ವಿಷ್ಣು ಇನ್ನಿಲ್ಲವಂತೆ ಎಂಬ ಸುದ್ದಿಯೊಂದಿಗೆ ಬುಧವಾರದ ಉದಯವಾಯಿತು. ಈ ಸಾವೇ ಹಾಗೆ. ಯಾವಾಗ, ಎಲ್ಲಿ, ಯಾರನ್ನು ಕೊಂಡು ಹೋಗುವುದೋ ಗೊತ್ತಾಗುವುದಿಲ್ಲ. ಆದರೂ, ವಿಷ್ಣುವರ್ಧನ್‌ರಂಥ ವಿಷ್ಣುವರ್ಧನ್ ಇನ್ನು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. ಹಾಗೆಯೇ ವಿಷಣ್ಣನಾಗಿ ಟಿವಿ ಎದುರು ಕುಳಿತವನಿಗೆ ಹಳೆಯ ನೆನಪುಗಳು ಕಾಡಿದವು.
ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯಲ್ಲಿ ಕ್ರೀಡಾ ಸಂಪಾದಕನಾಗುವ ಮೊದಲು ಉದಯವಾಣಿಯಲ್ಲಿ ಚಲನಚಿತ್ರ ವರದಿಗಾರನಾಗಿದ್ದ ನನಗೆ ಒಂದಲ್ಲ ಹಲವು ಬಾರಿ ವಿಷ್ಣುವರ್ಧನ್ ಅವರನ್ನು ಭೇಟಿಯಾಗುವ ಅವಕಾಶಗಳು ದೊರೆತಿದ್ದವು. ಪರ್ವ, ಜಮೀನ್ದಾರ್ರು, ರಾಜ ನರಸಿಂಹ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ ಸೇರಿದಂತೆ ಇನ್ನೂ ಹಲವು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ವಿಷ್ಣು ಅವರನ್ನು ಭೇಟಿ ಮಾಡುವ, ಅವರೊಂದಿಗೆ ಮಾತನಾಡುವ ಅವಕಾಶ ದೊರೆತಿತ್ತು. ವಿಷ್ಣುವರ್ಧನ್ ಅವರ ಮಾತುಗಳಲ್ಲಿ ಚಿತ್ರರಂಗದ ಒಣಹರಟೆಗಿಂತ ತಾತ್ವಿಕ ಚಿಂತನೆ, ಜೀವನ ದರ್ಶನವೇ ಯಾವಾಗಲೂ ತುಂಬಿರುತ್ತಿದ್ದವು. ಹಾಗೆಯೇ ಅವರ ಕುರಿತು ನಾನು ಉದಯವಾಣಿಯಲ್ಲಿ ಬರೆದಿದ್ದನ್ನೆಲ್ಲಾ ತಿರುವಿಹಾಕುತ್ತಿರುವಾಗ ರಾಜ ನರಸಿಂಹ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಅವರು ಹೆಣ್ಣಿನ ಬಗ್ಗೆ ಮಾತನಾಡಿದ್ದ ವರದಿ ಗಮನ ಸೆಳೆಯಿತು. ಹಳೆಯದಾದರೂ, ಮತ್ತೊಮ್ಮೆ ಬ್ಲಾಗ್‌ನಲ್ಲಿ ಅದನ್ನು ಪ್ರಕಟಿಸುವ ಇಚ್ಛೆ ತಡೆದುಕೊಳ್ಳಲಾಗಲಿಲ್ಲ. ಹಾಗೆಂದೇ ಅದು ಇಲ್ಲಿದೆ.
ಹೆಣ್ಣು ದೇವರ ಪರಿಪೂರ್ಣ ಸೃಷ್ಟಿ
ರಾಜ ನರಸಿಂಹನ ಮಹಿಳಾವಾದ
ಅಬ್ಬಯ್ಯ ನಾಯ್ಡು ಸ್ಟುಡಿಯೋ ದಾರಿ ತುಳಿದು ಹೊರಟಿದ್ದ ನಮಗೆ ಪ್ರವೇಶ ದ್ವಾರ ದಾಟುತ್ತಿದ್ದಂತೆ ಎದುರಿಗೆ ಸಿಕ್ಕಿದ್ದು ಆನೆ.
