Tuesday, July 7, 2009
ರಾಗ ಲಹರಿ
ದೊರೆಯ ಸಂಭ್ರಮಕ್ಕೆ 15 ಕಾರಣಗಳು
ಐತಿಹಾಸಿಕ, ಸಾರ್ವಕಾಲಿಕ ಸಾಧನೆಗಳನ್ನು ಅಂಕಿ-ಅಂಶಗಳ ಮೂಲಕ ಅಳೆದು ತೂಗುವುದು ಅಭ್ಯಾಸ. ಇದು ಸ್ವಾಭಾವಿಕವಾಗಿದ್ದರೂ, ಅಷ್ಟೊಂದು ಸಮಂಜಸವೇನೂ ಅಲ್ಲ. ಆದರೂ, ಅದನ್ನು ಬಿಟ್ಟರೆ, ಇನ್ನೊಂದು ಸಮರ್ಪಕ ಮಾರ್ಗ ಇಲ್ಲ.
ರೋಜರ್ ಫೆಡರರ್ ಟೆನಿಸ್ ಇತಿಹಾಸದಲ್ಲಿ ಶ್ರೇಷ್ಠ ರಲ್ಲೊಬ್ಬರು ಎಂದು ಈವರೆಗೆ ಪರಿಗಣಿಸಲಾಗುತ್ತಿತ್ತು. ಆದರೆ, ಭಾನುವಾರದ ನಂತರ ಅಂಕಿ-ಅಂಶಗಳ ದಾಖಲೆಯಲ್ಲಿ ಉಳಿದೆಲ್ಲರನ್ನು ಮೀರಿ ನಿಂತಿದ್ದಾರೆ. ಹಾಗಾಗಿ ಅವರೇ ನಿಜವಾದ ಸರ್ವಶ್ರೇಷ್ಠ ಎಂದು ಗುರುತಿಸುವ ಕಾತರ ಎಲ್ಲೆಡೆ ಕಾಣುತ್ತಿದೆ. ನಿಜ, ಮುಕ್ತ ಟೆನಿಸ್ ಯುಗದಲ್ಲಾಲೀ, ಅದಕ್ಕೆ ಮುನ್ನವಾಗಲೀ, ಫೆಡರರ್ ಗೈದಷ್ಟು ಸಾಧನೆಗಳನ್ನು ಬೇರಾರೂ ಮಾಡಿಲ್ಲ. ಕೆಲವೊಂದು ಬೆರಳೆಣಿಕೆಯ ದಾಖಲೆಗಳನ್ನುಳಿದು ಇನ್ನೆಲ್ಲವೂ ಅವರಿಗೊಲಿದಿದೆ.
ಭಾನುವಾರ ಅವರು ಅತ್ಯಂತ ನಾಟಕೀಯ, ರಂಜನೀಯ, ಪೈಪೋಟಿಯ ಮ್ಯಾರಥಾನ್ ಸಮರದಲ್ಲಿ ಅಮೆರಿಕದ ಆಂಡಿ ರಾಡಿಕ್‌ರನ್ನು ಸೋಲಿಸಿ 6ನೇ ಬಾರಿಗೆ ವಿಂಬಲ್ಡನ್ ಗೆದ್ದುಕೊಂಡರು. ಅಲ್ಲಿಗೆ ಇತಿಹಾಸದಲ್ಲೇ ಅತ್ಯಧಿಕ 15 ಗ್ರಾಂಡ್‌ಸ್ಲಾಂಗಳನ್ನು ಗೆದ್ದ ಸಾಧನೆ ಅವರ ದ್ದಾಯಿತು. ಈ ಹಾದಿಯಲ್ಲಿ ಅವರು ಮೀರಿ ನಿಂತಿದ್ದು ಪೀಟ್ ಸಾಂಪ್ರಾಸ್(14 ಗ್ರಾಂಡ್‌ಸ್ಲಾಂ)ರನ್ನು. ಅಮೆ ರಿಕದ ದಿಗ್ಗಜನಿಗೊಲಿಯದ ಫ್ರೆಂಚ್ ಓಪನ್‌ನಲ್ಲೂ ಕಳೆದ ತಿಂಗಳು ಯಶಸ್ಸು ಸಂಪಾದಿಸಿರುವ ಫೆಡರರ್, ಈಗ ನಿಜ ಅರ್ಥದಲ್ಲಿ ಎಲ್ಲಾ ಗ್ರಾಂಡ್‌ಸ್ಲಾಂ, ಎಲ್ಲಾ ಮಾದರಿ ಕೋರ್ಟ್, ವಾತಾವರಣ ಹಾಗೂ ಎದುರಾಳಿ ಗಳ ವಿರುದ್ಧ ಯಶಸ್ಸು ಸಂಪಾದಿಸಿದಂತಾಗಿದೆ. ಹಾಗಾಗಿ ಅವರನ್ನು ಸರ್ವ ಶ್ರೇಷ್ಠ ಎನ್ನಲು ಯಾವುದೇ ಅಡ್ಡಿ ಇದ್ದಂತಿಲ್ಲ.
