Wednesday, December 23, 2009
ಮರಳಿದ ವೈಭವದ ದಿನಗಳು
ಕೆ. ಸನತ್‌ಕುಮಾರ್ ತರಬೇತಿಯಲ್ಲಿ ಕರ್ನಾಟಕ ರಣಜಿ ತಂಡ ಅದ್ಭುತ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಹಾಕಿದೆ.
ಕರ್ನಾಟಕ ಕ್ರಿಕೆಟ್‌ನ ಗತವೈಭವದ ದಿನಗಳು ಮರಳುತ್ತಿವೆ. 76ನೇ ರಣಜಿ ಟ್ರೋಫಿಯಲ್ಲಿ ಸೂಪರ್‌ಲೀಗ್ ಹಂತ ಮುಕ್ತಾಯದ ಬಳಿಕ ರಾಷ್ಟ್ರದ ಉಳಿದೆಲ್ಲಾ ತಂಡಗಳಿಗಿಂತ ಕರ್ನಾಟಕವೇ ಸರ್ವಾಂಗೀಣ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಲೀಗ್‌ನಲ್ಲಿ 4 ಜಯ, 2ರಲ್ಲಿ ಇನಿಂಗ್ಸ್ ಮುನ್ನಡೆ ಅಂಕ ಗಳಿಸಿರುವ ರಾಜ್ಯ ತಂಡ `ಬಿ' ಗುಂಪಿನಿಂದ ಅಗ್ರ ತಂಡವಾಗಿ ನಾಕೌಟ್ ಪ್ರವೇಶಿಸಿದೆ.
ಕ್ರಿಕೆಟ್‌ನಲ್ಲಿ ಯಾವಾಗಲೂ ಯಶಸ್ಸಿನ ಶ್ರೇಯ ಪಡೆಯುವವರು ಆಟಗಾರರು. ವೈಫಲ್ಯಕ್ಕೆ ತಲೆ ಕೊಡುವ ವರು ತರಬೇತುದಾರರು. ಆದರೆ, ಹಾಲಿ ಕರ್ನಾಟಕ ತಂಡದ ಅಪಾರವಾದ ಯಶಸ್ಸಿಗೆ ಕೋಚ್ ಕೆ. ಸನತ್ ಕುಮಾರ್ ಅವರನ್ನು ಪ್ರಶಂಸಿಸಲೇಬೇಕು. ಸನತ್ ಚುಕ್ಕಾಣಿ ಹಿಡಿದೊಡನೆ ತಂಡದ ಸ್ವರೂಪವೇ ಬದಲಾಗಿದೆ. ಬ್ಯಾಟ್ಸ್‌ಮನ್‌ಗಳು ಶತಕದ ಮೇಲೆ ಶತಕ ಬಾರಿಸುತ್ತಿದ್ದಾರೆ. ಬೌಲರ್‌ಗಳು ಬೊಗಸೆ ತುಂಬಾ ವಿಕೆಟ್ ಕಬಳಿಸುತ್ತಿದ್ದಾರೆ. ಟೂರ್ನಿ ಆರಂಭಕ್ಕೆ ಮುನ್ನ ಹತ್ತರಲ್ಲಿ ಹನ್ನೊಂದು ಎಂಬಂತಿದ್ದ ತಂಡ ಈಗ ಪ್ರಶಸ್ತಿಗೆ ಫೇವರಿಟ್‌ಗಳ ಯಾದಿಯಲ್ಲಿ ಮುಂಚೂಣಿಯಲ್ಲಿದೆ.
ಕರ್ನಾಟಕ ತಂಡದ ಈ ಯಶೋಪಯಣದ ಬಗ್ಗೆ ಸನತ್ ಕುಮಾರ್ ಟಿಒಐ ಜೊತೆ ಮಾತನಾಡಿದ್ದಾರೆ.
