Friday, October 16, 2009

ರಾಗ ಲಹರಿ




ತಾವಾಗಿಯೇ ಕರೆದು ಅವಮಾನ ಮಾಡಿದರು!

ಯಾವಾಗಲೂ ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಆದರೆ, ಗೌರವಿಸುವುದು ಸಾಧ್ಯವಾಗದಿದ್ದರೂ, ಅಗೌರವ ತೋರಬಾರದು.
2007ರಲ್ಲಿ ದಿಲೀಪ್‌ ವೆಂಗ್ಸರ್ಕಾರ್‌ ನೇತೃತ್ವದ ಆಯ್ಕೆ ಸಮಿತಿ ಏಕದಿನ ತಂಡದಿಂದ ಕೈಬಿಟ್ಟಾಗ ರಾಹುಲ್‌ ದ್ರಾವಿಡ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆನಂತರದ ದಿನಗಳಲ್ಲಿ ಅವರು ಏಕದಿನ ತಂಡಕ್ಕೆ ಮರಳುವ ಸಲುವಾಗಿ ಯಾವುದೇ ಒತ್ತಡ ತಂತ್ರ ಅಥವಾ ಲಾಬಿಗಳಿಗೆ ಮೊರೆ ಹೋಗಿರಲಿಲ್ಲ. ಆದರೂ, ಚಾಂಪಿಯನ್ಸ್‌ ಟ್ರೋಫಿಗಾಗಿ 30 ಸಂಭಾವ್ಯರ ಬಳಗಕ್ಕೆ ಕೃಷ್ಣಮಾಚಾರಿ ಶ್ರೀಕಾಂತ್‌ ನೇತೃತ್ವದ ಆಯ್ಕೆ ಸಮಿತಿ ದ್ರಾವಿಡ್‌ರನ್ನು ಆಯ್ಕೆ ಮಾಡಿತ್ತು. ವೆಂಗ್ಸರ್ಕಾರ್‌ ಮಾಡಿದ ದೊಡ್ಡ ತಪ್ಪನ್ನು ತಾವು ಸರಿಪಡಿಸುತ್ತಿರುವವರಂತೆ ಶ್ರೀಕಾಂತ್‌ ಆಗ ಪೋಸು ಕೊಟ್ಟಿದ್ದರು. ಆದರೆ, ಈಗ ಆಗಿದ್ದಾದರೂ ಏನು? ಶ್ರೀಲಂಕಾ ತ್ರಿಕೋನ ಸರಣಿ ಹಾಗೂ ಚಾಂಪಿಯನ್ಸ್‌ ಟ್ರೋಫಿ ಮುಗಿಯುತ್ತಿದ್ದಂತೆಯೇ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾದ ತಂಡದಿಂದ ಅವರನ್ನು ಕಿತ್ತೊಗೆಯಲಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ಇಪ್ಪತ್ತು20 ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಶಾರ್ಟ್‌ ಪಿಚ್‌ ಎಸೆತಗಳ ವಿರುದ್ಧ ತಡಬಡಾಯಿಸಿದ್ದು ತಂಡಕ್ಕೆ ದ್ರಾವಿಡ್‌ ಆಯ್ಕೆಗೆ ಕಾರಣವೆನ್ನಲಾಗಿತ್ತು. ಹಾಗಾದರೆ, ಆ ಸಮಸ್ಯೆ ಈಗ ಪರಿಹಾರವಾಗಿದೆಯೇ? ಅಥವಾ ನಿಮ್ಮ ಆಯ್ಕೆ ಚಾಂಪಿಯನ್ಸ್‌ ಟ್ರೋಫಿವರೆಗೆ ಮಾತ್ರ ಸೀಮಿತ ಎಂದು ಆಯ್ಕೆಗಾರರು ಮೊದಲೇ ದ್ರಾವಿಡ್‌ಗೆ ಸೂಚನೆ ನೀಡಿದ್ದರೇ?
