Sunday, August 9, 2009

ರಾಗ ಲಹರಿ


ಸತ್ಯಕ್ಕೆ ಕೋಟಿ ಬೆಲೆಯೂ ಕಡಿಮೆ!

ಸತ್ಯಂ ವದ.... ಸತ್ಯ ಹೇಳುವುದು ಕಷ್ಟ.
ಹೇಳಿದರೆ ನಂಬು ವವರೂ ಕಡಿಮೆ.
ಸುಳ್ಳು ಸಾರ್ವತ್ರಿಕ ವಾಗಿರುವ, ಸತ್ಯ ಅಪರೂಪವಾಗಿರುವ ಜಗತ್ತಿನಲ್ಲಿ ಯಾವುದು ಸತ್ಯ ಎಂದು ಗುರುತಿಸು ವುದೂ ಕಷ್ಟ.
ಸತ್ಯ ಹೇಳುವುದಕ್ಕೆ ಧೈರ್ಯ ಬೇಕು.
ಸತ್ಯ ಹೇಳಿದರೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.
ಸತ್ಯ ಎಲ್ಲರಿಗೂ ಇಷ್ಟವಾಗುವುದಿಲ್ಲ.
ಸತ್ಯ ಹೇಳಿದ ಮೇಲೆ ಮುಂದಿನ ಫಲಾಫಲಗಳನ್ನು ಎದುರಿಸಲು ಸಿದ್ಧವಾಗಿರಬೇಕಾಗುತ್ತದೆ.
ಒಂದು ಮದುವೆಗೆ ನೂರು ಸುಳ್ಳು ಹೇಳಬೇಕು. ಬದುಕುವುದಕ್ಕೆ ಪ್ರತಿ ನಿತ್ಯ, ಪ್ರತಿ ಕ್ಷಣ ಏನಾದರೊಂದು ಸುಳ್ಳು ಹೇಳುತ್ತಲೇ ಇರಬೇಕಾಗುತ್ತದೆ. ಉದರ ನಿಮಿತ್ತಂ ಬಹುಕೃತ ವೇಷಂ.
ಪ್ರಪಂಚದಲ್ಲಿ ಎಲ್ಲರೂ ಸುಳ್ಳು ಹೇಳುವವರೇ, ಸತ್ಯವನ್ನೇ ಹೇಳಿದವರು, ಸತ್ಯಕ್ಕಾಗಿ ಬದುಕಿದವರಿಗಾಗಿ ಇತಿಹಾಸ ಕೆದಕಬೇಕು. ಪುರಾಣ ಪುಣ್ಯಕಥೆ ಹುಡುಕ ಬೇಕು.
ಮಹಾಭಾರತದ ಧರ್ಮರಾಯ ಸತ್ಯ ಹೇಳುವವ ನೆಂದು ಪ್ರಸಿದ್ಧ.
ಅವನು ಜೀವಮಾನದಲ್ಲಿ ಒಂದೂ ಸುಳ್ಳು ಹೇಳಿರಲಿಲ್ಲ. ಹಾಗಾಗಿ ಧರ್ಮಜನ ಮಾತನ್ನು ಎಲ್ಲರೂ ವೇದವಾಖ್ಯ ಎಂದು ನಂಬುತ್ತಿದ್ದರು.
ಆದರೆ, ಮಹಾಭಾರತದ ಮಹಾಸಂಗ್ರಾಮದಲ್ಲಿ ಧರ್ಮರಾಯ ಸುಳ್ಳು ಹೇಳಲೇಬೇಕಾದ ಪ್ರಸಂಗ ಎದುರಾಯಿತು.
ಭೀಷ್ಮಾಚಾರ್ಯರು ಶರಶಯ್ಯೆ ಏರಿದ ಬಳಿಕ ಸೇನಾಧಿಪತ್ಯ ವಹಿಸಿಕೊಂಡ ದ್ರೋಣಾಚಾರ್ಯರು ಪಾಂಡವ ಸೈನ್ಯವನ್ನು ಪುಡಿಗಟ್ಟುತ್ತಿದ್ದರು. ಅವರನ್ನು ಹೇಗಾದರೂ ಮಾಡಿ ಸೋಲಿಸದಿದ್ದರೆ, ಒಂದೇ ದಿನದಲ್ಲಿ ಪಾಂಡವ ಸೈನ್ಯ ನಿರ್ನಾಮವಾಗಿ ಬಿಡುತ್ತಿತ್ತು. ಯುದ್ಧದಲ್ಲಿ ದ್ರೋಣರನ್ನು ಸೋಲಿಸುವುದು ಅಸಾಧ್ಯ. ಇಂಥ ಸಂದರ್ಭದಲ್ಲಿ ಶ್ರೀಕೃಷ್ಣನ ಕುಟಿಲೋಪಾಯ ಸಿದ್ಧವಿರುತ್ತಿತ್ತು.
