Tuesday, October 20, 2009
ರಾಗ ಲಹರಿ
ಫಿಲಿಪ್ಪೋಸಿಸ್ ವೃತ್ತಾಂತವು!
ಹೂವಿಂದ ಹೂವಿಗೆ ಹಾರುವ ದುಂಬಿ... ಹಾಡು ಬರೆದ ಸಂದರ್ಭ, ಹಿನ್ನೆಲೆ ಬೇರೆಯೇ ಇರ ಬಹುದು. ಆದರೆ, ಆ ಹಾಡು ಕೇಳಿದಾಗ ಲೆಲ್ಲಾ ಆಸ್ಟ್ರೇಲಿಯಾದ `ಟೆನಿಸ್ ಕೃಷ್ಣ' (ಕನ್ನಡದ ಟೆನಿಸ್ ಕೃಷ್ಣ ಬೇಸರ ಪಟ್ಟು ಕೊಳ್ಳಬಾರದಾಗಿ ವಿನಂತಿ) ಮಾರ್ಕ್ ಫಿಲಿಪ್ಪೋಸಿಸ್ ನೆನಪಾಗುತ್ತಾರೆ.
ಫಿಲಿಪ್ಪೋಸಿಸ್‌ರನ್ನು ವೃತ್ತಿಜೀವನದ ಆರಂಭದ ದಿನಗಳಲ್ಲಿ ಜನ ಅಸಾಧಾರಣ ಪ್ರತಿಭಾವಂತ ಎಂದು ಗುರುತಿಸಿದ್ದರು. ಕೆಲವು ವರ್ಷಗಳು ಸರಿದಂತೆ ಭೋಗ ಜೀವಿ, ಸುಖಲೋಲುಪ ಎಂಬ ಹಣೆಪಟ್ಟಿ ಗಳು ಅಂಟಿಕೊಂಡವು. ಮುಂದೆ ಒರಟ, ಸೋಮಾರಿ, ಉಡಾಳ... ಕೊನೆಗೆ ಇವನ ಯೋಗ್ಯತೆ ಇಷ್ಟೇ ಎಂಬಲ್ಲಿಗೆ ಅವರ ಆಟ ಹಾಗೂ ವ್ಯಕ್ತಿತ್ವದ ಬಗ್ಗೆ ಜನರ ವ್ಯಾಖ್ಯಾನ ವಿಸ್ತರಿಸಿದೆ.
ನಿಜ, ಪ್ರಬಲ ಇಚ್ಛಾಶಕ್ತಿಯೊಂದಿದ್ದರೆ ಫಿಲಿಪ್ಪೋಸಿಸ್ ಟೆನಿಸ್‌ನಲ್ಲಿ ಏನೆಲ್ಲಾ ಸಾಧಿಸಬಹುದಿತ್ತು. ಬಾಲ್ಯದ ದಿನಗಳಿಂದಲೂ, ಜೂನಿಯರ್ ಟೆನಿಸ್ ಅವಧಿಯಿಂದಲೂ ವಿಶ್ವದ ಗಮನ ಸೆಳೆದಿದ್ದ ಅವರು ಕನಿಷ್ಠ ಒಂದು ಗ್ರಾಂಡ್‌ಸ್ಲಾಂ ಗೆದ್ದಿದ್ದರೂ, ಅವರ ಪ್ರತಿಭೆಗೆ ನ್ಯಾಯ ಒದಗಿಸಿದಂತಾಗು ತ್ತಿತ್ತು. ಆದರೆ, ಹಾಗಾಗಲೇ ಇಲ್ಲ. ಅವರು ಖ್ಯಾತಿಯ ಬದಲು ಅಪಖ್ಯಾತಿ ಸಂಪಾದಿಸಿದರು.
