Sunday, December 6, 2009

ಘಟೋತ್ಕಚನ ಅಬ್ಬರ, ಅದು ಸೆಹ್ವಾಗ್ ಸ್ಟೈಲ್




ಹೋಲಿಸುವುದು ಮಾನವನ ಸಹಜ ಗುಣ. ಮೊದಲೆಲ್ಲಾ ಸಚಿನ್‌ ತೆಂಡುಲ್ಕರ್‌ಗೆ ಹೋಲಿಸುತ್ತಿದ್ದರು. ಈಗ ವಿವಿಯನ್‌ ರಿಚರ್ಡ್ಸ್‌ ಜೊತೆ ತುಲನೆ ನಡೆದಿದೆ. ಬಹುಶಃ ಆ ಏಳು ರನ್‌ ಹೊಡೆದು ಬಿಟ್ಟಿದ್ದರೆ, ಬ್ರಾಡನ್‌ಗಿಂತ ಮಹಾನ್‌ ಎಂಬ ಚರ್ಚೆಯೂ ನಡೆಯುತ್ತಿತ್ತೇನೊ.
ವೀರೇಂದ್ರ ಸೆಹ್ವಾಗ್‌ ಕ್ರಿಕೆಟ್‌ ಜಗತ್ತಿನ ಶಿಷ್ಟ ತಳಿ. ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ಇರುತ್ತದೆ. ಸೆಹ್ವಾಗ್‌ ವಿಶೇಷತೆ ಅವರಲ್ಲಿ ಮಾತ್ರ ಕಾಣಲು ಸಾಧ್ಯ. ಹಿಂದಿರದ, ಮುಂದೆ ಇನ್ನೊಬ್ಬರಲ್ಲಿ ಕಾಣಲು ಸಾಧ್ಯವಾಗದ ವೈಶಿಷ್ಠ್ಯ ನಜಾಫ್‌ಗಢದ ನವಾಬನದು.
ಸೆಹ್ವಾಗ್‌ ಆಡಿದರೆ
ಸೆಹ್ವಾಗ್‌ ಲಹರಿಯಲ್ಲಿರುವ ದಿನ ದೀಪಾವಳಿ. ಪ್ರತ್ಯೇಕವಾಗಿ ಪಟಾಕಿ ಸಿಡಿಸುವ ಅಗತ್ಯವೇ ಇರುವುದಿಲ್ಲ. ಕ್ರೀಸ್‌ನಲ್ಲಿ ಅವರೇ ಯಾವುದೇ ಸಿಡಿಮದ್ದಿಗಿಂತ ಜೋರಾಗಿ ಆರ್ಭಟಿಸುತ್ತಿರುತ್ತಾರೆ. ರನ್‌ ಗಳಿಸುವುದು ಇಷ್ಟೊಂದು ಸುಲಭವೇ ಎನಿಸುವುದು ವೀರೂ ಬ್ಯಾಟಿಂಗ್‌ ನೋಡುವಾಗ. ಚೆಂಡು ಇರುವುದೇ ಚಚ್ಚುವುದಕ್ಕೆ, ಬ್ಯಾಟ್ಸ್‌ಮನ್‌ ಇರುವುದೇ ರನ್‌ ಗಳಿಸುವುದಕ್ಕೆ ಎಂಬ ಮನೋಭಾವ ಅವರದು. ವ್ಯರ್ಥ ಕಾಲಹರಣವೆಂಬುದು ಅವರ ನಿಘಂಟಿನಲ್ಲೇ ಇಲ್ಲ. ಎದುರಾಳಿ ತಂಡಗಳ ವ್ಯೂಹ, ಬೌಲರ್‌ಗಳ ಖ್ಯಾತಿ ಇದಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಮುರಳಿ ವಿರುದ್ಧ ಆಡುವುದು ದೊಡ್ಡ ಸವಾಲು. ಅವರ ವಿರುದ್ಧ ಯಶಸ್ವಿಯಾಗಬೇಕಾದರೆ, ಆಕ್ರಮಣ ಮಾಡಬೇಕು. ಅಳುಕಿದರೆ, ಅವರು ನಮ್ಮೆನ್ನು ಮುಗಿಸಿಬಿಡುತ್ತಾರೆ ಎಂದು ಗುರುವಾರ ಮುಂಬೈನಲ್ಲಿ 284 ರನ್‌ ಬಾರಿಸಿದ ಬಳಿಕ ಸೆಹ್ವಾಗ್‌ ಹೇಳಿಕೊಂಡಿದ್ದರು. ಮುರಳಿ ಮಾತ್ರವಲ್ಲ, ವಿಶ್ವದ ಎಲ್ಲಾ ಬೌಲರ್‌ಗಳ ವಿರುದ್ಧ ವೀರೂ ಆಡುವುದೇ ಹೀಗೆ.ವೀರೂ ಲಹರಿಯಲ್ಲಿರುವಾಗ ಯಾವ ಮೊತ್ತವೂ ಬೃಹತ್‌ ಎನಿಸುವುದಿಲ್ಲ. ಭಾರತದ ಬಳಿ ಸೋಲಿನ ಭೀತಿ ಸುಳಿಯುವುದಿಲ್ಲ. ಭಯ, ಆತಂಕಕ್ಕೆ ಅವಕಾಶವಿರು ವುದಿಲ್ಲ. ಇವೆಲ್ಲವೂ
ವೀರೂ ಔಟಾದ ಬಳಿಕ ಹಿಂಬಾಗಿಲಿನಿಂದ ಪ್ರವೇಶಿಸುತ್ತವೆ.