ಮರಳಿದ ವೈಭವದ ದಿನಗಳು
ಯುವ ತಂಡ ಅದ್ಭುತವಾಗಿ ಆಡುತ್ತಿದೆ. ಈ ಆಟಗಾರರು ಯಾರೂ ನನಗೆ ಹೊಸಬರಲ್ಲ. ವಿವಿಧ ವಯೋಮಿತಿಯಲ್ಲಿ ಆಡುವಾಗ ನನ್ನ ಸಂಪರ್ಕಕ್ಕೆ ಬಂದವರೇ. ಇವರೆಲ್ಲರೂ ಕಿರಿಯರ ಹಂತದಲ್ಲಿ ಭಾರೀ ಯಶಸ್ವಿಯಾಗಿ ರಣಜಿ ಮಟ್ಟಕ್ಕೆ ಆಯ್ಕೆಯಾದವರು. ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದಾರೆ.
ನಾನು ಫಲಾನುಭವಿ ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್ ಕೋಚ್ ಆಗಿದ್ದ ಅವಧಿಯಲ್ಲಿ ಕೆಲವು ಕಠಿಣ ನಿರ್ಧಾರ ತೆಗೆದುಕೊಂಡು ಯುವ ತಂಡ ಕಟ್ಟಲು ಮುಂದಾದರು. ಆ ಪ್ರಕ್ರಿಯೆ ಈಗ ಫಲ ನೀಡುತ್ತಿದೆ. ಫಲ ನೀಡುವ ಸಂದರ್ಭದಲ್ಲಿ ಕೋಚ್ ಆಗಿರುವುದು ನನ್ನ ಅದೃಷ್ಟ.
ಪಾತ್ರಕ್ಕೆ ತಕ್ಕಂತೆ ಸೂತ್ರ ನಾವು ಆಟಗಾರರಿಗೆ ಅವರವರ ಪಾತ್ರವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಆಟಗಾರರು ಪಾತ್ರಕ್ಕೆ ತಕ್ಕಂತೆ ನ್ಯಾಯ ಒದಗಿಸುತ್ತಿದ್ದಾರೆ. ಪ್ರತೀ ವಿಭಾಗಗಳಲ್ಲಿ ಒಬ್ಬೊಬ್ಬ ನಾಯಕನನ್ನು ಗುರುತಿಸಿದ್ದೇವೆ. ವೇಗದ ಬೌಲರ್‌ಗಳಿಗೆ ವಿನಯ್ ಕುಮಾರ್ ನಾಯಕ. ಅವರು ಸದಾ ಕಾಲ ಹೊಸಬರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಸ್ಪಿನ್ ಪಡೆಗೆ ಸುನಿಲ್ ಜೋಷಿ ನೇತೃತ್ವ ಇದೆ. ಬ್ಯಾಟ್ಸ್‌ಮನ್‌ಗಳ ಸಮೂಹಕ್ಕೆ ರಾಬಿನ್ ಉತ್ತಪ್ಪ ನಾಯಕ. ಅವರು ಮುಕ್ತ ಮನಸ್ಸಿನಿಂದ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡುತ್ತಾರೆ.
ಯಶಸ್ಸಿಗೆ ದ್ರಾವಿಡ್ ಮುನ್ನುಡಿ ಬರೆದರು
ಈ ಋತುವಿನ ಯಶಸ್ಸಿಗೆ ಉತ್ತಮ ಆರಂಭವೂ ಕಾರಣ. ಅದಕ್ಕಾಗಿ ರಾಹುಲ್ ದ್ರಾವಿಡ್‌ಗೆ ಥ್ಯಾಂಕ್ಸ್ ಹೇಳಬೇಕು. ಮೊದಲ 2 ಪಂದ್ಯಗಳಲ್ಲಿ ಅವರು ಆಡಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ದ್ರಾವಿಡ್ ರಾಷ್ಟ್ರೀಯ ತಂಡದ ಸೇವೆಯಲ್ಲಿದ್ದ ಸಂದರ್ಭದಲ್ಲೂ ನಿತ್ಯ ನಮ್ಮನ್ನು ಸಂಪರ್ಕಿಸಿ ತಂಡದ ಆಗುಹೋಗು ತಿಳಿದುಕೊಳ್ಳುತ್ತಿ ದ್ದರು. ಅವರ ಮುತುವರ್ಜಿ ಯುವ ಆಟಗಾರರ ಯಶಸ್ಸಿಗೆ ಪ್ರೇರಣೆಯಾಗಿದೆ.
