Tuesday, August 4, 2009

ರಾಗ ಲಹರಿ





ಸ್ಕಾ ್ವಷ್‌ ಸುಂದರಿ ದೀಪಿಕಾ

ಜಗತ್ತು ಸೌಂದರ್ಯವನ್ನು ಆರಾಧಿಸುತ್ತದೆ, ಆಸ್ವಾದಿಸುತ್ತದೆ, ಆನಂದಿಸುತ್ತದೆ, ಆದರಿಸುತ್ತದೆ.
ಸುಂದರವಾಗಿರುವುದೆಲ್ಲಾ ಬೇಗನೆ ಗಮನ ಸೆಳೆಯುತ್ತದೆ.
ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು ಎಂದು ಅಂಬಿಕಾತನಯದತ್ತರೇ ಹೇಳಿರಬಹುದು.
ಆದರೂ, ಸುಂದರ ಮತ್ತು ಸಾಧಾರಣ ಸಂಗತಿಗಳು ಎದುರಿಗಿದ್ದಾಗ ಮೊದಲು ಗಮನ ಸೆಳೆಯುವುದು ಸೌಂದರ್ಯವೇ.
ಕ್ರೀಡೆ ಮತ್ತು ಸೌಂದರ್ಯಕ್ಕೆ ಜನ್ಮಜನ್ಮಾಂತರದ ನಂಟು. ಜಗತ್ತಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆಗಳೆಲ್ಲವೂ ಸೌಂದರ್ಯಪ್ರಧಾನವಾದವು. ಮಹಿಳೆಯರ ಟೆನಿಸ್‌, ಈಜು, ಅಥ್ಲೆಟಿಕ್ಸ್‌, ಬೀಚ್‌ ವಾಲಿಬಾಲ್‌ ಇತ್ಯಾದಿ. ಮಹಿಳೆಯರ ಕ್ರಿಕೆಟ್‌ ಅಥವಾ ಫುಟ್‌ಬಾಲ್‌ಗೆ ಈ ಅದೃಷ್ಟವಿಲ್ಲ. ಏಕೆಂದರೆ, ಅಲ್ಲಿ ಸೌಂದರ್ಯಾಸ್ವಾದನೆಗೆ ಅವಕಾಶ ಕಡಿಮೆ. ದೊಡ್ಡ ಮೈದಾನದಲ್ಲಿ 22 ಹುಡುಗಿಯರು ಶರವೇಗದಲ್ಲಿ ಚೆಂಡಿನ ಹಿಂದೆ ಓಡುತ್ತಿದ್ದರೆ, ನೋಡುಗರಿಗೆ ಕಣ್ಣು ನೋವು ಬರುವುದು ಗ್ಯಾರಂಟಿ. ಹಾಗಾಗಿ, ಮಹಿಳೆಯರ ಫುಟ್‌ಬಾಲ್‌ನ ವಿಶ್ವಕಪ್‌ ನಡೆಯುವಾಗ ಮಾತ್ರ ಸ್ವಲ್ಪ ಆಸಕ್ತಿ ಇರುತ್ತದೆ. ಉಳಿದ ಸಂದರ್ಭದಲ್ಲಿ ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಿಳಾ ಕ್ರಿಕೆಟ್‌ ಕಥೆಯೂ ಅಷ್ಟೇ.
ಮಹಿಳಾ ಟೆನಿಸ್‌ನಲ್ಲಿ ಸದ್ಯ ಅಂಥ ಗುಣಮಟ್ಟವೇನಿಲ್ಲ. ಆದರೂ, ಟಿವಿಯಲ್ಲಿ ನೇರ ಪ್ರಸಾರಗೊಳ್ಳುವ ಕ್ರೀಡೆಯಾಗಿ ಭಾರೀ ಜನಪ್ರಿಯತೆ ಪಡೆದುಕೊಂಡಿರುವುದಕ್ಕೆ ಕಾರಣ, ಅದರಲ್ಲಿ ಭಾಗವಹಿಸುವ ಅಂದವಾದ ಹುಡುಗಿಯರು. ಅನ್ನಾ ಕೋರ್ನಿಕೋವ, ಡೇನಿಯೆಲ ಹಂಟುಚೋವ, ಮರಿಯ ಕಿರಿಲೆಂಕೋ, ತಾತ್ಯಾನ ಗೊಲೊವಿನ್‌, ಅಲೈಜ್‌ ಕಾರ್ನೆಟ್‌ ಮೊದಲಾದ ಹುಡುಗಿಯರದು ಬರೀ ಅಂದ ಮಾತ್ರ. ಆಟ ಶೂನ್ಯ. ಆದರೆ, ವಿಶ್ವ ನಂ.1 ಪಟ್ಟಕ್ಕೇರಿರುವ, ಗ್ರಾಂಡ್‌ಸ್ಲಾಂ ಗೆದ್ದಿರುವ ಮರಿಯ ಶರಪೋವ ಹಾಗೂ ಆನಾ ಇವಾನೊವಿಕ್‌ರಂಥ ಸ್ವಪ್ನ ಸುಂದರಿಯರಿಂದ ಆಟದ ಜನಪ್ರಿಯತೆ ಹೆಚ್ಚುತ್ತದೆ. ಕ್ರೀಡೆಯತ್ತ ಹೊಸ ಹೊಸ ಅಭಿಮಾನಿಗಳನ್ನು ಅವರು ಆಕರ್ಷಿಸುತ್ತಾರೆ.