ಚಂಚಲತೆ ಅವರ ದೊಡ್ಡ ದೌರ್ಬಲ್ಯ. ಆಟದಲ್ಲಾಗಲೀ, ಬದುಕಿನಲ್ಲಾಗಲೀ ಅವರ ಮನಸ್ಸು ಸ್ಥಿರವಾಗಿ ಒಂದೆಡೆ ಕೇಂದ್ರೀಕೃತವಾಗಿದ್ದೇ ಇಲ್ಲ. ಹಾಗಾಗಿ ಅವರ ವೃತ್ತಿ ಜೀವನದ ಬಹು ಮುಖ್ಯ ನಿರ್ಧಾರ ಗಳನ್ನು ಹಾಗೂ ಬಾಳಸಂಗಾತಿ ಆಗ ಬಯಸಿದ್ದ ಹುಡುಗಿಯರನ್ನು ಅಂಗಿ ಬದಲಾಯಿಸಿದಂತೆ ಬದಲಿಸಿದರು.
ಈಗ 32 ವರ್ಷದ ಫಿಲಿಪ್ಪೋಸಿಸ್ ಟೆನಿಸ್ ವೃತ್ತಿಜೀವನ ಮುಕ್ತಾಯದ ಅಂಚಿಗೆ ಬಂದಿದೆ. ಇಷ್ಟು ವರ್ಷಗಳಲ್ಲಿ ಆಟದ ಮೂಲಕ, ವಿವಿಧ ಪ್ರಾಯೋ ಜಕರ ಮೂಲಕ ಗಳಿಸಿದ ಹಣವೆಲ್ಲಾ ಪೋಲಾಗಿದೆ. ಈ ಹಂತದಲ್ಲಿ ಬದುಕಿನಲ್ಲಿ ನೆಲೆಗೊಳ್ಳಲು ಬಯಸಿರುವ ಅವರು ಅಮೆರಿಕದ 36 ವರ್ಷದ ನಟಿ ಹಾಗೂ ನರ್ತಕಿ ಜೆನ್ನಿಫರ್ ಎಸ್ಪೋಸಿಟೊ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಆದರೆ, ಟೆನಿಸ್ ಹಾಗೂ ಬದುಕಿನಲ್ಲಿ ಗಗನ, ಪಾತಾಳ ಎರಡನ್ನೂ ಕಂಡಿರುವ ಫಿಲಿಪ್ಪೋಸಿಸ್ ವಿಷಯದಲ್ಲಿ ಏನನ್ನೂ ಖಚಿತವಾಗಿ ಹೇಳುವುದು ಕಷ್ಟ. 1999 ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಪ್ರಥಮ ಹಾಗೂ ಇದುವರೆಗಿನ ಏಕೈಕ ಹಾಪ್‌ಮನ್ ಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿರುವ ಅವರು, 1999ರಲ್ಲಿ ಹಾಗೂ 2003ರಲ್ಲಿ ಆಸ್ಟ್ರೇ ಲಿಯಾಕ್ಕೆ ಡೇವಿಸ್ ಕಪ್ ಪ್ರಶಸ್ತಿ ಗೆದ್ದು ಕೊಟ್ಟಿದ್ದಾರೆ. ಆದರೆ, ವಿಶ್ವದಲ್ಲೇ ಅತ್ಯಂತ ವೇಗದ ಸರ್ವ್ ಹೊಂದಿದ ಆಟಗಾರ ರಲ್ಲಿ ಒಬ್ಬರಾಗಿಯೂ ಅವರು ಹಲವು ಗ್ರಾಂಡ್‌ಸ್ಲಾಂಗಳಲ್ಲಿ, ದೊಡ್ಡ ಟೂರ್ನಿ ಗಳಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದಾರೆ. 1997ರಲ್ಲಿ ಅವರು ಸ್ಪೇನ್‌ನ ಆಲ್ಬರ್ಟೊ ಕೋಸ್ಟ ವಿರುದ್ಧ ಪಂದ್ಯದಲ್ಲಿ 229 ಕಿಮೀ (142.3 ಮೈಲಿ) ವೇಗದಲ್ಲಿ ಸರ್ವೀಸ್ ಮಾಡಿದ್ದರು. ಅದು ಕೆಲವು ವರ್ಷ ಕಾಲ ವಿಶ್ವದಾಖಲೆಯಾಗಿತ್ತು. 2003ರ ವಿಂಬಲ್ಡನ್‌ನಲ್ಲಿ ಆಂಡ್ರೆ ಅಗಾಸ್ಸಿ ವಿರುದ್ಧ ಪಂದ್ಯದಲ್ಲಿ 46 ಏಸ್‌ಗಳನ್ನು ಸಿಡಿಸಿದ್ದರು.
