Tuesday, July 21, 2009

ರಾಗ ಲಹರಿ

ಐಪಿಎಲ್‌ ವೃಕ್ಷದ ಮೊದಲ ಶಾಖೆ
ಕೆಪಿಎಲ್‌
ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಯುವಜನತೆಯನ್ನು ಬಹಳವಾಗಿ ಆಕರ್ಷಿಸಿದ ಸಂಗತಿಗಳು ಎರಡು. ಮೊದಲನೆಯದು ಐಪಿಎಲ್‌ ಇನ್ನೊಂದು ಐಪಿಲ್‌.
ಐಪಿಎಲ್‌ ಕ್ರಿಕೆಟ್‌ನಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ. ಕ್ರಿಕೆಟ್‌ ಧಣಿಗಳು ಹಾಗೂ ಆಟಗಾರರನ್ನು ಹಣದ ಹೊಳೆಯಲ್ಲಿ ತೇಲಿಸಿದ್ದು ಒಂದೆಡೆಯಾದರೆ, ಸಾಮಾಜಿಕವಾಗಿ, ವಿಶ್ವದಲ್ಲಿ ಒಂದು ಐಪಿಎಲ್‌ ಸಮುದಾಯವನ್ನೇ ಹುಟ್ಟುಹಾಕಿದೆ. ರಾಷ್ಟ್ರೀಯ ತಂಡದ ಪರ ಆಡುವುದಕ್ಕಿಂದ ಇಂಡಿಯನ್‌ ಪ್ರೀಮಿ ಯರ್‌ ಲೀಗ್‌ನಲ್ಲಿ ಆಡುವುದು ಪ್ರತಿಷ್ಠೆಯ, ಲಾಭ ದಾಯಕ ಸಂಗತಿ ಎಂಬ ವಾತಾವರಣ ನಿರ್ಮಾಣ ವಾಗಿದೆ. ಇಪ್ಪತ್ತು20 ಮಾದರಿಯನ್ನು ಒಂದು ಮಾಧ್ಯಮವಾಗಿಟ್ಟುಕೊಂಡು, ಐಪಿಎಲ್‌ ಕ್ರಿಕೆಟ್‌ ಸಮುದಾಯದಲ್ಲಿ ಕ್ರಾಂತಿಯ ಬೀಜ ಬಿತ್ತಿದೆ.
ಒಂದು ಮುಂಗಾರು ಮಳೆ ಯಶಸ್ವಿಯಾದಾಗ ಅಂಥ ಹತ್ತಾರು ಚಿತ್ರಗಳು ಹಿಂಬಾಲಿಸುವುದು ಜಗದ ಗುಣ. ಐಪಿಎಲ್‌ ಯಶಸ್ಸನ್ನು ಅನುಕರಿಸುವುದಕ್ಕೂ ವಿಶ್ವದ ವಿವಿಧೆಡೆಯಲ್ಲಿ ನಾನಾ ರೀತಿಯಲ್ಲಿ ಪ್ರಯತ್ನ ಗಳು ನಡೆದಿವೆ. ಅಂಥ ಯತ್ನಗಳಲ್ಲಿ ಗಮನಾರ್ಹ ವಾದುದು ಮತ್ತು ಸ್ವಲ್ಪ ವಿಶಿಷ್ಟವಾದುದು ಕರ್ನಾಟಕ ಪ್ರೀಮಿಯರ್‌ ಲೀಗ್‌.
ಮೊದಲನೆಯದಾಗಿ ಐಪಿಎಲ್‌ ಎನ್ನುವುದು ಕ್ರಿಕೆಟ್‌ ಹಿತಾಸಕ್ತಿಯನ್ನು ಮೀರಿದ ಬಿಸಿನೆಸ್‌. ಅದೊಂದು ಅತ್ಯಂತ ವೃತ್ತಿಪರವಾಗಿ ಮಾಡಲಾಗುವ ಕ್ರಿಕೆಟ್‌ನ ವ್ಯಾಪಾರ. ಅಲ್ಲಿ ಎಲ್ಲವೂ ಡಾಲರ್‌ ಲೆಕ್ಕದಲ್ಲೇ ನಿರ್ಧಾರವಾಗುತ್ತದೆ. ಕುದುರೆ ವ್ಯಾಪಾರದಂತೆ ಆಟಗಾರರ ತಲೆಗೆ ಕೋಟಿ ಬೆಲೆ ಕಟ್ಟಲಾಗುತ್ತದೆ. ಇಂಥ ಪ್ರಯತ್ನ ರಾಜ್ಯ ಮಟ್ಟದಲ್ಲಿ ನಡೆದರೆ, ಅಲ್ಲೂ ವ್ಯಾಪಾರ -ವ್ಯವಹಾರವೇ ಮುಖ್ಯ ಉದ್ದೇಶವಾಗಿರುವುದು ಸಹಜ. ಆದರೆ, ಆಲದ ಮರದ ನೆರಳಲ್ಲಿ ಬೇರೇನೂ ಬೆಳೆಯುವುದಿಲ್ಲ ಎಂಬ ಮಾತಿನಂತೆ, ಐಪಿಎಲ್‌ ನೆರಳಿನಲ್ಲಿ ಕೆಪಿಎಲ್‌ ತಲೆ ಎತ್ತಿ ನಿಲ್ಲಲಾದೀತೇ?
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕೆಪಿಎಲ್‌ ಸಂಪೂರ್ಣವಾಗಿ ಐಪಿಎಲ್‌ನ ಪಡಿಯಚ್ಚು. ಅಲ್ಲಿಯ ನಿಯಮಗಳು ಇಲ್ಲೂ ಅನ್ವಯವಾಗುತ್ತವೆ. ಅಲ್ಲಿನಂತೆ ಇಲ್ಲೂ ಹರಾಜು ಎಲ್ಲವೂ ನಡೆಯುತ್ತದೆ. ಆದರೆ, ಇದು ಕೇವಲ ರಾಜ್ಯಕ್ಕೆ ಸೀಮಿತವಾದ ಅಂತರ ಜಿಲ್ಲಾ ಟೂರ್ನಿ ಎನ್ನುವುದು ವ್ಯತ್ಯಾಸ. ಇಲ್ಲಿನ 8 ತಂಡಗಳಲ್ಲಿ ಬಹುತೇಕ ರಾಜ್ಯದ ಆಟಗಾರರೇ ಇರುತ್ತಾರೆ. ಪ್ರತೀ ತಂಡ ಹೊರ ರಾಜ್ಯಗಳ ಮೂವರು ಆಟಗಾರರನ್ನು ಮಾತ್ರ ಆರಿಸಬಹುದು. ಆದರೆ, ವಿದೇಶಿ ಆಟಗಾರರಿಗೆ ಇಲ್ಲಿ ಅವಕಾಶವಿಲ್ಲ. ಹಾಗಾಗಿ, ಇದು ಐಪಿಎಲ್‌ಗೆ ಪೂರಕವಾಗಿ ನಡೆಯಲಿದೆಯೇ ವಿನಾ ಪ್ರತಿಸ್ಪರ್ಧಿ ಯಾಗಿ ಬೆಳೆಯುವುದಿಲ್ಲ ಎಂದು ಭಾವಿಸಬಹುದು. ಇದೇ ಕಾರಣಕ್ಕೆ ಕೆಪಿಎಲ್‌ಗೆ ಬಿಸಿಸಿಐ ಅನುಮತಿಯೂ ಅಗತ್ಯವಿಲ್ಲ ಎಂದು ಸಂಘಟಕರು ಭಾವಿಸಿದ್ದಾರೆ.
ಆದರೆ, ಇದು ಯಶಸ್ವಿಯಾದೀತೇ?