ಆನೆ ಎದುರಿಗೆ ಸಿಕ್ಕಿದರೆ ಶುಭ ಸೂಚನೆಯಂತೆ ಎಂದು ನೆನಪಾಯಿತು. ಆದರೆ, ನಾವು ಹೋಗುತ್ತಿದ್ದುದು ರಾಜ ನರಸಿಂಹ ಚಿತ್ರೀಕರಣಕ್ಕೆ ಎಂದು ಅರಿವಾದಾಗ ಇದೇನು ಸಿಂಹದ ಗುಹೆಯಲ್ಲಿ ಆನೆ ಎಂದು ಗೊಂದಲವಾದದ್ದು ನಿಜ. ಆಗಲೇ ಯಾರೋ ಉಸುರಿದ್ದರು ಪಕ್ಕದಲ್ಲೇ ಲಂಕೇಶ್ ಪತ್ರಿಕೆ ಚಿತ್ರೀಕರಣ ನಡೆಯುತ್ತಿದೆಯಂತೆ. ಒಳಗೆ ವಸುಂಧರಾ ದಾಸ್ ನರ್ತಿಸುತ್ತಿದ್ದಾರಂತೆ.
ಶಕಲಕಬೇಬಿಯ ನರ್ತನ ನೋಡಬೇಕೆಂದು ಆಸೆಯಾದರೂ ಹತ್ತಿಕ್ಕಿಕೊಳ್ಳದೆ ವಿಧಿ ಇರಲಿಲ್ಲ. ಸಿಂಹವನ್ನು ನೋಡಲು ಬಂದಾಗ ಸಿಂಹಿಣಿಯನ್ನು ಅರಸಿ ಹೋಗುವುದು ತರವಲ್ಲ ಎನ್ನುವುದು ಆಗಿನ ಮನಸ್ಥಿತಿ.
ಸಿಂಹದ ಗುಹೆ ಹೊಕ್ಕಾಗ ಅಚ್ಚರಿಯಾಗಿತ್ತು. ಏಕೆಂದರೆ, ಸಿಂಹದ ರೊಮ್ಯಾಂಟಿಕ್ ಮೂಡ್ ನೋಡುವ ಅವಕಾಶ ಸಿಕ್ಕಿತ್ತು. ಅಬ್ಬಾಯಿ ನಾಯ್ಡು ಸ್ಟುಡಿಯೋದ ವಿಶಾಲ ಒಳಾಂಗಣದಲ್ಲಿ ವಿಸ್ತಾರವಾದ (ಕೃತಕ) ಹೂದೋಟ. ಪುಷ್ಪಗಂಧ, ಮಕರಂದ, ಶ್ರೀಗಂಧ ಸುಗಂದದ ನಡುವೆ ಶ್ವೇತವಸ್ತ್ರದಲ್ಲಿ ಕಂಗೊಳಿಸುತ್ತಿದ್ದ ಸೌಗಂಧಿಕಾ ಪುಷ್ಪದಂಥ ನಾಯಕಿ. ನಾಯಕಿಯ ಸುತ್ತ ಹೂವಿನ ಮಕರಂದ ಮತ್ತು ಮಕರಂದದಿಂದ ಆಕರ್ಷಿತವಾಗಿ ಹಾರಿಬಂದ ದುಂಬಿಗಳನ್ನು ಸಂಕೇತಿಸುವ ನರ್ತಕಿಯರು. ಅಲ್ಲೊಂದು ಲತಾಕುಂಜ. ಹಿಂದೆ ಚಂದ್ರನ ಪ್ರತಿಕೃತಿ. ಪ್ರೀತಿಯ ತಂಗಾಳಿ. ಚುಂಬಕ ಸನ್ನಿವೇಶ. ಪ್ರೇಯಸಿಯನ್ನು ಪ್ರಣಯರಾಗದಿಂದ ಒಲಿಸಿಕೊಳ್ಳುತ್ತಿದ್ದ ರಾಜನರಸಿಂಹ!
ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ವಿಷ್ಣುವರ್ಧನ್ ಹಾಗೂ ರಾಶಿ ಹೀಗೆಲ್ಲಾ ಕಂಡುಬಂದರು.
ರೊಮ್ಯಾಂಟಿಕ್ ದೃಶ್ಯೀಕರಣ ನಂತರದ ಮಾತುಕತೆಯಲ್ಲೂ ಪ್ರೀತಿ, ಪ್ರೇಮ, ಪ್ರಣಯದ ಬೆಚ್ಚನೆ ಅನುಭವ ಕಥನಗಳನ್ನು ನಿರೀಕ್ಷಿಸಿದ್ದವರಿಗೆ ನಿರಾಸೆ ಕಾದಿತ್ತು. ಏಕೆಂದರೆ, ಪೂರ್ತಿ ಸಂವಾದ ಸ್ತ್ರೀಪರವಾಗಿತ್ತು. ಹೆಣ್ಣಿನ ರೀತಿ ನೀತಿ, ಸಮಾಜ ಹೆಣ್ಣನ್ನು ನಡೆಸಿಕೊಳ್ಳುವ ರೀತಿ. ರಾಜನರಸಿಂಹನ ದೃಷ್ಟಿಯಲ್ಲಿ ಹೆಣ್ಣು ಯಾವ ರೀತಿ ಮೊದಲಾದ ವಿಷಯಗಳಿಗೆ ಸೀಮಿತವಾಗಿತ್ತು ಆ ಚರ್ಚೆ.
ಹೆಣ್ಣಿನ ಬಗ್ಗೆ ಮಾತನಾಡುತ್ತ ವಿಷ್ಣು ಭಾವುಕರಾದರು. ದೇವರು ಭೂಮಿಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಅದಕ್ಕೇ ಹೆಣ್ಣನ್ನು ಸೃಷ್ಟಿ ಮಾಡಿದ್ದಾನೆ. ತನ್ನ ಗುಣಗಳನ್ನೆಲ್ಲಾ ಹೆಣ್ಣಿನಲ್ಲಿ ತುಂಬಿದ್ದಾನೆ. ತ್ಯಾಗ, ಮಮತೆ, ಅಕ್ಕರೆ, ನಿಸ್ವಾರ್ಥ ಇವೆಲ್ಲಾ ಹೆಣ್ಣಿನಲ್ಲಲ್ಲದೆ ಗಂಡಲ್ಲಿ ಕಾಣಲು ಸಾಧ್ಯವೇ ಎಂದು ಪ್ರಶ್ನಿಸಿದರು ವಿಷ್ಣು.
ಯಾವುದೇ ಕೆಲಸವಿರಲಿ, ಅದನ್ನು ಹೆಣ್ಣೊಬ್ಬಳು ಮಾಡುವುದಕ್ಕೂ ಗಂಡಸು ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಗಂಡಿಗೆ ಗಾಂಭೀರ್ಯ ಇಲ್ಲ. ಕೆಲಸ ಎಷ್ಟೇ ಮಹತ್ವದ್ದಾದರೂ ಅಷ್ಟೇ ಬೇಜವಾಬ್ದಾರಿಯಿಂದ ನಿರ್ವಹಿಸುತ್ತಾನೆ. ಆದರೆ, ಹೆಣ್ಣು ಹಾಗಲ್ಲ. ಕೆಲಸ ಎಷ್ಟೇ ಚಿಕ್ಕದಿರಲಿ, ಅದನ್ನು ರಾಜಕಾರ್ಯವೆಂಬಂತೆ ತತ್ಪರತೆಯಿಂದ ನಿರ್ವಹಿಸುತ್ತಾಳೆ. ಬೆಂಗಳೂರಿನಲ್ಲಿ ಗಾಡಿ ಓಡಿಸುವ ಹುಡುಗಿಯರೇ ಇದಕ್ಕೆ ಉತ್ತಮ ಉದಾಹರಣೆ ಎಂದರು ವಿಷ್ಣು. ಹುಡುಗರು ಬೇಜವಾಬ್ದಾರಿಯಿಂದ ಎಗ್ಗಿಲ್ಲದಂತೆ ಗಾಡಿ ಓಡಿಸುವುದಕ್ಕೂ ಹುಡುಗಿಯರು ತದೇಕಚಿತ್ತರಾಗಿ ಓಡಿಸುವುದಕ್ಕೂ ವ್ಯತ್ಯಾಸವಿದೆ ಎಂದರು ವಿಷ್ಣು.
