Tuesday, November 10, 2009

ಕ್ರಿಕೆಟ್‌ ಧೀಮಂತ ಅನುಭವ ಶ್ರೀಮಂತ


ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷಗಳು


ಇದೇ ಭಾನುವಾರ (ನವೆಂಬರ್‌ 15) ಸಚಿನ್‌ ತೆಂಡುಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಪೂರ್ಣ 20 ವರ್ಷ ತುಂಬಲಿದೆ. 36ರ ಹರೆಯದಲ್ಲೂ ತಾರುಣ್ಯದ ಕೆಚ್ಚು, ಉತ್ಸಾಹ ಮತ್ತು ಅಗಾಧ ರನ್‌ ಹಸಿವು ಉಳಿಸಿಕೊಂಡಿರುವ, ಬೆಳೆಸಿಕೊಂಡಿರುವ ಭಾರತದ ಕ್ರಿಕೆಟ್‌ ಧೀಮಂತನಿಗೆ ಕಂಗ್ರಾಟ್ಸ್‌...

`ಸಚಿನ್‌ ತೆಂಡುಲ್ಕರ್‌ ಮೊದಲ ಬಾರಿ ಭಾರತವನ್ನು ಪ್ರತಿನಿಧಿಸಿ ಮೈದಾನ ಪ್ರವೇಶಿಸಿದಾಗ ಬರ್ಲಿನ್‌ನ ಗೋಡೆ ಇನ್ನೂ ಇತ್ತು. ನೆಲ್ಸನ್‌ ಮಂಡೇಲಾ ಜೈಲಿನಲ್ಲಿದ್ದರು. ಆಲನ್‌ ಬಾರ್ಡರ್‌ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಭಾರತ ಧೂಳು, ಬಡತನ ಮತ್ತು ಅಳ್ಳೆದೆಯ ಬ್ಯಾಟ್ಸ್‌ಮನ್‌ಗಳ ದೇಶವೆಂದು ಗುರುತಿಸಲ್ಪಡುತ್ತಿತ್ತು.
ಗುಂಗುರು ಕೂದಲಿನ, ಹಾಲುಕೆನ್ನೆಯ ತೆಂಡುಲ್ಕರ್‌, ವಾಸಿಂ ಅಕ್ರಂ ಮತ್ತು ಆಸ್ಟ್ರೇಲಿಯಾದ ಅತ್ಯಂತ ಭಯಾನಕ ವೇಗಿ ಮರ್ವ್‌ ಹ್ಯೂಸ್‌ ಸೇರಿದಂತೆ ಜಗದ ಎಲ್ಲಾ ಘಟಾನುಘಟಿ ವೇಗಿಗಳ ವಿರುದ್ಧ ದಿಟ್ಟವಾಗಿ ಆಡುವುದು ಹೇಗೆಂದು ತೋರಿಸಿಕೊಟ್ಟರು. ಸದ್ಯ 36 ವರ್ಷದ ತೆಂಡುಲ್ಕರ್‌ ಈಗಲೂ ಅದೇ ರೀತಿ ಆಡುತ್ತಾರೆ. ತಮ್ಮ ತಾರುಣ್ಯದ ದಿಟ್ಟತವನ್ನು ಈಗಲೂ ಉಳಿಸಿಕೊಂಡಿದ್ದಾರೆ. ಜೊತೆಗೆ ವಯೋಸಹಜ ಪ್ರಬುದ್ಧತೆಯನ್ನೂ ಹೊಂದಿದ್ದಾರೆ...'
ಸಚಿನ್‌ ತೆಂಡುಲ್ಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಪ್ರಖ್ಯಾತ ಕ್ರಿಕೆಟ್‌ ಅಂಕಣಕಾರ ಪೀಟರ್‌ ರೋಬಕ್‌ ಆಸ್ಟ್ರೇಲಿಯಾದ `ದ ಏಜ್‌' ಪತ್ರಿಕೆಯಲ್ಲಿ ಈ ರೀತಿ ಅಂಕಣ ನಮನ ಸಲ್ಲಿಸಿದ್ದಾರೆ.
