Monday, November 16, 2009

ಹೋಗಿ ಬರುತ್ತೇವೆ



ಟೆನಿಸ್‌ನಿಂದ ದೂರ ಸರಿದ ಮುಂಗೋಪಿ ಸಫಿನ್‌, ಮಾಂತ್ರಿಕ ಸ್ಯಾಂಟೊರೊ

`ಸ್ಯಾಂಟೊರೊ ನಿನ್ನ ಎದುರಾಳಿ ಎಂದು ಹೇಳುವುದೂ ಒಂದೇ, ನೀನು ಸದ್ಯದಲ್ಲೇ ಸಾಯುತ್ತಿ ಎನ್ನುವುದೂ ಒಂದೇ' ಎಂದು ಹಿಂದೊಮ್ಮೆ ಮರಾಟ್‌ ಸಫಿನ್‌ ಹೇಳಿದ್ದರು.
ಫ್ರಾನ್ಸ್‌ನ ಫ್ಯಾಬ್ರೈಸ್‌ ಸ್ಯಾಂಟೊರೊ ಮತ್ತು ರಷ್ಯಾದ ಸಫಿನ್‌ ಇಬ್ಬರೂ ಕಳೆದ ವಾರ ಒಟ್ಟೊಟ್ಟಿಗೆ, ಒಂದೇ ಟೂರ್ನಿಯ ಸಂದರ್ಭದಲ್ಲಿ, ಆದರೆ, ಒಂದು ದಿನದ ಅಂತರದಲ್ಲಿ ಟೆನಿಸ್‌ನಿಂದ ದೂರ ಸರಿದರು. ಅವರಿಬ್ಬರು ಸಾಧನೆಯಿಂದ ಮಹಾನ್‌ ಪಟ್ಟಕ್ಕೇನೂ ಏರಿದವರಲ್ಲ. ಆದರೆ, ಟೆನಿಸ್‌ಗೆ ಅಂಥ ಆಟಗಾರರು ಅಗತ್ಯ ಎಂದು ಎಲ್ಲರೂ ಒಪ್ಪುತ್ತಾರೆ. ಸಮಕಾಲೀನ ಆಟಗಾರರು, ಅಭಿಮಾನಿಗಳು ವಿವಿಧ ಕಾರಣಗಳಿಗಾಗಿ ಅವರನ್ನು ನೆನಪಿಸಿಕೊಳ್ಳುತ್ತಾರೆ.
ಮರಾಟ್‌ ಸಫಿನ್‌ ಅಪಾರ ಪ್ರತಿಭಾವಂತ. ಈತ ಮೆಕೆನ್ರೋ ಆಗಬಹುದು ಎಂದು ಭವಿಷ್ಯ ನುಡಿದವರಿದ್ದರು. ಅದಕ್ಕೆ ಕಾರಣವೂ ಇತ್ತು. ತಕ್ಕಡಿಗೆ ಹಾಕಿ ತೂಗಿದರೆ, ಅವರ ಸಾಮರ್ಥ್ಯಕ್ಕಿಂತ ಮುಂಗೋಪದ ತೂಕವೇ ತುಸು ಜಾಸ್ತಿ. ಆದರೆ, ಅಷ್ಟೇ ಹಾಸ್ಯ ಪ್ರವೃತ್ತಿಯೂ ಇತ್ತು. ಮಾತಿನಲ್ಲೂ ಅಷ್ಟೇ. ಸಮಯಸ್ಫೂರ್ತಿ ಮತ್ತು ವಾಚಾಳಿತನ ಎರಡೂ ಇತ್ತು. ಹಾಗಾಗಿಯೇ ಅವರಿಗೆ ಅಭಿಮಾನಿಗಳು ಜಾಸ್ತಿ.