ಆದರೂ, ಕೆಲವರ ತಕರಾರಿದೆ.
ಅಂಥವರ ಪ್ರಕಾರ, ಅಂಕಿ-ಅಂಶಗಳ ಆಧಾರದ ಮೇಲೆ ಫೆಡರರ್ ಶ್ರೇಷ್ಠ ಎನ್ನುವುದು ಮಹಾಪರಾಧ. ಸಾಂಪ್ರಾಸ್ 14 ಗ್ರಾಂಡ್‌ಸ್ಲಾಂಗಳನ್ನು 12 ವರ್ಷಗಳ ವೃತ್ತಿಜೀವನದಲ್ಲಿ ಗೆದ್ದಿದ್ದರು. ಆದರೆ, ಫೆಡರರ್ 6 ವರ್ಷಗಳಲ್ಲಿ 15 ಗ್ರಾಂಡ್‌ಸ್ಲಾಂ ಗೆದ್ದಿದ್ದಾರೆ. ಆದರೂ, ಸ್ವಿಟ್ಜರ್ಲೆಂಡ್‌ನ ದೊರೆಗಿಂತ ಅಮೆರಿಕದ ದಿಗ್ಗಜನೇ ಶ್ರೇಷ್ಠ. ಏಕೆಂದರೆ, ಫೆಡರರ್ 15 ಗ್ರಾಂಡ್‌ಸ್ಲಾಂ ಗೆದ್ದ ಅವಧಿಯಲ್ಲಿ ಅವರಿಗೆ ಸಮಬಲದ ಪೈಪೋಟಿ ನೀಡುವ ವರಿರಲಿಲ್ಲ ಎಂದು ಅವರು ವಾದಿಸುತ್ತಾರೆ. ಹಿಂದೆ ಬೋರ್ಗ್, ಲೆಂಡ್ಲ್, ಕಾನರ್ಸ್, ಮೆಕೆನ್ರೋ, ಬಳಿಕ ಬೆಕ್ಕರ್, ಕೊರಿಯರ್, ಚಾಂಗ್, ಎಡ್ಬರ್ಗ್, ಸಾಂಪ್ರಾಸ್, ಅಗಾಸ್ಸಿ, ಸ್ವಲ್ಪ ನಂತರ, ಇವಾನಿಸೆವಿಚ್, ರಾಫ್ಟರ್ ಮೊದ ಲಾದವರ ಕಾಲದಲ್ಲಿ ಇದ್ದ ಸಮಬಲದ ಪೈಪೋಟಿ ಈಗಿಲ್ಲ ಎಂಬ ಅಭಿಪ್ರಾಯವಿದೆ. ಆದರೆ, ಇದು ಸತ್ಯ ವಲ್ಲ. ಏಕೆಂದರೆ, ವರ್ತಮಾನದಲ್ಲಿ ಪ್ರತಿಭಾಸಂಪನ್ನರ ಕೊರತೆಯೇನೂ ಇಲ್ಲ. ಆದರೆ, ಫೆಡರರ್, ನಡಾಲ್ ಸಾಮರ್ಥ್ಯದ ಎದುರು ನೊವಾಕ್ ಡಿಜೊಕೊವಿಕ್, ಆಂಡಿ ಮರ್ರೆ, ರಾಡಿಕ್, ಹೆವಿಟ್, ನಲ್ಬಾಂಡಿಯನ್, ಸೈಮನ್, ಮಾನ್‌ಫಿಲ್ಸ್, ಡೇವಿಡೆಂಕೊ, ಜುವಾನ್ ಮಾರ್ಟಿನ್ ಡೆಲ್‌ಪೊಟ್ರೊ ಇವರೆಲ್ಲಾ ಕಳಪೆ ಆಟಗಾರ ರಂತೆ ಗೋಚರಿಸಿಬಿಡುತ್ತಾರೆ ಅಷ್ಟೇ.
