Thursday, July 9, 2009

ರಾಗ ಲಹರಿ


`ನೀವೇ ಮನಮೋಹನ್‌ ಸಿಂಗ್‌ ಎಂದು ಹೇಗೆ ನಂಬಲಿ?'

ಮಾಲತಿ ಹೊಳ್ಳ ಭಾವುಕರಾಗಿದ್ದರು. ಇಂದು ನನ್ನ ಜೀವನದಲ್ಲೇ ಮರೆಯಲಾಗದ ದಿನ ಎಂದರು. ತಮ್ಮ ಐವತ್ತೊಂದು ವಸಂತಗಳ ಸುಖ-ದುಃಖ, ಹೋರಾಟದ ನೆನಪುಗಳು ಉಕ್ಕಿಬರುತ್ತಿರುವಂತೆಯೇ, ಕಣ್ಣಂಚಿನಲ್ಲಿ ಹನಿ ಜಿನುಗಿತು.
ನನ್ನ ಜೀವನ- ಸಾಧನೆ ಎಲ್ಲರಿಗೂ ಮಾದರಿ ಎಂಬ ಭ್ರಮೆಯೇನಿಲ್ಲ. ನನ್ನಂತೆ ವಿಕಲಾಂಗರ ಸಮುದಾಯದ ಧ್ವನಿ ನಾನಾದರೆ ಸಾಕು ಎಂದರು. ಯಾವುದೋ ಒಂದು ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರು ಎಲ್ಲವೂ ಮುಗಿದು ಹೋಯಿತೆಂದು ದುಃಖಿಸುತ್ತ, ತಮ್ಮ ಸುತ್ತಮುತ್ತ ಇರುವವರನ್ನು ನೋಯಿಸುವ ಬದಲು ಸಕಾರಾತ್ಮಕವಾಗಿ ಯೋಚಿಸಲು ತಮ್ಮ ಜೀವನ ಕೃತಿ ದಾರಿದೀಪವಾದರೆ ಸಾಕು ಎಂದರು. ಕೀಳರಿಮೆ ನಮ್ಮ ಬಹುದೊಡ್ಡ ಶತ್ರು ಎಂದರು.
ಬುಧವಾರ ನಡೆದ ಖ್ಯಾತ ಪ್ಯಾರಾಲಿಂಪಿಕ್‌ ಅಥ್ಲೀಟ್‌, ಅರ್ಜುನ, ಪದ್ಮಶ್ರೀ, ಏಕಲವ್ಯ ಪುರಸ್ಕೃತ ಮಾಲತಿ ಹೊಳ್ಳ ಅವರ ಜೀವನ ಚರಿತ್ರೆ `ಒಂದು ವಿಶಿಷ್ಟ ಸ್ಫೂರ್ತಿ' (ಅ ಈಜ್ಛ್ಛಿಛ್ಟಿಛ್ಞಿಠಿ ಖಜ್ಟಿಜಿಠಿ) ಕೃತಿ ಬಿಡುಗಡೆ ಸಮಾರಂಭ ಅದಾಗಿತ್ತು.
ಅಲ್ಲಿ ಬಾಲ್ಯದ ನೆನಪುಗಳಿದ್ದವು. ಬದುಕಿನ ವಿವಿಧ ಹಂತಗಳಲ್ಲಿ ಪಟ್ಟ ದೈಹಿಕ, ಮಾನಸಿಕ ಕ್ಲೇಷಗಳ ನೋವಿನ ಗೆರೆ ಇತ್ತು. ಸಂಕಲ್ಪ ಶಕ್ತಿ ಇದ್ದರೆ ಏನೆಲ್ಲಾ ಸಾಧಿಸಬಹುದು ಎಂಬ ಹೆಮ್ಮೆಯಿತ್ತು.
`ಬಾಲ್ಯದಲ್ಲಿ ನಾನು ಹಕ್ಕಿಯಂತೆ ಹಾರುವ ಕನಸು ಕಾಣುತ್ತಿದ್ದೆ. ಆದರೆ, ಬೆಳೆಯುತ್ತಿದ್ದಂತೆ ಓಡುವುದಕ್ಕೆ ಕಾಲು ಗಳು ಬೇಕು, ಹಾರುವುದಕ್ಕೆ ರೆಕ್ಕೆಗಳು ಬೇಕು ಎಂಬ ವಾಸ್ತವ ಅರ್ಥ ವಾಯಿತು. ಅದರಿಂದ ನನಗೆ ನಿರಾಸೆ ಯೇನೂ ಆಗಿರಲಿಲ್ಲ. ಆದರೆ, ನೋವಾ ಗಿತ್ತು. ಬಹುಶಃ, ಒಂದಲ್ಲ ಒಂದು ದಿನ ನಾನೂ ಓಡುತ್ತೇನೆ... ಎಂಬ ಕನಸನ್ನು ಕಂಡೆ. ವೇಗವಾಗಿ ಅಲ್ಲದಿರಬಹುದು. ಆದರೆ, ನಾನೂ ಓಡುತ್ತೇನೆ...' ಮಾಲತಿ ತಾವು ಬದುಕು ಸ್ವೀಕರಿಸಿದ ರೀತಿಯನ್ನು ವಿಶ್ಲೇಷಿಸಿದ್ದು ಹೀಗೆ.
ಇನ್ನೊಂದು ಸ್ವಾರಸ್ಯಕರ ಪ್ರಸಂಗ ವನ್ನು ಮಾಲತಿ ಕೃತಿಯಲ್ಲಿ ಹೇಳಿ ಕೊಂಡಿದ್ದಾರೆ....
1994ರಲ್ಲಿ ಮಾಲತಿ ಕಾರು ಕೊಳ್ಳುವ ಸಲುವಾಗಿ ತೆರಿಗೆ ಮನ್ನಾ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಲು ದೆಹಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ವಿತ್ತ ಸಚಿವರಾಗಿದ್ದ ಹಾಲಿ ಪ್ರಧಾನಿ ಡಾ ಮನಮೋಹನ್‌ ಸಿಂಗ್‌, ಮಾಲತಿ ಅವರ ಸಾಧನೆಯ ಪ್ರಮಾಣಪತ್ರಗಳ ಸತ್ಯಾಸತ್ಯತೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದರು.
ಮಾಲತಿ 150 ಪ್ರಮಾಣಪತ್ರಗಳನ್ನು ಪ್ರದರ್ಶಿಸಿದಾಗ, `ಇವೆಲ್ಲಾ ನಿಮ್ಮವೇ ಎಂದು ನಾನು ಹೇಗೆ ನಂಬಲಿ' ಎಂದು ಮನಮೋಹನ್‌ ಸಿಂಗ್‌ ಪ್ರಶ್ನಿಸಿದ್ದರು.
ಇದರಿಂದ ನೊಂದ ಮಾಲತಿ, `ಸರ್‌, ನೀವೇ ಮನಮೋಹನ್‌ ಸಿಂಗ್‌ ಎಂದು ನಾನು ಹೇಗೆ ನಂಬಲಿ' ಎಂದು ಮರು ಪ್ರಶ್ನೆ ಎಸೆದಿದ್ದರು.
`ಈ ಪ್ರಶ್ನೆಯಿಂದ ಸಿಂಗ್‌ ಗಲಿಬಿಲಿಗೊಳಗಾದರು. ನಿಮ್ಮ ಮಾತಿನ ಅರ್ಥವೇನು' ಎಂದು ಸ್ಪಷ್ಟನೆೆ ಬಯಸಿದರು.
`ಸರ್‌, ನಿಮಗೆ ಮೋಸ ಮಾಡುವ ಉದ್ದೇಶವಿದ್ದಿದ್ದರೆ, ನಾನು ಈ ಎಲ್ಲಾ ಸಮಸ್ಯೆಗಳ ನಡುವೆ 46 ಗಂಟೆಗಳ ರೈಲು ಪ್ರಯಾಣ ಮಾಡಿ ಇಲ್ಲಿಗೆ ಬರುತ್ತಿರಲಿಲ್ಲ. ಅಂಚೆಯ ಮೂಲಕ ಪ್ರಮಾಣಪತ್ರ ರವಾನಿಸುತ್ತಿದ್ದೆ. ಇವೆಲ್ಲವೂ ನಿಜವಾದ ಪ್ರಮಾಣಪತ್ರಗಳು. ಅಗತ್ಯವೆನಿಸಿದರೆ, ಶಾಸ್ತ್ರಿ ಭವನದಲ್ಲಿ ಕ್ರೀಡಾ ಸಚಿವಾಲಯದವರೊಂದಿಗೆ ಪರಿಶೀಲಿಸಬಹುದು' ಎಂದು ವಿನಯದಿಂದ ಮಾಲತಿ ಹೇಳಿದರು.
