Tuesday, August 25, 2009
ರಾಗಲಹರಿ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಇಂಗ್ಲೆಂಡ್ ಸಂಭ್ರಮಿಸುತ್ತಿದೆ. ಆಸ್ಟ್ರೇಲಿಯಾ ದುಃಖಿಸುತ್ತಿದೆ.
ಸರಣಿ ಪೂರ್ವ ನಿರೀಕ್ಷೆಯಂತೆ ಆಶಸ್ ಸರಣಿ ಇಂಗ್ಲೆಂಡ್ ಪಾಲಾಗಿದೆ.
ಆಶಸ್ ಐತಿಹಾಸಿಕ ಮಹತ್ವವುಳ್ಳ, ಶ್ರೀಮಂತ ಪರಂಪರೆಯುಳ್ಳ ಸರಣಿ. ಕ್ರಿಕೆಟ್‌ನ ಬೇರಾವುದೇ ಸರಣಿಗಳಿಗಿಂತ ವಿಸ್ತಾರವಾದ, ಹಿರಿದಾದ ಪರಂಪರೆಯನ್ನು ಅದು ಹೊಂದಿದೆ. ಹಾಗಾಗಿ, ಉಭಯ ರಾಷ್ಟ್ರಗಳು ಈ ಸರಣಿಯಲ್ಲಿ ಪ್ರಾಣ ಪಣವಾಗಿಟ್ಟು ಆಡುವುದು ಸಹಜ.
ಆಶಸ್ ಸರಣಿ, ಕ್ರಿಕೆಟ್‌ನ ಮಹಾಮಹಾ ಸಂಘರ್ಷಗಳಿಗೆ ವೇದಿಕೆಯಾಗಿದೆ. ಅದೆಷ್ಟೋ ಐತಿಹಾಸಿಕ ಪ್ರದರ್ಶನಗಳು, ಅವಿಸ್ಮರಣೀಯ ಗೆಲುವುಗಳು, ವಿಸ್ಮಯ ಹುಟ್ಟಿಸುವ ಬ್ಯಾಟಿಂಗ್, ಬೌಲಿಂಗ್ ಸಾಹಸಗಳು ಸರಣಿಯಲ್ಲಿ ದಾಖಲಾಗಿವೆ. ಅಂಥ ಪೂರ್ವ ಸರಣಿಗಳಿಗೆ ಹೋಲಿಸಿದರೆ, ಈ ಬಾರಿಯ ಆಶಸ್ ಸಪ್ಪೆ. ಹಾಗೆಂದು ಸರಣಿಯಲ್ಲಿ ಪೈಪೋಟಿ ಇರಲೇ ಇಲ್ಲವೆಂದೇನಲ್ಲ. ಇಂಗ್ಲೆಂಡ್ 2 ಹಾಗೂ ಆಸೀಸ್ 1 ಟೆಸ್ಟ್‌ನಲ್ಲಿ ಜಯಿಸಿದವು. ಚೊಚ್ಚಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಸೋಲಿನ ಸುಳಿಯಿಂದ ಡ್ರಾ ಮಾಡಿಕೊಂಡರೆ, 3ನೇ ಟೆಸ್ಟ್‌ನಲ್ಲಿ ಆಸೀಸ್ ಸೋಲು ತಪ್ಪಿಸಿಕೊಂಡು ಡ್ರಾ ಸಮಾಧಾನ ಪಟ್ಟುಕೊಂಡಿತ್ತು. ಆದರೂ, ಆಶಸ್ ಎಂದೊಡನೆ ಕಣ್ಮುಂದೆ ಸುಳಿಯುವ ಮಹಾಮಹಾ ಪ್ರದರ್ಶನಗಳ ವೈಭವ ಈ ಸರಣಿಯಲ್ಲಿ ಇರಲಿಲ್ಲ.
ಪ್ರತೀ ಬಾರಿ ಆಶಸ್‌ಗೆ ಮುನ್ನ ಆಸ್ಟ್ರೇಲಿಯಾ ನಿಚ್ಚಳ ಫೇವರಿಟ್ ಆಗಿರುತ್ತಿತ್ತು. ಆದರೆ, ಈ ಬಾರಿ ಉಭಯ ತಂಡಗಳ ಬಲಾಬಲ ಹೆಚ್ಚುಕಡಿಮೆ ಸಮಾನವಾಗಿತ್ತು. ಆತಿಥೇಯ ಇಂಗ್ಲೆಂಡ್ ತಂಡದ ಗೆಲುವಿನ ಬಗ್ಗೆ ಈ ಬಾರಿ ಹೆಚ್ಚು ನಿರೀಕ್ಷೆಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಎರಡೂ ತಂಡಗಳು ಖ್ಯಾತನಾಮರ ಕೊರತೆಯಿಂದ ಬಲಗುಂದಿದ್ದವು.
