Wednesday, July 15, 2009
ರಾಗ ಲಹರಿ
ಮೇಲೆ ಮಳೆ, ಕೆಳಗೆ ಹೊಳೆ
ಕಾವೇರಿ ಓಡುತ್ತಿದ್ದಳು.
ಎಡಬಿಡದೆ ಸುರಿದ ಭಾರೀ ಮಳೆಯಿಂದ ಅವಳ ಮೈ ಕೆಂಪಾಗಿತ್ತು. ಸತಾಯಿಸಿ, ಸತಾಯಿಸಿ, ಬರದ ಬೆದರಿಕೆ ಒಡ್ಡಿ ಕೊನೆಗೂ ಸುರಿದ ಧಾರಾಕಾರ ಮಳೆ ಇಳೆಯನ್ನು ಸೊಂಪಾಗಿಸಿದಂತೆಯೇ, ಅವಳ ಮನಸ್ಸನ್ನು ತಂಪಾಗಿಸಿತ್ತು. ಮೈ-ಕೈ ತುಂಬಿಕೊಂಡಿದ್ದ ಕೊಡಗಿನ ಬೆಡಗಿ ಕಲ್ಲು-ಕೊರೆಯನ್ನು, ಮರ-ಬಿಳಲನ್ನು, ಎದುರು ಅಡ್ಡಲಾಗಿ ಸಿಕ್ಕಿದ್ದೆಲ್ಲವನ್ನೂ ತನ್ನ ಒಡಲಾಳದಲ್ಲಿ ಹುದುಗಿಸಿಕೊಂಡು, ಗಮ್ಯವನ್ನು ಸೇರುವ ಒಂದೇ ಧಾವಂತದಲ್ಲಿ ಓಡುತ್ತಿದ್ದಳು. ಆ ರಭಸ, ಆ ಭೋರ್ಗರೆತ, ಜುಳುಜುಳು, ಭರ್, ಭಸ್, ಧಡ್.... ಶಬ್ದ - ನಿನಾದ ಅವಳ ಉತ್ಸಾಹಕ್ಕೆ, ಉಲ್ಲಾಸಕ್ಕೆ ಸಾಕ್ಷಿಯಾಗಿದ್ದವು.
ಇಂಥ ಕಾವೇರಿಯನ್ನು ನೋಡುವಾಗ ಆಕೆಯ ಹಿಂದೆಯೇ ಓಡುವ ಮನಸ್ಸಾಗಿತ್ತು. ಅದು ಸಾಧ್ಯವಿರಲಿಲ್ಲ. ಹಾಗಾಗಿ ಹರಿಯುವ ಕಾವೇರಿಯ ಜೊತೆಯಲ್ಲೇ ತೇಲುವ ಸಾಹಸಕ್ಕೆ ಮನ ಸೆಳೆದಿತ್ತು. ರ್ಯಾಫ್ಟಿಂಗ್ ಕೈಬೀಸಿ ಕರೆದಿತ್ತು.
ಪ್ರವಾಹದ ವಿರುದ್ಧ ಈಜುವುದು ಕಷ್ಟ. ಪ್ರವಾಹದ ಜೊತೆ ತೇಲುವುದೂ ಇನ್ನೂ ಕಷ್ಟ.
ಆದರೆ, ಕಾವೇರಿ ಕರುಣಾಮಯಿ. ನಂಬಿ ಬಂದವರನ್ನು ಆಕೆ ಮುಳುಗಿಸು ವುದಿಲ್ಲ; ರಬ್ಬರ್ ತೆಪ್ಪವೇರಿ ರ್ಯಾಫ್ಟಿಂಗ್ ಸಾಹಸಕ್ಕೆ ಮುಂದಾಗುವ ಉತ್ಸಾಹಿಗಳನ್ನು ಸಹ.
ಕೊಡಗಿನ ವಿರಾಜಪೇಟೆ ತಾಲೂಕು ಬರ್ಪೊಳೆಯಲ್ಲಿ ರಾಜ್ಯ ಯುವಜನ ಸೇವಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗಳು ಶನಿವಾರ, ಭಾನುವಾರ ರ್ಯಾಫ್ಟಿಂಗ್ ಆಯೋಜಿಸಿದ್ದವು. ಸಾಹಸ ಕ್ರೀಡೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ವತಃ ರಾಜ್ಯದ ಕ್ರೀಡಾ ಸಚಿವರೇ ತುಂಬಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಮಾಡಿದರು.