ಸರ್ವ ಶ್ರೇಷ್ಠ ಕ್ರಿಕೆಟಿಗರ ಯಾದಿಯಲ್ಲಿ ಡಾನ್‌ ಬ್ರಾಡ್ಮನ್‌ ನಂತರದ ಸ್ಥಾನದಲ್ಲಿ ಪ್ರತಿಷ್ಠಾಪಿತರಾಗಿರುವ ಪರಿಪೂರ್ಣ ಕ್ರಿಕೆಟಿಗ ಸಚಿನ್‌ ಬಗ್ಗೆ ಅವರು ತಲೆದೂಗುವಂಥ ಲೇಖನ ಬರೆದಿದ್ದಾರೆ.
ಸಚಿನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿ 20 ವರ್ಷವಾಯಿತು ಎಂದು ಆಸ್ಟ್ರೇಲಿಯಾ ನೆನಪಿಸಿಕೊಂಡಿದೆ. ಭಾರತದಲ್ಲಿನ್ನೂ ಆ ವಿಚಾರ ಇನ್ನಷ್ಟೇ ಮಹತ್ವ ಪಡೆಯಬೇಕಿದೆ. ಸದ್ಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋತ ಶೋಕಾಚರಣೆಯಲ್ಲಿರುವ ಕ್ರಿಕೆಟ್‌ ಮತ್ತು ಮಾಧ್ಯಮಗಳು ನಮ್ಮವರೇ ಆದ ಸಚಿನ್‌ರ ಹಿಮಾಲಯ ಸದೃಶ ವೃತ್ತಿಜೀವನದಿಂದ ಪ್ರೇರಣೆ ಪಡೆಯಬೇಕಿದೆ. ಸೋಲು -ಗೆಲುವುಗಳು ಕ್ರೀಡೆಯ ಒಂದು ಭಾಗ. ಸೋಲಿನಿಂದ ಪಾಠ ಕಲಿಯಬೇಕೇ ಹೊರತು, ಕೊರಗುತ್ತ, ಮರುಗುತ್ತ ಕಾಲಹರಣ ಮಾಡಬಾರದು.
ಹಾಲುಗಲ್ಲದ ಸಚಿನ್‌ ತೆಂಡುಲ್ಕರ್‌ ಚೊಚ್ಚಲ ಬಾರಿ ಭಾರತವನ್ನು ಪ್ರತಿನಿಧಿಸಿ ಆಡಿದ್ದು 1989ನೇ ಇಸವಿ ನವೆಂಬರ್‌ 15ರಂದು. ಆ ದಿನ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಿತ್ತು. ಸಚಿನ್‌ ತಮ್ಮ ಚೊಚ್ಚಲ ಇನಿಂಗ್ಸ್‌ ಆಡಲು ಕ್ರೀಸ್‌ಗೆ ಆಗಮಿಸುವಾಗ ಪ್ರೇಕ್ಷಕರು ಫೀಡಿಂಗ್‌ ಬಾಟಲ್‌ ತೋರಿಸಿ ಅಣಕ ಮಾಡಿದ್ದರು. ಆದರೆ, ಸಚಿನ್‌ ವಿಚಲಿತರಾಗಲಿಲ್ಲ. ಇಮ್ರಾನ್‌ ಖಾನ್‌, ವಾಸಿಂ ಅಕ್ರಂ, ವಕಾರ್‌ ಯೂನಸ್‌ (ಅವರಿಗೂ ಅದು ಚೊಚ್ಚಲ ಪಂದ್ಯವಾಗಿತ್ತು) ಮತ್ತು ಅಬ್ದುಲ್‌ ಖಾದಿರ್‌ ಬೌಲಿಂಗ್‌ ಎದುರಿಸಿ ನಿಂತು 15 ರನ್‌ ಮಾಡಿದರು. ಇವರು ಸಾಧಾರಣ ಪ್ರತಿಭೆಯಲ್ಲ ಎಂಬ ಭಾವನೆಯನ್ನು ಆಗಲೇ ಅವರು ಎಲ್ಲರಲ್ಲಿ ಮೂಡಿಸಿದ್ದರು.
