Tuesday, September 22, 2009

ರಾಗಲಹರಿ


ಕೆಪಿಎಲ್‌ ದಿನಗಳು
ಕರ್ನಾಟಕ ಪ್ರೀಮಿಯರ್‌ ಲೀಗ್‌ ಅಂತಿಮ ಘಟ್ಟ ಪ್ರವೇಶಿಸಿದೆ. ಲೀಗ್‌ ಹಂತದ ಪಂದ್ಯಗಳು ಮುಗಿದಿದ್ದು ಮಂಗಳವಾರದ ಸೆಮಿಫೈನಲ್‌ ಮುಖಾಮುಖಿಗಳಿಗೆ ವೇದಿಕೆ ಸಿದ್ಧವಾಗಿದೆ.
ಮಂತ್ರಿ ಕೆಪಿಎಲ್‌ನಲ್ಲಿ ಕ್ರಿಕೆಟ್‌ ಗುಣಮಟ್ಟ ಹೇಗಿತ್ತು?
ನಿರೀಕ್ಷೆಗಳಿಗೆ ನಿರಾಸೆಯಾಗಲಿಲ್ಲ. ಒಂದು ದ್ವಿಶತಕ, ಹತ್ತಾರು 150 ಪ್ಲಸ್‌ ಮೊತ್ತಗಳು, ಒಂದು ವೈಯಕ್ತಿಕ ಶತಕ, 85-95ರ ಗಡಿಯಲ್ಲಿ ಹಲವಾರು ಗಳಿಕೆಗಳು, ದಂಡಿಯಾಗಿ ಸಿಕ್ಸರ್‌ಗಳು, ಬೌಂಡರಿಗಳು, ಚಿಯರ್‌ಲೀಡರ್ಸ್‌... ಇಪ್ಪತ್ತು20 ಕ್ರಿಕೆಟ್‌ನಲ್ಲಿ ಅಪೇಕ್ಷಿಸುವ ಎಲ್ಲಾ ರಂಜನೆಗಳು ಅಲ್ಲಿದ್ದವು.
ಹಾಗಾದರೆ, ಕ್ರಿಕೆಟ್‌ನ ಉತ್ಕೃಷ್ಟ ಗುಣಮಟ್ಟಕ್ಕೆ ಮಂತ್ರಿ ಕೆಪಿಎಲ್‌ ಸಾಕ್ಷಿಯಾಯಿತೇ?
ಈ ರೀತಿ ಹೇಳುವುದು ಕಷ್ಟ. ಏಕೆಂದರೆ, ಸಮಾನಸ್ಕಂಧರ ನಡುವಿನ ಹೋರಾಟ ಯಾವಾಗಲೂ ಸಮಬಲದ ಪೈಪೋಟಿಯಿಂದ ಕೂಡಿರುತ್ತವೆ. ಕೆಪಿಎಲ್‌ನಲ್ಲಿ ಆಡಿದವರೆಲ್ಲರೂ ರಾಜ್ಯ ಮಟ್ಟದ ಆಟಗಾರರು. ಇಲ್ಲಿ ಹೊರ ರಾಜ್ಯಗಳ, ಅಪರಿಚಿತ, ಅನಿರೀಕ್ಷಿತ ಸಾಮರ್ಥ್ಯದ ಅನಾವರಣ ಇರಲಿಲ್ಲ. ರಾಜ್ಯ ಮಟ್ಟದ ವಿವಿಧ ಡಿವಿಜನ್‌, ವಯೋಮಿತಿ ಲೀಗ್‌ಗಳಲ್ಲಿ ಮುಖಾಮುಖಿಯಾಗುವ ಆಟಗಾರರೇ ಇಲ್ಲಿಯೂ ಪರಸ್ಪರ ಆಡಿದ್ದರು. ಕೆಪಿಎಲ್‌ನ ಅತ್ಯುತ್ತಮ ಆಟಗಾರರನ್ನೊಳಗೊಂಡ `ಕನಸಿನ ತಂಡ' ಐಪಿಎಲ್‌ ತಂಡವೊಂದರ ವಿರುದ್ಧ ಆಡಿದರೆ, ನಿಜವಾದ ಗುಣಮಟ್ಟ ತಿಳಿಯಬಹುದು.