ಸದ್ಯ ಭಾರತದಲ್ಲಿ ಸ್ಕ್ವಾಷ್‌ ಕ್ರೀಡೆಯತ್ತ ಮಾಧ್ಯಮಗಳಿಗೆ, ಜನಸಾಮಾನ್ಯರಿಗೆ ಆಸಕ್ತಿ ಹೆಚ್ಚುತ್ತಿದ್ದರೆ ಅದಕ್ಕೆ ಕಾರಣ ಓರ್ವ ಸುಂದರಿ.
ಆಕೆ. ದೀಪಿಕಾ ಪಲ್ಲಿಕಲ್‌.
ಇನ್ನೂ 18 ವರ್ಷದ ದೀಪಿಕಾ ಸೌಂದರ್ಯದಲ್ಲಿ ಯಾವ ಸಾನಿಯಾ ಮಿರ್ಜಾ ಅಥವಾ `ಬಾಲಿವುಡ್‌ನ ವಿಶ್ವಸುಂದರಿ'ಯರಿಗೂ ಕಡಿಮೆ ಇಲ್ಲ. ಈ ಹುಡುಗಿಯ ಅಂದಕ್ಕೆ ಮರುಳಾಗಿ ತಮಿಳು ನಿರ್ದೇಶಕರು, ನಿರ್ಮಾಪಕರು ಮನೆಯ ಮುಂದೆ ಕ್ಯೂ ನಿಂತಿದ್ದಾರೆ. ಆದರೆ, ಚೆನ್ನೈನ ಆಟಗಾರ್ತಿ ಮಾತ್ರ ಸ್ಕ್ವಾಷ್‌ ಕ್ರೀಡೆಯಲ್ಲಿ ಭಾರತಕ್ಕೆ ಹಿರಿಮೆ ತರುವ ಸಂಕಲ್ಪ ತೊಟ್ಟಿದ್ದಾರೆ.
ಅವರ ಪೂರ್ತಿ ಹೆಸರು ದೀಪಿಕಾ ರೆಬೆಕ್ಕಾ ಪಲ್ಲಿಕಲ್‌. ಹುಟ್ಟಿದ್ದು ಚೆನ್ನೈನಲ್ಲಿ. 1991ರ ಸೆಪ್ಟೆಂಬರ್‌ 21 ರಂದು. 6ನೇ ತರಗತಿಯಲ್ಲಿ ಓದುತ್ತಿರುವಾಗಲೇ ಲಂಡನ್‌ನಲ್ಲಿ ಅಂತಾರಾಷ್ಟ್ರೀಯ ಟೂರ್ನಿಯೊಂದರಲ್ಲಿ ಭಾಗವಹಿಸಿದ್ದ ದೀಪು, ಈಗಾಗಲೇ ಏಷ್ಯಾ ಸ್ವರ್ಣ ಪದಕ (2006, 15 ವಯೋಮಿತಿಯಲ್ಲಿ), ಡಚ್‌ ಜೂನಿಯರ್‌ ಓಪನ್‌ (2005), ಆಸ್ಟ್ರೇಲಿಯನ್‌ ಜೂನಿಯರ್‌ ಓಪನ್‌ (2005), ಜರ್ಮನ್‌ ಓಪನ್‌ (2004), ಆಸ್ಟ್ರೇಲಿಯನ್‌ ಓಪನ್‌ (2004), ಲಿಟ್ಲ್‌ ಮಾಸ್ಟರ್ಸ್‌ ಬಾಂಬೆ (2004), ಇಂಡಿಯನ್‌ ಜೂನಿಯರ್‌ ಓಪನ್‌ (2003), ಇಂಡಿಯನ್‌ ಜೂನಿಯರ್‌ ನ್ಯಾಷನಲ್ಸ್‌ (2002) ಇತ್ಯಾದಿ ಹತ್ತು ಹಲವು ಟೂರ್ನಿಗಳನ್ನು ಗೆದ್ದಿದ್ದಾರೆ. 15 ವಯೋಮಿತಿಯ ಯುರೋಪಿಯನ್‌ ಮತ್ತು ಏಷ್ಯಾ ಸ್ಕ್ವಾಷ್‌ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದ ಮೊಟ್ಟ ಮೊದಲ ಭಾರತೀಯ ಸ್ಕ್ವಾಷ್‌ ಆಟಗಾರ್ತಿ ಎಂಬ ಹಿರಿಮೆಯೂ ಅವರಿಗಿದೆ.
