Tuesday, September 15, 2009

ರಾಗ ಲಹರಿ




ಕಂಚಿನ ಮುಷ್ಟಿ!

ಹಸಿರಿನಿಂದ ನಳನಳಿಸುತ್ತಿರುವ ಹೊಲಗಳು, ಎಲ್ಲೆಂದರಲ್ಲಿ ಜನರಿಂದ ತುಂಬಿರುವ ಮದ್ಯ ದಂಗಡಿಗಳು, ಧೂಳು ತುಂಬಿದ ರಸ್ತೆಗಳು, ಸ್ವಚ್ಛವಿಲ್ಲದ ಪುಟ್ಟ ಪಟ್ಟಣ ಭಿವಾನಿ `ಮಿನಿ ಕ್ಯೂಬಾ' ಎಂದೇ ಜನಪ್ರಿಯ. ಇದಕ್ಕೆ ಕಾರಣ ಅಲ್ಲಿ ಐದು ಬಾಕ್ಸಿಂಗ್‌ ಶಾಲೆಗಳೂ ಇರುವುದು.
ಇಡೀ ಭಾರತದಲ್ಲಿ ಕ್ರಿಕೆಟ್‌ ನಂ.1 ಕ್ರೀಡೆಯಾದರೆ, ಅಲ್ಲಿ ಮಾತ್ರ್ರ ಅಷ್ಟಕ್ಕಷ್ಟೇ. ಈ ದೇಶದಲ್ಲಿ ಕ್ರಿಕೆಟ್‌ಗಿಂತ ಬಾಕ್ಸಿಂಗ್‌ ಜನಪ್ರಿಯವಾಗಿರುವುದು ಅಲ್ಲಿ ಮಾತ್ರ.
ಅಲ್ಲಿ ಬಾಕ್ಸಿಂಗ್‌ ಕಲಿಯುವುದು ಸರ್ಕಾರಿ ಕೆಲಸಕ್ಕೆ ರಹದಾರಿ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾ ದರೆ ಬಾಕ್ಸರ್‌ ಆಗಬೇಕು ಎಂಬ ಭಾವನೆ ಅಲ್ಲಿ ದಟ್ಟವಾಗಿ ಬೇರೂರಿದೆ.
ಬಹಳ ವರ್ಷಗಳಿಂದ, ಇತ್ತೀಚಿನವರೆಗೂ ಹವಾ ಸಿಂಗ್‌ ಆ ಪಟ್ಟಣದ ಕಣ್ಮಣಿಯಾಗಿದ್ದರು. ಏಷ್ಯಾ ಕ್ರೀಡಾಕೂಟದಲ್ಲಿ 2 ಚಿನ್ನ ಗೆದ್ದಿದ್ದ ಹವಾ ಸಿಂಗ್‌, ಸತತ 11 ವರ್ಷ ಕಾಲ ತಮ್ಮ ತೂಕ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು. ಹಾಗಾಗಿ ಭಿವಾನಿ ಏನು, ಇಡೀ ಹರ್ಯಾಣ ರಾಜ್ಯದಲ್ಲಿ ಹವಾ ಸಿಂಗ್‌ ಹವಾ ಇತ್ತು.
ಅವರ ಉತ್ತರಾಧಿಕಾರಿಯೆಂದು ಬಿಂಬಿತರಾಗಿ, ಅವರಿ ಗಿಂತ ಎತ್ತರ ಬೆಳೆದವರು, ದೇಶದ ಉದ್ದಗಲ ಜನಾನುರಾಗಿ ಯಾದವರು ವಿಜೇಂದರ್‌ ಸಿಂಗ್‌. ವಿಜಿ, ವಿಜು, ವಿಜೇಂದರ್‌, ವಿಜೇಂದರ್‌ ಕುಮಾರ್‌, ವಿಜೇಂದರ್‌ ಸಿಂಗ್‌ ಹೀಗೆ ಹಲವು ನಾಮಧೇಯಗಳಿಂದ ವಿಖ್ಯಾತರಾದ ವಿಜೇಂದರ್‌ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವುದನ್ನು ಭಿವಾನಿಯಿಂದ 5 ಕಿಮೀ ದೂರದಲ್ಲಿರುವ ಅವರ ಹುಟ್ಟೂರು ಕಲುವಾಸ್‌ ಹಳ್ಳಿಯ ಜನ ತಾತ್ಕಾಲಿಕವಾಗಿ ಕಟ್ಟಲಾಗಿದ್ದ ಡೇರೆಯ ಕೆಳಗೆ ಹಳ್ಳಿಗಿದ್ದ ಒಂದೇ ಟಿವಿಯ ಎದುರು ಕುಳಿತು ನೋಡಿದ್ದರು. ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪ್ರಪ್ರಥಮ ಒಲಿಂಪಿಕ್ಸ್‌ ಪದಕ ಗೆದ್ದುಕೊಟ್ಟ ಸಾಧನೆಯ ಬಳಿಕ ವಿಜೇಂದರ್‌, ಕಲುವಾಸ್‌, ಭಿವಾನಿ ಅಥವಾ ಹರ್ಯಾಣವನ್ನು ಮೀರಿ ಎಲ್ಲೆಡೆ ಚಿರಪರಿಚಿತರಾದರು. ಅವರೀಗ ದೇಶದ ನಂ.1 ಬಾಕ್ಸರ್‌. ಮಿಡ್ಲ್‌ವೇಟ್‌ ವಿಭಾಗದಲ್ಲಿ ಅವರು ವಿಶ್ವದ ನಂ.2.
ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದು ಆಕಸ್ಮಿಕವಲ್ಲ ಎಂಬುದನ್ನು ಅವರು ಕಳೆದ ವಾರ ಇಟಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಾಬೀತು ಮಾಡಿದರು. ಅಲ್ಲಿ ಅವರು ಉಪಾಂತ್ಯ ಸಾಧನೆ ಮಾಡುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪದಕದ ಬಣ್ಣವನ್ನು ಬೆಳ್ಳಿ ಅಥವಾ ಬಂಗಾರದ ಬಣ್ಣಕ್ಕೆ ಪರಿವರ್ತಿಸುವ ಕನಸು ಮಿಲಾನ್‌ನಲ್ಲಿ ಈಡೇರಲಿಲ್ಲ. ಆದರೆ, ಆ ದಿನವೂ ದೂರವಿಲ್ಲ.
ಭಿವಾನಿಯಲ್ಲಿ ಬಿಬಿಸಿ ಎಂದೇ ಜನಪ್ರಿಯವಾಗಿರುವ ಭಿವಾನಿ ಬಾಕ್ಸಿಂಗ್‌ ಕ್ಲಬ್‌ ವಿಜೇಂದರ್‌ರ ಮೊದಲ ಪಾಠಶಾಲೆ. ಸೈನ್ಯಕ್ಕೆ ಸೇರಿದ ತಮ್ಮನಿಗಿದ್ದ ಬಾಕ್ಸಿಂಗ್‌ ಹುಚ್ಚು ವಿಜೇಂದರ್‌ ರನ್ನೂ ಈ ಶಾಲೆಗೆ ಸೆಳೆದಿತ್ತು. ಸುಮ್ಮನೆ ಅಭ್ಯಾಸಕ್ಕೆಂದು ಬರುತ್ತಿದ್ದ ವಿಜಿಯ ಪ್ರತಿಭೆಯನ್ನು ಭಾರತದ ಮಾಜಿ ಬಾಕ್ಸರ್‌, ಹಾಲಿ ತರಬೇತುದಾರ ಜಗದೀಶ್‌ ಸಿಂಗ್‌ ಗುರುತಿಸಿದರು. ಅವರ ಗರಡಿಯಲ್ಲಿ ಹುಡುಗ ಪಳಗಿದರು.
ಆರಂಭದಲ್ಲಿ ಸಣ್ಣ ಪುಟ್ಟ ಪ್ರಶಸ್ತಿ ಗೆಲ್ಲುತ್ತ, ಹಂತಹಂತವಾಗಿ ಅಂತಾರಾಷ್ಟ್ರೀಯ ಅನುಭವ ಪಡೆದುಕೊಂಡ ವಿಜೇಂದರ್‌ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಆರಂಭದಲ್ಲೇ ಸೋತಿದ್ದರು. ಆದರೆ, ಬೀಜಿಂಗ್‌ ಒಲಿಂಪಿಕ್ಸ್‌ ವಿಜಿಗೆ ಮಾತ್ರವಲ್ಲ, ಭಾರತದಲ್ಲಿ ಬಾಕ್ಸಿಂಗ್‌ನ ಅದೃಷ್ಟವನ್ನೇ ಬದಲಾಯಿತು. ಕೆಲವು ವರ್ಷಗಳ ಹಿಂದೆ ಮೊಹಮ್ಮದ್‌ ಅಲಿ ಕಮರ್‌, ಡಿಂಕೊ ಸಿಂಗ್‌ರಂಥ ಒಬ್ಬೊಬ್ಬರ ಪ್ರವರ್ಧಮಾನಕ್ಕೆ ತೃಪ್ತವಾಗುತ್ತಿದ್ದ ಭಾರತದಲ್ಲೀಗ ಹಲವು ಉತ್ತಮ ಅಂತಾರಾಷ್ಟ್ರೀಯ ಗುಣಮಟ್ಟದ ಬಾಕ್ಸರ್‌ ಗಳ ಗೊಂಚಲೇ ಇದೆ. ಈ ಕ್ರೀಡೆಯ ಬಗ್ಗೆ ಸರ್ಕಾರ ಧೋರಣೆ ಹಾಗೂ ವಿದೇಶಗಳ ಅಭಿಪ್ರಾಯವೂ ಬದಲಾಗಿದೆ. ವಿಜೇಂದರ್‌ ಬಾಕ್ಸಿಂಗ್‌ನ ಪ್ರಪ್ರಥಮ ಖೇಲ್‌ರತ್ನ ಪುರಸ್ಕೃತ ರೆನಿಸಿದ್ದಾರೆ. 2012ರ ಒಲಿಂಪಿಕ್ಸ್‌ನಲ್ಲಿ ಭಾರತ ನಿಶ್ಚಿತವಾಗಿ ಪದಕವನ್ನು ನಿರೀಕ್ಷಿಸಬಹುದು.