ದ್ರೋಣಾಚಾರ್ಯರು ಶಸ್ತ್ರ ಸನ್ಯಾಸ ಸ್ವೀಕರಿಸಬೇಕು. ಹಾಗೆ ಮಾಡಬೇಕಾದರೆ, ಅವರ ಪುತ್ರ ಅಶ್ವತ್ಥಾಮ ಹತನಾಗಿದ್ದಾನೆ ಎಂದು ಅವರ ಕಿವಿಗೆ ಬೀಳಿಸಬೇಕು.
ಆದರೆ, ಅಶ್ವತ್ಥಾಮ ಚಿರಂಜೀವಿ. ಆತನಿಗೆ ಸಾವಿಲ್ಲ ಎನ್ನುವುದು ದ್ರೋಣರಿಗೆ ತಿಳಿದಿದೆ. ಆದ್ದರಿಂದ ಅಶ್ವ ತ್ಥಾಮ ಹತನಾಗಿದ್ದಾನೆ ಎಂಬ ಸುಳ್ಳನ್ನು ಧರ್ಮರಾಯನ ಬಾಯಿಂದ ಹೇಳಿಸಿದರೆ ದ್ರೋಣಾಚಾರ್ಯರು ನಂಬುತ್ತಾರೆ ಎಂದು ಕೃಷ್ಣ ತಂತ್ರ ಹೂಡಿದ.
ಧರ್ಮರಾಯನಿಗೆ ಸುಳ್ಳು ಹೇಳಲು ಇಷ್ಟವಿಲ್ಲದಿದ್ದರೂ, ಯುದ್ಧ ಗೆಲ್ಲುವುದಕ್ಕೆ ಅನಿವಾರ್ಯ. ಹಾಗಾಗಿ ಆತ ದ್ರೋಣರ ಎದುರು ನಿಂತು `ಅಶ್ವತ್ಥಾಮೋ ಹತಃ ಎಂದು ಗಟ್ಟಿಯಾಗಿ ಹೇಳಿ ಕುಂಜರ' ಎಂದು ಮೆತ್ತಗೆ ಹೇಳಿದ (ಅಶ್ವತ್ಥಾಮ ಎಂಬ ಆನೆ ಸತ್ತು ಹೋಗಿದೆ). ಜೊತೆಗೆ, ಆತ ಕುಂಜರ ಎಂದು ಹೇಳುವ ಸಂದರ್ಭದಲ್ಲಿ ಕೃಷ್ಣ ಗಟ್ಟಿಯಾಗಿ ಶಂಖ ಊದಿದ. ಹಾಗಾಗಿ, ದ್ರೋಣರಿಗೆ ಅಶ್ವತ್ಥಾಮೋ ಹತಃ ಎಂದಷ್ಟೇ ಕೇಳಿಸಿತು. ತನ್ನ ಮಗ ಚಿರಂಜೀವಿ ಎಂದು ತಿಳಿದಿದ್ದರೂ, ಧರ್ಮರಾಯ ಹೇಳಿದ ಮೇಲೆ ನಿಜವಿರಲೇ ಬೇಕು ಎಂದು ಭಾವಿಸಿದ ಅವರು ಶಸ್ತ್ರ ತ್ಯಜಿಸಿದರು. ದ್ರೌಪದಿಯ ಸೋದರ ದೃಷ್ಟದ್ಯುಮ್ನ ಅವರನ್ನು ಕೂಡಲೇ ಸಂಹರಿಸಿದ. ಕುಮಾರ ವ್ಯಾಸ ವರ್ಣಿಸುವಂತೆ ಅಲ್ಲಿಯವರೆಗೂ ಧರ್ಮರಾಯನ ರಥ ನೆಲದಿಂದ ಕೆಲವು ಇಂಚು ಎತ್ತರದಲ್ಲಿ ಗಾಳಿಯಲ್ಲಿ ಸಂಚರಿಸುತ್ತಿತ್ತು. ಆದರೆ, ಸುಳ್ಳು (?) ಹೇಳಿದ ಆ ಕ್ಷಣ ರಥ ನೆಲ ಸ್ಪರ್ಶಿಸಿತು.
