Tuesday, September 1, 2009
ಮಲ್ಯ ಯಶಸ್ಸಿನ ಫಾರ್ಮುಲಾ
ವಿಜಯ್ ಮಲ್ಯ ಮ್ಯಾಜಿಕ್ ನಿಂದಾಗಿ ಚೊಚ್ಚಲ ಐಪಿಎಲ್‌ನಲ್ಲಿ ಕೊನೆಯಿಂದ 2ನೇ ಸ್ಥಾನ ಪಡೆದಿದ್ದ ರಾಯಲ್ ಚಾಲೆಂಜರ್ಸ್ ತಂಡ ಈ ವರ್ಷ ರನ್ನರ್‌ಅಪ್ ಸಾಧನೆ ಮಾಡಿತ್ತು. ಈಗ ಫಾರ್ಮುಲಾ-1ನಲ್ಲೂ ಅವರು ಇದೇ ಯಶಸ್ಸು ಪುನರಾವರ್ತಿಸಿದ್ದಾರೆ
ಕ್ರೀಡೆಯ ಮೂಲ ಉದ್ದೇಶ ಹೊಡೆದಾಟವಲ್ಲ. ವೈರತ್ವ ಅಲ್ಲ. ಪ್ರತಿಷ್ಠೆ, ಹಣ ಸಂಪಾದಿಸುವುದೂ ಅಲ್ಲ.
ಕ್ರೀಡೆಗಳ ಮೂಲ ಉದ್ದೇಶ ಮನರಂಜನೆ.
ಉಳಿದೆಲ್ಲವೂ ನಂತರ ಕ್ರೀಡೆಯ ಜೊತೆ ಗುರುತಿಸಿಕೊಂಡವು.
ಮಕ್ಕಳು ಆಡುವಾಗ ಅದರ ಹಿಂದೆ ಯಾವುದೇ ಉದ್ದೇಶ ಇರುವುದಿಲ್ಲ. ಕೇವಲ ಮನರಂಜನೆ ಮಾತ್ರ ಇರುತ್ತದೆ. ಹಿಂದೆಲ್ಲಾ ವಿವಿಧ ಆಟಗಳು ರಾಜ-ಮಹಾರಾಜರ ಮನರಂಜನೆಗಾಗಿ ನಡೆಯುತ್ತಿದ್ದವು. ಕ್ರಿಕೆಟ್, ಹಾಕಿ, ಚೆಸ್, ಕುಸ್ತಿ ಎಲ್ಲವೂ ಕಾಲಕ್ಷೇಪದ ವಿಧಾನಗಳಾಗಿದ್ದವು.
ಯಾವುದೇ ಕ್ರೀಡೆ ಬೆಳೆದಂತೆ ವೈವಿಧ್ಯತೆ ಮೈಗೂಡಿಸಿ ಕೊಳ್ಳುವುದು ಸಹಜ. ಇಂದಿನ ವೃತ್ತಿಪರ ಯುಗದಲ್ಲಿ ಕ್ರೀಡೆಯೆಂದರೆ ಒಂದು ಪ್ಯಾಕೇಜ್. ಅದರಲ್ಲಿ ಸ್ಪರ್ಧಾತ್ಮಕತೆ, ತೀವ್ರತೆ, ಆರ್ಥಿಕ ದೃಷ್ಟಿಕೋನ, ಮನರಂಜನೆ, ಗ್ಲಾಮರ್ ಎಲ್ಲವೂ ಅಡಕವಾಗಿರುತ್ತದೆ.
ಹೀಗಾಗಿ ಯಾವ ಕ್ರೀಡೆಯೂ ಇಂದು ಕೇವಲ ಕ್ರೀಡಾ ದೃಷ್ಟಿಕೋನದಿಂದ ನಡೆಯುವುದಿಲ್ಲ. ಅಲ್ಲಿ ಲಾಭದ ಉದ್ದೇಶ ಇದ್ದೇ ಇರುತ್ತದೆ. ಕ್ರಿಕೆಟ್, ಟೆನಿಸ್, ಫುಟ್‌ಬಾಲ್ ಯಾವುದೇ ಕ್ರೀಡೆಯ ವಿಷಯಕ್ಕೆ ಬಂದರೂ ಅಲ್ಲಿ ಡಾಲರ್‌ಗಳಿಗೆ ಮಹತ್ವ. ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟಿಕೊಂಡಿರುವುದೇ ದುಡ್ಡು ಮಾಡುವ ಸಲುವಾಗಿ. ಅಂಬಾನಿ, ಖಾನ್, ಜಿಂಟಾಗಳು ಐಪಿಎಲ್ ತಂಡ ಖರೀದಿಸಿರುವುದು ಕ್ರೀಡೆಯ ಮೇಲಿನ ಪ್ರೀತಿಯಿಂದಲ್ಲ; ದುಡ್ಡು ಮಾಡುವ ಸಲುವಾಗಿ.
