ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಪಾಕ್ ಆಟಗಾರರನ್ನು ಫ್ರಾಂಚೈಸಿಗಳು ತಿರಸ್ಕರಿಸಿರುವುದು ದೊಡ್ಡ ವಿವಾದವಾಗಿದೆ. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಮಧ್ಯಪ್ರವೇಶದಿಂದಲೂ ಐಪಿಎಲ್ ಧಣಿಗಳ ಮನ ಬದಲಾಯಿಸಲು ಸಾಧ್ಯವಾಗಿಲ್ಲ. ಮುಂಬೈ ಮೇಲೆ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಆಟಗಾರರಿಗೆ ಅವಕಾಶ ನೀಡಬಾರದು ಎನ್ನುವುದು ದೇಶಭಕ್ತಿಯ (?) ಅಭಿಪ್ರಾಯ. ಕ್ರಿಕೆಟ್ ಬೇರೆ ರಾಜಕೀಯ ಬೇರೆ, ಹಾಗಾಗಿ ಅವಕಾಶ ನೀಡಬೇಕಿತ್ತು ಎನ್ನುವುದು ಇನ್ನೊಂದು ಅಭಿಪ್ರಾಯ. ಪಾಕ್ ಆಟಗಾರರ ಪರ ಅನುಕಂಪದ ಮಾತನಾಡಿದ ಶಾರುಖ್ ಖಾನ್ ವಿರುದ್ಧ ಪಾಕಿಸ್ತಾನಕ್ಕೆ ತೊಲಗಿ ಎಂದು ಪ್ರತಿಭಟನೆ ನಡೆಸಿದ ಅತಿರೇಕದ ಅಭಿಪ್ರಾಯಗಳೂ ಇವೆ. ಹಾಲಿ ಪ್ರಕರಣದ ಬಗ್ಗೆ ನಾಲ್ಕು ದೃಷ್ಟಿಕೋನಗಳನ್ನು ಇಲ್ಲಿ ಮಂಡಿಸಲಾಗಿದೆ.
ವಾದ 1
ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಟೂರ್ನಿ ಮಾತ್ರವೇ ಅಲ್ಲ. ಅದೊಂದು ಲಾಭದಾಯಕ ಉದ್ಯಮ. ಅಲ್ಲಿ ನಡೆಯುವುದು ರನ್- ವಿಕೆಟ್‌ಗಳ ಲೆಕ್ಕಾಚಾರಕ್ಕಿಂತ ಮಿಗಿಲಾದ ಹಣದ ಲೆಕ್ಕಾಚಾರ, ಝಣಝಣತ್ಕಾರ.
ಹಾಗೆ ನೋಡಿದರೆ, ಭಾರತದಲ್ಲಿ ಐಪಿಎಲ್ ಹೆಸರಲ್ಲಿ ರೂಪಾಯಿಯ ಅಪಮೌಲ್ಯವಾದಷ್ಟು ಬೇರಾವ ಬಗೆಯಲ್ಲೂ ಆಗಿರಲಿಲ್ಲ. ಇಲ್ಲಿ ನಡೆಯುವುದೆಲ್ಲಾ ದಶಲಕ್ಷ, ಕೋಟಿಗಳ ಲೆಕ್ಕಾಚಾರವೇ. ಮಾತೃ ಸಂಸ್ಥೆ ಬಿಸಿಸಿಐಗೆ ನೂರಾರು, ಸಾವಿರಾರು ಕೋಟಿ ರೂಪದಲ್ಲಿ ಈ ಟೂರ್ನಿಯಿಂದ ಆದಾಯ ಬರುತ್ತದೆ. ಫ್ರಾಂಚೈಸಿಗಳು, ಪ್ರಾಯೋಜಕರು ಗಳಿಸುವುದು ಅಥವಾ ನಷ್ಟ ಅನುಭವಿಸು ವುದು ಕೋಟಿಗಳ ರೂಪದಲ್ಲೇ. ಕೆಲವು ಕಿರಿಯ, ದೇಶಿ ಆಟಗಾರರನ್ನು ಹೊರತು ಪಡಿಸಿದರೆ, ದೇಶದ ಹಾಗೂ ವಿದೇಶದ ಅಂತಾರಾಷ್ಟ್ರೀಯ ಆಟಗಾರರು ಸಂಭಾವನೆ ರೂಪದಲ್ಲಿ ಗಳಿಸುವುದು ಕೋಟಿಗಳಲ್ಲೇ.
