Tuesday, December 15, 2009

ಬೇಲಿ ಹಾರುವ ಬದುಕು



ಗೆದ್ದೇ ಗೆಲ್ಲುವೆ ಒಂದು ದಿನ,
ಗೆಲ್ಲಲೇ ಬೇಕು ಒಳ್ಳೇತನ...
ಬಹುಶಃ ಭಾರತೀಯ ಮನಸ್ಸುಗಳಿಗೆ ಮಾತ್ರ ಈ ರೀತಿ ಯೋಚಿಸಲು ಸಾಧ್ಯ.
ಭಾರತದಲ್ಲಿನ ಕ್ರೀಡಾ ವ್ಯವಸ್ಥೆಯಲ್ಲಿ ಜಂಟಲ್‌ಮನ್‌ಗಳು ಮಾತ್ರವೇ ಯಶಸ್ವಿಯಾಗುತ್ತಾರೆ. ಅಡ್ಡಹಾದಿ ತುಳಿದವರು ದಿಕ್ಕು ತಪ್ಪುತ್ತಾರೆ. ಸಚಿನ್‌ ತೆಂಡುಲ್ಕರ್‌ ಮತ್ತು ವಿನೋದ್‌ ಕಾಂಬ್ಳಿ ನಡುವಿನ ವ್ಯತ್ಯಾಸವೂ ಇದೇ ಆಗಿದೆ.
ಸುನಿಲ್‌ ಗಾವಸ್ಕರ್‌, ಕಪಿಲ್‌ ದೇವ್‌, ಜಿಆರ್‌ ವಿಶ್ವನಾಥ್‌ರಿಂದ, ವಿಶ್ವನಾಥನ್‌ ಆನಂದ್‌ವರೆಗೆ, ಧನರಾಜ್‌ ಪಿಳ್ಳೆ, ಗೀತ್‌ ಸೇಥಿರಿಂದ ಪ್ರಕಾಶ್‌ ಪಡುಕೋಣೆವರೆಗೆ ಭಾರತದ ಕ್ರೀಡಾ ದಿಗ್ಗಜರೆಲ್ಲರೂ ಮೇರು ವ್ಯಕ್ತಿಗಳೂ ಹೌದು. ಕ್ರೀಡೆ ಹಾಗೂ ವೈಯಕ್ತಿಕ ಜೀವನದಲ್ಲಿ ಪರಿಶುದ್ಧತೆ ಕಾಪಾಡಿಕೊಂಡವರು.
ಪ್ರಕಾಶ್‌ ಪಡುಕೋಣೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ದಿನಗಳಲ್ಲಿ ಒಂದಲ್ಲ, ಎರಡಲ್ಲ, ಆರು ವರ್ಷ ಚಲನಚಿತ್ರಗಳನ್ನೇ ನೋಡಿರಲಿಲ್ಲವಂತೆ. ನಿತ್ಯ ಮುಂಜಾನೆ 5.30ಕ್ಕೆ ಎದ್ದು ಸುಮಾರು 10 ಕಿ.ಮೀ. ಓಟ, ಮನೆಗೆ ಮರಳಿ ತಿಂಡಿ ತಿಂದು ಸ್ವಲ್ಪ ವ್ಯಾಯಾಮದ ಬಳಿಕ ಎರಡೂವರೆ ಗಂಟೆ ಕಾಲ ಬ್ಯಾಡಿಂಟನ್‌ ಅಭ್ಯಾಸ. ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಊಟ ಮಾಡಿ ಎರಡೂವರೆ ಗಂಟೆ ಕಾಲ ನಿದ್ರೆ. ಮತ್ತೆ ಎರಡೂವರೆಗೆ ಎದ್ದು ಮೂರರವರೆಗೆ ಕಠಿಣ ವ್ಯಾಯಾಮ ಮಾಡಿ, ನಾಲ್ಕರಿಂದ ಏಳರವರೆಗೆ ಬ್ಯಾಡಿಂಟನ್‌ ಅಭ್ಯಾಸ ಮಾಡಿ, ಮತ್ತೊಂದರ್ಧ ಗಂಟೆ ದೇಹವನ್ನು ಸಡಿಲಗೊಳಿಸಲು ಸರಳ ವ್ಯಾಯಾಮ ಮಾಡಿ, ನಂತರ ಮನೆಗೆ ಮರಳಿ ರಾತ್ರಿ 8.30ಕ್ಕೆಲ್ಲಾ ನೆಮ್ಮದಿಯ ನಿದ್ರೆ ಮಾಡುತ್ತಿದ್ದರು. ಅವರು ಸತತ ಆರು ವರ್ಷ, ವಾರದ ಏಳೂ ದಿನ ಇದೇ ದಿನಚರಿ ಪಾಲಿಸಿಕೊಂಡು ಬಂದಿದ್ದರು ಎಂದು ಗೀತ್‌ ಸೇಥಿ ತಮ್ಮ `ಯಶಸ್ಸು ವರ್ಸಸ್‌ ಆನಂದ' ಪುಸ್ತಕದಲ್ಲಿ ಬರೆಯುತ್ತಾರೆ. ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡುಲ್ಕರ್‌ ಇವರೆಲ್ಲಾ ಇಂಥ ಶಿಸ್ತಿನ ಜೀವನ ರೂಪಿಸಿಕೊಂಡೇ ಎತ್ತರಕ್ಕೇರಿದವರು.
