Tuesday, December 8, 2009
ಶ್ರೇಯಾಂಕಗಳೆಂಬ ಮಿನಿ ಸ್ಕರ್ಟ್!
ಧೋನಿ ನಾಯಕರಾದ ಮೇಲೆ ಭಾರತ ಟೆಸ್ಟ್ ಪಂದ್ಯಗಳಲ್ಲಿ ಸೋತೇ ಇಲ್ಲ. ಇದೊಂದು ವಿರಳ ಸಾಧನೆ. ಧೋನಿ ನೇತೃತ್ವದಲ್ಲಿ ಭಾರತ 7 ಪಂದ್ಯ ಗೆದ್ದರೆ, 3ರಲ್ಲಿ ಡ್ರಾ ಮಾಡಿ ಕೊಂಡಿದೆ
ಇಂಥ ಒಂದು ಕನಸು ನನಸಾಗಲು 77 ವರ್ಷಗಳೇ ಬೇಕಾದವು.
ಟೆಸ್ಟ್ ಕ್ರಿಕೆಟ್ ಆಡಲು ಉಪಕ್ರಮಿಸಿ ಎಪ್ಪತ್ತೇಳು ವರ್ಷ ಗಳಾದ ಬಳಿಕ ಭಾರತ ಶ್ರೇಯಾಂಕಗಳ ಆಧಾರದ ಮೇಲೆ ವಿಶ್ವದ ಅತ್ಯುತ್ತಮ ತಂಡವೆನಿಸಿಕೊಂಡಿದೆ.
ಇದು ಕ್ರಿಕೆಟ್ ಅನುಯಾಯಿಗಳು, ಆರಾಧಕರೆಲ್ಲರೂ ಸಂಭ್ರಮ ಪಡಬೇಕಾದ ಕ್ಷಣ. ಆದರೆ, ಈ ಸಂಭ್ರಮದಲ್ಲಿ ವಾಸ್ತವಕ್ಕೆ ಬೆನ್ನು ತಿರುಗಿಸಬಾರದು ಎನ್ನುವುದೂ ಅಷ್ಟೇ ಸತ್ಯ.
ಈ ಶ್ರೇಯಾಂಕಗಳು ಮತ್ತು ಅಂಕಿ-ಅಂಶಗಳು ಮಿನಿ ಸ್ಕರ್ಟ್‌ನಂತೆ. ಅವುಗಳು ಬಿಚ್ಚಿಡುವಷ್ಟೇ ಬಚ್ಚಿಡುತ್ತವೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪರಿಕಲ್ಪನೆ ಆರಂ ಭಿಸಿ ಶ್ರೇಯಾಂಕ ನೀಡಲಾರಂಭಿಸಿದ್ದು 2001ರಲ್ಲಿ. ಅಂದಿ ನಿಂದ 8 ವರ್ಷಕಾಲ ಆಸ್ಟ್ರೇಲಿಯಾ ನಿರ್ವಿವಾದ ನಂ.1 ಆಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದ ಕ್ರಿಕೆಟ್ ಸಾಮ್ರಾಜ್ಯ ಶಿಥಿಲವಾಗತೊಡಗಿತು. 2008ರ ಆಶಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುವುದ ರೊಂದಿಗೆ ಆಸೀಸ್‌ನ ಆಳ್ವಿಕೆ ಸಂಪೂರ್ಣವಾಗಿ ಅಂತ್ಯ ಗೊಂಡಿತು. ಹೀಗೆ ಅಳಿದು ಹೋದ ಸಾಮ್ರಾಜ್ಯದ ಮೇಲೆ ಹೊಸದಾಗಿ ತಲೆ ಎತ್ತಿದ್ದು ದಕ್ಷಿಣ ಆಫ್ರಿಕಾ.
ಅಂದರೆ, ಇಲ್ಲಿ ನಂ.1 ಪಟ್ಟವನ್ನು ಆಸೀಸ್ ಬಿಟ್ಟುಕೊಟ್ಟಿತೇ ಹೊರತು ದಕ್ಷಿಣ ಆಫ್ರಿಕಾ ಕಿತ್ತುಕೊಳ್ಳಲಿಲ್ಲ.
