Tuesday, October 20, 2009

ರಾಗ ಲಹರಿ


ಫಾರ್ಮುಲಾ-1 ಕ್ರೀಡೆಯ ನೂತನ `ಚಕ್ರ'ವರ್ತಿ

`ಇವನಲ್ಲಿ ಅಂಥ ಪ್ರತಿಭೆಯಿಲ್ಲ' ಎಂದು ಒಂದು ರಾತ್ರಿ ಅಪ್ಪ ಅಮ್ಮನ ಬಳಿ ಹೇಳುತ್ತಿರುವುದನ್ನು ಆ ಹುಡುಗ ಕೇಳಿಸಿಕೊಂಡಿದ್ದ.
ರೇಸ್‌ ಫಿಕ್ಸಿಂಗ್‌ ಕಳಂಕಕ್ಕೆ ಸಿಲುಕಿ ಸದ್ಯ ಆಜೀವ ನಿಷೇಧ ಶಿಕ್ಷೆ ಅನುಭವಿಸುತ್ತಿರುವ ರೆನಾಲ್ಟ್‌ ತಂಡದ ಮಾಜಿ ಮಾಲಿಕ ಫ್ಲಾವಿಯೊ ಬ್ರಿಯಾ ಟೋರ್‌ ಸಹ `ಈತ ನಾಲಾಯಕ್‌' ಎಂದು ತೀರ್ಪು ಕೊಟ್ಟಿದ್ದರು. 2006ರಲ್ಲಿ ಹೊಂಡ ಕಾರಿ ನಲ್ಲಿ ಹಂಗೆರಿ ಗ್ರ್ಯಾನ್‌ ಪ್ರೀ ಗೆದ್ದ ಮೇಲೆ ಜನ ಈತ `ಒಂದು ರೇಸ್‌ನ ಅಚ್ಚರಿ' ಎಂದು ಗುರುತಿಸುತ್ತಿದ್ದರು.
ಥಳಕು-ಬಳಕಿನ ಜೀವನ, ಸದಾಕಾಲ ಹುಡುಗಿಯರೊಂದಿಗೆ ಒಡನಾಟ, ದುಂದು ವೆಚ್ಚದ ಪ್ರವೃತ್ತಿಯ ಈತ ಕೇವಲ ವಿಲಾಸಿ ಎಂದು ಮಾಧ್ಯಮಗಳು ಟೀಕಿಸುತ್ತಿದ್ದವು.
ಆದರೆ, ಈಗ ಅವರೆಲ್ಲರೂ ತಮ್ಮ ಮಾತು ಗಳನ್ನು ನುಂಗಿಕೊಳ್ಳುವಂತಾಗಿದೆ. ಬ್ರಿಟನ್‌ನ ಜೆನ್ಸನ್‌ನ ಬಟನ್‌ 2009ರ ಫಾರ್ಮುಲಾ-1 ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ.
ಗುರಿಯೆಡೆಗಿನ ಹಾದಿ ಯಾವಾಗಲೂ ಸುಗಮ ಹೆದ್ದಾರಿಯಾಗಿರುವುದಿಲ್ಲ. ಕಲ್ಲು- ಮುಳ್ಳು-ಕೊರಕಲು ಗಳ ಕಾಡುಹಾದಿಯಾಗಿ ರುತ್ತದೆ. ಇಂಥ ಹಾದಿ ಸಾಧನೆಯ ಬೆನ್ನಟ್ಟುವವನ ಸಾಮರ್ಥ್ಯವನ್ನು, ಸಹನೆ ಯನ್ನು, ಸೈರಣೆಯನ್ನು ಪರೀಕ್ಷಿಸುತ್ತದೆ. ಪದೇ ಪದೇ ನಿರಾಸೆ, ಹತಾಶೆ ಗಳನ್ನು ಒಡ್ಡುತ್ತದೆ. ಇಷ್ಟೇ, ಇಲ್ಲಿಂದ ಮುಂದೇನೂ ಇಲ್ಲ ಎಂಬ ಭ್ರಮೆಗಳನ್ನು ಹುಟ್ಟು ಹಾಕುತ್ತದೆ. ಆದರೆ, ಇದಾವುದಕ್ಕೂ ಬೆಚ್ಚದೆ, ಬೆದರದೆ, ಗುರಿ ಯಿಂದ ವಿಚಲಿತನಾಗದೆ, ಸ್ಪಷ್ಟ ಚಿಂತನೆಯಿಂದ ಸಾಗುವವರು ಅಂತಿಮ ಯಶಸ್ಸು ಗಳಿಸುತ್ತಾರೆ. ಉಳಿದವರು ಅರ್ಧದಾರಿ, ಮುಕ್ಕಾಲು ದಾರಿ, ಗುರಿಯ ಮನೆಯ ಬಾಗಿಲವರೆಗೂ ಸಾಗಿ ಹಿಂದಿರುಗಿರುತ್ತಾರೆ.