ಇಂಥ ಟೂರ್ನಿ ಯಶಸ್ವಿಯಾಗಬೇಕಾದರೆ, ಮೊದಲನೆಯದಾಗಿ ಗುಣಮಟ್ಟವಿರಬೇಕು. ಜೊತೆಗೆ, ಟಿವಿ ಮೂಲಕ ಮನೆಮನೆಯನ್ನೂ ತಲುಪಬೇಕು. ಆಗ, ಪ್ರಾಯೋಜಕರು ಹೆಚ್ಚು ಹೆಚ್ಚಾಗಿ ಬರುತ್ತಾರೆ. ಈ ಟೂರ್ನಿಯಲ್ಲಿ ನೂರಕ್ಕೆ 90 ಭಾಗ ರಾಜ್ಯದ ಆಟಗಾರರೇ ಭಾಗವಹಿಸುವುದರಿಂದ, ಮೇಲ್ಮಟ್ಟದ ಗುಣಮಟ್ಟವನ್ನು ನಿರೀಕ್ಷಿಸಲಾದೀತೇ ಎನ್ನುವುದು ಪ್ರಶ್ನೆ. ಸುಮ್ಮನೆ ಮಾತಿಗೆ ಹೇಳುವುದಾದರೆ, ಭಾರತದ ಇಪ್ಪತ್ತು20 ತಂಡದಲ್ಲಿ ಕರ್ನಾಟಕದ ಒಬ್ಬನೇ ಒಬ್ಬ ಆಟಗಾರನೂ ಇಲ್ಲ. ಐಪಿಎಲ್‌ ಆಧಾರವಾಗಿಟ್ಟು ಹೇಳುವುದಾದರೆ, ಕುಂಬ್ಳೆ, ದ್ರಾವಿಡ್‌, ಮನೀಶ್‌ ಪಾಂಡೆ ಮತ್ತು ರಾಬಿನ್‌ ಉತ್ತಪ್ಪ, ಸ್ವಲ್ಪ ಮಟ್ಟಿಗೆ ವಿನಯ್‌ ಕುಮಾರ್‌ಗೆ ಮಾತ್ರ ಇಪ್ಪತ್ತು20 ಮಾದರಿ ಯಲ್ಲಿ ತಾರಾ ಮೌಲ್ಯ ಇದೆ. ಇಂಥ ಟೂರ್ನಿಯ ಮೂಲಕ ಹೊಸ ಪ್ರತಿಭೆಗಳು ಬರಬಾರದೆಂದಿಲ್ಲ. ಪ್ರಾಯಶಃ ದೀಪಕ್‌ ಚೌಗುಲೆ, ಮಯಾಂಕ್‌ ಅಗರ್‌ ವಾಲ್‌, ರಾಜು ಭಟ್ಕಳರಂಥ ಆಟಗಾರರು ಈ ಮಾದರಿಯಲ್ಲಿ ಹೆಚ್ಚು ಪ್ರಜ್ವಲಿಸಬಹುದು. ಇನ್ನೂ ಅನೇಕ ಆಟಗಾರರು ಬೆಳಕಿಗೆ ಬರಬಹುದು. ಆದರೂ, ಈ ಟೂರ್ನಿಯಲ್ಲಿ ಪ್ರತೀ ತಂಡದಲ್ಲಿ 17ರಂತೆ ಒಟ್ಟು 136 ಮಂದಿ ಕರ್ನಾಟಕದ ಆಟಗಾರರೇ ಇರುತ್ತಾರೆ. ನಿಜ, ಕೆಎಸ್‌ಸಿಎ ನಡೆಸುವ ವಿವಿಧ ವಯೋಮಿತಿ, ವಿವಿಧ ಹಂತಗಳ ಟೂರ್ನಿಯಲ್ಲಿ ಸಾಕಷ್ಟು ಪೈಪೋಟಿಯೇ ಇರುತ್ತದೆ. ಆದರೆ, ಕ್ರಿಕೆಟ್‌ನಲ್ಲಿ ರಾಜ್ಯ ಗುಣಮಟ್ಟ, ರಾಷ್ಟ್ರ ಗುಣಮಟ್ಟ ಹಾಗೂ ಅಂತಾ ರಾಷ್ಟ್ರೀಯ ಗುಣಮಟ್ಟಗಳ ನಡುವೆ ಅಗಾಧ ವ್ಯತ್ಯಾಸ ವಿರುತ್ತದೆ. ರಾಜ್ಯ ಆಟಗಾರರ ನಡುವಿನ ಕೆಪಿಎಲ್‌ನಲ್ಲಿ ಟಿವಿ ವೀಕ್ಷಕರನ್ನು ಆಕರ್ಷಿಸಲು ಅವಶ್ಯವಾದ ಅಂತಾ ರಾಷ್ಟ್ರೀಯ ಗುಣಮಟ್ಟವನ್ನು ಕಾಣಲು ಸಾಧ್ಯವೇ?