ಆದರೆ, ಕೇಂದ್ರ ಸರ್ಕಾರ ವಿಪರೀತದ, ವಿಚಿತ್ರ ಹೇಳಿಕೆಗಳನ್ನು ನೀಡುವುದಕ್ಕೆ ಪ್ರಸಿದ್ಧ. ಅದೇ ರೀತಿ, ಫಾರ್ಮುಲಾ-1 ಕ್ರೀಡೆಯೇ ಅಲ್ಲ, ಬರೀ ಮನರಂಜನೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುವ ಮೂಲಕ ಭಾರತಕ್ಕೆ ಆ ಕ್ರೀಡೆ ಪ್ರವೇಶಿಸದಂತೆ ಅಡ್ಡಗಾಲಾಗಲು ಪ್ರಯತ್ನಿಸುತ್ತಿದೆ.
ಫಾರ್ಮುಲಾ-1 ಅಪಾಯಕಾರಿ ಹಾಗೂ ದುಬಾರಿ ಮನರಂಜನೆ ಎನ್ನುವುದು ಕ್ರೀಡಾ ಸಚಿವಾಲಯದ ಅಸಂಬದ್ಧ ವ್ಯಾಖ್ಯಾನ.
ಆದರೆ, ಒಂದಂತೂ ನಿಜ. ಫಾರ್ಮುಲಾ-1 ಕ್ರೀಡೆಯೇ ಅಲ್ಲ ಎನ್ನುವುದಾದರೆ, ಯಾವ ಕ್ರೀಡೆಗಳೂ ಕ್ರೀಡೆಗಳಾಗಿ ಉಳಿದಿರುವುದಿಲ್ಲ.
2011ರಲ್ಲಿ ಭಾರತದಲ್ಲಿ ಉದ್ದೇಶಿಸಿದಂತೆ ಫಾರ್ಮುಲಾ-1 ಸ್ಪರ್ಧೆ ನಡೆಯುವುದೋ ಇಲ್ಲವೋ, ಒಟ್ಟಾರೆ ಭಾರತದಲ್ಲಿ ಮೋಟರ್ ಸ್ಪೋರ್ಟ್ ಬಗ್ಗೆ ಒಲವುಳ್ಳವರೆಲ್ಲರೂ ಹೆಮ್ಮೆ ಪಡುವಂಥ ಸಾಧನೆಯನ್ನು ವಿಜಯ್ ಮಲ್ಯ ಮಾಡಿದ್ದಾರೆ. ಫೋರ್ಸ್ ಇಂಡಿಯಾ ತಂಡಕ್ಕೆ ಫಾರ್ಮುಲಾ-1 ಕ್ರೀಡೆಯ ಅಗ್ರಮಾನ್ಯ ತಂಡಗಳ ಯಾದಿಯಲ್ಲಿ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ.
ಭಾನುವಾರ ಬೆಲ್ಜಿಯಂ ಗ್ರ್ಯಾನ್ ಪ್ರೀಯಲ್ಲಿ ಗಿಯಾನ್‌ಕಾರ್ಲೊ ಫಿಸಿಕೆಲ 2ನೇ ಸ್ಥಾನ ಪಡೆಯುವ ಮೂಲಕ ಫೋರ್ಸ್ ಇಂಡಿಯಾ ತಂಡಕ್ಕೆ ಚೊಚ್ಚಲ ಫಾರ್ಮುಲಾ-1 ಅಂಕ ಕೊಡಿಸಿದರು. ಇಲ್ಲಿ ನಿಜವಾಗಿ ವಿಜಯ ಸಾಧಿಸಿದವರು ವಿಜಯ್ ಮಲ್ಯ.