ಮನಮೋಹನ್‌ ಸಿಂಗ್‌ ಕೂಡಲೇ ಕ್ಷಮೆ ಕೋರಿದರು. `ನೀವು ಬೆಂಗಳೂರು ತಲುಪುವ ಮುನ್ನ ನಿಮ್ಮ ಕೆಲಸ ಆಗಿರುತ್ತದೆ ಎಂದು ಭರವಸೆ ನೀಡಿದರು'.
ನಾನು ಬೆಂಗಳೂರಿಗೆ ಮರಳುವ ಹೊತ್ತಿಗೆ ನನ್ನ ಮೇಜಿನ ಮೇಲೆ ಸಂಬಂಧಪಟ್ಟ ಪತ್ರವಿತ್ತು ಎಂದು ಮಾಲತಿ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.
ಪ್ಯಾರಾಲಿಂಪಿಕ್ಸ್‌, ಏಷ್ಯಾ ಕ್ರೀಡಾಕೂಟ, ವಿಶ್ವ ಮಾಸ್ಟರ್ಸ್‌ ಕೂಟ, ಕಾಮನ್ವೆಲ್ತ್‌ ಕ್ರೀಡಾಕೂಟ ಮತ್ತು ಮುಕ್ತ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ 300ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಮಾಲತಿ, ಜೀವನದಲ್ಲಿ ಅಸಾಧ್ಯ ಯಾವುದೂ ಇಲ್ಲ. ಇದೇ ತಮ್ಮ ಜೀವನದ ಧ್ಯೇಯವಾಕ್ಯ ಎಂದರು.
ಅವರ ಜೀವನಚರಿತ್ರೆಯನ್ನು ಹಿರಿಯ ಪತ್ರಕರ್ತ ಹಾಗೂ ಎಚ್‌ಎಎಲ್‌ನಲ್ಲಿ ಕಾರ್ಪೊರೇಟ್‌ ಕಮ್ಯುನಿಕೇಶನ್ಸ್‌ ವಿಭಾಗದ ಮುಖ್ಯಸ್ಥರಾಗಿರುವ ಎಂ. ಅನಂತ ಕೃಷ್ಣನ್‌ ರಚಿಸಿದ್ದಾರೆ.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಕ್ರಿಕೆಟಿಗ ಸಯ್ಯದ್‌ ಕಿರ್ಮಾನಿ, ಮಾಲತಿ ತಮ್ಮ ಸಾಧನೆಯ ಮೂಲಕ ಯಾವ ರೀತಿ ವಿಶಿಷ್ಟ ಬದಲಾವಣೆ ಉಂಟು ಮಾಡಿದ್ದಾರೆಂಬುದನ್ನು ಸೋದಾಹರಣವಾಗಿ ಬಣ್ಣಿಸಿದರು.
ಪುಸ್ತಕವನ್ನು www.adifferentspirit.com ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಪುಸ್ತಕ ಮಾರಾಟದಿಂದ ಬರುವ ಹಣ ಮಾಲತಿ ಹೊಳ್ಳ ನಡೆಸುತ್ತಿರುವ ಮಾತೃ ಪ್ರತಿಷ್ಠಾನದ ನಿರ್ವಹಣೆಗೆ ವಿನಿಯೋಗವಾಗಲಿದೆ.

No comments:

Post a Comment