ರಾಜ್ಯ ತಂಡಗಳು ಆಡುವ ರಣಜಿಯಂಥ ಪಂದ್ಯ ಗಳನ್ನು ನೋಡಲು ಯಾರೂ ಕ್ರೀಡಾಂಗಣಕ್ಕೆ ಬರುವು ದಿಲ್ಲ. ಬಹುಶಃ ಕೆಪಿಎಲ್‌ನಂಥ ವೃತ್ತಿಪರ ಇಪ್ಪತ್ತು20 ಟೂರ್ನಿಗಳು ಜನರನ್ನು ಕ್ರೀಡಾಂಗಣಕ್ಕೆ ಸೆಳೆಯಲು ಪ್ರೇರಣೆ ಒದಗಿಸಬಹುದು. ರಾಷ್ಟ್ರೀಯ ತಂಡದಲ್ಲಿ ಯಾವತ್ತೂ ಅವಕಾಶ ಲಭ್ಯವಾಗದ ಬಹುಸಂಖ್ಯಾತ ಆಟಗಾರರಿಗೆ ಕೆಪಿಎಲ್‌ನಂಥ ಟೂರ್ನಿಗಳು ತಾರಾ ಮೌಲ್ಯ ಮತ್ತು ಜನಮನ್ನಣೆ ತಂದುಕೊಡಬಹುದು. ಹೆಚ್ಚು ಹಣ ಲಭಿಸಬಹುದು. ಐಪಿಎಲ್‌ ತಂಡಗಳು ಆಟಗಾರರ ಆಯ್ಕೆಗೆ ಕೆಪಿಎಲ್‌ನತ್ತ ಮುಖ ಮಾಡ ಬಹುದು. ಆದರೆ, ಕೆಪಿಎಲ್‌ ಸ್ಫೂರ್ತಿಯಿಂದ ಎಲ್ಲಾ ರಾಜ್ಯಗಳಲ್ಲೂ ಎಪಿಎಲ್‌, ಟಿಪಿಎಲ್‌, ಎಂಪಿಎಲ್‌, ಡಿಪಿಎಲ್‌, ಬಿಪಿಎಲ್‌, ಯುಪಿಎಲ್‌ಗಳು ಆರಂಭ ವಾದರೆ, ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗಬಹು ದೆಂಬುದು ಊಹಿಸಲು ಅಸಾಧ್ಯ.
ಕೆಪಿಎಲ್‌ ಯಶಸ್ವಿಯಾಗಬೇಕಾದರೆ, ಟಿವಿ ಮೂಲಕ ಮನೆಮನೆ ತಲುಪುವುದೂ ಅಷ್ಟೇ ಮುಖ್ಯ. ಈ ಕೆಲಸವನ್ನು ಯಾವ ಚಾನೆಲ್‌ ಮಾಡಲಿದೆ ಎನ್ನುವುದೂ ಪ್ರಶ್ನಾರ್ಹ. ನಿಯೊ ಸ್ಪೋರ್ಟ್ಸ್‌, ಇಎಸ್‌ಪಿಎಲ್‌-ಸ್ಟಾರ್‌, ಟೆನ್‌ ಸ್ಪೋರ್ಟ್ಸ್‌ನಂಥ ಕ್ರೀಡಾ ಚಾನೆಲ್‌ಗಳು ರಾಜ್ಯದ ಮೂಲೆ ಮೂಲೆಯನ್ನು ತಲುಪುವುದು ಅನುಮಾನ. ಅಂದರೆ, ಉದಯ, ಈ ಟಿವಿಯಂಥ ಜನಪ್ರಿಯ ಕನ್ನಡ ಚಾನೆಲ್‌ಗಳೇ (ಚಂದನವೂ ಆಗಬಹುದು) ಈ ಕೆಲಸ ಮಾಡಬೇಕು.