ಹೀಗೆ ದುಡ್ಡೇ ದೊಡ್ಡಪ್ಪ ಆಗಿರುವ ಶ್ರೀಮಂತ ಟೂರ್ನಿಯಲ್ಲಿ ಬಂಡವಾಳ ಹೂಡಿರುವವರ ಮಾತಿಗೆ, ಇಚ್ಛೆಗೆ, ನಿರ್ಧಾರಕ್ಕೆ ಹೆಚ್ಚಿನ ಮಹತ್ವ, ಬೆಲೆ ಇರುವುದು (ಬರುವುದು) ಸಹಜವೇ. ಅದು ಅಪೇಕ್ಷಿತ ಕೂಡ. ಇಂಥ ಐಪಿಎಲ್‌ನಲ್ಲಿ ಕ್ರಿಕೆಟಿಗರಿಗೂ ರೇಸ್ ಕುದುರೆಗಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ.
ನೂರಾರು ಕೋಟಿ ಬಂಡವಾಳ ಹೂಡಿ ಫ್ರಾಂಚೈಸಿ ತಂಡಗಳ ಮಾಲಿಕತ್ವ ಪಡೆದುಕೊಂಡಿರುವ ಬಾಲಿವುಡ್ ನಟ/ನಟಿಯರು, ವಾಣಿಜ್ಯೋದ್ಯಮಿಗಳು ಕ್ರಿಕೆಟಿಗರ ಆಯ್ಕೆಯಲ್ಲೂ ಸ್ವಾತಂತ್ರ್ಯ ಬಯಸುವುದು ಸಹಜವೇ. ಅಂಥ ಸಂದರ್ಭದಲ್ಲಿ ಆಟಗಾರರ ಪೂರ್ವ ಖ್ಯಾತಿಯಾಗಲೀ, ರಾಷ್ಟ್ರೀಯತೆ ಯಾಗಲೀ ಮುಖ್ಯವಾಗುವುದಿಲ್ಲ. ಯಾವುದೇ ಪ್ರಭಾವಗಳು ಕೆಲಸ ಮಾಡುವು ದಿಲ್ಲ. ಹೂಡುವ ಹಣಕ್ಕೆ ತಕ್ಕ ಆಟ ಆಡುವ ವಿಶ್ವಾಸ ಮೂಡಿದರೆ ಮಾತ್ರ ಅಂಥ ಆಟಗಾರನ ಬಗ್ಗೆ ಮಾಲಿಕರ ಒಲವು ಮೂಡುತ್ತದೆ. ಹಾಗಾಗಿ, ಐಪಿಎಲ್-3 ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರಿಗೆ ಅನ್ಯಾಯವಾಗಿದೆ ಎಂದು ಗುಲ್ಲು-ದೊಂಬಿ ಎಬ್ಬಿಸುವುದು ತಪ್ಪು.
ಫ್ರಾಂಚೈಸಿಗಳಿಗೆ ಮೊದಲನೆಯದಾಗಿ ಹಲವು ನಿರ್ಬಂಧಗಳಿವೆ. ಇಷ್ಟೇ ಹಣದಲ್ಲಿ ಆಟಗಾರರ ಖರೀದಿ ಮುಗಿಸಬೇಕು... ವಿದೇಶಿ ಆಟಗಾರರ ಸಂಖ್ಯೆ ಇಷ್ಟೇ ಇರಬೇಕು... ಇತ್ಯಾದಿ. ಆಟಗಾರರ ಲಭ್ಯತೆ ಮತ್ತೊಂದು ವಿಚಾರ. ಪಾಕಿಸ್ತಾನ, ಆಸ್ಟ್ರೇಲಿಯಾ ಮೂಲದ ಆಟಗಾರರಿಗೆ ಉಳಿದವರಿಗಿಂತ ವಿಶೇಷ ಭದ್ರತೆ ಕಲ್ಪಿಸಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ಹೆಚ್ಚಿನ ಜನ, ಧನ, ಸಮಯ ವ್ಯಯವಾಗುತ್ತದೆ. ವೀಸಾಗಳಂಥ ವಿಚಾರಗಳಲ್ಲೂ ತೊಡಕಿನ ಸಂಭವ ಇರುತ್ತದೆ. ಐಪಿಎಲ್ ಒಂದು ಖಾಸಗಿ ಟೂರ್ನಿಯಾಗಿರುವ ಕಾರಣ, ಭದ್ರತೆಯ ವಿಚಾರವನ್ನು ಅವರೇ ನಿಭಾಯಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಆಟಗಾರರ ಭದ್ರತೆ ತಂಡಗಳಿಗೆ ಹೆಚ್ಚಿನ ಹೊರೆ. ಈ ಎಲ್ಲಾ ದೃಷ್ಟಿಯಿಂದ ಫ್ರಾಂಚೈಸಿಗಳಿಗೆ ತಮಗೆ ಯಾವ ಆಟಗಾರ ಬೇಕು, ಯಾರು ಬೇಡ ಎಂದು ತೀರ್ಮಾನಿಸುವ ಹಕ್ಕು ಇದೆ. ಈ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ.
