Sunday, October 11, 2009

ರಾಗ ಲಹರಿ



  • ವಿಮರ್ಶೆಯಲ್ಲ ಪರಿಚಯ

ಯಾವಾಗಲೂ ಓದಬಹುದಾದ `ಆಗಾಗ'

ಚಿ. ಶ್ರೀನಿವಾಸ ರಾಜು ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ಸಾಹಿತ್ಯದ ಪರಿಚಾರಕರಾಗಿ ಬದುಕಿದವರು. ತಾವು ಲೇಖಕರಾಗಿ ಮೆರೆಯ ಬೇಕೆಂಬ ಅಭಿಲಾಷೆ ಹೊಂದಿರದೆ, ಕ್ರೈಸ್ಟ್‌ ಕಾಲೇಜು ಕನ್ನಡ ಸಂಘದ ಮೂಲಕ, ದ.ರಾ. ಬೇಂದೆ್ರ ಕಾವ್ಯ ಸ್ಪರ್ಧೆ, ಅ.ನ.ಕೃ. ಲೇಖನ ಸ್ಪರ್ಧೆ ಮೂಲಕ, ಇತರ ಹಲವಾರು ಸಂಘ ಸಂಸ್ಥೆಗಳ ಮೂಲಕ ಸಾಹಿತ್ಯದ ಸೇವೆ ಮಾಡಿದರು, ಪುಸ್ತಕ ಪ್ರಕಟಣೆಯ ಸಂಸ್ಕೃತಿ ಅರಳಲು ಶ್ರಮಿಸಿದರು. ನೂರಾರು ಯುವ ಬರಹಗಾರರನ್ನು ಬೆಳಕಿಗೆ ತಂದರು. ಕನ್ನಡವನ್ನು ಬೆಳೆಸುವ, ಉಳಿಸುವ ಕೈಂಕರ್ಯವನ್ನು ತಮ್ಮ ಉಸಿರೆಂಬಂತೆ ಶ್ರದ್ಧೆಯಿಂದ ಮಾಡಿದ ಅವರು ಪರಿಚಾರಿಕೆಗೆ ಹೊಸ ಅರ್ಥ ತಂದು ಕೊಟ್ಟರು. ತಮ್ಮ ಇಷ್ಟೆಲ್ಲಾ ಚಟುವಟಿಕೆಗಳ ನಡುವೆಯೂ ಸ್ವಂತ ಆಲೋಚನೆ- ಚಿಂತನೆಗಳಿಗೂ ಅಕ್ಷರ ರೂಪ ನೀಡುವುದಕ್ಕೆ ಅವರ ಬಳಿ ಸಮಯವಿತ್ತು.
ಹೀಗೆ ಅವರು ಬಿಡುವಾದಾಗ, ಮನಸ್ಸಾದಾಗ, ಆಗಾಗ ಬರೆದಿರುವ ಪ್ರಬುದ್ಧ, ವಿಚಾರಪೂರ್ಣ ಬರಹಗಳು, ಕವಿತೆ, ನಾಟಕ, ಪ್ರಬಂಧ, ವ್ಯಕ್ತಿ ಚಿತ್ರ... ಇತ್ಯಾದಿಗಳ ಸಂಕಲನವನ್ನು ಅಭಿನವ ಪ್ರಕಾಶನ `ಆಗಾಗ' ಸಂಪುಟದ ರೂಪದಲ್ಲಿ ಹೊರತಂದಿದೆ. ಶ್ರೀನಿವಾಸ ರಾಜು ತಾವು ನಿಧನಕ್ಕೆ ಕೆಲವು ವರ್ಷಗಳ ಮೊದಲೇ ಬರೆದಿಟ್ಟಿದ್ದ ಉಯಿಲಿನ ಆಯ್ದ ಭಾಗವನ್ನೂ ಶ್ರೀಮತಿ ಸರಸ್ವತಿ ರಾಜು ಅವರ ಅಪೇಕ್ಷೆಯಂತೆ ಪ್ರಕಟಿಸಿರುವುದು ವಿಶೇಷ.
ಮಾಸ್ತಿ, ಜೆಬಿ ಜೋಷಿ, ಜಿಪಿ ರಾಜರತ್ನಂ, ನಿರಂಜನ, ಪರ್ವತವಾಣಿ, ಸುರಂ ಎಕ್ಕುಂಡಿ, ಮಧುರಚೆನ್ನ, ಡಾ. ಜಿಎಸ್‌ಎಸ್‌, ಮುಗಳಿ ಮೊದಲಾದ ಸಾಹಿತ್ಯ ದಿಗ್ಗಜರ ಜೊತೆ ಶ್ರೀನಿವಾಸ ರಾಜು ಆಪ್ತ ಒಡನಾಟ ಹೊಂದಿದ್ದವರು. ವ್ಯಕ್ತಿ ಸಂಗತಿ ಬರಹಗಳಲ್ಲಿ ಈ ಎಲ್ಲರೊಂದಿಗಿನ ಸಾಹಿತ್ಯ- ಸ್ನೇಹ- ಒಡನಾಟಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಜಿಪಿ ರಾಜರತ್ನಂ ನಿಧನರಾದಾಗ ಶ್ರೀನಿವಾಸ ರಾಜು:
``ಕಾದ ಮರಳಲ್ಲಿ ಕಾಗುಣಿತ ತಿದ್ದುವುದಾಗಿತ್ತು ನಿನ್ನ ಕೆಲಸ ಇರುಳು ಕನ್ನಡಿಯಲ್ಲಿ ಪ್ರತಿಮೆ ಹುಡುಕುವುದೊಂದೇ ನನ್ನ ಕೆಲಸ''