ಕಳೆದ ಒಂದು ದಶಕದಲ್ಲಿ ಆಸ್ಟ್ರೇಲಿಯಾ ಸಂಪೂರ್ಣ ಸರ್ವಾಧಿಕಾರ ಮೆರೆದಂತೆ, ಕಳೆದ ಒಂದೆರಡು ವರ್ಷ ಗಳಿಂದ ಯಾವ ತಂಡವೂ ಆಡುತ್ತಿಲ್ಲ. ಆಸೀಸ್ ಫಾರ್ಮ್‌ನ ಉತ್ತುಂಗದಲ್ಲಿದ್ದಾಗ ಆ ತಂಡವನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಆಗ ನಂ.1 ಆಗಿದ್ದ ಆಸೀಸ್‌ಗೂ ಹಾಗೂ ನಂ.2 ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದ ಇತರ ತಂಡಗಳಿಗೂ ನಡುವೆ 25ಸ್ಥಾನಗಳಷ್ಟು ಅಂತರವಿದೆ ಎನ್ನಲಾಗುತ್ತಿತ್ತು.
ಈಗ ಅಂಥ ಅಂತರವಿಲ್ಲ. ಬದಲಿಗೆ ಮೊದಲ ಐದು ಟೆಸ್ಟ್ ರಾಷ್ಟ್ರಗಳ ನಡುವೆ ಬಹುತೇಕ ಸಮಾನ ಅಂತರವಿದೆ. ಇಂಥ ಸಮಬಲದ ತಂಡಗಳ ಪೈಕಿ ಭಾರತ ನಂ.1 ಆಗಿದೆ.
ಹಾಗೆಂದು ಇದು ಭಾರತದ ಸಾಧನೆಯನ್ನು ಅಪಮೌಲ್ಯಗೊಳಿಸುವ ಪ್ರಯತ್ನವೇನೂ ಅಲ್ಲ. ಭಾರತ ತಂಡ ಕಳೆದ ಒಂದು ದಶಕದಲ್ಲಿ `ಟೀಮ್ ಇಂಡಿಯಾ' ಆಗಿದೆ. ತಂಡದ ಸಾಂಘಿಕ ಶಕ್ತಿ, ಸ್ಫೂರ್ತಿ ಹೆಚ್ಚಿದೆ. ತಂಡವೀಗ ಕ್ರಿಕೆಟ್ ವಿಶ್ವದಲ್ಲಿ ಗೆಲ್ಲದೇ ಇರುವ ಜಾಗವಿಲ್ಲ. ಮನೆಯಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಪರಿಸ್ಥಿತಿ ಯಾವಾಗಲೋ ಇಲ್ಲವಾಗಿದೆ. ಆದರೆ, ಭಾರತ ಶಕ್ತಿ ಒಗ್ಗೂಡಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಇತರ ತಂಡಗಳ ಸಾಮರ್ಥ್ಯ ಕುಂದಿದೆ.
ಕಳೆದ 2 ವರ್ಷಗಳಲ್ಲಿ ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಆದರೆ, ಇಲ್ಲೆಲ್ಲಾ ಗೆದ್ದಿರುವುದು ಕೇವಲ ಒಂದೊಂದೇ ಟೆಸ್ಟ್ ಪಂದ್ಯಗಳನ್ನು. ಅದಕ್ಕೆ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಗೆಲುವಿನ ಸಮೀಪಕ್ಕೂ ಸುಳಿದಿತ್ತು. ಆದರೂ, ಈಗಿನ ಆಸ್ಟ್ರೇಲಿಯಾ ತಂಡ ಹಳೆಯ ಶ್ರೇಷ್ಠ ತಂಡದ ಪಳಯುಳಿಕೆ ಮಾತ್ರ. ಸದ್ಯ ಪಾಂಟಿಂಗ್‌ರನ್ನು ಔಟ್ ಮಾಡಿ ದರೆ, ಅರ್ಧ ಪಂದ್ಯ ಗೆದ್ದಂತೆ ಎಂಬ ಪರಿಸ್ಥಿತಿ ಇದೆ.
ಇನ್ನು ವೆಸ್ಟ್ ಇಂಡೀಸ್‌ನಲ್ಲಿ ಈ ವರ್ಷ ಬಾಂಗ್ಲಾದೇಶವೂ ಟೆಸ್ಟ್ ಸರಣಿ ಗೆದ್ದಿದೆ. ಅಲ್ಲಿನ ಎ' ತಂಡಕ್ಕೂ, ಬಿ' ತಂಡಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ.