ರಾಜ ನರಸಿಂಹ ಹೆಣ್ಣನ್ನು ನೋಡುವ ದೃಷ್ಟಿ ಬೇರೆ. ಆತನ ದೃಷ್ಟಿಯಲ್ಲಿ ಹೆಣ್ಣು ದೇವರ ಪರಿಪೂರ್ಣ ಸೃಷ್ಟಿ. ಎಲ್ಲಾ ಸದ್ಗುಣಗಳ ಸಾಕಾರ. ಆಕೆಯಲ್ಲಿ ಯಾವುದಾದರೂ ದೋಷ ಇದ್ದರೆ, ಅದಕ್ಕೆ ಎಲ್ಲೋ ಒಂದು ಕಡೆ ಗಂಡಸೇ ಕಾರಣನಾಗಿರುತ್ತಾನೆ ಹೊರತು ಆಕೆಯ ತಪ್ಪು ಇರುವುದಿಲ್ಲ. ಸಮಾಜದ ಬುನಾದಿ ಹೆಣ್ಣಿನ ಸಂಸ್ಕಾರದ ಮೇಲೆ ನೆಲೆಗೊಂಡಿದೆ ಎಂದು ತಿಳಿದವ ಆತ. ಇಂಥ ನಾಯಕ ಜಾತ್ರೆಯೊಂದರಲ್ಲಿ ನಾಯಕಿಯನ್ನು ನೋಡುತ್ತಾನೆ. ಅವರಿಬ್ಬರಿಗೆ ಮೊದಲ ಪ್ರೇಮವೇನೂ ಆಗುವುದಿಲ್ಲ. ಆ ಹುಡುಗಿಗೆ ಅದಾಗಲೇ ಫಾರಿನ್ ರಿಟರ್ನ್ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿರುತ್ತದೆ. ನಾಯಕಿ ತಾನು ಮದುವೆ ಆಗುವ ಹುಡುಗ ಹಾಗೂ ರಾಜ ನರಸಿಂಹನ ನಡುವೆ ವ್ಯತ್ಯಾಸ ಗುರುತಿಸುತ್ತಾಳೆ. ಆ ಫಾರಿನ್ ರಿಟರ್ನ್ ಹುಡುಗ ಹೆಣ್ಣನ್ನು ಭೋಗವಸ್ತು ಅಷ್ಟೇ ಎಂದು ತಿಳಿದುಕೊಂಡವನು. ಅಂಗಡಿಯಲ್ಲಿ ಗ್ರಾಹಕ ವಸ್ತುವಿನ ಪರಿಶುದ್ಧತೆ ಪರೀಕ್ಷೆ ಮಾಡಿ ಕೊಳ್ಳುವಂತೆ ಈತ ಹೆಣ್ಣನ್ನೂ ಪರೀಕ್ಷೆ ಮಾಡಿ ಮದುವೆ ಮಾಡಿಕೊಳ್ಳುವವನು. ಮದುವೆ ಆಗುವವನ ಇಂಥ ಗುಣ ಹಾಗೂ ಹೆಣ್ಣನ್ನು ಗೌರವದ ಕಣ್ಣಲ್ಲಿ ಕಾಣುವ ರಾಜ ನರಸಿಂಹನ ವ್ಯತ್ಯಾಸವನ್ನು ಗುರುತಿಸುವ ನಾಯಕಿ ತನ್ನ ಬದುಕಿನ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಇದು ಚಿತ್ರದಲ್ಲಿ ಒಂದು ಹಂತದವರೆಗೆ ಸಾಗುವ ಕಥೆ.