ಬದುಕುವುದಕ್ಕೆ ಸುಳ್ಳು ಹೇಳಬೇಕು ಎನ್ನುತ್ತಾರೆ. ಸಮಯಕ್ಕೊಂದು ಸುಳ್ಳು ಎಂಬ ಮಾತಿದೆ. ಇನ್ನೊಬ್ಬರಿಗೆ ಕೆಡುಕಾಗುವುದಲ್ಲ ಎಂದಾದರೆ ಸುಳ್ಳು ಹೇಳಿದರೆ ತಪ್ಪಿಲ್ಲ ಎನ್ನುತ್ತಾರೆ. ಯಾರಿಗಾದರೂ, ಅನುಕೂಲವಾಗಬಹು ದಾದರೆ ಸದುದ್ದೇಶದಿಂದ ಸುಳ್ಳು ಹೇಳಿದರೂ ಪರವಾಗಿಲ್ಲ ಎಂಬ ಮಾತೂ ಇದೆ.
ಸತ್ಯಂ ಬ್ರೂಯಾತ್‌, ಪ್ರಿಯಂ ಬ್ರೂಯಾತ್‌ ನ ಬ್ರೂಯಾತ್‌ ಸತ್ಯಮಪ್ರಿಯಂ ಪ್ರಿಯಂ ಚ ನಾನೃತಂ ಬ್ರೂಯಾತ್‌, ಏಷ ಧರ್ಮಃ ಸನಾತನಃ
ಸತ್ಯವನ್ನು ಹೇಳಬೇಕು. ಪ್ರಿಯವಾದುದನ್ನು ಹೇಳಬೇಕು
ಅಪ್ರಿಯವಾದ ಸತ್ಯವನ್ನಾಗಲೀ, ಪ್ರಿಯವಾದ ಅನೃತ ವನ್ನಾಗಲೀ ಹೇಳಬಾರದು
ಇದೇ ಸನಾತನ ಧರ್ಮ ಎಂದು ಮನು ಚಕ್ರವರ್ತಿಯೇ ಹೇಳಿದ್ದಾನೆ. ಆದರೂ, ಸುಳ್ಳು ಹೇಳುವುದು ಸುಲಭ. ಸತ್ಯ ಹೇಳುವುದು ಕಷ್ಟ.
ಸತ್ಯಕ್ಕಾಗಿ ಬದುಕಿದ ಸತ್ಯ ಹರಿಶ್ಚಂದ್ರನ ಕಥೆ ಎಲ್ಲರಿಗೂ ಗೊತ್ತಿದೆ. ಸತ್ಯ ಹೇಳಿದರೆ, ಕೊನೆಗೆ ಎಂದೋ ಸುಖ. ಸುಳ್ಳು ಹೇಳಿದರೆ, ದಿಢೀರ್‌ ಸುಖ ಎಂದು ಕಲಿಯುಗದಲ್ಲಿ ಎಲ್ಲರೂ ನಂಬಿದ್ದಾರೆ.
ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ನ್ಯಾಯಾಲಯದಲ್ಲಿ ಭಗ ದ್ಗೀತೆಯ ಮೇಲೆ ಕೈ ಇರಿಸಿ ಪ್ರಮಾಣ ಮಾಡುತ್ತಾರೆ. ಆದರೆ, ಸುಳ್ಳನ್ನೇ ಹೇಳುತ್ತಾರೆ.
ಕೋರ್ಟ್‌ನಲ್ಲಿ ಸುಳ್ಳು ಸಾಕ್ಷಿ ಹೇಳುವುದಕ್ಕೆ ಕೋಟಿಗಟ್ಟಲೆ ಹಣ ಕೊಡುವ ಕಾಲ ಇದು. ಅಲ್ಲಿ ಯಾರದೋ ಜೀವನ ಸರ್ವನಾಶವಾಗುತ್ತದೆ. ಹಣಕ್ಕಾಗಿ ಸತ್ಯ ಮುಚ್ಚಿಡಬಾರದು ಎಂಬ ಯಾವ ನೈತಿಕತೆಯೂ ಅಡ್ಡಿಯಾಗುವುದಿಲ್ಲ.
ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ, ಮಕ್ಕಳು ಅಪ್ಪ-ಅಮ್ಮನಿಗೆ, ನೌಕರ ಮಾಲಿಕನಿಗೆ, ಮಾಲಿಕ ಗ್ರಾಹಕನಿಗೆ, ಒಬ್ಬರು ಇನ್ನೊಬ್ಬರಿಗೆ ಸುಳ್ಳನ್ನೇ ಹೇಳಿ ಬದುಕುವ ಕಾಲ ಇದು. ಎಲ್ಲಾ ಸತ್ಯಗಳನ್ನು ಒಪ್ಪಿಕೊಳ್ಳು ವಂತಿದ್ದರೆ, ಸಂಸಾರ ಚೂರಾಗುತ್ತದೆ. ಉದ್ಯೋಗ ಹೋಗುತ್ತದೆ. ಸಂಬಂಧಗಳು ಉಳಿಯುವುದಿಲ್ಲ. ಇಷ್ಟವಿಲ್ಲದಿದ್ದರೂ ಸುಳ್ಳು ಹೇಳಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಪ್ರತಿಯೊಬ್ಬರ ಜೀವನದಲ್ಲೂ ಅದೆಷ್ಟೋ ಮುಚ್ಚಿಟ್ಟ ಸತ್ಯಗಳಿರುತ್ತವೆ. ಅಂತರಂಗಕ್ಕೆ ಮಾತ್ರ ತಿಳಿದಿರುವಂಥ, ಇತರರೊಂದಿಗೆ (ಹೆಂಡತಿಯೊಂದಿಗೂ) ಹಂಚಿಕೊಳ್ಳ ಲಾಗದ ಸತ್ಯಘಟನೆಗಳಿರುತ್ತವೆ. ಬದುಕಿನ ಹಾದಿಯಲ್ಲಿ ಅಂಥ ಅದೆಷ್ಟೋ ಮಜಲುಗಳನ್ನು ದಾಟಿ ಬಂದಿರು ತ್ತೇವೆ. ನಮ್ಮಿಂದ ಯಾರಿಗೋ ಅನ್ಯಾಯವಾಗಿರುತ್ತದೆ, ಮೋಸವಾಗಿರುತ್ತದೆ. ನಮ್ಮ ಕುಟುಂಬ, ಬಂಧುಗಳು, ಸುತ್ತಲಿನ ಸಮಾಜ ಒಪ್ಪಿಕೊಳ್ಳದ ಎಷ್ಟೋ ಕೃತ್ಯಗಳಲ್ಲಿ ಭಾಗಿಯಾಗಿರುತ್ತೇವೆ. ಅದನ್ನೆಲ್ಲಾ ಕೋಟಿ ಹಣ ಕೊಡುತ್ತೇನೆಂದರೂ, ಒಪ್ಪಿಕೊಳ್ಳಲು ಎಲ್ಲಾ ಬಾರಿ ಸಾಧ್ಯವಾಗುವುದಿಲ್ಲ. ಅದಕ್ಕೆ ದಿಟ್ಟೆದೆ ಬೇಕು.
ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಸಚ್‌ ಕಾ ಸಾಮ್ನಾ ಇಂಥ ಒಂದು ಕಾರ್ಯಕ್ರಮ. ಇಲ್ಲಿ ಜನ ತಮಗೆ ಮಾತ್ರ ತಿಳಿದಿರುವ ಸತ್ಯಗಳನ್ನು ಒಪ್ಪಿಕೊಳ್ಳುವುದಕ್ಕೆ ಹಣ ಕೊಡುತ್ತಾರೆ. ಒಬ್ಬ ವ್ಯಕ್ತಿ 21 ಸತ್ಯ ಹೇಳಿದರೆ 1 ಕೋಟಿ ರುಪಾಯಿ ಗೆಲ್ಲಬಹುದು. ಆ ಕಾರ್ಯಕ್ರಮದಲ್ಲಿ ಈಗಾಗಲೇ ಅದೆಷ್ಟೋ ಜನ ಬಂದು ಹೋಗಿದ್ದಾರೆ. ನೋಡಲು, ಕೇಳಲು ಮುಜುಗರವಾಗುವಂಥ ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇದುವರೆಗೂ ಯಾರೊಬ್ಬರೂ ಕೋಟಿ ರೂ. ಗೆದ್ದಿಲ್ಲ. ಬದುಕಿನ ಎಲ್ಲಾ ಸತ್ಯಗಳನ್ನು ಒಪ್ಪಿಕೊಳ್ಳುವುದು ಎಷ್ಟು ಕಷ್ಟ ಎನ್ನುವುದಕ್ಕೆ ಅದೇ ನಿದರ್ಶನ.