ಆ ಕಾಲದಲ್ಲಿ ಬೋರ್ಗ್-ಮೆಕೆನ್ರೊ, ಕಾನರ್ಸ್- ಲೆಂಡ್ಲ್, ಕಾನರ್ಸ್-ಬೋರ್ಗ್, ಇವರೆಲ್ಲಾ ಮ್ಯಾರಥಾನ್ ಪಂದ್ಯಗಳನ್ನಾಡುತ್ತಿದ್ದರು ಎನ್ನುವುದು ನಿಜ. ಆದರೆ, ಈಗಲೂ ಅಷ್ಟೇ ಗುಣಮಟ್ಟದ ಪಂದ್ಯಗಳನ್ನು ನಾವು ಫೆಡರರ್- ನಡಾಲ್ (2008ರ ವಿಂಬಲ್ಡನ್ ಫೈನಲ್) ಮುಖಾಮುಖಿಗಳಲ್ಲಿ ಕಾಣಬಹುದು. ಭಾನುವಾರದ ಫೆಡರರ್- ರಾಡಿಕ್ ಹಣಾಹಣಿಯೂ ಈ ಅರ್ಥದಲ್ಲಿ ಐತಿಹಾಸಿಕವೇ ಆಗಿತ್ತು. ಕಡಿಮೆ ಸಂಖ್ಯೆಯ ತಪ್ಪುಗಳು ಹಾಗೂ ಹೆಚ್ಚು ಕೌಶಲ್ಯ ಒಳಗೊಂಡ ಪಂದ್ಯವನ್ನು ಶ್ರೇಷ್ಠ ಅಥವಾ ಕ್ಲಾಸಿಕ್ ಎಂದು ಕರೆಯಬಹುದು. ಭಾನು ವಾರದ ನಾಟಕೀಯ ಪಂದ್ಯದಲ್ಲಿ ಫೆಡರರ್ 107 ವಿನ್ನರ್ ಗಳನ್ನು ಸಿಡಿಸಿದರು. 50 ಏಸ್‌ಗಳನ್ನು ಅಟ್ಟಿದರು. ಇದಕ್ಕೆಲ್ಲಾ ಹೋಲಿಸಿದರೆ, ಡಬಲ್‌ಫಾಲ್ಟ್ ಹಾಗೂ ಅನ್‌ಫೋರ್ಸ್ಡ್ ಎರರ್‌ಗಳ ಸಂಖ್ಯೆ ಬಹಳ ಕಡಿಮೆ ಇದ್ದವು. ಪಂದ್ಯದಲ್ಲಿ ರಾಡಿಕ್ ಕೇವಲ 2 ಬಾರಿ ಫೆಡರರ್ ಸರ್ವೀಸ್ ತುಂಡರಿಸಿದರು. ಫೆಡರರ್ ಪಂದ್ಯದ ಕೊಟ್ಟ ಕೊನೆಯ ಗೇಮ್‌ನಲ್ಲಿ ರಾಡಿಕ್ ಸರ್ವೀಸ್ ತುಂಡರಿ ಸುವ ಮೂಲಕ ಪಂದ್ಯ ವಶಪಡಿಸಿಕೊಂಡರು. ಉಭಯ ಆಟಗಾರರು ನಿಧಿ ಕಾಪಾಡುವ ಸರ್ಪದಂತೆ ತಮ್ಮ ಸರ್ವೀಸ್‌ಗಳನ್ನು ಕಾಪಾಡಿಕೊಂಡರು.
