Saturday, July 25, 2009

ರಾಗ ಲಹರಿ


ನದಿಯ ಒಡಲಾಳದಲ್ಲಿ ವೇದನೆಯ ಜ್ವಾಲೆ


ಅಂತಿಮ ಜ್ವಾಲೆ ಹಿಂದಿ ಮೂಲ: ಹಿಮಾಂಶು ಜೋಶಿ ಕನ್ನಡಕ್ಕೆ: ಡಾ. ಜೆ ಎಸ್‌ ಕುಸುಮ ಗೀತ ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈ. ಲಿ. ಮೊದಲ ಮುದ್ರಣ: 2009 ಪುಟಗಳು: 92, ಬೆಲೆ: 55 ರೂ.


ಕಾವ್ಯ ಜಲಪಾತವಾದರೆ, ಕಾದಂಬರಿ ನದಿಯಂತೆ. ಲೇಖಕ ಹಾಗೂ ಓದುಗ ಆ ನದಿಯ ಉಭಯ ದಂಡೆಗಳು. ಇಬ್ಬರಿಗೂ ನೆಮ್ಮದಿ, ತೃಪ್ತಿ ದೊರೆತರೆ, ಕಾದಂಬರಿಯ ಬದುಕು ಸಾರ್ಥಕವಾದಂತೆ. ಉಗಮದಿಂದ ಗಮ್ಯದೆಡೆಗಿನ ನದಿಯ ಪಯಣದಂತೆ ಕಾದಂಬರಿಯ ಪಯಣವೂ ವಿಶಿಷ್ಟ, ವಿಭಿನ್ನ. ನದಿಯ ಹಾದಿ ತವರಿನ ಹಾದಿಯಂತೆ ಹಿತವಲ್ಲ. ಸುಗಮವಂತೂ ಅಲ್ಲವೇ ಅಲ್ಲ. ನಾನಾ ಅಡೆ-ತಡೆಗಳನ್ನು, ಒಡ್ಡುಗಳನ್ನು ದಾಟಿ, ಸಾವಿರ ಬಾರಿ ದಿಕ್ಕು ಬದಲಿಸಿ ಸಾಗಬೇಕಾಗುತ್ತದೆ. ಬೇಸಿಗೆಯಲ್ಲಿ ಬರಿದಾಗುವ, ಮಳೆಗಾಲದಲ್ಲಿ ತುಂಬಿ ಹರಿಯುವ, ಮಂದವಾಗಿ, ರಭಸವಾಗಿ, ಎದುರು ಸಿಕ್ಕಿದ್ದೆಲ್ಲವನ್ನೂ ಕೊಚ್ಚಿಕೊಂಡು, ಮುಳುಗಿಸಿಕೊಂಡು, ಆಳವಾಗಿ, ನಿರಾಳವಾಗಿ ಹರಿಯುವ ನದಿಯ ಒಡಲಾಳದಲ್ಲಿ ಏನೇನಿದೆಯೋ ಬಲ್ಲವರಾರು? ಕಾದಂಬರಿಯ ಸಾಧ್ಯತೆಯೂ ಅಷ್ಟೇ. ಲೇಖಕನ ಊಹೆಗೆ, ಓದುಗನ ಗ್ರಹಿಕೆಗೆ ನಿಲುಕುವುದು ಕೆಲವು ಆಯಾಮಗಳು ಮಾತ್ರ.
ಹೆಣ್ಣಿನ ಜೀವನವನ್ನು ನದಿಗೆ, ಕಾದಂಬರಿಗೆ ಹೋಲಿಸುವುದು ಇದೇ ಕಾರಣಕ್ಕೆ. ಎಲ್ಲೋ ಹುಟ್ಟಿ, ಇನ್ನೆಲ್ಲೋ ಸೇರಿ, ಏಗಿ, ಬೀಗಿ, ನಲುಗಿ, ಹೊರಗೆ ನಗು, ಒಡಲಾಳದಲ್ಲಿ ಜ್ವಾಲಾಮುಖಿ ಅಡಗಿಸಿಕೊಂಡು ಕರಗುವ, ಮರುಗುವ, ಪೋಷಿಸುವ, ಶೋಷಣೆ ಗೊಳಗಾಗುವ ಹೆಣ್ಣಿನ ಜೀವನವೊಂದು ಮಹಾಕಾದಂಬರಿ. ಅಂಥ ಹೆಣ್ಣಿನ ಸಂತತಿಯ ಪ್ರತಿನಿಧಿ ಗೋಮತಿ.