ಈ ಕಾರ್ಯಕ್ರಮ ಯಶಸ್ವಿಯಾಗುತ್ತಿರುವುದಕ್ಕೆ ಕಾರಣ, ಇಲ್ಲಿ ಭಾಗವಹಿಸುವವರ ಸುಳ್ಳನ್ನು ಯಾವುದೇ ತೀರ್ಪುಗಾರರು ಪತ್ತೆ ಮಾಡುವುದಿಲ್ಲ. ಬದಲಿಗೆ ಆ ಕಾರ್ಯಕ್ರಮಕ್ಕೆ ಮೊದಲೇ ಸ್ಪರ್ಧಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ 50 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಆ ಸಂದರ್ಭದಲ್ಲಿ ಅವರು ನೀಡಿದ ಉತ್ತರಕ್ಕೆ ತಾಳೆ ನೋಡಿ ಸತ್ಯ-ಸುಳ್ಳು ಕಂಡು ಹಿಡಿಯಲಾಗುತ್ತದೆ. ಇದು ಮೊಮೆಂಟ್‌ ಆಫ್‌ ಟ್ರುಥ್‌ ಎಂಬ ಪಾಶ್ಚಾತ್ಯ ಟಿವಿ ಕಾರ್ಯಕ್ರಮದ ಭಾರತೀಯ ಅವತರಣಿಕೆ.
ಇಷ್ಟಕ್ಕೂ ಈ ರೀತಿಯ ಕಾರ್ಯಕ್ರಮ, ಅದರಲ್ಲೂ ಭಾರತೀಯ ಸಮಾಜದಲ್ಲಿ ಸರಿಯೇ ಎಂಬ ವಿವಾದ ಭುಗಿಲೆದ್ದಿದೆ. ಚರ್ಚೆ ನಡೆಯುತ್ತಿದೆ. ಇದು ಸತ್ಯದ ವ್ಯಾಪಾರ ಎಂದು ಜನ ದೂರುತ್ತಿದ್ದಾರೆ. ಅನೈತಿಕ ಎನ್ನುತ್ತಿದ್ದಾರೆ. ಮನೆಮಂದಿಯೆಲ್ಲಾ ನೋಡುವಲ್ಲಿ ಇಂಥ ಕಾರ್ಯಕ್ರಮ ಬರಬಾರದು ಎನ್ನುತ್ತಿದ್ದಾರೆ. ಆದರೆ, ತಪ್ಪೇನು ಎನ್ನುವ ವರ್ಗವೂ ಇದೆ.
ನಿಜ. ಇಲ್ಲಿ ಎಲ್ಲರೂ ಹೇಳುತ್ತಿರುವುದು ಅವರವರ ಜೀವನದ ಸತ್ಯಗಳನ್ನು. ಪಕ್ಕದ ಮನೆಯವನ ರಹಸ್ಯಗಳನ್ನು ಸಾರ್ವತ್ರಿಕವಾಗಿ ಹೇಳಿ ಯಾರೂ ಇಲ್ಲಿ ಹಣ ಮಾಡುತ್ತಿಲ್ಲ. ಕೋರ್ಟಿನಲ್ಲಿ ಹಣಕ್ಕಾಗಿ ಸುಳ್ಳು ಸಾಕ್ಷ್ಯ ನುಡಿಯುವುದಕ್ಕೆ ಹೋಲಿಸಿದರೆ, ನಮ್ಮ ಜೀವನದ ಸತ್ಯ ಹೇಳಲು ಹಣ ಪಡೆಯುವುದರಲ್ಲಿ ತಪ್ಪೇನಿಲ್ಲ. ಸಚ್‌ ಕಾ ಸಾಮ್ನಾ ಕಾರ್ಯಕ್ರಮದಲ್ಲಿ ಬಹುಪಾಲು ಪ್ರಶ್ನೆಗಳು ಭಾಗವಹಿಸುವವರ ಲೈಂಗಿಕ ಜೀವನವನ್ನೇ ಕುರಿತಾಗಿರುತ್ತವೆ.
