ಎಲ್ಲರೂ ತಪ್ಪು ಮಾಡುತ್ತಾರೆ.
ಅಥವಾ ಎಲ್ಲರಿಂದಲೂ ತಪ್ಪುಗಳು ಘಟಿಸುತ್ತವೆ.
ತಿದ್ದಿಕೊಳ್ಳುವವನು ಮನುಜ ಎಂದು ಕವಿಗಳು ಹೇಳಿರಬಹುದು. ಆದರೆ, ಕೆಲವು ತಪ್ಪುಗಳನ್ನು ತಿದ್ದಿಕೊಳ್ಳಲು ಕಾಲಾವಕಾಶವೇ ಇರುವುದಿಲ್ಲ. ಗಡಿಯಾರದ ಜೊತೆ ಸ್ಪರ್ಧೆ ನಡೆಸುವ ಫುಟ್ಬಾಲ್ ಆಟದಲ್ಲಂತೂ ತಪ್ಪು ಮಾಡಿದ ಮೇಲೆ ಅದನ್ನು ಸರಿಪಡಿಸುವ ಸಂಭಾವ್ಯತೆ ನೂರಕ್ಕೆ ತೊಂಭತ್ತೊಂಬತ್ತು ಬಾರಿ ಇರುವುದೇ ಇಲ್ಲ.
ಆಟದಲ್ಲಿ ಯಾವಾಗಲೂ ಅಷ್ಟೇ. ತಪ್ಪುಗಳು ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಬಹುತೇಕ ಕ್ರೀಡೆಗಳಲ್ಲಿ ಸ್ವ-ಸಾಮರ್ಥ್ಯದಿಂದ ಗೆಲ್ಲುವುದಕ್ಕಿಂತ ಎದುರಾಳಿಗಳ ತಪ್ಪಿನ ಲಾಭ ಪಡೆದು ಗೆಲ್ಲುವುದೇ ಜಾಸ್ತಿಯಾಗುತ್ತಿದೆ. ಟೆನಿಸ್ನಲ್ಲಿ ಅದನ್ನು ಅನ್ಫೋರ್ಸ್ಡ್ ಎರರ್ಸ್ ಎಂದು ಗುರುತಿಸಲಾಗುತ್ತದೆ. ಆದರೆ, ಫುಟ್ಬಾಲ್, ಕ್ರಿಕೆಟ್ನಂಥ ಕ್ರೀಡೆಗಳಲ್ಲಿ ಅಂಥ ತಾಂತ್ರಿಕ ಶಬ್ದಗಳು ಇಲ್ಲದೇ ಹೋದರೂ, ತಪ್ಪುಗಳಂತೂ ಇವೆ.
ಫುಟ್ಬಾಲ್ನಲ್ಲಿ ಒಂದು ಮಹಾಪರಾಧವಿದೆ. ಇದರಿಂದ ಆಗಬಾರದ ಅನಾಹುತಗಳೆಲ್ಲಾ ಆಗಿಹೋಗಿವೆ. ಕೊಲೆಗಳಾಗಿವೆ, ಕೋಟಿಗಟ್ಟಲೆ ನಷ್ಟವಾಗಿದೆ, ವಿಶ್ವಕಪ್ನಂಥ ಟೂರ್ನಿಗಳಿಂದ ನಿರ್ಗಮಿಸುವಂತಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಆಟಗಾರರು ಕೆಲವೊಮ್ಮೆ ಜೀವನಪರ್ಯಂತ ಪಾಪಪ್ರಜ್ಞೆಯಿಂದ ನರಳುತ್ತಾರೆ.
ಫುಟ್ಬಾಲ್ನಲ್ಲಿ ಸ್ವ-ಗೋಲಿಗಿಂತ (ಆಟಗಾರ ತನ್ನದೇ ಆವರಣದಲ್ಲಿ ಗೋಲು ಹೊಡೆದು ಎದುರಾಳಿಗೆ ಲಾಭ ಮಾಡಿಕೊಡುವುದು) ದೊಡ್ಡ ಅಪರಾಧವಿಲ್ಲ.ಏಕೆಂದರೆ, ಸ್ವ-ಗೋಲು ಗಳಿಸುವ ತಂಡ ತನ್ನ ಸೋಲನ್ನು ತಾನೇ ಆಹ್ವಾನಿಸಿಕೊಳ್ಳುತ್ತದೆ. ಎದುರಾಳಿಗೆ ಗೆಲುವಿನ ಬಳುವಳಿ ನೀಡುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲೂ ಮೊದಲ ಏಳು ದಿನಗಳಲ್ಲಿ ಎರಡು ಪಂದ್ಯಗಳಲ್ಲಿ ಸ್ವ-ಗೋಲು ದಾಖಲಾಗಿದೆ. ಗುರುವಾರ ಅರ್ಜೆಂಟೀನಾ ವಿರುದ್ಧ ದಕ್ಷಿಣ ಕೊರಿಯಾ ಆಟಗಾರ ಪಾರ್ಕ್ ಚು-ಯಂಗ್ ಸ್ವ-ಗೋಲು ಹೊಡೆದರೆ, ಹಾಲೆಂಡ್ ವಿರುದ್ಧ ಡೇನಿಯಲ್ ಅಗ್ಗರ್ ಗೋಲು ಹೊಡೆದುಕೊಟ್ಟಿದ್ದು ಡೆನ್ಮಾರ್ಕ್ನ ಸೋಲಿಗೆ ಕಾರಣವಾಗಿತ್ತು.
ವಿಶ್ವ ಫುಟ್ಬಾಲ್ನ ಆಡಳಿತ ಸಂಸ್ಥೆ ಫಿಫಾ ಸ್ವ-ಗೋಲುಗಳು ಯಾವುದು ಎಂದು ಗುರುತಿಸುವುದಕ್ಕೇ ಕೆಲವು ನಿಯಮಾವಳಿಗಳನ್ನು ರೂಪಿಸಿದೆ. ಅದರ ಪ್ರಕಾರ, ಒಬ್ಬ ಆಟಗಾರ ಎದುರಾಳಿ ತಂಡ ಗೋಲು ಗಳಿಸುವುದನ್ನು ತಡೆಯುವ ಯತ್ನದಲ್ಲಿ ಚೆಂಡನ್ನು ಸ್ವತಃ ಗೋಲು ಪೆಟ್ಟಿಗೆಯೊಳಗೆ ತಳ್ಳಿದರೆ ಅದು ಸ್ವ-ಗೋಲಾಗುತ್ತದೆ. ಕೆಲವೊಮ್ಮೆ ಎದುರಾಳಿ ತಂಡದ ಆಕ್ರಮಣಕಾರರು ಒದ್ದ ಚೆಂಡು ನಿಖರವಾಗಿ ಗುರಿಯ ದಿಕ್ಕಿನಲ್ಲಿದ್ದು, ಆಕಸ್ಮಿಕವಾಗಿ ರಕ್ಷಣಾ ಆಟಗಾರನನ್ನು ಸ್ಪರ್ಶಿಸಿದ್ದರೆ, ಅಂಥ ಸಂದರ್ಭಗಳಲ್ಲಿ ಅದನ್ನು ಸ್ವ-ಗೋಲೆಂದು ಪರಿಗಣಿಸಲಾಗುವುದಿಲ್ಲ.
ಮೊದಲ ಸ್ವ-ಗೋಲ್: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಸ್ವ-ಗೋಲು ದಾಖಲಾಗಿದ್ದು 1888ರಲ್ಲಿ. ಆಸ್ಟನ್ ವಿಲ್ಲಾ ಕ್ಲಬ್ನ ಗೆರ್ಶೋಮ್ ಕಾಕ್ಸ್ ವೋಲ್ವರ್ಹ್ಯಾಂಪ್ಟನ್ ವಾಂಡರರ್ಸ್ ವಿರುದ್ಧ ಈ ಗೋಲು ಹೊಡೆದುಕೊಟ್ಟಿದ್ದರು.
ಫಿಫಾ ವಿಶ್ವಕಪ್ ಇತಿಹಾಸಕ್ಕೆ ಬರುವುದಾದರೆ, 1930ರ ಮೊದಲ ವಿಶ್ವಕಪ್ನಲ್ಲೇ ಸ್ವ-ಗೋಲು ದಾಖಲಾಗಿತ್ತು. 1930ರಿಂದ 2006ರವರೆಗಿನ 18 ವಿಶ್ವಕಪ್ಗಳ 708 ಪಂದ್ಯಗಳಲ್ಲಿ 28 ಸ್ವ-ಗೋಲು ದಾಖಲಾಗಿವೆ.