ಎಂದು ಕವನ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಸಂವೇದನೆಗಳತ್ತ ಸದಾ ಅವರ ಮನಸ್ಸು ತುಡಿಯುತ್ತಿತ್ತು. ಅವರು ಐದು ಮೂಕ ನಾಟಕಗಳು ಮನದಲ್ಲಿ ಬದುಕಿನ ಚಿತ್ರಗಳನ್ನು ಮೂಡಿಸುವ ಬಗೆ ಅದ್ಭುತ.
ಭೂಪಾಲ್‌ ದುರಂತದ ಸಂದರ್ಭದಲ್ಲಿ ಅವರು,
``ದಿಕ್ಕೆಟ್ಟು ತತ್ತರಿಸಿ, ದಿಕ್ತಟ ಒತ್ತರಿಸಿ ವಿಷವಾಗಿ ಹೋಯಿತು ಜೀವಜಲ ಭೂಪಾಲ ಹೊರಳಾಡಿ, ಭೂಪಾಲ ಕುರುಡಾಗಿ ಭೂಪಾಲವಾಯಿತು ಪ್ರೇತಕುಲ'
ಎಂದು ಕವಿತೆ ಬರೆದರು.
ಸಾಹಿತ್ಯ ವಿಮರ್ಶೆ ವಿಭಾಗದಲ್ಲಿರುವ ಚಾಮರಸನ ಪ್ರಭುಲಿಂಗ ಲೀಲೆ ಮತ್ತು ಹರಿಹರನ ಪ್ರಭುದೇವ ರಗಳೆಯ ತೌಲನಿಕ ಅಧ್ಯಯನವನ್ನು ಸಾಹಿತ್ಯದ ವಿದ್ಯಾರ್ಥಿಗಳು ಓದಲೇ ಬೇಕು.
ರಾಜರತ್ನಂ ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ಒಂಟಿತನ, ಅಷ್ಟಾದರೂ ತಮಗೆ ಪೂರ್ಣ ವಿಶ್ವಾಸ ಮೂಡುವವರೆಗೆ ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಅವರ ನಿಷ್ಠುರತೆ, ಎಷ್ಟೋ ದಿನ ಅವರ ಮನೆಯವರೆಗೂ ಹೋದರೂ, ಒಂದು ದಿನವೂ ಒಳಗೆ ಬಾ ಎಂದು ಕರೆಯಲಿಲ್ಲವಲ್ಲ ಎಂದು ತಾವು ಚಡಪಡಿಕೆ ಅನುಭವಿಸಿದ್ದನ್ನೂ ಹಾಗೂ, ಕೊನೆಗೂ ಒಂದು ದಿನ ಕರೆದಾಗ ದಿಗ್ವಿಜಯ ಮಾಡಿದಷ್ಟು ಸಂತೋಷ ಅನುಭವಿಸಿದ್ದನ್ನು ಶ್ರೀನಿವಾಸ ರಾಜು ಮನೋಜ್ಞವಾಗಿ ಬರೆದುಕೊಂಡಿದ್ದಾರೆ.
ಅವರ ಸ್ವಾನುಭವದ ಬರಹಗಳಲ್ಲಿ ಕನ್ನಡ ಶಾಲೆಯಲ್ಲಿನ `ಭಾಷಣ ಮೋಕ್ಷ' ಹಾಗೂ `ಅರವತ್ತು ದಾಟಿದ ಮೇಲೆ' ಓದಲೇ ಬೇಕು. ಅರವತ್ತು ದಾಟಿದ ನಂತರದ ತಲ್ಲಣ, ತಳಮಳಗಳನ್ನು, ಮಕ್ಕಳು- ಮಡದಿಯ ಆಧುನಿಕ ಯೋಚನೆಗಳಿಗೆ ಸ್ಪಂದಿಸಲಾಗದ ಚಡಪಡಿಕೆ, ಮೈಗೆ- ಮನಸ್ಸಿಗೆ ಒಗ್ಗದ ಆಧುನಿಕ ಶೌಚಾಲಯಕ್ಕೆ ಹೊಂದಿಕೊಳ್ಳಲಾಗದ ಪರದಾಟ.. ಇತ್ಯಾದಿ ಪ್ರಸಂಗಗಳ ಸ್ವಾರಸ್ಯವನ್ನು ಓದಿಯೇ ಅರಿಯಬೇಕು.
ಆತ್ಮಕಥೆ ಎಂಬ ಕವಿತೆಯನ್ನು ರಾಜು ಹೀಗೆ ಪ್ರಾರಂಭಿಸುತ್ತಾರೆ:
``ಏನು ಬರೆಯಲಿ ಏಕೆ ಬರೆಯಲಿ ನನ್ನ ಆತ್ಮಕಥೆ ನೀನು ಬಿಟ್ಟ ಗಾಳಿಯನ್ನೇ ನಾನು ಎಳೆಯುತ್ತಿರುವಾಗ ನೀನು ಬಿತ್ತಿದ ಕಾಳನ್ನೇ ನಾನು ತಿನ್ನುತ್ತಿರುವಾಗ ನೀನು ನೆಯ್ದ ಬಟ್ಟೆಯನ್ನೇ ನಾನು ಧರಿಸುತ್ತಿರುವಾಗ ನೀನು ಮೆಟ್ಟಿದ ಮಣ್ಣನ್ನೇ ನಾನು ತುಳಿಯುತ್ತಿರುವಾಗ''

ಒಟ್ಟಿನಲ್ಲಿ `ಆಗಾಗ' ಆಗಾಗ ಓದಿಗೆ ಮಾತ್ರವಲ್ಲದೆ, ಯಾವಾಗಲೂ ಓದಲು ಯೋಗ್ಯವಾದ ಸಂಗ್ರಾಹ್ಯ ಸಂಪುಟ.

No comments:

Post a Comment