Tuesday, February 9, 2010
ಮನದ ಸೆಳೆತದ ಮಾಯೆಗೆ ಸಿಲುಕಿ...
ಆಸೆಯೇ ದುಃಖಕ್ಕೆ ಮೂಲ.
ಇಲ್ಲದ ವಸ್ತುವಿಗಾಗಿ ಹಂಬಲಿಸುವುದು ಆಸೆ.
ಇರುವುದನ್ನು ಬಿಟ್ಟು ಇಲ್ಲದಿರುವುದರ ಬಗ್ಗೆ ತುಡಿಯುವುದು ಅತೃಪ್ತಿ.
ಆದರೆ, ಈ ಪ್ರಪಂಚವೇ ಅತೃಪ್ತಾತ್ಮಗಳ ಕೊಂಪೆ.
ಇಲ್ಲಿ ಯಾರಿಗೂ ತೃಪ್ತಿ ಇಲ್ಲ. ಸಮಾಧಾನವಿಲ್ಲ.
ತಮಗೇ ಬೇಕಾಗಿರುವುದಾದರೂ ಏನೆಂದು ಸ್ಪಷ್ಟವಾಗಿ ಗೊತ್ತಿಲ್ಲ.
ಒಂದು ಅತೃಪ್ತಿಯಿಂದ ಇನ್ನೊಂದು ಅತೃಪ್ತಿಯ ಕಡೆಗೆ ತೆವಳುವುದೇ ಜೀವನ.
ಆದರೆ, ಈ ಕಾಮನೆಗಳು ಬಹಳ ಅಪಾಯಕಾರಿ, ವಿಧ್ವಂಸಕಾರಿ.
ಕಾಮನೆಗಳ ವಿಧವೂ ಸಾವಿರಾರು.
ಇವುಗಳ ಪೈಕಿ ಬೇರೆಲ್ಲಾ ಬಯಕೆಗಳನ್ನು ಹತ್ತಿಕ್ಕ ಬಹುದು.
ಆದರೆ, ಕಾಮದ ಭೂತ ಬೆನ್ನು ಹತ್ತಿದರೆ, ಅದರ ಗಮ್ಯ ಎಲ್ಲಿ, ಹೇಗೆ ಎಂದು ಊಹಿಸುವುದೂ ಅಸಾಧ್ಯ.
ಕಾಮಾತುರಾಣಾಂ ನ ಭಯಂ ನ ಲಜ್ಜಾ.
ಕಾಮದ ಬೆಂಕಿಯಲ್ಲಿ ಬೇಯುತ್ತಿರುವಾತನಿಗೆ ಯಾವ ಭಯ, ನಾಚಿಕೆಯೂ ಕಾಡುವುದಿಲ್ಲ. ಅದೆಲ್ಲಾ ಶುರುವಾಗುವುದು ವಾಂಛೆ ಈಡೇರಿದ ಮೇಲೆ.
ಕಾಮಕ್ಕೆ ಮೈ-ಮನಸ್ಸು-ಬುದ್ಧಿ ಒಪ್ಪಿಸಿದ ಸಂದರ್ಭ ದಲ್ಲಿ ಭಯ, ಮುಜುಗರ, ಘನತೆ, ವರ್ಚಸ್ಸಿನ ಯೋಚನೆ ಇರುವುದಿಲ್ಲ.
ಎಲ್ಲವೂ ನಿಧಾನವಾಗಿ ನೆನಪಾಗುತ್ತದೆ.
ಪಟ್ಟ ಸುಖವೆಲ್ಲಾ ಕರಗಿದ ಮೇಲೆ, ಮಾಡಿದ ಕೃತ್ಯ ಬೇರೆಯವರಿಗೆ ಗೊತ್ತಾಗದಂತೆ ಮುಚ್ಚಿಡುವ ಪ್ರಯತ್ನಗಳು ನಡೆಯುತ್ತವೆ.
ಆದರೆ, ಅದೆಲ್ಲಾ ಅಷ್ಟು ಸುಲಭವಾಗಿದ್ದರೆ ಜಾನ್ ಟೆರ್ರಿ ಇಂಗ್ಲೆಂಡ್ ಫುಟ್‌ಬಾಲ್ ತಂಡದ ನಾಯಕತ್ವ ಕಳೆದುಕೊಳ್ಳುತ್ತಲೇ ಇರಲಿಲ್ಲ.
ಟೈಗರ್ ವುಡ್ಸ್ ತಲೆ ತಗ್ಗಿಸುವ ಪ್ರಮೇಯ ಒದಗುತ್ತಲೇ ಇರಲಿಲ್ಲ.