ಹಿಂದಿನ ಆಶಸ್ ಸರಣಿಗಳಲ್ಲಿ ಆಡಿದ್ದ ಶೇನ್ ವಾರ್ನ್, ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ಆಡಂ ಗಿಲ್‌ಕ್ರಿಸ್ಟ್, ಗ್ಲೆನ್ ಮೆಕ್‌ಗ್ರಾತ್, ಡೇಮಿಯನ್ ಮಾರ್ಟಿನ್ ಮೊದಲಾದವರು ಆಶಸ್ ತಂಡದಲ್ಲಿರಲಿಲ್ಲ. ಇಂಗ್ಲೆಂಡ್ ತಂಡ ಕೊನೆಯ 3 ಟೆಸ್ಟ್‌ಗಳಲ್ಲಿ ಗಾಯಾಳು ಕೆವಿನ್ ಪೀಟರ್ಸೆನ್ ಸೇವೆ ಕಳೆದುಕೊಂಡಿತು. ಗಾಯದ ಜೊತೆ ಗುದ್ದಾಡುತ್ತಲೇ ಕಣದಲ್ಲಿದ್ದ ಆಂಡ್ರ್ಯೂ ಫ್ಲಿಂಟಾಫ್ ಅರ್ಧ ಸಾಮರ್ಥ್ಯದೊಂದಿಗೆ ಆಡಿ ದ್ದರು. ಉಭಯ ತಂಡಗಳು ಸ್ಥಿರವಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ರಮಾಂಕ ಹೊಂದಿರಲಿಲ್ಲ. ನೆಲೆಗೊಂಡ ಆರಂಭಿಕರಿಲ್ಲದೆ ತಂಡಗಳು ಕಣಕ್ಕಿಳಿ ದಿದ್ದವು. ಆಸೀಸ್ ಫಿಲ್ ಹ್ಯೂಸ್ ಜಾಗದಲ್ಲಿ ಬಹು ಪಯೋಗಿ ಶೇನ್ ವ್ಯಾಟ್ಸನ್‌ರ ಪ್ರಯೋಗ ನಡೆಸ ಬೇಕಾಯಿತು. ಇಂಗ್ಲೆಂಡ್ ರವಿ ಬೊಪಾರ ಮೇಲಿಟ್ಟ ನಂಬಿಕೆ ಫಲ ಕೊಡಲಿಲ್ಲ. ಅಲ್ಲಿಯೂ ಪ್ರಯೋಗಳು ನಡೆದವು. ಆಸೀಸ್ ಬಳಗದಲ್ಲಿ ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್ ಮತ್ತು ಸ್ವಲ್ಪಮಟ್ಟಿಗೆ ಸೈಮನ್ ಕ್ಯಾಟಿಚ್ ಮಾತ್ರ ಅನುಭವಿಗಳೆನಿಸಿದ್ದರೆ, ಇಂಗ್ಲೆಂಡ್ ಬಳಗದಲ್ಲಿ ಕೆಪಿ ನಿರ್ಗಮನದ ಬಳಿಕ ಉಳಿದು ಕೊಂಡವರು ನಾಯಕ ಸ್ಟ್ರಾಸ್ ಮತ್ತು ಕಾಲಿಂಗ್ ವುಡ್ ಮಾತ್ರ. ಫ್ಲಿಂಟಾಫ್ ಸರಣಿ ಪೂರ್ತಿ ಅರೆ-ಬರೆ ಆಟವಾಡಿದರೇ ಹೊರತು ಬ್ಯಾಟ್ಸ್‌ಮನ್ ಆಗಿ ಸಮಯಕ್ಕೊದಗಲಿಲ್ಲ.