ಜನರ ಪ್ರತಿಕ್ರಿಯೆ ಹೇಗಿತ್ತು?
ಮಿಶ್ರ ಪ್ರತಿಕ್ರಿಯೆ ಎಂದು ಹೇಳಿದರೆ ಸರಿಯಾದೀತು. ಬಹುಶಃ ಮೈಸೂರಿನಲ್ಲಿ ಇನ್ನಷ್ಟು ಪಂದ್ಯಗಳು ನಡೆದಿದ್ದರೆ ಹೆಚ್ಚು ಜನ ವೀಕ್ಷಿಸಲು ಅನುಕೂಲವಾಗುತ್ತಿತ್ತು. ರಾಜ್ಯದ ಸಾಂಸ್ಕೃತಿಕ ರಾಜಧಾನಿಯಲ್ಲಿ ಕೆಪಿಎಲ್‌ಗೆ ವ್ಯಕ್ತವಾದ ಜನಬೆಂಬಲ ಆಡಳಿತಾತ್ಮಕ ರಾಜಧಾನಿಯಲ್ಲಿ ಸಿಗಲಿಲ್ಲ. ದುಡ್ಡು ಕೊಟ್ಟು ಮಂತ್ರಿ ಕೆಪಿಎಲ್‌ ಪಂದ್ಯಗಳನ್ನು ನೋಡಿದವರ ಸಂಖ್ಯೆ ಕಡಿಮೆ. ಉಚಿತ ಪಾಸ್‌ಗಳ ಮೂಲಕ ಕ್ರೀಡಾಂಗಣದಲ್ಲಿದ್ದ ಆಯಾ ತಂಡಗಳ ಅಭಿಮಾನಿಗಳ ಸಂಖ್ಯೆಯೇ ಜಾಸ್ತಿ. ಬೆಂಗಳೂರಿಗರ ಪಾಲಿಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಅಥವಾ ಐಪಿಎಲ್‌ ಪಂದ್ಯ ಹುಟ್ಟುಹಾಕುವ ಕ್ರೇಜ್‌ ಅಥವಾ ಜ್ವರ ಕೆಪಿಎಲ್‌ನಿಂದ ಸಾಧ್ಯವಾಗಲಿಲ್ಲ. ಈ ಪಂದ್ಯವನ್ನು ನೇರಪ್ರಸಾರ ಮಾಡಿದ ಉದಯ ವಾರ್ತೆಗಳಿಗೂ ಟಿಆರ್‌ಪಿ ಏರಿದ ಬಗ್ಗೆ ಮಾಹಿತಿ ಇಲ್ಲ.
ಹಾಗಾದರೆ, ಮಂತ್ರಿ ಕೆಪಿಎಲ್‌ ವಿಫಲ ಎಂದು ಭಾವಿಸಬೇಕೇ?
ಹಾಗೇನೂ ಇಲ್ಲ. ನಿರೀಕ್ಷೆಯ ಪ್ರಮಾಣದಲ್ಲಿ ಜನಾನುರಾಗ ಗಿಟ್ಟಿಸಲು ಇದು ವಿಫಲವಾಗಿರಬಹುದು. ಆದರೆ, ಮೊದಲ ವರ್ಷದ ಪ್ರಯೋಗ ಯಶಸ್ವಿ ಎಂದೇ ಹೇಳಬೇಕು. ರಾಜ್ಯದ ಆಟಗಾರರ ಪ್ರದರ್ಶನ ಕೆಲವು ಐಪಿಎಲ್‌ ತಂಡಗಳನ್ನಾದರೂ ಸೆಳೆದಿರುತ್ತದೆ. ಅಲ್ಲದೆ, ಇನ್ನು ಮುಂದೆ ರಣಜಿ ಸೇರಿದಂತೆ ರಾಜ್ಯ ತಂಡಗಳ ಆಯ್ಕೆಗೆ ಮೊದಲಿಗಿಂತ ಹೆಚ್ಚು ಆಟಗಾರರು ಪರಿಗಣನೆ ಯಲ್ಲಿರುತ್ತಾರೆ. ಜೊತೆಗೆ ಯಾವ ಆಟಗಾರರು ಯಾವ ಮಾದರಿಗೆ ಸೂಕ್ತ ಎಂಬ ಸ್ಪಷ್ಟ ಚಿತ್ರಣ ಇನ್ನು ಮುಂದೆ ಸುಲಭವಾಗುತ್ತದೆ.
