Tuesday, December 29, 2009
ಪ್ರಶಸ್ತಿಗಳೆಂಬ ಮಾಯಾಜಿಂಕೆ
ಪ್ರಶಸ್ತಿಗಳ ಉದ್ದೇಶ ಸಾಧಕರನ್ನು ಗುರುತಿಸಿ ಗೌರವಿಸುವುದು.
ಆದರೆ, ಈ ಸಾಧಕರನ್ನು ಗುರುತಿಸುವುದೇ ನಿಜವಾದ ತಲೆನೋವು.
ಎಲ್ಲಾ ಪ್ರಶಸ್ತಿಗಳನ್ನು ಸಂಸ್ಥಾಪಿಸುವಾಗ ಅದರ ಫಲಾನುಭವಿಗಳಿಗೊಂದು ಮಾನದಂಡ ನಿಗದಿಪಡಿಸಲಾಗಿರುತ್ತದೆ. ಆದರೆ, ಪ್ರತಿಯೊಬ್ಬರೂ ಆಯಾ ಮಾನದಂಡಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಗ್ರಹಿಸುವುದರಿಂದ/ ಅರ್ಥೈಸಿಕೊಳ್ಳುವುದರಿಂದ ಅನಪೇಕ್ಷಿತ ಅಸಮಾಧಾನಗಳು, ಸಂಘರ್ಷಗಳಿಗೆ ದಾರಿಯಾಗುತ್ತದೆ.
ಭಾರತದಲ್ಲಿ ಕ್ರೀಡಾಪಟುಗಳ ಸಾಧನೆಯನ್ನು ಗೌರವಿಸಲೆಂದೇ ಸರ್ವೋತ್ಕೃಷ್ಟ ರಾಜೀವ್ ಗಾಂಧಿ ಖೇಲ್‌ರತ್ನ ಪುರಸ್ಕಾರವಿದೆ. ಅರ್ಜುನ, ದ್ರೋಣಾಚಾರ್ಯ ಇತ್ಯಾದಿ ಪ್ರಶಸ್ತಿಗಳಿವೆ. ಪದ್ಮ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಇದಲ್ಲದೆ ಎಲ್ಲಾ ರಾಜ್ಯಗಳು ತಮ್ಮದೇ ಪ್ರಶಸ್ತಿ ವಿಧಾನ ಹೊಂದಿವೆ. ಅದೇ ರೀತಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಹೊಂದಿದೆ.
ಆದರೆ, ಈ ದೇಶದಲ್ಲಿ ಯಾವ ಪ್ರಶಸ್ತಿಗಳೂ ವಿವಾದವಿಲ್ಲದೆ ವಿತರಣೆಯಾಗುವುದಿಲ್ಲ ಎನ್ನುವುದು ವಿಷಾದದ ಸಂಗತಿ.
ಕೇವಲ ಕ್ರೀಡಾ ಪ್ರಶಸ್ತಿಗಳಿಗೆ ಸೀಮಿತವಾಗಿ ನೋಡಿದರೂ, ಪ್ರತೀ ವರ್ಷ, ಪ್ರತೀ ಬಾರಿ ಏನಾದರೂ ತರಲೆ, ರಾದ್ಧಾಂತ ಇದ್ದೇ ಇರುತ್ತದೆ.
ವರ್ತಮಾನದಲ್ಲಿ...
ರಾಜ್ಯ ಸರ್ಕಾರ ಕಳೆದ ತಿಂಗಳು 2007-08 ಹಾಗೂ 2008-09ನೇ ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಎಲ್ಲಾ ವರ್ಷಗಳಂತೆ ಈ ವರ್ಷವೂ ಪುರಸ್ಕೃತರಿಗಿಂತ, ಅತೃಪ್ತರ ಸಂಖ್ಯೆಯೇ ದೊಡ್ಡದಿದೆ.