ದೊಡ್ಡ ಗುರಿಯ ದಿಕ್ಕಿನಲ್ಲಿ ಪಯಣ
ಒಂದು ಕಾಲದಲ್ಲಿ ಕರ್ನಾಟಕದ ಆರೇಳು ಆಟಗಾರರು ಭಾರತ ತಂಡದಲ್ಲಿದ್ದರು. ಮತ್ತೆ ಅಂಥ ಕಾಲ ಬರಬೇಕೆಂಬುದು ನಮ್ಮ ಆಸೆ. ರಣಜಿ ಋತುವಿನ ಆರಂಭದಲ್ಲೇ ನಾನು ಎಲ್ಲಾ ಯುವಕರಿಗೆ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿಬಿಟ್ಟಿದ್ದೇನೆ. ಕೇವಲ ರಣಜಿ ಆಡುವುದಕ್ಕೆ ತೃಪ್ತಿ ಹೊಂದಬೇಡಿ. ಮುಂದಿನ ಹಂತಕ್ಕೆ ತೆರಳುವುದು ನಿಮ್ಮೆಲ್ಲರ ಗುರಿಯಾಗಬೇಕು ಎಂದು ಎಲ್ಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಾವು ಪ್ರತೀ ಬ್ಯಾಟ್ಸ್‌ಮನ್‌ಗಳಿಗೆ ನಿರ್ದಿಷ್ಟ ಗುರಿ ನಿಗದಿಪಡಿಸಿದ್ದೇವೆ. ಉದಾಹರಣೆಗೆ, ಕನಿಷ್ಠ 250 ರನ್ ಬಾರಿಸುವುದು ಅಥವಾ 30 ವಿಕೆಟ್ ಕಬಳಿಸುವುದು ಇತ್ಯಾದಿ.
ಕೆಪಿಎಲ್-ರಣಜಿ ತರಬೇತಿ ಬೇರೆಬೇರೆ
ಕೆಪಿಎಲ್ ತಂಡದ ತರಬೇತಿಗೂ, ರಣಜಿ ತಂಡದ ತರಬೇತಿಗೂ ವ್ಯತ್ಯಾಸವಿದೆ. ಕೆಪಿಎಲ್‌ಗೆ ಮುನ್ನ ಮಂಗಳೂರು ಯುನೈಟೆಡ್ ತಂಡವನ್ನು ಸಜ್ಜುಗೊಳಿಸಲು ಹೆಚ್ಚು ಕಾಲಾವಕಾಶವೇ ಇರಲಿಲ್ಲ. ಎಲ್ಲವೂ ತರಾತುರಿಯಲ್ಲಿ ನಡೆಯಿತು. ಆದರೆ, ರಣಜಿಯಲ್ಲಿ ಹಾಗಿಲ್ಲ. ಈ ತಂಡದಲ್ಲಿರುವ ಎಲ್ಲರೂ ಜೂನಿಯರ್ ಕ್ರಿಕೆಟ್ ಹಂತದಿಂದ ನನಗೆ ಪರಿಚಯವಿರುವವರು. ಪ್ರತಿಯೊಬ್ಬರೊಂದಿಗೆ ನನಗೆ ಆತ್ಮೀಯ ಸಂಬಂಧವಿದೆ. ಋತುವಿಗೆ ಸಜ್ಜಾಗುವುದಕ್ಕೂ ಹೆಚ್ಚು ಸಮಯಾವಕಾಶ ಇತ್ತು.
