ಒಮ್ಮೆ ಎಡವಿದವರು ಕೂಡಲೇ ಜಾಗೃತರಾಗುತ್ತಾರೆ.
ಆದರೆ, ಸಾನಿಯಾ ಮಿರ್ಜಾ ಎರಡನೇ ಬಾರಿ ಎಡವಿದರೇ ಎಂಬ ಭಾವನೆ ಮೂಡುತ್ತಿದೆ.
ಸಾನಿಯಾ ಯಾರನ್ನು ಮದುವೆ ಆಗಬೇಕು, ಯಾರನ್ನು ಆಗಬಾರದು ಎಂದು ನಿರ್ಧರಿಸುವವರು, ನಿರ್ಧರಿಸಬೇಕಾದವರು ನಾವಲ್ಲ. ಅದು ಅವರ ವೈಯಕ್ತಿಕ ಆಯ್ಕೆ. ಆದರೆ, ಪ್ರತೀ ಬಾರಿ ಮದುವೆ ಊಟವೊಂದನ್ನು ಮುಗಿಸಿ ಬಂದ ಬಳಿಕ ಜೋಡಿ ಹೇಗಿದೆ? ಚೆನ್ನಾಗಿದೆಯೇ, ಇಲ್ಲವೇ ಎಂದು ವಿಶ್ಲೇಷಿಸುವಂತೆ ನಾವು ಸಾನಿಯಾ ಆಯ್ಕೆಯನ್ನೂ ವಿಶ್ಲೇಷಿಸಬಹುದು.
ಸಾನಿಯಾಗೆ ನಿಜಕ್ಕೂ ಅಂಥ ಅವಸರವೇನಿತ್ತು ಎನ್ನುವುದು ಕಾಡುವ ಪ್ರಶ್ನೆ.
25 ಮದುವೆಯ ವಯಸ್ಸೇ. ಆದರೆ, ಕ್ರೀಡಾಪಟುಗಳಿಗೆ ಇದು ಅನ್ವಯವಾಗುವುದಿಲ್ಲ.
ಸಾನಿಯಾ ಈಗಲೇ ಮದುವೆಯತ್ತ ಮುಖ ಮಾಡಿದ್ದಾರೆಂದರೆ, ಕ್ರೀಡಾ ವೃತ್ತಿಜೀವನದ ಕಡೆ ಅವರ ಗಮನ, ಆಸಕ್ತಿ ಕಡಿಮೆಯಾಗಿದೆ ಎಂದರ್ಥವೇ?
ನೇರವಾಗಿ ಒಪ್ಪಿಕೊಳ್ಳದಿದ್ದರೂ, ಅವರು ಟೆನಿಸ್‌ನಿಂದ ಸ್ವಲ್ಪ ಸ್ವಲ್ಪವೇ ದೂರವಾಗುತ್ತಿರುವರೇ?
ನಿರಂತರ ಗಾಯಗಳು, ಅದರ ನೋವುಗಳು, ಶಸ್ತ್ರಚಿಕಿತ್ಸೆಗಳು, ಅದರಿಂದನುಭವಿಸುವ ವೇದನೆ, ಕಟ್ಟಳೆಗಳು, ಪಥ್ಯ ಇವೆಲ್ಲವೂ ಸಾನಿಯಾಗೆ ಹತಾಶೆ ತಂದಿವೆಯೇ. ಇನ್ನು ಸಾಕು ಎಂಬ ಭಾವ ಹುಟ್ಟುಹಾಕಿವೆಯೇ?
ಅಥವಾ ಶೋಯಿಬ್ ಮಲಿಕ್‌ರಲ್ಲಿ ಅಂಥ ಆಕರ್ಷಣೆ ಇದೆಯೇ?