ವಾದ 2
ಐಪಿಎಲ್ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನದ ಸೊಹೈಲ್ ತನ್ವೀರ್ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದರು. ಉಮರ್ ಗುಲ್, ಕಮ್ರಾನ್ ಅಕ್ಮಲ್, ಮಿಸ್ಬಾ ಉಲ್ ಹಕ್ ಮೊದಲಾದವರು ಸಾಧಾರಣ ಯಶಸ್ಸು ಪಡೆದಿದ್ದರು. ಶಾಹಿದ್ ಅಫ್ರಿದಿ, ಶೋಯಿಬ್ ಅಖ್ತರ್ ಸೇರಿದಂತೆ ಹಲವರು ಟೂರ್ನಿಯಲ್ಲಿ ಆಡಿರಲಿಲ್ಲ. ಆದರೆ, ಮುಂಬೈ ಮೇಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ನಡೆದ 2ನೇ ಐಪಿಎಲ್‌ನಿಂದ ವಂಚಿತರಾದರು. ಆದರೂ, ಚಾಂಪಿಯನ್ಸ್ ಲೀಗ್‌ನಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡವೊಂದರ ಪರ ಪಾಕಿಸ್ತಾನದ ಯಾಸಿರ್ ಅರಾಫತ್ ಭಾಗವಹಿಸಿದ್ದರು.
ಆನಂತರದ ಅವಧಿಯಲ್ಲಿ ಪಾಕಿಸ್ತಾನ ಇಪ್ಪತ್ತು20 ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು. ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ದೇಶಿ ಋತುಗಳಲ್ಲಿ ಭಾಗವಹಿಸಿದ್ದ ಪಾಕ್‌ನ ಹಲವು ಆಟಗಾರರು ಅಮೋಘ ಫಾರ್ಮ್ ಪ್ರದರ್ಶಿಸಿದ್ದರು. ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದರು. ಅವರನ್ನು ಫ್ರಾಂಚೈಸಿಗಳು ಈ ರೀತಿ ಸಾರಾಸಗಟಾಗಿ ಕಡೆಗಣಿಸಬಾರದಿತ್ತು.
ಹಾಗೆ ನೋಡಿದರೆ, ಕ್ರಿಕೆಟ್‌ನಂಥ ವಿಚಾರಗಳಲ್ಲಿ ರಾಷ್ಟ್ರೀಯತೆಗಳು ಅಡ್ಡ ಬರಬಾರದು. ಪ್ರತಿಭೆ, ಯೋಗ್ಯತೆಯಷ್ಟೇ ಮುಖ್ಯವಾಗಬೇಕು. ಅಷ್ಟಕ್ಕೂ ಐಪಿಎಲ್‌ನಲ್ಲಿ ರಾಷ್ಟ್ರೀಯತೆಯೆಂಬ ಯಾವ ಮಣ್ಣಾಗಟ್ಟಿಯೂ ಇಲ್ಲ. ಅದೊಂದು ವಿಶ್ವ ದರ್ಜೆಯ ಕ್ಲಬ್ ಟೂರ್ನಿ. ಆಟಗಾರರಿಗೆ ವೀಸಾ ತೊಂದರೆ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಮೇಲಾದರೂ, ಆಟಗಾರರಿಗೆ ಅವಕಾಶ ಮಾಡಿಕೊಡಬೇಕಿತ್ತು. ಉಭಯ ರಾಷ್ಟ್ರಗಳ ಕ್ರಿಕೆಟ್ ಸಂಬಂಧ ಪುನರಾರಂಭಗೊಳ್ಳಲು ಐಪಿಎಲ್ ಸೇತುವೆಯಾಗುವ ಸಾಧ್ಯತೆಯೂ ಇತ್ತು.
ವಾದ 3
ಸರ್ಕಾರಗಳು ಮತ್ತು ಪೊಲೀಸರು ಯಾವಾಗಲೂ ಲೇಟ್. ಆಗಬಾರದ ಅನಾಹುತ ಆಗಿಹೋದ ಮೇಲೆ ಛೇ! ಎನ್ನುವುದು, ವಿಷಾದ ಸೂಚಿಸುವುದು ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ವೈಖರಿಯಾಗಿರುತ್ತದೆ.
