Monday, June 1, 2009

ರಾಗ ಲಹರಿ

ಸಾಧನೆಯ ಬಲ
ಪುನರಾವರ್ತನೆಯ ಛಲ!


ಯಾವುದೇ ಸಾಧನೆಯೂ ಸುಲಭವಲ್ಲ.
ಅಂಥದ್ದರಲ್ಲಿ, ಒಮ್ಮೆ ಸಾಧಿಸಿದ್ದನ್ನು ಪುನರಾವರ್ತಿಸುವುದು ಕಡುಕಷ್ಟವೇ ಸರಿ.
ಟೀಮ್‌ ಇಂಡಿಯಾ ಅಂಥ ಪುನರಾವರ್ತನೆಯ ಆತ್ಮವಿಶ್ವಾಸದಿಂದ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿದೆ.
2007ರ ಕೆರಿಬಿಯನ್‌ ವಿಶ್ವಕಪ್‌ನಲ್ಲಿ ರಾಹುಲ್‌ ದ್ರಾವಿಡ್‌ ನಾಯಕತ್ವದಲ್ಲಿ ಸೋತು ಸುಣ್ಣವಾಗಿದ್ದ ಭಾರತ ತಂಡ, ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಇಪ್ಪತ್ತು20 ವಿಶ್ವಕಪ್‌ ಆರಂಭವಾದಾಗ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ತರುಣ ಪಡೆಯನ್ನು ಕಣಕ್ಕಿಳಿಸಿತ್ತು. ಅಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಭ್ರಮೆಗಳಿರಲಿಲ್ಲ. ಪ್ರಶಸ್ತಿ ಗೆಲ್ಲಲೇ ಬೇಕೆಂಬ ಒತ್ತಡವಿರಲಿಲ್ಲ. ಆಗಿನ್ನೂ ಇಪ್ಪತ್ತು20 ಮಾದರಿಯೇ ಹೊಚ್ಚಹೊಸದಾಗಿತ್ತು. ಹಾಗಾಗಿ, ಒಂದು ಕೈನೋಡುವ ಉತ್ಸಾಹವಿತ್ತೇ ಹೊರತು ಹೆಚ್ಚಿನ ಆಶೋತ್ತರಗಳೇನೂ ಇರಲಿಲ್ಲ.
ಆದರೆ, ಒಂದೊಂದಾಗಿ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಾ ಸಾಗಿದ ತಂಡ ಎರಡು ಬಾರಿ ಆಸ್ಟ್ರೇಲಿಯಾವನ್ನು, ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿಯನ್ನೇ ಗೆದ್ದುಬಿಟ್ಟಿತು. 1983ರಲ್ಲಿ ಕಪಿಲ್‌ ದೇವ್‌ ನೇತೃತ್ವದ ತಂಡ ಏಕದಿನ ವಿಶ್ವಕಪ್‌ ಗೆದ್ದ ಬಳಿಕ ಭಾರತ ಜಯಿಸಿದ ಮೊದಲ ಕ್ರಿಕೆಟ್‌ ವಿಶ್ವಕಪ್‌ ಇದಾಗಿತ್ತು. ಹಾಗೆಂದೇ ತಂಡ ಸ್ವದೇಶಕ್ಕೆ ಆಗಮಿಸಿದಾಗ ಮುಂಬೈನಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ಸ್ವಾಗತ ಮೆರವಣಿಗೆ ನಡೆಯಿತು.
ಇಷ್ಟೆಲ್ಲಾ ಸಂಭ್ರಮಕ್ಕೆ ಕಾರಣವಾದ ಪ್ರಶಸ್ತಿಯನ್ನು ಸತತ ಎರಡನೇ ಬಾರಿ ತನ್ನಲ್ಲೇ ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊತ್ತು ಭಾರತ ತಂಡ ಸದ್ಯ ಇಂಗ್ಲೆಂಡ್‌ನಲ್ಲಿದೆ. ಕ್ರಿಕೆಟ್‌ನಲ್ಲಿ ಎರಡು ವರ್ಷಗಳೆಂದರೆ, ಅಗಾಧ ಅಂತರ. ಈ ಅವಧಿಯಲ್ಲಿ ಏನು ಬೇಕಾದರೂ ಬದಲಾಗಬಹುದು. ಇಪ್ಪತ್ತು20 ಮಾದರಿಯಲ್ಲೂ ಅಷ್ಟೇ, ಅಗಾಧ ಪ್ರಗತಿಯಾಗಿದೆ. ಎಲ್ಲಾ ತಂಡಗಳೂ ಸಾಕಷ್ಟು ಪಂದ್ಯಗಳನ್ನು ಆಡಿ ಪಳಗಿವೆ. ಪಟ್ಟುಗಳನ್ನು ಕಲಿತುಕೊಂಡಿವೆ. ಈ ದಿಸೆಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸಹ ನೆರವಾಗಿದೆ. ರಾಷ್ಟ್ರಗಳು ಈ ಮಾದರಿಗೆ ತಕ್ಕಂಥ ಹೊಸ ಹೊಸ ಆಟಗಾರರನ್ನು ಕಂಡುಕೊಂಡಿವೆ.
ಇಪ್ಪತ್ತು20 ಮಾದರಿಯಲ್ಲಿ ಯಾವುದೇ ಫೇವರಿಟ್‌ ತಂಡಗಳಿರುವುದಿಲ್ಲ. ಆದರೆ, ಆದರೆ, ಭಾರತ ಉಳಿದೆಲ್ಲಾ ತಂಡಗಳಿಗಿಂತ ಮಾನಸಿಕ ಮೇಲುಗೈಯನ್ನಂತೂ ಹೊಂದಿದೆ. ಆದರೆ, ಈ ಮೇಲ್ನೋಟದ ಮೇಲುಗೈ ತಂಡದ ಮೇಲೆ ಅಪಾರ ಒತ್ತಡಕ್ಕೂ ಕಾರಣವಾಗಿದೆ.
ಇಪ್ಪತ್ತು20 ವಿಶ್ವಕಪ್‌ ಶುರುವಾಗುವುದು ಜೂನ್‌ 5ರಿಂದಾದರೂ, ನಿಜವಾದ ಸ್ಪರ್ಧೆಗಳು ಆರಂಭವಾಗುವುದು ಜೂನ್‌ 11ರಿಂದ. ಏಕೆಂದರೆ, ಲೀಗ್‌ ಹಂತದ ಪಂದ್ಯಗಳನ್ನು ನಿಜವಾದ ಪಂದ್ಯಗಳೆನ್ನುವುದಕ್ಕಿಂತ, ಅಗ್ರ ತಂಡಗಳಿಗೆ ಕಲ್ಪಿಸಿಕೊಟ್ಟ ಪಂದ್ಯಾಭ್ಯಾಸದ ಅವಕಾಶಗಳು ಎನ್ನಬಹುದೇನೋ.
ಇಪ್ಪತ್ತು20 ಮಾದರಿಯಲ್ಲಿ ಸರಿಸಮನಾಗಿ ಹೋರಾಟಬಲ್ಲ ತಂಡಗಳ ಸಂಖ್ಯೆ ಆರು ಅಥವಾ ಏಳು. ಉಳಿದಂತೆ 5 ತಂಡಗಳು ಸುಮ್ಮನೆ ಸ್ಥಾನ ತುಂಬುವ ಸಲುವಾಗಿ ಕಣದಲ್ಲಿದೆ ಎಂದರೂ ತಪ್ಪೇನಲ್ಲ. ಟೆಸ್ಟ್‌ ಮಾನ್ಯತೆ ಹೊಂದಿರುವ ರಾಷ್ಟ್ರಗಳೆಲ್ಲವನ್ನೂ `ಉತ್ತಮ' ಎಂದು ಭಾವಿಸುವುದಾದರೆ, ಬಾಂಗ್ಲಾ ದೇಶವನ್ನೂ ಸೇರಿ 9 ತಂಡಗಳಾಗುತ್ತವೆ. ಇವುಗಳ ಜೊತೆಗೆ ಹಾಲೆಂಡ್‌, ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ತಂಡಗಳು ಕಣದಲ್ಲಿವೆ.
