Wednesday, September 30, 2009

ರಾಗ ಲಹರಿ


ದೇವರು ವರ ಕೊಡಲಿಲ್ಲ!
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಎಂದೇ ತಮ್ಮನ್ನು ಬಿಂಬಿಸಿಕೊಳ್ಳುವ ಡೀಗೋ ಮರಡೋನಾ ತರಬೇತುದಾರನಾಗಿ ಅರ್ಜೆಂಟೀನಾಕ್ಕೆ ವಿಶ್ವಕಪ್‌ ಅರ್ಹತೆ ಕೊಡಿಸಲಾಗದೆ ಸಂಕಟ ಪಡುತ್ತಿದ್ದಾರೆ


ಕ್ರಿಕೆಟ್‌ ಹಾಗೂ ಹಾಕಿ ವಿಶ್ವಕಪ್‌ನಲ್ಲಿ ಕೇವಲ 12 ತಂಡಗಳು ಮಾತ್ರ ಪಾಲ್ಗೊಳ್ಳುತ್ತವೆ. ಇದಕ್ಕೆ ಹೋಲಿಸಿದರೆ ಫುಟ್‌ಬಾಲ್‌ ವಿಶ್ವಕಪ್‌ನ ಮಹಾಸಮರದಲ್ಲಿ 32 ತಂಡಗಳು ಕಣದಲ್ಲಿರುತ್ತವೆ.
ಆದರೆ, ಕ್ರೀಡೆ ಅದೆಂಥಾ ಅನಿಶ್ಚಿತವೆಂದರೆ, ಕೆಲವೊಮ್ಮೆ ವಿಶ್ವದ ಖ್ಯಾತನಾಮ ತಂಡಗಳು ಈ 32 ರಾಷ್ಟ್ರಗಳ ಪೈಕಿ ಒಂದೆನಿಸಲು ವಿಫಲವಾಗು ತ್ತವೆ. ತನ್ಮೂಲಕ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್‌ ಅರ್ಹತೆಯಿಂದ ವಂಚಿತವಾಗುತ್ತವೆ.
2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿ ರುವ ಫುಟ್‌ಬಾಲ್‌ ವಿಶ್ವಕಪ್‌ಗೆ ಅರ್ಹತಾ ಟೂರ್ನಿಗಳು ವಿಶ್ವದೆಲ್ಲೆಡೆ ಬಿರುಸಿನಿಂದ ಸಾಗಿವೆ. ಆದರೆ, ಕೆಲವು ಅಗ್ರಗಣ್ಯ ರಾಷ್ಟ್ರಗಳು ದಕ್ಷಿಣ ಆಫ್ರಿಕಾಕ್ಕೆ ತೆರಳಿ ಫುಟ್‌ಬಾಲ್‌ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಬದಲು, ಟಿವಿಯಲ್ಲಿ ನೋಡುವ ದುಸ್ಥಿತಿಗೆ ಸಿಲುಕುವ ಅಪಾಯದಲ್ಲಿವೆ. ಮಾಜಿ ವಿಶ್ವ ಚಾಂಪಿಯನ್‌ ಅರ್ಜೆಂಟೀನಾ, ಫ್ರಾನ್ಸ್‌ ಮತ್ತು ಪೋರ್ಚುಗಲ್‌ ಆ ತಂಡಗಳು.
ಜರ್ಮನಿಯಲ್ಲಿ ನಡೆದ ಕಳೆದ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಕ್ವಾರ್ಟರ್‌ ಫೈನಲ್‌ ಹಂತದಿಂದ ನಿರ್ಗಮಿಸಿತ್ತು. ಆದರೆ, ಈ ಬಾರಿ 1970ರ ನಂತರ ಮೊದಲ ಬಾರಿ ವಿಶ್ವಕಪ್‌ ಅರ್ಹತೆ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ದಕ್ಷಿಣ ಅಮೆರಿಕ ರಾಷ್ಟ್ರಗಳ ಅರ್ಹತಾ ಟೂರ್ನಿಯಲ್ಲಿ ಕೊನೆಯ 2 ಪಂದ್ಯಗಳು ಮಾತ್ರ ಬಾಕಿ ಇರುವಂತೆಯೇ, ಅರ್ಜೆಂಟೀನಾ 5ನೇ ಸ್ಥಾನದಲ್ಲಿದೆ. ಅರ್ಹತಾ ಟೂರ್ನಿಯ ಅಗ್ರ 4 ರಾಷ್ಟ್ರಗಳು ಮಾತ್ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದುಕೊಳ್ಳುತ್ತವೆ. 