Tuesday, January 26, 2010
ರಾಜಕೀಯ, ರಾಜಕಾರಣಿಗಳಿಂದ ಕ್ರೀಡೆ ಮುಕ್ತವಾಗಬೇಕು
ಮೇಲಿನ ಮಾತನ್ನು ಎಲ್ಲರೂ ಒಪ್ಪುತ್ತಾರೆ (ರಾಜಕಾರಣಿಗಳನ್ನು ಬಿಟ್ಟು).
ಆದರೆ, ಹೇಗೆ? ಯಾವಾಗ ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ.
ಕ್ರೀಡೆಗಳ ವಿಷಯಕ್ಕೆ ಬಂದಾಗ ಭಾರತಕ್ಕಿಂತ ದೊಡ್ಡ ವಿಫಲ ರಾಷ್ಟ್ರ ಮತ್ತೊಂದಿಲ್ಲ.
1984ರಿಂದೀಚೆಗೆ ಚೀನಾ 400ಕ್ಕೂ ಹೆಚ್ಚು ಪದಕ ಗೆದ್ದಿದೆ. ಆದರೆ, ಭಾರತ ಗೆದ್ದಿರುವುದು ಕೇವಲ 6. 1996ರಲ್ಲಿ ಒಂದು ಕಂಚು (ಲಿಯಾಂಡರ್ ಪೇಸ್), 2000ದಲ್ಲಿ ಕಂಚು (ಕರ್ಣಂ ಮಲ್ಲೇಶ್ವರಿ), 2004ರಲ್ಲಿ ಬೆಳ್ಳಿ (ರಾಜ್ಯವರ್ಧನ ಸಿಂಗ್ ರಾಥೋಡ್), 2008ರಲ್ಲಿ ಚಿನ್ನ (ಅಭಿನವ್ ಬಿಂದ್ರಾ) ಮತ್ತು 2 ಕಂಚು (ಸುಶೀಲ್‌ಕುಮಾರ್, ವಿಜೇಂದರ್ ಸಿಂಗ್).
ವ್ಯಾಪಕ ಸಂಪನ್ಮೂಲ ಹೊಂದಿರುವ ನೂರಾರು ಕೋಟಿ ಜನಸಂಖ್ಯೆಯಿರುವ ಭಾರತದಂಥ ಬೃಹತ್ ದೇಶಕ್ಕೆ, ಒಲಿಂಪಿಕ್ಸ್, ವಿಶ್ವ ಚಾಂಪಿಯನ್ ಪ್ರತಿಭೆಗಳನ್ನು ಸೃಷ್ಟಿಸಲೇಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ಕಾರಣ ಎಲ್ಲಾ ಕ್ರೀಡಾ ಒಕ್ಕೂಟಗಳನ್ನು ಆಕ್ರಮಿಸಿಕೊಂಡು ಕುಳಿತಿರುವ ರಾಜಕಾರಣಿಗಳು.
ಸುಮ್ಮನೆ ಉದಾಹರಣೆಗೆ ಹೇಳುವುದಾದರೆ:
ಶರದ್ ಪವಾರ್ - ಕ್ರಿಕೆಟ್
ಅರುಣ್ ಜೈಟ್ಲಿ - ಕ್ರಿಕೆಟ್
ಲಾಲೂ ಪ್ರಸಾದ್ ಯಾದವ್ - ಕ್ರಿಕೆಟ್
ನರೇಂದ್ರ ಮೋದಿ - ಕ್ರಿಕೆಟ್
ಸುರೇಶ್ ಕಲ್ಮಾಡಿ - ಭಾರತೀಯ ಒಲಿಂಪಿಕ್ಸ್ ಸಂಸ್ಥೆ
ವಿಕೆ ಮಲ್ಹೋತ್ರ - ಆರ್ಚರಿ
ಅಭಯ್ ಸಿಂಗ್ ಚೌಟಾಲ - ಬಾಕ್ಸಿಂಗ್
ಅಜಯ್ ಸಿಂಗ್ ಚೌಟಾಲ - ಟೇಬಲ್ ಟೆನಿಸ್
ಯಶವಂತ್ ಸಿನ್ಹಾ - ಟೆನಿಸ್
ವಿದ್ಯಾ ಸ್ಟೋಕ್ಸ್ - ಹಾಕಿ
ದಿಗ್ವಿಜಯ್ ಸಿಂಗ್ - ಶೂಟಿಂಗ್
ಕೆಪಿ ಸಿಂಗ್ ದೇವ್ - ರೋಯಿಂಗ್
ಪ್ರಫುಲ್ ಪಟೇಲ್ - ಫುಟ್‌ಬಾಲ್
(ಇಲ್ಲಿ ಉಲ್ಲೇಖಿಸಿರುವುದು ಪ್ರಮುಖರು ಮಾತ್ರ. ರಾಜ್ಯ ಒಕ್ಕೂಟಗಳನ್ನೂ ಸೇರಿಸಿದರೆ ಈ ಪಟ್ಟಿ ಅನಂತ.)