ಭಾರತ, ನ್ಯೂಜಿಲೆಂಡ್‌ನಲ್ಲಿ ಗೆಲುವು ಸಾಧಿಸಿತು. ಆದರೆ, ಎಂಎಸ್ ಧೋನಿ ನಾಯಕತ್ವದ ಪಡೆ ಅಲ್ಲಿಗೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಆ ತಂಡ ಅರೆಜೀವವಾಗಿತ್ತು. ಸ್ಟೀಫನ್ ಫ್ಲೆಮಿಂಗ್ ನಿವೃತ್ತಿ ನಂತರದ ದಿನಗಳು ಅವು. ಜೊತೆಗೆ ಇಂಡಿಯನ್ ಕ್ರಿಕೆಟ್ ಲೀಗ್‌ನಿಂದ ಹೆಚ್ಚು ನಷ್ಟ ಅನುಭವಿಸಿದ್ದು ಕಿವೀಸ್. ಶೇನ್ ಬಾಂಡ್ ಸಹಿತ ಸುಮಾರು ಅರ್ಧ ತಂಡವೇ ಐಸಿಎಲ್‌ನತ್ತ ಗುಳೆ ಹೋಗುವುದರೊಂದಿಗೆ ತಂಡದ ಪುನರುತ್ಥಾನ ಪ್ರಕ್ರಿಯೆ ಹಳ್ಳ ಹಿಡಿದಿತ್ತು. ಇಂಥ ಸಂಕಷ್ಟಾವಸ್ಥೆಯಲ್ಲಿ ತಂಡ ಸೋತಿತ್ತು.
ಭಾರತ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್‌ನಲ್ಲಿ ಹಾಗೂ ತವರಿನಲ್ಲಿ 1-0 ಅಂತರದ ಜಯ ಸಾಧಿಸಿದೆ.
ಅನಾದಿ ಕಾಲದಿಂದಲೂ ಇಂಗ್ಲೆಂಡ್ ಟೆಸ್ಟ್ ತಂಡ ಆಶಸ್ ಹೊತ್ತಿಗೆ ಪೂರ್ತಿ ಸಾಮರ್ಥ್ಯದಿಂದ ಸಜ್ಜಾಗಿರುತ್ತದೆ. ಉಳಿದ ಅವಧಿಯಲ್ಲಿ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿರುತ್ತದೆ. ಇತ್ತೀಚಿನ ವರ್ಷಗಳಲ್ಲಂತೂ ಅದು ಯಾವುದೇ ಸರಣಿಯನ್ನು ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಆಡಿದ್ದೇ ಕಡಿಮೆ. ಭಾರತದಲ್ಲಿ ಒಲ್ಲದ ಮನಸ್ಸಿನಿಂದ ಟೆಸ್ಟ್ ಸರಣಿ ಆಡುವುದಕ್ಕೆ ಮುನ್ನ ಮುಂಬೈ ಮೇಲೆ ನಡೆದ ಉಗ್ರರ ದಾಳಿ ಇಂಗ್ಲಿಷರ ಜಂಘಾಬಲವನ್ನೇ ಉಡುಗಿಸಿತ್ತು. ಹಾಗಾಗಿ ಆ ಫಲಿತಾಂಶ ನಿರೀಕ್ಷಿತವಾಗಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಆಫ್ರಿಕಾದಲ್ಲೇ ಪ್ರಪ್ರಥಮ ಟೆಸ್ಟ್ ಗೆಲುವು ಸಾಧಿಸಿದರೂ, ಸರಣಿಯಲ್ಲಿ ಸೋತ ಭಾರತ, ನಂತರ ತವರಿನಲ್ಲೂ ಸರಣಿ ಡ್ರಾ ಮಾಡಿಕೊಂಡಿತ್ತು.
ಶ್ರೀಲಂಕಾ ಪ್ರವಾಸದಲ್ಲಿ ಕಳೆದ ವರ್ಷ ಭಾರತ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿತ್ತು. ಸೆಹ್ವಾಗ್ ಬಿಟ್ಟು ಉಳಿದೆಲ್ಲಾ ಆಟಗಾರರು ಅಜಂತ ಮೆಂಡಿಸ್ ಎಂಬ ಯಕ್ಷಿಣಿಗೆ ಬಲಿಯಾಗಿದ್ದರು. ಆದರೆ, ಅದೇ ತಂಡ ಈ ಬಾರಿ ಭಾರತಕ್ಕೆ ಆಗಮಿಸಿದಾಗ ಮೆಂಡಿಸ್‌ಗೆ ಆಡುವ 11ರ ಬಳಗದಲ್ಲೂ ಖಾಯಂ ಜಾಗವಿರಲಿಲ್ಲ. ವಯಸ್ಸಿನ ಭಾರದಿಂದ ದಣಿದಿರುವ ಮುತ್ತಯ್ಯ ಮುರಳೀಧರನ್ ಹಲ್ಲುಕಿತ್ತ ಹಾವಿನಂತಾಗಿದ್ದರು. ಜೊತೆಗೆ ಭಾರತೀಯ ನೆಲದಲ್ಲಿ ಕಳೆದ 14 ವರ್ಷಗಳಲ್ಲಿ ಒಂದು ಟೆಸ್ಟ್ ಸಹ ಗೆಲ್ಲದ ಲಂಕಾ, ಈ ಬಾರಿ ಸರಣಿಯನ್ನೇ ಗೆಲ್ಲುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ.