ಏಕೆಂದರೆ, ಅವರು ಎರಡು ವರ್ಷದ ಕೆಳಗೆ ಜೀರ್ಣಾವಸ್ಥೆಯಲ್ಲಿದ್ದ ಸ್ಪೈಕರ್ ಎಫ್1 ತಂಡವನ್ನು ನೂರಾರು ಕೋಟಿ ಸುರಿದು ಖರೀದಿ ಮಾಡಿದಾಗ, ಜನ ಇವರಿಗೆಲ್ಲೋ ಹುಚ್ಚು ಎಂದು ನಕ್ಕಿದ್ದರು. 2008ರ ಋತುವಿನುದ್ದಕ್ಕೂ ಫೋರ್ಸ್ ಇಂಡಿಯಾ ತಂಡ ಕೊನೆಯಲ್ಲಿ ಸ್ಥಾನ ಪಡೆಯುತ್ತಿದ್ದಾಗ ದುಡ್ಡು ದಂಡ ಎಂದು ಟೀಕಿಸಿದ್ದರು.
ಹಾಗೆ ನೋಡಿದರೆ, ಫಾರ್ಮುಲಾ-1ನಲ್ಲಿ ಮಲ್ಯ ಪವಾಡ ಮಾಡುವುದು ಅಸಾಧ್ಯ ಎಂಬ ಸ್ಥಿತಿಯೇ ಇತ್ತು. ಭಾರತದ ಕೋಟ್ಯಧಿಪತಿಯಾದರೂ, ಫಾರ್ಮುಲಾ-1ನ ಅಗ್ರಮಾನ್ಯ ತಂಡಗಳ ಎದುರು ಇವರು ಹೂಡಿದ್ದ ಬಂಡವಾಳ ಏನೇನೂ ಸಾಲದಾಗಿತ್ತು. ಫೆರಾರಿ, ಮೆಕ್ಲಾರೆನ್, ರೆನಾಲ್ಟ್‌ನಂಥ ಅಗ್ರಮಾನ್ಯ ತಂಡಗಳು ಖರ್ಚುಮಾಡುವ ಹಣದ ಎದುರು ಮಲ್ಯ ಹೂಡಿದ್ದ ಹಣ ಭಾರೀ ಅಲ್ಪ ಪ್ರಮಾಣದ್ದಾಗಿತ್ತು. ಇಷ್ಟು ಸೀಮಿತ ಸಂಪನ್ಮೂಲ ಇರಿಸಿಕೊಂಡು ಚಾಂಪಿಯನ್ ತಂಡಗಳನ್ನು ಸರಿಗಟ್ಟಬಲ್ಲ ಕಾರು ಸಿದ್ಧಪಡಿಸುವುದು ಅಸಾಧ್ಯ ಎನ್ನುವುದೇ ನಂಬಿಕೆಯಾಗಿತ್ತು.
ಆದರೆ, ಮಲ್ಯ ಧೃತಿಗೆಡಲಿಲ್ಲ. 2008ರ ಋತುವಿನ ಬಳಿಕ ಅವರು ಫೆರಾರಿ ಜೊತೆಗಿನ ತಾಂತ್ರಿಕ ಸಂಬಂಧ ಕಡಿದುಕೊಂಡು ಮೆಕ್ಲಾರೆನ್ ಜೊತೆ ಒಪ್ಪಂದ ಮಾಡಿಕೊಂಡಾಗಲೇ ಅವರ ಹೆಜ್ಜೆ ಸ್ಪಷ್ಟವಾಗಿತ್ತು. ಏರೋ ಡೈನಾಮಿಕ್ಸ್ ವಿಷಯದಲ್ಲಿ ನಾಟಕೀಯ ಬದಲಾವಣೆಗಳಾದ 2009ರ ಋತುವಿನಲ್ಲಿ ಮಲ್ಯ ಅದಾಗಲೇ ಮುಂದಾಲೋಚನೆಯಿಂದ ತಮ್ಮ ಕಾರುಗಳ ಏರೋ ಡೈನಾಮಿಕ್ಸ್ ವ್ಯವಸ್ಥೆ ಸುಧಾರಿಸಲು ಯತ್ನ ಆರಂಭಿಸಿದ್ದರು. 2008ಕ್ಕೆ ಹೋಲಿಸಿದರೆ, ಈ ವರ್ಷ ಮಲ್ಯ ಯೋಜನೆ ಫಲ ಕೊಡಲಾರಂಭಿಸಿತ್ತು. ತಂಡದ ಇಬ್ಬರೂ ಚಾಲಕರು ಹೆಚ್ಚು ರೇಸ್‌ಗಳನ್ನು ಪೂರ್ಣ ಗೊಳಿಸಿದ್ದರು. ಕೆಲವು ರೇಸ್‌ಗಳಲ್ಲಿ ಅಂಕ ಸಾಧನೆಗೆ ಅತೀ ಹತ್ತಿರ ಆಗಮಿಸಿದ್ದರು. ಕೊನೆಗೂ ಬೆಲ್ಜಿಯಂ ಜಿಪಿಯಲ್ಲಿ ಭಾನುವಾರ ಪವಾಡ ಸಂಭವಿಸಿತು.