ನಮ್ಮ ಹೆಣ್ಣಿನ ಸಂಸ್ಕಾರದ ಬಗ್ಗೆ ನಾವೇ ಹೇಳದಿದ್ದರೆ ಬೇರಾರು ಹೇಳುತ್ತಾರೆ. ವಿದೇಶಿ ಸಂಸ್ಕೃತಿ ಆವರಿಸುತ್ತಿದ್ದರೂ, ನಮ್ಮ ಹೆಣ್ಣಿನ ಸಂಸ್ಕಾರ ಇನ್ನೂ ಬದಲಾಗಿಲ್ಲ. ಅದನ್ನು ಉಳಿಸಿಕೊಳ್ಳಬೇಕು. ಒಬ್ಬ ಭಾರತೀಯ ಹುಡುಗಿಯ ಕಥೆಯನ್ನು ಈ ಚಿತ್ರದಲ್ಲಿ ಹೃದಯದಿಂದ ಹೃದಯ ತುಂಬಿ ಹೃದಯಕ್ಕೆ ನಾಟುವಂತೆ ಘಟನೆಗಳ ಮೂಲಕ ಹೇಳಲಾಗಿದೆ ಎಂದರು ವಿಷ್ಣು.
ವಿಷ್ಣು ಮಾತು ಹೆಣ್ಣಿನಿಂದ ಬೇರೆ ವಿಷಯಗಳತ್ತ ಪಲ್ಲಟಗೊಂಡಾಗ ಪ್ರಸ್ತಾಪವಾದದ್ದು ಯೋಗ ಹಾಗೂ ಯೋಗ್ಯತೆಯ ವಿಷಯ. ಈ ದೇಶದಲ್ಲಿ ಯೋಗ ಇದ್ದವರು ಪ್ರಧಾನ ಮಂತ್ರಿಯಾಗುತ್ತಾರೆ. ಯೋಗ್ಯತೆ ಇದ್ದವರು ಮೂಲೆಯಲ್ಲಿರುತ್ತಾರೆ ಎಂದರು ವಿಷ್ಣು.
ಚಿತ್ರರಂಗದಲ್ಲಿ ನಮ್ಮೂರು, ನಮ್ಮೋರಿಗೆ ಅವಕಾಶ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಿರುವ ಹಲವು ಪ್ರತಿಭಾವಂತರ ಗುಣಗಾನ ಮಾಡಿದರು. ಅರುಣ್ ಕುಮಾರ್, ರಂಗಾಯಣ ರಘು, ರೇಣುಕಾ ಪ್ರಸಾದ್ ಮೊದಲಾದವರ ಉಪಯುಕ್ತತೆ ಹೊಗಳಿದರು.
ನಾಯಕಿರಾಶಿಯನ್ನು ಮಾತನಾಡಿಸಿ ಎಂದು ಶಿಫಾರಸು ಮಾಡಿ ಆಕೆಯ ಅಭಿನಯ ಸಾಮರ್ಥ್ಯವನ್ನು ಹೊಗಳಿದರು. ಕೆಲವೊಂದು ಮಹತ್ವದ ಸನ್ನಿವೇಶಗಳಲ್ಲಿ ಕೋಲು ಹಿಡಿದು ಆಕೆಯಿಂದ ಅಭಿನಯ ತೆಗೆದಿದ್ದನ್ನು ನೆನಪಿಸಿಕೊಂಡ ಅವರು, ಒಳ್ಳೆ ಹುಡುಗಿ ಎಂದು ಸರ್ಟಿಫಿಕೇಟ್ ನೀಡಿದರು.
ಹೊಸ ವರ್ಷದಲ್ಲಿ ವಿಷ್ಣು ಯೋಜನೆಗಳೇನೂ ಇಲ್ಲವಂತೆ. ರಾಜ ನರಸಿಂಹ ಮುಗಿದೊಡನೆ ಹೃದಯವಂತ ಒಪ್ಪಿಕೊಂಡಿದ್ದೇನೆ. ಬೇರಾವುದರ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಮಾತು ಮುಗಿಸಿದರು.
(2002ರ ಡಿಸೆಂಬರ್‌ನಲ್ಲಿ ಬರೆದಿದ್ದು)
-ರಾಘವೇಂದ್ರ ಗಣಪತಿ
No comments:
Post a Comment