Sunday, December 6, 2009

ಸಂತ, ಶಾಂತ ಮತ್ತು ಶ್ರೀಶಾಂತ




ಅದು ನಡೆದಿದ್ದು 2006ರಲ್ಲಿ.
ಹುಡುಗ ಆಗಿನ್ನೂ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಹೆಚ್ಚು ಮಂದಿಗೆ ಆತನ ಮುಖ ಪರಿಚಯ ಇರಲಿಲ್ಲ.
ಅದು ಚಾಲೆಂಜರ್‌ ಟ್ರೋಫಿ ಪಂದ್ಯ. ಆ ಹುಡುಗನ ವೇಗದ ಎಸೆತವೊಂದು ಸಚಿನ್‌ ತೆಂಡುಲ್ಕರ್‌ರನ್ನು ವಂಚಿಸಿತು. ಇದರಿಂದ ಉತ್ತೇಜಿತನಾದ ಆತ ಸಚಿನ್‌ಗೆ ತೀರಾ ಹತ್ತಿರ ಹೋಗಿ `ನೀನೇನು ಮಹಾ' ಎನ್ನುವಂತೆ ದುರುಗುಟ್ಟಿಕೊಂಡು ನೋಡಿದ.
ಸಚಿನ್‌ ಆ ಕ್ಷಣಕ್ಕೆ ಸುಮ್ಮನಿದ್ದರು. ಆದರೆ, ಮುಂದಿನ ಎಸೆತವನ್ನೇ ಕ್ರೀಸ್‌ ಬಿಟ್ಟು ಮುಂದೆ ಬಂದು ಟೆನಿಸ್‌ ಚೆಂಡನ್ನು ಹೊಡೆಯುವಂತೆ ಸಿಕ್ಸರ್‌ಗಟ್ಟಿದರು. ನಂತರ ತಾವೇ ಆ ಹುಡುಗನ ಬಳಿ ಹೋಗಿ ಇನ್ನೊಮ್ಮೆ ಅಷ್ಟೊಂದು ಹತ್ತಿರದಿಂದ ನನ್ನ ಕಣ್ಣಲ್ಲಿ ಕಣ್ಣಿಡುವ ತಪ್ಪು ಮಾಡಬೇಡ ಎಂದರು.
ಅದೇ ಪಂದ್ಯ. ಅದೇ ಹುಡುಗ. ವೀರೇಂದ್ರ ಸೆಹ್ವಾಗ್‌ ಅಮೋಘವಾಗಿ ಬೌಂಡರಿ ಬಾರಿಸುತ್ತಿದ್ದಂತೆಯೇ ಹತ್ತಿರ ಹೋಗಿ, ನೀನು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಷ್ಟು ಚೆನ್ನಾಗಿ ಆಡುವುದಿಲ್ಲವೇಕೆ ಎಂದು ಕೆಣಕಿದ. ಸೆಹ್ವಾಗ್‌ ಕೂಡಲೇ ಅಂಪೈರ್‌ಗಳಿಗೆ ದೂರು ನೀಡಿದರು.
ಅದೇ ಪಂದ್ಯದಲ್ಲಿ ಆ ಹುಡುಗ ಮತ್ತೊಮ್ಮೆ ಹರ್ಭಜನ್‌ ಸಿಂಗ್‌ರನ್ನೂ ಕೆಣಕಿದ. ಸಿಟ್ಟಿಗೆದ್ದ ಭಜಿ ಅಟ್ಟಿಸಿಕೊಂಡು ಬಂದಿದ್ದರು. ಅವರಿಬ್ಬರ ಜಟಾಪಟಿ ಬಿಡಿಸಲು ಅಂಪೈರ್‌ಗಳು ಮಧ್ಯಪ್ರವೇಶ ಮಾಡಬೇಕಾಯಿತು.
ಆ ಹುಡುಗನೇ ಶಾಂತಕುಮಾರನ್‌ ಶ್ರೀಶಾಂತ್‌ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವೇನೂ ಇಲ್ಲ.