ಟೈಗರ್ ವುಡ್ಸ್ ಅವರ ವಿವಾಹಬಾಹಿರ ಸಂಬಂಧ ಗಳ ಸಂಖ್ಯೆ 19ಕ್ಕೇರಿದೆ. ಲೈಂಗಿಕ ವ್ಯಸನದಿಂದ ಮುಕ್ತ ರಾಗಲು ಅವರು 6 ವಾರ ಕಾಲ ಚಿಕಿತ್ಸೆಯನ್ನೂ ಪಡೆದು ಬಂದಿದ್ದಾರೆ.
ಇದುವರೆಗೆ ಇಂಗ್ಲೆಂಡ್‌ನ ಅತ್ಯಂತ ಗೌರವಾನ್ವಿತ ಫುಟ್‌ಬಾಲ್ ಆಟಗಾರನೆನಿಸಿದ್ದ ಜಾನ್ ಟೆರ್ರಿಯ ಅನೈತಿಕ ಸಂಬಂಧಗಳ ಸಂಖ್ಯೆ ಟೈಗರ್ ಬೇಟೆಯನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹಾಗೆ ನೋಡಿದರೆ, ಇವರಿಬ್ಬರೂ ಸಮಾಜದ ದೃಷ್ಟಿ ಯಲ್ಲಿ ಸಂತೃಪ್ತ ವೈವಾಹಿಕ ಜೀವನ ನಡೆಸುತ್ತಿದ್ದವರು. ಸಾರ್ವಜನಿಕವಾಗಿ ಬಹಳ ಸಭ್ಯತೆಯ ಹೊದಿಕೆ ಹೊದ್ದುಕೊಂಡಿದ್ದವರು.
ಆದರೂ, ಇವರು ದಾರಿ ತಪ್ಪಿದ್ದಾದರೂ ಹೇಗೆ?
ಪಾಶ್ಚಾತ್ಯ ಜೀವನಶೈಲಿಯಲ್ಲಿ ಇದೆಲ್ಲಾ ಮಾಮೂಲು ಎನ್ನುವುದು ಭಾರತೀಯರ ಗ್ರಹಿಕೆ. ಹಾಗೆಂದು, ಆ ರಾಷ್ಟ್ರಗಳಲ್ಲಿ ಎಷ್ಟೇ ಸ್ವಚ್ಛಂದ ಪ್ರವೃತ್ತಿ ಇದ್ದರೂ ಅನೈತಿಕ ಸಂಬಂಧಗಳು ಮಾನ್ಯವಲ್ಲ ಎನ್ನುವುದಕ್ಕೆ ಅಲ್ಲಿನ ವಿಚ್ಛೇದನಗಳ ಸಂಖ್ಯೆಯೇ ಜಾಸ್ತಿ. ಭಾರತದಲ್ಲಿನ ವಿಚ್ಛೇದನಗಳಿಗೆ ಹೊಂದಾಣಿಕೆಯ ಕೊರತೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮತ್ತಿತರ ಕಾರಣ ಗಳೇ ಪ್ರಮುಖವಾಗಿದ್ದರೆ, ವಿದೇಶಗಳಲ್ಲಿ ವಿವಾಹ ಬಾಹಿರ ಸಂಬಂಧಗಳೇ ಮದುವೆ ಮುರಿಯಲು ಮುಖ್ಯ ಕಾರಣವಾಗಿರುತ್ತವೆ.
ಹಾಗಾದರೆ, ಅಷ್ಟೊಂದು ಚಂಚಲವೇ ಆ ಜನರ ಮನಸ್ಸು?
ಆದರೆ, ಒಂದು ವಿಷಯ ನಿಜ.
ಕ್ರೀಡಾಪಟುಗಳಿಗೆ ಉಳಿದವರಿಗಿಂತ ಹೆಚ್ಚಾಗಿ ಇಂಥ ಲೈಂಗಿಕ ಸಾಹಸಯಾನ ಕೈಗೊಳ್ಳುವ ಅವಕಾಶ ಒದಗಿ ಬರುತ್ತದೆ.
ಇದಕ್ಕೆ ಕಾರಣ ಅವರು ವರ್ಷದ ಬಹುಭಾಗ ಕುಟುಂಬದಿಂದ ದೂರವಿರುತ್ತಾರೆ. ಪ್ರವಾಸದಲ್ಲಿರು ತ್ತಾರೆ. ಅವರ ಸೆಲೆಬ್ರಿಟಿ ವರ್ಚಸ್ಸಿನಿಂದಾಗಿ ಅವರು ಹೋದಲ್ಲೆಲ್ಲಾ ಹುಡುಗಿಯರು ಮುತ್ತಿಕೊಳ್ಳುತ್ತಾರೆ. ಬಯಸದೆ ಬಂದ ಭಾಗ್ಯವನ್ನು ನಿರಾಕರಿಸುವಷ್ಟು ಸ್ಥಿತಪ್ರಜ್ಞ ಬುದ್ಧಿಯೂ ಇವರಿಗಿರುವುದಿಲ್ಲ. ಹಾಗಾಗಿ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತದೆ.