ಭಾರತ ಹಾಗೂ ವಿಶ್ವದ ಮಹಾನ್‌ ಕ್ರೀಡಾಪಟುಗಳ ನಡುವಿನ ದೊಡ್ಡ ವ್ಯತ್ಯಾಸವೂ ಇದೇ ಆಗಿದೆ.
ಕಳೆದ ಹದಿನೈದು ದಿನಗಳಿಂದ ಕ್ರೀಡಾ ವಲಯದಲ್ಲಿ ಬರೀ ಟೈಗರ್‌ ವುಡ್ಸ್‌ ಚರ್ಚೆ. ಬಹುಶಃ ಟೈಗರ್‌ ತಮ್ಮ ವೃತ್ತಿಜೀವನದಲ್ಲಿ ಪಡೆದ ಎಷ್ಟೆಲ್ಲಾ ಪ್ರಚಾರಕ್ಕಿಂತ ಹೆಚ್ಚಿನ ಅಪ-ಪ್ರಚಾರವನ್ನು ಕಳೆದ ಹದಿನೈದು ದಿನಗಳಲ್ಲಿ ಪಡೆದಿದ್ದಾರೆ. ಸೆಲೆಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ಮಾಧ್ಯಮಗಳಿಗಿರುವ ಕೆಟ್ಟ ಕುತೂಹಲದಿಂದಲೇ ಬಹುಶಃ ಹೀಗಾಗಿದೆ. ಅಷ್ಟಕ್ಕೂ ಟೈಗರ್‌ ವುಡ್ಸ್‌ ಶ್ರೀರಾಮಚಂದ್ರನಂತೆ ಏಕಪತ್ನಿ ವ್ರತಸ್ಥ ಆಗಿರಲಿ ಎಂದು ಬಯಸುವುದಕ್ಕೆ ನಾವ್ಯಾರು? ಕ್ರೀಡಾಪಟು ಸಂತನಂತೆ ಬಾಳಬೇಕೆಂದು ಯಾವ ಕಾನೂನಿದೆ. ಅವರವರ ಬಯಕೆ, ಅವರವರ ಬದುಕು.
ಗಾಲ್ಫ್‌ ರಂಗದಲ್ಲಿ ಅಕ್ಷರಶಃ ಟೈಗರ್‌ ಆಗಿಯೇ ಬದುಕಿರುವ ವುಡ್ಸ್‌, ವೈಯಕ್ತಿಕ ಜೀವನದಲ್ಲಿ ಹುಲಿ



ಚರ್ಮ ತೊಟ್ಟ ಇಲಿಯೇ ಆಗಿರಬಹುದು. ಆದರೂ, ಅವರ ಪರಸಂಗದ ವಿಚಾರ ಇಷ್ಟೊಂದು ದೊಡ್ಡ ರಂಪವಾಗಬೇಕಿರಲಿಲ್ಲ.