ಮಹಿಳಾ ಟೆನಿಸ್‌ನಲ್ಲಿ ಇತ್ತೀಚಿನವರೆಗೂ ವಿಶ್ವ ನಂ. 1 ಆಗಿದ್ದು, ಸದ್ಯ ನಂ.2 ಆಗಿರುವ ದಿನಾರ ಸಫಿನಾಳ ಅಣ್ಣ ಈ ಮರಾಟ್‌. ಯೋಧನ ಮೈಕಟ್ಟು, ಕೆಕ್ಕರಿಸಿ ನೋಡುವ ಕೆಂಗಣ್ಣು, ಕಿಡಿ ನುಡಿಗಳು, ಸಿಡಿಲ ಹೊಡೆತಗಳು, ಭಾರೀ ಸರ್ವ್‌ಗಳು, ಆಟಗಾರರು ಸಫಿನ್‌ ವಿರುದ್ಧ ಆಡಲು ಬೆದರುತ್ತಿದ್ದ ಕಾಲವೂ ಇತ್ತು. ವರ್ಷಗಳು ಕಳೆದಂತೆ, ಸಫಿನ್‌ ಸೋಲತೊಡಗಿದರು. ಆದರೆ, ಎದುರಾಳಿಗಳ ವಿರುದ್ಧವಲ್ಲ, ತಮ್ಮ ವಿರುದ್ಧವೇ! ಮನೋನಿಗ್ರಹವೆಂಬುದು ಗೊತ್ತಿದ್ದರೆ, ಸಫಿನ್‌, ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡುಲ್ಕರ್‌ರಂತೆ ಬಹು ಎತ್ತರಕ್ಕೆ ಬೆಳೆಯಬಹುದಿತ್ತು.
ವೃತ್ತಿಜೀವನದುದ್ದಕ್ಕೂ ಅವರನ್ನು ಕಾಡಿದ್ದು ಸ್ಥಿರತೆಯ ಕೊರತೆ. ಅವರ ಮನಸ್ಸು ಹಾಗೂ ಆಟ ಈಗಿದ್ದಂತೆ ಇನ್ನೊಂದು ಕ್ಷಣವಿರುತ್ತಿರಲಿಲ್ಲ. ಅದೇ ಕಾರಣಕ್ಕೆ, ಅವರಿಗೆ ಪದೇ ಪದೇ ತಮ್ಮ ಮೇಲೆಯೇ ಸಿಟ್ಟು ಬರುತ್ತಿತ್ತು. ಸುತ್ತ ಇರುವವರ ಮೇಲೂ ಕೆಂಡದಂಥ ಕೋಪ ಬರುತ್ತಿತ್ತು. ಕೂಡಲೇ ಅವರು ಅಂಪೈರ್‌ಗಳ ಮೇಲೆ ರೇಗುತ್ತಿದ್ದರು. ರ್ಯಾಕೆಟ್‌ಗಳನ್ನು ಕುಟ್ಟಿ ಪುಡಿ ಮಾಡುತ್ತಿದ್ದರು. ಅವರು ವೃತ್ತಿಜೀವನದಲ್ಲಿ ಆ ರೀತಿ ಕೋರ್ಟ್‌ನಲ್ಲಿ ಜಪ್ಪಿ ಮುರಿದು ಹಾಕಿರುವ ರ್ಯಾಕೆಟ್‌ಗಳ ಸಂಖ್ಯೆ 300ಕ್ಕೂ ಅಧಿಕ. 1999ರ ಒಂದೇ ಋತುವಿನಲ್ಲಿ ಅವರು 48 ರ್ಯಾಕೆಟ್‌ ತುಂಡು ಮಾಡಿದ್ದಾಗಿ ಒಂದೆಡೆ ಲೆಕ್ಕ ಹೇಳಿಕೊಂಡಿದ್ದಾರೆ.