ಸೆಹ್ವಾಗ್‌ ಪ್ರವರ್ಧಮಾನಕ್ಕೆ ಬಂದ ಆರಂಭದ ದಿನಗಳಲ್ಲಿ ಸಚಿನ್‌ರ ತದ್ರೂಪಿ ಎಂದು ಗುರುತಿಸುತ್ತಿದ್ದರು. ಅವರಿಬ್ಬರ ಒಂದೇ ಎತ್ತರ, ಗುಂಗುರು ಕೂದಲು, ಕೆಲವು ಹೊಡೆತಗಳ ಸಾಮ್ಯ ಇಂಥ ಹೋಲಿಕೆಗೆ ಕಾರಣವಾಗಿದ್ದವು. ಹಾಗೆ ನೋಡಿದರೆ, ಸಚಿನ್‌ ಆಟ ನೋಡಿಕೊಂಡೇ ಸೆಹ್ವಾಗ್‌ ಬೆಳೆದವರು. ಆದರೆ, ಬ್ಯಾಟಿಂಗ್‌ ವಿಷಯಕ್ಕೆ ಬಂದಾಗ ಅವರು ಬೇರೆಯೇ ಆಟಗಾರ. ಸಚಿನ್‌ ಆಟ ಕಲಾತ್ಮಕ. ಅವರ ಪ್ರತಿಯೊಂದು ಹೊಡೆತವೂ ಮನಮೋಹಕ. ಆದರೆ, ಸೆಹ್ವಾಗ್‌ರದು ಬಾಳೆ ತೋಟಕ್ಕೆ ನುಗ್ಗಿದ ಕೊಬ್ಬಿದ ಆನೆಯಂತೆ. ಘಟೋತ್ಕಚನ ಅಬ್ಬರ. ಸಚಿನ್‌ ಆಡುವಾಗ ಎದುರಾಳಿಗಳಿಗೂ ಪುಳಕವಾಗುತ್ತದೆ. ಆದರೆ, ಸೆಹ್ವಾಗ್‌ ವಿರುದ್ಧ ನಡುಕ ಮಾತ್ರ.