ಶೋಯಿಬ್ ಮಲಿಕ್‌ರ ಅಂದವನ್ನು ಸಾನಿಯಾ ಮೆಚ್ಚಿದರು ಎನ್ನುವಂತಿಲ್ಲ. ಏಕೆಂದರೆ, ಅವರಿಗಿಂತ ಸ್ಫೂರದ್ರೂಪಿಗಳಾದ ಗೆಳೆಯರು (ಶಾಹೀದ್ ಕಪೂರ್) ಅವರಿಗಿದ್ದಾರೆ. ಶೋಯಿಬ್‌ರ ಆಟವನ್ನು ಮೆಚ್ಚಿದರೇ? ಹಾಗೆ ನೋಡಿದರೆ ಶೋಯಿಬ್ ಉತ್ತಮ ಆಟಗಾರನೇ ಹೊರತು ಅಸಾಧಾರಣ ಕ್ರಿಕಿಟಿಗನೇನೂ ಅಲ್ಲ. ಅವರು ಗಳಿಸಿರುವುದು ಬೆರಳೆಣಿಕೆಯ ಶತಕಗಳು, ನೂರು ಚಿಲ್ಲರೆ ವಿಕೆಟ್‌ಗಳು ಅಷ್ಟೇ. ಅವರ ಬ್ಯಾಟಿಂಗ್‌ನಲ್ಲಿ ಸಚಿನ್, ಸೆಹ್ವಾಗ್‌ರ ಮೋಹಕತೆ, ಆರ್ಭಟವಾಗಲೀ ಇಲ್ಲ. ಅವರ ಬೌಲಿಂಗ್‌ನಲ್ಲೂ ಶೋಯಿಬ್ ಅಖ್ತರ್ ವೇಗವಾಗಲೀ, ಶೇನ್ ವಾರ್ನ್ ಮೋಡಿಯಾಗಲೀ ಇಲ್ಲ.
ಪಾಕಿಸ್ತಾನದಲ್ಲೇ ಅವರು ನಂ.1 ಕ್ರಿಕೆಟಿಗ ಅಲ್ಲ. ಅದೃಷ್ಟದ ಬಲದಿಂದ ಮಾಜಿ ನಾಯಕ ಎಂದು ಹೇಳಿಕೊಳ್ಳಬಹುದಷ್ಟೇ.
ನಡತೆ, ಬದ್ಧತೆ? ನಾಯಕತ್ವ ಕಳೆದುಕೊಂಡ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಅವರ ಬದ್ಧತೆ ಪ್ರಶ್ನಾರ್ಹವಾಗಿದೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸ ಸಂದರ್ಭದಲ್ಲಿ ತೋರಿದ ಅಶಿಸ್ತಿನ ವರ್ತನೆಗಾಗಿ ಸದ್ಯ ಅವರು ಹಲವು ಸಾವಿರ ಡಾಲರ್‌ಗಳ ದಂಡ ಹಾಗೂ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭಾಗಿಯಾದ ಗುಮಾನಿಯೂ ಅವರ ಮೇಲಿದೆ.
ಶೋಯಿಬ್ ಮಲಿಕ್ ಮೋಸ್ಟ್ ಎಲಿಜಬಲ್ ಬ್ಯಾಚೆಲರ್ ಎಂದೂ ಹೇಳುವಂತಿಲ್ಲ. ಈಗಾಗಲೇ ಹೈದರಾಬಾದಿನ ಹುಡುಗಿಯೊಬ್ಬಳನ್ನು ವಿವಾಹವಾಗಿ ಕೈಕೊಟ್ಟ ಅಪವಾದ ಅವರ ಮೇಲಿದೆ.
ಹಾಗಾದರೆ, ಏನನ್ನು ನೋಡಿ ಮೆಚ್ಚಿದರು ಸಾನಿಯಾ?
ಪ್ರೀತಿ ಕುರುಡು. ಋಣಾನುಬಂಧ ಎನ್ನುವುದು ವಿಚಿತ್ರ. ಯಾರು-ಯಾರಿಗೋ ಅದು ಗಂಟು ಬೆಸೆಯುತ್ತದೆ. ವಿಶ್ವದಲ್ಲಿ ಅನುರೂಪ- ಅಪರೂಪದ ಜೋಡಿಗಳ ಸಂಖ್ಯೆ ಬಹಳ ಕಡಿಮೆ.