ಬಟನ್‌ ತಮ್ಮ ಗಮ್ಯದವರೆಗೂ ಸಾಗಿದವರು. ಯಾವ ಅಡೆತಡೆಗಳನ್ನೂ ಲೆಕ್ಕಿಸದೆ ಮುನ್ನಡೆ ದವರು. ಬಾಲ್ಯದಲ್ಲಿ `ಇವನಲ್ಲಿ ಪ್ರತಿಭೆಯಿಲ್ಲ' ಎಂಬ ಅಪ್ಪನ ಮಾತು ಕೇಳಿಸಿ ಕೊಂಡ ಬಳಿಕ ಬಟನ್‌ಗಾದ ನಿರಾಸೆ, ದುಃಖ ಅಷ್ಟಿಷ್ಟಲ್ಲ. ಆದರೆ, ತಾನು ಆ ರೀತಿ ಕೇಳಿಸಿಕೊಂಡ ವಿಷಯವನ್ನು ಅವರು ಅಪ್ಪನಿಗೆ ತಿಳಿಯಗೊಡಲಿಲ್ಲ. ಕೊನೆಗೂ 2000ದಲ್ಲಿ ವಿಲಿಯಮ್ಸ್‌ ಮೂಲಕ ಫಾರ್ಮುಲಾ-1 ಪದಾರ್ಪಣೆ ಮಾಡಿದ ಬಟನ್‌, ಭಾಗವಹಿಸಿದ 2ನೇ ರೇಸ್‌ನಲ್ಲೇ (ಅದೂ ಬ್ರೆಜಿಲ್‌ನಲ್ಲೇ) ಅಂಕ ಗಳಿಸುವ ಮೂಲಕ ಇಂಥ ಸಾಧನೆ ಮಾಡಿದ ಅತ್ಯಂತ ಕಿರಿಯ ಎಫ್‌-1 ಚಾಲಕ ಎನಿಸಿದರು. ಈ ದಾಖಲೆಯನ್ನು 2007ರಲ್ಲಿ ರೆಡ್‌ಬುಲ್‌ನ ಸೆಬಾಸ್ಟಿಯನ್‌ ವೆಟ್ಟೆಲ್‌ ಮುರಿದರು.
ಬಟನ್‌ರ ರೇಸಿಂಗ್‌ ಗೀಳು ಆರಂಭವಾಗಿದ್ದು ಅವರ 8ನೇ ವಯಸ್ಸಿನಲ್ಲೇ. ಅಪ್ಪ ಜಾನ್‌ ಬಟನ್‌ ಅವರಿಗೆ ಕಾರ್ಟ್‌ ತಂದು ಕೊಟ್ಟಿದ್ದರು. ಒಂದು ವರ್ಷದ ಬಳಿಕ ಈ ಆಟದಲ್ಲಿ ಗಂಭೀರವಾಗಿ ಮುಂದುವರಿಯುವ ಯೋಚನೆ ಇದೆಯೇ ಎಂದು ಮಗನನ್ನು ಪ್ರಶ್ನಿಸಿದರು. ಆಗ ಬಟನ್‌ ಹೇಳಿದ್ದು, ನಾನು ಫಾರ್ಮುಲಾ-1 ಚಾಲಕ ಆಗಬೇಕು ಎಂದು.