ಸುರೇಶ್ ಕಲ್ಮಾಡಿ ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ರಣಧೀರ್ ಸಿಂಗ್ 23 ವರ್ಷಗಳಿಂದ ಐಒಎ ಕಾರ್ಯದರ್ಶಿಯಾಗಿದ್ದಾರೆ. ವಿಜಯ್ ಕುಮಾರ್ ಮಲ್ಹೋತ್ರ 34 ವರ್ಷಗಳಿಂದ ಆರ್ಚರಿ ಸಂಸ್ಥೆಯನ್ನು ತಮ್ಮ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಪ್ರಿಯರಂಜನ್ ದಾಸ್‌ಮುನ್ಶಿ 15 ವರ್ಷ ಕಾಲ ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕೊನೆಗೂ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಮೇಲೆ ಅಧಿಕಾರ ಬಿಟ್ಟುಕೊಟ್ಟರು. ಅವರ ಬದಲಿಗೆ ಬಂದವರು ಮತ್ತೊಬ್ಬ ರಾಜಕಾರಣಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಬಹಳ ದೀರ್ಘ ಕಾಲದಿಂದ ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಕೆಲವು ವರ್ಷ ಬಿಸಿಸಿಐ ಅಧ್ಯಕ್ಷರೂ ಆಗಿದ್ದ ಶರದ್ ಪವಾರ್, ಕೆಲವೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರೂ ಆಗಲಿದ್ದಾರೆ. ಉತ್ತರ ಕರ್ನಾಟಕದಲ್ಲಿ, ಮಹಾರಾಷ್ಟ್ರದಲ್ಲಿ, ಆಂಧ್ರ, ಬಿಹಾರಗಳಲ್ಲಿ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವಾಗ ಪವಾರ್ ಸಾಹೇಬರು ಮಹತ್ವದ ವಿಶ್ವಕಪ್ ಕ್ರಿಕೆಟ್ ಸಂಘಟನಾ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಿರುತ್ತಾರೆ.
ಹೋಗಲಿ, ಈ ರಾಜಕಾರಣಿಗಳು ಇಷ್ಟು ದೀರ್ಘ ಕಾಲದಿಂದ ಆಡಳಿತದಲ್ಲಿರುವುದರಿಂದ ಕ್ರೀಡೆಗೆ ಯಾವ ರೀತಿಯಾದರೂ ಲಾಭವಾಗಿದೆಯೇ? ಖಂಡಿತವಾಗಿಯೂ ಇಲ್ಲ. ಲಾಭವಾಗಿರುವುದೆಲ್ಲಾ ರಾಜಕಾರಣಿಗಳಿಗೆ ಮಾತ್ರ.
ಜನ ಪ್ರತಿನಿಧಿಗಳು ಕ್ರೀಡಾ ಸಂಸ್ಥೆಗಳಲ್ಲಿದ್ದರೆ, ಸರ್ಕಾರದಿಂದ ವಿವಿಧ ಅನುದಾನ, ವಿನಾಯತಿಗಳನ್ನು ಪಡೆಯಲು ಅನುಕೂಲವಾಗುತ್ತದೆ ಎನ್ನುವುದು ಇದರ ಹಿಂದಿನ ಮೂಲ ಉದ್ದೇಶವಾಗಿತ್ತು. ಆದರೆ, ಅದಾಗಿಲ್ಲ.