ಅಂದಿನಿಂದ ಇಂದಿನವರೆಗೆ ಸಚಿನ್‌ ತುಳಿದಿದ್ದು ರಾಜಮಾರ್ಗ. ಅವರು ತಾವು ಮಾತ್ರ ಬೆಳೆಯಲಿಲ್ಲ, ಜೊತೆಯಲ್ಲೇ ಭಾರತೀಯ ಕ್ರಿಕೆಟ್‌ ಅನ್ನೂ ಬೆಳೆಸಿದರು. ದೇಶ ವಿದೇಶಗಳಲ್ಲಿ ಜನ ಸಚಿನ್‌ ಆಟ ನೋಡಲು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದರು. ಸಚಿನ್‌ರ ಯಶಸ್ಸಿನೊಂದಿಗೆ ಭಾರತದ ಯಶಸ್ಸಿನ ಅನುಪಾತವೂ ಏರಿತು. ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಟೀಕೆಯಿಂದ ತಂಡ ನಿಧಾನವಾಗಿ ಮುಕ್ತವಾಗತೊಡಗಿತು. ಸೋಲುವ ಪಂದ್ಯಗಳಲ್ಲೂ ಭಾರತದ ಹೋರಾಟ ಸಚಿನ್‌ರಿಂದ ಆರಂಭವಾಗಿ ಅವರೊಂದಿಗೇ ಮುಕ್ತಾಯವಾಗುತ್ತಿತ್ತು. 90ರ ದಶಕದಲ್ಲಿ ಭಾರತೀಯ ಕ್ರಿಕೆಟ್‌ ಸ್ವಲ್ಪ ಮಟ್ಟಿಗೆ ಫಲಿತಾಂಶದ ದೃಷ್ಟಿಯಿಂದ, ಮುಖ್ಯವಾಗಿ ಆರ್ಥಿಕವಾಗಿ ಶ್ರೀಮಂತವಾಗಿ ಬೆಳೆದರೆ, ಅದರಲ್ಲಿ ಸಚಿನ್‌ರ ಕೊಡುಗೆ ಸಿಂಹಪಾಲೆನಿಸಿತ್ತು. ಹಾಗೆಂದು ತಂಡದಲ್ಲಿ ಬೇರಾರೂ ಸಮರ್ಥರು ಇರಲೇ ಇಲ್ಲವೆಂದಲ್ಲ. ಆದರೆ, ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ವಿಶ್ವದ ಎದುರಾಳಿಗಳ ಮೇಲೆ ಸಚಿನ್‌ ಭೀತಿ ಹಾಗೂ ಗೌರವದ ಛಾಪು ಮೂಡಿಸಿದಂತೆ ಬೇರಾರಿಂದಲೂ ಸಾಧ್ಯವಾಗಲಿಲ್ಲ.
ಸಚಿನ್‌ ಹತ್ತು ಹಲವು ಬಾರಿ ಗಾಯಗಳಿಂದಾಗಿ ವಿಶ್ರಾಂತಿ ಪಡೆದಿರಬಹುದು. ಆದರೆ, ಭಾರತ ತಂಡದಲ್ಲಿ ಖಾಯಂ ಆಟಗಾರನೆಂಬ ಪರಿಕಲ್ಪನೆಗೆ ನಿಜ ಅರ್ಥ ಪ್ರಾಪ್ತವಾಗಿದ್ದು ಸಚಿನ್‌ ಮೂಲಕವೇ. ಆಯ್ಕೆಗಾರರು ಕಳೆದ ಇಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ಸಚಿನ್‌ರನ್ನು ತಂಡದಿಂದ ಕೈಬಿಡಬೇಕಾದ ಪ್ರಮೇಯ ಉದ್ಭವವಾಗಲಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಒಮ್ಮೆಯೂ ಸ್ಥಾನ ಕಳೆದುಕೊಳ್ಳದ ಇನ್ನೊಬ್ಬ ಆಟಗಾರನ ನಿದರ್ಶನ ಸಿಗುವುದು ಕಷ್ಟ.