1954, 1998 ಮತ್ತು 2006ರ ವಿಶ್ವಕಪ್ಗಳಲ್ಲಿ ತಲಾ 4 ಸ್ವ-ಗೋಲು ದಾಖಲಾಗಿದ್ದವು. ಇದು ಒಂದೇ ವಿಶ್ವಕಪ್ನಲ್ಲಿ ದಾಖಲಾದ ಗರಿಷ್ಠ ದಾಖಲೆ. 2002ರ ವಿಶ್ವಕಪ್ನ ಅಮೆರಿಕ - ಪೋರ್ಚುಗಲ್ ಪಂದ್ಯದಲ್ಲಿ 2 ಸ್ವ-ಗೋಲು ದಾಖಲಾಗಿದ್ದು ಸಹ ಒಂದೇ ಪಂದ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಇಂಥ ಗೋಲು ದಾಖಲಾದ ಮೊದಲ ನಿದರ್ಶನ. ಆಗ ಅಮೆರಿಕದ ಜೆಫ್ ಅಗೋಸ್ ಮತ್ತು ಪೋರ್ಚುಗಲ್ನ ಜಾರ್ಜ್ ಕೋಸ್ಟ ಇಂಥ ಪ್ರಮಾದವೆಸಗಿದ್ದರು.
ಒಬ್ಬನೇ ಆಟಗಾರ ಎರಡು ತಂಡದ ಪರ ಗೋಲು ಗಳಿಸಿದ ನಿದರ್ಶನವೂ ವಿಶ್ವಕಪ್ನಲ್ಲಿದೆ. 1978ರ ವಿಶ್ವಕಪ್ನಲ್ಲಿ ಹಾಲೆಂಡ್ನ ಅರ್ನಿ ಬ್ರಾಂಡ್ಸ್ 18ನೇ ನಿಮಿಷದಲ್ಲಿ ಸ್ವ-ಗೋಲು ಹೊಡೆದು ಇಟಲಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, 50ನೇ ನಿಮಿಷದಲ್ಲಿ ಹಾಲೆಂಡ್ ಪರ ಗೋಲು ಹೊಡೆಯುವ ಮೂಲಕ ತಮ್ಮ ತಪ್ಪು ಸರಿಪಡಿಸಿಕೊಂಡಿದ್ದರು.
ಎಸ್ಕೋಬಾರ್ ಕರುಣ ಕಥೆ: ಸ್ವ-ಗೋಲುಗಳ ಪ್ರಸ್ತಾಪವಾದಾಗಲೆಲ್ಲಾ ನೆನಪಾಗುವುದು ಕೊಲಂಬಿಯಾದ ಆಂಡ್ರೆಸ್ ಎಸ್ಕೋಬಾರ್ ಅವರ ಕರುಣ ಕಥೆ.
ಅದು 1994ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವಕಪ್ನಲ್ಲಿ ಎ ಗುಂಪಿನ ಎರಡನೇ ಪಂದ್ಯ. ಬದ್ಧ ಎದುರಾಳಿಗಳಾದ ಅಮೆರಿಕ- ಕೊಲಂಬಿಯಾ ಪಾಲಿಗೆ ಆ ಪಂದ್ಯ ನಿರ್ಣಾಯಕವಾಗಿತ್ತು. ಅಮೆರಿಕದ ಮಿಡ್ಫೀಲ್ಡರ್ ಜಾನ್ ಹಾರ್ಕ್ಸ್ ಅವರ ಕ್ರಾಸ್ ಅನ್ನು ತಡೆಯುವ ಯತ್ನದಲ್ಲಿ ಎಸ್ಕೋಬಾರ್ ಅವರ ಕಾಲಿಗೆ ಬಡಿದ ಚೆಂಡು ಗೋಲು ಪೆಟ್ಟಿಗೆಯೊಳಕ್ಕೆ ನುಗ್ಗಿತು. ಅಮೆರಿಕ ಆ ಪಂದ್ಯವನ್ನು 2-1ರಿಂದ ಗೆದ್ದುಕೊಂಡಿತು. ಕೊಲಂಬಿಯಾ ವಿಶ್ವಕಪ್ನಿಂದಲೇ ನಿರ್ಗಮಿಸುವಂತಾಯಿತು. ತಂಡದ ನಿರ್ಗಮನಕ್ಕೆ ಎಸ್ಕೋಬಾರ್ರನ್ನು ಬಲಿಪಶುವಾಗಿಸಲಾಯಿತು.
ಇದು ನಡೆದಿದ್ದು ಜೂನ್ 22ರಂದು. ಇದಾಗಿ ಹತ್ತು ದಿನ ಬಳಿಕ ಅಂದರೆ, 1994, ಜುಲೈ 2ರಂದು ಕೊಲಂಬಿಯಾದ ಮೆಡೆಲಿನ್ ನಗರದ ಹೊರವಲಯದ ಬಾರ್ ಒಂದರ ಎದುರು ಎಸ್ಕೋಬಾರ್ ಕೊಲೆಯಾದರು. ಎಸ್ಕೋಬಾರ್ ಎದೆಗೆ 12 ಗುಂಡಿಟ್ಟು ಕೊಂದ ಹಂತಕ, ಪ್ರತೀ ಬಾರಿ ಗುಂಡು ಹಾರಿಸಿದಾಗಲೂ ಗೋಲ್ ಎಂದು ಕೇಕೆ ಹಾಕಿದ್ದಾಗಿ ವರದಿಯಾಗಿತ್ತು.
ಎಸ್ಕೋಬಾರ್ ಕೊಲೆಗೆ ಬೆಟ್ಟಿಂಗ್ ಮಾಫಿಯಾ ಕಾರಣ ಎಂದೂ ಹೇಳಲಾಗಿತ್ತು. ಆ ವಿಶ್ವಕಪ್ನಲ್ಲಿ ಕೊಲಂಬಿಯಾ 2ನೇ ಸುತ್ತು ತಲುಪಲಿದೆ ಎಂದು ಕೋಟ್ಯಂತರ ರೂ.ಬಾಜಿ ಕಟ್ಟಲಾಗಿತ್ತು. ಆದರೆ, ಅಮೆರಿಕ ವಿರುದ್ಧ ಸೋತು ನಿರ್ಗಮಿಸಿದ್ದರಿಂದ ಅಷ್ಟೂ ಹಣ ಮುಳುಗಿಹೋಗಿತ್ತು.
ಇದಾಗಿ ಒಂದು ವರ್ಷ ಬಳಿಕ ಹಂಬರ್ಟೊ ಕ್ಯಾಸ್ಟ್ರೊ ಮುನೋಜ್ ಎಂಬ ಆ ಹಂತಕನಿಗೆ ನ್ಯಾಯಾಲಯ 43 ವರ್ಷ ಜೈಲು ಶಿಕ್ಷೆ ವಿಧಿಸಿತು. 2001ರಲ್ಲಿ ಈ ಶಿಕ್ಷೆಯನ್ನು 26 ವರ್ಷಗಳಿಗೆ ಕಡಿತಗೊಳಿಸಲಾಯಿತು. 2005ರಲ್ಲಿ ಸದ್ವರ್ತನೆಯ ಆಧಾರದ ಮೇಲೆ 11 ವರ್ಷ ಶಿಕ್ಷೆಯ ಬಳಿಕ ಆತನನ್ನು ಬಿಡುಗಡೆಗೊಳಿಸಲಾಯಿತು.
ಹೀಗೂ ಉಂಟು: ಸ್ವ-ಗೋಲು ಹೊಡೆಯುವುದು ಸೋಲಿಗೆ ಆಹ್ವಾನವೆಂದು ಗೊತ್ತಿದ್ದರೂ, ಉದ್ದೇಶಪೂರ್ವಕವಾಗಿ ಇಂಥ ಪ್ರಮಾದ ಎಸಗಿದ ನಿದರ್ಶನಗಳೂ ಇತಿಹಾಸದಲ್ಲಿವೆ. 1998ರ ಟೈಗರ್ ಕಪ್ನಲ್ಲಿ ಥಾಯ್ಲೆಂಡ್ ಮತ್ತು ಇಂಡೋನೇಶಿಯಾ ತಂಡಗಳು ಕೊನೆಯ ಲೀಗ್ನಲ್ಲಿ ಮುಖಾಮುಖಿಯಾಗುವ ಮುನ್ನವೇ ಉಪಾಂತ್ಯ ಪ್ರವೇಶ ಖಚಿತ ಪಡಿಸಿಕೊಂಡಿದ್ದವು. ಈ ಪಂದ್ಯದಲ್ಲಿ ಗೆಲ್ಲುವ ತಂಡ ಉಪಾಂತ್ಯದಲ್ಲಿ ಆತಿಥೇಯ ವಿಯೆಟ್ನಾಂ ವಿರುದ್ಧ ಸೆಣಸುತ್ತದೆ, ಸೋಲುವ ತಂಡ ದುರ್ಬಲ ಸಿಂಗಾಪುರ ವಿರುದ್ಧ ಆಡಬೇಕಾಗುತ್ತದೆ ಎಂಬ ಸಂಗತಿ ಎರಡೂ ತಂಡಗಳಿಗೆ ತಿಳಿದಿತ್ತು. ಪಂದ್ಯದ ಮೊದಲ ಅವಧಿಯಲ್ಲಿ ಉಭಯ ತಂಡಗಳು ಗೋಲುಯತ್ನ ನಡೆಸಲಿಲ್ಲ. 90 ನಿಮಿಷಗಳ ಆಟ ಮುಗಿದಾಗ 2-2 ಗೋಲುಗಳು ದಾಖಲಾಗಿದ್ದವು. ನಷ್ಟಕಾಲದ ಆಟದಲ್ಲಿ ಇಬ್ಬರು ಥಾಯ್ ಡಿಫೆಂಡರ್ಗಳು ತಡೆಯಲು ಯತ್ನಿಸುತ್ತಿದ್ದರೂ, ಇಂಡೋನೇಶಿಯಾದ ಡಿಫೆಂಡರ್ ಮುರ್ಸೈಯದ್ ಎಫೆಂದಿ ಉದ್ಧೇಶಪೂರ್ವಕವಾಗಿ ಸ್ವ-ಗೋಲು ಹೊಡೆದು ಥಾಯ್ಲೆಂಡ್ ತಂಡವನ್ನು 3-2ರಿಂದ ಗೆಲ್ಲಿಸಿದರು. ಕ್ರೀಡೆಯ ಸೂರ್ತಿಗೆ ಧಕ್ಕೆ ತಂದಿದ್ದಕ್ಕಾಗಿ ಫಿಫಾ ಉಭಯ ತಂಡಗಳಿಗೆ ತಲಾ 40,000 ಡಾಲರ್ ದಂಡ ವಿಸಿತು. ಮುರ್ಸೈಯದ್ರನ್ನು ಒಂದು ವರ್ಷ ಕಾಲ ದೇಶಿ ಫುಟ್ಬಾಲ್ನಿಂದ, ಜೀವನಪರ್ಯಂತ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿಷೇಧಿಸಲಾಯಿತು.
ಎರಡೂ ಬದಿ ಗೋಲು ಕಾಯಬೇಕಾಯಿತು: 1994ರ ಕೆರಿಬಿಯನ್ ಕಪ್ನ ಪ್ರಾಥಮಿಕ ಸುತ್ತಿನಲ್ಲಿ ಬಾರ್ಬಡಾಸ್ ತಂಡ ಗ್ರೆನಡ ವಿರುದ್ಧ ಉದ್ದೇಶಪೂರ್ವಕವಾಗಿ ಸ್ವ-ಗೋಲು ಹೊಡೆಯಿತು. ಆ ಟೂರ್ನಿಯ ವಿಲಕ್ಷಣ ನಿಯಮದ ಪ್ರಕಾರ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಬಂಗಾರದ ಗೋಲು ಹೊಡೆದು ಗೆಲ್ಲುವ ತಂಡಕ್ಕೆ 2 ಗೋಲುಗಳ ಗೆಲುವು ನೀಡಲಾಗುತ್ತಿತ್ತು. ಇತ್ತ ಬಾರ್ಬಡಾಸ್ ಟೂರ್ನಿಯ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆಯಬೇಕಾದರೆ, ಆ ಪಂದ್ಯವನ್ನು ಎರಡು ಗೋಲುಗಳ ಅಂತರದಿಂದ ಗೆಲ್ಲುವ ಅವಶ್ಯಕತೆ ಇತ್ತು.
