Tuesday, September 8, 2009

ರಾಗ ಲಹರಿ



ನಮ್ಮ ಕೆಪಿಎಲ್‌ ಉತ್ಸವ - ಉತ್ಸಾಹ

ಐಪಿಎಲ್‌ನಲ್ಲಿ ಆಡುವ ರಾಬಿನ್‌ ಉತ್ತಪ್ಪ, ಮನೀಶ್‌ ಪಾಂಡೆಯಂಥ ಆಟಗಾರರಿಗೆ ಕೆಪಿಎಲ್‌ನ ಹಣ ಕಡಲೆಪುರಿಯಂತೆ ಎಂದು ಕರ್ನಾಟಕ ಪ್ರೀಮಿಯರ್‌ ಲೀಗ್‌ ಆರಂಭದ ದಿನವೇ ಶಾಮನೂರು ದಾವಣಗೆರೆ ಡೈಮಂಡ್ಸ್‌ ತಂಡದ ಕೋಚ್‌ ದೊಡ್ಡಗಣೇಶ್‌ ಹೇಳಿದ್ದರು.
ಅದು ನಿಜವೂ ಹೌದು. ಕರ್ನಾಟಕ ಪ್ರೀಮಿಯರ್‌ ಲೀಗ್‌ ರಾಜ್ಯ ಮಟ್ಟದಲ್ಲಿ ಹೊಸ ಪ್ರಯೋಗವೇ ಆಗಿದ್ದರೂ, ಇಲ್ಲಿನ ಒಟ್ಟು ವಹಿವಾಟು ನೂರು ಕೋಟಿಯ ಹತ್ತಿರವೂ ಸುಳಿಯುವುದಿಲ್ಲ (ಐಪಿಎಲ್‌ನಲ್ಲಿ ಒಂದೊಂದು ತಂಡದ ವಾರ್ಷಿಕ ವಹಿವಾಟು ಸುಮಾರು ನೂರು ಕೋಟಿ ರೂ.ಗೂ ಹೆಚ್ಚಿದೆ).
ಹಾಗೆಂದು ಕೆಪಿಎಲ್‌ ಮಹತ್ವ ಅಪಮೌಲ್ಯಗೊಳ್ಳುವುದೇನಿಲ್ಲ. ಏಕೆಂದರೆ, ಇಲ್ಲಿ ಹಣಕ್ಕಿಂತ ಮುಖ್ಯವಾದ ಸಂಗತಿಯೊಂದಿದೆ. ಕರ್ನಾಟಕದ ಯುವ ಕ್ರಿಕೆಟಿಗರ ಪಾಲಿಗೆ ಇದೊಂದು ಅವಕಾಶದ ಹೆಬ್ಬಾಗಿಲು. ಕೆಪಿಎಲ್‌ನ ಎಂಟು ತಂಡಗಳ ಪೈಕಿ ಅಸಾಧಾರಣ ಪ್ರದರ್ಶನ ನೀಡುವ ಪ್ರತಿಭೆಗಳು ನೇರವಾಗಿ ಐಪಿಎಲ್‌ ಹಾಗೂ ಭಾರತದ ಇಪ್ಪತ್ತು20 ತಂಡಕ್ಕೆ ನೆಗೆಯಲೂ ಬಹುದು. ಕರ್ನಾಟಕದ ಪರ ರಣಜಿಯನ್ನೇ ಆಡದೆ, ಭಾರತದ ಪರ ಆಡುವಂಥ ಸೌಭಾಗ್ಯ ಅರಸಿ ಬಂದರೂ ಬರಬಹುದು.