5ನೇ ಸ್ಥಾನ ಪಡೆಯುವ ತಂಡ ಮತ್ತೊಂದು ಪ್ಲೇಆಫ್‌ ಪಂದ್ಯ ಆಡಬೇಕಾ ಗುತ್ತದೆ. 6 ಅಥವಾ ಕೆಳಗಿನ ಸ್ಥಾನ ಪಡೆದರೆ ಮನೆಯಲ್ಲಿರಬೇಕು.
ಮರಡೋನಾ ಮ್ಯಾಜಿಕ್‌ ನಡೆಯುತ್ತಿಲ್ಲ: ಅರ್ಜೆಂಟೀನಾ ತಂಡ ಇಂಥ ದುಸ್ಥಿತಿಯಲ್ಲಿ ದ್ದರೂ, ಯಾರೂ ಆಟಗಾರರನ್ನು ದೂಷಿಸುತ್ತಿಲ್ಲ. ಅಭಿಮಾನಿಗಳು ತಂಡಕ್ಕೆ ಶಾಪ ಹಾಕುತ್ತಿಲ್ಲ. ಬದಲಿಗೆ ಎಲ್ಲರ ಸಿಟ್ಟು ಕೇವಲ ಒಬ್ಬರ ಮೇಲೆ ತಿರುಗಿದೆ. ಅದು ಡೀಗೋ ಮರಡೋನಾ.
1986ರಲ್ಲಿ ಅರ್ಜೆಂಟೀನಾದ ವಿಶ್ವಕಪ್‌ ಗೆಲುವಿನ ರೂವಾರಿಯಾಗಿದ್ದ ಫುಟ್‌ಬಾಲ್‌ `ದೇವರು' ಮರಡೋನಾ ಕಳೆದ ವರ್ಷ ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಗೇರಿದಾಗ ಭಾರೀ ನಿರೀಕ್ಷೆಗಳಿದ್ದವು. 2006ರ ವಿಶ್ವಕಪ್‌ ನಂತರ ಅಧೋಗತಿ ಹಿಡಿದಿದ್ದ ತಂಡದ ಅದೃಷ್ಟ ಬದಲಾಯಿಸಲು ಡೀಗೋ ಶಕ್ತರು ಎಂಬ ಭಾವನೆ ಎಲ್ಲರಲ್ಲಿತ್ತು.
ಇವರಿಗೆ ಮುನ್ನ ಕೋಚ್‌ ಆಗಿದ್ದ ಅಲ್ಫಿಯೊ ಬ್ಯಾಸಿಲ್‌ ಅಡಿಯಲ್ಲಿ ಅರ್ಜೆಂಟೀನಾ ಅನು ಕೂಲಕರ ವೇಳಾಪಟ್ಟಿ ಹೊರತಾಗಿಯೂ 7 ಪಂದ್ಯಗಳಲ್ಲಿ 6ರಲ್ಲಿ ಸೋತಿತ್ತು. ಇದರಿಂದಾಗಿ ಅಲ್ಫಿಯೋ ರಾಜೀನಾಮೆ ನೀಡಿದ್ದರು. ತದ ನಂತರ ಅರ್ಜೆಂಟೀನಾದ ಸರ್ವಶ್ರೇಷ್ಠ ಆಟಗಾರ ಮರಡೋನಾ ಕೋಚ್‌ ಹುದ್ದೆಗೇರಿದ್ದರು.
ಆದರೆ, ಶ್ರೇಷ್ಠ ಆಟಗಾರರು ಶ್ರೇಷ್ಠ ಕೋಚ್‌ ಸಹ ಆಗಲೇಬೇಕೆಂದಿಲ್ಲ. ಕಪಿಲ್‌ ದೇವ್‌, ಗ್ರೆಗ್‌ ಚಾಪೆಲ್‌ ಮೊದಲಾದ ಶ್ರೇಷ್ಠ ಕ್ರಿಕೆಟ್‌ ಆಟಗಾರರು ಕೋಚ್‌ ಆಗಿ ವಿಫಲರಾದ ನಿದರ್ಶನಗಳಿವೆ. ಮರಡೋನಾ ಸಹ ತಮ್ಮ ಉದ್ದೇಶದಲ್ಲಿ ಸಫಲರಾಗಲಿಲ್ಲ.