ಕ್ರೀಡಾ ಸಚಿವ ಗೂಳಿಹಟ್ಟಿ ಡಿ ಶೇಖರ್, ವಿಧಾನಸಭೆಯ ಸಭಾಪತಿ ಜಗದೀಶ್ ಶೆಟ್ಟರ್, ಚಿತ್ರದುರ್ಗದ ಶಿವಮೂರ್ತಿ ಮುರುಘ ಶರಣರು ರ್ಯಾಫ್ಟಿಂಗ್ ತೆಪ್ಪವೇರಿ ಯಾನ ಮಾಡಿದರು. ರ್ಯಾಫ್ಟಿಂಗ್ ಸುರಕ್ಷಿತ ಎಂಬ ಸಂದೇಶ ಸಾರಿದರು.
ಕ್ರೀಡಾ ಸಚಿವ ಶೇಖರ್ ಭಾನುವಾರ ಸತತ 2ನೇ ಬಾರಿ ಅತ್ಯುತ್ಸಾಹದಿಂದ ರ್ಯಾಫ್ಟಿಂಗ್‌ಗಿಳಿದಿದ್ದರು. ಸಚಿವರೊಂದಿಗೆ ಬೆಂಗಳೂರಿನಿಂದ ಆಗಮಿಸಿದ್ದ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಹಾಗೂ ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ಅಕಾಡೆಮಿಯ ವಿವಿಧ ಶ್ರೇಣಿಯ ಅಧಿಕಾರಿಗಳು ತೆಪ್ಪವೇರಿದ್ದರು.
ನೀರಿನಲ್ಲಿ ಮುಳುಗದಂತೆ ಕಾಪಾಡುವ ಜಾಕೆಟ್ ಧರಿಸಿ, ಹೆಲ್ಮೆಟ್ ತೊಟ್ಟು ತೆಪ್ಪವೇರಿದ ಸುಮಾರು 50 ಉತ್ಸಾಹಿಗಳು ನದಿ ಮಧ್ಯಕ್ಕೆ ಬರುತ್ತಿರುವಂತೆಯೇ ಮಳೆ ಸ್ವಾಗತಿಸಿತ್ತು. ಮೇಲೆ ಮಳೆ, ಕೆಳಗೆ ಭೋರ್ಗರೆಯುವ ಹೊಳೆ... ಆದರೆ, ಉತ್ಸಾಹ ಕುಂದಿರಲಿಲ್ಲ. ಬರ್ಪೊಳೆಯಿಂದ ಸುಮಾರು ನಾಲ್ಕು ಕಿ.ಮೀ. ದೂರ ಕಾವೇರಿ ಹರಿದಂತೆಲ್ಲಾ, ಅವಳ ಬೆನ್ನೇರಿ ಸಾಗುವ ರ್ಯಾಫ್ಟಿಂಗ್ ಸಾಹಸ ಮೈಮನವನ್ನು ರೋಮಾಂಚನಗೊಳಿಸಿತ್ತು. ಎಡಕ್ಕೆ ಹೊರಳಿ, ಬಲಕ್ಕೆ ತಿರುಗಿ, ಅಡ್ಡ ಸಿಕ್ಕುವ ಬಂಡೆಗಳಿಗೆ ಅಪ್ಪಳಿಸುತ್ತ, ಎದುರಾಗುವ ಪ್ರತಿರೋಧವನ್ನು ಮೀರಿ, ಇಳಿಜಾರಿನಲ್ಲಿ ಶರವೇಗದಲ್ಲಿ ಆಳಕ್ಕೆ ಧುಮ್ಮಿಕ್ಕಿ ಕುಲುಕುತ್ತ, ಬಳುಕುತ್ತ, ನಾಟ್ಯವಾಡುತ್ತ ಸಾಗುತ್ತಿದ್ದ ಕಾವೇರಿಯನ್ನು ಅನುಸರಿಸುವುದು ರುದ್ರ ರಮಣೀಯ ಅನುಭವವಾಗಿತ್ತು. ಹೊಳೆ ಸಾಗಿದಂತೆ ಸಾಲಾಗಿ ಹಿಂಬಾಲಿಸುತ್ತಿದ್ದ ತೆಪ್ಪಗಳ ಪೈಕಿ ಕೊನೆಯ ತೆಪ್ಪ ಇಳಿಜಾರಿನ ತಿರುವಿನಲ್ಲಿ ಎದುರಾದ ಬಂಡೆಗೆ ಅಪ್ಪಳಿಸಿ ತ್ರಿಶಂಕು ಭಂಗಿಯಲ್ಲಿ ತಟಸ್ಥಗೊಂಡಾಗ ಅದರಲ್ಲಿ ಕುಳಿತವರ ಎದೆ ಢವಗುಟ್ಟಿತ್ತು. ಆ ತೆಪ್ಪದಲ್ಲಿದ್ದ ತರಬೇತುದಾರನ ಜೊತೆ, ಇತರ ಆರು ಮಂದಿ ಉತ್ಸಾಹಿಗಳ ಜೀವ ಕಾವೇರಿಯ ಕೈಯಲ್ಲಿತ್ತು. ಆದರೆ, ಯಾರೊಬ್ಬರೂ ಗಾಬರಿಗೊಂಡಿರಲಿಲ್ಲ. ಜೀವರಕ್ಷಕ ಜಾಕೆಟ್ ತೊಟ್ಟಿದ್ದರಿಂದ ಯಾರೂ ಮುಳುಗುವುದಿಲ್ಲ ಎಂಬ ಸಮಾಧಾನವಿತ್ತು. ಆದರೆ, ಪ್ರವಾಹದ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗುವ ಅಪಾಯವಿತ್ತು. ಕೊನೆಗೂ ಅರ್ಧ ಗಂಟೆಗಳ ಪ್ರಯಾಸದ ಬಳಿಕ, ನೆರವಿಗೆ ಧಾವಿಸಿದ್ದ ಇತರ ತೆಪ್ಪಗಳ ತರಬೇತುದಾರರ ನೆರವಿನಿಂದ ತೆಪ್ಪವನ್ನು ಬಂಡೆಯ ಮೇಲಿನಿಂದ ನೀರಿಗಿಳಿಸಿದರೂ, ತೆಪ್ಪ ತಿರುವು ಮುರುವಾಗಿ ರ್ಯಾಫ್ಟಿಂಗ್ ಮಾಡುತ್ತಿದ್ದವರ ಮೇಲೆಯೇ ಉರುಳಿ ಬಿತ್ತು. ಈಗ ಉಸಿರುಗಟ್ಟುವ ಪರಿಸ್ಥಿತಿ. ಕೆಳಗೆ ಭೋರ್ಗರೆಯುವ ನದಿ, ತಲೆಯ ಮೇಲೆ ರ್ಯಾಫ್ಟಿಂಗ್ ತೆಪ್ಪ. ಕೊನೆಗೂ ಪ್ರಯಾಸದಿಂದ ತೆಪ್ಪವನ್ನು ಯಥಾಸ್ಥಿತಿಗೆ ತಂದು, ಒಬ್ಬೊಬ್ಬರಾಗಿ ಮೇಲೇರುವಾಗ ಎಲ್ಲ ಜೀವ ಬಾಯಿಗೆ ಬಂದಿತ್ತು. ಅಲ್ಲೇ ಸುರಕ್ಷಿತ ಸ್ಥಳದಲ್ಲಿ ನಿಂತು ಇದನ್ನೆಲ್ಲಾ ನೋಡುತ್ತಿದ್ದ ಇತರ ತೆಪ್ಪಗಳಲ್ಲಿದ್ದವರಿಗೆ ಉಸಿರುಗಟ್ಟಿತ್ತು. ಎಲ್ಲರೂ ಸುರಕ್ಷಿತವಾಗಿ ಪಾರಾದಾಗ ಸಚಿವರು ನಿಟ್ಟುಸಿರು ಬಿಟ್ಟಿದ್ದರು.
ಸಾಹಸ ಕ್ರೀಡೆಗಳೆಂದರೆ, ಇಂಥ ಅಪಾಯಗಳೆಲ್ಲಾ ಇದ್ದಿದ್ದೇ. ಬರ್ಪೊಳೆಯಲ್ಲಿ ನಡೆಯುತ್ತಿದ್ದುದು ವೈಟ್ ವಾಟರ್ ರ್ಯಾಫ್ಟಿಂಗ್ ಅಂದರೆ, ದುರ್ಗಮ ಹಾದಿಯಲ್ಲಿ ನಡೆಯುತ್ತಿದ್ದ ಸಾಹಸ ಯಾನ. ಇದು ಏಕವ್ಯಕ್ತಿ ಕ್ರೀಡೆಯಲ್ಲ. ಇಲ್ಲಿ ಸಂಘಸ್ಫೂರ್ತಿ ಬಹಳ ಮುಖ್ಯ. ತರಬೇತುದಾರ ಎಷ್ಟೇ ನಿಪುಣನಾದರೂ, ಏಕಾಂಗಿಯಾಗಿ ಆತ ಏನನ್ನೂ ಮಾಡುವುದು ಸಾಧ್ಯವಿಲ್ಲ. ಏಕೆಂದರೆ, ಆ ತೆಪ್ಪದಲ್ಲಿರುವ ಪ್ರತಿಯೊಬ್ಬರೂ, ಏಕಪ್ರಕಾರವಾಗಿ ಪಾಲ್ಗೊಳ್ಳಬೇಕು. ತರಬೇತುದಾರನ ಆದೇಶದಂತೆ ಹುಟ್ಟುಗಳನ್ನು ಹಾಕಬೇಕು. ಅವರಲ್ಲಿ ಯಾರೇ ತಪ್ಪು ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ಸಾಹಸ ಕ್ರೀಡೆಗಳ ರೋಮಾಂಚನ ಅಡಗಿರುವುದೇ ಇಂಥ ಅಪಾಯದಲ್ಲಿ...
ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಮರುಹುಟ್ಟು
ಕಳೆದ ಕೆಲವು ವರ್ಷಗಳಿಂದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನಿಷ್ಕ್ರಿಯವಾಗಿತ್ತು. ಸರ್ಕಾರದಿಂದ ವರ್ಷಕ್ಕೆ ಲಭ್ಯವಾಗುತ್ತಿದ್ದ 7-9 ಲಕ್ಷ ರೂ. ಅನುದಾನ ಸಿಬ್ಬಂದಿಯ ಸಂಬಳಕ್ಕೇ ಸಾಲುತ್ತಿರಲಿಲ್ಲ. ಯಾವುದೇ ಚಟುವಟಿಕೆಯಿಲ್ಲದೆ ಸೊರಗುತ್ತಿದ್ದ ಅಕಾಡೆಮಿಯನ್ನು ಮುಚ್ಚುವುದು ಒಳಿತು ಎಂಬ ಒತ್ತಾಯ- ಒತ್ತಡಗಳಿದ್ದವು. ಆದರೆ, ಈಗ ಕಾಲ ಬದಲಾಗಿದೆ. ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅಕಾಡೆಮಿಗೆ ದೊರಕುತ್ತಿದ್ದ ಅನುದಾನವನ್ನು ವರ್ಷಕ್ಕೆ 2.5 ಕೋಟಿ ರೂ.ಗಳಿಗೆ ಏರಿಸಿದ್ದಾರೆ. ಜೊತೆಗೆ ಅಕಾಡೆಮಿಗೆ ಅಗತ್ಯವಾದ ಸುಮಾರು 44 ಅತ್ಯಾಧುನಿಕ ಪರಿಕರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ.
ರ್ಯಾಫ್ಟಿಂಗ್, ರಾಕ್ ಕ್ಲೈಂಬಿಂಗ್ ಮತ್ತು ಟ್ರೆಕ್ಕಿಂಗ್ ಮೂಲಕ ಪ್ರವಾಸಿಗರನ್ನು ಆಕರ್ಷಿಸಬಹುದು. ಜೊತೆಗೆ ಯುವಜನರಲ್ಲಿ ಆತ್ಮವಿಶ್ವಾಸ ಬೆಳೆಸಬಹುದು. ಹಾಗಾಗಿ ಜಿಲ್ಲಾ ಯುವಜನ ಕೇಂದ್ರಗಳ ಮೂಲಕ ಈ ಕ್ರೀಡೆಗಳನ್ನು ಜನಪ್ರಿಯಗೊಳಿಸ ಲಾಗುವುದು ಎಂದು ಸಚಿವ ಗೂಳಿಹಟ್ಟಿ ಶೇಖರ್ ಹೇಳಿದರು.
ರ್ಯಾಫ್ಟಿಂಗ್ ನಿರ್ದಿಷ್ಟ ಋತುವಿನಲ್ಲಿ (ಮಳೆಗಾಲ) ಪಾಲ್ಗೊಳ್ಳಬಹುದಾದ ಕ್ರೀಡೆಯಾದರೂ, ರಾಕ್ ಕ್ಲೈಂಬಿಂಗ್, ಟ್ರೆಕ್ಕಿಂಗ್ ವರ್ಷಪೂರ್ತಿ ನಡೆಸಬಹುದು. ಅಕಾಡೆಮಿ ಮುಂದಿನ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿ ಸಾಹಸ ಕ್ರೀಡೆಗಳನ್ನು ಆಯೋಜಿಸಲಿದೆ ಎಂದು ಸಚಿವರು ಹೇಳಿದರು.