ಟೈಗರ್ ವುಡ್ಸ್ ಮತ್ತು ಜಾನ್ ಟೆರ್ರಿ ಪ್ರಕರಣದ ನಂತರದ ದಿನಗಳಲ್ಲಿ ಇನ್ನೂ ಒಂದು ಬೆಳವಣಿಗೆಯನ್ನು ಗಮನಿಸಬಹುದು.
ಕ್ರೀಡಾ ಸೆಲೆಬ್ರಿಟಿಗಳೊಂದಿಗೆ ಸಂಬಂಧವಿಟ್ಟುಕೊಂಡ ಮಹಿಳೆಯರಿಗೆ ತಮ್ಮ ಗುಟ್ಟು ರಟ್ಟಾದ ಬಗ್ಗೆ ಬೇಸರವಾಗಲೀ, ನೋವಾಗಲೀ ಇಲ್ಲ.
ಬದಲಿಗೆ ಅದರಿಂದ ದೊರೆತ ಪ್ರಚಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಷ್ಟೇ ಅವರ ಹವಣಿಕೆ. ಇವರ ಪೈಕಿ ಎಷ್ಟೋ ಮಂದಿ ತಮ್ಮ ಸಂಬಂಧದ ಕಥೆಗಳನ್ನು ಚರ್ವಿತಚರ್ವಣವಾಗಿ ರೋಚಕಗೊಳಿಸಿ ಪತ್ರಿಕೆಗಳಿಗೆ, ವೆಬ್‌ಸೈಟ್‌ಗಳಿಗೆ ಮಾರಿದ್ದಾರೆ. ಇನ್ನು ಕೆಲವರಿಗೆ ಬಾಯಿ ಬಿಡದಂತೆ ಆಟಗಾರರೇ ಹಣ ಕೊಟ್ಟಿದ್ದಾರೆ. ಕ್ರೀಡಾ ಸೆಲೆಬ್ರಿಟಿಗಳೊಂದಿಗೆ ಸಂಬಂಧ ಬೆಳೆಸಿ, ನಂತರ ಆ ವಿಷಯವನ್ನು `ಮಾರುವ' ಮೂಲಕ ಶ್ರೀಮಂತ ವಾಗುವ ಒಂದು ವರ್ಗವೇ ಪಶ್ಚಿಮದಲ್ಲಿ ಬೆಳೆಯುತ್ತಿದೆ ಎನ್ನುವುದು ಇದರಿಂದ ವೇದ್ಯ.
ಪ್ರಚೋದನೆಗಳು ಏನೇ ಇದ್ದರೂ, ಕ್ರೀಡೆಯಲ್ಲಿ ಎತ್ತರಕ್ಕೇರುವವರು ನೈತಿಕವಾಗಿ ಪಾತಾಳಕ್ಕೆ ಬೀಳುವುದೇಕೆ?
ದಿಢೀರ್ ಪ್ರಖ್ಯಾತಿ, ಶ್ರೀಮಂತಿಕೆ ತಮ್ಮ ಇರುವನ್ನು ಮರೆಸುತ್ತವೆ. ಸಾಧಾರಣ ಹಿನ್ನೆಲೆಯಿಂದ ಬಂದು, ಇದ್ದಕ್ಕಿದ್ದಂತೆಯೇ ಸೆಲೆಬ್ರಿಟಿಗಳಾದವರಿಗೆ ತಮ್ಮ ಜನಪ್ರಿಯತೆಯನ್ನು ನಿರ್ವಹಿಸಲು ಸಾಧ್ಯವಾಗುವು ದಿಲ್ಲ. ಏರಿದವನು, ಕೆಳಗಿಳಿಯಲೇ ಬೇಕು ಎಂಬ ಪ್ರಕೃತಿ ನಿಯಮವನ್ನು ಅವರು ಮರೆಯುತ್ತಾರೆ. ಆ ಕ್ಷಣದ ಸುಖಲೋಲುಪತೆಯಲ್ಲಿ ಮೈಮರೆಯುವ ಅವರಿಗೆ ತಮ್ಮ ತಪ್ಪಿನ ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ.