ಇಪ್ಪತ್ತು20 ಕ್ರಿಕೆಟ್‌ ಎನ್ನುವುದೊಂದು ಸಮ್ಮೋಹಿನಿ. ಕ್ರೀಡಾಂಗಣದತ್ತ ಪ್ರೇಕ್ಷಕರನ್ನು ಸೆಳೆಯುವ ಚುಂಬಕ ಶಕ್ತಿ ಹಾಗೂ ಭ್ರಾಮಕ ವಾತಾವರಣ ನಿರ್ಮಿಸುವ ಮೋಡಿ ಇದಕ್ಕಿದೆ. ಹೊಸದೆಲ್ಲವೂ ಚೆನ್ನಾಗಿರುತ್ತದೆ. ಆದರೆ, ಕಿರು ಮಾದರಿ ಈಗ ಮೂರ್ನಾಲ್ಕು ವರ್ಷಗಳ ಪುಟ್ಟ ಬಾಲೆ. ಹಾಗಾಗಿ ಎಲ್ಲರಿಗೂ ಎತ್ತಿ ಮುದ್ದಾಡಿಸುವ ಆಸೆ. ಅದೇ ರೀತಿ ಹೊಸ ಮಾದರಿಯ ಆಟ ಕೆಪಿಎಲ್‌ ರೂಪದಲ್ಲಿ ಕರ್ನಾಟಕದಲ್ಲೂ ದೊಡ್ಡ ರೀತಿಯಲ್ಲಿ ರಂಗಪ್ರವೇಶ ಮಾಡುತ್ತಿದೆ.
ಹಾಗೆಂದು, ರಾಜ್ಯದಲ್ಲಿ ಇದುವರೆಗೆ ಇಪ್ಪತ್ತು20 ಮಾದರಿ ಪಂದ್ಯಗಳು ನಡೆದಿರಲೇ ಇಲ್ಲವೆಂದೇನಲ್ಲ. ಬಿಸಿಸಿಐ ಕಿರು ಮಾದರಿಯ ಕಡು ವಿರೋಧಿಯಾಗಿದ್ದ ದಿನಗಳಲ್ಲೇ ಕೆಎಸ್‌ಸಿಎ ಬೆಂಗಳೂರಿನಲ್ಲಿ ಬ್ರಾಡ್ಮನ್‌ ಕಪ್‌ ಇಪ್ಪತ್ತು20 ಟೂರ್ನಿ ಸಂಘಟಿಸಿತ್ತು. ಈ ಟೂರ್ನಿಯ ಮೂಲಕವೇ ಎಂಎಸ್‌ ಧೋನಿ, ಸುರೇಶ್‌ ರೈನಾ, ಗೌರವ್‌ ಧಿಮಾನ್‌ರಂಥವರು ಪ್ರವರ್ಧಮಾನಕ್ಕೆ ಬಂದಿದ್ದರು.
ರಾಜ್ಯ ವಿವಿಧ ವಯೋಮಿತಿ ಲೀಗ್‌ಗಳೂ ಇಪ್ಪತ್ತು20 ಮಾದರಿಯಲ್ಲಿ ನಡೆಯುತ್ತವೆ. ಕೆಲವು ಕೆಎಸ್‌ಸಿಎ ನೋಂದಾಯಿತ ಕ್ಲಬ್‌ಗಳು ಖಾಸಗಿಯಾಗಿ ಇಪ್ಪತ್ತು20 ಟೂರ್ನಿ ನಡೆಸುತ್ತವೆ. ಹಾಗಾಗಿ, ಕೆಪಿಎಲ್‌ನ ಎಂಟು ತಂಡಗಳಲ್ಲಿರುವ ನೂರೈವತ್ತಕ್ಕೂ ಹೆಚ್ಚು ಆಟಗಾರರಲ್ಲಿ ಬಹುತೇಕರು ಈ ಮಾದರಿಗೆ ಪರಿಚಿತರು. ಆದರೆ, ಎಲ್ಲರಿಗೂ ತಮ್ಮ ಪ್ರಾವಿಣ್ಯವನ್ನು ಪ್ರದರ್ಶಿಸುವುದಕ್ಕೆ ಇದು ಹೊಸ ವೇದಿಕೆ.
