Tuesday, February 2, 2010

ದೊರೆಯ ಸಾಮ್ರಾಜ್ಯ ವಿಸ್ತರಣೆ


*ಹದಿನಾರು ಗ್ರಾಂಡ್‌ಸ್ಲಾಂ ಸಿಂಗಲ್ಸ್‌ ಕಿರೀಟಗಳು.
*ಎಲ್ಲಾ 4 ಗ್ರಾಂಡ್‌ಸ್ಲಾಂಗಳನ್ನು ಗೆದ್ದ ಕೇವಲ ಆರನೆ ಆಟಗಾರ.
* ಸತತ 237 ವಾರ ವಿಶ್ವ ನಂ.1 ಪಟ್ಟದಲ್ಲಿದ್ದ ವಿಶ್ವದಾಖಲೆ (2004ರಿಂದ 2008).
* ಸತತವಾಗಿ 10 ಗ್ರಾಂಡ್‌ಸ್ಲಾಂಗಳ ಫೈನಲ್‌ಗಳಲ್ಲಿ ಕಾಣಿಸಿ ಕೊಂಡ ದಾಖಲೆ (2005 ವಿಂಬಲ್ಡನ್‌ನಿಂದ 2007 ಯುಎಸ್‌ ಓಪನ್‌).
* ಸತತ 23 ಗ್ರಾಂಡ್‌ಸ್ಲಾಂಗಳಲ್ಲಿ ಕನಿಷ್ಠ ಸೆಮಿಫೈನಲ್‌ ತಲುಪಿದ ಸಾಧನೆ (2004 ವಿಂಬಲ್ಡನ್‌ನಿಂದ ಇಲ್ಲಿಯವರೆಗೆ).
* ಮುಕ್ತ ಟೆನಿಸ್‌ ಯುಗದಲ್ಲಿ ಅತೀ ಹೆಚ್ಚು ಆಸ್ಟ್ರೇಲಿಯನ್‌ ಓಪನ್‌ (4) ಗೆದ್ದ ಗೌರವ (ಆಂಡ್ರೆ ಅಗಾಸ್ಸಿ ಜೊತೆ ಹಂಚಿ ಕೊಂಡಿದ್ದಾರೆ).
* ಸತತವಾಗಿ 24 ಟೂರ್ನಿ ಫೈನಲ್‌ಗಳಲ್ಲಿ ಸೋಲು ಕಾಣದ ದಾಖಲೆ.
* 2003ರಲ್ಲಿ ಚೊಚ್ಚಲ ವಿಂಬಲ್ಡನ್‌ ಗೆದ್ದ ಬಳಿಕ 7 ವರ್ಷಗಳಲ್ಲಿ 16 ಗ್ರಾಂಡ್‌ಸ್ಲಾಂ ಸಾಧನೆ....

ರೋಜರ್‌ ಫೆಡರರ್‌ಗಲ್ಲದೆ ಬೇರಾರಿಂದಲೂ ಇವೆಲ್ಲಾ ಸಾಧ್ಯವಿಲ್ಲ. ಕನಸು ಕಾಣಲೂ ಸಾಧ್ಯವಿಲ್ಲದ ಕಲ್ಪನಾತೀತವಾದ ಸಾಧನೆಗಳು ಇವು.
ಪುರುಷರ ಟೆನಿಸ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ಮಾಂತ್ರಿಕ ಫೆಡರರ್‌ ಚಕ್ರಾಧಿಪತ್ಯ ಕೊನೆಗೊಳ್ಳುವ ಯಾವುದೇ ಸೂಚನೆ ಕಂಡು ಬರುತ್ತಿಲ್ಲ. ಸದ್ಯಕ್ಕಂತೂ ಇಲ್ಲ.