ಬೌಲಿಂಗ್ ವಿಭಾಗದಲ್ಲಿ ಉಭಯ ನಾಯಕರು ಅನುಭವಿಸಿದ ಗೋಳು ಹೇಳತೀರದು. ಗಾಯಾಳು ಬ್ರೆಟ್ ಲೀ ಕೊನೆಗೂ ಆಶಸ್‌ಗೆ ಸಿಗಲೇ ಇಲ್ಲ. ಅಲ್ಲಿಗೆ ಪೂರ್ಣ ಐದು ಟೆಸ್ಟ್‌ಗಳಲ್ಲಿ ಆಸೀಸ್ ಫಾರ್ಮ್ ಕಳೆದುಕೊಂಡ ಮಿಚೆಲ್ ಜಾನ್ಸನ್ ನೇತೃತ್ವದಲ್ಲಿ ಹೆಣಗಬೇಕಾಯಿತು. ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್‌ನ 20 ವಿಕೆಟ್ ಕಬಳಿಸುವ ಸಾಮರ್ಥ್ಯ ಸ್ಟುವರ್ಟ್ ಕ್ಲಾರ್ಕ್, ಪೀಟರ್ ಸಿಡಲ್, ಬೆನ್ ಹಿಲ್ಫೆನ್‌ಹಾಸ್‌ರನ್ನು ಒಳಗೊಂಡ ಆಸ್ಟ್ರೇಲಿಯಾದ ಬೌಲಿಂಗ್ ಪಡೆಯಲ್ಲಿರಲಿಲ್ಲ. ತಂಡ ನಾಥನ್ ಹಾರಿಜ್ ರೂಪದಲ್ಲಿ ತಜ್ಞ ಸ್ಪಿನ್ನರ್ ಹೊಂದಿದ್ದರೂ, ಅವರ ಸಾಮರ್ಥ್ಯದ ಮೇಲೆ ನಾಯಕ ಪಾಂಟಿಂಗ್‌ಗೇ ವಿಶ್ವಾಸವಿರಲಿಲ್ಲ.
ಹೆಡಿಂಗ್ಲೆಯಲ್ಲಿ ನಡೆದ 4ನೇ ಟೆಸ್ಟ್ ಮಾತ್ರ ಇದಕ್ಕೆ ಅಪವಾದ. ಇಂಗ್ಲೆಂಡ್ ತಂಡದ್ದೂ ಇದೇ ಹಣೆಬರಹ. ಬೌಲಿಂಗ್ ಕ್ರಮಾಂಕದಲ್ಲಿ ಯಾರೂ ಖ್ಯಾತನಾಮರಿರಲಿಲ್ಲ. ಫ್ಲಿಂಟಾಫ್ ಲಾರ್ಡ್ಸ್ ಗೆಲುವಿನಲ್ಲಿ ರೂವಾರಿಯಾದರು. ಉಳಿದಂತೆ ಜೇಮ್ಸ್ ಆಂಡರ್‌ಸನ್, ಸ್ಟುವರ್ಟ್ ಬ್ರಾಡ್, ಗ್ರೇಮ್ ಆನಿಯನ್ಸ್ ಹಾಗೂ ಗ್ರೇಮ್ ಸ್ವಾನ್‌ರನ್ನು ತಂಡ ನೆಚ್ಚಿಕೊಳ್ಳಬೇಕಾಯಿತು.
ಇಡೀ ಸರಣಿಯಲ್ಲಿ ದಾಖಲಾಗಿದ್ದು ಕೇವಲ 10 ಶತಕಗಳು. ಅದರಲ್ಲಿ ವಿಜೇತ ಇಂಗ್ಲೆಂಡ್ ಪರ 2 ಶತಕ ಮಾತ್ರ. ಲಾರ್ಡ್ಸ್‌ನಲ್ಲಿ ಆಂಡ್ರ್ಯೂ ಸ್ಟ್ರಾಸ್ ಶತಕ ಬಾರಿಸಿದರೆ, ಅಂತಿಮ ಟೆಸ್ಟ್‌ನಲ್ಲಿ ಜೊನಾಥನ್ ಟ್ರಾಟ್ ಚೊಚ್ಚಲ ಪಂದ್ಯದಲ್ಲಿ ಶತಕದ ಸಾಧನೆ ಮಾಡಿದರು. ಅತ್ತ ಆಸ್ಟ್ರೇಲಿಯಾ ಪರ 8 ಶತಕ ದಾಖಲಾಯಿತು. ಇದರಲ್ಲಿ 4 ಶತಕಗಳನ್ನು ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪಾಂಟಿಂಗ್, ಮಾರ್ಕಸ್ ನಾರ್ಥ್, ಕ್ಯಾಟಿಚ್ ಮತ್ತು ಹ್ಯಾಡಿನ್ ಬಾರಿಸಿದ್ದರು. ಆದರೆ, ಈ ಟೆಸ್ಟ್ ಡ್ರಾ ಆಯಿತು. ಮೈಕೆಲ್ ಕ್ಲಾರ್ಕ್ 2 ಶತಕ ಬಾರಿಸಿದರೂ, ಒಂದರಲ್ಲಿ ಇಂಗ್ಲೆಂಡ್ ಜಯಿಸಿತು. ಇನ್ನೊಂದು ಡ್ರಾ ಆಯಿತು. 4ನೇ ಟೆಸ್ಟ್‌ನಲ್ಲಿ ನಾರ್ಥ್ ಬಾರಿಸಿದ ಶತಕ ಮಾತ್ರ ಆಸೀಸ್‌ಗೆ ಇನಿಂಗ್ಸ್ ಮತ್ತು 80 ರನ್ ಜಯ ಕೊಡಿಸಿತು. ಅಂತಿಮ ಟೆಸ್ಟ್‌ನಲ್ಲಿ ಹಸ್ಸೆ ಶತಕ ವ್ಯರ್ಥವಾಯಿತು.