ಪ್ರಶಸ್ತಿ ವಂಚಿತರಾದವರ ಪೈಕಿ ಕೆಲವು ಅರ್ಹ ಕ್ರೀಡಾಪಟುಗಳೂ ಇದ್ದಾರೆ ಎನ್ನುವುದು ನಿಜ. ಉದಾಹರಣೆಗೆ, ಪವರ್ ಲಿಫ್ಟರ್‌ಗಳಾದ ಗೀತಾಬಾಯಿ ಮತ್ತು ಎನ್. ಕೀರ್ತಿ. ಸ್ವತಃ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರೇ ಇವರ ಅಹವಾಲು ಆಲಿಸಿ, ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಸೇರಿಸಲು ಯತ್ನಿಸಿದರೂ, ಸಾಧ್ಯವಾಗಿಲ್ಲ. ಒಮ್ಮೆ ಪ್ರಕಟಿಸಿರುವ ಪಟ್ಟಿಯನ್ನು ಪರಿಷ್ಕರಿಸುವುದು ಅವಮಾನ ಎಂದು ಆಯ್ಕೆ ಸಮಿತಿ ಹಟ ಹಿಡಿದಿದ್ದರಿಂದ ಹೀಗಾಗಿದೆ. ಇಂಥ ಹಲವಾರು ಗೊಂದಲಗಳಿಂದಾಗಿ ಡಿಸೆಂಬರ್‌ನಲ್ಲೇ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿಗೆ ಮುಂದೂಡಿಕೆಯಾಗಿದೆ.
ಈ ಬಾರಿ ಏಕಲವ್ಯ ಪ್ರಶಸ್ತಿಗಳ ಆಯ್ಕೆಗೆ ಹಾಕಿ ಒಲಿಂಪಿಯನ್ ಎಂಪಿ ಗಣೇಶ್ ಅವರ ಸಲಹೆಯಂತೆ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಅಳವಡಿಸಿಕೊಂಡಿತ್ತು. ಅರ್ಜುನ ಪ್ರಶಸ್ತಿಗಳ ಆಯ್ಕೆಗೆ 2002ರಿಂದ ಅಳವಡಿಸಿಕೊಳ್ಳಲಾಗಿರುವ ಮಾನದಂಡ ವನ್ನೇ ಇಲ್ಲೂ ಬಳಸಲಾಗಿತ್ತು. ಅದರ ಪ್ರಕಾರ, ಆಯಾ ಸೂಚಿತ ವರ್ಷಗಳಲ್ಲಿ ನಡೆದಿರುವ ಒಲಿಂಪಿಕ್ಸ್, ವಿಶ್ವ ಚಾಂಪಿಯನ್ ಷಿಪ್, ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯಾ ಕ್ರೀಡಾಕೂಟ, 6ಕ್ಕಿಂತಲೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ಅಂತಾರ್ಟ್ರಾಷ್ಟ್ರೀಯ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾಕೂಟ... ಈ ರೀತಿಯಾಗಿ ಅವರೋಹಣ ಕ್ರಮದಲ್ಲಿ ಕ್ರೀಡಾಪಟುಗಳ ಸಾಧನೆ ಪರಿಗಣಿಸಲಾಗುತ್ತದೆ. ಈ ಕೂಟಗಳಲ್ಲಿ ಪಾಲ್ಗೊಳ್ಳುವಿಕೆಗೆ ನಿರ್ದಿಷ್ಟ ಅಂಕ ಇರುತ್ತದೆ. ಪದಕ ಸಾಧನೆಗೆ ಹೆಚ್ಚುವರಿ ಅಂಕ ನೀಡಲಾಗುತ್ತದೆ. ಕ್ರೀಡಾ ಪಟುಗಳು ಪ್ರಶಸ್ತಿ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮೆರೆದಿರಬೇಕು. ಜೊತೆಗೆ, ಪ್ರಶಸ್ತಿ ಸಾಲಿಗೆ ಹಿಂದಿನ ಐದು ವರ್ಷಗಳ ಅತ್ಯುತ್ತಮ ಮೂರು ಪ್ರದರ್ಶನಗಳನ್ನು ಪರಿಗಣಿಸಿ ವಿಜೇತರ ಅಂತಿಮ ಪಟ್ಟಿ ತಯಾರಿಸ ಲಾಗುತ್ತದೆ.