ಕ್ರೀಡಾ ಸಚಿವರ ಕ್ರೀಡಾಸ್ಫೂರ್ತಿ
ಯಾವುದೇ ಹಮ್ಮು-ಬಿಮ್ಮುಗಳಿಲ್ಲದೆ ಮುಕ್ತವಾಗಿ ಎಲ್ಲರೊಡನೆ ಬೆರೆಯುವ ಕ್ರೀಡಾ ಸಚಿವ, 39 ವರ್ಷದ ಗೂಳಿಹಟ್ಟಿ ಡಿ ಶೇಖರ್ ರ್ಯಾಫ್ಟಿಂಗ್ ಮಾಡುವಾಗ ಇಪ್ಪತ್ತು ವರ್ಷ ಚಿಕ್ಕವರಾಗಿದ್ದರು. ರ್ಯಾಫ್ಟಿಂಗ್ ಯಾನದ ನಡುವೆ ಸಮತಟ್ಟಾದ ಜಾಗದಲ್ಲಿ ಎಲ್ಲರಿಗೂ ತೆಪ್ಪದಿಂದ ಕೆಳಗಿಳಿದು ನೀರಿನಲ್ಲಿ ತೇಲಾಡುವಂತೆ ಪ್ರ್ರೇರೇಪಿಸಲಾಗುತ್ತಿತ್ತು. ಸಚಿವರು ಮೊದಲಿಗರಾಗಿ ನೀರಿಗೆ ಧುಮುಕಿದರು. ಅಂಗಾತ ಮಲಗಿ ತೇಲಿದರು. ಹಿಮ್ಮುಖವಾಗಿ ಈಜಿದರು. ಸುಮಾರು ಕಾಲುಗಂಟೆ ನೀರಿನಲ್ಲಿ ಮನಸೋಇಚ್ಛೆ ತೇಲಿದ ಸಚಿವರು ತೆಪ್ಪವೇರಿದ ಮೇಲೆ ಇಲ್ಲಿ ನೀರಿನ
ಆಳವೆಷ್ಟಿದೆ ಎಂದು ತರಬೇತುದಾರನನ್ನು ಕೇಳಿದರು. ಸುಮಾರು 40 ಅಡಿ ಎಂದು ಉತ್ತರಿಸಿದಾಗ ಬೆಚ್ಚಿದರು! ಜೀವರಕ್ಷಕ ಜಾಕೆಟ್ ಈಜು ಬರದಿದ್ದವರಿಗೂ 40 ಅಡಿ ನೀರಿನಲ್ಲಿ ತೇಲುವ ಧೈರ್ಯ ತಂದುಕೊಟ್ಟಿತ್ತು.
ಶೆಟ್ಟರ್ ಭಯ-ಅಭಯ
ವಿಧಾನಸಭೆಯ ಸಭಾಪತಿ ಜಗದೀಶ್ ಶೆಟ್ಟರ್, ರ್ಯಾಫ್ಟಿಂಗ್ ಆರಂಭಿಸುವ ಮೊದಲು ಬಹಳ ಭಯವಾಗಿತ್ತು ಎಂದು ಹೇಳಿಕೊಂಡರು. ಆದರೆ, ಕ್ಷಿಪ್ರವಾಗಿ ಎಲ್ಲಾ ಆತಂಕ ದೂರವಾಯಿತು. ಉಲ್ಲಾಸ ಮೂಡಿತು ಎಂದು ಹೇಳಿಕೊಂಡರು. ಕೊಡಗಿನಲ್ಲಿ ರ್ಯಾಫ್ಟಿಂಗ್‌ನಂಥ ಕ್ರೀಡೆಗಳನ್ನು ಉತ್ತೇಜಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಳೆಸಬಹುದು ಎಂದು ಅವರು ಹೇಳಿದರು. ಕ್ರೀಡಾ ಸಚಿವರಾಗಿ ಗೂಳಿಹಟ್ಟಿ ಶೇಖರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೊಗಳಿದರು. ರಾಜ್ಯದ ಎಲ್ಲಾ ಸಚಿವರು, ಶಾಸಕರು ರ್ಯಾಫ್ಟಿಂಗ್‌ನಲ್ಲಿ ಭಾಗವಹಿಸಲಿ ಎಂದು ಅವರು ಕರೆ ನೀಡಿದರು.
Subscribe to:
Post Comments (Atom)
No comments:
Post a Comment