ಐಪಿಎಲ್‌ಗೆ ಪಾಕ್ ಆಟಗಾರರನ್ನು ಕಡೆಗಣಿಸಬಾರದಿತ್ತು. ಅವರಿಗೆ ವೀಸಾ ಸಮಸ್ಯೆ ಇರಲಿಲ್ಲ. ತನ್ನ ಎಲ್ಲಾ ಆಟಗಾರರನ್ನು ಸಂಪೂರ್ಣವಾಗಿ ತಿರಸ್ಕರಿಸಿದಾಗ ಯಾವುದೇ ದೇಶಕ್ಕೆ ಅವಮಾನ, ನೋವಾಗುವುದು ಸಹಜ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಡ ವಾಗಿ ಹೇಳಿಕೆ ನೀಡಿದರು. ಅದಾದ ಒಂದು ದಿನದ ಬಳಿಕ ಕ್ರೀಡಾ ಸಚಿವ ಎಂಎಸ್ ಗಿಲ್ ಸಹ ಇಂಥ ಹೇಳಿಕೆಯನ್ನೇ ಪುನರುಚ್ಛರಿಸಿದರು.
ಆದರೆ, ಐಪಿಎಲ್ ಹರಾಜಿಗೆ ಮುನ್ನವೇ ಇವರೆಲ್ಲಾ ಎಲ್ಲಿ ಹೋಗಿದ್ದರು?
ಹರಾಜು ಪ್ರಕ್ರಿಯೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಪಾಕ್ ಆಟಗಾರರ ಲಭ್ಯತೆ, ಸರ್ಕಾರಿ ತೊಡಕುಗಳು, ವೀಸಾ ಸಮಸ್ಯೆ ಮತ್ತಿತರ ಸಂಗತಿಗಳು ನಿತ್ಯ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಅಂಗಿ ಬದಲಾಯಿಸುವ ರೀತಿಯಲ್ಲಿ ದಿನಕ್ಕೊಂದು ಬಣ್ಣ ಬಣ್ಣದ ಹೇಳಿಕೆ ನೀಡುತ್ತಿದ್ದರು. ನಿಗದಿತ ಅವಧಿಯಲ್ಲಿ ವೀಸಾ ಪಡೆದುಕೊಳ್ಳದ ಕಾರಣ ಹರಾಜಿನಲ್ಲಿ ಯಾವ ಪಾಕ್ ಆಟಗಾರರೂ ಭಾಗವಹಿಸುವುದಿಲ್ಲ ಎಂದು ಒಮ್ಮೆ ಹೇಳಿಕೆ ನೀಡಿದರೆ, ಮತ್ತೆರಡು ದಿನಗಳಲ್ಲಿ ಪಾಕ್ ಆಟಗಾರರೂ ಹರಾಜಿನಲ್ಲಿ ಭಾಗಿಯಾಗುತ್ತಾರೆ ಎನ್ನುತ್ತಿದ್ದರು. ನಿತ್ಯ ಇಷ್ಟೆಲ್ಲಾ ನಡೆಯುತ್ತಿದ್ದರೂ, ಆ ಸಂದರ್ಭದಲ್ಲಿ ಸರ್ಕಾರ ಮೌನವಾಗಿತ್ತು.
ಆ ಸಂದರ್ಭದಲ್ಲಿ ಚಿದಂಬರಂ ಸಾಹೇಬರು ಒಮ್ಮೆಯಾದರೂ, ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಬಹುದು. ಅವರಿಗೆ ವೀಸಾ, ಭದ್ರತೆ ಕುರಿತಂತೆ ಯಾವುದೇ ಸಮಸ್ಯೆ ಸರ್ಕಾರದ ಕಡೆಯಿಂದ ಎದುರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರೆ, ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಲೇ ಇರಲಿಲ್ಲ. ರಾಜತಾಂತ್ರಿಕವಾಗಿ ಉಭಯ ರಾಷ್ಟ್ರಗಳ ಸಂಬಂಧ ಹೇಗೆಯೇ ಇದ್ದರೂ, ಕ್ರಿಕೆಟ್ ಟೂರ್ನಿಯಲ್ಲಿ ಪಾಕ್ ಆಟಗಾರರಿಗೂ ಅವಕಾಶ ಕೊಡಿ ಎಂದು ಮೊದಲೇ ಹೇಳಬಹುದಿತ್ತು. ಆದರೆ, ನಮ್ಮವರು (ಸಚಿವರು) ಮೊದಲೇ ಸಲಹೆ ಕೊಡುವುದಕ್ಕಿಂತ ನಂತರ ಟೀಕಿಸುವುದರಲ್ಲಿ ಪ್ರವೀಣರು.