ನಿಜ. ಆದರೆ, ಅವೆಲ್ಲಾ ಅವರ ಜೀವನವನ್ನು ಆಧರಿಸಿದ ಪ್ರಶ್ನೆಗಳಾಗಿರುತ್ತವೆ. ಇದರಿಂದ ನಮ್ಮ ಸುತ್ತಮುತ್ತ ಇರುವ, ನಾವು ಸಾಚಾ, ಸಭ್ಯ ಎಂದುಕೊಂಡ ವ್ಯಕ್ತಿಗಳ ಜೀವನದಲ್ಲಿ ಇಷ್ಟೆಲ್ಲಾ ಇದೆಯೇ ಎಂಬ ಸತ್ಯ ಎಲ್ಲರಿಗೂ ಗೊತ್ತಾಗುವುದು ಒಳ್ಳೆಯದೇ. ಸಮೀಕ್ಷೆಯೊಂದರ ಪ್ರಕಾರ, ಪ್ರತಿಯೊಬ್ಬ ಗಂಡಸಿನ ಜೀವಮಾನದಲ್ಲಿ ಕನಿಷ್ಠ 7 ಹೆಂಗಸರು ನಾನಾ ರೂಪದಲ್ಲಿ ಬಂದು ಹೋಗಿರುತ್ತಾರೆ. ಆದರೆ, ಅದನ್ನೆಲ್ಲಾ ಒಪ್ಪಿಕೊಳ್ಳಲು ಗಂಡೆದೆ ಬೇಕು ಅಷ್ಟೇ.
ಟಿವಿಯಲ್ಲಿ ಬರುತ್ತಿರುವ ಸತ್ಯದ ಕಾರ್ಯಕ್ರಮ ಇದೊಂದೇ ಅಲ್ಲ. ಕನ್ನಡದಲ್ಲೂ ವಿವಿಧ ಚಾನೆಲ್‌ಗಳಲ್ಲಿ ಬದುಕು ಜಟಕಾಬಂಡಿ, ಇದು ಕಥೆಯಲ್ಲ ಮೊದಲಾದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಈ ಕಾರ್ಯಕ್ರಮಗಳು ಸಚ್‌ ಕಾ ಸಾಮ್ನಾಗಿಂತ ಸ್ವರೂಪದಲ್ಲಿ ಪೂರ್ಣ ಭಿನ್ನ. ಜೊತೆಗೆ ಇವುಗಳು ಹೆಚ್ಚು ಸಮಾಜಮುಖಿ ಆಗಿವೆ ಎನ್ನಬಹುದು. ಇದರಲ್ಲಿ ನಿರೂಪಕಿಯರು (ಮಾಳವಿಕ, ಲಕ್ಷ್ಮಿ) ಭಾಗವಹಿಸುವವರಿಂದ ಹೇಳಿಸುವುದು ಸತ್ಯಗಳನ್ನೇ. ಆದರೆ, ಎಲ್ಲಾ ಸತ್ಯ ಕೇಳಿಕೊಂಡ ಬಳಿಕ ಮುರಿದ ಮನಸ್ಸುಗಳನ್ನು, ಕುಟುಂಬಗಳನ್ನು ಒಂದು ಮಾಡುವ ಪ್ರಯತ್ನವನ್ನು ಮಾಳವಿಕ, ಲಕ್ಷ್ಮಿ ಮಾಡುತ್ತಾರೆ. ಆದರೆ, ಆ ಪ್ರಯತ್ನದಲ್ಲಿ ಎಷ್ಟು ಯಶಸ್ಸು ಸಿಗುತ್ತದೆ ಎನ್ನುವುದು ಬೇರೆ ಮಾತು. ಟಿವಿ ಸಂದರ್ಶನದಲ್ಲಿ ಪೋಸು ಕೊಡುತ್ತ, ಪ್ರೇಯಸಿಯನ್ನು ಮರೆಯುತ್ತೇನೆ, ಹೆಂಡತಿಯ ಜೊತೆ ಬಾಳುವೆ ಮಾಡುತ್ತೇನೆ ಎಂದು ಶಪಥ ಮಾಡಿದ ವ್ಯಕ್ತಿ, ಸ್ಟುಡಿಯೋದಿಂದ ಹೊರಹೋಗುತ್ತಿದ್ದಂತೆಯೇ, ಪತ್ನಿಯನ್ನು ಪಕ್ಕಕ್ಕೆ ತಳ್ಳಿ, ಪ್ರೇಯಸಿಯ ಕೈ ಹಿಡಿದುಕೊಳ್ಳುವುದೂ ಸತ್ಯ. ಈ ಕಾರ್ಯಕ್ರಮದಲ್ಲಿ ಮಂಪರು ಪರೀಕ್ಷೆಯ ನೆರವು ಇಲ್ಲದಿರುವ ಕಾರಣ, ಭಾಗವಹಿಸುವವರು ಹೇಳುವುದೆಲ್ಲಾ ಸತ್ಯವೇ ಎಂದು ಪರಾಮರ್ಶಿಸುವುದೂ ಕಷ್ಟ. ಆದರೂ, ಟಿವಿ ಮಾಧ್ಯಮದಲ್ಲಿ ಈಗ ನಾನಾ ಬಗೆಯ ಸತ್ಯಾನ್ವೇಷಣೆ ನಡೆಯುತ್ತಿದೆ ಎಂದು ಹೇಳಬಹುದು.
ಸತ್ಯವೇ ನನ್ನ ತಾಯಿ ತಂದೆ ಸತ್ಯವೇ ನನ್ನ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು
ನಮ್ಮದು ಗೋವಿನ ಹಾಡಿನ ನಾಡು. ಸತ್ಯಕ್ಕಿಲ್ಲಿ ಅಪಾರ ಬೆಲೆ. ಮಹಾತ್ಮಾ ಗಾಂಧೀಜಿ ಸತ್ಯದ ಮಹತ್ವವನ್ನು ಜಗತ್ತಿಗೆ ಸಾರಿದರು. ಸತ್ಯವಂತರಿಗಿದು ಕಾಲವಲ್ಲ ಎಂದು ದಾಸರು ಹಾಡಿದರೂ, ಸತ್ಯಕ್ಕಾಗಿ ಜೀವ ತೇಯ್ದ, ಹೋರಾಡಿದ ಅನೇಕ ಮಹನೀಯರು ನಮ್ಮ ನಡುವೆ ಆಗಿ ಹೋಗಿದ್ದಾರೆ.
ಟೂಥ್‌ಪೇಸ್ಟಿನ ಜಾಹೀರಾತಿನಲ್ಲಿ 'ಸುಳ್ಳು ಹೇಳೋದಾ ಸತ್ಯ' ಎಂದು ಸತ್ಯದ ಮೌಲ್ಯ ಸಾರುವ ಜನ ನಾವು. ಹಾಗಾಗಿ ಸತ್ಯ ಹೇಳಲು ಭಯ ಪಡಬಾರದು. ಆದರೆ, ಮನೆ-ಮುರಿಯುವಂಥ ಸತ್ಯಗಳನ್ನು ಹೇಳು ವಂಥ ಪ್ರ,ಮೇಯ ಬರದಿರುವಂತೆ ನೋಡಿಕೊಳ್ಳು ವುದೇ ಜಾಣತನ.
ಆದರೂ, ಸಚ್‌ ಕಾ ಸಾಮ್ನಾ ಕಾರ್ಯಕ್ರಮಕ್ಕೆ ಹೋಗಿ ಬಂದವರನ್ನೇ ಕೇಳಿನೋಡಿ. ಅವರ ಜೀವನದ ಅದೆಷ್ಟೋ ಸತ್ಯಗಳನ್ನು ಹಂಚಿಕೊಂಡ ಬಳಿಕ ಅವರ ಎದೆ ಹಗುರವಾಗಿರುತ್ತದೆ. ಅವರ ಜೀವನದಲ್ಲಿ ಮುಂದೆಂದೂ ಪಾಪಪ್ರಜ್ಞೆ ಕಾಡುವುದಿಲ್ಲ.

No comments:

Post a Comment