Tuesday, January 5, 2010

2010


ಪರಿಶುದ್ಧ ಸಾಧನೆಗಳ ಕ್ರೀಡಾ ವರ್ಷವಾಗಲಿ

ಜೀವನದ ಸುಖ -ಸ್ವಾರಸ್ಯ ನಾಳೆಯ ಬಗ್ಗೆ ಕನಸು ಕಾಣುವುದರಲ್ಲಿದೆ. ವರ್ತಮಾನ ಎನ್ನುವುದು ವಾಸ್ತವ. ವಾಸ್ತವ ಯಾವಾಗಲೂ ಸಿಹಿಯಾಗಿರುವುದಿಲ್ಲ.
ಕಳೆದುಹೋದ ನಿನ್ನೆಗಳು ನಮ್ಮ ಕೈಯಲ್ಲಿರುವುದಿಲ್ಲ. ತಮ್ಮ ಇಷ್ಟದಂತೆ, ನಿರ್ಧಾರದಂತೆ ವರ್ತಮಾನದಲ್ಲಿ ಬದುಕುವವರು ಹೆಚ್ಚು ಮಂದಿ ಇರುವುದಿಲ್ಲ. ಅದು ಎಲ್ಲರಿಂದ ಸಾಧ್ಯವೂ ಇಲ್ಲ.
ಹಾಗಾದರೆ, ನಮ್ಮ ನಾಳೆಗಳು ಹೇಗಿರಬೇಕು ಎಂದು ಕನಸು ಕಾಣುವುದರಲ್ಲಿ, ಅಂಥ ನಾಳೆಗಾಗಿ ಪ್ರಯತ್ನಿಸುವುದರಲ್ಲಿ ಬದುಕಿನ ನಿಜವಾದ ಸುಖವಿದೆ.
``ಕಾಲಚಕ್ರ ತಿರುಗುತಲಿದೆ
ತಡೆರಹಿತ ವಾಹನ
ಅದಕವನೇ ಚಾಲಕ
ಅದಕವನೇ ಮಾಲಿಕ
ನಡುವೆ ನಾ ಪ್ರಯಾಣಿಕ''
ಕಣ್ಣುಮುಚ್ಚಿ ತೆರೆಯುವ ವೇಗದಲ್ಲಿ 2010 ಬಂದೇ ಬಿಟ್ಟಿದೆ. 2009 ಹೇಗಿತ್ತು, ಹೀಗಿತ್ತು, ಹಾಗಿತ್ತು ಎಂದು ಕೂರುವ ಕಾಲ ಸರಿಯಿತು. ಈಗೇನಿದ್ದರೂ, ವರ್ತಮಾನದ ವರ್ಷದ ಬಗ್ಗೆ ಕ್ರಿಯಾಶೀಲ ಸಂಕಲ್ಪ ತೊಡುವ ಕಾಲ. ನಡೆಯಲೊಂದು ದಾರಿ, ಸಾಧಿಸಲೊಂದು ಗುರಿ, ಆ ನಿಟ್ಟಿನಲ್ಲೊಂದು ಕಟ್ಟುನಿಟ್ಟಿನ ವೇಳಾಪಟ್ಟಿ ಹಾಕಿಕೊಳ್ಳುವ ಕಾಲ.
2010 ಯಾವ ರೀತಿಯಿಂದ ನೋಡಿದರೂ ಕ್ರೀಡಾವರ್ಷವಾಗಲಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ಹಾಕಿ ವಿಶ್ವಕಪ್‌, ಏಪ್ರಿಲ್‌-ಮೇನಲ್ಲಿ ಫುಟ್‌ಬಾಲ್‌ ವಿಶ್ವಕಪ್‌, ಅಕ್ಟೋಬರ್‌ನಲ್ಲಿ ಕಾಮನ್ವೆಲ್ತ್‌ ಕ್ರೀಡಾಕೂಟ, ಇವುಗಳ ಜೊತೆಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಭಾರತದ ವಿಸ್ತೃತ ಕ್ರಿಕೆಟ್‌ ವೇಳಾಪಟ್ಟಿ, ನಾಲ್ಕು ಟೆನಿಸ್‌ ಗ್ರಾಂಡ್‌ಸ್ಲಾಂಗಳು, ಎಂದಿನಂತೆ ಫಾರ್ಮುಲಾ-1, ಅಥ್ಲೆಟಿಕ್ಸ್‌, ಗಾಲ್ಫ್‌, ಬ್ಯಾಡ್ಮಿಂಟನ್‌, ಹಾಕಿ ಮೊದಲಾದ ಕ್ರೀಡೆಗಳ ವಾರ್ಷಿಕ ವೇಳಾಪಟ್ಟಿ. ಒಟ್ಟಿನಲ್ಲಿ ವರ್ಷಪೂರ್ತಿ ಭಾರತದಲ್ಲಿ ಹಾಗೂ ವಿಶ್ವದಲ್ಲಿ ವಿವಿಧ ಕ್ರೀಡೆಗಳ ರಸದೌತಣ.
