ವೈಫಲ್ಯಗಳ ಹ್ಯಾಟ್ರಿಕ್
ಕನ್ನಡದಲ್ಲಿ ಮೂರಕ್ಕೆ ಮುಕ್ತಿ ಎಂಬ ಮಾತೊಂದಿದೆ. ಭಾರತೀಯ ಕ್ರಿಕೆಟ್ ತಂಡದ ಪಾಲಿಗೆ ಈ ಮಾತು ನಿಜವಾಗಲಿ ಎಂಬುದು ಆಶಯ.
2007ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಲೀಗ್ ಪಂದ್ಯ ಸೋತು ಭಾರತ ಮೊದಲ ಸುತ್ತಿನಿಂದಲೇ ಹೊರಬಿದ್ದಿತ್ತು.
2009ರ ಇಪ್ಪತ್ತು20 ವಿಶ್ವಕಪ್‌ನಲ್ಲೂ ಪ್ರಾಥಮಿಕ ಲೀಗ್‌ನಲ್ಲಿ ದುರ್ಬಲ ಐರ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಗೆದ್ದಿದ್ದೇ ಭಾರತದ ಸಾಧನೆ. ಸೂಪರ್ 8ರ ಘಟ್ಟದಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಟೀಮ್ ಇಂಡಿಯಾ ತಲೆ ತಗ್ಗಿಸಿಕೊಂಡು ಮನೆಗೆ ಮರಳಿತು.
ಈಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಅಷ್ಟೇ.
ಕೇವಲ 2ನೇ ದರ್ಜೆಯ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದ ಸಮಾಧಾನದೊಂದಿಗೆ, ಉಪಾಂತ್ಯ ತಲುಪಲಾಗದ ವಿಷಾದದೊಂದಿಗೆ ತಂಡ ತವರಿಗೆ ಮರಳಿದೆ. ಎಂಎಸ್ ಧೋನಿ ಬಳಗದ ಪುಣ್ಯ, ಐಸಿಸಿ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಸಾಕಷ್ಟು ಪ್ರಶಸ್ತಿಗಳು ಒಲಿದಿದ್ದರಿಂದ ಮುಖ ಮುಚ್ಚಿಕೊಳ್ಳಲು ಟ್ರೋಫಿಗಳು ಸಿಕ್ಕಿವೆ!
ಐಸಿಸಿ ಆಸ್ಕರ್ ಪ್ರಶಸ್ತಿಗಳಲ್ಲಿ ವರ್ಷದ ಟೆಸ್ಟ್ ಆಟಗಾರ ಗೌರವಕ್ಕೆ ಗಂಭೀರ್, ಏಕದಿನ ಆಟಗಾರ ಪ್ರಶಸ್ತಿಗೆ ಧೋನಿ ಪಾತ್ರರಾದರು. ವರ್ಷದ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲೂ ತಲಾ ಮೂವರು ಸ್ಥಾನ ಪಡೆದರು. ಧೋನಿಗೆ ಉಭಯ ತಂಡಗಳ ನಾಯಕತ್ವವೂ ಲಭ್ಯ ವಾಯಿತು. ಆದರೆ, ಈ ಗೌರವದಿಂದ ಬೀಗುವ ಭರದಲ್ಲಿ ಚಾಂಪಿಯನ್ಸ್ ಟ್ರೋಫಿ ಮುಖಭಂಗವನ್ನು ಮರೆಯುವುದು ತರವಲ್ಲ.