ಒಟ್ಟಿನಲ್ಲಿ ಇದು ಶ್ರೇಷ್ಠ ಆಟಗಾರರು ಒಳಗೊಂಡ ಶ್ರೇಷ್ಠ ಸರಣಿ ಎಂದು ಹಾಡಿಹೊಗಳಲು ಸಾಧ್ಯವಾಗದು. ಆದರೆ, ಹಲವು ಉದಯೋನ್ಮುಖ ಆಟಗಾರರು ಈ ಸರಣಿಯಲ್ಲಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾ ಸಂಜಾತ ಜೊನಾಥನ್ ಟ್ರಾಟ್ ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಬಾರಿಸಿದರೆ, ಸ್ಟುವರ್ಟ್ ಬ್ರಾಡ್ ಆಲ್ರೌಂಡರ್ ಆಗಿ ಮಾಗುತ್ತಿರುವುದನ್ನು ನಿರೂಪಿಸಿದರು. ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮತ್ತೋರ್ವ ಆಂಡ್ರ್ಯೂ ಫ್ಲಿಂಟಾಫ್ ಆಗುವ ಎಲ್ಲಾ ಲಕ್ಷಣಗಳಿವೆ. ರವಿ ಬೊಪಾರ ಟೆಸ್ಟ್ ಹಂತದಲ್ಲಿ ಇನ್ನಷ್ಟು ಪಳಗಬೇಕು. ಆಸೀಸ್ ಪರ ಮಾರ್ಕಸ್ ನಾರ್ಥ್ 2 ಶತಕಗಳ ಮೂಲಕ ಗಮನ ಸೆಳೆದರು. ಬ್ರಾಡ್ ಹ್ಯಾಡಿನ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ.
ಆಸೀಸ್ ನಾಯಕ ರಿಕಿ ಪಾಂಟಿಂಗ್ 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಆಶಸ್ ಆಡುವ ಇಚ್ಛೆ ಹೊಂದಿದ್ದಾರೆ. ಆದರೆ, ಹಾಲಿ ಸೋಲಿನ ಹಿನ್ನೆಲೆಯಲ್ಲಿ ಅವರು ಅಷ್ಟು ದೂರ ಸಾಗುವುದು ಅನುಮಾನ. ಬಹುಶಃ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಸಾಧನೆ ನಾಯಕರಾಗಿ ಪಾಂಟಿಂಗ್‌ರ ಭವಿಷ್ಯ ನಿರ್ಧರಿಸಬಹುದು.
ನಾಯಕ ಆಂಡ್ರ್ಯೂ ಸ್ಟ್ರಾಸ್ ಹಾಲಿ ಸರಣಿಯಲ್ಲಿ ಗರಿಷ್ಠ 474 ರನ್ ಬಾರಿಸುವ ಮೂಲಕ ಮಾದರಿ ಆಟವಾಡಿ ಇಂಗ್ಲೆಂಡ್‌ಗೆ ಗೆಲುವು ಕೊಡಿಸಿದರು. ಆದರೂ, ಈ ಸರಣಿಯಲ್ಲಿ 440ಕ್ಕಿಂತ ಹೆಚ್ಚು ರನ್ ಗಳಿಸಿದವರು ಸ್ಟ್ರಾಸ್ ಮತ್ತು ಆಸೀಸ್ ಉಪನಾಯಕ ಮೈಕೆಲ್ ಕ್ಲಾರ್ಕ್ (474) ಮಾತ್ರ. ಐದು ಟೆಸ್ಟ್‌ಗಳ 17 ಇನಿಂಗ್ಸ್‌ಗಳಲ್ಲಿ 500ಕ್ಕಿಂತ ಅಧಿಕ ಮೊತ್ತ ದಾಖಲಾಗಿದ್ದು ಒಮ್ಮೆ ಮಾತ್ರ (ಆಸೀಸ್ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 6ಕ್ಕೆ674 ರನ್).