ಯಾರು ಮಿಂಚಿದರು, ಯಾರು ವಿಫಲರಾದರು?
ಕೆಪಿಎಲ್‌ ಪರಿಕಲ್ಪನೆಯೇ ನವೀನವಾಗಿದ್ದರಿಂದ, ಟೂರ್ನಿಯ ಆರಂಭಕ್ಕೆ ಮುನ್ನ ಆಟಗಾರರ ಪ್ರದರ್ಶನದ ಬಗ್ಗೆ ಅಂಥ ನಿರೀಕ್ಷೆಗಳೇನೂ ಇರಲಿಲ್ಲ. ಸಮುದ್ರದಲ್ಲಿ ಸರಸವಾಡುವ ಭಾರೀ ಮೀನುಗಳು ಸಣ್ಣ ಬಾವಿಯಲ್ಲಿ ಉಸಿರುಗಟ್ಟುವಂತೆ ರಾಬಿನ್‌ ಉತ್ತಪ್ಪ ಲೀಗ್‌ ಹಂತದ ಆರಂಭದಲ್ಲಿ ನೀರಸವಾಗಿ ಆಡಿದರೂ, ಲೀಗ್‌ ಕೊನೆಯ ಘಟ್ಟ ಪ್ರವೇಶಿಸುತ್ತಿದ್ದಂತೆ ಲಹರಿ ಕಂಡುಕೊಂಡರು. ಐಪಿಎಲ್‌ನಲ್ಲಿ ಭಾರತದ ಏಕೈಕ ಶತಕವೀರ ಮನೀಶ್‌ ಪಾಂಡೆ ಬಗ್ಗೆ ಕೆಪಿಎಲ್‌ನಲ್ಲೂ ನಿರೀಕ್ಷೆಗಳಿದ್ದವು. ಅದನ್ನು ಅವರು ಹುಸಿಗೊಳಿಸಲೂ ಇಲ್ಲ. ಲೀಗ್‌ ಹಂತದಲ್ಲಿ ಗರಿಷ್ಠ 300 ರನ್‌ ಗಳಿಕೆ ದಾಖಲೆ ಅವರ ಹೆಸರಲ್ಲೇ ಇದೆ. ಕೆಪಿಎಲ್‌ನ ಪ್ರಪ್ರಥಮ ಹಾಗೂ ಈವರೆಗಿನ ಏಕೈಕ ಶತಕದ ದಾಖಲೆಯೂ ಅವರ ಹೆಸರಲ್ಲಿದೆ. ಬೆಳಗಾವಿ ಪ್ಯಾಂಥರ್ಸ್‌ ಮನೀಶ್‌ ಮೇಲೆ ಹೂಡಿದ ಹಣ ಲಾಭದಾಯಕವೆನಿಸಿತು. ಐಪಿಎಲ್‌ ಅನುಭವಿಗಳಾದ ಬೆಳಗಾವಿಯ ಆರ್‌ ವಿನಯ್‌ಕುಮಾರ್‌, ಬೆಂಗಳೂರು ಪ್ರಾವಿಡೆಂಟ್‌ ನಾಯಕ ಬಿ. ಅಖಿಲ್‌ ಸಹ ಮಿಂಚಿದರು. ವಿನಯ್‌ಕುಮಾರ್‌ 7 ಲೀಗ್‌ ಪಂದ್ಯಗಳಿಂದ 5.20 ಮಿತವ್ಯಯದಲ್ಲಿ 12 ವಿಕೆಟ್‌ ಕಬಳಿಸಿ ತಾವೇ ರಾಜ್ಯದ ಮುಂಚೂಣಿಯ ವೇಗಿ ಎನ್ನುವುದನ್ನು ಸಾಬೀತುಪಡಿಸಿದರು. ಬಿ ಅಖಿಲ್‌ (166 ರನ್‌, 9 ವಿಕೆಟ್‌) ಆಲ್ರೌಂಡರ್‌ ಪಟ್ಟಕ್ಕೆ ನ್ಯಾಯ ಒದಗಿಸಿದರು.