ಭಾರತದ ನಿರೀಕ್ಷೆಗಳೇನು?
ಸಾನಿಯಾ ಮಿರ್ಜಾ ಈ ವರ್ಷವೂ ಒಂದು ಗ್ರಾಂಡ್‌ಸ್ಲಾಂ ಗೆಲ್ಲಲಿ ಎಂದು ಕನಸು ಕಾಣಬಹುದು. ಬೆಚ್ಚಿಬೀಳುವ ಅಗತ್ಯವಿಲ್ಲ. ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಮಹೇಶ್‌ ಭೂಪತಿ ಜೊತೆ ಆಡುವುದರಿಂದ 2009ರ ಆಸ್ಟ್ರೇಲಿಯನ್‌ ಓಪನ್‌ ಗೆಲುವಿನ ಸಾಧನೆ ಪುನರಾವರ್ತಿಸುವ ಅವಕಾಶ ಇದ್ದೇ ಇದೆ. ಶ್ರೇಯಾಂಕಗಳು ಪರ್ಮಿಟ್‌ ನೀಡಿದರೆ, ಉಳಿದ ಮೂರು ಗ್ರಾಂಡ್‌ಸ್ಲಾಂಗಳಲ್ಲೂ ಅವರು ಪ್ರಶಸ್ತಿಗೆ ಯತ್ನಿಸಬಹುದು. ಜೊತೆಗೆ, ಸಾನಿಯಾ ಈ ವರ್ಷ ಮಹಿಳಾ ಡಬಲ್ಸ್‌ನಲ್ಲೂ ಗ್ರಾಂಡ್‌ಸ್ಲಾಂಗಾಗಿ ಯತ್ನಿಸಬಹುದು. ಈ ವರ್ಷ ಮಾಜಿ ವಿಶ್ವ ನಂ.1 ಡಬಲ್ಸ್‌ ಆಟಗಾರ್ತಿ ವರ್ಜೀನಿಯ ರುವಾನೊ ಪಾಸ್ಕಲ್‌ ಜೊತೆ ಆಡುವ ಸುಯೋಗ ಸಾನಿಯಾಗೆ ದೊರೆತಿದೆ. ಇದರ ಲಾಭ ಪಡೆದುಕೊಳ್ಳಬೇಕು. ಪುರುಷರ ಡಬಲ್ಸ್‌ನಲ್ಲಿ ಭೂಪತಿ ಹಾಗೂ ಲಿಯಾಂಡರ್‌ ಪೇಸ್‌ ತಮ್ಮ ತಮ್ಮ ಜೊತೆಗಾರ ರೊಂದಿಗೆ ಸಾಧ್ಯವಾದಷ್ಟು ಗ್ರಾಂಡ್‌ಸ್ಲಾಂ ಗೆಲ್ಲಲಿ ಎಂದು ಹಾರೈಸಬಹುದು.
ಸೈನಾ ನೆಹ್ವಾಲ್‌ ವಿಶ್ವ ಶ್ರೇಯಾಂಕದಲ್ಲಿ 8ರಿಂದ ಇನ್ನಷ್ಟು ಉತ್ತುಂಗಕ್ಕೇರಲು 2010 ವೇದಿಕೆಯಾಗಬಹುದು. ಈ ವರ್ಷ ಅವರು ಸೂಪರ್‌ ಸಿರೀಸ್‌ ಟೂರ್ನಿಗಳಲ್ಲಿ ಉಜ್ವಲ ಪ್ರದರ್ಶನ ಮೆರೆದರೆ, ಬ್ಯಾಡಿಂಟನ್‌ ಶ್ರೇಯಾಂಕ ಪಟ್ಟಿ ಯಲ್ಲಿ 5ಸ್ಥಾನವನ್ನೂ ಮೀರಿ ಮೇಲೇರುವ ದಿನ ದೂರವಿಲ್ಲ. ಅಂಥ ಯೋಗ್ಯತೆ ಅವರಿಗಿದೆ.