ತಾನೂ ವಿಶ್ವ ನಂ.1 ಎಂದು ಬೀಗುತ್ತಿದ್ದ ತಂಡದಲ್ಲಿ ವಿಶ್ವ ದರ್ಜೆಯ ಬೌಲರ್‌ಗಳಿಲ್ಲದೇ ಇರುವುದು ದುರಂತ. ಇಷ್ಟೊಂದು ಹಣ ಇರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಉತ್ತಮ ಆಟಗಾರರನ್ನು ದೊಡ್ಡ ಟೂರ್ನಿಗಳಿಗಾಗಿ ಸಂರಕ್ಷಿಸಿಕೊಳ್ಳುವಂಥ ವ್ಯವಸ್ಥೆ ಹೊಂದಿಲ್ಲದಿರುವುದು ದೌರ್ಭಾಗ್ಯಪೂರ್ಣ. ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಹೀಗೆಲ್ಲಾ ಆಗುತ್ತದೆ. ಟೀಮ್ ಇಂಡಿಯಾಕ್ಕೆಂದೇ ಪ್ರತ್ಯೇಕ ವೈದ್ಯರು, ಫಿಟ್‌ನೆಸ್ ತರಬೇತುದಾರರು, ಮಾನಸಿಕ ಪುನಶ್ಚೇತನ ತಜ್ಞರು ಇಷ್ಟೆಲ್ಲಾ ಇದ್ದರೂ, ಯಾವ ಆಟಗಾರರು ಯಾವಾಗ ಗಾಯಗೊಳ್ಳುತ್ತಾರೆ, ಯಾವಾಗ ಚೇತರಿಸಿಕೊಳ್ಳುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಸಣ್ಣ ಪುಟ್ಟ ಟೂರ್ನಿ/ ಪಂದ್ಯಗಳು ನಡೆಯುವಾಗ ಆಟಗಾರರು ಇದ್ದಕ್ಕಿದ್ದಂತೆ ತಮಗೆ ಗಾಯವಾಗಿದೆ, ಲಭ್ಯರಿಲ್ಲ ಎಂದು ಘೋಷಿಸುತ್ತಾರೆ. ದೊಡ್ಡ ಟೂರ್ನಿಗಳ ಸಂದರ್ಭದಲ್ಲಿ ಪವಾಡಸದೃಶ ರೀತಿಯಲ್ಲಿ ಆಟಗಾರರು ಚೇತರಿಸಿಕೊಂಡಿರುತ್ತಾರೆ. ಟೂರ್ನಿಯಲ್ಲಿ ಸೋತ ಬಳಿಕ ಇದ್ದಕ್ಕಿದ್ದಂತೆ ಗಾಯಾಳುಗಳ ಹೊಸ ಪಟ್ಟಿ ಬಿಡುಗಡೆಯಾಗುತ್ತದೆ. ಗಾಯಗಳನ್ನು ಮುಚ್ಚಿಟ್ಟುಕೊಂಡು ಟೂರ್ನಿಗಳಿಗೆ ಹೋಗುವ ಆಟಗಾರರು, ಪಂದ್ಯಕ್ಕೆ ಮುನ್ನ ಚೇತರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದಾದಾಗ, ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡ ಬಗ್ಗೆ ಕಥೆಗಳು ಸೃಷ್ಟಿಯಾಗುತ್ತವೆ.