ಅತ್ಯುತ್ತಮ ಆಟಗಾರ ಯಾರು?
ರನ್‌ ಗಳಿಕೆ ದೃಷ್ಟಿಯಿಂದ ಮನೀಶ್‌ ಪಾಂಡೆಯೇ ಅತ್ಯುತ್ತಮ ಆಟಗಾರ. ಆದರೆ, ಬಿಜಾಪುರ ತಂಡವನ್ನು ಸೆಮಿಫೈನಲ್‌ ಮೆಟ್ಟಿಲು ಹತ್ತಿಸಿದ ಗೌರವ್‌ ಧಿಮಾನ್‌ ಮತ್ತು ಮಿಥುನ್‌ ಬಿರಾಲ ಆಟವೂ ವೀರೋಚಿತ. ಕೆಪಿಎಲ್‌ನ ಅತ್ಯುತ್ತಮ ಆರಂಭಿಕ ಜೋಡಿ ಧಿಮಾನ್‌ ಮತ್ತು ಬಿರಾಲ. ಇಬ್ಬರೂ ಲೀಗ್‌ನ 7 ಪಂದ್ಯಗಳಲ್ಲಿ ತಲಾ 4 ಅರ್ಧ ಶತಕ ಬಾರಿಸಿದರು. ಧಿಮಾನ್‌ 293 ರನ್‌ ಚಚ್ಚಿದರೆ, ಬಿರಾಲ 267 ರನ್‌ ಬಾರಿಸಿದರು. ದೊಡ್ಡ ದೊಡ್ಡ ಮೊತ್ತಗಳನ್ನು ಬೆನ್ನಟ್ಟುವಾಗ ಇವರಿಬ್ಬರು ಗುರಿ ತೀರಾ ಸುಲಭವೆನಿಸುವಂತೆ ಮಾಡಿದರು. ಹಲವು ವರ್ಷಗಳ ಕಾಲ ರಾಜ್ಯ ರಣಜಿ ತಂಡ ಪ್ರತಿನಿಧಿಸಿ ಸದ್ಯ ಅವಗಣನೆಗೆ ಗುರಿಯಾಗಿರುವ 32 ವರ್ಷದ ಬಿರಾಲ ಹಾಗೂ ಕಾರಣಾಂತರ ಗಳಿಂದ ರಾಜ್ಯ ತಂಡಗಳಿಂದ ದೂರವೇ ಉಳಿದಿರುವ
ಧಿಮಾನ್‌ ಕಿರು ಮಾದರಿಯಲ್ಲಿ ತಮ್ಮ ಉಪಯುಕ್ತತೆ ಸಾಬೀತುಪಡಿಸಿದರು. ಗೌರವ್‌ ಧಿಮಾನ್‌ ಐಪಿಎಲ್‌ನ ಮೊದಲ ಎರಡು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡಗಳಲ್ಲಿ ದ್ದರೂ, ಆಡುವ ಅವಕಾಶ ಸಿಕ್ಕಿರಲಿಲ್ಲ. ಬಹುಶಃ ಇನ್ನು ಮುಂದೆ ಹಾಗಾಗಲಾರದು.