ಮಲ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಇಂಥದ್ದೇ ಪವಾಡ ಮಾಡಿದ್ದರು. ಚೊಚ್ಚಲ ಐಪಿಎಲ್‌ನಲ್ಲಿ ಕೊನೆಯಿಂದ 2ನೇ ಸ್ಥಾನ ಪಡೆದಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆದ 2ನೇ ಋತುವಿನಲ್ಲಿ ಫೈನಲ್ ತಲುಪುವಂತೆ ಮಾಡಿದ್ದರು. ಕಳಪೆ ತಂಡವನ್ನು ಒಂದೇ ವರ್ಷದ ಅವಧಿಯಲ್ಲಿ ಅತ್ಯುತ್ತಮ ತಂಡವಾಗಿ ರೂಪಿಸುವ ಅವರ ಮಾಂತ್ರಿಕ ಸ್ಪರ್ಶ ಪ್ರಶಂಸಾರ್ಹ. ಭಾರತದಲ್ಲಿ ಜೀರ್ಣಾವಸ್ತೆ ಯಲ್ಲಿರುವ ಹಾಕಿ, ಫುಟ್‌ಬಾಲ್‌ನಂಥ ಕ್ರೀಡೆಗಳ ಒಕ್ಕೂಟಗಳೂ ಮಲ್ಯ ಬುದ್ಧಿಮತ್ತೆಯ ಲಾಭ ಪಡೆದರೆ ತಪ್ಪೇನಿಲ್ಲ.
ಆರ್‌ಸಿಬಿ ಐಪಿಎಲ್ ತಂಡದಲ್ಲೂ ಅವರು ತಂಡದ ಸಂರಚನೆಯಲ್ಲಿ ಬದಲಾವಣೆ ಮಾಡಿದ್ದರು. ಸಿಇಒ, ನಾಯಕ, ಕೋಚ್, ಕೆಲವು ಆಟಗಾರರ ಮಾರ್ಪಾಡು ನಡೆದಿತ್ತು. ರಣತಂತ್ರಗಳಲ್ಲಿ ಭಾರೀ ಬದಲಾವಣೆಯಾಗಿತ್ತು. ಇದರ ಪರಿಣಾಮವಾಗಿ ಕುಂಬ್ಳೆ ನಾಯಕತ್ವದ ತಂಡ ರನ್ನರ್‌ಅಪ್ ಸಾಧನೆ ಮಾಡಿತ್ತು.
ಫಾರ್ಮುಲಾ-1ನಲ್ಲೂ ಮಲ್ಯ ಇದೇ ಯಶಸ್ಸನ್ನು ಪುನರಾ ವರ್ತಿಸಿದ್ದಾರೆ. ಇನ್ನು ಮುಂದೆ ಯಾರೊಬ್ಬರೂ ಫೋರ್ಸ್ ಇಂಡಿಯಾ ಕಳಪೆ ತಂಡ ಎಂದು ಟೀಕಿಸಲು ಸಾಧ್ಯವಿಲ್ಲ. ಭಾನುವಾರ 8 ಅಂಕ ಗಳಿಸಿರುವ ತಂಡ ಈ ಋತುವಿನಲ್ಲಿ ಕೊನೆಯ ಸ್ಥಾನ ಪಡೆಯದೇ ಹೋದರೆ (ಅದು ಸಾಧ್ಯವೂ ಇಲ್ಲ) ಹೆಚ್ಚಿನ ಆರ್ಥಿಕ ಲಾಭಗಳೂ ಆಗಲಿವೆ. ಮುಂದಿನ ಋತುವಿನಲ್ಲಿ ರೇಸ್‌ಗಳಿಗಾಗಿ ತಂಡದ ಪ್ರಯಾಣ ವೆಚ್ಚವನ್ನು ಮಲ್ಯ ಭರಿಸಬೇಕಾಗುವುದಿಲ್ಲ. ಜೊತೆಗೆ, ಟಿವಿ ನೇರ ಪ್ರಸಾರ ಮೊತ್ತದ ಪಾಲು ಹಲವು ಕೋಟಿಗಳ ರೂಪದಲ್ಲಿ ತಂಡಕ್ಕೆ ಸಿಗಲಿದೆ. ಅಲ್ಲಿಗೆ ಆರ್ಥಿಕವಾಗಿ ತಂಡ ಹೆಚ್ಚು ಬಲಾಢ್ಯ ವಾಗಲಿದೆ.