ಆರ್ಥಿಕವಾಗಿ ಐಪಿಎಲ್‌ನ ಫ್ರಾಂಚೈಸಿಗಳು ಖರ್ಚು ಮಾಡುವ ಬಹುಪಾಲು ಹಣ ಟಿವಿ ನೇರ ಪ್ರಸಾರದ ಮೂಲಕ ಮರಳಿ ಬರುತ್ತದೆ. ಆದರೆ, ಕೆಪಿಎಲ್‌ನಲ್ಲಿ ಫ್ರಾಂಚೈಸಿಗಳು ಟಿವಿ ಹಣವನ್ನು ನೆಚ್ಚಿಕೊಳ್ಳುವಂತಿಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಆದಾಯ ಮೂಲಗಳು ಹಾಗೂ ಹಂಚಿಕೆ ವಿಧಾನಗಳು ಬೇರೆಯೇ ರೀತಿ ಇದೆ. ಬಹುಶಃ ದಿಢೀರ್‌ ಲಾಭಕ್ಕಿಂತ, ದೀರ್ಘಕಾಲೀನ ಅವಧಿಯಲ್ಲಿ ಬಂಡವಾಳ ಹೂಡಿ ತಾಳ್ಮೆಯಿಂದ ಕಾಯುವಂಥವರು ಕೆಪಿಎಲ್‌ ಫ್ರಾಂಚೈಸಿ ಖರೀದಿಸಲು ಮುಂದಾಗಬಹುದು.
ಕೆಪಿಎಲ್‌ ಮೂಲಕ ಕೆಎಸ್‌ಸಿಎ ಒಂದು ರೀತಿಯಲ್ಲಿ ತನ್ನ ಹೆಬ್ಬಾಗಿಲನ್ನು ಎಲ್ಲರಿಗೂ ಮುಕ್ತವಾಗಿಸಿದೆ ಎನ್ನಬಹುದು. ಈಗಾಗಲೇ ವರದಿಯಾಗಿರುವಂತೆ ಜನಾರ್ದನ ರೆಡ್ಡಿಯಂಥ ಗಣಿ ಧಣಿಗಳು ಕ್ರಿಕೆಟ್‌ ಉದ್ಯಮಕ್ಕೂ ಕಾಲಿಟ್ಟರೆ, ಅವರು ಕೇವಲ ಕೆಪಿಎಲ್‌ ಲಾಭ-ನಷ್ಟ ಲೆಕ್ಕ ಹಾಕಿಕೊಂಡು ಸುಮ್ಮನೆ ಕೂರುವವ ರಲ್ಲ. ಬದಲಿಗೆ ಕೆಎಸ್‌ಸಿಎ ಆಡಳಿತ ಮಂಡಳಿ ಪ್ರವೇಶಿ ಸಲು ಅವರಿಗೆ ಅವಕಾಶದ ಬಾಗಿಲು ತೆರೆದಂತಾಗು ತ್ತದೆ. ಇದರಿಂದಾಗಿ ಇನ್ನು ಮುಂದೆ ಮಾಜಿ ಕ್ರಿಕೆಟಿಗ ರಿಂದಲೇ ನಿಯಂತ್ರಿಸಲ್ಪಡುತ್ತಿದ್ದ ಕೆಎಸ್‌ಸಿಎ ಒಳ ವಲಯಕ್ಕೆ ರಾಜಕಾರಣವೂ ಪ್ರವೇಶಿಸಲು ದಾರಿ ಯಾಗುತ್ತದೆ. ಆಪರೇಷನ್‌ ಕಮಲದಂತೆ ಆಪರೇಷನ್‌ ಕೆಎಸ್‌ಸಿಎ ನಡೆಸಿ ಮುಂದಿನ ಮಹಾ ಚುನಾವಣೆ ಯಲ್ಲಿ ಗಣಿ ಧಣಿಗಳು ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದರೂ, ಅದರಲ್ಲಿ ಅಚ್ಚರಿಯೇನೂ ಇಲ್ಲ.