ವಿಶ್ವದ ಕ್ರಿಕೆಟಿಗರ ಶಕ್ತಿ- ಸಾಮರ್ಥ್ಯ ವಿಶ್ಲೇಷಿಸುವಾಗ ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ಇರುತ್ತದೆ. ಆದರೆ, ಸಚಿನ್‌ ಪರಿಪೂರ್ಣ ಆಟಗಾರ. ರಾಮಾಯಣ - ಮಹಾಭಾರತಗಳಲ್ಲಿ ಇರುವುದು ಜಗತ್ತಿನಲ್ಲಿ ಎಲ್ಲೆಡೆಯೂ ಕಾಣಬಹುದು. ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲೂ ಇರಲು ಸಾಧ್ಯವಿಲ್ಲದ ವಿಷಯಗಳೂ ರಾಮಾಯಣ- ಮಹಾಭಾರತಗಳಲ್ಲಿವೆ ಎಂಬ ಹೊಗಳಿಕೆ ಇದೆ. ಸಚಿನ್‌ಗೂ ಈ ಮಾತು ಅನ್ವರ್ಥ. ಸಚಿನ್‌ ಯಾವತ್ತೂ ಎದುರಾಳಿ ತಂಡ, ಬೌಲರ್‌ಗಳು, ಪಿಚ್‌, ವಾತಾವರಣ ಇತ್ಯಾದಿ ಸಂಗತಿಗಳನ್ನು ಅವಲಂಬಿಸಿ ಆಡಿದವರಲ್ಲ. ಹಾಗೆ ನೋಡಿದರೆ, ಅವರು ವೃತ್ತಿಜೀವನದಲ್ಲಿ ಪ್ರತಿಕೂಲ ಸನ್ನಿವೇಶದಲ್ಲಿ ಏಕಾಂಗಿಯಾಗಿ ಹೋರಾಡಿದ ಪ್ರಸಂಗಗಳೇ ಹೆಚ್ಚು. ತಂಡದ ಉಳಿದೆಲ್ಲಾ ಆಟಗಾರರು ವಿಜೃಂಭಿಸುವ ದಿನ ಸಚಿನ್‌ ತಮ್ಮ ಸಹಜ ಆಟ ಆಡುತ್ತಾರೆ. ತಂಡದ ಉಳಿದೆಲ್ಲರೂ ವಿಫಲರಾಗುವ ದಿನ ಸಚಿನ್‌ ವಿಶೇಷ ಆಟ ಆಡುತ್ತಾರೆ. ಇದಕ್ಕೆ 1992ರಲ್ಲಿ ಪರ್ತ್‌ ಟೆಸ್ಟ್‌ನಲ್ಲಿ ಸಿಡಿಸಿದ ಶತಕದಿಂದ ಮೊನ್ನೆ ಮೊನ್ನೆ ಹೈದರಾಬಾದ್‌ ಏಕದಿನದಲ್ಲಿ ಬಾರಿಸಿದ 175 ರನ್‌ಗಳವರೆಗೆ ನೂರಾರು ಉದಾಹರಣೆಗಳಿವೆ.
ಭಾರತದಲ್ಲಿ, ಅಷ್ಟೇಕೆ ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್‌ ಎಂದರೆ ಕೇವಲ ಕ್ರಿಕೆಟಿಗನಲ್ಲ. ಅವರು ಈ ಕ್ರೀಡೆಯ ರಾಯಭಾರಿ. ಗೌರವದ ಪ್ರತೀಕ. ಹೆಮ್ಮೆ. ಭಾರತದಲ್ಲಿ ಅವರನ್ನು ಪೂಜಿಸಿದರೆ, ವಿಶ್ವಾದ್ಯಂತ ಗೌರವಿಸಲ್ಪಡುತ್ತಾರೆ. ವೃತ್ತಿಜೀವನದ ವಿವಿಧ ಘಟ್ಟಗಳಲ್ಲಿ ಹಲವು ಆಟಗಾರರು ತಾವು ಸಚಿನ್‌ಗೆ ಸಮಾನ, ಉತ್ತಮ ಎಂದು ನಿರೂಪಿಸಲು ಪ್ರಯತ್ನಿಸಿ ವಿಫಲರಾದರು. ಉದಾಹರಣೆಗೆ ಬ್ರಿಯಾನ್‌ ಲಾರಾ, ಮಾರ್ಕ್‌ ವಾ, ಇಂಜಮಮ್‌ ಉಲ್‌ ಹಕ್‌ ಮೊದಲಾದವರು.