ಸದ್ಯದ ಸವಾಲೆಂದರೆ, ಫೋರ್ಸ್ ಇಂಡಿಯಾ ತಂಡ ಬೆಲ್ಜಿಯಂನಲ್ಲಿ ಗಳಿಸಿರುವ ಗೌರವವನ್ನು ವರ್ಷದ ಉಳಿದ ಐದು ರೇಸ್‌ಗಳಲ್ಲೂ ಉಳಿಸಿಕೊಳ್ಳುವುದು. ಈ ಸಾಧನೆ ಆಕಸ್ಮಿಕವಲ್ಲ ಎಂದು ನಿರೂಪಿಸಬೇಕಿದೆ.
ತಂಡದ ಇಷ್ಟೆಲ್ಲಾ ಸಾಧನೆಯ ರೂವಾರಿಯಾದ ಇಟಲಿಯ ಅನುಭವಿ ಚಾಲಕ ಗಿಯಾನ್ ಕಾರ್ಲೊ ಫಿಸಿಕೆಲ ಫೆರಾರಿ ತಂಡಕ್ಕೆ ತಾತ್ಕಾಲಿಕ ಒಪ್ಪಂದದ ಮೇರೆಗೆ ವಲಸೆ ಹೋಗುವ ಸಾಧ್ಯತೆ ಇದೆ. ಭಾನುವಾರದ ರೇಸ್ ಬಳಿಕ ಸ್ವತಃ ಫಿಸಿಕೆಲ ಈ ವದಂತಿ ನಿರಾಕರಿಸಿದ್ದ ರಾದರೂ, ಅದೇ ನಿಜ ಎನ್ನುವ ವರದಿಗಳಿವೆ. ಆದರೆ, ಫೋರ್ಸ್ ಇಂಡಿಯಾದಲ್ಲಿ ಮುಖ್ಯ ಚಾಲಕ ರಾಗಿರುವ ಅವರು, ಫೆರಾರಿ ತಂಡದಲ್ಲಿ ಗಾಯಗೊಂಡಿರುವ ಫೆಲಿಪ್ ಮಸ್ಸಾ ಬದಲಿಗೆ ಸ್ಥಾನ ತುಂಬಲು ಹೋಗು ವರೇ ಎನ್ನುವುದು ಪ್ರಶ್ನೆ. ಶ್ರೀಮಂತರ ಮನೆಯಲ್ಲಿ ಜೀತದ ಆಳಾಗಿ ವಾಸ ಮಾಡು ವುದಕ್ಕಿಂತ ತನ್ನ ಮನೆಯಲ್ಲಿ ಗಂಜಿ ಉಂಡರೂ ಯಜಮಾನನಾಗಿರುವುದು ಮೇಲು ಎಂಬ ಸತ್ಯ ಅರ್ಥ ಮಾಡಿಕೊಂಡರೆ, ಫಿಸಿಕೆಲ ವಲಸೆ ಹೋಗುವುದಿಲ್ಲ. ಆದರೆ, ಹಣದ ಮುಂದೆ ಎಲ್ಲರೂ ಗುಲಾಮರೇ.
ಫಿಸಿಕೆಲ ಇಂಥ ಆಮಿಷದಿಂದ ಯಾವ ರೀತಿ ಹೊರ ಬರುವರೋ ಕಾದು ನೋಡಬೇಕು.
Subscribe to:
Post Comments (Atom)
No comments:
Post a Comment