ಸಾನಿಯಾ ಈ ಹಿಂದೆ ಬಾಲ್ಯದ ಗೆಳೆಯ ಸೊಹ್ರಾಬ್ ಮಿರ್ಜಾ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ ಆರು ತಿಂಗಳ ಬಳಿಕ ಹೊಂದಾಣಿಕೆ ಇಲ್ಲ ಎಂಬ ಕಾರಣಕ್ಕೆ ಸಂಬಂಧ ಕಡಿದುಕೊಂಡರು. ಆದರೆ, ಶೋಯಿಬ್ ಮಲಿಕ್ ಪ್ರೇಮ ನಿವೇದನೆ ಮಾಡಿಕೊಂಡ ಒಂದೆರಡು ತಿಂಗಳಲ್ಲೇ ಮದುವೆಯೂ ನಡೆದೇ ಹೋಗಲಿದೆ. ಬಹುಶಃ ಇದು ಸ್ವರ್ಗದಲ್ಲಿ ಬೆಸೆದ ನಂಟು ಹಾಗಾಗಿ ಹೊಂದಾಣಿಕೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಾನಿಯಾ ಭಾವಿಸಿದ್ದಿರಬೇಕು.
ಮದುವೆಯಾದ ಮೇಲೂ ಸಾನಿಯಾ ಭಾರತವನ್ನೇ ಪ್ರತಿನಿಧಿಸುವ ಬಗ್ಗೆ ಹೇಳಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿ- ಸಂಪ್ರದಾಯಗಳ ಪ್ರಕಾರ ಕೊಟ್ಟ ಹೆಣ್ಣು ಕುಲದ ಹೊರಗೆ. ಅಂದರೆ, ಮದುವೆಯ ಬಳಿಕ ಗಂಡನ ಮನೆಯೇ ಸರ್ವಸ್ವ. ಆದರೆ, ಇದು ಕಾನೂನೇನೂ ಅಲ್ಲ. ಕ್ರೀಡೆಯಲ್ಲಿ ಗಂಡ - ಹೆಂಡತಿ ಬೇರೆ ಬೇರೆ ದೇಶವನ್ನು ಪ್ರತಿನಿಧಿಸಿದ ಸಾಕಷ್ಟು ಉದಾಹರಣೆಗಳಿವೆ. ಸಾನಿಯಾ ಸಹ ಪಾಕಿಸ್ತಾನದ ಕ್ರಿಕೆಟಿಗನ ಪತ್ನಿಯಾಗಿ ಭಾರತವನ್ನು ಪ್ರತಿನಿಧಿಸುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಲು ಹೊರಟಿದ್ದಿರಬಹುದು.