ಅಲ್ರೌಂಡ್ ತರಬೇತಿ ವಿಧಾನ ತರಬೇತಿ ವಿಧಾನವೆಂದಮೇಲೆ ಕೌಶಲ್ಯವರ್ಧನೆ, ಫಿಟ್‌ನೆಸ್ ಮತ್ತು ಮಾನಸಿಕ ತರಬೇತಿ ಎಲ್ಲವೂ ಇರುತ್ತದೆ. ಕೌಶಲ್ಯದ ವಿಷಯದಲ್ಲಿ ಆಗಾಗ ಮಾರ್ಗದರ್ಶನ ನೀಡಬೇಕಾಗುತ್ತದೆ. ಫಿಟ್‌ನೆಸ್ ಬಗ್ಗೆ ಸದಾಕಾಲ ಮುತುವರ್ಜಿ ಇರಬೇಕಾಗುತ್ತದೆ. ಆದರೆ, ಯಾವುದೇ ಪಂದ್ಯ ಹತ್ತಿರ ಬಂದಾಗ ಆಟಗಾರರು ಮಾನಸಿಕವಾಗಿ ಪಂದ್ಯದ ಸವಾಲಿಗೆ ಸನ್ನದ್ಧರಾಗುವಂತೆ ತರಬೇತಿ ನೀಡಬೇಕಾಗುತ್ತದೆ. ಪಂದ್ಯಕ್ಕೆ ಒಂದೆರಡು ದಿನ ಇರುವಾಗ ತಾಂತ್ರಿಕತೆ ಬಗ್ಗೆ ಒತ್ತು ನೀಡಿ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ.
ಆಯ್ಕೆಗಾರರಿಗೆ ಥ್ಯಾಂಕ್ಸ್ ಕಳೆದ ಋತುವಿನಲ್ಲಿ ಮನೀಶ್ ಪಾಂಡೆ ಮತ್ತು ಗಣೇಶ್ ಸತೀಶ್ ರಣಜಿ ಕ್ರಿಕೆಟ್‌ಗೆ ಹೊಸಬರಾಗಿದ್ದರು. ಆದರೆ, ಈ ಬಾರಿ ಅವರು ಈ ಹಂತದ ಒತ್ತಡಕ್ಕೆ ಹೊಂದಿಕೊಂಡಿದ್ದಾರೆ. ಸಹಜವಾಗಿಯೇ ಅವರ ಆತ್ಮವಿಶ್ವಾಸ ಬ್ಯಾಟಿಂಗ್ ಯಶಸ್ಸಿನಲ್ಲಿ ಪ್ರತಿಫಲಿಸುತ್ತಿದೆ. ಈ ಯುವಕ ರಲ್ಲಿ ಅಪಾರ ಸಾಮರ್ಥ್ಯವಿದೆ. ಅದಕ್ಕೆ ಪೂರಕವಾಗಿ ಅವರನ್ನು ಬೆಂಬಲಿಸಬೇಕಷ್ಟೇ. ಹೊಸ ಆಟಗಾರರಿಗೆ ಹೆಚ್ಚು ಪಂದ್ಯಗಳಲ್ಲಿ ಆಡಲು ಅವಕಾಶ ಮಾಡಿಕೊಡ ಬೇಕು ಎಂದು ನಾನು ಸಹಾ ಪ್ರತಿಪಾದಿಸುತ್ತೇನೆ. ನನ್ನ ಅಭಿಪ್ರಾಯವನ್ನು ಬೆಂಬಲಿಸಿದ್ದಕ್ಕಾಗಿ ಆಯ್ಕೆಗಾರರಿಗೆ ನಾನು ಕೃತಜ್ಞತೆ ಹೇಳಬಯಸುತ್ತೇನೆ.
ಉತ್ತಪ್ಪ ನಾಯಕತ್ವದಲ್ಲಿ ಪಳಗುತ್ತಿದ್ದಾರೆ ರಾಬಿನ್ ಉತ್ತಪ್ಪ ನಾಯಕರಾಗಿ ಬಹಳ ಮಾಗಿದ್ದಾರೆ. ಕಳೆದ ಋತುವಿನಲ್ಲಿ ಅವರಿಗೆ ತಂಡ ಮುನ್ನಡೆಸಿ ಅನುಭವ ಇರಲಿಲ್ಲ. ನಾಯಕನಾದವನು ಅನುಭವದಿಂದ ಮಾತ್ರ ಪಕ್ವಗೊಳ್ಳಲು ಸಾಧ್ಯ. ಸದ್ಯ ಅವರು ಹೊಣೆಗಾರಿಕೆ ಯನ್ನು ಆಸ್ವಾದಿಸುತ್ತಿದ್ದಾರೆ.