ಹಾಗೆಂದು ಅವರು ಕೋರ್ಟ್‌ನಲ್ಲಿ ಕುಣಿದಾಡುತ್ತಿದ್ದ, ಪ್ರೇಕ್ಷಕರನ್ನೂ ಖುಷಿಪಡಿಸುತ್ತಿದ್ದ ಕ್ಷಣಗಳೂ ಇದ್ದವು. ಚೇಷ್ಟೆಗಳಿಗೆ ಹೆಸರಾಗಿದ್ದ ಅವರು ಒಮ್ಮೆಯಂತೂ ಅಮೋಘ ಡ್ರಾಪ್‌ ಶಾಟ್‌ ಹೊಡೆದ ಖುಷಿಗೆ ಚಡ್ಡಿ ಜಾರಿಸಿ (ಡ್ರಾಪ್‌ ಶಾರ್ಟ್ಸ್‌) ಸಂಭ್ರಮಿಸಿದ್ದರು. ಆನಂತರ ಅಸಭ್ಯ ವರ್ತನೆಗಾಗಿ ದಂಡ ಕಟ್ಟಿದ್ದು ಬೇರೆ ಕತೆ.
2000ದಲ್ಲಿ ಯುಎಸ್‌ ಓಪನ್‌ ಮತ್ತು 2005ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದುಕೊಂಡಿರುವ ಸಫಿನ್‌ 9 ವಾರ ಕಾಲ ವಿಶ್ವ ನಂ.1 ಆಗಿದ್ದರು. ರಷ್ಯಾಕ್ಕೆ 2 ಬಾರಿ (2002 ಮತ್ತು 2006) ಡೇವಿಸ್‌ ಕಪ್‌ ಗೆದ್ದುಕೊಟ್ಟರು. ವೃತ್ತಿಜೀವನದಲ್ಲಿ 15 ಟೂರ್ನಿಗಳನ್ನು ಗೆದ್ದಿರುವ ಅವರು ಆಸ್ಟ್ರೇಲಿಯನ್‌ ಓಪನ್‌ನಲ್ಲಿ 2 ಬಾರಿ ರನ್ನರ್‌ಅಪ್‌ (2002, 2004) ಆಗಿದ್ದಾರೆ. 2005ರ ಪ್ರಶಸ್ತಿ ಹಾದಿಯಲ್ಲಿ ವಿಶ್ವ ನಂ.1 ರೋಜರ್‌ ಫೆಡರರ್‌ ವಿರುದ್ಧ ಸಫಿನ್‌ ಐತಿಹಾಸಿಕ ಗೆಲುವು ಸಾಧಿಸಿದ್ದರು. ಐದು ಸೆಟ್‌ಗಳ ಆ ಪಂದ್ಯ ಆಸ್ಟ್ರೇಲಿಯನ್‌ ಓಪನ್‌ ಇತಿಹಾಸದಲ್ಲೇ ಸರ್ವಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿದೆ.
2002ರಲ್ಲಿ ಫ್ರೆಂಚ್‌ ಓಪನ್‌ ಸೆಮಿಫೈನಲ್‌ ತಲುಪಿದ್ದ ಸಫಿನ್‌ಗೆ ಹುಲ್ಲಿನ ಅಂಗಣವೆಂದರೆ, ಅಷ್ಟಕ್ಕಷ್ಟೇ. ವಿಂಬಲ್ಡನ್‌ನಲ್ಲಿ ಅವರ ವೈಫಲ್ಯವೇ ಅದಕ್ಕೆ ಕಾರಣ. ಅಲ್ಲಿನ ಹುಲ್ಲಿನ ಅಂಗಣ ಟೆನಿಸ್‌ ಆಡುವುದಕ್ಕಿಂಥ ದನ ಮೇಯಿಸುವುದಕ್ಕೆ ಲಾಯಕ್ಕು ಎಂದು ಅವರು ಲೇವಡಿ ಮಾಡಿದ್ದರು. ಆದರೂ, 2008ರಲ್ಲಿ ಈ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು ಅವರ ಸಾಧನೆ.