ಸುರೇಶ್ ಕಲ್ಮಾಡಿ ದೇಶದಲ್ಲಿ ನಿರಂತರವಾಗಿ ವಿವಿಧ ಅಂತಾರಾಷ್ಟ್ರೀಯ ಕೂಟಗಳನ್ನು ಸಂಘಟಿಸುತ್ತಿರಬಹುದು. ಆದರೆ, ಅದರಿಂದ ದೇಶದ ಅಥ್ಲೀಟ್‌ಗಳಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಆಗೊಮ್ಮೆ, ಈಗೊಮ್ಮೆ ಪಿಟಿ ಉಷಾ, ಅಂಜು ಬಾಬ್ಬಿ ಜಾರ್ಜ್‌ರಂಥವರು ಹೊರಹೊಮ್ಮಿದರೂ, ಅದಕ್ಕೆ ಅವರ ವೈಯಕ್ತಿಕ ಶ್ರಮ ಕಾರಣವೇ ಹೊರತು, ಕಲ್ಮಾಡಿ ಅಥವಾ ಒಲಿಂಪಿಕ್ಸ್ ಸಂಸ್ಥೆ, ಅಥ್ಲೆಟಿಕ್ಸ್ ಸಂಸ್ಥೆಗಳ ಕೊಡುಗೆ ಏನೂ ಇರುವುದಿಲ್ಲ.
ಆರ್ಚರಿಯಲ್ಲಿ ಪ್ರತೀ ವಿಶ್ವಕಪ್, ಒಲಿಂಪಿಕ್ಸ್‌ಗೆ ನಮ್ಮವರು ತೆರಳುತ್ತಾರೆ. ಆದರೆ, ಖಾಲಿ ಕೈಯಲ್ಲಿ ಮರಳುತ್ತಾರೆ. ಚೀನಾ, ಕೊರಿಯಾದ ಗುರಿಕಾರರ ಎದುರು ನಮ್ಮವರು ವಿಚಲಿತರಾಗುತ್ತಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಅಭಿನವ್ ಬಿಂದ್ರಾ, ರಾಜ್ಯವರ್ಧನ ಸಿಂಗ್ ರಾಥೋಡ್ ತಮ್ಮ ಯಶಸ್ಸಿಗೆ ವೈಯಕ್ತಿಕ ಶ್ರಮ ಕಾರಣವೇ ಹೊರತು ಭಾರತೀಯ ರಾಷ್ಟ್ರೀಯ ರೈಫಲ್ಸ್ ಸಂಸ್ಥೆ (ಎನ್‌ಆರ್‌ಎಐ) ಕೊಡುಗೆ ಸೊನ್ನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
1995ರ ಸುಮಾರಿಗೆ ಫುಟ್‌ಬಾಲ್‌ನಲ್ಲಿ ಭಾರತ ವಿಶ್ವ ಶ್ರೇಯಾಂಕದಲ್ಲಿ 95ರ ಆಸುಪಾಸಿನಲ್ಲಿತ್ತು. ಆಗ ಏಷ್ಯಾದ ಅಗ್ರಗಣ್ಯ ತಂಡಗಳಲ್ಲೊಂದಾಗಿತ್ತು. ಆದರೆ, ಈಗ ಭಾರತ ತಂಡ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ದೇಶಗಳಿಗಿಂತ ಮಾತ್ರ ಉತ್ತಮ ತಂಡ. ಒಲಿಂಪಿಕ್ಸ್, ವಿಶ್ವಕಪ್‌ಗಳು ದೂರದ ಬೆಟ್ಟ.