ಸಹಾಯಕ ಸಿಬ್ಬಂದಿಯ ಕೊಡುಗೆ ದೊಡ್ಡದು ತಂಡದ ಯಶಸ್ಸಿನಲ್ಲಿ ನನ್ನ ಸಹಾಯಕ ಸಿಬ್ಬಂದಿಯ ಪಾತ್ರವೂ ಮುಖ್ಯವಾದುದು. ಸಹಾಯಕ ಕೋಚ್ ಸೋಮಶೇಖರ ಶಿರಗುಪ್ಪಿ ಒಂದು ಕ್ಷಣವೂ ಸುಮ್ಮನೇ ಕೂರುವ ಜಾಯಮಾನದವರಲ್ಲ. ಅವರು ಸದಾ ಕಾಲ ಆಟಗಾರರನ್ನು ಚಟುವಟಿಕೆಯಿಂದಿರಿಸುತ್ತಾರೆ.ಫಿಸಿಯೋ ಮುತ್ತುಕುಮಾರ್, ಟ್ರೈನರ್ ರಮಾಕಾಂತ್ ಮೊದಲಾದವರ ಕೊಡುಗೆಯನ್ನೂ ನೆನೆಯಲೇ ಬೇಕು.
ಪ್ರತೀ ಅವಧಿಯನ್ನೂ ಗೆಲ್ಲುವ ರಣತಂತ್ರ ನಾವು ಒಂದೊಂದು ಪಂದ್ಯದ ಬಗ್ಗೆ ಮಾತ್ರ ಗಮನ ಹರಿಸುತ್ತ ಮುಂದೆ ಸಾಗುತ್ತೇವೆ. ಇದೊಂದು ಪ್ರಕ್ರಿಯೆ. ನಮ್ಮ ಅಂತಿಮ ಉದ್ದೇಶ ಗೆಲ್ಲುವುದಾಗಿರುತ್ತದೆ. ಪಂದ್ಯದ ಅಷ್ಟೂ ದಿನ ಒಂದೊಂದು ಅವಧಿಯಲ್ಲೂ ಗೆಲುವು ಸಾಧಿಸುತ್ತಾ ಹೋಗುವುದು ನಮ್ಮ ಗುರಿಯಾಗಿರುತ್ತದೆ. ಅಂತಿಮ ಫಲಿತಾಂಶ ಆಗ ತಾನೇ ತಾನಾಗಿ ನಿರ್ಧಾರವಾಗುತ್ತದೆ.
ನಮ್ಮ ಶಕ್ತಿಗೆ ತಕ್ಕಂತೆ ಆಡುತ್ತೇವೆ ಕ್ವಾರ್ಟರ್‌ಫೈನಲ್ ಎದುರಾಳಿ ಪಂಜಾಬ್ ಬಗ್ಗೆ ವಿಶೇಷ ರಣತಂತ್ರವೇನಿಲ್ಲ. ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ಅಷ್ಟಕ್ಕೂ ನಾವು ನಮ್ಮ ಶಕ್ತಿಗೆ ಅನುಸಾರವಾಗಿ ಆಡಲು ಬಯಸುತ್ತೇವೆ. ಎದುರಾಳಿಯ ಬಲ ಅಥವಾ ದೌರ್ಬಲ್ಯಕ್ಕಿಂತ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ, ಸಕಾರಾತ್ಮಕ ಫಲಿತಾಂಶ ಪಡೆಯಬಹುದು ಎನ್ನುವುದು ನನ್ನ ನಂಬಿಕೆ.