ತ್ರಿವಿಕ್ರಮ ಪ್ರತಿಭೆ
ಏಕದಿನ ಕ್ರಿಕೆಟ್‌ನಲ್ಲಿ ಯಾರಿಗಾದರೂ, ದ್ವಿಶತಕ ಬಾರಿಸುವ ಸಾಮರ್ಥ್ಯ ಇದ್ದರೆ ಅದು ಸೆಹ್ವಾಗ್‌ಗೆ ಮಾತ್ರ. ಎಲ್ಲರೂ ಈ ಮಾತು ಒಪ್ಪುತ್ತಾರೆ. ಆದರೂ, ಅದೇಕೋ ಸೆಹ್ವಾಗ್‌ರ ಟೆಸ್ಟ್‌ ಲಹರಿ ಏಕದಿನಗಳಲ್ಲಿ ಇನ್ನೂ ಕಾಣಿಸಿಲ್ಲ. ಅವರು ಚೊಚ್ಚಲ ಟೆಸ್ಟ್‌ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿದ್ದರು. ಆದರೆ, ಪಾಕಿಸ್ತಾನದ ವಿರುದ್ಧ ಏಕದಿನ ಪದಾರ್ಪಣೆಯಲ್ಲಿ ಅವರು ಅನುಭವಿಸಿದ್ದು ನಿರಾಸೆ. ಬ್ಯಾಟಿಂಗ್‌ನಲ್ಲಿ 1 ರನ್‌ಗೆ ಔಟ್‌. ಬೌಲಿಂಗ್‌ನಲ್ಲಿ 3 ಓವರ್‌ಗಳಲ್ಲಿ 35 ರನ್‌ ದಂಡನೆ. ಇದಾಗಿ ಒಂದೂವರೆ ವರ್ಷ ಅವರಿಗೆ ಮತ್ತೊಂದು ಏಕದಿನ ಆಡುವ ಅವಕಾಶ ಸಿಕ್ಕಿರಲೇ ಇಲ್ಲ. ಹಾಗೆಂದು ಅವರ ಏಕದಿನ ದಾಖಲೆ ಕಳಪೆಯೆಂದೇನೂ ಅಲ್ಲ. ಭಾರತದ ಪರ ಅತ್ಯಂತ ವೇಗದ ಶತಕ ದಾಖಲೆ (60 ಎಸೆತಗಳಲ್ಲಿ) ಅವರ ಹೆಸರಲ್ಲಿದೆ. 211 ಪಂದ್ಯಗಳಲ್ಲಿ 6730 ರನ್‌, 102.09 ಸ್ಟ್ರೈಕ್‌ ರೇಟ್‌, 11 ಶತಕ, 35 ಅರ್ಧ ಶತಕ, 924 ಬೌಂಡರಿ, 110 ಸಿಕ್ಸರ್‌ಗಳು ಅವರ ಆಟಕ್ಕೆ ಕನ್ನಡಿ. ಆದರೆ, ಏಕದಿನಗಳಲ್ಲಿ ಅವರ ಗರಿಷ್ಠ ಗಳಿಕೆ 130 ರನ್‌ ಮಾತ್ರ ಎನ್ನುವುದು ಅಚ್ಚರಿಯ ವಿಷಯ. ಟೆಸ್ಟ್‌ ಕ್ರಿಕೆಟ್‌ನ 72 ಪಂದ್ಯಗಳಲ್ಲಿ 17 ಶತಕ ಬಾರಿಸಿರುವ, ಆ 17ರಲ್ಲಿ 12 ಬಾರಿ ಕನಿಷ್ಠ 150 ರನ್‌ ಗಡಿ ದಾಟಿರುವ, 6 ಬಾರಿ ದ್ವಿಶತಕದ ಗಡಿ, 4 ಬಾರಿ 250ರ ಗಡಿ, 2 ಬಾರಿ 300 ರನ್‌ ಗಡಿ ದಾಟಿರುವ ಸೆಹ್ವಾಗ್‌, ಏಕದಿನ ಮಾದರಿಯಲ್ಲಿ ಒಮ್ಮೆಯೂ ಪೂರ್ಣ 50 ಓವರ್‌ ಆಡಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಅವರು ಆ ರೀತಿ ಪೂರ್ತಿ 50 ಓವರ್‌ ಆಡಿದ ದಿನ ಕನಿಷ್ಠ 200 ರನ್‌ ಗಡಿ ದಾಟಿರುತ್ತಾರೆ. ಭಾರತ 500ರ ಮೊತ್ತದ ಸುಮೀಪ ಸುಳಿದಿರುತ್ತದೆ. ಸೆಹ್ವಾಗ್‌ ಲಹರಿಯಲ್ಲಿದ್ದ ದಿನ ಯಾವುದೂ ಅಸಾಧ್ಯವಲ್ಲ.