ಫೆಡರರ್ ಶ್ರೇಷ್ಠ ಹೌದೇ ಅಲ್ಲವೇ ಎಂಬ ಪ್ರಶ್ನೆ ಎದುರಾದಾಗ, ಟೆನಿಸ್ ದಂತಕಥೆ ರಾಡ್ ಲೇವರ್ ಅವರ ಉತ್ತರ ಸಮಂಜಸವೆನಿಸುತ್ತದೆ. ಫೆಡರರ್ ಈ ಯುಗದ ಶ್ರೇಷ್ಠ ಎಂದು ಅವರು ಹೇಳುತ್ತಾರೆ.
ಆಸ್ಟ್ರೇಲಿಯಾ ದಿಗ್ಗಜನ ಪ್ರಕಾರ, ಆ ಕಾಲ ಹಾಗೂ ಈ ಕಾಲದ ಆಟಗಾರರನ್ನು ಹೋಲಿಸುವುದು ಸರಿಯಲ್ಲ. `ಈಗ ಕ್ರೀಡೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ತಂತ್ರ ಜ್ಞಾನದ ಸಹಾಯದಿಂದ ಅತ್ಯಾಧುನಿಕ ಪರಿಕರಗಳು ಲಭ್ಯವಿದೆ. ಆ ಕಾಲದಲ್ಲಿ ಆಟಗಾರರು ಮರದ ರಾಕೆಟ್ ನಿಂದ ಆಡುತ್ತಿದ್ದರು. ಆಗೆಲ್ಲಾ ಆಟಗಾರರಿಗೆ ಮುಂಗೈ ಹೊಡೆತದಲ್ಲಿ ಪರಿಪೂರ್ಣರಾಗಲು 2 ವರ್ಷ, ಹಿಂಗೈ ಹೊಡೆತಗಳಿಗೆ 2 ವರ್ಷ ಹಾಗೂ ಪರಿಪೂರ್ಣ ಸರ್ವೀಸ್ ಕಲಿಯಲು 2 ವರ್ಷ ಬೇಕಾಗುತ್ತಿತ್ತು. ಆದರೆ, ಈ ಯುಗದಲ್ಲಿ ಇವೆಲ್ಲವನ್ನೂ 6 ತಿಂಗಳಲ್ಲಿ ಕಲಿಯು ತ್ತಾರೆ' ಎಂದು ತಮ್ಮ ಕೋಚ್ ಚಾರ್ಲಿ ಹೋಲಿಸ್‌ರನ್ನು ಉಲ್ಲೇಖಿಸಿ ಲೇವರ್ ಹೇಳುತ್ತಾರೆ.
ತಮ್ಮ ಹಾಗೂ ಸಚಿನ್ ನಡುವೆ ಹೋಲಿಕೆಯ ಮಾತು ಬಂದಾಗ ಡಾನ್ ಬ್ರಾಡ್ಮನ್‌ರಂಥವರೂ ಇದೇ ಮಾತು ಹೇಳುತ್ತಿದ್ದರು.
ನಿಜ, ಆ ಕಾಲಕ್ಕೆ ಅವರು ಶ್ರೇಷ್ಠರು. ಈ ಕಾಲಕ್ಕೆ ಇವರು ಶ್ರೇಷ್ಠರು. ಅಷ್ಟಕ್ಕೂ ಶ್ರೇಷ್ಠತೆ ಎನ್ನುವುದೊಂದು ಪಟ್ಟವಲ್ಲ, ಬಿರುದಲ್ಲ, ಕಣ್ಣಿಗೆ ಕಾಣುವ ಸಂಗತಿಯಲ್ಲ. ಆದರೆ, ಒಂದಂತೂ ನಿಜ. ಇನ್ನೂ 27 ವರ್ಷದ ಫೆಡರರ್ ತಮ್ಮ ನಂತರದ ಪೀಳಿಗೆಗೆ ಏರಿ ಮೀರುವುದಕ್ಕೆ ಹಿಮಾಲಯ ಪರ್ವತ ಸದೃಶ ಸಾಧನೆಗಳನ್ನೇ ನಿರ್ಮಿಸಿದ್ದಾರೆ.