ಕ್ರಿಕೆಟ್‌ ದೃಷ್ಟಿಯಿಂದ ರಾಜ್ಯದ ಯುವ ಆಟಗಾರ ರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಕೆಪಿಎಲ್‌ ಪ್ರದರ್ಶನ ಆಧರಿಸಿ ರಾಜ್ಯ ರಣಜಿ ತಂಡ ಆಯ್ಕೆ ಮಾಡುವುದು ಸುಲಭವಾಗುತ್ತದೆ. ಆಟಗಾರರಿಗೆ ಐಪಿಎಲ್‌, ಭಾರತ ತಂಡ ಪ್ರವೇಶಿಸುವುದಕ್ಕೂ ಕೆಪಿಎಲ್‌ ಹೆದ್ದಾರಿಯಾಗಬಹುದು. ಅಂಪೈರ್‌ಗಳು, ಸ್ಕೋರರ್‌ಗಳಿಂದ ಹಿಡಿದು ಪ್ರತಿಯೊಬ್ಬರಿಗೂ ಬಿಡುವಿಲ್ಲದ ಉದ್ಯೋಗದ ಜೊತೆಗೆ ಪ್ರಚಾರವೂ ಸಿಗುತ್ತದೆ. ಮಾಧ್ಯಮಗಳಲ್ಲಿ ಕ್ರಿಕೆಟ್‌ ಪ್ರಚಾರ ಇನ್ನಷ್ಟು ವಿಸ್ತರಿಸುವುದರಿಂದ, ಇತರ ನಿರ್ಲಕ್ಷಿತ ಕ್ರೀಡೆಗಳಿಗೆ ಇನ್ನಷ್ಟು ಅನ್ಯಾಯವಾಗಬಹುದು. ಶ್ರೀಮಂತ ಫ್ರಾಂಚೈಸಿ ಮಾಲಿಕರು ವಿದೇಶಿ ಕೋಚ್‌ಗಳನ್ನು, ವಿದೇಶದಿಂದ ಚಿಯರ್‌ಲೀಡರ್‌ಗಳನ್ನು ಕರೆತಂದು ರಂಗು ಹೆಚ್ಚಿಸಬಹುದು. ಬಹುಶಃ ಇನ್ನೊಂದು ವರ್ಷದ ಹೊತ್ತಿಗೆ ಕೆಪಿಎಲ್‌ ಬಹುಮಾನ ಮೊತ್ತವೂ ಹೆಚ್ಚ ಬಹುದು. ರಾಜ್ಯಮಟ್ಟದ ಆಟಗಾರರು ಎಷ್ಟು ಲಕ್ಷಗಳಲ್ಲಿ ಬೆಲೆ ಬಾಳುತ್ತಾರೆ ಎನ್ನುವುದು ಆಗಸ್ಟ್‌ 8ರಂದು ನಡೆಯುವ ಹರಾಜಿನಲ್ಲಿ ತಿಳಿಯಲಿದೆ.
ಎಲ್ಲವೂ ಅಂದುಕೊಂಡಂತೆ ಆದಲ್ಲಿ ಕೆಪಿಎಲ್‌, ಕರ್ನಾಟಕ ಕ್ರಿಕೆಟ್‌ನಲ್ಲಿ ದೊಡ್ಡ ಕ್ರಾಂತಿ ಉಂಟು ಮಾಡಬಹುದು.

No comments:

Post a Comment