1991ರಲ್ಲಿ ಬ್ರಿಟಿಷ್‌ ಕೆಡೆಟ್‌ ಕಾರ್ಟ್‌ ಚಾಂಪಿಯನ್‌ ಷಿಪ್‌ನಲ್ಲಿ ಎಲ್ಲಾ 34 ರೇಸ್‌ಗಳನ್ನು ಗೆದ್ದು ಮೊದಲ ಬಾರಿಗೆ ಗಮನ ಸೆಳೆದ ಬಟನ್‌, 1997ರಲ್ಲಿ ಬ್ರಿಟಿಷ್‌ ಮುಕ್ತ ಕಾರ್ಟ್‌ ಚಾಂಪಿ ಯನ್‌ಷಿಪ್‌ನಲ್ಲಿ 3 ರೇಸ್‌ ಗೆದ್ದರು. ಮಾತ್ರವಲ್ಲ, ಯುರೋಪಿಯನ್‌ ಸೂಪರ್‌ `2' ಚಾಂಪಿ ಯನ್‌ಷಿಪ್‌ ಗೆದ್ದ ಅತ್ಯಂತ ಕಿರಿಯ ಚಾಲಕ ಎನಿಸಿದರು. 18ನೇ ವಯಸ್ಸಿನಲ್ಲೇ ಫಾರ್ಮುಲಾ ಫೋರ್ಡ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ 9 ರೇಸ್‌ಗಳಲ್ಲಿ ಗೆದ್ದ ಅವರು 1999ರಲ್ಲಿ ಮೆಕ್ಲಾ ರೆನ್‌ ಫಾರ್ಮುಲಾ-1 ತಂಡದ ಪರ ಪರೀಕ್ಷಾರ್ಥ ಚಾಲನೆ ಮಾಡುವ ಅವಕಾಶ ಪಡೆದರು.
2000ದಲ್ಲಿ ಅವರು ವಿಲಿಯಮ್ಸ್‌ ತಂಡದ ಆಹ್ವಾನ ಬಂದಾಗ ಸ್ನೇಹಿತರೊಂದಿಗೆ ಬಾರಿನಲ್ಲಿ ಗುಂಡು ಹಾಕು ತ್ತಿದ್ದರು. ಆ ಋತುವಿನ ಚಾಲಕರ ಪೈಕಿ ಅವರು 8ನೇ ಸ್ಥಾನ ಪಡೆದರು. ಆದರೆ, 2001ರಿಂದ ಅವರ ನಿಜವಾದ ಕಷ್ಟಗಳು ಪ್ರಾರಂಭವಾದವು. ಬೆನ್ನೆಟನ್‌ ತಂಡ ಸೇರಿದರು. 2002ರಲ್ಲಿ ರೆನಾಲ್ಟ್‌ ಪರ ಚಾಲನೆ ಮಾಡಿದರು. ಎಲ್ಲಿಯೂ ಯಶಸ್ಸು ಸಿಗಲಿಲ್ಲ. ಬದಲಿಗೆ ಕೆಲವು ವಿವಾದಗಳು ಮುತ್ತಿಕೊಂಡವು. 2003ರಿಂದ 05ರವರೆಗೆ ಬಾರ್‌ ತಂಡ ಪ್ರತಿನಿಧಿಸಿದರು. 2006ರಲ್ಲಿ ಅದೇ ತಂಡ ಹೊಂಡ ಎಂದು ಮರು ನಾಮಕರಣಗೊಂಡಿತು. ಅಂತೂ ಅದೇ ವರ್ಷ ಹಂಗೆರಿ ಜಿಪಿಯಲ್ಲಿ ತಮ್ಮ ವೃತ್ತಿ ಜೀವನದ 113ನೇ ರೇಸ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದರು. ಅದಾದ ಬಳಿಕ ಮತ್ತೆ ಕಷ್ಟಗಳು ಅಮರಿ ಕೊಂಡವು. 