ಟೆನಿಸ್‌ನಲ್ಲಿ ಹಿಂದೆ ಹತ್ತುಹಲವು ಮಹಾನುಭಾವರು ಆಗಿ ಹೋಗಿದ್ದಾರೆ. 60-70-80ರ ದಶಕಗಳಲ್ಲಿ ಟೆನಿಸ್‌ ಅಂಕಣ ದಲ್ಲಿ ವಿಶ್ವಯುದ್ಧದಂಥ ಸಂಘರ್ಷವೇರ್ಪಡುತ್ತಿತ್ತು. ಹಾಗೆಂದ ಮಾತ್ರಕ್ಕೆ ಈಗ ಆಟದ ಗುಣಮಟ್ಟದಲ್ಲಿ ಚೊರೆ ಆಗಿದೆ ಎಂದೇನೂ ಅರ್ಥವಲ್ಲ. ಬದಲಿಗೆ, ಆಲದ ಮರದ ನೆರಳಲ್ಲಿ ಬೇರಾವ ಗಿಡವೂ ಬೆಳೆಯದ ಹಾಗೆ ಉಳಿದವರು ಬೆಳೆಯಲು ಫೆಡರರ್‌ ಎಂಬ ಆಲದ ಮರ ಅವಕಾಶ ಕೊಡುತ್ತಿಲ್ಲ. ಫೆಡರರ್‌ ತಾವು ಸೃಷ್ಟಿಸಿಕೊಂಡ ಎತ್ತರಕ್ಕೆ ತಾವೇ ಏರಬೇಕೇ ಹೊರತು, ಉಳಿದವರಿಂದ ಸದ್ಯದ ಪರಿಸ್ಥಿತಿಯಲ್ಲಂತೂ ಸಾಧ್ಯವಾಗುತ್ತಿಲ್ಲ.
ರಾಫೆಲ್‌ ನಡಾಲ್‌ ಸತತ ನಾಲ್ಕು ವರ್ಷ ಫ್ರೆಂಚ್‌ ಓಪನ್‌ ಗೆದ್ದು, 2008ರಲ್ಲಿ ವಿಂಬಲ್ಡನ್‌ನಲ್ಲೂ ಫೆಡರರ್‌ ಆಧಿಪತ್ಯಕ್ಕೆ ತಡೆಯೊಡ್ಡಿದಾಗ ಅಂಥ ಒಂದು ಆಶಾಕಿರಣ ಗೋಚರ ವಾಗಿತ್ತು. ಫೆಡರರ್‌ ಯುಗ ಕೊನೆಗೊಳಿಸುವ ದೊರೆಯೆಂದೇ ನಡಾಲ್‌ ಬಿಂಬಿಸಲ್ಪಟ್ಟಿದ್ದರು. ಆದರೆ, ಸದ್ಯ ನಡಾಲ್‌ ವೃತ್ತಿ ಜೀವನವೇ ಅತಂತ್ರವಾಗಿದೆ. ಗಾಯಗಳು ಅವರನ್ನು ಕಿತ್ತು ತಿನ್ನುತ್ತಿವೆ.
ಉಳಿದವರು ಎಲ್ಲೋ ಆಗೊಮ್ಮೆ, ಈಗೊಮ್ಮೆ ಪ್ರಜ್ವಲಿಸಿ ನಂದಿ ಹೋಗುವ ಕಿಡಿಗಳು. ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ, ನೊವಾಕ್‌ ಡಿಜೊಕೊವಿಕ್‌, ಆಂಡಿ ಮರ್ರೆ ಇವರೆಲ್ಲರೂ ಅಷ್ಟೇ.
ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಇದೆಲ್ಲವೂ ಮತ್ತೆ ಸಾಬೀತಾಯಿತು. ಟೂರ್ನಿಯಲ್ಲಿ ಫೆಡರರ್‌ ಅಶ್ವವನ್ನು ಕಟ್ಟುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಅವರಿಗೆ ಸ್ವಲ್ಪ ಗಂಭೀರ ಸವಾಲು ಎದುರಾಗಿದ್ದು ಕ್ವಾರ್ಟರ್‌ಫೈನಲ್‌ನಲ್ಲಿ ನಿಕೋಲಾಯ್‌ ಡೇವಿಡೆಂಕೊರಿಂದ ಮಾತ್ರ.
ಫೆಡರರ್‌ಗೆ ಅಂಥ ವಯಸ್ಸೇನೂ ಆಗಿಲ್ಲ. 30ರ ಆಚೆಯ ಟೆನಿಸ್‌ ಮುಪ್ಪಿಗೂ ಸಹ ಅವರಿನ್ನೂ ಒಂದೂವರೆ ವರ್ಷದಷ್ಟು ದೂರದಲ್ಲಿದ್ದಾರೆ. ಆದರೂ, ಸಾಧನೆ, ಅನುಭವದಿಂದ ಹಾಗೂ ಹೊಸ ಪೀಳಿಗೆಯ ಆಟಗಾರರ ಎದುರು ಅವರು ಸಾಕಷ್ಟು ಹಿರಿಯರೇ. ವಯಸ್ಸಾದಂತೆ ಪ್ರಬುದ್ಧತೆಯೂ ಅವರನ್ನು ಹಿಂಬಾಲಿಸಿದೆ. ದೇಹ ಶಕ್ತಿಯ ಕೊರತೆಯನ್ನು ಕೌಶಲ್ಯ, ಕಲಾತ್ಮಕ ಆಟ ಹಾಗೂ ಅನುಭವಗಳು ಮರೆಮಾಚುತ್ತಿವೆ. ಟೆನಿಸ್‌ನಲ್ಲಿ ಎಲ್ಲಾ ಸಂಭಾವ್ಯ ಶಿಖರಗಳನ್ನು ಏರಿ ಕುಳಿತಿರುವ ಫೆಡರರ್‌ ವೃತ್ತಿಪಯಣ ಈಗೀಗ ಕ್ರಿಕೆಟ್‌ನ ಸಚಿನ್‌ ತೆಂಡುಲ್ಕರ್‌ರನ್ನು ಹೋಲುತ್ತಿದೆ. ಏಕೆಂದರೆ, ಪ್ರತೀ ದಿನ, ಪ್ರತೀ ಪಂದ್ಯದಲ್ಲಿ ಅವರು ಏನಾದರೊಂದು ದಾಖಲೆ ಮಾಡುತ್ತಿರುತ್ತಾರೆ. ಹೊಸತು ಸೃಷ್ಟಿಸುತ್ತಿರುತ್ತಾರೆ. ಇಷ್ಟೆಲ್ಲಾ ಸಾಧನೆಗಳ ನಡುವೆ ಮೈಮರೆಯದಂತೆ, ಕಾಲು ಜಾರದಂತೆ ಎಚ್ಚರ ವಹಿಸುತ್ತಾರೆ.
ತಪ್ಪು ಮಾಡಿ ಸಿಕ್ಕಿ ಬೀಳುವವರೆಗೂ ಪ್ರತಿಯೊಬ್ಬರೂ ಸಂಭಾವಿತರೇ (ಟೈಗರ್‌ ವುಡ್ಸ್‌ ಗಮನದಲ್ಲಿಟ್ಟುಕೊಂಡು). ಆದರೆ, ಫೆಡರರ್‌ ಆಟ, ಜೀವನ, ವರ್ತನೆಗಳನ್ನು ನೋಡುವಾಗ ಅವರ ಬಗ್ಗೆ ಇತರ ಅನುಮಾನಗಳನ್ನು ಪಡಲು ಕಾರಣಗಳೇ ಸಿಗುವುದಿಲ್ಲ.