ಬೇಕೆಂದಾಗ ಆಯ್ಕೆ ಮಾಡಿ, ಬೇಡವೆಂದಾಗ ಕಿತ್ತು ಹಾಕಬಹುದಾದಂಥ ಆಟಗಾರ ದ್ರಾವಿಡ್‌ ಅಲ್ಲ. ಅವರು ಟೀಮ್‌ ಇಂಡಿಯಾದ ಮಾಜಿ ನಾಯಕ. ಟೆಸ್ಟ್‌ ಹಾಗೂ ಏಕದಿನ ಎರಡೂ ಮಾದರಿಗಳಲ್ಲಿ 10 ಸಾವಿರಕ್ಕೂ ಹೆಚ್ಚು ರನ್‌ ಗಳಿಸಿರುವ ಭಾರತದ ಕೇವಲ 2ನೇ (ಸಚಿನ್‌ ಇನ್ನೊಬ್ಬರು) ಬ್ಯಾಟ್ಸ್‌ಮನ್‌. ಸದ್ಯ ಟೀಮ್‌ ಇಂಡಿಯಾದಲ್ಲಿರುವ ಎಷ್ಟು ಮಂದಿಗೆ ದ್ರಾವಿಡ್‌ ಸಾಧನೆ ಅನುಕರಿಸುವ ಸಾಮರ್ಥ್ಯ ಇದೆ?
ಈ ದೇಶದಲ್ಲಿ; ಅದರಲ್ಲೂ ಕ್ರೀಡಾ ಕ್ಷೇತ್ರದಲ್ಲಿ ಬಹುದೊಡ್ಡ ಬೇನೆಯೆಂದರೆ, ಸಾಧಕರನ್ನು ಗೌರವಿಸುವುದು ತಿಳಿದಿಲ್ಲ. ದ್ರಾವಿಡ್‌ ಭಾರತದಲ್ಲೇ ನಡೆಯುವ 2011ರ ವಿಶ್ವಕಪ್‌ವರೆಗೂ ಏಕದಿನಗಳಲ್ಲೂ ಮುಂದುವರಿಯುವ ಬಯಕೆ ಹೊಂದಿದ್ದರು. ಆ ಕಾರಣಕ್ಕೆ ಅವರಿಗೆ ತಂಡದಲ್ಲಿ ಸ್ಥಾನ ನೀಡಲೇಬೇಕೆಂದಲ್ಲ. ಆದರೆ, ಈ ರೀತಿ 2 ಟೂರ್ನಿಗಳ ಮಟ್ಟಿಗೆ ಆಹ್ವಾನಿಸಿ ಅವಮಾನಿಸಿದ್ದು ತಪ್ಪು.
ಕಳೆದ ತಿಂಗಳು ದ್ರಾವಿಡ್‌ರನ್ನು ಏಕದಿನ ತಂಡಕ್ಕೆ ಮರು ಸೇರ್ಪಡೆಗೊಳಿಸಿದಾಗ ತಂಡದ ಚಿಂತಕರ ಚಾವಡಿಗೆ ಅದು ಇಷ್ಟವೇನೂ ಇರಲಿಲ್ಲ. ಈಗಲೂ ಅವರ ವಿರೋಧದಿಂದಲೇ ಕೈಬಿಡಲಾಗಿದೆ. ಒಟ್ಟಿನಲ್ಲಿ ಆಯ್ಕೆಗಾರರು ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ನ ಅಹಂಗಳ ತಾಕಲಾಟದ ನಡುವೆ ದ್ರಾವಿಡ್‌ರಂಥ ಉನ್ನತ ವ್ಯಕ್ತಿತ್ವದ ಆಟಗಾರ ಮುಜುಗರ ಅನುಭವಿಸುವಂತಾಯಿತು.