ಇನ್ನು ಟೇಬಲ್ ಟೆನಿಸ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್ ಎಲ್ಲಾ ಹಣೆಬರಹವೂ ಅಷ್ಟೇ. ಟೆನಿಸ್‌ನಲ್ಲೂ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ತಮ್ಮ ದಾರಿ ಹುಡುಕಿಕೊಂಡ ಕಾರಣಕ್ಕೆ ಅಖಿಲ ಭಾರತ ಟೆನಿಸ್ ಸಂಸ್ಥೆಗಿಂತ ಎತ್ತರ ಬೆಳೆದು ನಿಂತಿದ್ದಾರೆ.
ಕ್ರಿಕೆಟ್ ಸಂಸ್ಥೆಯಾದರೆ, ಹಣದ ಹೊಳೆಯೇ ಹರಿಯುತ್ತದೆ. ಉಳಿದ ಸಂಸ್ಥೆಗಳಿಗೆ ಯಾವ ಪ್ರಾಯೋಜಕರೂ ಬರುವುದಿಲ್ಲ. ಆದರೂ, ರಾಜಕಾರಣಿಗಳು ಅವುಗಳತ್ತ ಆಕರ್ಷಿತರಾಗಿರುವುದೇಕೆ?
ಒಲಿಂಪಿಕ್ಸ್ ಸಂಸ್ಥೆಯ ಮಾನ್ಯತೆ ಹೊಂದಿದ ಎಲ್ಲಾ ಕ್ರೀಡೆಗಳಿಗೆ ಸರ್ಕಾರ ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಹಣ ಬಿಡುಗಡೆ ಮಾಡುತ್ತದೆ. ಯಾವುದೇ ವಿದೇಶಿ ಪ್ರವಾಸ, ಕ್ರೀಡಾಕೂಟಗಳಿಗೆ ರಾಷ್ಟೀಯ ತಂಡವನ್ನು ಆಯ್ಕೆ ಮಾಡುವಾಗ ತಂಡದ ತರಬೇತಿ, ಆಹಾರ, ಅಭ್ಯಾಸ ಸೌಲಭ್ಯಗಳು, ವಿದೇಶಿ ಪ್ರವಾಸಕ್ಕೆಂದು ಸಾಕಷ್ಟು ಪ್ರಮಾಣದಲ್ಲಿ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ ಉದ್ದೇಶಕ್ಕೆ ತಕ್ಕಂತೆ ಖರ್ಚಾಗುವ ಹಣ ಬಹಳ ಕಡಿಮೆ. ಉಳಿದದ್ದೆಲ್ಲಾ ಅಧಿಕಾರಿಗಳ ಜೇಬಿಗೆ ಹೋಗುತ್ತದೆ. ಈ ಹಣದಲ್ಲೇ ಅಧಿಕಾರಿಗಳೂ ವಿದೇಶ ಪ್ರವಾಸ ಮಾಡಿ ಬರುತ್ತಾರೆ. ಯಾವಾಗಲೂ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಆಡುವ ತಂಡಕ್ಕಿಂತ ಅಧಿಕಾರಿಗಳ ಬಳಗವೇ ದೊಡ್ಡದಾಗಿರುವುದಕ್ಕೆ ಇದೇ ಕಾರಣ.
ರಾಷ್ಟ್ರೀಯ ಹಾಕಿ ಕರ್ಮಕಾಂಡ
ಕಳೆದ ಕೆಲವು ದಿನಗಳಿಂದ ಹಾಕಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಘನತೆಯನ್ನು ಮೂರಾಬಟ್ಟೆ ಮಾಡಿವೆ. ಭಾರತೀಯ ಹಾಕಿ ಇಂದು ಜಗತ್ತಿನ ಎದುರು ಹಾಸ್ಯಾಸ್ಪದವಾಗಿದ್ದರೆ, ಅದಕ್ಕೆ ಆಡಳಿತಾಧಿಕಾರಿಗಳು ಕಾರಣ.
ಸರಿಯಾಗಿ ಇನ್ನೊಂದು ತಿಂಗಳಲ್ಲಿ ವಿಶ್ವಕಪ್ ಹಾಕಿ ಪ್ರಪ್ರಥಮ ಬಾರಿ ಭಾರತದಲ್ಲಿ ನಡೆಯಬೇಕಿದೆ. ಆದರೆ, ಸಂಘಟಕ ಸಂಸ್ಥೆಯ ಅವಾಂತರಗಳಿಂದಾಗಿ ಕೊನೆಯ ಕ್ಷಣದಲ್ಲಿ ಟೂರ್ನಿಯ ಆತಿಥ್ಯ ಬೇರೆ ರಾಷ್ಟ್ರದ ಪಾಲಾಗುವ ಅಪಾಯ ತಲೆದೋರಿತ್ತು. ಹಾಗೆ ನೋಡಿದರೆ, ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಹಾಕಿ ಅರಾಜಕ ವಾಗಿದೆ. ಆಡಳಿತಕ್ಕೊಂದು ಸಂಸ್ಥೆಯೇ ಇಲ್ಲ. ಹಂಗಾಮಿ ಸಮಿತಿಯ ಮೂಲಕ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯೇ ಅಧಿಕಾರ ಮೆರೆಯುತ್ತಿದೆ. ಫೆಬ್ರವರಿ 7ರಂದು ಚುನಾವಣೆ ನಡೆಯಬೇಕಿತ್ತಾದರೂ, ಅದು ಅಕಾರಣವಾಗಿ ಮುಂದೂಡಿಕೆಯಾಗಿದೆ.
ಏತನ್ಮಧ್ಯೆ ಆಟಗಾರರ ಸಂಭಾವನೆ ವಿಷಯ ನಗೆಪಾಟಲಿನ ಸಂಗತಿಯಾಗಿದೆ. ಆಟಗಾರರನ್ನು ಮನಸೋಇಚ್ಛೆ ದುಡಿಸಿಕೊಳ್ಳುವ ಹಾಕಿ ಇಂಡಿಯಾ ಬಳಿ ಸಂಭಾವನೆ ಕೊಡಲು ಹಣವಿಲ್ಲ. ಕೊನೆಗೂ ಪ್ರಾಯೋಜಕ ಸಂಸ್ಥೆ ಸಹಾರಾ 1 ಕೋಟಿ ರೂ. ನೀಡಿದ್ದರಿಂದ ಆಟಗಾರರ ಮುಷ್ಕರ ಕೊನೆಗೊಂಡಿತು. ಆದರೆ, ಮಹಿಳೆಯರ ಮುಷ್ಕರ ಮುಂದುವರಿದಿದೆ. ಆಟಗಾರ್ತಿಯರಿಗೆಂದೇ ಮಧ್ಯ ಪ್ರದೇಶ ಸರ್ಕಾರ 1 ಕೋಟಿ ರೂ. ನೀಡಿದ್ದರೂ, ಅದನ್ನು ಕೇಂದ್ರ ಕ್ರೀಡಾ ಸಚಿವಾಲಯ ಆಟಗಾರ್ತಿಯರಿಗೆ ವಿತರಣೆ ಮಾಡದೆ, ರಾಷ್ಟ್ರೀಯ ನಿಧಿ ಸ್ಥಾಪಿಸಲು ಮುಂದಾಗಿದೆ!