ವಿಶ್ವದ ಉಳಿದೆಲ್ಲಾ ಉತ್ತಮ ಆಟಗಾರರಿಗೂ ಸಚಿನ್‌ಗೂ ಒಂದು ದೊಡ್ಡ ವ್ಯತ್ಯಾಸವಿದೆ. ಬ್ರಿಯಾನ್‌ ಲಾರಾ ಎಂದರೆ, ಎದುರಾಳಿ ಬೌಲರ್‌ಗಳು ಬೆದರುತ್ತಿದ್ದರು. ಆದರೆ, ಎದುರಾಳಿ ಬೌಲರ್‌ಗಳ ಭೀತಿ ಹಾಗೂ ಗೌರವ ಎರಡನ್ನೂ ಸಂಪಾದಿಸಿದ ಏಕೈಕ ಆಟಗಾರ ಸಚಿನ್‌. ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್‌ಗಳಾದ ಶೇನ್‌ ವಾರ್ನ್‌, ಮುತ್ತಯ್ಯ ಮುರಳೀಧರನ್‌, ಶ್ರೇಷ್ಠ ವೇಗಿಗಳಾದ ಮಾಲ್ಕಂ ಮಾರ್ಷಲ್‌, ಹ್ಯೂಸ್‌, ಮೆಕ್‌ಡರ್ಮಾಟ್‌, ರಿಚರ್ಡ್‌ ಹ್ಯಾಡ್ಲಿ, ಡೊನಾಲ್ಡ್‌, ಮೆಕ್‌ಗ್ರಾತ್‌, ಕರ್ಟ್ಲಿ ಆಂಬ್ರೋಸ್‌, ಕರ್ಟ್ನಿ ವಾಲ್ಶ್‌, ಇಮ್ರಾನ್‌ ಖಾನ್‌, ವಾಸಿಂ ಅಕ್ರಂ, ವಕಾರ್‌ ಯೂನಸ್‌ ಹೀಗೆ ಎಲ್ಲರನ್ನೂ ಪಕ್ಷಪಾತವಿಲ್ಲದೆ ದಂಡಿಸಿದವರು ಸಚಿನ್‌. ಅವತ್ತಿನಿಂದ ಇವತ್ತಿನವರೆಗೂ ಯಾವುದೇ ತಂಡಗಳು ಭಾರತದ ವಿರುದ್ಧ ಆಡುವಾಗ ಮೊದಲು ರಣತಂತ್ರ ರೂಪಿಸುವುದು ಸಚಿನ್‌ ವಿರುದ್ಧ. ಸಚಿನ್‌ರನ್ನು ಔಟ್‌ ಮಾಡಿದರೆ ಪಂದ್ಯ ಗೆದ್ದಂತೆ ಎಂಬ 90ರ ದಶಕದ ನಂಬಿಕೆ ಈಗಲೂ ಪೂರ್ಣ ಪ್ರಮಾಣದಲ್ಲಿ ಬದಲಾಗಿಲ್ಲ.
ಸಚಿನ್‌ ಬಗ್ಗೆ ಬರೆದಷ್ಟೂ ವಿಷಯವಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರ ಬಗ್ಗೆ ಪ್ರಕಟವಾದ ಲೇಖನ, ಸಂದರ್ಶನ, ವರದಿಗಳನ್ನು ಒಂದೆಡೆ ಸಂಗ್ರಹಿಸಿದರೆ, ಅದೇ ಒಂದು ಲೈಬ್ರರಿಯಾಗುತ್ತದೆ.