ನಿವೃತ್ತಿಯಾಗಿ ಆರೇಳು ವರ್ಷಗಳ ಬಳಿಕ ಉದ್ದೀಪನ ವಂಚನೆ ರಹಸ್ಯ ಬಹಿರಂಗ ಪಡಿಸುವ ಮೂಲಕ ಆಂಡ್ರೆ ಅಗಾಸ್ಸಿ ದಿಗ್ಗಜನ ವರ್ಚಸ್ಸಿನಿಂದ ಕುಸಿದರು. ಆದರೆ, ಸಾರ್ವಜನಿಕ ಜೀವನದಲ್ಲಿ ಪರಿಶುದ್ದತೆ ಕಾಪಾಡಿಕೊಂಡಿರುವ, ವಾಡಾದ ಉದ್ದೀಪನ ನಿಗ್ರಹ ಆಂದೋಲನಗಳಿಗೆ ಪ್ರಥಮರಾಗಿ ಕೈಜೋಡಿಸುವ, ಸುನಾಮಿ ಸಂತ್ರಸ್ತರು, ಹೈಟಿ ಭೂಕಂಪ ಸಂತ್ರಸ್ತರಿಗಾಗಿ ತುಡಿಯುವ, ಆಟದ ಅಂಕಣದಲ್ಲಿ ಸದಾ ಗೆಲ್ಲುವ ಫೆಡರರ್‌ ನಿಜವಾದ ಚಾಂಪಿಯನ್‌ ಎಂದು ಒಪ್ಪಿ ಕೊಳ್ಳಬಹುದು. ಇನ್ನು ಟೆನಿಸ್‌ನಲ್ಲಿ ಅವರು ಸಾರ್ವಕಾಲಿಕ ಶ್ರೇಷ್ಠ ಹೌದೇ ಅಲ್ಲವೇ ಎನ್ನುವುದನ್ನು ಅವರ ಸಾಧನೆ, ಅಂಕಿ-ಅಂಶಗಳೇ ನಿರ್ಧರಿಸುತ್ತವೆ.
ಸೆರೇನಾ ಸಾಧನೆ
ಸೆರೇನಾ ವಿಲಿಯಮ್ಸ್‌ ಮೆಲ್ಬೋರ್ನ್‌ನಲ್ಲಿ ಶನಿವಾರ 12ನೇ ಗ್ರಾಂಡ್‌ಸ್ಲಾಂ ಸಿಂಗಲ್ಸ್‌ ಕಿರೀಟ ಗೆಲ್ಲುವ ಮೂಲಕ ಬಿಲ್ಲಿ ಜೀನ್‌ ಕಿಂಗ್‌ ಅವರ ಸಾಧನೆ ಸರಿಗಟ್ಟಿದರು.
ಅಮೆರಿಕದ ಕೃಷ್ಣ ಸುಂದರಿ ಕ್ವಾರ್ಟರ್‌ ಫೈನಲ್‌ನಲ್ಲೇ ವಿಕ್ಟೋರಿಯಾ ಅಜಾರೆಂಕ ವಿರುದ್ಧ ಸೋಲಿನ ಅಂಚಿಗೆ ತಲುಪಿದ್ದರು. ಸೆಮಿಫೈನಲ್‌ನಲ್ಲೂ ಚೀನಾದ ಲೀ ನಾ ವಿರುದ್ಧ ಇನ್ನೇನು ಸೋತೇ ಬಿಟ್ಟಿದ್ದರು. ಹಾಗಾಗಿ, ಇದು ಅವರ ಪಾಲಿನ ಶ್ರೇಷ್ಠ ಎನ್ನುವುದಕ್ಕಿಂತ, ಅದೃಷ್ಟದ ಪ್ರಶಸ್ತಿ ಎನ್ನಬೇಕು.
ಸೆರೇನಾ ವಿಶ್ವ ನಂ.1 ಪಟ್ಟಕ್ಕೆ ತಕ್ಕಂತೆ ಪ್ರಶಸ್ತಿ ಗೆಲ್ಲುವ ಮೂಲಕ ಅದ್ವಿತೀಯ ಸಾಧನೆಯನ್ನೇನೋ ಮಾಡಿದರು. ಅದರೆ, ಬೆಲ್ಜಿಯಂನ ಜಸ್ಟಿನ್‌ ಹೆನಿನ್‌ ಪ್ರಶಸ್ತಿ ಗೆದ್ದಿದ್ದರೆ, ಜನಪ್ರಿಯ ಚಾಂಪಿಯನ್‌ ಎನಿಸಿಕೊಳ್ಳುತ್ತಿದ್ದರು. ಏಕೆಂದರೆ, 18 ತಿಂಗಳ ನಿವೃತ್ತಿ ಮುರಿದು ಪುನರಾಗಮನಗೈದಿದ್ದ, ವೈಲ್ಡ್‌ ಕಾರ್ಡ್‌ ನೆರವಿನಿಂದ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಹೆನಿನ್‌ ಜನಾನುರಾಗ ಸಂಪಾದಿಸಿದ್ದರು. ಫೈನಲ್‌ವರೆಗಿನ ಪಂದ್ಯಗಳಲ್ಲಿ ಅವರ ಆಟವೂ ಅಮೋಘವಾಗಿಯೇ ಇತ್ತು. ಆದರೆ, ಮೊದಲ ಸಾವಿರ ಹೆಜ್ಜೆಗಳಿಗಿಂತಲೂ, ಕೊನೆಯ ಹೆಜ್ಜೆಯನ್ನು ಸರಿಯಾಗಿ ಇರಿಸುವುದಕ್ಕೆ ಹೆಚ್ಚಿನ ಮಹತ್ವ. ಹೆನಿನ್‌ರಿಂದ ಅದಾಗಲಿಲ್ಲ.

