್ನೋ ಬಯಸುತ್ತಿರುವುದು’ ಈ ಅವಾಂತರಗಳಿಗೆ ಕಾರಣವಾಗಿದೆ.
ಯುರೋಪಿನಲ್ಲಿ ನಡೆದ ಮತ್ತೊಂದು ಅಧ್ಯಯನದ ಪ್ರಕಾರ ಪ್ರಪಂಚದ ಎಲ್ಲಾ ಕ್ರೀಡೆಗಳ ಉನ್ನತ ಅಥ್ಲೀಟ್ಗಳ ಪೈಕಿ ಕನಿಷ್ಠ 29ಶೇ. ಮಂದಿ ಕೋಚ್ಗಳಿಂದ ಅಥವಾ ಯಾರಾದರೊಬ್ಬರಿಂದ ಲೈಂಗಿಕ ಕಿರುಕುಳ ಅನುಭವಿಸಿರುತ್ತಾರೆ. ಆದರೆ, ಇದರಲ್ಲಿ ಬೆಳಕಿಗೆ ಬರುವ ಪ್ರಕರಣಗಳು ಎಷ್ಟು?
ಅಧ್ಯಯನಕಾರರ ಪ್ರಕಾರ ಶೇ. 38 ಮಂದಿ ತಂಡದಿಂದ ಸ್ಥಾನ ಕಳೆದುಕೊಳ್ಳಬಹುದು ಎಂಬ ಕಾರಣಕ್ಕೆ ಸಹಿಸಿಕೊಳ್ಳುತ್ತಾರೆ. ಶೇ 36 ಮಂದಿ ನಮ್ಮ ಮಾತನ್ನು ಯಾರೂ ನಂಬುವುದಿಲ್ಲ ಎಂಬ ಭಯದಿಂದ ಸುಮ್ಮನಿರುತ್ತಾರೆ. ಶೇ. 51 ಮಂದಿ ನಾಚಿಕೆ/ ಮುಜುಗರದಿಂದ ಯಾರಲ್ಲೂ ಹೇಳಿಕೊಳ್ಳುವುದೇ ಇಲ್ಲ. ಶೇ. 29 ಮಂದಿ ಕೋಚ್/ ತಂಡದ ಮೇಲಿನ ನಿಷ್ಠೆ-ಭಕ್ತಿಯಿಂದ ಸುಮ್ಮನುಳಿದರೆ, ಶೇ. 27 ಮಂದಿಗೆ ಇದನ್ನೆಲ್ಲಾ ಯಾರ ಬಳಿ ಹೇಳಿಕೊಳ್ಳಬೇಕೆನ್ನುವುದು ಗೊತ್ತಾಗುವುದಿಲ್ಲ.
ಕ್ರೀಡೆಯಲ್ಲಿರಬಹುದು, ಉದ್ಯೋಗಸ್ಥಳದಲ್ಲಿರಬಹುದು ಲೈಂಗಿಕ ಕಿರುಕುಳ ಶಿಕ್ಷಾರ್ಹ ಅಪರಾಧ. ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಅಮೆರಿಕ, ನ್ಯೂಜಿಲೆಂಡ್, ಹಾಲೆಂಡ್ ಮೊದಲಾದ ದೇಶಗಳಲ್ಲಿ ಕ್ರೀಡಾಪಟುಗಳ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಸರ್ಕಾರ, ಕಾನೂನಿನ ಮಟ್ಟದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಭಾರತದಲ್ಲೂ ಅಂಥ ಕಾನೂನು ಗಟ್ಟಿಗೊಳ್ಳಬೇಕಿದೆ.
ಹಾಗಾದರೆ, ಮಹಿಳಾ ಕ್ರೀಡೆಗಳಿಗೆ ಮಹಿಳೆಯರೇ ಕೋಚ್ ಆಗುವುದು ಪರಿಹಾರವಾಗಬಹುದೇ? ಆಗಲಾರದು. ಆಗಲೂ ಕಿರುಕುಳ ಇರಬಹುದು. ಕೋಚ್ ಆದವರು ತಾನು ಅಥ್ಲೀಟ್ ಆಗಿದ್ದ ದಿನಗಳಲ್ಲಿ ಅನುಭವಿಸಿದ್ದ ಕಿರುಕುಳವನ್ನು ಈ ಹುಡುಗಿಯರೂ ಅನುಭವಿಸಲಿ ಎನ್ನಬಹುದು. ಒಟ್ಟಿನಲ್ಲಿ ಕೋಚ್ ಪುರುಷನಾಗಿರಬೇಕೇ, ಮಹಿಳೆಯಾಗಿರಬೇಕೇ ಎನ್ನುವುದಕ್ಕಿಂತ ಅವರು ಸಭ್ಯರಾಗಿರಬೇಕು. ಒಬ್ಬ ಅಥ್ಲೀಟ್ ಯಶಸ್ವಿಯಾಗುವುದಕ್ಕೆ ಅಗತ್ಯವೆಂದು ಬೋಧಿಸುವ ಏಕಾಗ್ರತೆ, ಸಂಯಮ, ಗಟ್ಟಿ ಮನೋಬಲ ಕೋಚ್ಗೂ ಇರಬೇಕು.

No comments:

Post a Comment