2008ರಲ್ಲಿ ಹೊಂಡ ಕಾರು ಹಾಗೂ ಬಟನ್‌ ವೈಫಲ್ಯದ ಸುಳಿಯಲ್ಲಿ ಸಿಲುಕಬೇಕಾ ಯಿತು. ಋತುವಿನಲ್ಲಿ ಅವರು 18ನೇ ಸ್ಥಾನ ಪಡೆದರು. ವರ್ಷದ ಕೊನೆಯಲ್ಲಿ ಹೊಂಡ ಸಂಸ್ಥೆ ಫಾರ್ಮುಲಾ-1ನಿಂದ ಹಿಂದೆ ಸರಿಯಿತು. 2009ರ ಆರಂಭದಲ್ಲಿ ಅವರು ಬರಿಗೈದಾಸ ರಾಗಿದ್ದು. ಯಾವ ತಂಡವೂ ಇರಲಿಲ್ಲ. ಆದರೆ, ಫೆಬ್ರವರಿ ಯಲ್ಲಿ ಹಳೆಯ ಹೊಂಡ ತಂಡದ ಮುಖ್ಯಸ್ಥರಾಗಿದ್ದ ರಾಸ್‌ ಬ್ರಾನ್‌ ತಂಡವನ್ನು ಖರೀದಿಸಿ ಬ್ರಾನ್‌ ಜಿಪಿ ಎಂದು ಮರುನಾಮ ಕರಣ ಮಾಡಿದರು. ಮರ್ಸಿಡೀಸ್‌ ಎಂಜಿನ್‌ ಅಳವಡಿಸಿಕೊಂಡ ಬ್ರಾನ್‌ ಕಾರು ರೇಸ್‌ ಸರ್ಕ್ಯುಟ್‌ನಲ್ಲಿ ಗೂಳಿಯಂತೆ ಮುನ್ನುಗ್ಗಿತು. ಋತುವಿನ ಮೊದಲ 7 ರೇಸ್‌ಗಳಲ್ಲಿ 6ರಲ್ಲಿ ವಿಜಯ ಒಲಿಯಿತು. ಒಟ್ಟಾರೆ 89 ಅಂಕ ಗಳೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದರು.
ಸದ್ಯ ಬಟನ್‌ ಎಲ್ಲೇ ಸ್ಪರ್ಧಿಸಿದರೂ, ಅವರ ಅಪ್ಪ ಜಾನ್‌ ಜೊತೆಯಲ್ಲಿರುತ್ತಾರೆ. ಪ್ರೇಯಸಿ ಜೆಸ್ಸಿಕ ಮಿಚಿಬಟ ಸಹ. ಬಟನ್‌ರ ಅಪ್ಪ-ಅಮ್ಮ ಬೇರೆಯಾಗಿದ್ದರೂ, ಮಗನ ಯಶಸ್ಸು ಸವಿಯಲು ಅವರ ಅಮ್ಮ ಹಾಗೂ ಮೂವರು ಅಕ್ಕಂದಿರು ರೇಸ್‌ ತಾಣಗಳಿಗೆ ಬರುತ್ತಿರುತ್ತಾರೆ. ವರ್ಷಾರಂಭದ ಆಸ್ಟ್ರೇಲಿಯನ್‌ ಜಿಪಿ ಗೆಲ್ಲುತ್ತಿದ್ದಂತೆಯೇ ಗೆಳತಿ ಜೆಸ್ಸಿಕಾ ಜೊತೆ ಏಕಾಂತ ಹುಡುಕಿಕೊಂಡಿದ್ದ ಬಟನ್‌, ಮೊನ್ನೆ ಬ್ರೆಜಿಲ್‌ನಲ್ಲಿ ಮಾತ್ರ ರೇಸ್‌ ಮುಗಿಯುವವರೆಗೂ `ಸನ್ಯಾಸ' ವಿಧಿಸಿಕೊಂಡಿದ್ದರು. ಹಾಗಾಗಿ ಜೆಸ್ಸಿಕಾ ಬ್ರೆಜಿಲ್‌ಗೆ ಆಗಮಿಸಿರಲಿಲ್ಲ. ಆದರೆ, ಚಾಂಪಿಯನ್‌ ಆದ ಬಳಿಕ ಸಾಧನೆಯ ಶ್ರೇಯವನ್ನು ಬಟನ್‌ ತಮ್ಮ ಗೆಳತಿಗೆ ಅರ್ಪಿಸಿದರು.