ಈ ಮಾನದಂಡಗಳೇನೋ ಮೇಲ್ನೋಟಕ್ಕೆ ಸಮಗ್ರವಾಗಿಯೇ ತೋರುತ್ತದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ವಿವಿಧ ಲಾಬಿಗೆ ತುತ್ತಾಗಿ ವಂಚಿತರಾದವರಿಗೆ ಹೊಸ ಮಾನದಂಡಗಳು ಮತ್ತೆ ಮುಳ್ಳಾಗಿ ಕಾಡುತ್ತವೆ. ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕಾನೇಕ ಪದಕಗಳನ್ನು ಗೆದ್ದಿರುವ ಗೀತಾ ಬಾಯಿ ನಿದರ್ಶನವನ್ನೇ ತೆಗೆದುಕೊಂಡರೆ, ಅವರನ್ನು ಮುಂದಿನ ವರ್ಷ ಪ್ರಶಸ್ತಿಗೆ ಪರಿಗಣಿಸುವುದಾಗಿ ಸಚಿವರು ಆಶ್ವಾಸನೆ ನೀಡಿದ್ದಾರೆ. ಆದರೆ, 33 ವರ್ಷದ ಗೀತಾಬಾಯಿ ಪ್ರಶಸ್ತಿಗಾಗಿ ತಮಗಿಂತ ಕಿರಿಯ ಲಿಫ್ಟರ್‌ಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಅಂದರೆ, ಅವರು ಈಗಾಗಲೇ ಮಾಡಿರುವ ಸಾಧನೆಗಳು ಲೆಕ್ಕಕ್ಕೇ ಬರುವುದಿಲ್ಲ.
ಈ ಬಾರಿ ಏಕಲವ್ಯ ಪ್ರಶಸ್ತಿಗಳು ಬಿಕರಿಯಾಗಿವೆ ಎಂದು ಕೆಲವರು ಆರೋಪಿಸಿದ್ದಾರೆ. ಇದರಲ್ಲಿ ಎಷ್ಟು ತಥ್ಯ ಇದೆಯೋ ತಿಳಿದಿಲ್ಲ. ಆದರೆ, ಒಂದಂತೂ ನಿಜ, ಪ್ರಶಸ್ತಿಗಳಿಗಾಗಿ ಭಾರೀ ಮಟ್ಟದಲ್ಲಿ ಲಾಬಿ ನಡೆಯುವ ಈ ದಿನಗಳಲ್ಲಿ ಎಲ್ಲಾ ಪ್ರಶಸ್ತಿಗಳು ವ್ಯಾಪಾರಿಕರಣಗೊಂಡಿರುವುದಂತೂ ನಿಜ.
ವ್ಯವಸ್ಥೆಯೇ ಹಾಗಿದೆ...
ಪ್ರಶಸ್ತಿಗಳು ಅಪಮೌಲ್ಯಗೊಳ್ಳುವುದಕ್ಕೆ ವ್ಯವಸ್ಥೆಯೂ ಕಾರಣ. ಪ್ರಶಸ್ತಿಗಳಿಗಾಗಿ ಅರ್ಜಿ ಸಲ್ಲಿಸುವಂಥ ವ್ಯವಸ್ಥೆ ಇದ್ದಾಗ, ಜನ ತಮ್ಮನ್ನು, ತಮ್ಮ ಸಾಧನೆಯನ್ನು ಅತಿಶಯವಾಗಿ ಬಿಂಬಿಸಿಕೊಳ್ಳಲು ಯತ್ನಿಸುವುದು ಸಹಜ. ಈ ಕಾಲದಲ್ಲಿ ಸುಮ್ಮನಿರು ವವರು ಮೂಲೆಗುಂಪಾಗುತ್ತಾರೆ. ಸಣ್ಣ ಸಾಧನೆಯನ್ನೂ ಮಹಾನ್ ಎಂದು ಬಿಂಬಿಸಿಕೊಳ್ಳುವವರು, ಅದಕ್ಕಾಗಿ ಶಿಫಾರಸುಗಳನ್ನು ತರುವವರು, ವಿವಿಧ ಪ್ರಭಾವಗಳನ್ನು ಬಳಸುವವರು, ಹಣ ಚೆಲ್ಲುವವರು ಇಂಥ ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆದುಕೊಳ್ಳುವ ವ್ಯವಸ್ಥೆಯಲ್ಲಿ ಯಶಸ್ಸು ಪಡೆಯುತ್ತಾರೆ.
ಹಾಗಾಗಿ, ಇಂದು ನಮ್ಮಲ್ಲಿರುವ ಅದೆಷ್ಟೋ ಮಂದಿ ಪ್ರಶಸ್ತಿ ವಿಜೇತರೇ ಹೊರತು, ಪುರಸ್ಕೃತರಲ್ಲ.