ಜಹೀರ್ ಖಾನ್ ಗಾಯಗೊಂಡಿರುವುದು ಭಾರತದ ಬೌಲಿಂಗ್ ವೈಫಲ್ಯಕ್ಕೆ ಕಾರಣ ಎಂದು ದೂರಲಾಗುತ್ತದೆ. ಆದರೆ, ಜಹೀರ್ ಗಾಯಕ್ಕೂ, ಉಳಿದ ವೇಗಿಗಳ ಕಳಪೆ ಫಾರ್ಮ್‌ಗೂ ಏನು ಸಂಬಂಧ. ಒಂದೆರಡು ವರ್ಷ ಹಿಂದೆ ಜಹೀರ್ ಕಳಪೆ ಫಾರ್ಮ್ ಹಾಗೂ ಗಾಯದ ಕಾರಣ ಒಂದು ವರ್ಷ ತಂಡದಿಂದ ಹೊರಗಿದ್ದರು. ಆಗ, ತಂಡ ಅವರ ಕೊರತೆಯನ್ನೇ ಅನುಭವಿಸಿರಲಿಲ್ಲ. ಒಂದು ವರ್ಷದ ಹಿಂದೆ ವೇಗದ ಬೌಲರ್‌ಗಳ ಅತಿವೃಷ್ಟಿಯಿತ್ತು. ಆಡುವ ಬಳಗದಲ್ಲಿ ಸ್ಥಾನಕ್ಕಾಗಿ ಜಹೀರ್, ಇಶಾಂತ್, ಮುನಾಫ್, ಆರ್‌ಪಿ, ಶ್ರೀಶಾಂತ್ ಇತ್ಯಾದಿಗಳ ನಡುವೆ ಪೈಪೋಟಿಯಿತ್ತು. ಆದರೀಗ, ಜಹೀರ್ ಇಲ್ಲ. ಇಶಾಂತ್, ಆರ್‌ಪಿ, ನೆಹ್ರಾ ಫಾರ್ಮ್‌ನಲ್ಲಿಲ್ಲ. ಶ್ರೀಶಾಂತ್‌ರನ್ನು ಮೂಲೆಗುಂಪು ಮಾಡಲಾಗಿದೆ. ಮುನಾಫ್ ಯಾವಾಗ ಫಿಟ್ ಆಗಿರುತ್ತಾರೆ, ಯಾವಾಗ ಗಾಯಗೊಳ್ಳುತ್ತಾರೆ ಗೊತ್ತಾಗುವುದಿಲ್ಲ. ಉಳಿದ ಯಾರ ಹೆಸರೂ ನೆನಪಾಗುತ್ತಿಲ್ಲ. ಒಟ್ಟಾರೆ, ಚಾಂಪಿಯನ್ಸ್ ಟ್ರೋಫಿ ವೈಫಲ್ಯಕ್ಕೆ ಬೌಲರ್‌ಗಳೇ ಕಾರಣ ಎಂದು ನಾಯಕ ಧೋನಿ ಸಾರಾಸಗಟಾಗಿ ದೂಷಿಸಿದರು. ವೇಗದ ಬೌಲರ್‌ಗಳಿಗೆ ಆತ್ಮವಿಶ್ವಾಸವಿಲ್ಲ ಎಂದು ಹೇಳಿಕೆ ನೀಡಿದರು.
ಯಾವುದೇ ಟೂರ್ನಿಗೆ ಮುನ್ನ ಸಕಾರಾತ್ಮಕ ಮನೋಭಾವದಿಂದ ತೆರಳುವುದು ಕೂಡ ಅವಶ್ಯಕ. ಆದರೆ, ಆಫ್ರಿಕಾಕ್ಕೆ ಕಾಲಿಡುತ್ತಿದ್ದಂತೆಯೇ, ಮೈಥುನ ಶಾಸನದ ಪ್ರಹಸನ ತಂಡದ ಕೊರಳು ಸುತ್ತಿಕೊಂಡಿತು. ಆಟಗಾರರು ವಿದೇಶಿ ಪ್ರವಾಸಗಳಿಗೆ ತೆರಳುವಾಗ `ಸುಖ' ಅರಸಿ ನೈಟ್‌ಕ್ಲಬ್‌ಗಳಲ್ಲಿ, ಅಲ್ಲಿ-ಇಲ್ಲಿ ತಡಕಾಡುವುದು ಮಾಮೂಲು. ದಕ್ಷಿಣ ಆಫ್ರಿಕಾದಲ್ಲೇ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಸಂದರ್ಭದಲ್ಲೂ ಯಾವ ಯಾವ ಆಟಗಾರರು ಎಷ್ಟು ಸಾಹಸ ಮಾಡಿದರು ಎಂಬ ಬಗ್ಗೆ ಅಲ್ಲಲ್ಲಿ ವರದಿಗಳಾಗಿದ್ದವು. ಇದನ್ನೆಲ್ಲಾ ಓದಿ ಗಾಬರಿಯಾದ ದೆಹಲಿ ಮೂಲದ ವೇಗದ ಬೌಲರ್ ಒಬ್ಬರ ತಾಯಿ ಫೋನ್ ಮಾಡಿದಾಗ, ಗಂಗಾ ಜಲದಷ್ಟೇ ಪವಿತ್ರವಾಗಿ ಮನೆಗೆ ಮರಳುತ್ತೇನೆ ಎಂದು ಆಣೆ ಮಾಡಿದ್ದು ಸುದ್ದಿಯಾಗಿತ್ತು.