ಏಕದಿನ ಕ್ರಿಕೆಟ್‌ನ ಯೋಜನೆಗಳಿಗೆ ದ್ರಾವಿಡ್‌ ಸರಿಹೊಂದುವುದಿಲ್ಲ ಎಂದಾದರೆ, ಆಯ್ಕೆಗಾರರಿಂದಾಗದಿದ್ದರೆ, ಮಂಡಳಿಯೇ ಮುಂದಾಗಿ ಅವರಿಗೆ ಸ್ಪಷ್ಟ ವಾಗಿ ಸೂಚನೆ ನೀಡಬಹುದಿತ್ತು. ತನ್ಮೂ ಲಕ ಅವರಿಗೆ ಗೌರವಯುತವಾಗಿ 50 ಓವರ್‌ ಮಾದರಿಯ ಕ್ರಿಕೆಟ್‌ನಿಂದ ನಿರ್ಗಮಿಸಲು ಅವಕಾಶ ಮಾಡಿಕೊಡಬಹು ದಿತ್ತು. ಯಾವುದೇ ಹಮ್ಮುಬಿಮ್ಮಿಲ್ಲದೆ ಏಕದಿನ ಹಾಗೂ ಟೆಸ್ಟ್‌ ತಂಡಗಳ ನಾಯ ಕತ್ವವನ್ನೇ ಸ್ವತಃ ಬಿಟ್ಟುಕೊಟ್ಟ ದ್ರಾವಿಡ್‌, ಸ್ಥಾನವಿಲ್ಲ ಎಂದು ಖಚಿತವಾದ ಮೇಲೂ ಏಕದಿನ ಮಾದರಿಯಿಂದ ನಿವೃತ್ತರಾಗಲು ಹಿಂದೆ ಮುಂದೆ ನೋಡುತ್ತಿರಲಿಲ್ಲ.
ಆದರೆ, ಈ ಆಯ್ಕೆಗಾರರೆಂಬ ಪಂಚ ಬುದ್ಧಿವಂತರು ಯಾವಾಗಲೂ ತರ್ಕವಿಲ್ಲದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಸೌರವ್‌ ಗಂಗೂಲಿಯನ್ನೂ ವೆಂಗ್ಸ ರ್ಕಾರ್‌ ನೇತೃತ್ವದ ಆಯ್ಕೆ ಸಮಿತಿ ಇದೇ ರೀತಿ ಹೀನಾಯವಾಗಿ ನಡೆಸಿಕೊಂಡಿತ್ತು. ಮಾತ್ರವಲ್ಲ, ಕಪಿಲ್‌ ದೇವ್‌, ಬಿಷನ್‌ ಸಿಂಗ್‌ ಬೇಡಿ ಮೊದಲಾದ ದಿಗ್ಗಜರಿಗೂ ಗೌರವಾನ್ವಿತ ವಿದಾಯ ಸಿಕ್ಕಿರಲಿಲ್ಲ. ಹತ್ತಾರು ವರ್ಷ ಕ್ರಿಕೆಟ್‌ ಆಡಿ, ದೇಶದ ಕೀರ್ತಿ ಪತಾಕೆ ಮೆರೆಸಿದ ಆಟಗಾರರನ್ನು ಗೌರವದಿಂದ ಬೀಳ್ಕೊಡುವ ಪರಂಪರೆ ನಮ್ಮಲ್ಲಿಲ್ಲ. ಅಂಥ ಸಂಸ್ಕೃತಿ ರೂಢಿಸಿ ಕೊಳ್ಳುವ ಲಕ್ಷಣಗಳೂ ಕಂಡುಬರುತ್ತಿಲ್ಲ.
ದ್ರಾವಿಡ್‌ರನ್ನು ಈ ರೀತಿ ಕರೆದು ಅವಮಾನ ಮಾಡಿದ ಆಯ್ಕೆಗಾರರಿಗೆ ಸಚಿನ್‌ ತೆಂಡುಲ್ಕರ್‌ರನ್ನೂ ಈ ರೀತಿ ನಡೆಸಿಕೊಳ್ಳುವ ಧೈರ್ಯವಿದೆಯೇ?
ಉತ್ತರ, ಖಂಡಿತಾ ಇಲ್ಲ.

1 comment: