Monday, June 29, 2009
ರಾಗಲಹರಿ
ಹೊಸ ಬೆಳಕು, ಕೆಲವು ಹುಳುಕು
ಅದು ಬರೀ ಆಕಸ್ಮಿಕವೋ ಅಥವಾ ಇಂಗ್ಲಿಷ್ ಬುದ್ಧಿಯ ಕುತಂತ್ರವೋ ಎಂಬ ಜಿಜ್ಞಾಸೆ ಆರಂಭವಾಗಿದೆ.
ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಮಹೇಶ್ ಭೂಪತಿ ಮತ್ತು ತರುಣ ಸೋಮದೇವ್ ದೇವ್‌ವರ್ಮನ್ ಮುಖಾಮುಖಿಯಾದರು. ಸಹಜವಾಗಿ ದೇವ್ ಸೋತರೆ, ಅನುಭವಿ ಮಹೇಶ್ ಮುನ್ನಡೆದರು. ಪುರುಷರ ಡಬಲ್ಸ್ 3ನೇ ಸುತ್ತಿನಲ್ಲಿ ಸೋಮವಾರ ಭೂಪತಿಗೆ ಎದುರಾಗಿದ್ದು ಮತ್ತೋರ್ವ ಭಾರತೀಯ ಪ್ರಕಾಶ್ ಅಮೃತ್‌ರಾಜ್. ಇದು ಸಾಲದೆಂಬಂತೆ ಸೋಮವಾರವೇ ಮಿಶ್ರ ಡಬಲ್ಸ್ ಹಣಾಹಣಿಯ 3ನೇ ಸುತ್ತಿನಲ್ಲೂ ಭೂಪತಿ ಮತ್ತು ಲಿಯಾಂಡರ್ ಪೇಸ್ ಎದುರುಬದುರಾದರು.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಟೆನಿಸ್ ಪ್ರವರ್ಧಮಾನಕ್ಕೆ ಬಂದಿರುವ ರೀತಿಗೆ ವಿಂಬಲ್ಡನ್ ಗ್ರಾಂಡ್ ಸ್ಲಾಂನಲ್ಲಿ ಭಾರತೀಯರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ನಿದರ್ಶನವಾಗಿತ್ತು. ಮಹಿಳಾ ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾ (2ನೇ ಸುತ್ತಿನಲ್ಲಿ ಸೋತರು) ದೇಶವನ್ನು ಪ್ರತಿನಿಧಿಸಿದ್ದರು. ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಪ್ರಕಾಶ್ ಅಮೃತ್‌ರಾಜ್ ಮತ್ತು ಸೋಮದೇವ್ ದೇವ್‌ವರ್ಮನ್ ಕಣದಲ್ಲಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮತ್ತು ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಕಣದಲ್ಲಿದ್ದರು.
ಪೇಸ್ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲೇ ಸೋತರು. ಸಾನಿಯಾ ಮಹಿಳೆಯರ ವಿಭಾಗದಲ್ಲಿ 2ನೇ ಸುತ್ತಿನಲ್ಲಿ ನಿರ್ಗಮಿಸಿದರು. ಆದರೆ, ಉಳಿದವರು ತಮ್ಮತಮ್ಮಲ್ಲೇ ಸೆಣಸಾಡುವಂತಾಗಿದ್ದು ವಿಪರ್ಯಾಸ.
ವಿಂಬಲ್ಡನ್ ಪದಾರ್ಪಣೆಗೈದ ಸೋಮದೇವ್ ಮತ್ತು ಅವರ ಅಮೆರಿಕದ ಜೊತೆಗಾರ ರಾಬರ್ಟ್ ಕೆಂಡ್ರಿಕ್‌ಗೆ ಮೊದಲ ಸುತ್ತಿನಲ್ಲೇ ಭೂಪತಿ ಎದುರಾಗದೇ ಹೋಗಿದ್ದರೆ, ಇನ್ನೂ ಉತ್ತಮ ಸಾಧನೆ ನಿರೀಕ್ಷಿಸಬಹುದಿತ್ತು. ಪ್ರಕಾಶ್ ಅಮೃತ್‌ರಾಜ್ ಮತ್ತು ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಮೊದಲ ಎರಡು ಸುತ್ತುಗಳಲ್ಲಿ ಭಾರೀ ಪ್ರದರ್ಶನ ನೀಡಿದ್ದರು. ಆದರೆ, ಅವರು 3ನೇ ಸುತ್ತಿನಲ್ಲಿ ಭೂಪತಿ ಹಾಗೂ ಬಹಮಾಸ್‌ನ ಮಾರ್ಕ್ ನೌಲ್ಸ್‌ರನ್ನು ಎದುರಿಸುವಂತಾಗಿ ಸೋತರು. ಮಿಶ್ರ ಡಬಲ್ಸ್‌ನಲ್ಲೂ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ - ಸಾನಿಯಾ ಮಿರ್ಜಾ ಫೈನಲ್‌ವರೆಗೂ ಎದುರಾಗದಂತೆ ಡ್ರಾ ನಿಗದಿಯಾಗಿದ್ದರೆ, ಚೆನ್ನಾಗಿತ್ತು. ಆದರೆ, 3ನೇ ಸುತ್ತಿನಲ್ಲೇ ಅವರು ಎದುರಾಗುವಂತಾಯಿತು. ಅಲ್ಲಿಗೆ 3 ಸ್ಪರ್ಧಾ ವಿಭಾಗಗಳಲ್ಲಿ ಭಾರತೀಯರು ಭಾರತೀಯರ ವಿರುದ್ಧವೇ ಆಡಿ ನಿರ್ಗಮಿಸುವಂತಾಗಿದ್ದರಿಂದ, ದಾಯಾದಿ ಸಮರ ತಂದು ಹಾಕಿ ದೇಶವನ್ನು 200 ವರ್ಷ ಕಾಲ ಒಡೆದು ಆಳಿದ ಬ್ರಿಟಿಷ್ ಬುದ್ಧಿಯ ಬಗ್ಗೆ ಅನುಮಾನ ಬರುವುದು ಸಹಜ.
ನಿಜ. ಗ್ರಾಂಡ್‌ಸ್ಲಾಂ ಟೂರ್ನಿಗಳಲ್ಲಿ ಪಂದ್ಯಗಳ ಡ್ರಾ ನಿಗದಿ ಪಡಿಸುವಾಗ ಆಟಗಾರರ ಶ್ರೇಯಾಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಆದರೂ, ಭಾರತೀಯ ಆಟಗಾರರನ್ನು ಒಟ್ಟೊಟ್ಟಿಗೆ ಕಲೆ ಹಾಕಿರುವುದರಲ್ಲಿ ಅಂಥ ತರ್ಕವೇನೂ ಕಾಣಿಸುವುದಿಲ್ಲ.
ಇನ್ನು ಪ್ರದರ್ಶನದ ವಿಷಯಕ್ಕೆ ಬಂದಾಗ, ಸಾನಿಯಾ ಮಿರ್ಜಾ ಬಗ್ಗೆ ಯಾವುದೇ ಮಹತ್ವಾಕಾಂಕ್ಷೆ ಕಟ್ಟಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಪದೇಪದೇ ಸಾಬೀತಾಗುತ್ತಿದೆ. ಅವರು ಸಿಂಗಲ್ಸ್ ಟೆನಿಸ್‌ನಲ್ಲಿ ಯಾವುದೇ ಗ್ರಾಂಡ್‌ಸ್ಲಾಂ ಗೆಲ್ಲುವುದಿಲ್ಲ. ಕನಿಷ್ಠ ಸೆಮಿಫೈನಲ್ ಸಹ ತಲುಪುವುದಿಲ್ಲ. ಬ್ಯಾಡ್ಮಿಂಟನ್ ಮತ್ತು ಟೆನಿಸ್‌ಗೆ ಹೋಲಿಸುವುದು ತರವಲ್ಲವಾದರೂ, ಸೈನಾ ನೆಹ್ವಾಲ್ ಮಟ್ಟದ ಸಾಧನೆಯನ್ನು ಸಾನಿಯಾರಿಂದ ನಿರೀಕ್ಷಿಸಲಾಗುವುದಿಲ್ಲ. ಅವರು ಮಹಿಳಾ ಡಬಲ್ಸ್‌ನಲ್ಲಿ ಅವರಿವರ ಜೊತೆ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ತಲುಪಿದರೂ, ತಲುಪಬಹುದು. ಮಿಶ್ರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಸಹಾಯದಿಂದ ಇನ್ನೊಂದು ಗ್ರಾಂಡ್‌ಸ್ಲಾಂ ಗೆದ್ದರೂ ಅಚ್ಚರಿಯಿಲ್ಲ. ಆದರೆ, ಸಿಂಗಲ್ಸ್‌ನಲ್ಲಿ 2ನೇ ಸುತ್ತು ಅವರ ನೆಚ್ಚಿನ ತಾಣ. ಇದಕ್ಕಿಂತ ಹೆಚ್ಚಿಗೇ ಏನೇ ಸಾಧನೆ ಮಾಡಿದರೂ ಅದು ಬೋನಸ್. ಸದ್ಯೋಭವಿಷ್ಯದಲ್ಲಿ ಅವರು ಮದುವೆಯನ್ನೂ ಆಗುತ್ತಿರುವುದರಿಂದ ಅಭಿಮಾನಿಗಳು ಅವರ ಬಗ್ಗೆ ಹೆಚ್ಚಿನ ಆಸೆ- ಕನಸು ಕಟ್ಟಿಕೊಳ್ಳದಿರುವುದು ಒಳಿತು.
ಸಾನಿಯಾ ಎರಡು ವರ್ಷ ಕೆಳಗೆ ವಿಶ್ವ ಶ್ರೇಯಾಂಕದಲ್ಲಿ 30ರ ಆಸುಪಾಸಿನಲ್ಲಿದ್ದಾಗ ಇನ್ನೂ ಸ್ವಲ್ಪ ಶ್ರಮಪಟ್ಟಿದ್ದರೆ, ಗಾಯಗಳಿಂದ ದೇಹವನ್ನು ಕಾಪಾಡಿಕೊಂಡಿದ್ದರೆ, ಕನಿಷ್ಠ ಒಂದು ಗ್ರಾಂಡ್‌ಸ್ಲಾಂನಲ್ಲಾದರೂ, ಉಪಾಂತ್ಯ ಮಟ್ಟದ ಸಾಧನೆ ನಿರೀಕ್ಷಿಸಬಹುದಾಗಿತ್ತು. ಹಾಲಿ ಋತುವಿನಲ್ಲಿ ಅವರು ಗಾಯ ಮುಕ್ತರಾಗಿ ಆಡುತ್ತಿರುವರಾದರೂ, ಅವರ ಆಟದಲ್ಲಿ ಸ್ಥಿರತೆ ಇಲ್ಲ. ಆವತ್ತಿನಿಂದ ಇವತ್ತಿನವರೆಗೂ ಮುಂಗೈ ಹೊಡೆತ, ವಿನ್ನರ್‌ಗಳಷ್ಟೇ ಅವರ ಶಕ್ತಿ. ಯಾವುದೇ ಹೊಸ ಅಸ್ತ್ರಗಳನ್ನು ಅವರು ಬತ್ತಳಿಕೆಗೆ ಸೇರಿಸಿಕೊಂಡಿಲ್ಲ. ಹಾಗಾಗಿ ದಿನದಿನವೂ ಹೊಸಹೊಸ ಹುಡುಗಿಯರು