Tuesday, October 6, 2009

ರಾಗ ಲಹರಿ


ಶ್ರೇಯಾಂಕಗಳೆಂಬ ಮಂಕುಬೂದಿ

ಶ್ರೇಯಾಂಕಗಳು ಯಾವಾಗಲೂ ಸತ್ಯವನ್ನೇ ಹೇಳುವುದಿಲ್ಲ. ಇವುಗಳನ್ನು ಆಧರಿಸಿ ಭವಿಷ್ಯ ನುಡಿಯಲು ಸಾಧ್ಯವಿಲ್ಲ.
ಯಾವುದೇ ಕ್ರೀಡೆಯಲ್ಲಿ ಶ್ರೇಯಾಂಕಗಳೆಂದರೆ, ತಂಡ/ ಆಟಗಾರರ ಪ್ರಸಕ್ತ ಫಾರ್ಮ್‌ ಕುರಿತು ಬೆಳಕು ಚೆಲ್ಲುವ ದಿಕ್ಸೂಚಿ. ಅದೊಂದು ಮಾಹಿತಿಯೇ ಹೊರತು ಮಾನದಂಡವಲ್ಲ. ಯಾವುದೇ ಒಂದು ಟೂರ್ನಿಯನ್ನು ಅದರ ಆರಂಭಕ್ಕೆ ಮುನ್ನ ಉನ್ನತ ಶ್ರೇಯಾಂಕ ಹೊಂದಿದ್ದವರೇ ಗೆಲ್ಲಬೇಕೆಂದಿಲ್ಲ. ಅಂಥ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ವಿರಳವೆನಿಸಿವೆ.
90ರ ದಶಕದಿಂದ (1996ರ ವಿಶ್ವಕಪ್‌ನಿಂದೀಚೆಗೆ), ತೀರಾ ಇತ್ತೀಚಿನವರೆಗೂ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್‌ನ ಟೆಸ್ಟ್‌ ಹಾಗೂ ಏಕದಿನ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಹಾಗೆಂದೇ, ಯಾವುದೇ ಟೂರ್ನಿ ಅಥವಾ ಟೆಸ್ಟ್‌ ಸರಣಿಗೆ ಮುನ್ನ ಆ ತಂಡ ಫೇವರಿಟ್‌ ಪಟ್ಟದೊಂದಿಗೆ ತೆರಳಿ, ಟ್ರೋಫಿಯೊಂದಿಗೆ ಮರಳುತ್ತಿತ್ತು. ಅಗ್ರ ಶ್ರೇಯಾಂಕದಲ್ಲಿದ್ದ ಆಸ್ಟ್ರೇಲಿಯಾ ಹಾಗೂ ಉಳಿದ ತಂಡಗಳ ನಡುವೆ ಗುಣಮಟ್ಟದಲ್ಲಿ ಕನಿಷ್ಠ 25 ಸ್ಥಾನಗಳ ಅಂತರವಿದೆ ಎಂಬ ಅಭಿಪ್ರಾಯಗಳಿದ್ದವು. ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್‌ ಎಲ್ಲವೂ ಕೇವಲ 2ನೇ ಸ್ಥಾನಕ್ಕಾಗಿ ಸ್ಪರ್ಧೆ ನಡೆಸುತ್ತಿದ್ದವು.
ಟೆನಿಸ್‌ನಲ್ಲೂ ಹಾಗೆ, 2003ರಲ್ಲಿ ಚೊಚ್ಚಲ ವಿಂಬಲ್ಡನ್‌ ಗೆದ್ದ ನಂತರದಿಂದ ರೋಜರ್‌ ಫೆಡರರ್‌ ಸತತ 237 ವಾರ ಕಾಲ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟ ಆಕ್ರಮಿಸಿಕೊಂಡಿದ್ದರು. ಈ ಅವಧಿಯಲ್ಲಿ ಅವರು ಭಾಗವಹಿಸಿದ ಎಲ್ಲಾ ಗ್ರಾಂಡ್‌ಸ್ಲಾಂಗಳಲ್ಲಿ ಫೇವರಿಟ್‌ ಆಗಿರುತ್ತಿದ್ದರು. ಪ್ರಶಸ್ತಿ ಗೆದ್ದೇ ಗೆಲ್ಲುತ್ತಿದ್ದರು. ಅವರು ಕೇವಲ 6 ವರ್ಷಗಳಲ್ಲಿ 15 ಗ್ರಾಂಡ್‌ಸ್ಲಾಂ ಗೆದ್ದು ಸಾರ್ವಕಾಲಿಕ ಶ್ರೇಷ್ಠರ ಯಾದಿಗೆ ಸೇರಿದ್ದು ಹೀಗೆ.