ಭಾವಜೀವಿಗೆ ಭೋಪರಾಕ್‌

ಲಿಯಾಂಡರ್‌ ಪೇಸ್‌ ವೃತ್ತಿಜೀವನದ 11ನೇ ಗ್ರಾಂಡ್‌ಸ್ಲಾಂ ಪ್ರಶಸ್ತಿ ಗೆದ್ದರು. 36ನೇ ವಯಸ್ಸಿನಲ್ಲಿ ಪ್ರಶಸ್ತಿ ಸಾಧನೆ ಮೆಚ್ಚತಕ್ಕ ವಿಷಯವೇ.
ಅತೀ ಹೆಚ್ಚು ಗ್ರಾಂಡ್‌ಸ್ಲಾಂ ಗೆದ್ದ ಭಾರತೀಯನೆಂಬ ದಾಖಲೆಯನ್ನು ಅವರೀಗ ಮಹೇಶ್‌ ಭೂಪತಿ ಜೊತೆ ಹಂಚಿಕೊಂಡಿದ್ದಾರೆ.
ಪೇಸ್‌ ಭಾರತೀಯ ಆಟಗಾರ ಹಾಗೂ ಅವರು ಗೆದ್ದಿರುವುದು ಗ್ರಾಂಡ್‌ಸ್ಲಾಂ ಎಂಬ ಕಾರಣಕ್ಕೆ ಅದಕ್ಕೆ ಮಹತ್ವ. ಆದರೂ, ವಿಶ್ವದ ಅಗ್ರಗಣ್ಯ ಆಟಗಾರರು ಮಿಶ್ರ ಡಬಲ್ಸ್‌ ಮಾದರಿಗೆ ಹೆಚ್ಚೇನೂ ಮಹತ್ವ ಕೊಡುವುದಿಲ್ಲ. ಕೆಲವರ ಪಾಲಿಗೆ ಅದು ಸ್ಪರ್ಧೆಗಿಂತ ಹೆಚ್ಚಿನ ಮನರಂಜನೆ.
ಈವರೆಗೂ ಈ ವಿಭಾಗ ಒಲಿಂಪಿಕ್ಸ್‌ನ ಭಾಗವೂ ಆಗಿರಲಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಮಿಶ್ರ ಡಬಲ್ಸ್‌ ಟೆನಿಸ್‌ ಸೇರ್ಪಡೆಗೊಂಡಿರುವುದರಿಂದ ಈಗೀಗ ಸ್ವಲ್ಪ ಮಹತ್ವ ಪಡೆದುಕೊಳ್ಳುತ್ತಿದೆ.
ಹಾಗೆ ನೋಡಿದರೆ, ಮಿಶ್ರ ಡಬಲ್ಸ್‌ನಲ್ಲಿ ತಜ್ಞ ಆಟಗಾರರು, ಖಾಯಂ ಜೋಡಿಗಳೆಂದಿಲ್ಲ. ಬಹುಶಃ ವರ್ತಮಾನದಲ್ಲಿ ಅತ್ಯಂತ ದೀರ್ಘಕಾಲದಿಂದ ಒಟ್ಟಿಗೆ ಆಡುತ್ತಿರುವ ಮಿಶ್ರ ಡಬಲ್ಸ್‌ ಜೋಡಿಯೆಂದರೆ, ಪೇಸ್‌- ಕಾರಾ ಬ್ಲಾಕ್‌ರೇ ಇರಬೇಕು.