ಆರಂಭದಲ್ಲಿ ಮಾಧ್ಯಮಗಳಿಗೆ ಅವರ ಹೆಸರು ಬರೆಯುವಾಗ ಗೊಂದಲವಾಗುತ್ತಿತ್ತು. ಕೆಲವರು ಶ್ರೀಶಾಂತ್‌ ಎಂದು ಕೆಲವರು ಶ್ರೀ ಸಂತ್‌ ಎಂದೂ ಬಳಸುತ್ತಿದ್ದರು. ವಿಪರ್ಯಾಸವೆಂದರೆ, ಹೆಸರಿನಲ್ಲಿದ್ದ ಶಾಂತ ಗುಣವಾಗಲೀ, ಸಂತ ಗುಣವಾಗಲೀ ಅವರ ಸ್ವಭಾವದಲ್ಲಿರಲಿಲ್ಲ. ಆದರೆ, ಓರ್ವ ಬೌಲರ್‌ ಆಗಿ ಶ್ರೀಶಾಂತ್‌ಗೆ ಫುಲ್‌ ಮಾರ್ಕ್ಸ್‌. ಆ ವಿಷಯದಲ್ಲಿ ಯಾರ ತಕರಾರೂ ಇರಲಿಲ್ಲ. ಸ್ವಲ್ಪ ರನ್‌ ಹೊಡೆಸಿಕೊಂಡರೂ, ವಿಕೆಟ್‌ ಕಬಳಿಸುವ ಬೌಲರ್‌. ಇದನ್ನು ಮನಗಂಡಿದ್ದ ಟೀಮ್‌ ಇಂಡಿಯಾ ನಾಯಕ ಎಂಎಸ್‌ ಧೋನಿ, ಶ್ರೀಲಂಕಾ ವಿರುದ್ದ ಸರಣಿ ಮೂಲಕ ಶ್ರೀ ಪುನರಾಗಮನಕ್ಕೆ ಅವಕಾಶ ಕಲ್ಪಿಸಿದರು. ಕಾನ್ಪುರದಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ 6 ವಿಕೆಟ್‌ ಕಬಳಿಸಿದ ಶ್ರೀ ಪಂದ್ಯಶ್ರೇಷ್ಠರಾಗುವ ಮೂಲಕ ನಾಯಕನ ವಿಶ್ವಾಸ ಉಳಿಸಿಕೊಂಡರು. ಭಾರತದ ಮಟ್ಟಿಗೆ ಬೌಲರ್‌ ಒಬ್ಬನ ಅತ್ಯಂತ ಭರ್ಜರಿ ಪುನರಾಗಮನ ಇದು.
ಹಾಗೆ ನೋಡಿದರೆ, 2008ರ ಆರಂಭದಲ್ಲಿ ಶ್ರೀಶಾಂತ್‌ ತಂಡದಿಂದ ಕೊಕ್‌ ಪಡೆದಿದ್ದು ಕಳಪೆ ಫಾರ್ಮ್‌ನಿಂದಲ್ಲ. ಬದಲಿಗೆ ಎಗ್ಗಿಲ್ಲದ ಸ್ವಭಾವ ಮತ್ತು ಗಾಯಗಳಿಂದ. ಮೈದಾನದಲ್ಲಿನ ಅವರ ಚೇಷ್ಟೆಗಳು ಸಹಿಸಲಸಾಧ್ಯವಾಗಿದ್ದವು. ದಿನಕ್ಕೊಂದು ಹೊಸ ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಶ್ರೀ ಎಂದರೆ, ಜಗಳಗಂಟ, ಪುಂಡ, ತಂಟೆಕೋರ ಇತ್ಯಾದಿ ಭಾವನೆಗಳು ಬಲಿಯತೊಡಗಿದ್ದವು. ಆಕ್ರಮಣಶೀಲತೆಯ ಹೆಸರಿನಲ್ಲಿ ಅವರು ಅವಕಾಶ ಸಿಕ್ಕಾಗಲೆಲ್ಲಾ ಮೈದಾನದಲ್ಲಿ ಲಕ್ಷ್ಮಣರೇಖೆ ದಾಟುತ್ತಿದ್ದರು. ನಿಯಮಗಳಿರುವುದೇ ಉಲ್ಲಂಘಿಸುವುದಕ್ಕೆ ಎಂದು ಅವರು ಅರ್ಥ ಮಾಡಿಕೊಂಡಂತಿತ್ತು, ಎದುರಾಳಿ ತಂಡಗಳ ಆಕ್ರಮಣಶೀಲ ಆಟಗಾರರ ಎದುರು ಇವರು ಇನ್ನಷ್ಟು ಹೆಚ್ಚೇ ಆಕ್ರಮಣಶೀಲರಾಗುತ್ತಿದ್ದರು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್‌, ದಕ್ಷಿಣ ಆಫ್ರಿಕಾದ ಆಂಡ್ರೆ ನೆಲ್‌ ಮೊದಲಾದ ವಿಕ್ಷಿಪ್ತ ಮನೋವೃತ್ತಿಯ ಆಟಗಾರರ ವಿರುದ್ಧ ಇವರು ಪ್ರಚೋದನೆ ಇಲ್ಲದೆಯೂ ಕೆರಳುತ್ತಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಂಡ್ರೆ ನೆಲ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಹೊಡೆದ ಬಳಿಕ ಶ್ರೀಶಾಂತ್‌ ನರ್ತಿಸಿದ ಭಂಗಿಯನ್ನು ಜನುಮದಲ್ಲಿ ಮರೆಯಲು ಸಾಧವಿಲ್ಲ. ಸ್ವತಃ ಬೇರೆ ಆಟಗಾರರನ್ನು ಪ್ರಚೋದಿಸಿ, ಕೆರಳಿಸಿ ಅಭ್ಯಾಸವಿದ್ದ ಸೈಮಂಡ್ಸ್‌, ಹೇಡನ್‌ರಂಥ ಆಟಗಾರರು ಶ್ರೀಶಾಂತ್‌ ಆವೇಶದ ಬಿಸಿಗೆ ಕಕ್ಕಾಬಿಕ್ಕಿಯಾಗಿದ್ದರು. ಶ್ರೀ ಓರ್ವ ಕ್ರಿಕೆಟಿಗ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದರೆ, ಶ್ರೀ ಯಾರಿಗೂ ಕ್ಯಾರೆ ಅನ್ನುತ್ತಿರಲಿಲ್ಲ. ಅವರ ವರ್ತನೆ ನೋಡುವವರಿಗೆ ರಂಜನೆ ಒದಗಿಸುತ್ತಿತ್ತು. ಆದರೆ, ತಂಡದ ಸಹಆಟಗಾರರಿಗೆ ಮುಜುಗರ ಉಂಟುಮಾಡುತ್ತಿತ್ತು. ಶ್ರೀ ವರ್ತನೆ ಸಮರ್ಥಿಸಿಕೊಳ್ಳಲು ನಾಯಕ ಧೋನಿ ಪದೇ ಪದೇ ಮ್ಯಾಚ್‌ ರೆಫ್ರಿ ಕೊಠಡಿಗೆ ಹೋಗುವಂತಾಗುತ್ತಿತ್ತು.