ಆ ಪಂದ್ಯದಲ್ಲಿ 87 ನಿಮಿಷಗಳ ಆಟ ಮುಗಿದಾಗ ಬಾರ್ಬಡಾಸ್ 2-1 ಗೋಲುಗಳಿಂದ ಮುನ್ನಡೆಯಲ್ಲಿತ್ತು. ಬಾಕಿ ಅವಧಿಯಲ್ಲಿ 2 ಗೋಲು ದಾಖಲಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದ ಬಾರ್ಬಡಾಸ್ ಸ್ವ-ಗೋಲು ಹೊಡೆಯುವ ಮೂಲಕ ಅಂತರವನ್ನು 2-2ರಿಂದ ಸಮಗೊಳಿಸಿತು. ತನ್ಮೂಲಕ ಆಟವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸಿದರೆ, ಬಂಗಾರದ ಗೋಲು ಗಳಿಸಿ ಎರಡು ಗೋಲುಗಳ ಗೆಲುವಿನ ಅಂತರ ಪಡೆಯಬಹುದು ಎನ್ನುವುದು ತಂಡದ ಲೆಕ್ಕಾಚಾರವಾಯಿತು. ಈ ಮೋಸವನ್ನು ಅರಿತ ಗ್ರೆನಡ ಸಹ ಸ್ವ-ಗೋಲು ಗಳಿಸಲು ಯತ್ನಿಸಿತು. ಹೀಗಾಗಿ ಪಂದ್ಯದ ಕೊನೆಯ ಮೂರು ನಿಮಿಷಗಳ ಕಾಲ ಬಾರ್ಬಡಾಸ್ ಮೈದಾನದ ಎರಡೂ ಬದಿಯಲ್ಲಿ ಗೋಲಾಗದಂತೆ ರಕ್ಷಣೆ ಮಾಡಿದ ಅಭೂತಪೂರ್ವ ಘಟನೆ ನಡೆಯಿತು. ಕೊನೆಗೂ ಹೆಚ್ಚುವರಿ ಅವಯಲ್ಲಿ ಬಂಗಾರದ ಗೋಲು ಹೊಡೆದ ಬಾರ್ಬಡಾಸ್ ಗುರಿ ಸಾಸಿತು.
6 ಗೋಲು, 3 ಸ್ವ-ಗೋಲು: 2009ರ ಡಿಸೆಂಬರ್ನಲ್ಲಿ ನಡೆದ ಜರ್ಮನಿಯ ಬುಂಡೆಸ್ಲಿಗ ಪಂದ್ಯದಲ್ಲಿ ಹ್ಯಾನೊವರ್ 96 ತಂಡ ಬೋರುಸ್ಸಿಯ ಮಾಂಚೆಂಗ್ಲಾಡ್ಬ್ಯಾಕ್ ವಿರುದ್ಧ 6 ಗೋಲು ಹೊಡೆಯಿತು. ಆದರೆ ಅದರಲ್ಲಿ 3 ಸ್ವ-ಗೋಲಾಗಿತ್ತು. ಹೀಗಾಗಿ 3-5 ಅಂತರದಿಂದ ಪಂದ್ಯ ಸೋತಿತು!
1998ರ ವಿಶ್ವಕಪ್ನಲ್ಲಿ ಸ್ಪೇನ್ ತಂಡ ಗೋಲಿ ಅಂದೋನಿ ಝುಬಿಝರೆಟ್ಟ ಅವರ ಸ್ವ-ಗೋಲಿನಿಂದಾಗಿ ನೈಜೀರಿಯಾ ವಿರುದ್ಧ ಸೋತಿತ್ತು. ಪರಿಣಾಮ, ಸ್ಪೇನ್ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ನಿರ್ಗಮಿಸಿತು. ಅಂದೋನಿ ಅಕಾಲ ನಿವೃತ್ತಿ ಪಡೆದರು.
ಕೊನೆಯದಾಗಿ: 2002ರಲ್ಲಿ ಮಡ್ಗಾಸ್ಕರ್ ಗಣರಾಜ್ಯದ ಲೀಗ್ನಲ್ಲಿ ಎಎಸ್ ಅಡೆಮಾ 149-0 ಅಂತರದಿಂದ ಎಸ್ಓಇ ಅಂಟನನರಿವೋ ತಂಡವನ್ನು ಸೋಲಿಸಿತ್ತು. ಎಸ್ಓಇ ಹಿಂದಿನ ಪಂದ್ಯದಲ್ಲಿ ರೆಫ್ರಿ ನಿರ್ಧಾರ ಪ್ರತಿಭಟಿಸಿ ಎಲ್ಲಾ 149 ಗೋಲುಗಳನ್ನು ಸ್ವ-ಗೋಲಿನ ರೂಪದಲ್ಲಿ ಹೊಡೆದುಕೊಟ್ಟಿತ್ತು.
No comments:
Post a Comment