ಸಿಂಗಲ್ಸ್‌ ಹಾಗೂ ಡಬಲ್ಸ್‌ ಮಾದರಿಗಳಲ್ಲಿ ಶ್ರೇಯಾಂಕ ಪದ್ಧತಿ ಇರುವಂತೆ ಮಿಶ್ರ ಮಾದರಿಯಲ್ಲಿ ಇಲ್ಲ. ಗ್ರಾಂಡ್‌ಸ್ಲಾಂಗಳಲ್ಲಿ ಕೆಲವು ಶ್ರೇಯಾಂಕ ಆಟಗಾರರು ಪಂದ್ಯಾ ಭ್ಯಾಸಕ್ಕೆ ನೆರವಾಗುತ್ತದೆ ಎಂಬ ಕಾರಣದಿಂದ ಇಲ್ಲವೇ, ಸಿಂಗಲ್ಸ್‌ನಲ್ಲಿ ಸೋತರೆ, ಇಲ್ಲಾದರೂ ಗೆಲ್ಲಬಹುದು ಎಂಬ ಆಶಾವಾದದಿಂದ ಮಿಶ್ರ ಡಬಲ್ಸ್‌ನಲ್ಲಿ ಭಾಗವಹಿಸು ತ್ತಾರೆ. ಹಾಗಾಗಿ, ಪ್ರತೀ ಟೂರ್ನಿಗಳಲ್ಲೂ ಟೂರ್ನಿ ಆರಂಭವಾದ ನಂತರವೇ, ಈ ವಿಭಾಗದಲ್ಲಿ ಸ್ಪರ್ಧಿಸುವವರ ನಿರ್ಣಯವಾಗುತ್ತದೆ. ಪ್ರತೀ ಬಾರಿ ಹೊಸ ಹೊಸ ಜೋಡಿಗಳು ಕಾಣಸಿಗುತ್ತವೆ. ಆಟಗಾರರ ಸಿಂಗಲ್ಸ್‌ ಶ್ರೇಯಾಂಕ ಆಧರಿಸಿ ಈ ವಿಭಾಗದ ಜೋಡಿಗಳಿಗೆ ಶ್ರೇಯಾಂಕ ನೀಡಲಾಗುತ್ತದೆ. ಕೆಲವೊಮ್ಮೆ ಅಪೇಕ್ಷಿತ ಜೋಡಿಗಳು ಕಣದಲ್ಲಿಲ್ಲದೆ, ಕೆಲವರಿಗೆ ಬೈ ಸಿಗುವುದೂ ಇದೆ.
ಒಟ್ಟಿನಲ್ಲಿ ಸಿಂಗಲ್ಸ್‌ ಅಥವಾ ಪುರುಷರ ಡಬಲ್ಸ್‌ನಲ್ಲಿ ಕಾಣುವಷ್ಟು ಸ್ಪರ್ಧಾತ್ಮಕತೆ ಇಲ್ಲಿ ಕಾಣಸಿಗುವುದಿಲ್ಲ. ಆದರೆ, ಇಲ್ಲಿ ಆಡುವುದರಿಂದ ಲಭಿಸುವ ಹಣ ಆಟಗಾರರ ಪಾಲಿಗೆ ಬೋನಸ್‌. ಆ ಕಾರಣಕ್ಕಾಗಿ ಆಡುವವರೂ ಇದ್ದಾರೆ.
ಇಂಥ ಸಂಗತಿಗಳೇನೇ ಇದ್ದರೂ, ಭಾರತೀಯ ಆಟಗಾರರು ಈ ವಿಭಾಗದಲ್ಲಿ ಗಂಭೀರವಾಗಿ ಸ್ಪರ್ಧಿಸುತ್ತಾರೆ ಎಂದೇ ಹೇಳಬೇಕು. ಸಿಂಗಲ್ಸ್‌ (ಇಲ್ಲವೇ ಇಲ್ಲ) ಹಾಗೂ ಡಬಲ್ಸ್‌ಗಿಂತ ಮಿಶ್ರ ಡಬಲ್ಸ್‌ನಲ್ಲೇ ಭಾರತೀಯರಿಗೆ ಪ್ರಶಸ್ತಿ ಅವಕಾಶ ಜಾಸ್ತಿ ಇರುವುದಕ್ಕೂ ಅದೇ ಕಾರಣ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಟೆನಿಸ್‌ ಚಿನ್ನ ಗೆಲ್ಲುವ ಕನಸು ಕಾಣುತ್ತಿರುವುದು ಸಹ ಮಿಶ್ರ ಡಬಲ್ಸ್‌ ಸ್ಪರ್ಧೆಯನ್ನು ಗಮನದಲ್ಲಿರಿಸಿಕೊಂಡೇ. ವಾಸ್ತವದಲ್ಲಿಯೂ ಭಾರತಕ್ಕೆ ಅಂಥ ಅವಕಾಶಗಳಿದ್ದೇ ಇವೆ.