ಆದರೆ, ಕಳೆದ ಎರಡು ವರ್ಷಗಳಿಂದ ಆ ಟ್ರೆಂಡ್‌ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ.
ಹಿಂದೆಲ್ಲಾ ಆಸ್ಟ್ರೇಲಿಯಾ ಮತ್ತು ಫೆಡರರ್‌ ಗೆಲುವಿಗೆ ಇತರರಿಂದ ಸ್ಪರ್ಶಿಸಲಾಗದ ಸ್ವಸಾಮರ್ಥ್ಯ ಕಾರಣವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಟೆನಿಸ್‌ನಲ್ಲಿ ಫೆಡರರ್‌ ನಂ.1 ರ್ಯಾಂಕಿಂಗ್‌ ಕಾಯ್ದುಕೊಂಡಿದ್ದರೆ, ಅದಕ್ಕೆ ಎದುರಾಳಿಗಳ ದೌರ್ಬಲ್ಯ ಕಾರಣ. 2008ರಲ್ಲಿ ಫೆಡರರ್‌ ಸಾಮ್ರಾಜ್ಯದ ಪತನಕ್ಕೆ ಕಾರಣರಾಗಿದ್ದ ರಾಫೆಲ್‌ ನಡಾಲ್‌ರನ್ನು ಮಂಡಿ ನೋವು ಆಡಲು ಬಿಡುತ್ತಿಲ್ಲ. ಉಳಿದ ಆಟಗಾರರಿಂದ ಸ್ಥಿರವಾಗಿ ಫೆಡರರ್‌ ಸಾಮರ್ಥ್ಯಕ್ಕೆ ಸವಾಲೊಡ್ಡಲು ಸಾಧ್ಯವಿಲ್ಲ. ಯುಎಸ್‌ ಓಪನ್‌ ಫೈನಲ್‌ನಲ್ಲಿ ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ಪೊಟ್ರೊ, ಸ್ವಿಸ್‌ ಆಟಗಾರನನ್ನು ಸೋಲಿಸಿರಬಹುದು. ಆದರೆ, ಅವರಿಂದಲಾಗಲೀ, ಅಥವಾ ಆಂಡಿ ಮರ್ರೆ, ನೊವಾಕ್‌ ಡಿಜೊಕೊವಿಕ್‌ರಂಥ ಆಟಗಾರರಿಂದಾಗಲೀ ಫೆಡರರ್‌ರ ವಿಶ್ವ ನಂ.1 ಪಟ್ಟಕ್ಕೆ ಚ್ಯುತಿ ತರುವಂಥ ಸ್ಥಿರ ಆಟ ಸಾಧ್ಯವಿಲ್ಲ. ಹಾಗಾಗಿ, ಯಾರೂ ಸಮರ್ಥ ಪ್ರತಿಸ್ಪರ್ಧಿಗಳಿಲ್ಲ ಎಂಬ ಕಾರಣಕ್ಕೆ ಫೆಡರರ್‌ ಇನ್ನೂ ಕೆಲವು ಕಾಲ ನಂ.1 ಆಗಿರುತ್ತಾರೆ.
ಕ್ರಿಕೆಟ್‌ನಲ್ಲೂ ಅಷ್ಟೇ. 2008ರಲ್ಲಿ ಟೆಸ್ಟ್‌ ಕ್ರಿಕೆಟ್‌ನ ಅಗ್ರ ಶ್ರೇಯಾಂಕವನ್ನು ದಕ್ಷಿಣ ಆಫ್ರಿಕಾಕ್ಕೆ ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಮತ್ತೆ ಅದನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಏಕದಿನ ಕ್ರಿಕೆಟ್‌ನಲ್ಲಿ ಇತರ ತಂಡಗಳ ದೌರ್ಬಲ್ಯದಿಂದಾಗಿ ನಂ.1 ಪಟ್ಟ ಸಂಗೀತಕುರ್ಚಿ (ಮ್ಯೂಸಿಕಲ್‌ ಚೇರ್‌) ಸ್ಪರ್ಧೆಯಂತಾಗಿರುವುದರಿಂದ ಆಸೀಸ್‌ ಸಹ ಗೌರವ ಅನುಭವಿಸುತ್ತಿದೆ. ಕಳೆದ ಎರಡು ತಿಂಗಳಲ್ಲಿ ಕನಿಷ್ಠ 5 ಬಾರಿ ಅಗ್ರ ಶ್ರೇಯಾಂಕ ತಂಡಗಳನ್ನು ಬದಲಾಯಿಸಿದೆ. ವಿಚಿತ್ರವೆಂದರೆ, ಇಲ್ಲಿ ಯಾವ ತಂಡಗಳೂ ನಂ.1 ಶ್ರೇಯಾಂಕವನ್ನು ಸಂಪಾದಿಸುತ್ತಿಲ್ಲ. ಬದಲಿಗೆ ವಿವಿಧ ತಂಡಗಳ ವೈಫಲ್ಯ ಮತ್ತೊಂದು ತಂಡಕ್ಕೆ ಶ್ರೇಯ ಒಲಿಯುವಂತೆ ಮಾಡುತ್ತಿದೆ. ಅಗ್ರ 3 ತಂಡಗಳ ನಡುವೆ ಅಂಕಗಳ ಕನಿಷ್ಠ ಅಂತರವಿರುವುದು ಇದಕ್ಕೆ ಕಾರಣ.