ಒಟ್ಟಿನಲ್ಲಿ ಹಾಕಿ ಈ ರೀತಿ ಬೀದಿಗೆ ಬೀಳುವುದಕ್ಕೆ ಆಡಳಿತಶಾಹಿ ಕಾರಣ. ಭಾರತೀಯ ಹಾಕಿ ಒಕ್ಕೂಟ (ಐಎಚ್‌ಎಫ್) ಅಸ್ತಿತ್ವದಲ್ಲಿದ್ದಾಗ ಮಾಜಿ ಐಪಿಎಸ್ ಅಧಿಕಾರಿ ಕೆಪಿಎಸ್ ಗಿಲ್ ಸಂಸ್ಥೆಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು. 8 ಬಾರಿಯ ಒಲಿಂಪಿಕ್ಸ್ ಹಾಗೂ 1975ರ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ಭಾರತೀಯ ಹಾಕಿ ಗಿಲ್ ಅಡಿಯಲ್ಲಿ ಸತತ 15 ವರ್ಷ ಕಾಲ ಅವನತಿಯ ಹಾದಿ ಹಿಡಿಯಿತು. ಕೊನೆಗೂ 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತ ಅರ್ಹತೆ ಗಳಿಸಲೂ ವಿಫಲಗೊಂಡಾಗ ಗಿಲ್ ದುರಾಡಳಿತ ಕೊನೆಗೊಂಡಿತು. ಜೂನಿಯರ್ ಆಟಗಾರನೊಬ್ಬನನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಒಕ್ಕೂಟದ ಕಾರ್ಯದರ್ಶಿ ಜ್ಯೋತಿಕುಮಾರನ್ ಲಂಚ ಪಡೆದ ಸಂಗತಿ ಕ್ಯಾಮೆರಾ ಎದುರು ಬಯಲಾದಾಗ ಒಕ್ಕೂಟವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಬರ್ಖಾಸ್ತುಗೊಳಿಸಿತು. ಆನಂತರ ಹೊಸದಾಗಿ ಚುನಾವಣೆ ನಡೆಸುವ ಗೋಜಿಗೆ ಹೋಗದೆ ತತ್ಫೂರ್ತ ಸಮಿತಿ ಮುಖಾಂತರ ಐಒಎ ದುರಾಡಳಿತ ಶುರುವಾಯಿತು. ಈ ಮಧ್ಯೆ ಹಾಕಿಯ ವಿಶ್ವ ಒಕ್ಕೂಟ (ಎಫ್‌ಐಎಚ್) ಚುನಾವಣೆ ನಡೆಸುವುದಕ್ಕೆ ಗಡುವು ನೀಡಿತು. ಗಡುವು ಮೀರಿದರೆ, ವಿಶ್ವಕಪ್ ಆತಿಥ್ಯ ಕಿತ್ತುಕೊಳ್ಳುವುದಾಗಿ ಬೆದರಿಕೆ ಒಡ್ಡಿತು. ಈ ಬೆದರಿಕೆ ನಡುವೆಯೇ ಹಾಕಿ ಇಂಡಿಯಾ ಎಂಬ ಹೊಸ ಹೆಸರಿನಲ್ಲಿ ನಾಮಕರಣ ಪದಾಧಿಕಾರಿಗಳೊಂದಿಗೆ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಆದರೆ, ರಾಜ್ಯ ಘಟಕಗಳ ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜಕೀಯ ಶುರುವಾಯಿತು. ಹಿಂದೆ ಹಾಕಿಯನ್ನು ಹಾಳು ಮಾಡಲು ಗಿಲ್ ಮಾತ್ರ ಇದ್ದರು. ಈಗ ಸುರೇಶ್ ಕಲಾಡಿ, ಕ್ರೀಡಾ ಸಚಿವಾಲಯ (ಎಂಎಸ್ ಗಿಲ್) ಎಲ್ಲರೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ.
ಲಲಿತ್ ಮೋದಿ ಎಂಬ ರಾಜಕಾರಣಿಯಲ್ಲದ ಆಡಳಿತಾಧಿಕಾರಿ ವಿಶ್ವದ ಅತ್ಯಂತ ದೊಡ್ಡ ಕ್ಲಬ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಎರಡು ವರ್ಷ ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸುವ ಮೂಲಕ ಮಾದರಿಯಾಗಿದ್ದರು. ವಿಶ್ವಕಪ್ ಹಾಕಿ, ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟಕರು ಮೋದಿಯನ್ನು ನೋಡಿ ಕಲಿಯಬಹುದಿತ್ತು. ಆದರೆ, ರಾಜಕಾರಣಿಗಳ ರಾಜಕಾರಣದಿಂದಾಗಿ ಐಪಿಎಲ್ 3ನೇ ಆವೃತ್ತಿಯ ಹೊತ್ತಿಗೆ ಮೋದಿ ಅಧಿಕಾರವೇ ಮೊಟಕುಗೊಂಡಿದೆ. ಇದು ಭಾರತೀಯ ಕ್ರೀಡೆಗಳ ದುರ್ವಿಧಿ.