1998ರಲ್ಲೇ ಯುಎಸ್ ಓಪನ್‌ನಲ್ಲಿ ಚೊಚ್ಚಲ ಗ್ರಾಂಡ್‌ಸ್ಲಾಂ ಫೈನಲ್ ಪ್ರವೇಶಿ ಸಿದ್ದ ಅವರು ದೇಶಬಾಂಧವ ಪ್ಯಾಟ್ರಿಕ್ ರಾಫ್ಟರ್ ವಿರುದ್ಧ ಪರಾಭವಗೊಂಡಿ ದ್ದರು. ಅದಾದ ಬಳಿಕ 2003ರ ವಿಂಬ ಲ್ಡನ್ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತರು. ಉಳಿದಂತೆ ಎಲ್ಲಾ ಟೂರ್ನಿಗಳಲ್ಲಿ ಅವರದು ಮೊದಲ ಸುತ್ತು, 2ನೇ ಸುತ್ತು, ಕ್ವಾರ್ಟರ್‌ಫೈನಲ್.
ಟೆನಿಸ್ ವಲಯದಲ್ಲಿ `ಬಿರುಗಾಳಿ' ಎಂದೇ ಅಡ್ಡಹೆಸರಿನಿಂದ ಪರಿಚಿತರಾದ ಫಿಲಿಪ್ಪೋಸಿಸ್ ತಂದೆ ಗ್ರೀಕ್. ತಾಯಿಯ ಪೂರ್ವಿಕರು ಇಟಲಿಯವರಾದರೂ, ಗ್ರೀಕ್ ಭಾಷೆ ಮನೆಮಾತು ಆಗಿದ್ದವರು. ಚಹರೆ, ಚರ್ಯೆಯಿಂದ ಗ್ರೀಕ್ ಯೋಧ ರನ್ನೇ ಹೋಲುವ ಫಿಲಿಪ್ಪೋಸಿಸ್, ಕೆಲ ಕಾಲ ರೂಪದರ್ಶಿಯೂ ಆಗಿದ್ದರು. 2007ರಲ್ಲಿ ಅಮೆರಿಕದ ಟಿವಿ ಚಾನೆಲ್ ನಲ್ಲಿ ಪ್ರಸಾರವಾದ `ಏಜ್ ಆಫ್ ಲವ್' ರಿಯಾಲಿಟಿ ಡೇಟಿಂಗ್ ಕಾರ್ಯಕ್ರಮ ದಲ್ಲಿ ಕನ್ಯಾರ್ಥಿ ವರನಾಗಿ ಕಾಣಿಸಿ ಕೊಂಡಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ 48 ವರ್ಷದ ಮಹಿಳೆ ಜೆನ್‌ರತ್ತ ಆಕರ್ಷಿತರಾಗಿದ್ದ ಫಿಲಿ ಪ್ಪೋಸಿಸ್, ಕೊನೆಯಲ್ಲಿ 25 ವರ್ಷದ ಅಮಾಂಡ ಸಲಿನಾಸ್‌ರನ್ನು ತಮ್ಮ ಸಂಗಾತಿಯಾಗಿ ಆಯ್ಕೆ ಮಾಡಿ ಕೊಂಡರು. ಈ ಕಾರ್ಯಕ್ರಮದ ಆಚೆಗೂ ಪ್ರಣಯ ಸಂಬಂಧ ಮುಂದು ವರಿಯಿತು. ಆದರೆ, ಕೆಲವು ತಿಂಗಳಲ್ಲೇ ಈ ಸಂಬಂಧ ಮುರಿದುಬಿತ್ತು.