ಸಹಜ ಅರ್ಥದ ಪ್ರಕಾರ, ಯಾವುದೇ ಸ್ಪರ್ಧೆ ಅಥವಾ ಕ್ರೀಡಾಕೂಟದಲ್ಲಿ ಎದುರಾಳಿಯೊಂದಿಗೆ ಮುಖಾಮುಖಿ ಸ್ಪರ್ಧೆ ನಡೆಸಿ ಗೆಲ್ಲುವವನು ವಿಜೇತನೆನಿಸಿಕೊಳ್ಳುತ್ತಾನೆ. ಅರ್ಹ ಸಾಧಕ ವ್ಯಕ್ತಿಯನ್ನು ಗುರುತಿಸಿ, ಗೌರವಿಸಿದಾಗ ಆತ ಪುರಸ್ಕೃತನೆನಿಸಿಕೊಳ್ಳುತ್ತಾನೆ. ಆದರೆ, ವರ್ತಮಾನದಲ್ಲಿ ಇವೆರಡರ ನಡುವಿನ ವ್ಯತ್ಯಾಸದ ಗೆರೆ ಅಳಿಸಿಹೋಗಿದೆ. 100ಮೀ. ಓಟದಲ್ಲಿ ಉಸಿರು ಗಟ್ಟಿ ಓಡುವಂತೆ, ರಾಜ್ಯೋತ್ಸವ, ಏಕಲವ್ಯ ಪ್ರಶಸ್ತಿಗಳಿಗೂ ಜನ-ಧನ ಬಲದ ಪೈಪೋಟಿ ನಡೆಸಿ ವಿಜೇತರಾಗುವ ಸ್ಥಿತಿ ಇಂದಿದೆ.
ಪ್ರಶಸ್ತಿ ಆಯ್ಕೆಗೆಂದು ರಚಿಸಲಾಗುವ ಸಮಿತಿಗಳು ತಾವೇ ನೇರವಾಗಿ ಅರ್ಹ ಕ್ರೀಡಾಪಟುಗಳನ್ನು ಶೋಧಿಸಿ ಆಯ್ಕೆ ಮಾಡುವ ವ್ಯವಸ್ಥೆ ಇಲ್ಲದಿರುವುದೂ ಒಂದು ಲೋಪವೇ ಸರಿ. ಬದಲಿಗೆ ಆಯಾ ಕ್ರೀಡೆಯ ಆಡಳಿತಾತ್ಮಕ ಸಂಸ್ಥೆಗಳು ಶಿಫಾರಸು ಮಾಡುವ ಪಟ್ಟಿಯನ್ನು ಮುಂದಿಟ್ಟುಕೊಂಡು ಇಂಥ ಆಯ್ಕೆ ಸಮಿತಿಗಳು ಆಯ್ಕೆಗೆ ಮುಂದಾಗುತ್ತವೆ.
ಆಯ್ಕೆ ಸಮಿತಿಯೇ ನೇರವಾಗಿ ವರ್ಷದ ಎಲ್ಲಾ ಕ್ರೀಡಾ ಚಟುವಟಿಕೆ ಗಮನದಲ್ಲಿಟ್ಟುಕೊಂಡು, ಆಯಾ ವರ್ಷದ ಶ್ರೇಷ್ಠ ಅಥ್ಲೀಟ್‌ಗಳನ್ನು ಪರಿಗಣಿಸಿ, ಅವರ ಹಿಂದಿನ ಐದು ವರ್ಷಗಳ ಪ್ರದರ್ಶನ ಆಧರಿಸಿ, ಅಂತಿಮ ಪಟ್ಟಿ ಸಿದ್ಧ ಪಡಿಸಿದರೆ, ಈ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿರಲು ಸಾಧ್ಯ.
ಆದರೆ, ರಾಜ್ಯ ಕ್ರೀಡಾ ಸಂಸ್ಥೆಗಳು ಶಿಫಾರಸು ಮಾಡುವ ಮಟ್ಟದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯಲು ಅವಕಾಶವಿರುತ್ತದೆ. ಅರ್ಹ ಕ್ರೀಡಾಪಟುಗಳ ಶಿಫಾರಸು ಪಟ್ಟಿ ಸಲ್ಲಿಸುವ ಮುನ್ನ ಕ್ರೀಡಾ ಸಂಸ್ಥೆಗಳು ಸಮಿತಿ ರಚಿಸಬೇಕು. ಶಿಫಾರಸು ಪತ್ರದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಸಹಿ ಮಾಡಿರಬೇಕು ಹಾಗೂ ಸಮಿತಿ ಸಭೆಯ ವರದಿಯನ್ನು ಉಲ್ಲೇಖಿಸಿರಬೇಕು ಎಂಬ ನಿಯಮ ಇದ್ದರೂ, ಇದೆಲ್ಲಾ ದೊಡ್ಡ ತೊಡಕಿನ ನಿಯಮಗಳೇನೂ ಅಲ್ಲ.