ಹೆಂಗಿದ್ದ ಹೆಂಗಾದ ಗೊತ್ತಾ
ಸೆಹ್ವಾಗ್‌ 4ನೇ ವಯಸ್ಸಿನಲ್ಲಿ ಸಚಿನ್‌ ಆಟಕ್ಕೆ ಮಾರು ಹೋಗಿದ್ದರು. ಆದರೆ, ಅವರು 7 ತಿಂಗಳ ಮಗುವಿದ್ದಾಗಲೇ ಕ್ರಿಕೆಟ್‌ ನಂಟು ಅಂಟಿತ್ತು. ಅವರ ಅಪ್ಪ ಕ್ರಿಶನ್‌ ಇನ್ನೂ ವರ್ಷ ತುಂಬದ ಮಗುವಿಗೆ ಕ್ರಿಕೆಟ್‌ ಬ್ಯಾಟ್‌ ತಂದುಕೊಟ್ಟಿದ್ದರು. ಆಟ ಶುರುವಾಗಿತ್ತು.
ಮುಂದೆ ಶಾಲೆಗೆ ಸೇರಿದಾಗ ಹುಡುಗ ಓದಿನಲ್ಲಿ ಅಷ್ಟೇನೂ ಚುರುಕಾಗಿರಲಿಲ್ಲ. ಆದರೆ, ಕ್ರಿಕೆಟ್‌ನಲ್ಲಿ ಯಾವಾಗಲೂ ಮುಂದೆ. ಒಂದು ದಿನ ಕ್ರಿಕೆಟ್‌ ಆಡುವಾಗ ಹಲ್ಲು ಮುರಿದುಕೊಂಡು ಮನೆಗೆ ಬಂದ. ಕೆರಳಿದ ಅಪ್ಪ, ಇನ್ನೊಮ್ಮೆ ಬ್ಯಾಟ್‌ ಮುಟ್ಟಿದರೆ ಕಾಲು ಮುರಿಯುತ್ತೇನೆ ಎಂದರು. ಆದರೆ, ವೀರೂಗೆ ಅಮ್ಮ ಕೃಷ್ಣಾ ಅವರ ಬೆಂಬಲತ್ತು. ಕ್ರಿಕೆಟ್‌ ಮುಂದುವರಿಯಿತು.
ಹರ್ಯಾಣದ ಜಾಟ ಜನಾಂಗಕ್ಕೆ ಸೇರಿದ ವೀರೂ ಅವಿಭಕ್ತ ಕುಟುಂಬದಲ್ಲಿ, ದೊಡ್ಡ ಬಂಗಲೆಯಲ್ಲಿ ಬೆಳೆದವರು. ತಂದೆ ಬೇಳೆಕಾಳುಗಳ ವ್ಯಾಪಾರಿ. ಸೆಹ್ವಾಗ್‌ರ ಇಬ್ಬರು ಅಕ್ಕ, ಓರ್ವ ತಮ್ಮ, ಚಿಕ್ಕಪ್ಪ, ಚಿಕ್ಕಮ್ಮಂದಿರು ಹಾಗೂ 16 ದಾಯಾದಿಗಳಿದ್ದ ದೊಡ್ಡ ಕುಟುಂಬ ಅದು. ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ವಾಸವಿದ್ದ ಕಾರಣಕ್ಕೆ ವೀರೂ ನಜಾಫ್‌ಗಢದ ನವಾಬ ಎಂದೇ ಗುರುತಿಸಲ್ಪಟ್ಟರು.

ಕಚ್ಚಾ ಶೈಲಿ-ಸಚ್ಚಾ ವ್ಯಕ್ತಿ
ಸೆಹ್ವಾಗ್‌ ಮಾತು ನೇರ. ಮುಚ್ಚುಮರೆ ಗೊತ್ತಿಲ್ಲ. ಆಟದಲ್ಲೂ ಅಷ್ಟೇ. ಅವರದು ಪುಸ್ತಕದಲ್ಲಿರುವ ಸಿದ್ಧ ಶೈಲಿಯಲ್ಲ. ಅದಕ್ಕೊಂದು ಸೂತ್ರವೂ ಇಲ್ಲ. ತಾಂತ್ರಿಕತೆಯ ಚೌಕಟ್ಟೂ ಇಲ್ಲ. ಹಾಗೆಂದೇ ಸೆಹ್ವಾಗ್‌ ವಿರುದ್ಧ ರಣತಂತ್ರ ರೂಪಿಸುವುದು ಬಹಳ ಕಷ್ಟ. ಅವರ ವಿರುದ್ಧ ಬೌಲರ್‌ಗಳು ನಕಾರಾತ್ಮಕ ತಂತ್ರ ಅನುಸರಿಸುವುದೂ ಅಸಾಧ್ಯ. ಮಾನಸಿಕವಾಗಿ ಕೆಣಕುವುದೂ ಕಷ್ಟ. ಅವರು ಶೋಯಿಬ್‌ ಅಖ್ತರ್‌ ವಿರುದ್ಧ, ಶೇನ್‌ ವಾರ್ನ್‌ ವಿರುದ್ಧ, ಗ್ಲೆನ್‌ ಮೆಕ್‌ಗ್ರಾತ್‌, ಬ್ರೆಟ್‌ ಲೀ, ಡೇಲ್‌ ಸ್ಟೈನ್‌, ಮುತ್ತಯ್ಯ ಮುರಳೀಧರನ್‌, ಅಜಂತ ಮೆಂಡಿಸ್‌ ವಿರುದ್ಧ, ವರ್ತಮಾನ ಕ್ರಿಕೆಟ್‌ನ ಅತ್ಯುತ್ತಮರೆನಿಸಿಕೊಂಡ ಎಲ್ಲಾ ಬೌಲರ್‌ಗಳ ವಿರುದ್ಧ ವೀರಾವೇಶ ಮೆರೆದಿರುವುದು ಇದೇ ರೀತಿ.