ವಾದ 4
ಕ್ರೀಡೆಗೆ ಅಪಾರವಾದ ಶಕ್ತಿ ಇದೆ. ಎಷ್ಟೋ ಬಾರಿ ಕ್ರೀಡೆಗಳು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತವೆ. ಹಿಂದೆಯೂ ಭಾರತ - ಪಾಕ್ ನಡುವಿನ ವೈಷಮ್ಯದ ಭಾವ ತಗ್ಗಿಸುವಲ್ಲಿ ಕ್ರಿಕೆಟ್ ಮಹತ್ವದ ಪಾತ್ರ ನಿರ್ವಹಿಸಿದೆ.
ಉಭಯ ರಾಷ್ಟ್ರಗಳ ಕ್ರಿಕೆಟ್ ಮುಖಾಮುಖಿ ಗಳು ಎಷ್ಟೇ ಜಿದ್ದಾಜಿದ್ದಿಯಿಂದ ಕೂಡಿದ್ದರೂ, ಪಾಕಿಸ್ತಾನದ ವಾಸಿಂ ಅಕ್ರಂ, ಇಮ್ರಾನ್ ಖಾನ್, ಶೋಯಿಬ್ ಅಖ್ತರ್, ಅಫ್ರಿದಿಯನ್ನು ಇಷ್ಟ ಪಡುವ ಅಭಿಮಾನಿಗಳು ಭಾರತದಲ್ಲಿದ್ದಾರೆ. ಅದೇ ರೀತಿ ಸಚಿನ್ ತೆಂಡುಲ್ಕರ್, ದ್ರಾವಿಡ್ ಮೊದಲಾದವರಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾರತ- ಪಾಕ್ ಆಟಗಾರರು ಒಂದೇ ಡ್ರೆಸ್ಸಿಂಗ್‌ರೂಂ ಹಂಚಿಕೊಳ್ಳಲು ಅವಕಾಶವಿರುವ ಕಾರಣ, ಆಟಗಾರರಲ್ಲೂ, ಅಭಿಮಾನಿಗಳಲ್ಲೂ ಸ್ನೇಹಭಾವ ಹೆಚ್ಚಾಗಲು ಅವಕಾಶವಿತ್ತು. ಮುಂಬೈ ಮೇಲಿನ ಉಗ್ರರ ದಾಳಿಯ ವಿಷಯದಲ್ಲಿ ಪಾಕ್ ಬಗ್ಗೆ ಭಾರತದ ನಿಷ್ಠುರ ನಿಲುವು ಬದಲಾಗಬೇಕಿಲ್ಲ.
ಆದರೆ, ಪರಸ್ಪರರ ಕ್ರಿಕೆಟ್ ಸಂಬಂಧ ಪುನರಾರಂಭಗೊಳ್ಳುವುದರಿಂದ ಇಬ್ಬರಿಗೂ ಲಾಭವಿದೆ. ಅಷ್ಟಕ್ಕೂ ಕ್ರೀಡೆ ಬೇರೆ, ರಾಜಕೀಯ ಬೇರೆ. ಈ ಬಾರಿ ಪಾಕ್ ಆಟಗಾರರು ಅವಕಾಶ ವಂಚಿತರಾಗಿದ್ದಾರೆ. ಅದನ್ನು ಸರಿಪಡಿಸುವುದು ಕಷ್ಟ. ಅದಕ್ಕೆ ಐಪಿಎಲ್‌ನ ನಿಯಮಗಳು ಅಡ್ಡಿಯಾಗುತ್ತವೆ. ಈಗಲೂ ಗಾಯಾಳುಗಳಿದ್ದರೆ, ಬದಲಿ ರೂಪದಲ್ಲಿ ಪಾಕ್ ಆಟಗಾರರು ಅವಕಾಶ ಪಡೆಯುವುದು ಸಾಧು. ಜೊತೆಗೆ, ಭವಿಷ್ಯದಲ್ಲಿ ಹೀಗಾಗದಂತೆ ನೋಡಿಕೊಳ್ಳ ಬಹುದು. ಪರಸ್ಪರರ ದೂಷಣೆ, ಕೆಸರೆರಚಾಟದಿಂದ ಪರಿಹಾರ ಸಿಗಲು ಸಾಧ್ಯವಿಲ್ಲ.
No comments:
Post a Comment