ಈ ತಿಂಗಳಾರಂಭದಲ್ಲಿ ಶ್ರೀಲಂಕಾದಲ್ಲಿ ಕೇವಲ ನ್ಯೂಜಿಲೆಂಡ್‌ ವಿರುದ್ಧ ಗೆಲ್ಲುತ್ತಿದ್ದಂತೆಯೇ ಭಾರತ ತಂಡ ಇತಿಹಾಸದಲ್ಲಿ ಮೊದಲ ಬಾರಿ ನಂ.1 ಪಟ್ಟಕ್ಕೇರಿತು. ಆದರೆ, 24 ಗಂಟೆಗಳ ಒಳಗೆ ಶ್ರೀಲಂಕಾ ವಿರುದ್ಧ ಸೋತು ಗೌರವ ಕಳೆದುಕೊಂಡಿತು. ಅತ್ತ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯಲ್ಲಿ 6 ಗೆಲುವು ಸಾಧಿಸಿದ ಆಸ್ಟ್ರೇಲಿಯಾ ನಂ.1 ಪಟ್ಟಕ್ಕೆ ಮರಳಿತು. ಆದರೆ, 7ನೇ ಪಂದ್ಯವನ್ನು ಸೋಲುತ್ತಿದ್ದಂತೆಯೇ ಅಗ್ರ ಶ್ರೇಯಾಂಕ ದಕ್ಷಿಣ ಆಫ್ರಿಕಾ ಪಾಲಾಯಿತು. ಚಾಂಪಿಯನ್ಸ್‌ ಟ್ರೋಫಿ ಆರಂಭವಾಗುವಾಗ ಆತಿಥೇಯ ಆಫ್ರಿಕಾ ನಂ.1 ಆಗಿತ್ತು. ಮೊದಲ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಮತ್ತೆ ನಂ.1 ಸ್ಥಾನ ಭಾರತವನ್ನು ಹುಡುಕಿಕೊಂಡು ಬಂತು. ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುತ್ತಿದ್ದಂತೆಯೇ, ಶ್ರೇಯಾಂಕ ಕನ್ನಿಕೆ ಆಸ್ಟ್ರೇಲಿಯಾವನ್ನು ಅರಸಿಕೊಂಡು ಹೋದಳು.
ಟೂರ್ನಿ ಆರಂಭದಲ್ಲಿ ಹಾಗೂ ನಡುವೆ ನಂ.1 ಆಗಿದ್ದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಕನಿಷ್ಠ ಸೆಮಿಫೈನಲ್‌ ಪ್ರವೇಶವನ್ನೂ ಪಡೆಯದೆ ನಿರ್ಗಮಿಸಿದವು. ಉಪಾಂತ್ಯ ತಲುಪಿದ ತಂಡಗಳಲ್ಲಿ ಆಸೀಸ್‌ ಅಗ್ರ ಶ್ರೇಯಾಂಕವನ್ನು ಸದ್ಯಕ್ಕೆ ತನ್ನಲ್ಲೇ ಉಳಿಸಿಕೊಂಡಿದ್ದರೆ, ನ್ಯೂಜಿಲೆಂಡ್‌ 4, ಪಾಕಿಸ್ತಾನ 5 ಮತ್ತು ಇಂಗ್ಲೆಂಡ್‌ 6ನೇ ಶ್ರೇಯಾಂಕ ಹೊಂದಿದ್ದವು. ಸೋಮವಾರದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಗೆದ್ದರೆ, ವಿಶ್ವ ಶ್ರೇಯಾಂಕದಲ್ಲಿ ನಂ.1 ಪಟ್ಟದ ಜೊತೆಗೆ ಅಂಕಗಳ ಅಂತರವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ 5ನೇ ಶ್ರೇಯಾಂಕದ ನ್ಯೂಜಿಲೆಂಡ್‌ ಗೆದ್ದರೆ, 2ನೇ ಶ್ರೇಯಾಂಕದ ಟೀಮ್‌ ಇಂಡಿಯಾ ಮನೆಯಲ್ಲಿ ಕುಳಿತುಕೊಂಡೇ ಬಿಟ್ಟಿ ನಂ.1 ಪಟ್ಟ ಸವಿಯಲೂಬಹುದು.