ಬಹುತೇಕ ಯಶಸ್ವಿ ಕ್ರೀಡಾಪಟುಗಳದ್ದು ವಿಫಲ ದಾಂಪತ್ಯ (ಕೆಲವರನ್ನು ಹೊರತು ಪಡಿಸಿ, ಭಾರತೀಯ ಕ್ರೀಡಾ ಪಟುಗಳು ಈ ವಿಷಯದಲ್ಲಿ ಅಪವಾದ). ಕ್ರಿಕೆಟ್‌ನ ಶೇನ್ ವಾರ್ನ್, ಬ್ರೆಟ್ ಲೀಯಿಂದ, ಫುಟ್ ಬಾಲ್‌ನ ರೊನಾಲ್ಡೊ, ರೊನಾಲ್ಡಿನೊ, ಥಿಯರಿ ಹೆನ್ರಿ, ಡೀಗೊ ಮರಡೋನ, ಟೆನಿಸ್‌ನ ಬೋರಿಸ್ ಬೆಕ್ಕರ್, ಸೈಕ್ಲಿಂಗ್‌ನ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಇವರೆಲ್ಲರೂ ವಿಚ್ಛೇದನದ ಬಾಗಿಲು ದಾಟಿದವರು. ರೊನಾಲ್ಡೊ ಬೆಲೆವೆಣ್ಣುಗಳೆಂದು ಹಿಜ್ರಾಗಳೊಂದಿಗೆ ಚಕ್ಕಂದ ವಾಡಲು ಹೋಗಿ ಮುಜುಗರ ಅನುಭವಿಸಿದ್ದರು. ಟೈಗರ್ ವುಡ್ಸ್, ಥಿಯರಿ ಹೆನ್ರಿ ಇವರೆಲ್ಲರ ಅನೈತಿಕ ಸಂಬಂಧಗಳು ಬಯಲಾಗಿದ್ದು, ಅವರವರ ಮೊಬೈಲ್‌ನಿಂದ. ಶೇನ್ ವಾರ್ನ್‌ರಂತೂ ಅಶ್ಲೀಲ ಎಸ್ಸೆಮ್ಮೆಸ್ ಕಳಿಸುವುದರಲ್ಲಿ ನಿಸ್ಸೀಮ. ಅವರು ಪ್ರೇಯಸಿಗೆಂದು ಕಳಿಸಿದ ಎಸ್ಸೆಮ್ಮೆಸ್ ಹೆಂಡತಿಗೆ ತಲುಪಿ ಸಿಕ್ಕಿಬಿದ್ದಿದ್ದರು. ನ್ಯೂಜಿಲೆಂಡ್ ಕ್ರಿಕೆಟಿಗ ಡರೆಲ್ ಟಫಿ ಲೈಂಗಿಕ ಚಿತ್ರವೊಂದರಲ್ಲಿ ನಟಿಸಿ ನಗೆಪಾಟಲಿ ಗೀಡಾಗಿದ್ದರು. ಹರ್ಷಲ್ ಗಿಬ್ಸ್ ವಿಚ್ಛೇದನಕ್ಕೂ ಅವರ ನಡತೆ ಬಗ್ಗೆ ಹೆಂಡತಿಗೆ ಅನುಮಾನ ಬಂದಿದ್ದೇ ಕಾರಣ.
ಜನ ಕ್ರೀಡಾಪಟುಗಳನ್ನು ಆರಾಧಿಸುವುದಕ್ಕೆ ಕಾರಣ ಮೈದಾನದಲ್ಲಿನ ಅವರ ಕೌಶಲ್ಯ. ಮೈದಾನದಿಂದ ಆಚೆಗೆ ಅವರು ಏನೆಲ್ಲಾ ಮಾಡುತ್ತಾರೆನ್ನುವುದು ಅವರ ವೈಯಕ್ತಿಕ. ಆದರೂ, ಸೆಲೆಬ್ರಿಟಿಗಳಿಗೆ ಖಾಸಗಿ ಜೀವನವೆಂಬುದಿರುವುದಿಲ್ಲ ಎಂಬುದೂ ಸತ್ಯ.
ಯಶಸ್ವಿ ಕ್ರೀಡಾಪಟುವಿನ ಹಿಂದೆ ಅದೆಷ್ಟೋ ಮಂದಿಯ ತ್ಯಾಗ, ಪರಿಶ್ರಮವಿರುತ್ತದೆ. ಯಶಸ್ಸಿಗೆ ನೂರಾರು ನೆಂಟರು. ಕಳಂಕ ಯಾವಾಗಲೂ ಒಂಟಿ. ಇದನ್ನು ಅರಿತವರು ತಪ್ಪು ಹೆಜ್ಜೆ ಇಡುವುದಿಲ್ಲ.
ಕ್ರೀಡೆಯಲ್ಲಿ ಅಂಥ ನಿಷ್ಕಳಂಕ ಕ್ರೀಡಾಪಟುಗಳ ಸಂಖ್ಯೆಯೂ ಕಡಿಮೆ ಏನಲ್ಲ.
Subscribe to:
Post Comments (Atom)
No comments:
Post a Comment