ಆದರೂ, ಲಿಯಾಂಡರ್‌ ಪೇಸ್‌ ಆರಂಭದಿಂದಲೂ ಪುರುಷರ ಡಬಲ್ಸ್‌ನಷ್ಟೇ ಮಿಶ್ರ ಡಬಲ್ಸ್‌ನಲ್ಲೂ ಗಂಭೀರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರು ಹಲವು ವರ್ಷಗಳ ಕಾಲ ಮಹಿಳಾ ಟೆನಿಸ್‌ ದಂತಕಥೆ ಮಾರ್ಟಿನಾ ನವ್ರಾಟಿಲೋವ ಅವರ ಸಾಂಗತ್ಯ ಹೊಂದಿದ್ದರು. ಸದ್ಯ ಜಿಂಬಾಬ್ವೆಯ ಕಾರಾ ಬ್ಲಾಕ್‌ ಜೊತೆಗಿನ ಅವರ ಜೊತೆಯಾಟವೂ ಭರ್ಜರಿಯಾಗಿ ಸಾಗುತ್ತಿದೆ. 2008ರಲ್ಲಿ ಯುಎಸ್‌ ಓಪನ್‌ ಗೆದ್ದಿದ್ದ ಪೇಸ್‌ ಮತ್ತು ಕಾರಾ ಕಳೆದ ವರ್ಷ ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ನಲ್ಲಿ ಫೈನಲ್‌ ತಲುಪಿ ಸೋತಿದ್ದರು. ಆದರೆ, ಈ ಬಾರಿ ಆಸ್ಟ್ರೇಲಿಯಾದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಈ ಜೋಡಿ ಋತುವಿನ ಮುಂದಿನ ಗ್ರಾಂಡ್‌ಸ್ಲಾಂಗಳಿಗೆ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಪೇಸ್‌ ವಯಸ್ಸು ಮಾಗಿದಷ್ಟೂ ತರುಣರಾಗುತ್ತಿದ್ದಾರೆ. ಭಾನುವಾರದ ಫೈನಲ್‌ನಲ್ಲಿ ಅವರು ಚಿರತೆ ವೇಗದಲ್ಲಿ ಕೋರ್ಟ್‌ನಲ್ಲಿ ಓಡುತ್ತಿದ್ದರೆ ಎದುರಾಳಿಗಳು ದಂಗಾದರು. ಸ್ವತಃ ಜೊತೆಗಾರ್ತಿ ಬ್ಲಾಕ್‌ ಸಹ ಚಕಿತರಾಗಿದ್ದರು. ಆಟವಾಡುವಾಗ ಅವರ ತಾದಾತ್ಮ್ಯ, ಉನ್ಮತ್ತತೆ, ಏಕಚಿತ್ತ, ಆವೇಶ, ಆವೇಗ ಇವೆಲ್ಲವೂ ಅನುಕರಣೀಯ.
36ನೇ ವರ್ಷದಲ್ಲಿ 21ನೇ ಗ್ರಾಂಡ್‌ಸ್ಲಾಂ ಫೈನಲ್‌ನಲ್ಲಿ 11ನೇ ಪ್ರಶಸ್ತಿ ಜಯಿಸಿರುವ ಲಿಯಾಂಡರ್‌ಗೆ ಅಭಿನಂದಿಸಲೇಬೇಕು.

No comments:

Post a Comment