ಒಟ್ಟಾರೆ ಸಾನಿಯಾ ಗುರಿ 2012ರ ಒಲಿಂಪಿಕ್ಸ್‌ನಲ್ಲಿ ಮಿಶ್ರ ಡಬಲ್ಸ್ ಆಡುವುದು. ಬಹುಶಃ ಭಾರತವನ್ನು ಪ್ರತಿನಿಧಿಸಿದರೆ, ಮಹೇಶ್ ಭೂಪತಿ ಅಥವಾ ಲಿಯಾಂಡರ್ ಪೇಸ್ ಅಥವಾ ರೋಹನ್ ಬೋಪಣ್ಣ ಅಥವಾ ಸೋಮದೇವ್ ದೇವ್‌ವರ್ಮನ್ (ಆಯಾ ಆಟಗಾರರ ಲಭ್ಯತೆ, ವಿಶ್ವ ಶ್ರೇಯಾಂಕ ಆಧರಿಸಿ) ಜೊತೆಯಲ್ಲಿ ಪದಕಕ್ಕಾಗಿ ಪ್ರಯತ್ನಿಸಲು ಉತ್ತಮ ಅವಕಾಶಗಳಿರುತ್ತವೆ. ಒಂದು ವೇಳೆ ಆಕೆ ಪಾಕಿಸ್ತಾನವನ್ನು ಪ್ರತಿನಿಧಿಸುವುದಾದರೆ, ಅವರಿಗೆ ಸೂಕ್ತ ಜೊತೆಗಾರರ ಕೊರತೆ ಎದುರಾಗಲಿದೆ. ಸದ್ಯ ಪಾಕಿಸ್ತಾನದಲ್ಲಿರುವ ಏಕೈಕ ಸಮರ್ಥ (ಅಂತಾರಾಷ್ಟ್ರೀಯ ಮಟ್ಟದಲ್ಲಿ) ಆಟಗಾರ ಐಸಾಮ್ ಉಲ್ ಹಕ್ ಖುರೇಷಿ. ಕೆಲವು ಕಾಲದ ಹಿಂದೆ ಸಾನಿಯಾ ಹಾಗೂ ಖುರೇಷಿ ಸಖ್ಯದ ಬಗ್ಗೆಯೂ ಗುಸುಗುಸುಗಳಿದ್ದವು. ಆದರೆ, ಈಗ ಆಕೆ ಓರ್ವ ಕ್ರಿಕೆಟಿಗನನ್ನು ಮದುವೆಯಾಗುತ್ತಿರುವುದರಿಂದ ಖುರೇಷಿ ಜೊತೆ ಮಿಶ್ರ ಡಬಲ್ಸ್ ಟೆನಿಸ್ ಆಡುವುದು ಎಷ್ಟು ಸಾಧ್ಯ ಎಂದು ಆಕೆಯೇ ನಿರ್ಧರಿಸಬೇಕು.
ಸಾನಿಯಾ ಪಾಕಿಸ್ತಾನದ ಆಟಗಾರನನ್ನು ಮದುವೆಯಾಗುತ್ತಿದ್ದರೂ, ಭಾರತೀಯಳೆಂಬ ಐಡೆಂಟಿಟಿಯನ್ನು ಕಳೆದುಕೊಳ್ಳುವುದಕ್ಕೂ ಇಷ್ಟ ಪಡುವುದಿಲ್ಲ ಎನ್ನುವುದು ಸ್ಪಷ್ಟ. ಏಕೆಂದರೆ, ಅದರಿಂದ ಸಿಗುವ ಅನುಕೂಲಗಳು ಅಪಾರ. ಅಲ್ಲದೆ, ಬಹುಶಃ ಸಾನಿಯಾ ಪಾಕಿಸ್ತಾನದಲ್ಲಿ ಹುಟ್ಟಿದ್ದರೆ ಈ ಎತ್ತರಕ್ಕೇರುವುದು ಸಾಧ್ಯವಾಗುತ್ತಲೇ ಇರಲಿಲ್ಲ.
ಮದುವೆಯಾದ ಮೇಲೆ ಸಾನಿಯಾ ಭಾರತೀಯರಾಗೇ ಉಳಿಯುತ್ತಾರೋ, ಇಲ್ಲವೋ. ಆದರೆ, ಭಾರತದ ಋಣವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಸಾಕು.
ಏಕೋ, ಶೋಯಬ್ ಮಲಿಕ್ ಒಂದು ಸರಿಯಾದ ಆಯ್ಕೆ ಎಂದೆನಿಸಲೇ ಇಲ್ಲ! ಆತನ ಕ್ರಿಕೆಟ್ ಜೀವನ ಗಮನಿಸುತ್ತಾ ಬಂದಿರುವವರಿಗೆ ಹೀಗೆ ಅನಿಸಬಹುದು.
ReplyDeleteರಾಜೇಶ್ ನಾಯ್ಕ.
hello... hapi blogging... have a nice day! just visiting here....
ReplyDelete