ಹಾಗೆ ನೋಡಿದರೆ, ಟೈಗರ್‌ ಮಾಡಿದ್ದು ಕಾನೂನು ಪ್ರಕಾರ ಅಪರಾಧವೇನೂ ಅಲ್ಲ. ವಿವಾಹಬಾಹಿರ ಸಂಬಂಧ ಬೆಳೆಸುವುದು ಶಿಕ್ಷಾರ್ಹ ಅಪರಾಧ ಎಂದು ವಿಶ್ವದ ಯಾವ ಕಾನೂನು ಸಹ ಹೇಳುವುದಿಲ್ಲ. ಟೈಗರ್‌ ಕಾಮಾಂಧನಾಗಿ ಯಾರ ಅತ್ಯಾಚಾರವನ್ನೂ ಮಾಡಿಲ್ಲ. ಅಪ್ರಾಪ್ತ ಹುಡುಗಿಯರ ಜೊತೆ ಸಂಬಂಧ ಬೆಳೆಸಿಲ್ಲ. ಅವರು ಮಾಡಿರುವುದು ವಿಶ್ವಾಸದ್ರೋಹ ಆಗಿರಬಹುದು. ಆದರೆ, ಅಪರಾಧವಲ್ಲ.
ಕ್ರೀಡಾ ಪಟುಗಳೇ ನೀವೇಕೆ ಹೀಗೆ?
ಟೈಗರ್‌ ವುಡ್ಸ್‌ರ ಹೆಂಡತಿ ಎಲಿನ್‌ ನಾರ್ಡ್‌ಗ್ರೆನ್‌ ಸುರಸುಂದರಿ. ಆದರೂ ಅವರು ಹೀಗೇಕೆ ಮಾಡಿದರು ಎಂಬುದೊಂದು ಪ್ರಶ್ನೆ. ಆದರೆ, ಹೆಂಡತಿ ಸುಂದರವಾಗಿದ್ದ ಮಾತ್ರಕ್ಕೆ ಗಂಡ ಹೊರಗೆಲ್ಲೂ ಕಣ್ಣು ಹಾಯಿಸುವುದಿಲ್ಲ ಎನ್ನುವುದೊಂದು ಭ್ರಮೆ.
ಇಲ್ಲಿ ಒಂದು ವಿಷಯ ನೆನಪಿಡಬೇಕು. ಮನಸ್ಸಿನ ಕೈಗೆ ಬುದ್ಧಿ ಕೊಟ್ಟು, ದೇಹದ ಕಾಮನೆಗಳ ಎದುರು ಕುಬ್ಜರಾದವರು ಟೈಗರ್‌ ಮಾತ್ರವೇ ಅಲ್ಲ.
2008ನೇ ಸಾಲಿನ ವರ್ಷದ ವಿಶ್ವಶ್ರೇಷ್ಠ ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ, ಇಂಗ್ಲೆಂಡ್‌ನ ಮಾಜಿ ನಾಯಕ ಡೇವಿಡ್‌ ಬೆಕ್‌ಹ್ಯಾಂ, ಬ್ರೆಜಿಲ್‌ನ ರೊನಾಲ್ಡೊ, ರೊನಾಲ್ಡಿನೊ, ಮಾಜಿ ವಿಂಬಲ್ಡನ್‌ ಚಾಂಪಿಯನ್‌ ಬೋರಿಸ್‌ ಬೆಕ್ಕರ್‌, ಫುಟ್‌ಬಾಲ್‌ ದಂತಕಥೆ ಡೀಗೋ ಮರಡೋನ, ಸೈಕ್ಲಿಂಗ್‌ ದಿಗ್ಗಜ ಲ್ಯಾನ್ಸ್‌ ಆರ್ಮ್‌ಸ್ಟ್ರಾಂಗ್‌, ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್‌ ವಾರ್ನ್‌, ಬಾಕ್ಸಿಂಗ್‌ ದೈತ್ಯ ಮೈಕ್‌ ಟೈಸನ್‌... ಹೀಗೆ ಈ ಪಟ್ಟಿ ಕೊನೆಯಿಲ್ಲದಂತೆ ಬೆಳೆಯುತ್ತದೆ.
ಕ್ರಿಶ್ಚಿಯಾನೊ ರೊನಾಲ್ಡೊ ಇನ್ನೂ ಅವಿವಾಹಿತ. ಆದರೆ, ಅವರ ಪ್ರಾಪಂಚಿಕ ಅನುಭವಗಳು ಯಾವುದೇ ಸಂಸಾರಸ್ಥರಿಗಿಂತ ಜಾಸ್ತಿ. ಉಳಿದವರೆಲ್ಲರೂ ಪರಸಂಗದ ಸುಖ ಬಯಸಿ ವಿಚ್ಛೇದನದ ಬಾಗಿಲು ದಾಟಿದವರು.