ಜೊತೆಗೆ, ಏಕಲವ್ಯ ಪ್ರಶಸ್ತಿ ಮೊತ್ತವೀಗ 1 ಲಕ್ಷ ರೂ.ಗೆ ಏರಿಕೆಯಾಗಿರುವುದರಿಂದ, 50 ಸಾವಿರ ಕೈಬಿಟ್ಟರೂ, ಅಥ್ಲೀಟ್‌ಗಳು ಯೋಚನೆ ಮಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ರಾಜ್ಯ ಸರ್ಕಾರ ಪ್ರಕಟಿಸಿರುವ (ಎರಡು ವರ್ಷದ) 30 ಪ್ರಶಸ್ತಿಗಳಿಗೆ ಒಟ್ಟು 168 ಮಂದಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. 2007-08ನೇ ಸಾಲಿನ ಪ್ರಶಸ್ತಿಗೆ 111 ಮಂದಿ ಹಾಗೂ 08-09ನೇ ಸಾಲಿನ ಪ್ರಶಸ್ತಿಗೆ 57 ಮಂದಿ ಅರ್ಜಿ ಸಲ್ಲಿಸಿದ್ದರು. ಕೊನೆಗೂ ಇವರಲ್ಲಿ ಕೆಲವರು ಅರ್ಹ ಪುರಸ್ಕೃತರಿದ್ದರೆ, ಹಲವರು ವಿಜೇತರಾಗಿದ್ದಾರೆ.
ವಿವಾದಗಳು ಹೊಸದಲ್ಲ...
ಏಕಲವ್ಯ ಪ್ರಶಸ್ತಿಗಳು ವಿವಾದಕ್ಕೆ ತುತ್ತಾಗುತ್ತಿರುವುದು ಇದೇ ಮೊದಲೇನೂ ಅಲ್ಲ. 2003ರಿಂದ ನಾಲ್ಕು ವರ್ಷಗಳ ಪ್ರಶಸ್ತಿಗಳನ್ನು 2007ರಲ್ಲಿ ಒಟ್ಟಿಗೆ ವಿತರಿಸಲಾಗಿತ್ತು. ಪಂಕಜ್ ಆಡ್ವಾಣಿ ತಮಗೆ ಬಹಳ ತಡವಾಗಿ ಬಂದಿದೆ ಎಂಬ ಕಾರಣಕ್ಕೆ ಪ್ರಶಸ್ತಿ ನಿರಾಕರಿಸಿದ್ದರು. ರಾಜೀವ್‌ಗಾಂಧಿ ಖೇಲ್‌ರತ್ನ, ಅರ್ಜುನ ಪ್ರಶಸ್ತಿಗಳಿಗಿಂತ ಏಕಲವ್ಯ ದೊಡ್ಡದಲ್ಲ ಎಂದು ಅವರು ಸೆಡ್ಡು ಹೊಡೆದಿದ್ದರು. ಆದರೆ, ಇತ್ತೀಚೆಗೆ ಅವರು 5 ಲಕ್ಷ ರೂ. ವಿಶೇಷ ಪುರಸ್ಕಾರ, ನಿವೇಶನದ ಜೊತೆಗೆ ಏಕಲವ್ಯ ಪ್ರಶಸ್ತಿಯನ್ನೂ ಸದ್ದಿಲ್ಲದೆ ಪಡೆದುಕೊಂಡಿದ್ದು ಬೇರೆ ಮಾತು.
ಹಣದ ಆಸೆಗೆ ಪರ ರಾಜ್ಯ ಪ್ರತಿನಿಧಿಸುವ ಅಥ್ಲೀಟ್‌ಗಳಿಗೆ ಏಕಲವ್ಯ ನೀಡಬೇಕೇ ಎಂಬಿತ್ಯಾದಿ ವಿವಾದಗಳೂ ಎದ್ದಿದ್ದವು. ಈ ಹಿಂದೆ ಸಾಕಷ್ಟು ಮಂದಿ ಅಥ್ಲೀಟ್‌ಗಳು ಪ್ರಶಸ್ತಿ ವಂಚಿತರಾದ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡ, ಪ್ರತಿಭಟಿಸಿದ ನಿದರ್ಶನಗಳಿವೆ.