ಹಾಗೆ ನೋಡಿದರೆ, 2009ರ ಋತು ಅತ್ಯಂತ ನಾಟಕೀಯವಾಗಿತ್ತು. 2008ರ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಮತ್ತು ಮೆಕ್ಲಾರೆನ್‌ ತಂಡಗಳು ಮಂಕಾಗಿದ್ದರೆ, ಸಾಂಪ್ರದಾಯಿಕ ಶಕ್ತಿಕೇಂದ್ರ ಫೆರಾರಿ ಹೇಳಹೆಸರಿಲ್ಲದಂತಾಗಿತ್ತು. ಬ್ರಾನ್‌ ಜಿಪಿ ಚೊಚ್ಚಲ ರೇಸ್‌ನಲ್ಲೇ (ಆಸ್ಟ್ರೇ ಲಿಯಾದಲ್ಲಿ) 1-2 ಸಾಧನೆ (ಬಟನ್‌, ಬ್ಯಾರಿಚೆಲ್ಲೊ) ಮಾಡುವ ಮೂಲಕ 55 ವರ್ಷಗಳ ಬಳಿಕ ಅತ್ಯಂತ ಯಶಸ್ವಿ ಪದಾರ್ಪಣೆಗೈದ ತಂಡ ವೆನಿಸಿಕೊಂಡಿತ್ತು. ಋತುವಿನ ಉತ್ತರಾರ್ಧದಲ್ಲಿ ಉಳಿದ ತಂಡಗಳು ಚೇತರಿಸಿಕೊಂಡರೂ, ಬ್ರಾನ್‌ ಹಾಗೂ ಬಟನ್‌ರ ಪ್ರಾಬಲ್ಯಕ್ಕೇನೂ ಅಡ್ಡಿ ಯಾಗಲಿಲ್ಲ. ಬ್ರಾನ್‌ ವರ್ಷದ ಅತ್ಯುತ್ತಮ ತಂಡವೆಂಬ ಶ್ರೇಯಕ್ಕೆ ಪಾತ್ರವಾದರೆ, ಬಟನ್‌ ನಿರ್ವಿವಾದವಾಗಿ ಚಾಂಪಿಯನ್‌ ಪಟ್ಟಕ್ಕೇರಿದರು. ಒಂದು ವೇಳೆ ಭಾನುವಾರ ಬ್ರಾನ್‌ ತಂಡದ ಜೊತೆಗಾರ ಬ್ಯಾರಿಚೆಲ್ಲೊ ಅಥವಾ ರೆಡ್‌ ಬುಲ್‌ನ ಸೆಬಾಸ್ಟಿಯನ್‌ ವೆಟ್ಟೆಲ್‌ ಗೆದ್ದಿದ್ದರೆ, ಬಟನ್‌ ನ.1ರ ಅಬುಧಾಬಿ ರೇಸ್‌ವರೆಗೂ ಕಾಯುವಂತಾಗು ತ್ತಿತ್ತು. ಆದರೆ, ಬ್ಯಾರಿಚೆಲ್ಲೋ ಗೆಲುವಿನ ಹಾದಿ ಯಲ್ಲಿದ್ದ ವರು ದಿಢೀರ್‌ ಟೈರ್‌ ಪಂಕ್ಚರ್‌ನಿಂದಾಗಿ 8ನೇ ಸ್ಥಾನಕ್ಕೆ ಜಾರಿದರು. ವೆಟ್ಟೆಲ್‌ ತಮ್ಮ ಚಾಂಪಿ ಯನ್‌ ಪಟ್ಟದ ಕನಸಿಗಾಗಿ ಕನಿಷ್ಠ 2ನೇ ಸ್ಥಾನ ಪಡೆ ಯಲೇಬೇಕಿತ್ತು. ಆದರೆ, 4ನೇ ಸ್ಥಾನ ಪಡೆದರು.
