ಸಾವು ನಮ್ಮ ಕೈಯಲ್ಲಿರುವುದಿಲ್ಲ. ಆದರೆ, ಬದುಕು ನಮ್ಮ ಕೈಯಲ್ಲಿರುತ್ತದೆ.
ಪ್ರಕೃತಿ ನಿಯಮವೇ ಹಾಗೆ.
ವಿನಾಶವಿಲ್ಲದೆ ಹೊಸ ಸೃಷ್ಟಿಯಿಲ್ಲ.
ಕತ್ತಲೆಯನ್ನು ಕಾಣದೆ, ಬೆಳಕಿನ ಮಹತ್ವ ಅರಿವಿಗೆ ಬರಲು ಸಾಧ್ಯವಿಲ್ಲ.
ಆಟದಲ್ಲಾಗಲೀ, ಬದುಕಿನಲ್ಲಾಗಲೀ ಸೋಲು ಗೆಲುವಿನ ಮೂಲ. ಸಾವು ಹಾಗೂ ಹುಟ್ಟು ಪ್ರಕೃತಿಯ ಚಕ್ರ.
ಭಾರತದ ಪಾಲಿಗೆ ಹಾಕಿ ವಿಶ್ವಕಪ್ ಮುಗಿದಿದೆ.
ಹಾಗೆ ನೋಡಿದರೆ, ಭಾರತೀಯರು ವಿಶ್ವಕಪ್ ಆತಿಥ್ಯದ ಸಂಭ್ರಮವನ್ನು ಪೂರ್ತಿಯಾಗಿ ಸವಿದಿದ್ದು ಕೇವಲ ಒಂದು ದಿನ ಮಾತ್ರ.
ಅದು ವಿಶ್ವಕಪ್ ಆರಂಭದ ದಿನ.
ಆದರೆ, ಇದೊಂದು ರೀತಿಯಲ್ಲಿ ದುರಂತವೂ ಹೌದು. ಕ್ರಿಕೆಟ್ ಇರಲಿ, ಹಾಕಿ ಇರಲಿ. ಭಾರತ, ಪಾಕಿಸ್ತಾನಗಳ ಪಾಲಿಗೆ ವಿಶ್ವಕಪ್ ಎಂದರೆ, ಪರಸ್ಪರರ ಮೇಲೆ ಗೆದ್ದರೆ ಸಾಕು ಎಂಬಂತಾಗಿದೆ.
ಪಾಕ್ ತಂಡ ಆ ರೀತಿ ಹೇಳಿಕೊಂಡೇ ದೆಹಲಿಗೆ ಆಗಮಿಸಿತ್ತು. ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಭಾರತದ ಮೇಲೆ ಗೆದ್ದರೆ, ಜನ ನಮ್ಮನ್ನು ಕ್ಷಮಿಸುತ್ತಾರೆ ಎಂದು ಪಾಕ್ ತಂಡದ ನಾಯಕ ಹೇಳಿದ್ದರು.
ಭಾರತದ ಅಭಿಮಾನಿಗಳು ನಿರೀಕ್ಷೆ ಪಡುವುದೂ ಅದನ್ನೇ. ಮೊದಲು ಪಾಕ್ ವಿರುದ್ಧ ಗೆಲ್ಲಲಿ, ಆಮೇಲೆ ಏನಾದರೂ ಆಗಲಿ.
ಈ ಕೂಪಮಂಡೂಕ ಪ್ರವೃತ್ತಿಯಿಂದ ಹೊರಬಂದು ನಮ್ಮ ತಂಡಗಳು ವಿಶ್ವತೋಮುಖಿ ಆಗುವುದು ಯಾವಾಗ?
ಭಾರತೀಯ ಹಾಕಿಯ ಸಮಸ್ಯೆಗಳು ಸದ್ಯ ಸಾವಿರಾರಿವೆ. ಆದರೂ, ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನಮ್ಮ ತಂಡ ಕನಿಷ್ಠ ಸೆಮಿಫೈನಲ್ ತಲುಪಿದ್ದರೆ, ಯೋಗ್ಯ ಸಾಧನೆ ಎನಿಸಿಕೊಳ್ಳುತ್ತಿತ್ತು.