ಆದರೆ, ನೂರಕ್ಕೆ 99 ಬಾರಿ ಆಟಗಾರರ ಇಂಥ `ಸಾಹಸ'ಗಳು ಸುದ್ದಿಯಾಗುವುದೇ ಇಲ್ಲ. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಮಾತ್ರ ತಂಡದ ಪುನಶ್ಚೇತನ ತಜ್ಞ ಪ್ಯಾಡಿ ಅಪ್ಟನ್, ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಆಟಗಾರರ ಪೌರುಷ ಹೆಚ್ಚುತ್ತದೆ ಎಂದು ಸಲಹೆ ನೀಡುವ ಮೂಲಕ ಆಟಗಾರರ `ಅನೈತಿಕ ಚಟುವಟಿಕೆ'ಗಳಿಗೆ ಲೈಸೆನ್ಸ್ ನೀಡಿದಂತಾಗಿತ್ತು. ಕೊನೆಗೂ ಕೋಚ್ ಆಟಗಾರರಿಗೆ ಅಂಥ ಯಾವ ಸಲಹೆಯನ್ನೂ ನೀಡಲಾಗಿಲ್ಲ ಎಂದು ಸ್ಪಷ್ಟೀಕರಣ ನೀಡುವುದರೊಂದಿಗೆ ಪ್ರಕರಣ ಮುಚ್ಚಿಹೋಯಿತು.
ಚಾಂಪಿಯನ್ಸ್ ಟ್ರೋಫಿ ವೈಫಲ್ಯಕ್ಕೆ ಬೌಲರ್‌ಗಳ ವೈಫಲ್ಯವೇ ಕಾರಣ ಎಂದು ಧೋನಿ ಹೇಳುವುದಾದರೆ, ಒಪ್ಪಿಕೊಳ್ಳೋಣ. ಆದರೆ, ಬ್ಯಾಟ್ಸ್‌ಮನ್‌ಗಳು ಮತ್ತು ಫೀಲ್ಡರ್‌ಗಳು ಪರದಾಡಿದ್ದೇಕೆ? ಹಲವು ಕ್ಯಾಚ್‌ಗಳು ಮಣ್ಣುಗೂಡಿದವು. ರನೌಟ್ ಅವಕಾಶಗಳು ವ್ಯರ್ಥಗೊಂಡವು. ವಿಕೆಟ್ ನಡುವಿನ ಓಟ ಕಳಪೆಯಾಗಿತ್ತು. ರಾಹುಲ್ ದ್ರಾವಿಡ್ ಒಮ್ಮೆ ಗೌತಂ ಗಂಭೀರ್ ರನೌಟ್‌ಗೆ ಕಾರಣರಾದರೆ, ಇನ್ನೊಮ್ಮೆ ಸ್ವತಃ ರನೌಟ್ ಆದರು. ಬ್ಯಾಟಿಂಗ್‌ನಲ್ಲೂ ಅಷ್ಟೇ. ಪಾಕಿಸ್ತಾನದ 302 ರನ್‌ಗಳನ್ನು ಬೆನ್ನಟ್ಟುವಾಗ 248 ರನ್‌ಗೆ ಭಾರತೀಯರು ಸುಸ್ತಾದರು. ವೆಸ್ಟ್ ಇಂಡೀಸ್ ವಿರುದ್ಧ 132 ರನ್ ಗಳಿಸುವುದಕ್ಕೆ 32 ಓವರ್‌ಗಳು ಬೇಕಾದವು. ವಿವಿಧ ಸಂದರ್ಭಗಳಲ್ಲಿ ಧೋನಿಯ ನಾಯಕತ್ವವೂ ಟೀಕೆಗೊಳಗಾಯಿತು. ಒಟ್ಟಿನಲ್ಲಿ ಮರೆಯಬಹುದಾದಂಥ ಟೂರ್ನಿ.