ಕ್ರೀಡಾಪಟುಗಳೇ ಏಕೆ ನೈತಿಕತೆಯ ಬೇಲಿ ಹಾರುತ್ತಾರೆ?
ಮೊದಲನೆಯದಾಗಿ ಕ್ರೀಡಾಪಟುಗಳೇನೂ ಸಂತ ರಲ್ಲ. ಜೊತೆಗೆ, ಅವರಿಗೆ ವಿಶ್ವದ ಉಳಿದ ಯಾವುದೇ ಕ್ಷೇತ್ರದ ಸೆಲೆಬ್ರಿಟಿಗಳಿಗಿಂತ ಹೆಚ್ಚಿನ ಅವಕಾಶಗಳು, ಪ್ರಲೋಭನೆಗಳು ಎದುರಾಗುತ್ತವೆ. ಇದಕ್ಕೆ ಅವರು ಬಲಿಯಾಗುತ್ತಾರೆ. ಏಕೆಂದರೆ, ಅವರೂ ಮನುಷ್ಯರೇ.
ಬೆಲ್ಲಕ್ಕೆ ಇರುವೆ ಮುತ್ತುವ ಹಾಗೆ ಯಶಸ್ವಿ ಕ್ರೀಡಾಪಟುಗಳನ್ನು ಲಲನೆಯರು ಮುತ್ತಿಕೊಳ್ಳುವುದು ಸಹಜ. ಜೊತೆಗೆ ವರ್ಷದ ಬಹುಭಾಗ ವನ್ನು ಪ್ರವಾಸದಲ್ಲಿ ಕಳೆಯುವ ಆಟಗಾರರು ವಿಶ್ವದ ವಿವಿಧ ಸಂಸ್ಕೃತಿಯ ಜನರ ಸಂಪರ್ಕಕ್ಕೆ ಬರುತ್ತಾರೆ. ಅವರು ಬಯಸಿದರೂ, ಬಯಸದಿ ದ್ದರೂ, ಅವಕಾಶಗಳು ಹೇರಳವಾಗಿ ಒದಗುತ್ತವೆ.
ಟೈಗರ್‌ ಪ್ರಸಂಗವನ್ನೇ ನೋಡುವುದಾದರೆ, ಅವರ ಹೆಂಡತಿಯೇನೋ ಅಪ್ಸರೆಯೇ. ಆದರೆ, ಟೈಗರ್‌ ವೃತ್ತಿಜೀವನದ ಉತ್ತುಂಗದಲ್ಲಿದ್ದ ಕಳೆದ ಐದು ವರ್ಷಗಳಲ್ಲಿ ಅವರ ಹೆಂಡತಿ ಗರ್ಭಿಣಿಯಾಗಿ, ಬಾಣಂತಿಯಾಗಿ, ಮಕ್ಕಳ ಪಾಲನೆ ಮಾಡುತ್ತ ಮನೆಯಲ್ಲಿದ್ದುದೇ ಹೆಚ್ಚು. ಅವರಿಗೀಗ ಎರಡು ವರ್ಷದ ಮಗಳು ಹಾಗೂ 10 ತಿಂಗಳ ಗಂಡು ಮಗುವಿದೆ. ಅಂದರೆ, ಕಳೆದ 3 ವರ್ಷ ಗಳಿಂದ ಎಲಿನ್‌ ಗಮನ ಕುಟುಂಬ, ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಟೈಗರ್‌ ಓರ್ವ ಗಾಲ್ಫ್‌ ಆಟಗಾರನಾಗಿ ಮನೆಯಲ್ಲಿರುವುದು ಕಡಿಮೆ. ವರ್ಷದ ಬಹುಭಾಗವನ್ನು ಅವರು ಪ್ರಪಂಚದ ವಿವಿಧೆಡೆ ಹತ್ತು ಹಲವು ಟೂರ್ನಿ ಆಡುತ್ತ ಕಳೆಯಬೇಕು. ಆಗೆಲ್ಲಾ ಅವರು ಒಂಟಿ.