ಆದರೆ, ತಂಡಕ್ಕೆ ನಿಜಕ್ಕೂ ಅಂಥ ಯೋಗ್ಯತೆ ಇತ್ತೇ?
ಭಾವನಾತ್ಮಕ ಹೋರಾಟ ಕಂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ರದರ್ಶನ ಕಂಡು ನಿಬ್ಬೆರಗಾದವರೆಲ್ಲಾ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಪಂದ್ಯದಲ್ಲಿ ವಾಸ್ತವ ಪ್ರಪಂಚಕ್ಕೆ ಮರಳಿದರು.
ಒಂದು ಕಾಲದ ಹಾಕಿ ಸಾರ್ವಭೌಮ ತಂಡ, 8 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ತಂಡ ಈಗ ದಕ್ಷಿಣ ಏಷ್ಯಾದಲ್ಲಷ್ಟೇ ಪ್ರಬಲ ಶಕ್ತಿ ಎನಿಸಿಕೊಂಡಿದೆ. ಏಕೆಂದರೆ, ಏಷ್ಯಾದಲ್ಲೇ ಕೊರಿಯಾ ತಂಡದ ವೇಗಕ್ಕೆ, ಶರವೇಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಚೀನಾದ ಚಾತುರ್ಯಕ್ಕೆ ಆಗಾಗ ಮುಗ್ಗರಿಸಿ ಬೀಳುತ್ತಿರುವ ಭಾರತ, ಯುರೋಪಿನ ತಂಡಗಳ ವಿರುದ್ಧ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಅಟ್ಟಿದವರಂತೆ ಆಡುತ್ತದೆ. ಯುರೋಪಿನ ತಂಡಗಳಿಗೆ ಸರಿಸಮಾನವಾಗಿ ಆಡುವ ಆಸ್ಟ್ರೇಲಿಯಾ ವಿರುದ್ಧವೂ ಅಷ್ಟೇ.
ಹಾಗೆ ನೋಡಿದರೆ, ವಿಶ್ವಕಪ್‌ಗೆ ಭಾರತದ ಪೂರ್ವಭಾವಿ ತಯಾರಿಯೇ ಸಮರ್ಪಕವಾಗಿರಲಿಲ್ಲ. ಇದಕ್ಕೆ ಆಟಗಾರರ ದೋಷ ಕಾರಣವಲ್ಲ. ದೇಶದಲ್ಲಿ ಹಾಕಿ ಆಡಳಿತ ಸಂಸ್ಥೆಯೇ ಇಲ್ಲದ ಅರಾಜಕ ಸನ್ನಿವೇಶದಲ್ಲಿ ಆಟಗಾರರನ್ನು ದೂರುವುದು ಸಾಧ್ಯವೂ ಇಲ್ಲ. ಸತತ 15ಕ್ಕೂ ಹೆಚ್ಚು ವರ್ಷ ಕಾಲ ಭಾರತೀಯ ಹಾಕಿಯನ್ನು ಆಳಿ ಅಧಃಪತನದ ಅಂಚಿಗೆ ತಂದು ನಿಲ್ಲಿಸಿದ ಕೆಪಿಎಸ್ ಗಿಲ್ ನೇತೃತ್ವದ ಭಾರತೀಯ ಹಾಕಿ ಒಕ್ಕೂಟ ಬರ್ಖಾಸ್ತುಗೊಂಡ ಬಳಿಕ, ಇವತ್ತಿಗೂ ಹೊಸ ಚುನಾಯಿತ ಸಂಸ್ಥೆ ಅಧಿಕಾರಕ್ಕೆ ಬರಲೇ ಇಲ್ಲ. ಕಳೆದೆರಡು ವರ್ಷಗಳಿಂದ ಹಾಕಿಯನ್ನು ಗುಡಿಸಿ ಗುಂಡಾಂತರವೆಸಗುತ್ತಿರುವುದು ಮಧ್ಯಂತರ ವ್ಯವಸ್ಥೆಗಳು. ಆಟದ ಚಿಂತನೆಯಿಲ್ಲದೆ, ಕೇವಲ ಅಧಿಕಾರದ ಲಾಲಸೆಗಾಗಿ ಕಚ್ಚಾಡುವ ವ್ಯಕ್ತಿಗಳ ದೊಂಬರಾಟದಲ್ಲಿ ಹಾಕಿ ಅನಾಥವಾಗಿದೆ. ಇಂಥ ಸನ್ನಿವೇಶದಲ್ಲಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದೇ ದೊಡ್ಡ ವಿಷಯ.