ಇಂಥ ಹುಡುಗಿ ಕಳೆದ ವಾರ ಇತಿಹಾಸ ನಿರ್ಮಾಣವೊಂದರ ಹೊಸ್ತಿಲು ತಲುಪಿದ್ದರು. ಚೆನ್ನೈನಲ್ಲೇ ನಡೆದ ವಿಶ್ವ ಜೂನಿಯರ್‌ ಸ್ಕ್ವಾಷ್‌ ಟೂರ್ನಿಯಲ್ಲಿ ನಂ.1 ಶ್ರೇಯಾಂಕದೊಂದಿಗೆ ಸ್ಪರ್ಧಿಸಿದ್ದ ದೀಪು ಪ್ರಶಸ್ತಿಯತ್ತ ದಾಪುಗಾಲು ಹಾಕಿದ್ದರು. ಆದರೆ, ಸತತ 3 ಅಧಿಕಾರಯುತ ಗೆಲುವುಗಳ ಬಳಿಕ ಸೆಮಿಫೈನಲ್ಸ್‌ನಲ್ಲಿ ಅದೃಷ್ಟ ಕೈಕೊಟ್ಟಿತು.
ದೀಪಿಕಾ ಸ್ಕ್ವಾಷ್‌ ರಂಗದಲ್ಲಿ ಈಜಿಪ್ಟ್‌ನ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಪಣ ತೊಟ್ಟು, ಈಜಿಪ್ಟ್‌ ಕೋಚ್‌ ಅಮೀರ್‌ ವಾಘಿ ಮಾರ್ಗದರ್ಶನದಲ್ಲಿ ಈಜಿಪ್ಟ್‌ನಲ್ಲಿ ತರಬೇತಿ ಪಡೆದಿದ್ದರೂ ಚೆನ್ನೈನಲ್ಲಿ ಮಾತ್ರ ಈಜಿಪ್ಟ್‌ನ 13 ವರ್ಷದ ಹುಡುಗಿಯ ವಿರುದ್ಧ ಸೋತು ಹೋದರು. ಅಲ್ಲಿಗೆ ಒಂದು ಸುಂದರ ಕನಸು ಕರಗಿಹೋಯಿತು.
ಆದರೆ, ವಿಶ್ವ ಸ್ಕ್ವಾಷ್‌ ಶ್ರೇಯಾಂಕದಲ್ಲಿ 48ನೇ ಶ್ರೇಯಾಂಕ ಹೊಂದಿರುವ ದೀಪಿಕಾ, ಬ್ಯಾಡ್ಮಿಂಟನ್‌ನಲ್ಲಿ ಸೈನಾರಂತೆ ಹಂತಹಂತವಾಗಿ ಮೇಲೇರುತ್ತಿದ್ದಾರೆ.
ಆದರೆ, ಅವರು ಸುಂದರವಾಗಿರುವುದರಿಂದ ಆಟದ ಜೊತೆಗೆ ಇತರ ಆಕರ್ಷಣೆಗಳೂ ಜಾಸ್ತಿ. ಮಹೇಶ್‌ ಭೂಪತಿ ಅವರ ಗ್ಲೋಬೋಸ್ಪೋರ್ಟ್‌ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ದೀಪಿಕಾ, ಮಾಡೆ ಲಿಂಗ್‌ನತ್ತಲೂ ಮುಖ ಮಾಡಿದ್ದಾರೆ. ಶ್ರೀಲಂಕಾದ ಓಲೆ, ಪೆಟ್ರಾ ಸೋಪ್ಸ್‌ ಹಾಗೂ ಐಸಿಐಸಿಐ ಪ್ರುಡೆನ್ಶಿಯಲ್‌ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಸ್ಕ್ವಾಷ್‌ ತರಬೇತುದಾರ ಸೈರಸ್‌ ಪೂಂಚರಿಂದ ಚೆನ್ನೈನ ಐಸಿಎಲ್‌ ಅಕಾಡೆಮಿಯಲ್ಲಿ ಪ್ರವರ್ಧಮಾನಕ್ಕೆ ಬಂದವರಾದ ಇವರನ್ನು ಸದ್ಯ ಮಿತ್ತಲ್‌ ಚಾಂಪಿಯನ್ಸ್‌ ಟ್ರಸ್ಟ್‌ ಪ್ರಾಯೋಜಿಸುತ್ತಿದೆ. ಆದರೆ, ಇವರು ಸ್ಕ್ವಾಷ್‌ನ ಸೈನಾ ನೆಹ್ವಾಲ್‌ ಆಗುವರೇ ಅಥವಾ ಸಾನಿಯಾ ಮಿರ್ಜಾ ಆಗುವರೇ ಎನ್ನುವುದನ್ನು ಭವಿಷ್ಯವೇ ನಿರ್ಧರಿಸಲಿದೆ.

No comments:

Post a Comment