ಹಿಂದಿಯ ಸುಪ್ರಸಿದ್ಧ ಲೇಖಕ ಹಿಮಾಂಶು ಜೋಷಿ ಅವರ `ಕಗಾರ್‌ ಕಿ ಆಗ್‌' ಕಾದಂಬರಿ ವಿಶ್ವದ ನಾನಾ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡಕ್ಕೆ ಇದನ್ನು ಡಾ. ಜಿ ಎಸ್‌ ಕುಸುಮ ಗೀತ `ಅಂತಿಮ ಜ್ವಾಲೆ'ಯ ರೂಪದಲ್ಲಿ ತಂದಿದ್ದಾರೆ. ಇದು ನೋವೆಂಬ ಅನುಭವವನ್ನು ಹಂಚಿಕೊಳ್ಳುವ ಜಗತ್ತಿನ ಎಲ್ಲಾ ಹೆಣ್ಣುಗಳ ಕಥೆ.
ಬಡತನಕ್ಕೆ, ದುಷ್ಟ ಪ್ರವೃತ್ತಿಗೆ, ದ್ವೇಷಾಸೂಯೆಗಳಿಗೆ, ಕಾಮುಕತೆಗೆ ದೇಶ-ಭಾಷೆಗಳ ಎಲ್ಲೆ ಇಲ್ಲ. ಇಂಥ ಸುಳಿಯೊಳಗೆ ಬೇಯುವ, ಬಾಡುವ ಗೋಮತಿಯಂಥ ಕುಸುಮ ಸುಂದರಿ ಜಗತ್ತಿನ ಎಲ್ಲೆಡೆ ಕಾಣಸಿಗುತ್ತಾರೆ. ಅವಳ ಕಥೆ ಓದುವಾಗ ಎದೆ ಆರ್ದ್ರವಾಗು ತ್ತದೆ. ಕಣ್ಣು ತೇವವಾಗುತ್ತದೆ. ಮನ ಮಿಡಿಯುತ್ತದೆ.
ಬೇರು ಗಟ್ಟಿಯಾಗಿದ್ದರೆ, ವೃಕ್ಷ ಹೆಮ್ಮರವಾಗುತ್ತದೆ. ಮೂಲ ಕಥೆಯಲ್ಲಿ ಸತ್ವವಿದ್ದಾಗ ಅನುವಾದವೂ ಕೊರಗುವುದಿಲ್ಲ. ನಿಜ. ಬುಡಕಟ್ಟು ಭಾಷೆಯ ನಾನಾ ಪದ-ಪ್ರಯೋಗ ಗಳನ್ನು ಒಳಗೊಂಡ ಹಿಂದಿ ಕಾದಂಬರಿಯನ್ನು ಕನ್ನಡಕ್ಕೆ ತರುವುದು ಕಷ್ಟದ ಕೆಲಸ. ಹಾಗಾಗಿಯೇ ಅನುವಾದದಲ್ಲಿ ಅಲ್ಲಲ್ಲಿ ಕೃತ್ರಿಮತೆ, ಯಾಂತ್ರಿಕತೆ ಸುಳಿಯುತ್ತದೆ. ಭಾಷೆಯ ಬಳಕೆಯ ದೃಷ್ಟಿಯಿಂದ ಪಠ್ಯ ಪುಸ್ತಕವನ್ನು ಓದಿದ ಅನುಭವವಾಗುತ್ತದೆ. ಆದರೂ, ಮೂಲ ಲೇಖಕರ ಆಶಯ ಕಥೆಯಾಗಿ, ಚಿತ್ರವಾಗಿ, ವೇದನೆಯಾಗಿ, ಅಂತರಂಗವನ್ನು ತಟ್ಟಿರುತ್ತದೆ.
ಅಂತಿಮ ಜ್ವಾಲೆಯಲ್ಲಿ ಕಥಾನಾಯಕಿ ಗೋಮತಿ ನಗುವುದು ಒಮ್ಮೆ ಮಾತ್ರ. ಆದರೆ, ಓದುಗ ನಗುವುದಿಲ್ಲ. ಕೃತಿಯುದ್ದಕ್ಕೂ ಆಕೆಯ ಬಗ್ಗೆ ಮರುಕ ಪಡುತ್ತಾನೆ. ಅಷ್ಟರ ಮಟ್ಟಿಗೆ ಮೂಲ ಲೇಖಕರ ಆಶಯ ಈಡೇರಿಸುವಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ.
ರಾಘವೇಂದ್ರ ಗಣಪತಿ

No comments:

Post a Comment