ಫಿಲಿಪ್ಪೋಸಿಸ್ ಸೋಮಾರಿ, ಯಾವು ದರ ಬಗ್ಗೆಯೂ ಬದ್ಧತೆ ಇಲ್ಲ. ತನ್ನನ್ನು ಪ್ರೀತಿ ಮಾಡಿದ ಅವಧಿಯಲ್ಲಿ ಒಮ್ಮೆಯೂ ತನ್ನನ್ನು ಹುಡುಕಿಕೊಂಡು ಬರಲಿಲ್ಲ. ಸುಮ್ಮನೆ ಹಣವನ್ನು ದುಂದು ವೆಚ್ಚ ಮಾಡುತ್ತಾನೆ. ತಾನು ಸುತ್ತಾಡಲು ಕರೆದರೆ, ಟೆನಿಸ್ ಅಭ್ಯಾಸ ಮಾಡಬೇಕಿದೆ ಎಂದು ಕಾರಣ ನೀಡುತ್ತಾನೆ. ಆದರೆ, ಅಭ್ಯಾಸ ಮಾಡದೆ, ಸಿನಿಮಾ ನೋಡುತ್ತಿ ರುತ್ತಾನೆ' ಎಂದು ಸಲಿನಾಸ್ ತಮ್ಮ ಪ್ರೇಮ ಭಗ್ನಗೊಳ್ಳುವುದಕ್ಕೆ ಕಾರಣ ನೀಡಿ ದ್ದರು. ಇದಾದ ಒಂದೆರಡು ತಿಂಗಳಲ್ಲೇ ಫಿಲಿಪ್ಪೋಸಿಸ್‌ಗೆ ಸಿಯೊಭನ್ ಪಾರೇಖ್ ರೂಪದಲ್ಲಿ ಹೊಸ ಗೆಳತಿ ದೊರಕಿದ್ದಳು. ಭಾರತೀಯ ಮೂಲದ ರೂಪದರ್ಶಿ ಪಾರೇಖ್ ಸಹ ಇವರೊಂದಿಗೆ ಹೆಚ್ಚು ದಿನ ಬಾಳಲಿಲ್ಲ. ಆನಂತರ ಬಂದವರು ಅಮೆರಿಕದ ನಟಿ ಜೆನ್ನಿಫರ್ ಎಸ್ಪೋಸಿಟೊ.
ಜೆನ್ನಿಫರ್ ಬಗ್ಗೆ ಹೇಳುವುದಾದರೆ, ಅವರು 1996-97ರಲ್ಲಿ ಅಮೆರಿಕದ ನಟ ಬೆಂಜಮಿನ್ ಬ್ರಾಟ್ ಜೊತೆ ಪ್ರಣಯ ಸಂಬಂಧ ಹೊಂದಿದ್ದರು. ಅದಾದ ಬಳಿಕ 2006ರಲ್ಲಿ ಅಮೆರಿಕದ ನಟ ಬ್ರಾಡ್ಲಿ ಕೂಪರ್‌ರನ್ನು ವಿವಾಹವಾದರು. ಆದರೆ, 5 ತಿಂಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಬೇರೆಯಾದರು.
ಇತ್ತ ಫಿಲಿಪ್ಪೋಸಿಸ್ 2004ರಲ್ಲೇ ಆಸ್ಟ್ರೇಲಿಯಾದ ವಿಖ್ಯಾತ ಗಾಯಕಿ ಡೆಲ್ಟಾ ಗೂಡ್ರೆಮ್‌ರ ಪ್ರೇಮವನ್ನು ಸಂಪಾ ದಿಸಿದ್ದರು. 6 ತಿಂಗಳ ಈ ಒಡನಾಟದ ನಡುವೆಯೇ ಅಮೆರಿಕದ ಚೆಲುವೆ ಪ್ಯಾರಿಸ್ ಹಿಲ್ಟನ್ ಜೊತೆ `ಓಡಾಟ' ಇಟ್ಟು ಕೊಂಡಿದ್ದ ಸುದ್ದಿ ಬಹಿರಂಗವಾದಾಗ ಇಬ್ಬರೂ ಹುಡುಗಿಯರು ದೂರ ಸರಿದರು. ರಷ್ಯಾದ ಟೆನಿಸ್ ಚೆಲುವೆ ಅನ್ನಾ ಕೋರ್ನಿಕೋವ ಗಾಯಕ ಎನ್ರಿಕ್ ಇಗ್ಲೇಸಿಯಸ್‌ರ ಸಂಗಾತಿಯಾಗುವ ಮೊದಲು ಫಿಲಿಪ್ಪೋಸಿಸ್‌ರ ಪ್ರೇಯಸಿ ಯಾಗಿದ್ದರು.
ಸದ್ಯ ಫಿಲಿಪ್ಪೋಸಿಸ್ ಮದುವೆಯಾಗ ಹೊರಟಿದ್ದರೂ, ಅವರ ಆರ್ಥಿಕ ಜೀವನ ವೇನೂ ಸುಭದ್ರವಾಗಿಲ್ಲ. ಆಸ್ಟ್ರೇಲಿಯಾ ದಲ್ಲಿರುವ ಅವರ ಬೃಹತ್ ಬಂಗಲೆ ತಲೆಯ ಮೇಲಿರುವ 1.3 ಮಿಲಿಯನ್ ಡಾಲರ್ ಸಾಲದ ಹೊರೆಯಿಂದಾಗಿ ಹರಾಜಾಗುವ ಅಪಾಯದಲ್ಲಿದೆ.
ಸರ್ಫಿಂಗ್ ಪ್ರಿಯರಾದ ಅವರು ಬೀಚ್‌ನ ಹತ್ತಿರ ವಾಸಿಸುವ ಸಲುವಾಗಿ ಲಾಸ್ ವೆಗಾಸ್‌ನಲ್ಲಿ ದುಬಾರಿ ಮನೆ ಬಾಡಿಗೆಗೆ ಹಿಡಿದಿದ್ದಾರೆ ಹಾಗೂ ಟ್ರ್ರಕ್ ಖರೀದಿಸಿದ್ದಾರೆ. ಎಲ್ಲಾದರೂ ಹಣ ಸಿಕ್ಕಿದರೆ ಸಾಕೆಂದು ಕಂತೆ ಕಂತೆ ಲಾಟರಿ ಟಿಕೆಟ್ ಖರೀದಿಸುವ ಅವರಿಗೆ ತಮ್ಮ ಬಟ್ಟೆ ಇಸ್ತ್ರಿ ಮಾಡಿಕೊಳ್ಳಲೂ ಬರುವುದಿಲ್ಲ ಎನ್ನುವುದು ಅವರ ಮಾಜಿ ಪ್ರೇಯಸಿ ಯೊಬ್ಬಳ ದೂರು. ಆದರೆ, ಫಿಲಿ ಪ್ಪೋಸಿಸ್ ಯಾವುದಕ್ಕೂ ಕುಂದು ವುದಿಲ್ಲ. ಬಿದ್ದ ಮೇಲೆ ಎದ್ದು ನಿಲ್ಲಲು ಗೊತ್ತಿದೆ. ನನಗೂ ಬಂದೇ ಬರಲಿದೆ ಕಾಲ ಎಂಬ ಆಶಾವಾದ ಹೊಂದಿದ್ದಾರೆ.
Subscribe to:
Post Comments (Atom)
No comments:
Post a Comment