ವೃತ್ತಿಜೀವನದ ಹಾದಿಯಲ್ಲಿ ಸಫಿನ್‌ ವೈಫಲ್ಯಗಳಿಗೆ ಅವರ ಚಿತ್ತಚಾಂಚಲ್ಯದ ಜೊತೆಗೆ ಗಾಯಗಳೂ ಕಾರಣವಾದವು. ಆಗಾಗ ಕಿತ್ತಾಟ - ಹೊಡೆದಾಟಗಳೂ ಅವರ ಜೀವನದ ಭಾಗವಾಗಿದ್ದವು. 2008ರಲ್ಲಿ ಹಾಪ್‌ಮನ್‌ ಕಪ್‌ ಆಡಲು ಆಸ್ಟ್ರೇಲಿಯಾಕ್ಕೆ ಆಗಮಿಸಿದಾಗ ಅವರ ಮುಖ, ಮೂಗು ಊದಿಕೊಂಡು ಕೆಂಪಗಾಗಿದ್ದವು. ಹೊಸ ವರ್ಷದ ಪಾರ್ಟಿಯಲ್ಲಿ ಯಾರೊಂದಿಗೋ ಕಿತ್ತಾಟವಾಡಿದ್ದ ಸಫಿನ್‌ ಪೆಟ್ಟು ತಿಂದು ಬಂದಿದ್ದರು.
ಸ್ಥಿರವಾಗಿ ಪಂದ್ಯಗಳನ್ನು ಗೆಲ್ಲುವುದು ಅವರಿಗೆ ಗೊತ್ತಿರಲಿಲ್ಲ. ಸಾಂಪ್ರಾಸ್‌, ಅಗಾಸ್ಸಿ, ಇವಾನಿಸೆವಿಚ್‌ರಂಥ ದೊಡ್ಡ ಆಟಗಾರನನ್ನು ಸೋಲಿಸುತ್ತಿದ್ದ ಸಫಿನ್‌ ಮಾರನೇ ಪಂದ್ಯದಲ್ಲಿ ಅನಾಮಧೇಯ ಆಟಗಾರರಿಗೆ ಶರಣಾಗಿಬಿಡುತ್ತಿದ್ದರು. ಮನಸ್ಸಿನ ಕೈಗೆ ಬುದ್ಧಿ ಕೊಟ್ಟು ಹೈರಾಣಾಗುತ್ತಿದ್ದ ಸಫಿನ್‌ ಒಂದು ಸಂದರ್ಭದಲ್ಲಿ ಮನಃಶಾಂತಿ ಹುಡುಕಿಕೊಂಡು ಹಿಮಾಲಯ ಚಾರಣವನ್ನೂ ಮಾಡಿ ಬಂದಿದ್ದರು.
ಬಹುತೇಕ ಟೆನಿಸ್‌ ಆಟಗಾರರಂತೆ ಹುಡುಗಿಯರು ಮತ್ತು ವೇಗದ ಕಾರುಗಳೆಂದರೆ ಸಫಿನ್‌ಗೂ ಇಷ್ಟ. ಅವರ ಪ್ರೇಯಸಿಯರಲ್ಲಿ ಬಹುತೇಕರು ರಷ್ಯಾದವರೇ ಎಂಬುದು ವಿಶೇಷ. 2005ರಲ್ಲಿ ಅವರು 2ನೇ ಗ್ರಾಂಡ್‌ಸ್ಲಾಂ ಗೆದ್ದಾಗ ಡಾಶಾ ಜುಕೋವ ಎಂಬಾಕೆ ಪ್ರ್ರ್ರೇಯಸಿಯ ಪಟ್ಟ(!)ದಲ್ಲಿದ್ದರು. ಕಳೆದ ಒಂದು ವರ್ಷದಿಂದ ರಷ್ಯಾದ ಗಾಯಕಿ ನಾಸ್ಟ್ಯಾ ಒಸಿಪೋವ ಅವರ ಪ್ರ್ರೇಯಸಿಯಾಗಿದ್ದರಾದರೂ, ಮೊನ್ನೆ ಆಗಸ್ಟ್‌ನಲ್ಲಿ ಸಂಬಂಧ ಕಡಿದುಕೊಂಡರು. ಭಾರತದ ಸಾನಿಯಾ ಮಿರ್ಜಾ ಸಹ ಸಫಿನ್‌ ಸ್ನೇಹಕ್ಕಾಗಿ ಹಾತೊರೆದಿದ್ದರು ಎಂಬ ವದಂತಿಯೊಂದಿದೆ. ಸಾನಿಯಾಗೆ ಸಫಿನ್‌ ಸ್ನೇಹ ದಕ್ಕದಿದ್ದರೂ, ಅವರ ಸೋದರಿ ಸಫಿನಾ ಆತ್ಮೀಯ ಗೆಳತಿ ಎನ್ನುವುದು ಸತ್ಯ.