2008ರ ಬೀಜಿಂಗ್‌ ಒಲಿಂಪಿಕ್ಸ್‌ನಿಂದ ವಂಚಿತವಾಗಿದ್ದ ಭಾರತ ಹಾಕಿ ತಂಡ ಬಹಳ ಕಾಲದ ನಂತರ ವಿಶ್ವಕಪ್‌ ರೂಪದಲ್ಲಿ ಜಾಗತಿಕ ಟೂರ್ನಿಯೊಂದರಲ್ಲಿ ಆಡುತ್ತಿದೆ. ವರ್ತಮಾನದ ಹಾಕಿ ಸ್ಥಿತಿಗತಿಯಲ್ಲಿ ತಂಡದಿಂದ ದೊಡ್ಡ ಸಾಧನೆ ನಿರೀಕ್ಷಿಸುವುದು ಕಷ್ಟ ಸಾಧ್ಯ. ಆದರೂ, ತವರಿನ ವಾತಾವರಣದಲ್ಲಿ ತಂಡ ಗೌರವ ಉಳಿಸುವ ಪ್ರದರ್ಶನ ನೀಡಲಿ ಎಂದು ಆಶಿಸಬಹುದು.
ಭಾರತೀಯ ಫುಟ್‌ಬಾಲ್‌ ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್‌ ನಡೆಯಲಿರುವುದರಿಂದ ಫುಟ್‌ ಬಾಲ್‌ ಜ್ವರ ಮೈಗಂಟಿಸಿಕೊಳ್ಳುವುದಕ್ಕೆ ಕಾರಣವಿದೆ. ಬ್ರೆಜಿಲ್‌ ಯುಗ ಮುಗಿದಿದೆ. ಅರ್ಜೆಂಟೀನಾ ಪರದಾಡು ತ್ತಿದೆ. ಈ ಬಾರಿಯೂ ಪ್ರಶಸ್ತಿ ನಿಶ್ಚಿತವಾಗಿ ಯುರೋಪ್‌ ರಾಷ್ಟ್ರದ ಪಾಲಾಗಲಿದೆ ಎಂದು ಬೆಟ್‌ ಕಟ್ಟಲಡ್ಡಿಯಿಲ್ಲ.
ಕಾಮನ್ವೆಲ್ತ್‌ ಕ್ರೀಡಾಕೂಟ ದೆಹಲಿಯಲ್ಲೇ ನಡೆಯಲಿರು ವುದರಿಂದ ಆತಿಥೇಯ ಭಾರತದ ಅಥ್ಲೀಟ್‌ಗಳಿಂದ ಹೆಚ್ಚಿನ ಸಾಧನೆ ನಿರೀಕ್ಷಿಸುವಂತಾಗಿದೆ. ಇಂಗ್ಲೆಂಡ್‌ನ ಸಾರ್ವ ಭೌಮತ್ವದ ಕುರುಹಾಗಿ ನಡೆಯುವ ಈ ಕ್ರೀಡಾಕೂಟದಲ್ಲಿ ಶೂಟಿಂಗ್‌, ವೇಟ್‌ಲಿಫ್ಟಿಂಗ್‌, ಅಥ್ಲೆಟಿಕ್ಸ್‌ನ ಕೆಲವು ವಿಭಾಗ ಗಳಲ್ಲಿ ಸಾಂಪ್ರದಾಯಿಕವಾಗಿ ಭಾರತೀಯರು ಉತ್ತಮ ದಾಖಲೆ ಹೊಂದಿದ್ದಾರೆ. ಈ ಕ್ರೀಡೆಗಳ ದೈತ್ಯರಾಷ್ಟ್ರಗಳು ಕಾಮನ್ವೆಲ್ತ್‌ ವ್ಯಾಪ್ತಿಗೆ ಒಳಪಡದಿರುವುದೇ ಇದಕ್ಕೆ ಕಾರಣ. ಇವುಗಳ ಜೊತೆಗೆ ಹಾಕಿ, ಟೆನಿಸ್‌, ಆರ್ಚರಿ, ಬ್ಯಾಡಿಂಟನ್‌ ಗಳಲ್ಲಿ ಭಾರತ ಹೆಚ್ಚಿನ ಪದಕ ನಿರೀಕ್ಷಿಸಬಹುದು. ಪದಕ ಒಂದೆರಡು ಕಡಿಮೆಯಾದರೂ ಅಡ್ಡಿಯಿಲ್ಲ. ಕಾಮಗಾರಿ ಗಳ ವಿಳಂಬದಿಂದ ವಿವಾದ, ಅಪಹಾಸ್ಯಕ್ಕೆ ತುತ್ತಾಗಿರುವ ಸಂಘಟಕರು ರಾಷ್ಟ್ರಕ್ಕೆ ಮುಜುಗರ ತರದಿರಲಿ ಎಂದು ದೇವರಿಗೆ ತುಪ್ಪದ ದೀಪ ಹಚ್ಚಿ ಬೇಡಿಕೊಳ್ಳಬೇಕಿದೆ.
ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಆಗಿರುವ ಭಾರತ, ಬಾಂಗ್ಲಾದಲ್ಲಿ ತ್ರಿಕೋನ ಸರಣಿಯಲ್ಲಿ ಗೆದ್ದರೆ, ಏಕದಿನ ಗಳಲ್ಲೂ ನಂ.1 ಆಗಬಹುದಾಗಿದೆ. ಈ ಗೌರವಗಳನ್ನು ತಂಡ ಎಷ್ಟು ದೀರ್ಘಕಾಲ ಕಾಪಾಡಿಕೊಳ್ಳಲಿದೆ ಎಂಬುದರ ಮೇಲೆ ವರ್ಷದ ಯಶಸ್ಸು ಅಡಗಿದೆ. ಈ ವರ್ಷ ಭಾರತಕ್ಕೆ ವಿಪರೀತ ಪ್ರವಾಸವಿದೆ. ವೆಸ್ಟ್‌ ಇಂಡೀಸ್‌ನ ಇಪ್ಪತ್ತು20 ವಿಶ್ವಕಪ್‌ನಲ್ಲಿ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಹೋದ ಮಾನ ವನ್ನು ಮರಳಿ ಪಡೆಯಬೇಕಿದೆ. ಮುಂದಿನ ವರ್ಷ ಭಾರತ ದಲ್ಲೇ ಏಕದಿನ ವಿಶ್ವಕಪ್‌ ನಡೆಯುವ ಹಿನ್ನೆಲೆಯಲ್ಲಿ ಈ ವರ್ಷ ಪರಿಪೂರ್ಣ ತಂಡ ಕಟ್ಟುವ ಕೆಲಸ ನಡೆಯಬೇಕಿದೆ.
ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೊದಲ ಎರಡು ವರ್ಷಗಳಲ್ಲಿ ಆಸೀಸ್‌ ಪ್ರೀಮಿಯರ್‌ ಲೀಗ್‌ನಂತಾಗಿದೆ. ಮೊದಲ 2 ಪ್ರಶಸ್ತಿಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ನಾಯ ಕತ್ವದ ತಂಡಗಳಿಗೆ ಒಲಿದಿದೆ. ಚಾಂಪಿಯನ್ಸ್‌ ಲೀಗ್‌ ಸಹ ಆಸೀಸ್‌ ತಂಡದ ಪಾಲಾಗಿದೆ. ಈ ವರ್ಷದ ಐಪಿಎಲ್‌ನಲ್ಲಿ ಭಾರತೀಯ ಆಟಗಾರರು ಹಾಗೂ ಭಾರತೀಯ ನಾಯಕತ್ವದ ತಂಡಗಳು ಖ್ಯಾತಿಗೆ ತಕ್ಕಂತೆ ಆಡಬೇಕಿದೆ
ಕ್ರೀಡೆಯ ಸ್ವಾರಸ್ಯವಿರುವುದು ಅನಿರೀಕ್ಷಿತಗಳಲ್ಲಿ. ನಿರೀಕ್ಷೆಯೇ ಮಾಡದ ಸಂದರ್ಭಗಳಲ್ಲಿ ದೊರಕುವ ಯಶಸ್ಸಿನ ಸ್ವಾದ ಹೆಚ್ಚು. ಈ ವರ್ಷ ಯಾವುದೇ ಕ್ರೀಡೆಯಲ್ಲಿ ಅಂಥ ಪ್ರಶಸ್ತಿ, ಪದಕ ಲಭಿಸುವಂತಾದರೆ, ಸ್ವಾಗತಾರ್ಹ. ಎಲ್ಲಕ್ಕಿಂತ ಮುಖ್ಯವಾಗಿ ಕೋಟ್ಲಾ ಪಿಚ್‌ನಂಥ
ಮುಜುಗರ ಯಾವುದೇ ಕ್ರೀಡೆಯಲ್ಲಿ, ಯಾವುದೇ ರೂಪದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಉದ್ದೀಪನ ಕಳಂಕಗಳು, ಇನ್ನಿತರ ವಿವಾದಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.
`2010 ಪರಿಶುದ್ಧ ಸಾಧನೆಗಳ' ವರ್ಷವಾಗಲಿ ಎನ್ನುವುದು ಕ್ರೀಡಾಜಗತ್ತಿನ ವರ್ಷದ ಸಂಕಲ್ಪವಾಗಲಿ.

No comments:

Post a Comment