ಆದರೂ, ಕ್ರಿಕೆಟ್‌ಗೆ ಶ್ರೀಶಾಂತ್‌ರಂಥ ವ್ಯಕ್ತಿ- ವ್ಯಕ್ತಿತ್ವ ಬೇಕು. ಎಲ್ಲರೂ ತಣ್ಣಗಿದ್ದುಬಿಟ್ಟರೆ, ಗಾಂಧಿಗಿರಿ ಮೆರೆಯುವವರಾದರೆ, ಆಟವೇ ಸಪ್ಪೆ ಎನಿಸಿಬಿಡುತ್ತದೆ, ಓರ್ವ ನಾಯಕ ಉತ್ತುಂಗಕ್ಕೇರಬೇಕಾದರೆ, ಆತನ ಎದುರು ಸೋಲುವುದಕ್ಕೆ ಖಳನಾಯಕನೂ ಇರಬೇಕು. ಹಾಗೆಯೇ ತಂಡ ಕ್ರೀಡೆಗಳಲ್ಲಿ ವಿವಿಧ ಸಾಮರ್ಥ್ಯ, ಮನೋಧರ್ಮದ ಆಟಗಾರರೂ ಇರಬೇಕಾಗುತ್ತದೆ.
ಕ್ರಿಕೆಟ್‌ ಜಗತ್ತಿನಲ್ಲಿ ಶ್ರೀಶಾಂತ್‌ರಂಥ ಪುಂಡ ಪ್ರತಿಭೆಗಳು ಒಬ್ಬರೇ ಅಲ್ಲ. ಪಾಕಿಸ್ತಾನದ ಶೋಯಿಬ್‌ ಅಖ್ತರ್‌, ಆಸ್ಟ್ರೇಲಿಯಾದ ಸೈಮಂಡ್ಸ್‌ ಮೊದಲಾದವರು ಇದೇ ಯಾದಿಗೆ ಸೇರುವವರು. ಇತರ ಕ್ರೀಡೆಗಳಲ್ಲೂ ಸಾಮರ್ಥ್ಯದ ಜೊತೆಜೊತೆಗೆ ದಾರ್ಷ್ಟ್ಯ, ಉದ್ಧಟತನದ ವರ್ತನೆಗಳಿಂದ ಜನಪ್ರಿಯರಾದ ಮೈಕ್‌ ಟೈಸನ್‌, ಡೀಗೋ ಮರಡೋನರಂಥ ಅಸಂಖ್ಯಾತ ಉದಾಹರಣೆಗಳಿವೆ.
ಪಾಕಿಸ್ತಾನದ ಶೋಯಿಬ್‌ ಅಖ್ತರ್‌ ವಿಶ್ವದ ಅತ್ಯಂತ ವೇಗದ ಬೌಲರ್‌ ಆಗಿದ್ದರೂ, ತಿದ್ದಲಾಗದ, ತಿದ್ದಿಕೊಳ್ಳಲಾಗದ ಲಂಗುಲಗಾಮಿಲ್ಲದ ಸ್ವಭಾವದಿಂದಾಗಿ ಅಧಃಪತನ ಕಂಡರು. ಅವರ ಅಪಾರವಾದ ಪ್ರತಿಭೆ ವ್ಯರ್ಥವಾಗಿ ಹೋಯಿತು. ಆದರೆ, ಸೂಕ್ತ ಸಂದರ್ಭದಲ್ಲಿ ಸರಿಯಾದ ವ್ಯಕ್ತಿಗಳ ಕೈಗೆ ಸಿಕ್ಕಿದರೆ, ಪುಂಡರೂ ಪ್ರಬುದ್ಧರಾಗಬಹುದು ಎನ್ನುವುದಕ್ಕೆ ರಿಕಿ ಪಾಂಟಿಂಗ್‌ ಉದಾಹರಣೆ. ವೃತ್ತಿಜೀವನದ ಆರಂಭದ ದಿನಗಳಲ್ಲಿ ಪಾಂಟಿಂಗ್‌ ಮಹಾ ಫಟಿಂಗರಾಗಿದ್ದರು. ಅಹಂಕಾರದಿಂದ ವರ್ತಿಸುತ್ತಿದ್ದರು. ಕುಡಿದು ಗಲಾಟೆ ಮಾಡುತ್ತಿದ್ದರು. ಹಿರಿಯರಿಗೆ ಗೌರವ ಕೊಡುತ್ತಿರಲಿಲ್ಲ. ಪೂರ್ವ ಸಾಧಕರ ಬಗ್ಗೆ ಆದರವಿರಲಿಲ್ಲ. ತಮ್ಮ ಪ್ರತಿಭೆಯ ಬಗ್ಗೆ ಅವರಿಗೆ ಗರ್ವವಿತ್ತು. ಅದೇ ರೀತಿ ಮುಂದುವರೆದಿದ್ದರೆ, ಅವರು ಬಹುಬೇಗನೆ ಮೂಲೆಗುಂಪಾಗಿ ಹೋಗುತ್ತಿದ್ದರು. ಆದರೆ, ಅದಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾ ಅವಕಾಶ ಕೊಡಲಿಲ್ಲ. ಅವರಿಗೆ ತಿಳಿಹೇಳಲಾಯಿತು. ಅವರು ತಮ್ಮ ಆಕ್ರಮಣಶೀಲತೆಯನ್ನು, ಅಹಂಭಾವವನ್ನು, ಮೇಲರಿಮೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಹೇಗೆ ಎಂದು ಮಾರ್ಗದರ್ಶನ ಮಾಡಲಾಯಿತು. ಮುಂದೆ ಅವರು ಆಸ್ಟ್ರೇಲಿಯಾ ತಂಡದ ನಾಯಕರೇ ಆದರು. ಆಟಗಾರನಾಗಿ, ನಾಯಕನಾಗಿ ಅತ್ಯಂತ ಯಶಸ್ವಿಯಾದರು. ಹಾಗೆಂದು ಪಾಂಟಿಂಗ್‌ ಈಗ ಸಜ್ಜನ ಎಂದೇನೂ ಅಲ್ಲ, ಆದರೆ, ಅವರ ಸ್ವಭಾವ ಆತ್ಮಘಾತಕವಾಗಿಲ್ಲ ಬದಲಿಗೆ ಎದುರಾಳಿಗಳಿಗೆ ಕಂಟಕವಾಗಿದೆ.
ಯಶಸ್ವಿ ಕ್ರಿಕೆಟಿಗರು ಸ್ವಭಾವದಲ್ಲಿ ದೇವತಾಮನುಷ್ಯರಾಗಿರಬೇಕೆನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ, ಹಾಗೆಯೇ ಇರಬೇಕೆಂಬ ನಿಯಮವೇನೂ ಇಲ್ಲ. ಕ್ರೀಡೆಗಳಲ್ಲಿ ಆಯಾ ಆಟಗಾರರ ಪ್ರತಿಭೆ- ಸಾಮರ್ಥ್ಯ ಸರ್ವಗ್ರಾಹ್ಯ, ಸ್ವಭಾವ ಅವರವರ ವ್ಯಕ್ತಿಗತ. ಕೆಲವೊಮ್ಮೆ ಅಶಿಸ್ತು- ಉದ್ಧಟತನದ ಪರಮಾವಧಿಯಂತಿರುವ ಆಟಗಾರರೂ, ಜವಾಬ್ದಾರಿ ಹೆಗಲೇರಿದಾಗ ದಾರಿಗೆ ಬರುತ್ತಾರೆ. ಜೊತೆಗೆ, ಯಾರಿಗೂ ತಲೆಬಾಗದ ಅವರ ಸ್ವಭಾವವೇ ನಾಯಕರಾದಾಗ ತಂಡದ ಮೇಲೆ ಹಿಡಿತ ಸಾಧಿಸಲು ನೆರವಿಗೆ ಬರುತ್ತದೆ. ಮುಲಾಜಿಲ್ಲದೆ ವರ್ತಿಸುವ ಅವರು ಬಹುಬೇಗನೆ ಎಲ್ಲರನ್ನು ತಮ್ಮ ಅಂಕೆಗೆ ತೆಗೆದುಕೊಳ್ಳುತ್ತಾರೆ. ನಾಯಕರಾಗಿ ಸೌರವ್‌ ಗಂಗೂಲಿ ಮತ್ತು ಪಾಂಟಿಂಗ್‌, ಸ್ವಲ್ಪ ಮಟ್ಟಿಗೆ ಗ್ರೇಮ್‌ ಸ್ಮಿತ್‌ ಯಶಸ್ವಿಯಾಗಿದ್ದು ಹೀಗೆ.