ಕೆಪಿಎಲ್‌ ಪರಿಕಲ್ಪನೆ ಮೈತಳೆದಾಗ ಐಪಿಎಲ್‌ನಲ್ಲಾದಂತೆ ಚಿತ್ರನಟರು, ಕಾರ್ಪೋರೇಟ್‌ ಧಣಿಗಳು ಫ್ರಾಂಚೈಸಿ ಖರೀದಿಸುವ ನಿರೀಕ್ಷೆ ಇತ್ತು. ಆದರೆ, ಹಾಗಾಗಲೇ ಇಲ್ಲ. ಬದಲಿಗೆ ಬಿಡ್‌ನಲ್ಲಿ ಭಾಗವಹಿಸಿ ಯಶಸ್ವಿಯಾದವರೆಲ್ಲಾ ರಾಜಕಾರಣಿಗಳು, ಗಣಿ ಧಣಿಗಳು ಹಾಗೂ ಬಿಲ್ಡರ್‌ಗಳು.
ಬೆಂಗಳೂರಿನ ಎರಡು ತಂಡಗಳನ್ನು ಬ್ರಿಗೇಡ್‌ ಹಾಗೂ ಪುರವಂಕರ ಸಮೂಹಗಳು ಪಡೆದುಕೊಂಡರೆ, ಟ್ರೋಫಿ ಪ್ರಾಯೋಜಕತ್ವ ಮಂತ್ರಿ ಸಮೂಹದ ಪಾಲಾಯಿತು. ದೊಡ್ಡ ಕಟ್ಟಡಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುವುದು ಮಾತ್ರವಲ್ಲ, ತಮಗೆ ಕ್ರಿಕೆಟ್‌ ತಂಡ ಕಟ್ಟುವುದಕ್ಕೂ ಬರಲಿದೆ ಎಂಬುದನ್ನು ಈ ಬಿಲ್ಡರ್‌ಗಳು ನಿರೂಪಿಸಲು ಹೊರಟಿದ್ದಾರೆ. ಉತ್ತಮ ಪ್ರದರ್ಶನ ತೋರಿದರೆ, ಆಟಗಾರರ ಭವಿಷ್ಯ ಉಜ್ವಲವಾಗಲಿದೆ. ತಂಡ ಗೆದ್ದರೆ, ನಮ್ಮ ಭವಿಷ್ಯವೂ ಉಜ್ವಲವಾಗುತ್ತದೆ ಎಂದು ಮಲ್ನಾಡ್‌ ಗ್ಲಾಡಿಯೇಟರ್ಸ್‌ ತಂಡದ ಮಾಲಿಕ, ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಈ ಬಾರಿಯ ಕೆಪಿಎಲ್‌ ಬಗ್ಗೆ ಒಂದೇ ವಾಕ್ಯದಲ್ಲಿ ವಿವರಿಸುತ್ತಾರೆ.
ಐಪಿಎಲ್‌ ಹಾಗೂ ಇಪ್ಪತ್ತು20 ಕ್ರಿಕೆಟ್‌ನ ಪ್ರಧಾನ ಆಕರ್ಷಣೆ ಬಳುಕುವ ಚಿಯರ್‌ಲೀಡರ್ಸ್‌ ಲಲನೆಯರು. ಆದರೆ, ಕೆಪಿಎಲ್‌ನಲ್ಲಿ ಅಂಥ ಸುದ್ದಿಯೇನೂ ಇಲ್ಲ. ಬದಲಿಗೆ ಕೆಲವು ತಂಡಗಳು ಚಿತ್ರನಟಿಯರನ್ನು ಪ್ರಚಾರ ರಾಯಭಾರಿಗಳಾಗಿ ಹೊಂದಿವೆ. ದಾವಣಗೆರೆ ತಂಡಕ್ಕೆ ನಟಿ ಭಾವನಾ, ಮಂಗಳೂರು ತಂಡಕ್ಕೆ ಸಿಂಧು ಮೆನನ್‌ ಹಾಗೂ ಬೆಳಗಾವಿ ತಂಡಕ್ಕೆ ತೇಜಸ್ವಿನಿ ರಾಯಭಾರಿಗಳಾಗಿದ್ದಾರೆ.