`ಫೋರ್ಸ್‌' ಇಂಡಿಯಾ: ವಿಜಯ್‌ ಮಲ್ಯ ಒಡೆ ತನದ ಫೋರ್ಸ್‌ ಇಂಡಿಯಾ ತನ್ನ 2ನೇ ಋತುವಿನಲ್ಲಿ ಸ್ವಲ್ಪ ಮಟ್ಟಿಗೆ ಫೋರ್ಸ್‌ ಆಗಿ ಹೊರಹೊಮ್ಮುತ್ತಿರುವ ಲಕ್ಷಣ ತೋರಿತು. ಗಿಯಾನ್‌ಕಾರ್ಲೊ ಫಿಸಿಕೆಲ ತರಾತುರಿಯಲ್ಲಿ ಫೆರಾರಿ ಸೇರುವ ಮುನ್ನ ಬೆಲ್ಜಿಯಂ ಜಿಪಿಯಲ್ಲಿ 2ನೇ ಸ್ಥಾನ ಪಡೆದರು. ಇದು ಫಾರ್ಮುಲಾ -1ನಲ್ಲಿ ತಂಡದ ಚೊಚ್ಚಲ ಅಂಕವಾಗಿತ್ತು.
ಈ ಸಾಧನೆ ಆಕಸ್ಮಿಕ ಅಲ್ಲ ಎನ್ನುವಂತೆ ಇನ್ನೊಬ್ಬ ಚಾಲಕ ಆಡ್ರಿಯನ್‌ ಸುಟಿಲ್‌ ಇಟಲಿ ಜಿಪಿಯಲ್ಲಿ 4ನೇ ಸ್ಥಾನದ ಸಾಧನೆ ಮಾಡಿದರು. ಇದಾದ ಬಳಿಕ ಅವರು ಜಪಾನ್‌ ನಲ್ಲಿ ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆದರೂ, ತಾಂತ್ರಿಕ ಕಾರಣಗಳಿಗಾಗಿ 8ನೇ ಸ್ಥಾನದಿಂದ ರೇಸ್‌ ಆರಂಭಿಸು ವಂತಾ ಯಿತು. ಬ್ರೆಜಿಲ್‌ನಲ್ಲೂ ಅವರು ಅರ್ಹತಾ ಸುತ್ತಿ ನಲ್ಲಿ 3ನೇ ಸ್ಥಾನ ಪಡೆದಿದ್ದರಾದರೂ, ಭಾನುವಾರ ಟೊಯೊಟ ಚಾಲಕ ಜಾರ್ನೊ ಟ್ರುಲಿ ಎಸಗಿದ ಪ್ರಮಾದದಿಂದ ಅಪಘಾತಕ್ಕೀಡಾಗಿ ಮೊದಲ ಚರಣದಲ್ಲೇ ಸ್ಪರ್ಧೆ ತೊರೆಯುವಂತಾಯಿತು.
2010ರ ಋತುವಿನಲ್ಲಿ ಸುಟಿಲ್‌ (ಬೇರೆ ತಂಡಗಳು ಬಲೆಗೆ ಹಾಕಿಕೊಳ್ಳದಿದ್ದರೆ) ಮತ್ತು ಫೋರ್ಸ್‌ ಇಂಡಿಯಾದಿಂದ ಇನ್ನಷ್ಟು ಉತ್ತಮ ಸಾಧನೆ ನಿರೀಕ್ಷಿಸಬಹುದು.

No comments:

Post a Comment