ಹಾಗೆಂದು, ಸೋತಿದ್ದಕ್ಕೆ ಸಂಪೂರ್ಣವಾಗಿ ಭಾರತೀಯರನ್ನು ದೂಷಿಸುವುದೂ ನ್ಯಾಯವಲ್ಲ. ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಮಳೆಯಿಂದ ರದ್ದಾಗಿದ್ದು, ಭಾರತಕ್ಕೆ ಶಾಪವಾಯಿತು.
ಜೊತೆಗೆ ಟೂರ್ನಿಯ ಮಾದರಿಯೂ ಅಷ್ಟೇ ಸಂಕೀರ್ಣವಾಗಿತ್ತು. ಒಂದು ಪಂದ್ಯ ಸೋತವರಿಗೆ ಟೂರ್ನಿಯಲ್ಲಿ ಪುನರಾಗಮನದ ಅವಕಾಶವೇ ಇರಲಿಲ್ಲ. ಇದರ ಬಿಸಿ ತಟ್ಟಿದ್ದು ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳಿಗೆ.
ಟೂರ್ನಿಯ ಮಾದರಿ ಸಹ ಪ್ರಶ್ನಾರ್ಹವಾಗಿತ್ತು. ಕಡಿಮೆ ಅವಧಿಯಲ್ಲಿ ಮುಗಿಸಬೇಕೆಂಬ ಕಾರಣಕ್ಕೆ ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಿದ್ದು ಸರಿಯಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇ ರುವ ತಂಡ ಕಣದಲ್ಲಿರುವ ಎಲ್ಲಾ ತಂಡಗಳನ್ನು ಸೋಲಿ ಸುವುದು ನ್ಯಾಯ. ಆದರೆ, ಫೈನಲ್ ತಲುಪಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎಲ್ಲಾ ತಂಡಗಳ ವಿರುದ್ಧ ಆಡಿಯೇ ಇಲ್ಲ. ಆಸೀಸ್ ತಂಡ ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಇಂಗ್ಲೆಂಡ್ (ಉಪಾಂತ್ಯ) ವಿರುದ್ಧ ಗೆದ್ದರೆ, ಭಾರತದ ವಿರುದ್ಧ ಪಂದ್ಯ ಮಳೆಯಿಂದ ರದ್ದಾಯಿತು. ದಕ್ಷಿಣ ಆಫ್ರಿಕಾ, ಶ್ರೀಲಂಕಾ ವಿರುದ್ಧ ಆಡುವ ಅವಕಾಶ ತಂಡಕ್ಕೆ ದೊರೆಯಲೇ ಇಲ್ಲ.
ಇತ್ತ ನ್ಯೂಜಿಲೆಂಡ್ ತಂಡ ಲೀಗ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋತರೆ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದು, ಉಪಾಂತ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡುವ ಅವಕಾಶ ಕಿವೀಸ್‌ಗೆ ದೊರೆಯಲಿಲ್ಲ. ಒಂದೆರಡು ದಿನ ವಿಳಂಬವಾದರೂ. ಎಲ್ಲಾ 8 ತಂಡಗಳು ಪರಸ್ಪರ ಮುಖಾಮುಖಿಯಾಗುವಂಥ ಮಾದರಿ ರೂಪಿಸಿದ್ದರೆ, ಟೂರ್ನಿ ಹೆಚ್ಚು ಸಮಗ್ರವಾಗುತ್ತಿತ್ತು. ಏಕೆಂದರೆ, ಎಲ್ಲರನ್ನೂ ಸೋಲಿಸುವವನು ನಿಜವಾದ ಚಾಂಪಿಯನ್, ಕೆಲವರ ವಿರುದ್ಧ ಮಾತ್ರ ಗೆಲ್ಲುವವನಲ್ಲ.
No comments:
Post a Comment