ಸೆರೇನಾ ವಿಲಿಯಮ್ಸ್ ವಿಂಬಲ್ಡನ್ ಚಾಂಪಿಯನ್ ಪಟ್ಟಕ್ಕೇರುವ ಮೂಲಕ 11ನೇ ಗ್ರಾಂಡ್‌ಸ್ಲಾಂ ಗೆದ್ದು ಕೊಂಡಿದ್ದರೂ, ತಾವಿನ್ನೂ ದಂತಕಥೆಯ ಮಟ್ಟಕ್ಕೇರಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಮಹಿಳಾ ಟೆನಿಸ್‌ನ ಗುಣಮಟ್ಟ ಇದೇ ರೀತಿ ಕಳಪೆಯಾಗುತ್ತಾ ಸಾಗಿದರೆ, ಅವರು ಸದ್ಯದಲ್ಲೇ ಇನ್ನಷ್ಟು ಮತ್ತಷ್ಟು ಗ್ರಾಂಡ್‌ಸ್ಲಾಂ ಗಳನ್ನು ಗೆದ್ದು ದಂತಕಥೆಯಾಗಿ ಬಿಡುತ್ತಾರೆ.
ವಿಂಬಲ್ಡನ್‌ನಲ್ಲಿ ಈ ಬಾರಿ ಮಹಿಳಾ ವಿಭಾಗದ ಸ್ಪರ್ಧೆ ಸ್ಪರ್ಧೇತರ ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಾ ಯಿತು. ಆಟಗಾರ್ತಿಯರ ಆಟದ ಗುಣಮಟ್ಟಕ್ಕಿಂತ ಅವರು ಎಷ್ಟು ಜೋರಾಗಿ ಅರಚುತ್ತಾರೆ, ಗುಟುರು ಹಾಕುತ್ತಾರೆ ಎಂಬ ಚರ್ಚೆಯಾಯಿತು. ಕೊನೆಗೂ ಎಲ್ಲಾ ಚರ್ಚೆ ಮುಗಿಯುವ ಹೊತ್ತಿಗೆ ಎಲ್ಲಾ ಆಟಗಾರ್ತಿಯರು ಸೋತು ಸೆರೇನಾ ಮತ್ತು ವೀನಸ್ ವಿಲಿಯಮ್ಸ್ ಫೈನಲ್ ಹಣಾಹಣಿಗೆ ಸಜ್ಜಾಗಿದ್ದರು.
ಈ ಬಾರಿ ನಡೆದ ಗುಣಮಟ್ಟದ ಪಂದ್ಯಗಳ ಸಂಖ್ಯೆ ಕಡಿಮೆ. ಬಹುತೇಕ ಪಂದ್ಯಗಳು 2 ಸೆಟ್‌ಗಳಲ್ಲೇ ಮುಕ್ತಾಯವಾದವು. ಉಸಿರುಗಟ್ಟಿಸುವ ಪೈಪೋಟಿಯ, ಅದರಲ್ಲೂ ಡಬಲ್‌ಫಾಲ್ಟ್‌ಗಳು ಮತ್ತು ಅನ್‌ಫೋರ್ಸ್ಡ್ ಎರರ್‌ಗಳ ಸಂಖ್ಯೆ ಕಡಿಮೆ ಸಂಖ್ಯೆಯಲ್ಲಿದ್ದ ಪಂದ್ಯಗಳು ಎಲ್ಲೋ ಕೆಲವು. ಈ ಎಲ್ಲಾ ಕಾರಣದಿಂದಾಗಿಯೇ ಮಹಿಳಾ ವಿಭಾಗದಲ್ಲಿ ಆಟದ ಬದಲು ಅಜಾರೆಂಕೊ ಸೌಂದರ್ಯ, ಜಿಸೆಲಾ ಡುಲ್ಕೊ ಪ್ರೇಮ ಸಂಬಂಧಗಳು, ಶರಪೋವ ಜಾಹಿರಾತು ಮೌಲ್ಯ, ಇವಾನೊವಿಕ್‌ರ ನಕರಾಗಳ ಬಗ್ಗೆ ಹೆಚ್ಚು ಚರ್ಚಿಸುವಂತಾಗಿದೆ.
Subscribe to:
Post Comments (Atom)
I do subscribe to your opinions.....
ReplyDeleteThank u mavemsa
ReplyDelete