ಕೆಎಸ್‌ಸಿಎ ಫ್ರಾಂಚೈಸಿಗಳ ಹರಾಜಿನಿಂದ 34 ಚಿಲ್ಲರೆ ಕೋಟಿ ಗಳಿಸಿದೆ. ವಿವಿಧ ಪ್ರಾಯೋಜಕತ್ವಗಳಿಂದ ಇನ್ನಷ್ಟು ಬರಲಿದೆ. ಟೂರ್ನಿಯನ್ನು ಯಶಸ್ವಿಯಾಗಿಸಿ, ಅಪನಂಬಿಕೆ ವ್ಯಕ್ತಪಡಿಸುತ್ತಿರುವವರಿಗೆ ಉತ್ತರ ನೀಡುವ ಜವಾಬ್ದಾರಿ ಕೆಎಸ್‌ಸಿಎ ಮೇಲಿದೆ. ಆಟಗಾರರಿಗೆ ಮೊದಲೇ ಹೇಳಿದಂತೆ ಇದೊಂದು ದೊಡ್ಡ ಅವಕಾಶ. ಕೆಲವು ಖ್ಯಾತನಾಮ ಆಟಗಾರರನ್ನು ಬಿಟ್ಟರೆ, ಉಳಿದವರೆಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದು ಕಡಿಮೆ. ರಾಜ್ಯದ ವಿವಿಧ ವಯೋಮಿತಿ ಲೀಗ್‌ಗಳಲ್ಲಿ ಆಡುವಾಗ ದೊಡ್ಡ ಶತಕವನ್ನೋ, 8-9 ವಿಕೆಟ್‌ಗಳನ್ನೋ ಕಬಳಿಸಿದರೆ ಮಾತ್ರ ಪತ್ರಿಕೆಗಳಲ್ಲಿ ಅವರ ಹೆಸರು, ಪುಟ್ಟ ಚಿತ್ರ ಪ್ರಕಟವಾಗುತ್ತದೆ. ಇಲ್ಲವಾದರೆ, ಫಲಿತಾಂಶಗಳ ರಾಶಿಯಲ್ಲಿ ಅವರ ಹೆಸರು ಹುಡುಕಬೇಕು. ಅಂಥ ಆಟಗಾರರಿಗೆ ಈಗ ಕೆಪಿಎಲ್‌ ಮೂಲಕ ಮನ್ನಣೆ ದೊರಕಿದೆ. ಅವರ ಆಟವನ್ನು ಜನ ಮನೆಮನೆಗಳಲ್ಲಿ ಟಿವಿ ವಾಹಿನಿ ಮೂಲಕ ನೇರ ಪ್ರಸಾರದಲ್ಲಿ ನೋಡುತ್ತಾರೆ. ಖಾಲಿ ಮೈದಾನದಲ್ಲಿ ಆಡುತ್ತಿದ್ದ ಆಟಗಾರರೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹತ್ತಾರುಸಾವಿರ ಪ್ರೇಕ್ಷಕರ ಎದುರು ಆಡುತ್ತಾರೆ. ಉತ್ತಮ ಪ್ರದರ್ಶನ ನೀಡಿದಷ್ಟೂ ಹೆಚ್ಚಿನ ಬಹುಮಾನಗಳ, ಅವಕಾಶಗಳ ಆಮಿಷವಿದೆ.
ಯಾವುದೇ ಕೆಲಸ ಮಾಡುವಾಗ ಅದರಿಂದ ಕಷ್ಟ-ನಷ್ಟ ಎರಡೂ ಇರುತ್ತವೆ. ದಿಗ್ಗಜ ಆಟಗಾರರು ಆತಂಕಪಟ್ಟಿರುವಂತೆ ಕೆಪಿಎಲ್‌ ನಿಂದಲೂ ವಿವಿಧ ರೀತಿಯಲ್ಲಿ ಅಡ್ಡ ಪರಿಣಾಮಗಳಾಗಬಹುದು. ಆದರೂ, ಕೆಪಿಎಲ್‌ ಕ್ರಾಂತಿಯಿಂದ ಕರ್ನಾಟಕ ಕ್ರಿಕೆಟ್‌ಗೆ ಒಟ್ಟಾರೆಯಾಗಿ ಒಳಿತಾಗಲಿದೆ ಎಂದು ಭಾವಿಸೋಣ.

No comments:

Post a Comment