ನೆಕ್ಸ್ಟ್‌ ಟೈಮ್‌
ಸೆಹ್ವಾಗ್‌ 2003-04ರಲ್ಲಿ ಪಾಕಿಸ್ತಾನದ ವಿರುದ್ದ 309 ರನ್‌ ಹೊಡೆದು ಮುಲ್ತಾನ್‌ನ ಸುಲ್ತಾನನಾದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ 319 ರನ್‌ ಬಾರಿಸಿದರು. ಮುಂಬೈನಲ್ಲಿ ಈ ವಾರ ಅವರು ಮತ್ತೊಂದು 300 ಗಳಿಕೆಯ ಗಡಿ ದಾಟಲು ಅವಕಾಶವಿತ್ತು. ಆದರೆ, ಅದೃಷ್ಟವಿರಲಿಲ್ಲ. ಬಹುಶಃ ಅವರು ಶುಕ್ರವಾರಕ್ಕಾಗಿ ಕಾಯದೆ, ಗುರುವಾರವೇ ಕೆಲಸ ಮುಗಿಸಿದ್ದರೆ, ಇತಿಹಾಸದಲ್ಲಿ 3ನೇ ತ್ರಿಶತಕ ಬಾರಿಸಿದ ಏಕೈಕರೆನಿಸಿಕೊಳ್ಳುತ್ತಿದ್ದರು. ಐಪಿಎಲ್‌ ಪಂದ್ಯಗಳಲ್ಲಿ ತಂಡಗಳ ಆವೇಗ ತುಂಡರಿಸುತ್ತಿದ್ದ ಸ್ಟ್ರ್ಯಾಟಜಿ ಬ್ರೇಕ್‌ನಂತೆ, ಗುರುವಾರ ಸಂಜೆಯಿಂದ ಶುಕ್ರವಾರ ಮುಂಜಾನೆಯವರೆಗಿನ ವಿರಾಮ ಅವರ ಆವೇಗ ಮುರಿಯಿತು.