ರಾಷ್ಟ್ರ ಮಟ್ಟದಲ್ಲಿ...
ಕೆಲವು ವರ್ಷಗಳ ಹಿಂದೆ ಕೇರಳದ ಅಥ್ಲೀಟ್ ಬೀನಾಮೊಳ್ ಹೆಸರನ್ನು ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದಾಗ ಶೂಟರ್ ಅಂಜಲಿ ವೇದಪಾಠಕ್ ಭಾಗ್ವತ್ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರು. ಕೊನೆಗೆ ಇಬ್ಬರಿಗೂ ಪ್ರಶಸ್ತಿ ಹಂಚಲಾಯಿತು. ಸತತ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೊಮ್ ನಿರಂತರ ಹೋರಾಟದ ಬಳಿಕ ಕೊನೆಗೂ ಈ ವರ್ಷ ಖೇಲ್‌ರತ್ನ ಪುರಸ್ಕಾರ ಪಡೆದರು. ಕಳೆದ ವರ್ಷ ಆಯ್ಕೆ ಸಮಿತಿಯಲ್ಲಿದ್ದವರು ಮೇರಿಕೋಮ್ ಯಾರು, ಮಹಿಳೆಯರೂ ಬಾಕ್ಸಿಂಗ್ ಮಾಡುತ್ತಾರಾ ಎಂದು ಪ್ರಶ್ನಿಸಿ ಅವಮಾನಿಸಿದ್ದರು.
ಈ ವರ್ಷ ಕ್ರಿಕೆಟಿಗರಾದ ಎಂಎಸ್ ಧೋನಿ ಮತ್ತು ಹರ್ಭಜನ್ ಸಿಂಗ್ ಪದ್ಮ ಪ್ರಶಸ್ತಿ ಸಮಾರಂಭಕ್ಕೆ ಗೈರುಹಾಜರಾಗುವ ಮೂಲಕ ಪದ್ಮಶ್ರೀ ಪ್ರಶಸ್ತಿಗೆ ಅಗೌರವ ತೋರಿದ್ದರು. ಸ್ವಾರಸ್ಯದ ಸಂಗತಿಯೆಂದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪದ್ಮಶ್ರೀ ಪ್ರಶಸ್ತಿಗೆ ಹರ್ಭಜನ್ ಹೆಸರನ್ನು ಶಿಫಾರಸು ಮಾಡಿರಲೇ ಇಲ್ಲ. ಬದಲಿಗೆ ವಿವಿಎಸ್ ಲಕ್ಷ್ಮಣ್ ಹೆಸರು ಶಿಫಾರಸು ಮಾಡಲಾಗಿತ್ತು. ಆದರೆ, ಪ್ರಶಸ್ತಿ ಬಂದಿದ್ದು ಪಂಜಾಬ್‌ನ ಹರ್ಭಜನ್‌ಗೆ. ಇದಕ್ಕೆ ಕಾರಣವನ್ನು ಪಂಜಾಬ್ ಮೂಲದ ಕ್ರೀಡಾ ಸಚಿವ ಎಂಎಸ್ ಗಿಲ್‌ರನ್ನೇ ಕೇಳಬೇಕು.
ಉಪಸಂಹಾರ...
ಯಾವಾಗಲೂ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಆದರೆ, ಕನಿಷ್ಠ ಪಕ್ಷ ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದುದು ಅಧಿಕಾರದಲ್ಲಿರುವವರ ಕರ್ತವ್ಯ. ಆದರೆ, ವಿವಿಧ ಒತ್ತಡಗಳು, ಆಮಿಷಗಳು, ಪ್ರಭಾವಗಳು ಹಾಗೂ ಆಪ್ತರ ಚೌಕಾಸಿಗೆ ಗಂಟುಬಿದ್ದು ಮಂತ್ರಿಗಳಿಗೂ ಕೈಕಟ್ಟುವಂತಾದರೆ....
ಹರ ಕೊಲ್ಲಲ್ ಪರ ಕಾಯ್ವನೇ?
Subscribe to:
Post Comments (Atom)
No comments:
Post a Comment