ವಿನಯ್‌ಕುಮಾರ್ ಆಡುತ್ತಾರೆ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಮುನ್ನ ವಿನಯ್‌ಕುಮಾರ್‌ಗೆ ಸಣ್ಣ ತರಚುಗಾಯವಾಗಿತ್ತು. ಅದಕ್ಕೆ ವಿಶ್ರಾಂತಿಯ ಅಗತ್ಯವೇನೂ ಇರಲಿಲ್ಲ. ಆದರೂ, ಅದಾಗಲೇ ನಾಕೌಟ್ ಪ್ರವೇಶಿಸಿದ್ದ ಕಾರಣ, ಅಷ್ಟೇನೂ ಮಹತ್ವವಿಲ್ಲದ ಆ ಪಂದ್ಯದಲ್ಲಿ ಅವರನ್ನು ಆಡಿಸಿ ರಿಸ್ಕ್ ತೆಗೆದುಕೊಳ್ಳಲು ನಾವು ಬಯಸಲಿಲ್ಲ. ವಿನಯ್ ಗೈರಿನಲ್ಲೂ ತಂಡದ ಯುವ ಬೌಲರ್‌ಗಳು ಸೌರಾಷ್ಟ್ರವನ್ನು ಎರಡು ಬಾರಿ ಆಲೌಟ್ ಮಾಡಿದ್ದು ಅಮೋಘವಾಗಿತ್ತು. ವಿನಯ್ ಪಂಜಾಬ್ ವಿರುದ್ಧ ಆಡಲಿದ್ದಾರೆ.
ಮನೀಶ್ ಪಾಂಡೆ ಟೀಮ್ ಇಂಡಿಯಾ ಸೇರುವ ದಿನ ದೂರವಿಲ್ಲ ಮನೀಶ್ ಪಾಂಡೆಗೆ ಎಲ್ಲರಿಗಿಂತ ಮೊದಲು ರಾಷ್ಟ್ರೀಯ ತಂಡಕ್ಕೆ ಕರೆ ಬರಬಹುದು ಎನ್ನುವುದು ನನ್ನ ನಿರೀಕ್ಷೆ. ಅವರು ಅಸಾಧಾರಣ ಪ್ರತಿಭೆ. ಈಗಾಗಲೇ ಐಪಿಎಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಸಾಮರ್ಥ್ಯ ನಿರೂಪಿಸಿದ್ದಾರೆ. ಅಭಿಮನ್ಯು ಮಿಥುನ್ ಸಹ ಅತ್ಯುತ್ತಮ ವೇಗದ ಬೌಲರ್. ಅವರು ನಿರಂತರವಾಗಿ 140ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಜೊತೆಗೆ ವಿನಯ್‌ಕುಮಾರ್ ಕಳೆದ ಹಲವಾರು ಋತುಗಳಿಂದ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಇದುವರೆಗೆ ಗುತ್ತಿಗೆ ಆಟಗಾರರ ಪಟ್ಟಿಗೂ ಪರಿಗಣಿಸದಿರುವುದರಿಂದ ನನಗೆ ಆಘಾತವಾಗಿದೆ.
ವೈಯಕ್ತಿಕ ನಾನು ಬೆಂಗಳೂರು ಕ್ರಿಕೆಟ್ ವಲಯಕ್ಕೆ ಸ್ವಲ್ಪ ತಡವಾಗಿ ಆಗಮಿಸಿದೆ. ನಾನು ಹೆಚ್ಚು ಸಮಯವನ್ನು ಮೈಸೂರು - ಮಂಗಳೂರಿನಲ್ಲೇ ಕಳೆದುಬಿಟ್ಟೆ. ಬೆಂಗಳೂರಿಗೆ ಆಗಮಿಸಿದಾಗ ನನಗೆ 23-24 ವರ್ಷ. ಆಗ ಸ್ವಲ್ಪ ತಡವಾಗಿತ್ತು. ಆದರೂ, 1986ರಲ್ಲಿ ನಾನು ರಣಜಿ ಪದಾರ್ಪಣೆ ಮಾಡಿದೆ. 1991ರಲ್ಲಿ ನಿವೃತ್ತನಾದೆ. ನನಗೆ ವೃತ್ತಿಜೀವನದ ಬಗ್ಗೆ ಯಾವುದೇ ವಿಷಾದವಿಲ್ಲ.