ಇಟಲಿಯ ಮಿಲಾನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿಜೇಂದರ್‌ ಅವರ ಅಮೋಘ ಪ್ರದರ್ಶನದಿಂದಾಗಿ ಭಾರತ ಪದಕದ ಖಾತೆಯನ್ನು ತೆರೆಯಿತು. ಉಪಾಂತ್ಯದಲ್ಲಿ ಅವರು ಉಜ್ಬೆಕಿಸ್ತಾನದ ಅಬೋಸ್‌ ಅಟೊಯೇವ್‌ ವಿರುದ್ಧ ಸೋತರೂ, ಕಂಚಿನ ಸಾಧನೆ ಸಣ್ಣದೇನೂ ಅಲ್ಲ.
ವಿಜೇಂದರ್‌ ಸ್ಫುರದ್ರೂಪಿ ತರುಣ. ಬಾಕ್ಸಿಂಗ್‌ನಲ್ಲಿ ಯಶಸ್ವಿ ಯಾಗುವ ಮುನ್ನ ಅವರು ಮಾಡೆಲಿಂಗ್‌ ಮಾಡುತ್ತಿದ್ದರು. ಬಹುಶಃ ಈ ಕ್ರೀಡೆಯಲ್ಲಿ ಬಯಸಿದ ಎತ್ತರಕ್ಕೇರಲಾಗದಿದ್ದರೆ ಅವರು ವೃತ್ತಿಪರ ರೂಪದರ್ಶಿಯಾಗುವ ಸಾಧ್ಯತೆಯೂ ಇತ್ತು. ಅವರಿಗೆ ಬಾಲಿವುಡ್‌ ನಂಟು ಸಹ ಇದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ಅವರೊಂದಿಗೆ ಡೇಟಿಂಗ್‌ಗೆ ಹೋಗುವುದಾಗಿ ಬಿಪಾಶ ಬಸು ಹೇಳಿದ್ದು ಹಾಗೂ ಅದೊಂದು ದೊಡ್ಡ ವಿವಾದವಾಗಿದ್ದು ಹಳೆಯ ಕಥೆ.
ವಿಜೇಂದರ್‌ ತಮ್ಮ ಆರಂಭದ ದಿನಗಳಲ್ಲಿ ಬಾಕ್ಸಿಂಗ್‌ ತರಬೇತಿಗೆಂದು ಪಾರ್ಟ್‌ ಟೈಮ್‌ ಕೆಲಸ ಮಾಡುತ್ತಿದ್ದರು. ಬಸ್‌ ಚಾಲಕರಾಗಿದ್ದ ಅವರ ತಂದೆ ಮಹಿಪಾಲ್‌ ಸಿಂಗ್‌ ಮಗನ ಖರ್ಚುವೆಚ್ಚ ಸರಿದೂಗಿಸಲು ಓವರ್‌ಟೈಂ ಕೆಲಸ ಮಾಡುತ್ತಿದ್ದರು. 2006ರ ಏಷ್ಯಾಡ್‌ನಲ್ಲಿ ಕಂಚು ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಹರ್ಯಾಣ ಪೊಲೀಸ್‌ನಲ್ಲಿ ಅವರಿಗೆ ಸಬ್‌ಇನ್‌ಸ್ಪೆಕ್ಟರ್‌ ಉದ್ಯೋಗ ಲಭಿ ಸಿತು. ಸರ್ಕಾರದ ನೆರವುಗಳ ಬಾಗಿಲು ಸಹ ತೆರೆಯಿತು. ಸದ್ಯ ಅವರು ಹರ್ಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿ ಹುದ್ದೆಯಲ್ಲಿ ದ್ದಾರೆ. ಕಳೆದ ವಾರ ಕ್ರೀಡಾ ನಿರ್ವಹಣಾ ಸಂಸ್ಥೆ ಪರ್ಸೆಪ್ಟ್‌ ಜೊತೆ 5-6 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿ ರುವ ವಿಜೇಂದರ್‌ರತ್ತ ಲಕ್ಷ್ಮಿ ಒಲಿದು ಬರುತ್ತಿದ್ದಾಳೆ.
ಆದರೆ, ಸಮಚಿತ್ತದ ಯುವಕ ವಿಜೇಂದರ್‌. ಹಣದಿಂದ ಅವರ ಚಿತ್ತ ವಿಚಲಿತವಾಗುವುದಿಲ್ಲ. ಮುಂದಿನ ವರ್ಷದ ದೆಹಲಿ ಕಾಮನ್ವೆಲ್ತ್‌ ಕ್ರೀಡಾಕೂಟ ಹಾಗೂ 2012ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಅವರ ಸದ್ಯದ ಮಹತ್ವಾಕಾಂಕ್ಷೆ. ಭಾರತದ ನಿರೀಕ್ಷೆಯೂ ಹೌದು.

No comments:

Post a Comment