ರಾಜ್ಯ ಕ್ರಿಕೆಟ್‌ನ ಹಳೆ ಹುಲಿ ಜೆ. ಅರುಣ್‌ಕುಮಾರ್‌ ಮತ್ತು ಭಾರತದ ಮಾಜಿ ವೇಗಿ ಡೇವಿಡ್‌ ಜಾನ್ಸನ್‌ ಕೌತುಕದ ಪ್ರದರ್ಶನ ನೀಡಿದರು. ಹರಾಜಿನಲ್ಲಿ ಕೇವಲ 30 ಸಾವಿರ ರೂ.ಗೆ ಮಾರಾಟ ವಾಗಿದ್ದ ಡೇವಿಡ್‌ ಜಾನ್ಸನ್‌ 39ರ ವಯಸ್ಸಿನಲ್ಲಿ, ಅದೂ ಕ್ರಿಕೆಟ್‌ನಿಂದ ನಿವೃತ್ತರಾದ ಇಷ್ಟು ವರ್ಷಗಳ ಬಳಿಕ ಹೇಗೆ ಆಡಿಯಾರು ಎಂಬ ಭಾವನೆ ಇತ್ತು. ಆದರೆ, ಪ್ರತಿಭೆಗೆ ವಯಸ್ಸಿಲ್ಲ ಎಂದು ಸಾಬೀತು ಪಡಿಸಿದ ಜಾನ್ಸನ್‌ ಲೀಗ್‌ ಹಂತದಲ್ಲಿ ಗರಿಷ್ಠ 13 ವಿಕೆಟ್‌ ಸಾಧನೆ ಮಾಡಿದರು. ವಿನಯ್‌ ಕುಮಾರ್‌-ಡೇವಿಡ್‌ ಜಾನ್ಸನ್‌ ಕೆಪಿಎಲ್‌ನ ಯಶಸ್ವಿ ವೇಗದ ಜೋಡಿ.
ಧಿಮಾನ್‌ರಂತೆ ರಾಜ್ಯ ಆಯ್ಕೆಗಾರರ ಅವಕೃಪೆಗೆ ಪಾತ್ರರಾಗಿರುವ ಸ್ಪಿನ್ನರ್‌ ರ್ಯಾನ್‌ ನೈನನ್‌ (12 ವಿಕೆಟ್‌) ಸಹ ಮಲ್ನಾಡ್‌ ತಂಡದ ನಾಯಕರಾಗಿ ಹಾಗೂ ಬೌಲರ್‌ ಆಗಿ ಮಿಂಚಿದರು. ಮಲ್ನಾಡ್‌ ತಂಡದಲ್ಲಿ ಮಿಥುನ್‌, ರಾಜು ಭಟ್ಕಳ, ನೈನನ್‌, ಅಪ್ಪಣ್ಣ, ಗೌತಮ್‌ ರೂಪದಲ್ಲಿ ಸಮರ್ಥ ಬೌಲಿಂಗ್‌ ಪಡೆಯಿತ್ತು. ಅದೇ ರೀತಿ ಕೆಲವು ಹೊಡೆಬಡಿ ಆಟಗಾರರಿದ್ದಿದ್ದರೆ, ತಂಡ ಸೆಮಿಫೈನಲ್‌ ತಲುಪಬಹುದಾಗಿತ್ತು.
ಬಿಜಾಪುರ ಬುಲ್ಸ್‌ನ ಮಧ್ಯಮ ವೇಗಿ ಜಯಪ್ರಕಾಶ್‌ ಶೆಟ್ಟಿ (10 ವಿಕೆಟ್‌), ಆಲ್ರೌಂಡರ್‌ ಸ್ಟುವರ್ಟ್‌ ಬಿನ್ನಿ (143 ರನ್‌ ಮತ್ತು 10 ವಿಕೆಟ್‌), ಬೆಳಗಾವಿ ಬ್ಯಾಟ್ಸ್‌ಮನ್‌ ಶ್ಯಾಂ ಪೊನ್ನಪ್ಪ (226 ರನ್‌), ಮೈಸೂರು ಮಹಾರಾಜಾಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸುಧೀರ್‌ ರಾವ್‌ (216 ರನ್‌), ಮಂಗಳೂರು ಯುನೈ ಟೆಡ್‌ನ ರೋಹಿತ್‌ ಸಭರ್‌ವಾಲ್‌ (211 ರನ್‌) ಮತ್ತು ಆರ್‌. ಜೊನಾಥನ್‌ (205 ರನ್‌), ಪ್ರಾವಿಡೆಂಡ್‌ನ ಸುನಿಲ್‌ ಕುಮಾರ್‌ ಜೈನ್‌ (182) ಹೀಗೆ ಹಲವಾರು ಮಂದಿ ಗಮನ ಸೆಳೆಯುವ ಆಟವಾಡಿದರು.
ಕೆಪಿಎಲ್‌ನ ಅತ್ಯುತ್ತಮ ತಂಡ ಯಾವುದು?
ಟೂರ್ನಿ ಆರಂಭಕ್ಕೆ ಮುನ್ನ ಮೈಸೂರು ತಂಡದ ಸಂಯೋಜನೆಯ ಬಗ್ಗೆ ಭರವಸೆಯ ಮಾತುಗಳಿದ್ದವು. ಆದರೆ, ಟೂರ್ನಿ ಸಾಗುತ್ತಿದ್ದಂತೆಯೇ ನಿಜವಾಗಿ ಪ್ರಭಾವ ಬೀರಿದ್ದು ಬೆಳಗಾವಿ ಪ್ಯಾಂಥರ್ಸ್‌ ಎಂದೇ ಹೇಳಬೇಕು. ಇನಿಂಗ್ಸ್‌ನ ಆರಂಭದಲ್ಲಿ ಜೆ. ಅರುಣ್‌ ಕುಮಾರ್‌, ಮನೀಶ್‌ ಪಾಂಡೆ, 3ನೇ ಕ್ರಮಾಂಕದಲ್ಲಿ ಶ್ಯಾಂ ಪೊನ್ನಪ್ಪ, ಬೌಲಿಂಗ್‌ನಲ್ಲಿ ವಿನಯ್‌ಕುಮಾರ್‌, ಡೇವಿಡ್‌ ಜಾನ್ಸನ್‌ ತಮ್ಮ ಅನುಭವ ಶ್ರೀಮಂತಿಕೆಯಿಂದ ಉಳಿದ ಆಟಗಾರರಿಂದಲೂ ಪ್ರಭಾವಶಾಲಿ ಪ್ರದರ್ಶನ ಹೊರಹೊಮ್ಮಲು ಕಾರಣರಾದರು. ಹಾಗೆಂದು ಬೆಳಗಾವಿಯೇ ಚಾಂಪಿಯನ್‌ ಪಟ್ಟಕ್ಕೇರಲಿದೆ ಎಂದು ಭಾವಿಸಬೇಕಿಲ್ಲ. ಇಪ್ಪತ್ತು20 ಮಾದರಿಯಲ್ಲಿ ಯಾವಾಗಲೂ ಅತ್ಯುತ್ತಮ ತಂಡಗಳೇ ಗೆಲ್ಲುವುದಿಲ್ಲ.
ಬೆಂಗಳೂರು ಬ್ರಿಗೇಡಿಯರ್ಸ್‌ ತಂಡದ ಸಮತೋಲನ ಚೆನ್ನಾಗಿದೆ. ರಾಬಿನ್‌ ಉತ್ತಪ್ಪ, ದೀಪಕ್‌ ಚೌಗುಲೆಯಂಥ ತಾರಾ ಆಟಗಾರರಿದ್ದರೂ, ತಂಡ ಗೆಲುವಿಗೆ ಅವರಿಬ್ಬರನ್ನೇ ಅವಲಂಬಿಸಿಲ್ಲ. ಲೀಗ್‌ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ಸಹ ಇದೇ ರೀತಿ ಸಾಂಘಿಕ ಪ್ರದರ್ಶನದ ಮೂಲಕವೇ.
ಬಿಜಾಪುರ ಬುಲ್ಸ್‌ಗೆ ಬ್ಯಾಟಿಂಗ್‌ ಜೀವಾಳ. ಅಗ್ರಕ್ರಮಾಂಕದಲ್ಲಿ ಧಿಮಾನ್‌, ಬಿರಾಲ, ಮಧ್ಯಮ ಕ್ರಮಾಂಕದಲ್ಲಿ ಸುಧೀಂದ್ರ ಶಿಂಧೆ, ಸ್ಟುವರ್ಟ್‌ ಬಿನ್ನಿ ಮತ್ತು ದೇವರಾಜ್‌ ಪಾಟಿಲ್‌ ಆಧಾರ. ಬೌಲಿಂಗ್‌ ಸಹ ತೆಗೆದುಹಾಕುವಂತಿಲ್ಲ.
ಪುರವಂಕರ ಸಮೂಹ ಫ್ರಾಂಚೈಸಿ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತ ತೆತ್ತು ಬೆಂಗಳೂರು ಗ್ರಾಮಾಂತರ ತಂಡ ಖರೀದಿಸಿದರೂ, ಆನಂತರ ತಂಡಕ್ಕಾಗಿ ಹೆಚ್ಚು ಖರ್ಚು ಮಾಡಿದ್ದು ತೋರುವುದಿಲ್ಲ. ಆಟಗಾರರ ಬಿಡ್‌ನಲ್ಲೂ ಮಿತವ್ಯಯದಿಂದ ಖರ್ಚು ಮಾಡಿ ಬಿ. ಅಖಿಲ್‌, ತಿಲಕ್‌ ನಾಯ್ಡು, ಎನ್‌ಸಿ ಅಯ್ಯಪ್ಪ, ಅಮಿತ್‌ ವರ್ಮ, ಅನಿರುದ್ಧ್‌ ಜೋಷಿರನ್ನು ಆಯ್ಕೆ ಮಾಡಿದ ತಂಡ, ನಂತರ ತಂಡದ ಅನಾವರಣವನ್ನೂ ಸರಳವಾಗಿ ಖರ್ಚಿಲ್ಲದೆ ಮಾಡಿ ಮುಗಿಸಿತು. ಆದರೆ, ಮೈದಾನದಲ್ಲಿ ಮಾತ್ರ ತಂಡದ ಪ್ರದರ್ಶನ ಭರ್ಜರಿಯಾಗಿತ್ತು. ಉಪಾಂತ್ಯವನ್ನು ಸಲೀಸಾಗಿ ಪ್ರವೇಶಿಸಿತು.
ಹೊಸ ಮುಖಗಳು?
ಟೂರ್ನಿಯ ಮೊದಲ ದಿನವೇ ಪ್ರಾವಿಡೆಂಟ್‌ ತಂಡದ ಎಂಕೆ ಮಂಜುನಾಥ್‌ 92 ರನ್‌ ಬಾರಿಸಿದಾಗ, ಸಾಕಷ್ಟು ಅನಾಮಧೇಯ ಪ್ರತಿಭೆಗಳು ಹೆಸರು ಮಾಡುವ ನಿರೀಕ್ಷೆ ಮೊಳಕೆಯೊಡೆದಿತ್ತು. ಆದರೆ, ಆನಂತರದ ದಿನಗಳಲ್ಲಿ ಅನುಭವಿಗಳ ಅಬ್ಬರಕ್ಕೆ ಹೊಸಬರು ದಾರಿ ಮಾಡಿಕೊಟ್ಟರು. ದಾವಣಗೆರೆಯ ಎಂ. ನಿಧೀಶ್‌, ಶಿವಮೊಗ್ಗದ ಕೆ. ಗೌತಂ, ಮಂಗಳೂರಿನ ರೋಹಿತ್‌ ಸಭರ್‌ವಾಲ್‌, ಬ್ರಿಗೇಡಿಯರ್ಸ್‌ನ ಲಾಜರಸ್‌, ಮೊದಲಾದವರು ಗಮನ ಸೆಳೆಯಲು ಯಶಸ್ವಿಯಾದರು.
ಆರ್ಥಿಕ ಲಾಭ?
ಯಾವುದೇ ತಂಡಗಳು ಮೊದಲ ವರ್ಷದ ಟೂರ್ನಿಯಲ್ಲಿ ದೊಡ್ಡ ನಷ್ಟಕ್ಕೊಳಗಾಗದಿದ್ದರೆ, ಅದೇ ದೊಡ್ಡ ಲಾಭ.

No comments:

Post a Comment