ಕಾಲಿಡುತ್ತಿರುವ ಟೆನಿಸ್ ಜಗತ್ತಿನಲ್ಲಿ ಸಾನಿಯಾ ಸದ್ಯದ 70 ಚಿಲ್ಲರೆ ಶ್ರೇಯಾಂಕದಿಂದ ಮತ್ತೊಮ್ಮೆ 30, 20ರ ಆಸುಪಾಸಿಗೆ ಸುಳಿಯಲು ಭಗೀರಥ ಪ್ರಯತ್ನವನ್ನೇ ಪಡಬೇಕು. ಅದಕ್ಕಾಗಿ ಗ್ರಾಂಡ್ ಸ್ಲಾಂಗಳಲ್ಲಿ ಕನಿಷ್ಠ 3ರಿಂದ 4 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಸ್ಥಿರತೆ ತೋರಬೇಕು. ಸೈನಾ 19ನೇ ವಯಸ್ಸಿನಲ್ಲೇ ಒಲಿಂಪಿಕ್ಸ್ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಇಂಡೋನೇಶಿಯಾ ಸೂಪರ್ ಸಿರೀಸ್ ಗೆದ್ದಿದ್ದಾರೆ. ಚೀನಾ ತೈಪೆ ಗೋಲ್ಡ್ ಟೂರ್ನಿ, ಫಿಲಿಪ್ಪೈನ್ಸ್ ಓಪನ್‌ನಂಥ ಗುಣಮಟ್ಟದ ಟೂರ್ನಿ ಗೆದ್ದಿದ್ದಾರೆ. ಆದರೆ, ಇವತ್ತಿಗೂ ಸಾನಿಯಾ ಗೆದ್ದಿರುವುದು ಹೈದರಾಬಾದ್ ಓಪನ್ ಮಾತ್ರ ಎನ್ನುವ ಅಂಶ ಅವರ ಬಗ್ಗೆ ಹತಾಶೆ ಹೆಚ್ಚಲು ಕಾರಣ. ಗ್ರಾಂಡ್ ಸ್ಲಾಂಗಳು ಹೋಗಲಿ, ಕನಿಷ್ಠ ಸಾಮಾನ್ಯ ಡಬ್ಲ್ಯುಟಿಎ ಟೂರ್ನಿಗಳನ್ನಾದರೂ ಗೆದ್ದಿದ್ದರೆ, ಈ ಪ್ರಮಾಣದಲ್ಲಿ ನಿರಾಸೆಯಾಗುತ್ತಿರಲಿಲ್ಲ.
ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ಲೂಕಾಸ್ ಡ್ಲೌಹಿ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲೇ ಸೋತಿದ್ದು ದುರದೃಷ್ಟ. ಆದರೆ, ಪೇಸ್ ವಿಷಯದಲ್ಲಿ ಬೇಜಾರು ಪಟ್ಟುಕೊಳ್ಳುವಂಥದ್ದೇನಿಲ್ಲ. ಅವರು ವಿಂಬಲ್ಡನ್ ಗೆಲ್ಲದಿದ್ದರೂ, ಯುಎಸ್ ಓಪನ್‌ನಲ್ಲಾದರೂ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯ ಅಂಶವೆಂದರೆ, ಪುರುಷರ ಡಬಲ್ಸ್‌ನಲ್ಲಿ ಪೇಸ್, ಭೂಪತಿ, ಅಮೃತ್‌ರಾಜ್ ಮತ್ತು ಸೋಮದೇವ್ ಸ್ಪರ್ಧೆ. ಬಹುಶಃ ಗ್ರಾಂಡ್ ಸ್ಲಾಂ ಫೈನಲ್‌ನಲ್ಲಿ ಭಾರತದ ಜೋಡಿಯೇ ಕಾಣಿಸಿಕೊಳ್ಳುವ ದಿನ ದೂರವಿಲ್ಲ.
ಆದರೆ, ಅದಕ್ಕೆ ಡ್ರಾ ವಿಂಬಲ್ಡನ್‌ನಂತಿರದೆ, ಸ್ವಲ್ಪ ಅನುಕೂಲಕರವಾಗಿರಬೇಕಷ್ಟೇ.
Subscribe to:
Post Comments (Atom)
No comments:
Post a Comment