ಇನ್ನು ಆಟದ ವಿಷಯಕ್ಕೆ ಬಂದರೆ, ತಂಡವನ್ನು ಕಟ್ಟುವ ಜವಾಬ್ದಾರಿ ಹೊತ್ತವರಿಗೆ ಭವಿಷ್ಯದ ಕುರಿತು ಸ್ಪಷ್ಟ ಚಿಂತನೆ ಇಲ್ಲ. ತಂಡ ಭಾರತೀಯ ಶೈಲಿಯಲ್ಲೇ ಆಡಬೇಕೇ, ಅಥವಾ ಯುರೋಪಿಯನ್ ಮಾದರಿ ಆಟ ಅಳವಡಿಸಿಕೊಳ್ಳಬೇಕೇ ಎಂಬ ಗೊಂದಲದಿಂದ ಹೊರಬರಲು ದಶಕಗಳೇ ಕಳೆದರೂ ಸಾಧ್ಯವಾಗುತ್ತಿಲ್ಲ. ದೇಶಿ ಕೋಚ್ ಸಾಕೇ, ವಿದೇಶಿ ಕೋಚ್ ಅನಿವಾರ್ಯವೇ ಎಂಬ ಪ್ರಶ್ನೆಗೂ ಉತ್ತರ ಸಿಗುತ್ತಿಲ್ಲ. ವಿದೇಶಿ ಕೋಚ್ ವಿಫಲರಾದ ಸಂದರ್ಭದಲ್ಲಿ ದೇಶಿ ಕೋಚ್ ನೇಮಿಸುವುದು, ಮತ್ತೆ ಇದ್ದಕ್ಕಿದ್ದಂತೆ ವಿದೇಶಿ ಕೋಚ್ ತರುವುದು ಇಂಥವೇ ನಡೆಯುತ್ತಿವೆ. ಕೋಚ್ ಆಗಿ ಬಂದವರಿಗೂ ದೀರ್ಘಾವಧಿ ಚಿಂತನೆ, ಪ್ರಕ್ರಿಯೆ ರೂಪಿಸಲು, ತಂಡ ಕಟ್ಟಲು ಕಾಲಾವಕಾಶ ಕೊಡುವುದಿಲ್ಲ. ರಾತ್ರೋರಾತ್ರಿ ಯಶಸ್ವಿ ತಂಡ ಕಟ್ಟಬೇಕು ಎಂಬ ಒತ್ತಡ. ಕ್ರಿಕೆಟ್‌ನಂತೆ ತಂಡ ಕ್ರೀಡೆಯಾಗಿಯೂ, ವೈಯಕ್ತಿಕ ಸಾಹಸಗಳಿಗೆ ಅವಕಾಶವಿಲ್ಲದ, ನಾಯಕತ್ವವೆಂಬುದು ಕೇವಲ ಟಾಸ್‌ಗಷ್ಟೇ ಸೀಮಿತವಾದ ಹಾಕಿಯಂಥ ಕ್ರೀಡೆಗಳಲ್ಲಿ ತರಬೇತುದಾರನಾದವನಿಗೆ ಫುಟ್‌ಬಾಲ್ ಮಾದರಿಯಲ್ಲಿ ಸರ್ವಾಧಿಕಾರ ಸಿಗಬೇಕು. ತಂಡದ ಆಟಗಾರರ ಆಯ್ಕೆ, ನಾಯಕತ್ವ ನಿರ್ಧಾರ, ರಣತಂತ್ರಗಳು ಇವೆಲ್ಲದರಲ್ಲೂ ತರಬೇತುದಾರನ ಪಾತ್ರ ಪ್ರಮುಖವಾಗಿರಬೇಕು. ಇದರಲ್ಲಿ ರಾಜಕೀಯ ಅಥವಾ ಬೇರಾವುದೇ ಬಗೆಯ ಹಸ್ತಕ್ಷೇಪ ಇರಬಾರದು. ಆದರೆ, ಭಾರತೀಯ ವ್ಯವಸ್ಥೆಯಲ್ಲಿ ಇಂಥದ್ದನ್ನೆಲ್ಲಾ ನಿರೀಕ್ಷಿಸಲೇ ಸಾಧ್ಯವಿಲ್ಲ.