ತರಬೇತುದಾರನ ಜೀವನ ತರಬೇತುದಾರನಾಗಿ ನನ್ನ ವೃತ್ತಿಜೀವನ ಆರಂಭವಾಗಿದ್ದು 1992ರಲ್ಲಿ. ಮೊದಲ ಬಾರಿ ನಾನು 1993ರಲ್ಲಿ 13-ವಯೋಮಿತಿ ರಾಜ್ಯ ತಂಡದ ಕೋಚ್ ಆಗುವ ಅವಕಾಶ ಪಡೆದಾಗ, ದಕ್ಷಿಣ ವಲಯ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಮರಳಿದ್ದೆವು. ಈವರೆಗೆ ನಾನು ಎಲ್ಲಾ ವಯೋಮಿತಿ ತಂಡಗಳಿಗೆ ತರಬೇತಿ ನೀಡಿದ್ದೇನೆ. 2004ರಿಂದ 07ರ ಅವಧಿಯಲ್ಲಿ ಅಸ್ಸಾಂ ರಣಜಿ ತಂಡಕ್ಕೆ ಕೋಚ್ ಆಗಿದ್ದೆ.
ಅಪ್ಪಣ್ಣ ಶೈಲಿಯಲ್ಲಿ ದೋಷವಿಲ್ಲ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಕೆಪಿ ಅಪ್ಪಣ್ಣ ಶೈಲಿ ಬಗ್ಗೆ ಅಂಪೈರ್‌ಗಳು ಅನುಮಾನ ವ್ಯಕ್ತಪಡಿಸಿದಾಗ ನನಗೆ ಆಶ್ಚರ್ಯವಾಯಿತು. ಅಪ್ಪಣ್ಣ ಶೈಲಿ ಅನುಮಾನ ಪಡುವಂತಿಲ್ಲ ಎನ್ನುವುದು ನನ್ನ ನಂಬಿಕೆ. ಅಷ್ಟಕ್ಕೂ ಹೇಳಬೇಕೆಂದರೆ, ಸೌರಾಷ್ಟ್ರದ ಒಂದಿಬ್ಬರು ಬೌಲರ್‌ಗಳು ಅಕ್ಷರಶಃ ಎಸೆಯುತ್ತಿದ್ದರು. ಆದರೆ, ಅವರನ್ನು ಅಂಪೈರ್‌ಗಳು ಗಮನಿಸಲಿಲ್ಲ.
ನೈನನ್‌ಗೂ ಅವಕಾಶ ಸಿಗಲಿದೆ ರ್ಯಾನ್ ನೈನನ್‌ಗೆ ಈ ಬಾರಿ ಅವಕಾಶ ಮಾಡಿಕೊಡಲು ಸಾಧ್ಯವಾಗಿಲ್ಲ. ಆದರೆ, ಪ್ರತಿಯೊಬ್ಬರಿಗೂ ಅವರವರ ಅವಕಾಶ ಬಂದೇ ಬರುತ್ತದೆ. ನಯನ್ ಮೊಂಗಿಯಾ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತ ರಾಗಲು ಸಜ್ಜಾಗಿದ್ದ ಸಂದರ್ಭದಲ್ಲಿ ಅವರಿಗೆ ಭಾರತ ತಂಡದಲ್ಲಿ ಅವಕಾಶ ದೊರೆಯಿತು. ಆನಂತರ ಅವರು ದೀರ್ಘ ಕಾಲ ಆಡಿದರು. ಅವಕಾಶ ಯಾವಾಗ ಹುಡುಕಿಕೊಂಡು ಬರುತ್ತದೆನ್ನುವುದು ಗೊತ್ತಾಗುವುದಿಲ್ಲ.
Subscribe to:
Post Comments (Atom)
No comments:
Post a Comment