ಗುರುವಾರ ಸೆಹ್ವಾಗ್‌ 273ರಲ್ಲಿದ್ದಾಗಲೇ ಒಂದು ಜೀವದಾನ ಪಡೆದಿದ್ದರು. ಹಾಗಾಗಿ ಆನಂತರ ಸ್ವಲ್ಪ ನಿಧಾನವಾದರು. ದ್ರಾವಿಡ್‌ ಸಹ ಹೆಚ್ಚು ಸ್ಟ್ರೈಕ್‌ ತೆಗೆದುಕೊಂಡು, ಸೆಹ್ವಾಗ್‌ರನ್ನು 3ನೇ ದಿನಕ್ಕೂ ಉಳಿಸಿಕೊಳ್ಳಲು ಯತ್ನಿಸಿದರು. ಅವರ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ, ಸೆಹ್ವಾಗ್‌ರ ಲಹರಿ ತುಂಡಾಯಿತು. ಆದರೆ, ವೀರೂ ಇದಕ್ಕೆಲ್ಲಾ ಚಿಂತಿಸುವವರಲ್ಲ. ಅವರು ಯಾವತ್ತೂ ಔಟಾದ ಬಳಿಕ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತ, ರೋಷಾವೇಶ ಪ್ರದರ್ಶಿಸುತ್ತ ಪೆವಿಲಿಯನ್‌ಗೆ ಮರಳಿದವರಲ್ಲ. ಶುಕ್ರವಾರವೂ ಅಷ್ಟೇ. 293 ರನ್‌ಗೆ ಔಟಾದ ಬಳಿಕ ಸ್ಥಿತಪ್ರಜ್ಞರಂತೆ ಮರಳಿದರು. 300 ಕೈತಪ್ಪಿದ ನಿರಾಸೆ ಆ ಕ್ಷಣದಲ್ಲೇ ಮಾಯವಾಯಿತು. ಈಗಲ್ಲದಿದ್ದರೆ, ಇನ್ನೊಮ್ಮೆ ಗಳಿಸುತ್ತೇನೆ ಎಂದು ದಿನದಾಟದ ಬಳಿಕ ಹೇಳಿಕೊಂಡರು. ಭಾರತದ ಉಳಿದ ಕ್ರಿಕೆಟಿಗರಿಗೆ 300 ರನ್‌ ಗಳಿಸುವುದೆಂದರೆ, ಕನಸೇ ಸರಿ. ಆದರೆ, ಸೆಹ್ವಾಗ್‌ಗೆ ಅಂಥ ಆತ್ಮವಿಶ್ವಾಸ. ಅವರ ಯಶಸ್ಸಿನ ಒಳಗುಟ್ಟೇ ಅದು.

ಪ್ರತಿಕೂಲವಲ್ಲ ಎಲ್ಲವೂ ಅನುಕೂಲ
ಆಟಗಾರರ ಶ್ರೇಷ್ಠತೆ ಅಳೆಯುವಾಗ, ಎದುರಾಳಿಗಳು, ಪಿಚ್‌ ಇತ್ಯಾದಿಗಳನ್ನೂ ಪರಿಗಣಿಸಲಾಗುತ್ತದೆ. ಆದರೆ, ವೀರೂ ವಿಷಯದಲ್ಲಿ ಪ್ರತಿಕೂಲ ಸನ್ನಿವೇಶವೆನ್ನುವುದೇ ಇಲ್ಲ. ಎದುರಾಳಿ ಬೌಲರ್‌ಗಳ ಸಾಮರ್ಥ್ಯಕ್ಕಂತೂ ಅವರು ಬೆಲೆ ಕೊಡುವುದಿಲ್ಲ. ಪಿಚ್‌ಗಳ ವಿಷಯದಲ್ಲೂ ಅಷ್ಟೇ. ಅವರ ದೊಡ್ಡ ದೊಡ್ಡ ಶತಕಗಳೆಲ್ಲವೂ ದಕ್ಷಿಣ ಆಫ್ರಿಕಾದ ಬ್ಲೋಂಫೋಂಟೀನ್‌, ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಂ, ಆಸ್ಟ್ರೇಲಿಯಾದ ಮೆಲ್ಬೋರ್ನ್‌, ಪಾಕಿಸ್ತಾನದ ಲಾಹೋರ್‌, ಶ್ರೀಲಂಕಾದ ಗಾಲೆ, ತವರಿನ ಮುಂಬೈ, ಚೆನ್ನೈ, ಬೆಂಗಳೂರು ಮೊದಲಾದೆಡೆ ದಾಖಲಾಗಿವೆ. ಬ್ಯಾಟಿಂಗ್‌ ಪಿಚ್‌, ವೇಗದ ಪಿಚ್‌, ಸ್ಪಿನ್‌ ಪಿಚ್‌, ಮಂದ ಪಿಚ್‌ ಇದಾವುದೂ ಅವರಿಗೆ ಮುಖ್ಯವಾಗುವುದಿಲ್ಲ. ಕೈಯಲ್ಲಿ ಬ್ಯಾಟ್‌ ಇರುವಾಗ, ಎದುರಿಗೆ ಚೆಂಡು ಕಾಣುತ್ತಿರುವಾಗ ಅವರಿಗೆ ಬೇರಾವ ಸಂಗತಿಗಳೂ ಮುಖ್ಯವಾಗುವುದಿಲ್ಲ.

No comments:

Post a Comment