ಸದ್ಯ ಆಸ್ಟ್ರೇಲಿಯಾ ಹಾಕಿ ತಂಡದ ಕೋಚ್ ಆಗಿರುವ ರಿಕ್ ಚಾರ್ಲ್ಸ್‌ವರ್ಥ್ ಇದೇ ಕಾರಣಕ್ಕೆ ಭಾರತದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಸ್ಪೇನ್‌ನಿಂದ ತರಬೇತಿ ನೀಡಲು ಬಂದಿರುವ ಜೋಸ್ ಬ್ರಾಸಾರಿಗೂ ಅವರ ಅಪೇಕ್ಷೆಗಳನ್ನು ಪೂರೈಸಿಲ್ಲ. ಅವರ ಆಯ್ಕೆಯ ತಂಡ ಸಿಗಲಿಲ್ಲ. ವಿಶ್ವಕಪ್‌ನಲ್ಲಿ ಪ್ರಭ್ಜೋತ್ ಸಿಂಗ್ ನಾಯಕರಾಗಲಿ ಎಂಬ ಕೋಚ್ ಆಸೆಯೂ ನೆರವೇರಲಿಲ್ಲ. ವಿಶ್ವಕಪ್ ಟೂರ್ನಿಗೆ ಮುನ್ನ ಯುರೋಪಿನ ಪ್ರಬಲ ತಂಡಗಳ ವಿರುದ್ಧ ಸೌಹಾರ್ದ ಸರಣಿ ಆಡುವ ಹಂಬಲವೂ ಈಡೇರಲಿಲ್ಲ. ನಾಲ್ಕಾರು ತಿಂಗಳ ಕೆಳಗೆ ಅರ್ಜೆಂಟೀನಾ ಪ್ರವಾಸ, ಚಾಂಪಿಯನ್ಸ್ ಚಾಲೆಂಜ್ ಟೂರ್ನಿ, ಬೆಲ್ಜಿಯಂ ವಿರುದ್ಧದ ಪಂದ್ಯಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಅನುಭವಿಗಳಿಲ್ಲದ, ವಿಶ್ವಕಪ್, ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವ ಇಲ್ಲದ, ಸೂಕ್ತ ಪೂರ್ವ ತಯಾರಿಯೂ ಇಲ್ಲದ ಭಾರತ ತಂಡ ವಿಶ್ವಕಪ್‌ನಲ್ಲಿ ತಯಾರಿಗೆ ತಕ್ಕಂತೆ ಆಡಿತು. ತಂಡವೀಗ ಏನೇ ಸಾಧನೆ ಮಾಡಿದರೂ, ಅದು 6ಕ್ಕಿಂತ ಕೆಳಗೆ ಮಾತ್ರ. 5 ಅಥವಾ 6ನೇ ಸ್ಥಾನ ಪಡೆದರೂ, ಅದೊಂದು ಪವಾಡವೇ ಸರಿ. ಹಾಗೆ ನೋಡಿದರೆ, ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಮೊದಲ ನಾಲ್ಕು ಸ್ಥಾನಗಳಿಗಷ್ಟೇ ಮಹತ್ವ. ಉಳಿದವೆಲ್ಲಾ ಬರೀ ಸಂಖ್ಯೆಗಳಷ್ಟೇ.
ಪ್ರಾಯಶಃ ಭಾರತೀಯ ಹಾಕಿಯ ಈ ದುರಂತ ಹೊಸ ಉದಯದ ಆರಂಭ ಎಂದು ಆಶಿಸಬೇಕಷ್ಟೇ. ನಾವು ನಾಳೆಗಳನ್ನು ಕಂಡವರಲ್ಲ. ಹಾಗಾಗಿ, ಬರುವ ನಾಳೆ ಉತ್ತಮವಾಗಿರಲಿ ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ.
No comments:
Post a Comment