ಕೇರಳದ ಹುಡುಗ ಶ್ರೀಶಾಂತ್‌ ಪ್ರಬುದ್ಧರಾಗುವ ಪ್ರಯತ್ನವನ್ನು ಸಾಕಷ್ಟು ಬಾರಿ ಮಾಡಿದ್ದಾರೆ. ಧ್ಯಾನ, ಯೋಗಗಳ ಮೊರೆ ಹೋಗಿದ್ದಾರೆ. ಆದರೆ, ಅದೆಲ್ಲವೂ ಕೆಲವು ದಿನ ಮಾತ್ರ. ಹುಡುಗ ಸುಧಾರಿಸುತ್ತಿದ್ದಾನೆ ಎಂಬ ಭಾವನೆ ಮೂಡುತ್ತಿರುವಾಗಲೇ ಐಪಿಎಲ್‌ನಲ್ಲಿ ಹರ್ಭಜನ್‌ ಸಿಂಗ್‌ರಿಂದ ತಪರಾಕಿ ತಿಂದು ಕಣ್ಣೀರು ಹಾಕುವಂಥ ಪ್ರಸಂಗ ನಡೆದು ಹೋಗುತ್ತದೆ. ಪಂಚತಾರಾ ಹೋಟೆಲ್‌ನಲ್ಲಿ ಎಸಿ ಸದ್ದು ಮಾಡುತ್ತದೆ ಎಂದು ಸಿಬ್ಬಂದಿಯೊಂದಿಗೆ ಜಗಳವಾಡಿ ಸುದ್ದಿ ಮಾಡುತ್ತಾರೆ. ಗೆಳೆಯನ ಬರ್ತ್‌ ಡೇ ಪಾರ್ಟಿಯಲ್ಲಿ ರಾತ್ರಿಯೆಲ್ಲಾ ಕುಣಿದು ಕುಪ್ಪಳಿಸಿ ಪೊಲೀಸ್‌ವರೆಗೆ ದೂರು ಹೋಗುತ್ತದೆ. ಪ್ರಿಯಾಂಕ ಚೋಪ್ರಾ, ಡೈಸಿ ಬೋಪಣ್ಣ ಮೊದಲಾದ ನಟೀಮಣಿಯರೊಂದಿಗೆ ಹೆಸರು ಥಳುಕು ಹಾಕಿಕೊಂಡು ಗಾಸಿಪ್‌ ಅಂಕಣಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವಕಾಶ ನೀಡಿದರೂ, ಅಲ್ಲಿ ಧವಳ್‌ ಕುಲಕರ್ಣಿಯಂಥ ಸಾಧು ಆಟಗಾರನ ವಿರುದ್ಧ ಹರಿಹಾಯ್ದು ಎಲ್ಲರ ಕೆಂಗಣ್ಣಿಗೆ ಪಾತ್ರರಾಗುತ್ತಾರೆ.