ಶೂಟಿಂಗ್ ಅವಾಂತರ
ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಸತತ ಎರಡು ಅವಧಿಗಿಂಥ ಹೆಚ್ಚು ಕಾಲ ಅಧಿಕಾರದಲ್ಲಿರುವಂತಿಲ್ಲ ಎಂಬ ಸರ್ಕಾರದ ನಿಯಮವೊಂದಿದೆ. ಅದು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ, ದೇಶದ ಎಲ್ಲಾ ಕ್ರೀಡಾ ಒಕ್ಕೂಟಗಳ ಪದಾಧಿಕಾರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ. ಇತ್ತೀಚೆಗೆ ರಾಷ್ಟ್ರೀಯ ರೈಫಲ್ಸ್ ಸಂಸ್ಥೆಗೆ (ಎನ್‌ಆರ್‌ಎಐ) ಇಂಥ ಬಿಸಿ ತಗುಲಿತು. ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಚುನಾವಣೆ ಕಾನೂನುಬಾಹಿರ ಎಂದು ನ್ಯಾಯಾಲಯವೊಂದು ತೀರ್ಪು ನೀಡಿತು. ಅದರಿಂದಾಗಿ ಎನ್‌ಆರ್‌ಎಐ ಆಡಳಿತ ಸಂಸ್ಥೆ ಅಧಿಕಾರ ಕಳೆದುಕೊಂಡಿದೆ. ಈ ವಿವಾದದ ನಡುವೆಯೇ ಕಾಮನ್ವೆಲ್ತ್ ಹಾಗೂ ವಿಶ್ವಕಪ್ ತಂಡಗಳಿಂದ ಅಭಿನವ್ ಬಿಂದ್ರಾರನ್ನು ಕೈಬಿಟ್ಟು ಎನ್‌ಆರ್‌ಎಐ ಬೆಚ್ಚಿಬೀಳಿಸಿತು. ಭಾರತದ ಏಕೈಕ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಹಾಗೂ ರಾಜೀವ್ ಗಾಂಧಿ ಖೇಲ್‌ರತ್ನ ಪುರಸ್ಕೃತ ಶೂಟರ್ ಭಾರತ ತಂಡಕ್ಕೆ ಆಯ್ಕೆಯಾಗುವುದಕ್ಕೆ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಬೇಕೆಂದರೆ, ಅದಕ್ಕಿಂತ ಅಪಚಾರ ಇನ್ನೊಂದಿಲ್ಲ. ನಿಜ. ಕ್ರೀಡೆಯಲಿ ಹಾಲಿ ಫಾರ್ಮ್‌ಗೆ ಬೆಲೆಯೇ ಹೊರತು ಪೂರ್ವಸಾಧನೆಗಲ್ಲ. ಆದರೆ, ಬಿಂದ್ರಾ ವಿದೇಶದಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಗಳಿಸಿದ್ದ ಅಂಕಗಳನ್ನು ಪರಿಗಣಿಸದೆ ಎನ್‌ಆರ್‌ಎಐ ದಾರ್ಷ್ಟ್ಯ ಮೆರೆಯಿತು.
ಅಧಿಕಾರದ ಕುರ್ಚಿಯಲ್ಲಿ ಅನರ್ಹರು ಕುಳಿತಿರುವವರೆಗೂ, ಸಾಧಕರಿಗೆ ಅರ್ಹ ಗೌರವ ಸಲ್ಲುವುದಿಲ್ಲ. ಈ ದೇಶ ಕಪಿಲ್ ದೇವ್, ಪಿಟಿ ಉಷಾ, ಪ್ರಕಾಶ್ ಪಡುಕೋಣೆಯಂಥ ಕ್ರೀಡಾ ದಂತಕಥೆಗಳಿಗೂ ವಿವಿಧ ಸಂದರ್ಭಗಳಲ್ಲಿ ಅಗೌರವ ತೋರಿದೆ. ಆ ಪಟ್ಟಿಗೆ ಬಿಂದ್ರಾ ಹೊಸ ಸೇರ್ಪಡೆ ಅಷ್ಟೇ.
Subscribe to:
Post Comments (Atom)
No comments:
Post a Comment