ಸಫಿನ್‌ ಜನಿಸಿದ್ದು ಮಾಸ್ಕೋದಲ್ಲಿ. 1980ರಲ್ಲಿ. ಅವರ ತಂದೆ ಮಿಖೈಲ್‌ ಅಲೆಕ್ಸೀವಿಚ್‌ ರಷ್ಯಾದಲ್ಲಿ ಟೆನಿಸ್‌ ಅಕಾಡೆಮಿ ನಡೆಸುತ್ತಿದ್ದರು. ಅನ್ನಾ ಕೋರ್ನಿಕೋವಾ, ಎಲೆನಾ ಡೆಮೆಂಟೀವಾ, ಅನಸ್ತೇಸಿಯಾ ಮಿಸ್ಕಿನಾ ಮೊದಲಾದವರು ಅದೇ ಅಕಾಡೆಮಿಯ ಪ್ರತಿಭೆಗಳು. ಸಫಿನ್‌ 14ನೇ ವಯಸ್ಸಿನಲ್ಲಿ ಸ್ಪೇನ್‌ನ ವ್ಯಾಲೆನ್ಸಿಯಾಕ್ಕೆ ತೆರಳಿ ಮಣ್ಣಿನ ಅಂಗಣದಲ್ಲಿ ಕಲಿಕೆ ಆರಂಭಿಸಿದ್ದರು.
2009ರ ಆರಂಭದಲ್ಲೇ ಇದೇ ತಮ್ಮ ಕೊನೆಯ ಋತು ಎಂದು ಘೋಷಿಸಿದ್ದ ಸಫಿನ್‌, ಆಸ್ಟ್ರೇಲಿಯನ್‌ನಲ್ಲಿ 3ನೇ ಸುತ್ತು, ಫ್ರೆಂಚ್‌ ಓಪನ್‌ನಲ್ಲಿ 2ನೇ ಸುತ್ತು, ವಿಂಬಲ್ಡನ್‌ ಮತ್ತು ಯುಎಸ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದರು. ಕಳೆದ ವಾರ ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯ 2ನೇ ಸುತ್ತಿನಲ್ಲಿ ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ಪೊಟ್ರೊ ವಿರುದ್ಧ ವೃತ್ತಿಜೀವನದ ಅಂತಿಮ ಪಂದ್ಯ ಆಡಿದರು. ಆ ಪಂದ್ಯದಲ್ಲೂ ಅವರು 4-6, 7-5, 4-6ರಿಂದ ತೀವ್ರ ಪೈಪೋಟಿಯ ಬಳಿಕವೇ ಸೋತರು. 29ನೇ ವಯಸ್ಸಿನಲ್ಲೇ ಅವರಿಗೆ ಟೆನಿಸ್‌ ಸಾಕೆನಿಸಿದ್ದು ವಿಶೇಷ.