ಕೆಲವು ತಿಂಗಳ ಹಿಂದೆ ಬಿಸಿಸಿಐ ಶ್ರೀಶಾಂತ್‌ಗೆ ವರ್ತನೆ ತಿದ್ದಿಕೊಳ್ಳುವಂತೆ ಅಂತಿಮ ಎಚ್ಚರಿಕೆ ನೀಡಿತ್ತು. ಸ್ವಭಾವ ಬದಲಿಸಿಕೊಳ್ಳದಿದ್ದರೆ, ಶ್ರೀ ಭಾರತ ತಂಡಕ್ಕೆ ಮರಳುವುದು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಬೌಲಿಂಗ್‌ ದಿಗ್ಗಜ ಆಲನ್‌ ಡೊನಾಲ್ಡ್‌ರಂಥವರೂ (ಶ್ರೀ ವಾರ್ವಿಕ್‌ಷೈರ್‌ ಕೌಂಟಿ ಪರ ಆಡುವಾಗ ಅಲ್ಲಿ ಕೋಚ್‌ ಆಗಿದ್ದರು) ಹೇಳಿದ್ದರು. ಮಾಧ್ಯಮಗಳು ಶ್ರೀಶಾಂತ್‌ ಮತ್ತೊಮ್ಮೆ ಟೀಮ್‌ ಇಂಡಿಯಾ ಪರ ಆಡುವುದು ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದವು. ಆದರೆ, ದಿಢೀರನೆ ಅವರು ಲಂಕಾ ವಿರುದ್ಧ ಟೆಸ್ಟ್‌ ಸರಣಿಗೆ ಅವಕಾಶ ಪಡೆದೇ ಬಿಟ್ಟರು. ಅಹ್ಮದಾಬಾದ್‌ನ ಮೊದಲ ಟೆಸ್ಟ್‌ನಲ್ಲಿ ಯಾವ ಬಿಗುಮಾನವಿಲ್ಲದೆ ನೀರು ಹೊರುವ ಸೇವೆ ಮಾಡಿದ್ದ ಅವರು, ಕಾನ್ಪುರ ಟೆಸ್ಟ್‌ನಲ್ಲಿ ಅದರಲ್ಲೂ ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದಂತಿದ್ದ ಸಪಾಟೆ ಪಿಚ್‌ನಲ್ಲಿ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದರು.
ಈ ಪಂದ್ಯದಲ್ಲಿ ಅವರು ಮನಸ್ಸನ್ನು ಹತೋಟಿಯಲ್ಲಿರಿಸಿಕೊಂಡಿದ್ದರು. ಆವೇಶದ ಕೈಗೆ ಬುದ್ದಿ ಕೊಡಲಿಲ್ಲ. ವಿಕೆಟ್‌ ಕಬಳಿಸಿದಾಗ ಅಥವಾ ಅಂಪೈರ್‌ಗೆ ಮನವಿ ಸಲ್ಲಿಸುವಾಗ ಹೆಚ್ಚಿನ ರೋಷಾವೇಷ ಪ್ರದರ್ಶಿಸಲಿಲ್ಲ. ಬಹುಶಃ ಅವರು ಇದೇ ರೀತಿ ತಮ್ಮ ಆಕ್ರಮಣಶೀಲತೆಯನ್ನು, ಆವೇಶವನ್ನು ಮುಖದಲ್ಲಿ ಪ್ರದರ್ಶಿಸದೆ, ಎಸೆತಗಳ ಮೂಲಕ ಪ್ರಯೋಗಿಸಿದರೆ, ಹೆಚ್ಚಿನ ಯಶಸ್ಸು ಸಿಗುವುದು ಸಾಧ್ಯ.
ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ, ಶ್ರೀಶಾಂತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಬೇಕಾದರೆ, ತಮ್ಮ ಹುಟ್ಟುಗುಣವನ್ನು ಕಟ್ಟಿ ಸುಡಬೇಕಿದೆ. ಅವರ ಸ್ವಭಾವಕ್ಕಿಂತ ಅವರ ಬೌಲಿಂಗ್‌ ಹೆಚ್ಚು ಮಾತನಾಡಬೇಕಿದೆ. ಕಾನ್ಪುರದಲ್ಲಿ ಪ್ರಾರಂಭವಾದ ಅವರ ಮರುಪ್ರಯಾಣ ಆಗ ಮಾತ್ರ ಹೆಚ್ಚು ದೂರ ಕ್ರಮಿಸಲು ಸಾಧ್ಯ.

No comments:

Post a Comment