ಅತ್ಯುತ್ತಮ ಆಟಗಾರರು ಅತ್ಯುತ್ತಮ ವ್ಯಕ್ತಿಯೂ ಆಗಿರಬೇಕೆಂಬ ನಿಯಮವೇನೂ ಇಲ್ಲ. ಉದಾಹರಣೆಗೆ ಶೇನ್‌ ವಾರ್ನ್‌. ಆದರೆ, ಸಚಿನ್‌ರದು ಮಾತ್ರ ವೃತ್ತಿಜೀವನ- ಜೀವನ ಎರಡೂ ನಿಷ್ಕಳಂಕ. ಅವರು ಕ್ರಿಕೆಟಿಗನಾಗಿ, ಸಾರ್ವಜನಿಕ ವ್ಯಕ್ತಿಯಾಗಿ ನಿಜವಾದ ಜಂಟಲ್‌ಮ್ಯಾನ್‌. ಇಪ್ಪತ್ತು ವರ್ಷಗಳ ಅವರ ಕ್ರಿಕೆಟ್‌ ಸಿಂಹಾವಲೋಕನ ಮಾಡುವಾಗ ಆಟದಲ್ಲಿ ಸಾಧ್ಯವಿರುವ ಬಹುತೇಕ ಎಲ್ಲಾ ದಾಖಲೆಗಳನ್ನು ತಮ್ಮ ಹೆಸರಿಗೆ ಒಲಿಸಿಕೊಂಡಿದ್ದರೂ, ಆಡುವ ಪ್ರತಿಯೊಂದು ಪಂದ್ಯ ಇನಿಂಗ್ಸ್‌ನಲ್ಲೂ ಏನಾದರೊಂದು ಮೈಲಿಗಲ್ಲು ನೆಡುತ್ತಲೇ ಇದ್ದರೂ, ಯಾವುದೇ ಹಮ್ಮು-ಬಿಮ್ಮಿಲ್ಲದ ಸರಳ ವ್ಯಕ್ತಿ.
ಟೆಸ್ಟ್‌ ಕ್ರಿಕೆಟ್‌ನಲ್ಲಿ 12773 ರನ್‌, ಏಕದಿನ ಕ್ರಿಕೆಟ್‌ನಲ್ಲಿ 17,168 ರನ್‌, ಏಕೈಕ ಇಪ್ಪತ್ತು ಅಂತಾರಾಷ್ಟ್ರೀಯ ಪಂದ್ಯದಲ್ಲಿ 10 ರನ್‌ ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30,000 ರನ್‌ ಮೈಲಿಗಲ್ಲು ದಾಟಲು 39 ರನ್‌ಗಳಷ್ಟು ಹತ್ತಿರದಲ್ಲಿರುವ ಸಚಿನ್‌, 42 ಟೆಸ್ಟ್‌ ಶತಕಗಳು, 45 ಏಕದಿನ ಶತಕಗಳು, ಗರಿಷ್ಠ ಟೆಸ್ಟ್‌ ಹಾಗೂ ಏಕದಿನ ಪಂದ್ಯಗಳಲ್ಲಿ ಆಡಿದ ದಾಖಲೆಗಳು, ಗರಿಷ್ಠ ಏಕದಿನ ಅರ್ಧ ಶತಕಗಳು ಇಂಥ ಅಸಂಖ್ಯಾತ ದಾಖಲೆಗಳ ಒಡೆಯರಾಗಿದ್ದಾರೆ. ಭಾರತಕ್ಕೆ ವಿಶ್ವ ಕಪ್‌ ಗೆದ್ದುಕೊಡುವುದು ಅವರ ಕನಸು. 2011ರಲ್ಲಿ ಆ ಕನಸನ್ನೂ ನನಸು ಮಾಡಿಕೊಂಡೇ ಸಂತೃಪ್ತಿಯಿಂದ ವೃತ್ತಿಜೀವನದಿಂದ ನಿವೃತ್ತಿಯಾಗುವ ಬಯಕೆ ಅವರದು.
ವಿಶ್ವ ಕಪ್‌ ಗೆದ್ದರೆ, ಅದು ಸಚಿನ್‌ ಕಿರೀಟಕ್ಕೆ ಮತ್ತೊಂದು ಗರಿ ಅಷ್ಟೇ. ಗೆಲ್ಲಲಾಗದಿದ್ದರೆ, ಅದರಿಂದ ಅವರ ಮೌಲ್ಯವೇನೂ ಕಡಿಮೆಯಾಗುವುದಿಲ್ಲ. ಏಕೆಂದರೆ, ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ ಜಗತ್ತಿನ ಯುಗಪುರುಷ.

3 comments:

  1. tumbaa sakattagi barediddeera sir . nimma barahakkondu salaam:)

    ReplyDelete
  2. hi sir i m also one of fans of Sachin Tendulkar i like your article very much Sir,

    Thanks

    Chandru

    ReplyDelete