ಸ್ಯಾಂಟೊರೊ ಮಾಂತ್ರಿಕ
ಫ್ಯಾಬ್ರೈಸ್‌ ಸ್ಯಾಂಟೊರೊ ಪುರುಷರ ಡಬಲ್ಸ್‌ನಲ್ಲಿ 2 ಗ್ರಾಂಡ್‌ಸ್ಲಾಂ, ಮಿಶ್ರ ಡಬಲ್ಸ್‌ ನಲ್ಲಿ ಒಂದು ಗ್ರಾಂಡ್‌ಸ್ಲಾಂ ಜಯಿಸಿದ್ದಾರೆ. ಸಿಂಗಲ್ಸ್‌ ಟೆನಿಸ್‌ನಲ್ಲಿ 2006ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ಫೈನಲ್‌ ತಲುಪಿದ್ದು ಅವರ ಶ್ರೇಷ್ಠ ಸಾಧನೆ. ಆದರೆ, ಅವರು 68 ಗ್ರಾಂಡ್‌ಸ್ಲಾಂಗಳಲ್ಲಿ ಆಡಿರುವುದು ವಿಶ್ವದಾಖಲೆ. ಡಬಲ್ಸ್‌ ತಜ್ಞ ಆಟಗಾರನೊಬ್ಬ ಸಿಂಗಲ್ಸ್‌ ವಿಭಾಗದಲ್ಲಿ ಇಷ್ಟೊಂದು ಗ್ರಾಂಡ್‌ಸ್ಲಾಂಗಳಲ್ಲಿ ಭಾಗವಹಿಸಿರುವುದು ವಿಶೇಷವೇ. ಇದಕ್ಕೆ ಮುನ್ನ ಈ ದಾಖಲೆ ಆಂಡ್ರೆ ಅಗಾಸ್ಸಿ (61) ಹೆಸರಲ್ಲಿತ್ತು.
ಸ್ಯಾಂಟೊರೊ ವಿಶ್ವದಲ್ಲಿ 17ನೇ ಶ್ರೇಯಾಂಕಕ್ಕೇರಿದ್ದು ದೊಡ್ಡ ಸಾಧನೆಯಾದರೆ, ವಿಶ್ವ ನಂ.1 ಶ್ರೇಯಾಂಕ ಹೊಂದಿದ್ದ 17 ಮಂದಿ ಆಟಗಾರರನ್ನು ವಿವಿಧ ಸಂದರ್ಭಗಳಲ್ಲಿ ಸೋಲಿಸಿರುವುದು ಇನ್ನೂ ದೊಡ್ಡ ಸಾಧನೆ. 2004ರ ಫ್ರೆಂಚ್‌ ಓಪನ್‌ ಮೊದಲ ಸುತ್ತಿನಲ್ಲಿ ಅವರು ಫ್ರಾನ್ಸ್‌ನವರೇ ಆದ ಆರ್ನಾಡ್‌ ಕ್ಲೆಮೆಂಟ್‌ ವಿರುದ್ಧ 6 ಗಂಟೆ 33 ನಿಮಿಷ ಹೋರಾಟ ನಡೆಸಿ 6-4, 6-3, 6-7, 3-6, 16-14ರಿಂದ ಗೆದ್ದಿದ್ದರು. ಇದು ಮುಕ್ತ ಟೆನಿಸ್‌ ಯುಗದಲ್ಲಿ ಅತ್ಯಂತ ಸುದೀರ್ಘ ಪಂದ್ಯ.