ಈ ರೀತಿಯಲ್ಲಿ ಭಾರತದ ಪಾಲಿಗೆ ವಿಶ್ವ ನಂ.1 ಪೀಠಾರೋಹಣ ಸುಲಭವಾಯಿತು.
ಹಾಗೆಂದು ಭಾರತ ವಿಶ್ವ ನಂ.1 ಆಗುವುದಕ್ಕೆ ಇತರ ತಂಡಗಳ ಅಸಾಮರ್ಥ್ಯವಷ್ಟೇ ಕಾರಣವಲ್ಲ. ಈ ಅವಧಿಯಲ್ಲಿ ಭಾರತೀಯ ಆಟಗಾರರು ಪ್ರಶಂಸಾರ್ಹ ಪ್ರದರ್ಶನ ನೀಡಿರುವುದೂ ನಿಜ.
ಸೌರವ್ ಗಂಗೂಲಿ- ಜಾನ್ ರೈಟ್ ಕಾಲದಲ್ಲಿ ಆರಂಭವಾದ ಯಶಸ್ವಿ ತಂಡ ಕಟ್ಟುವ ಪ್ರಕ್ರಿಯೆ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಇನ್ನಷ್ಟು ಅರಳಿತು. ಎಂಎಸ್ ಧೋನಿ ನಾಯಕತ್ವದಲ್ಲಿ ಅದಕ್ಕೊಂದು ಸಮಗ್ರ ರೂಪ ಬಂದಿದೆ. ಕಳೆದ ಎರಡು ದಶಕಗಳಿಂದ ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್‌ನ ಮುಖವಾಣಿ. ಅಂತಃಶಕ್ತಿ. ತಂಡದ ಯಶೋಪಯಣದ ಕೇಂದ್ರ ಬಿಂದು ಅವರೇ. 90ರ ದಶಕದ ಕೊನೆಯ ಭಾಗದಲ್ಲಿ ರಾಹುಲ್ ದ್ರಾವಿಡ್ ಪ್ರವರ್ಧಮಾನಕ್ಕೆ ಬಂದ ಮೇಲೆ ಭಾರತದ ಬ್ಯಾಟಿಂಗ್ ಒಂಟಿ ಕುದುರೆಯ ಬಂಡಿಯಲ್ಲ ಎನ್ನುವುದು ಸಾಬೀತಾಯಿತು.
ಆ ನಂತರದ ದಿನಗಳಲ್ಲಿ 2 ತ್ರಿಶತಕ ಬಾರಿಸಿ 3ನೇ ಬಾರಿ ಸಮೀಪ ಸುಳಿದಿರುವ ವೀರೇಂದ್ರ ಸೆಹ್ವಾಗ್ ಮುಂಚೂಣಿಗೆ ಬಂದಿದ್ದಾರೆ. ಸದ್ಯ ಸೆಹ್ವಾಗ್, ಗಂಭೀರ್, ದ್ರಾವಿಡ್, ತೆಂಡುಲ್ಕರ್, ಲಕ್ಷ್ಮಣ್, ಯುವರಾಜ್, ಧೋನಿ ಯನ್ನೊಳಗೊಂಡ ಭಾರತದ 1-7ರವರೆಗಿನ ಬ್ಯಾಟಿಂಗ್ ಕ್ರಮಾಂಕ ವಿಶ್ವದಲ್ಲೇ ಬಲಾಢ್ಯವಾಗಿದೆ.
ಬೌಲಿಂಗ್‌ನಲ್ಲೂ ಅಷ್ಟೇ. ಅನಿಲ್ ಕುಂಬ್ಳೆಯಂಥ ದಿಗ್ಗಜ ಬೌಲರ್ ನಿವೃತ್ತಿಯೂ ತಂಡದಲ್ಲಿ ನಿರ್ವಾತಕ್ಕೆ ಕಾರಣವಾಗಿಲ್ಲ. ಜಹೀರ್ ಖಾನ್ ನೇತೃತ್ವದಲ್ಲಿ ಭಾರತದ ವೇಗದ ಬೌಲಿಂಗ್ ಪಡೆ ಶಕ್ತಿ ಹಾಗೂ ವೈವಿಧ್ಯತೆ ತುಂಬಿಕೊಂಡಿದೆ.
ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ವೀರೇಂದ್ರ ಸೆಹ್ವಾಗ್ ಸರಣಿ ಶ್ರೇಷ್ಠರಾದರೂ, ಇಡೀ ತಂಡದ ಸಾಂಘಿಕ ಪ್ರದರ್ಶನ ಗಮನ ಸೆಳೆಯಿತು. ಅಹ್ಮದಾಬಾದ್‌ನಲ್ಲಿ ರಾಹುಲ್ ದ್ರಾವಿಡ್ ಸ್ಮರಣೀಯ ಶತಕ ಬಾರಿಸಿದರು. ಕಾನ್ಪುರದಲ್ಲಿ ಸೆಹ್ವಾಗ್ ಶತಕ ಬಾರಿಸಿದರೂ, ಪಂದ್ಯ ಗೆದ್ದಿದ್ದು ಶ್ರೀಶಾಂತ್‌ರ ಬೌಲಿಂಗ್‌ನಿಂದ. ಮುಂಬೈನಲ್ಲಿ ಸೆಹ್ವಾಗ್ ನಂಬಲಸಾಧ್ಯ ವೇಗದಲ್ಲಿ 293 ರನ್ ಬಾರಿಸಿದರು. ಜಹೀರ್ ಮತ್ತು ಹರ್ಭಜನ್ ತಲಾ 6 ವಿಕೆಟ್ ಕಬಳಿಸಿದರು. ಉಳಿದಂತೆ ಸರಣಿಯಲ್ಲಿ ಗಂಭೀರ್, ಧೋನಿ ತಲಾ 2 ಶತಕ ಬಾರಿಸಿದರೆ, ಸಚಿನ್ ಸಹ 43ನೇ ಶತಕ ಬಾರಿಸಿದರು. 13 ಸಾವಿರ ಟೆಸ್ಟ್ ರನ್ ಗಡಿ ದಾಟಿದರು.
ಭಾರತ ಒಂದೆರಡು ತಿಂಗಳ ಹಿಂದೆ ಒಂದು ದಿನದ ಮಟ್ಟಿಗೆ (ಶ್ರೀಲಂಕಾ ತ್ರಿಕೋನ ಸರಣಿ ಸಂದರ್ಭದಲ್ಲಿ) ಏಕದಿನ ಕ್ರಿಕೆಟ್‌ನ ನಂ.1 ತಂಡವಾಗಿತ್ತು. ಆದರೆ, ಟೆಸ್ಟ್ ಶ್ರೇಯಾಂಕದ ಅಗ್ರಪಟ್ಟ ಕನಿಷ್ಠ ಇನ್ನೂ ಒಂದೂವರೆ ತಿಂಗಳು ಭಾರತದೊಂದಿಗೇ ಇರಲಿದೆ. ಆದರೆ, ಆನಂತರ ಅದೃಷ್ಟ ಬೇಕು. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಕನಿಷ್ಠ 2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದರೆ ನಂ.1 ಪಟ್ಟ ಮರಳಿ ಪಡೆಯಲಿದೆ. ಅಂಥ ಸಂದರ್ಭದಲ್ಲಿ ಭಾರತೀ ಯರು ಅಗ್ರಗೌರವವನ್ನು ಪಂದ್ಯದಲ್ಲಿ ಸೋತು ಕಳೆದು ಕೊಳ್ಳುವುದಕ್ಕಿಂತ ಮನೆಯಲ್ಲಿ ಕೂತು ಬಿಟ್ಟುಕೊಡಲಿದ್ದಾರೆ.
2010ರಲ್ಲಿ ತಂಡ ಬಾಂಗ್ಲಾ ವಿರುದ್ಧ 2 ಟೆಸ್ಟ್ ಮಾತ್ರ ಆಡಲಿದೆ. ಭಾರತ ನಂ.1 ಆಗಿರುವ ಈ ಸಂದರ್ಭದಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿ ಪಟ್ಟ ರಕ್ಷಿಸಿಕೊಂಡಿದ್ದರೆ ಅದಕ್ಕೊಂದು ಬೆಲೆ ಬರುತ್ತಿತ್ತು.
Subscribe to:
Post Comments (Atom)
No comments:
Post a Comment