ವೃತ್ತಿಪರ ಆಟಗಾರರು ಟೂರ್ನಿಗಳ ಸಂದರ್ಭದಲ್ಲಿ ಹೆಂಡತಿ/ಗೆಳತಿ ಜೊತೆಯಲ್ಲಿರಲಿ ಎಂದು ಬಯಸುತ್ತಾರೆ. ಆದರೆ, ಮಕ್ಕಳೂ ಜೊತೆಯಲ್ಲಿದ್ದರೆ, ಏಕಾಗ್ರತೆಯಿಂದ ಆಡುವುದು ಅಸಾಧ್ಯ. ತಿಂಗಳ ಮಕ್ಕಳನ್ನು ಕಟ್ಟಿಕೊಂಡು ವಿಶ್ವ ಸುತ್ತುವುದೂ ಸಾಧ್ಯವಿಲ್ಲದ ಮಾತು. ಹಾಗಾಗಿ, ಕಳೆದ 3 ವರ್ಷಗಳಿಂದ ವುಡ್ಸ್‌ ವಾರಗಟ್ಟಲೆ, ತಿಂಗಳುಗಟ್ಟಲೆ ಹೆಂಡತಿಯಿಂದ ದೂರ, ದೈಹಿಕ ಹಸಿವಿನಿಂದ ಪರಿತಪಿಸಿ ರುವುದು ಸಹಜ. ಹಾಗೆಂದೇ ಅವರು ಪ್ರಪಂಚದ ಪ್ರಕಾರ ದಾರಿ ತಪ್ಪಿದ್ದಾರೆ. ಹೆಂಡತಿಗೆ ವಿಶ್ವಾಸದ್ರೋಹ ಎಸಗಿದ್ದಾರೆ.
ವಿವಾಹಪೂರ್ವ/ಬಾಹಿರ ಸಂಬಂಧಗಳು, ವಿಚ್ಛೇದನಗಳು ಬದುಕಿನ ಭಾಗವೇ ಆಗಿರುವ ಪಾಶ್ಚಾತ್ಯ ಸಮಾಜದಲ್ಲಿ ಟೈಗರ್‌ರಂಥ ಕ್ರೀಡಾಕ್ಷೇತ್ರದ ಮೊದಲ ಶತಕೋಟ್ಯ ಧಿಪತಿ ಹತ್ತಾರು ಹೆಂಗಸರೊಂದಿಗೆ ಸಂಬಂಧ ಬೆಳೆಸಿದರೆ, ಅಷ್ಟು ದೊಡ್ಡ ರಂಪಾಟವಾಗಬೇಕಿರಲಿಲ್ಲ. ಪ್ರಾಯಶಃ, ಇಲ್ಲಿಯವರೆಗೆ ಖಾಸಗಿಜೀವನದ ಗೌಪ್ಯತೆ ಕಾಪಾಡಿ ಕೊಂಡು, ಸಾರ್ವಜನಿಕ ಜೀವನದಲ್ಲಿ ಘನತೆವೆತ್ತವ ರಾಗಿದ್ದ ಟೈಗರ್‌ ಇಂಥವರೇ ಎಂಬ ಆಘಾತ ಇದಕ್ಕೆಲ್ಲಾ ಕಾರಣವಾಗಿದೆ.
ಬದುಕೆನ್ನುವುದು ಮುಕ್ತ aavarana ಅಲ್ಲ. ಬಾಳ ಪಯಣದ ಉದ್ದಕ್ಕೂ ಹಲವಾರು ಬೇಲಿಗಳು ಎದು ರಾಗುತ್ತವೆ. ಕೆಲವು ಬಾರಿ ಬೇಲಿ ಹಾರಲೇ ಬೇಕು. ಕೆಲ ವೊಮ್ಮೆ ಬಳಸಿಕೊಂಡು ಹೋಗಬೇಕಾಗುತ್ತದೆ. ಆದರೆ, ಟೈಗರ್‌ ವುಡ್ಸ್‌ ಆ ಬೇಲಿಯನ್ನೂ ಹಾರಿದ್ದಾರೆ. ದುರಂತ ವೆಂದರೆ `ಹುಲಿ'ಯ ಬದುಕೀಗ ಮಾಧ್ಯಮಗಳಿಗೆ ಹೊಟ್ಟೆ ತುಂಬಿಸಿಕೊಳ್ಳಲು ಮೇವು ಆಗಿಬಿಟ್ಟಿದೆ.

No comments:

Post a Comment