ತಂಡಗಳ ಪ್ರದರ್ಶನವಾರು ಅಂಕ ನೀಡುವ ಐಸಿಸಿ ಶ್ರೇಯಾಂಕ ಪದ್ಧತಿ ಪರಿಪೂರ್ಣವಾಗಿಲ್ಲ ಎಂಬುದು ಇಂಥ ಹಾವುಏಣಿ ಆಟದಿಂದ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಟಾಸ್‌ ಗೆದ್ದವರೇ ಪಂದ್ಯವನ್ನೂ ಗೆಲ್ಲುವ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಜಯಿಸಿತ್ತು. ನಂತರದ ಪಂದ್ಯದಲ್ಲಿ ಟಾಸ್‌ ಸೋತು ಪಂದ್ಯವನ್ನೂ ಸೋತಿತ್ತು. ಫೈನಲ್‌ನಲ್ಲಿ ಟಾಸ್‌ ಗೆದ್ದಿದ್ದರಿಂದ ಶ್ರೀಲಂಕಾವನ್ನು ಸೋಲಿಸಲು ಸಾಧ್ಯವಾಗಿತ್ತು. ಆದರೆ, ಶ್ರೇಯಾಂಕ ನೀಡಿಕೆಯಲ್ಲಿ ಪಂದ್ಯದ ಫಲಿತಾಂಶ ಪರಿಗಣಿಸಲಾಗುವುದೇ ಹೊರತು, ವಾತಾವರಣ, ಪಿಚ್‌, ಎದುರಾಳಿ ತಂಡಗಳ ಶಕ್ತಿ ಇತ್ಯಾದಿಗಳಿಗೆ ಮಹತ್ವವಿಲ್ಲ.
ಮಹಿಳಾ ಟೆನಿಸ್‌ನಲ್ಲೂ ರ್ಯಾಂಕಿಂಗ್‌ ಬಗ್ಗೆ ರಂಪ-ರಾಮಾಯಣ ನಡೆಯುತ್ತಿದೆ. ಅಲ್ಲಿಯೂ ಆಟಗಾರ್ತಿಯರಿಗೆ ರ್ಯಾಂಕಿಂಗ್‌ ನೀಡಲು ಒಂದು ಸಿದ್ಧಸೂತ್ರವಿದೆ. ಗ್ರಾಂಡ್‌ಸ್ಲಾಂ ವಿಜಯದಿಂದ ಮೊದಲ್ಗೊಂಡು, ಡಬ್ಲ್ಯುಟಿಎ ಮಾನ್ಯತೆಯ ಸಣ್ಣ ಟೂರ್ನಿಯಲ್ಲಿ ಮೊದಲ ಸುತ್ತು ಗೆಲ್ಲುವವರಿಗೂ ಇಂತಿಷ್ಟೆಂದು ಅಂಕಗಳನ್ನು ಹಂಚುವ ಕ್ರಮವಿದೆ. ಆದರೆ, ಈ ಪದ್ಧತಿಯೂ ಪರಿಪೂರ್ಣವಾಗಿಲ್ಲ. ಏಕೆಂದರೆ, 2009ರ ನಾಲ್ಕು ಗ್ರಾಂಡ್‌ಸ್ಲಾಂಗಳಲ್ಲಿ ಆಸ್ಟ್ರೇಲಿಯನ್‌ ಓಪನ್‌ ಮತ್ತು ವಿಂಬಲ್ಡನ್‌ ಗೆದ್ದು, ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌, ಯುಎಸ್‌ ಓಪನ್‌ನಲ್ಲಿ ಸೆಮಿಫೈನಲ್‌ ಸಾಧನೆ ಮಾಡಿದ್ದರೂ, ಸೆರೇನಾ ವಿಲಿಯಮ್ಸ್‌ ವಿಶ್ವ ನಂ.1 ಅಲ್ಲ. ಒಂದೂ ಗ್ರಾಂಡ್‌ಸ್ಲಾಂ ಗೆಲ್ಲದ ರಷ್ಯಾದ ದಿನಾರ ಸಫಿನಾಗೆ ಆ ಗೌರವ. ಇದು ಸಾಕಷ್ಟು ಟೀಕೆ, ಪ್ರತಿಭಟನೆಗಳಿಗೆ ಕಾರಣವಾಗಿದೆ. ಆದರೆ, ಶ್ರೇಯಾಂಕಗಳು ಇರುವುದೇ ಹೀಗೆ. ಅದರ ನಿಯಮಗಳ ಎದುರು ಯಾವುದೇ ತರ್ಕ, ವಾದಗಳು ನಿಲ್ಲುವುದಿಲ್ಲ.

No comments:

Post a Comment