ಮರಡೋನಾ ಕೋಚ್‌ ಹುದ್ದೆಗೇರಿದ ಮೇಲೆ ಅರ್ಜೆಂಟೀನಾ ಅರ್ಹತಾ ಟೂರ್ನಿಯಲ್ಲಿ 6ರಲ್ಲಿ 4 ಪಂದ್ಯ ಸೋತಿದೆ. ಅದರಲ್ಲಿ ಬೊಲಿವಿಯ ವಿರುದ್ಧ 1-6 ಮುಖಭಂಗ, ಬ್ರೆಜಿಲ್‌ ವಿರುದ್ಧದ ಹೀನಾಯ ಸೋಲು ಹಾಗೂ ಪರಗ್ವೆ ವಿರುದ್ಧದ ಏಕೈಕ ಗೋಲಿನ ಸೋಲು ತಂಡದ ವಿಶ್ವಕಪ್‌ ಮಹತ್ವಾಕಾಂಕ್ಷೆಯ ಮೇಲೆ ತಣ್ಣೀರೆರಚಿದೆ. ಅಕ್ಟೋಬರ್‌ 10ರಂದು ತಂಡ ಪೆರು ವಿರುದ್ಧ ಹಾಗೂ ಆನಂತರ ಉರುಗ್ವೆ ವಿರುದ್ಧ ಆಡಲಿದೆ. ಈ ತಂಡಗಳ ವಿರುದ್ಧ ಗೆದ್ದರೂ, ವಿಶ್ವಕಪ್‌ಗೆ ಗುಂಪಿನ ಅಗ್ರ-4 ತಂಡಗಳಲ್ಲೊಂದಾಗಿ ಅರ್ಹತೆ ಪಡೆಯಲು ಪವಾಡವೇ ನಡೆಯಬೇಕು. ಒಂದು ವೇಳೆ 5ನೇ ಸ್ಥಾನ ಪಡೆದರೆ, ಕೇಂದ್ರ ಅಮೆರಿಕ ಮತ್ತು ಕೆರಿಬಿಯನ್‌ ರಾಷ್ಟ್ರಗಳ ಅರ್ಹತಾ ಟೂರ್ನಿಯಲ್ಲಿ 5ನೇ ಸ್ಥಾನ ಪಡೆಯುವ ಕೋಸ್ಟರಿಕ ಅಥವಾ ಹೋಂಡುರಾಸ್‌ ವಿರುದ್ಧ ಗೆದ್ದು ವಿಶ್ವಕಪ್‌ಗೆ ಹಿಂಬಾಗಿಲಿನಿಂದ ಪ್ರವೇಶಿಸಬೇಕಾಗುತ್ತದೆ.
ಕ್ರೀಡಾಕ್ಷೇತ್ರದಲ್ಲಿ ನೆನಪುಗಳು ಬಹಳ ಕ್ಷಣಿಕ. ಒಂದು ಯಶಸ್ಸು ಹತ್ತು ವೈಫಲ್ಯಗಳನ್ನು ಮರೆಸು ತ್ತದೆ. ಒಂದು ಹೀನಾಯ ಸೋಲು, ಅದಕ್ಕೆ ಮುಂಚಿನ ಎಲ್ಲಾ ಸಾಧನೆಗಳನ್ನು ಮಸುಕಾಗಿಸು ತ್ತದೆ. ಮರಡೋನಾ ಮೇಲಿನ ಪ್ರೀತಿ ಅವರ ಎಲ್ಲಾ ಮೈದಾನದಾಚೆಗಿನ ಕಳಂಕಗಳನ್ನು ಕ್ಷಮಿಸುವಂತೆ ಮಾಡುತ್ತದೆ. ಆದರೆ, ತರಬೇತುದಾರರಾಗಿ ವೈಫಲ್ಯ ಅವರ ಮೇಲೆ ಸಿಟ್ಟುಗೊಳ್ಳುವಂತೆ ಮಾಡಿದೆ.
ಮರಡೋನಾ ಪೆರು ವಿರುದ್ಧದ ಪಂದ್ಯದಿಂದ 7 ಆಟಗಾರರನ್ನು ಕೈಬಿಟ್ಟಿದ್ದಾರೆ. ಕೆಲವು ಹೊಸಬರಿಗೆ ಅವಕಾಶ ನೀಡಿದ್ದಾರೆ.
ಹಾಗೆ ನೋಡಿದರೆ, ಅರ್ಜೆಂಟೀನಾ ತಂಡ ದಲ್ಲಿ ಪ್ರತಿಭಾವಂತರು ಇಲ್ಲವೆಂದಿಲ್ಲ. ಹಾಲಿ ಋತುವಿನಲ್ಲಿ ಯುರೋಪಿನ ಮತ್ತು ವಿಶ್ವ ಶ್ರೇಷ್ಠ ಆಟಗಾರ ಲಿಯೊನೆಲ್‌ ಮೆಸ್ಸಿ ಆ ತಂಡದ ಪ್ರಮುಖ ಆಟಗಾರ.
ಮರಡೋನಾರ ದಿಗ್ಗಜ ವ್ಯಕ್ತಿತ್ವ ಆಟಗಾರರಲ್ಲಿ ಸರ್ವಾಧಿಕಾರಿಯೆಂಬ ಭಾವನೆ ಮೂಡಿಸದೆ, ಸ್ಫೂರ್ತಿ ಉಕ್ಕಿಸುವಂತಾದರೆ, ತಂಡದ ಅದೃಷ್ಟ ಬದಲಾಗಲು ಸಾಧ್ಯ.

No comments:

Post a Comment