ಇನ್ನು ಆಂಡ್ರ್ಯೂ ಫ್ಲಿಂಟಾಫ್ ಟೆಸ್ಟ್ ಕ್ರಿಕೆಟ್‌ನಿಂದ ದೊಡ್ಡ ರೀತಿಯಲ್ಲಿ ನಿರ್ಗಮಿಸಿದರು. 2005ರಲ್ಲಿ ಇಂಗ್ಲೆಂಡ್ ಆಶಸ್ ಗೆಲುವಿನ ರೂವಾರಿಯಾಗಿದ್ದ ಫ್ಲಿಂಟಾಫ್ ಈ ಬಾರಿ ಅಂಥ ಸಾಧನೆಯ ಪುನರಾವರ್ತನೆಯ ಸಾಧನೆ ಮಾಡದಿದ್ದರೂ, ಅವರ ಸ್ಫೂರ್ತಿಯ ಪ್ರಭಾವ ತಂಡದ ಮೇಲಿತ್ತು. ನಿರಂತರಗಾಯಗಳಿಂದ ಬೇಸತ್ತು 2ನೇ ಟೆಸ್ಟ್ ಸಂದರ್ಭದಲ್ಲೇ ಇದೇ ತಮ್ಮ ಕೊನೆಯ ಸರಣಿ ಎಂದು ಘೊಷಿಸಿದ್ದ ಫ್ರೆಡ್ಡಿ, ಕೊನೆಗೂ ಆಶಸ್ ಗೆದ್ದು ಸವಿನೆನಪುಗಳೊಂದಿಗೆ ಟೆಸ್ಟ್ ತೊರೆಯುವ ಕನಸು ನನಸು ಮಾಡಿಕೊಂಡರು.
ಇನ್ನು, ತಂಡ ಹಾಗೂ ಸ್ಪರ್ಧೆಯ ಗುಣಮಟ್ಟ ಹೇಗೇ ಇದ್ದರೂ, ಆಶಸ್ ಸರಣಿಯ ಮಹತ್ವದಲ್ಲೇನೂ ಕಡಿಮೆಯಾಗುವುದಿಲ್ಲ. ಆ ಕಾರಣಕ್ಕಾಗಿ ಇಂಗ್ಲೆಂಡ್ ತಂಡ ಇದು ಮತ್ತೊಂದು ಇತಿಹಾಸ ಎಂದೇ ಭಾವಿಸುತ್ತದೆ. ಆಸ್ಟ್ರೇಲಿಯಾ ದೊಡ್ಡ ಮುಖಭಂಗ ಎಂದು ಕೊರಗುತ್ತದೆ. ಈ ಗೆಲುವಿನಿಂದ ಆಸ್ಟ್ರೇಲಿಯಾ 1ರಿಂದ 4ನೇ ಶ್ರ್ರೇಯಾಂಕಕ್ಕೆ ಕುಸಿದಿರಬಹುದು. ಆದರೆ, ಇಂಗ್ಲೆಂಡ್ 5ನೇ ಶ್ರೇಯಾಂಕದಲ್ಲೇ ಉಳಿದಿದೆ.
ಆ ಅರ್ಥದಲ್ಲಿ ಹೇಳಬೇಕೆಂದರೆ, ಆಸ್ಟ್ರೇಲಿಯಾ ಆಶಸ್ ಸೋತಿದ್ದರಿಂದಾಗಿ ನಿಜವಾಗಿ ಗೆದ್ದಿರುವುದು ಅಗ್ರ ಶ್ರೇಯಾಂಕಕ್ಕೇರಿರುವ ದಕ್ಷಿಣ ಆಫ್ರಿಕಾ!
Subscribe to:
Post Comments (Atom)
No comments:
Post a Comment