ಸೋಲು-ಗೆಲುವುಗಳಿಗಿಂತ ಹೆಚ್ಚಾಗಿ ಸ್ಯಾಂಟೊರೊ ವ್ಯಕ್ತಿತ್ವವನ್ನು ಅಭಿಮಾನಿಗಳು ಮತ್ತು ಸಹ ಆಟಗಾರರು ಮೆಚ್ಚಿಕೊಳ್ಳುತ್ತಿದ್ದರು. ಫ್ರಾನ್ಸ್‌ ಆಡಳಿತಕ್ಕೆ ಒಳಪಟ್ಟ ಪೆಸಿಫಿಕ್‌ ಸಾಗರದಲ್ಲಿರುವ ದ್ವೀಪಸ್ತೋಮ ತಹಿತಿಗೆ ಸೇರಿದವರಾದ ಸ್ಯಾಂಟೊರೊ ಕೋರ್ಟ್‌ನಲ್ಲಿ ಸದಾ ನಗಿಸುತ್ತಿದ್ದರು. ಅವರ ಚಾಣಾಕ್ಷ ಹೊಡೆತಗಳು ಜನಪ್ರಿಯವಾಗಿದ್ದವು. ಹೊಸ ಹೊಸ ಹೊಡೆತಗಳನ್ನು ಸಂಶೋಧಿಸುತ್ತಿದ್ದ ಅವರನ್ನು ಪೀಟ್‌ ಸಾಂಪ್ರಾಸ್‌ ಮಾಂತ್ರಿಕ ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಕೊನೆಗೂ 36ನೇ ವಯಸ್ಸಿನಲ್ಲಿ ಅವರು ಮೊನ್ನೆ ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿ ಮೊದಲ ಸುತ್ತಿನಲ್ಲಿ ಅಮೆರಿಕದ ಜೇಮ್ಸ್‌ ಬ್ಲೇಕ್‌ ವಿರುದ್ಧ ಸೋತು ಟೆನಿಸ್‌ನಿಂದ ದೂರ ಸರಿದರು.


ಸಫಿನ್‌ಗೆ ಮುಚ್ಚುಮರೆಯೆಂಬುದು ಗೊತ್ತಿಲ್ಲ. ಅನಿಸಿದ್ದನ್ನು ನೇರವಾಗಿ ಹೇಳುವ ಮನುಷ್ಯ. ಆಂಡ್ರೆ ಅಗಾಸ್ಸಿ 1997ರಲ್ಲಿ ಉದ್ದೀಪನ ಔಷಧಿ ಸೇವಿಸಿದ್ದೆ ಎಂದು ಆತ್ಮಕತೆಯಲ್ಲಿ ಹೇಳಿಕೊಂಡಿದ್ದಕ್ಕೆ ಸಫಿನ್‌ ಪ್ರತಿಕ್ರಿಯೆ ಹೀಗಿತ್ತು: `ಅಗಾಸ್ಸಿಗೆ ತಪ್ಪಿತಸ್ಥ ಭಾವ ಕಾಡುತ್ತಿದ್ದರೆ, ವೃತ್ತಿಜೀವನದಲ್ಲಿ ಗೆದ್ದಿರುವ ಎಲ್ಲಾ ಪ್ರಶಸ್ತಿಗಳು, ಗ್ರಾಂಡ್‌ಸ್ಲಾಂ ಟ್ರೋಫಿಗಳು ಹಾಗೂ ಹಣವನ್ನು ಎಟಿಪಿಗೆ ಹಿಂದಿರುಗಿಸಲಿ. ತಮ್ಮ ಪುಸ್ತಕ ಮಾರಾಟವಾಗಲಿ ಎಂಬ ಕಾರಣಕ್ಕೆ ಅಗಾಸ್ಸಿ ಹೀಗೆ ಮಾಡುತ್ತಿದ್ದಾರೆ. ಆದರೆ, ನಾನು ಆತ್ಮಕಥೆ ಬರೆಯುವುದಿಲ್ಲ. ನನಗೆ ಹಣದ ಅಗತ್ಯವಿಲ್ಲ. ನನ್ನ ಜೀವನದ ರಹಸ್ಯಗಳು ನನ್ನೊಂದಿಗೇ ಉಳಿಯಲಿವೆ'

No comments:

Post a Comment