ನಾಲ್ಕು ಗುಂಪುಗಳಲ್ಲಿ `ಸಿ' ಗುಂಪು ಇದ್ದುದರಲ್ಲಿ ಬಲಿಷ್ಠ ಎನ್ನಬಹುದು. ಇಲ್ಲಿ ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ತಂಡಗಳು ಸೂಪರ್‌-8ರ ಘಟ್ಟಕ್ಕೆ ಲಭ್ಯವಿರುವ ಎರಡು ಸ್ಥಾನಗಳಿಗಾಗಿ ಹೋರಾಡಲಿವೆ. ಉಳಿದ ಮೂರೂ ಗುಂಪುಗಳಲ್ಲಿ ಪ್ರಮುಖ ತಂಡಗಳು ಸೂಪರ್‌ ಲೀಗ್‌ ಬಡ್ತಿಗೆ ಕನಿಷ್ಠ ಒಂದು ಪಡೆದರೆ ಸಾಕು.
`ಎ' ಗುಂಪಿನಲ್ಲಿ ಭಾರತ ತಂಡ ಬಾಂಗ್ಲಾ ದೇಶ ಮತ್ತು ಐರ್ಲೆಂಡ್‌ ವಿರುದ್ಧ ಸೆಣಸಲಿದೆ. `ಬಿ' ಗುಂಪಿನಲ್ಲಿ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಹಾಲೆಂಡ್‌ ತಂಡವನ್ನು ಸೋಲಿಸಿ 2ನೇ ಘಟ್ಟಕ್ಕೆ ಮುನ್ನಡೆಯುವ ಅವಕಾಶ ಹೊಂದಿವೆ. `ಡಿ' ಗುಂಪಿನಲ್ಲಿ ಸ್ಕಾಟ್ಲೆಂಡ್‌ ತಂಡವನ್ನು ಹೊಸಕುವ ಅವಕಾಶವನ್ನು ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಪಡೆದಿವೆ. ಹಾಗಾಗಿ ಗುಂಪಿನ ಹಂತದ ಪಂದ್ಯಗಳ ಉದಯೋನ್ಮುಖ ತಂಡಗಳಿಗೆ ಅವಕಾಶ ಅಥವಾ ಕಾಲಹರಣ ಹೀಗೆ ಯಾವ ಅರ್ಥದಲ್ಲಿ ಬೇಕಾದರೂ ಪರಿಭಾವಿಸಬಹುದು.
ಹಾಗೆಂದು, ಈ ಹಂತವನ್ನು ತೀರಾ ಕಡೆಗಣಿಸುವಂತೆಯೂ ಇಲ್ಲ. ಮುಖ್ಯವಾಗಿ ಭಾರತವಂತೂ ಮೈಮರೆವಿನ ಲವಲೇಶವೂ ಇಲ್ಲದೇ ಆಡಬೇಕಿದೆ. 2007ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಆಘಾತಕಾರಿಯಾಗಿ ಸೋತು ಲೀಗ್‌ ಹಂತದಿಂದಲೇ ನಿರ್ಗಮಿಸಿತ್ತು. ಅತ್ತ ಐಲೆರ್ಂಡ್‌ ತಂಡ ಅದೇ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಗಂಟುಮೂಟೆ ಕಟ್ಟುವಂತೆ ಮಾಡಿತ್ತು. ಈ ಪಂದ್ಯವನ್ನು ಸೋತ ಬೆನ್ನಲ್ಲೇ ಪಾಕ್‌ ತಂಡದ ಕೋಚ್‌ ಬಾಬ್‌ ವೂಲ್ಮರ್‌ ಹೋಟೆಲ್‌ ಕೊಠಡಿಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.
ಇಪ್ಪತ್ತು20 ಮಾದರಿಯಲ್ಲಿ ಪಂದ್ಯವನ್ನು ಸೋಲಲು ಅಥವಾ ಗೆಲ್ಲಲು ಒಬ್ಬ ಬ್ಯಾಟ್ಸ್‌ಮನ್‌/ ಬೌಲರ್‌ನ ವೀರಾವೇಶದ ಪ್ರದರ್ಶನ ಸಾಕು. ಇತ್ತೀಚೆಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕ್ರಮವಾಗಿ ಮುಂಬೈ ಇಂಡಿಯನ್ಸ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ಪರ ತಲಾ ಒಂದು ಪಂದ್ಯ ಆಡಿ ಅನುಭವ ಪಡೆದುಕೊಂಡಿರುವ ಮೊಹಮ್ಮದ್‌ ಅಶ್ರಫುಲ್‌ ಮತ್ತು ಮಷ್ರಫೆ ಮೊರ್ಟಜ ಯಾವುದೇ ರೀತಿಯಲ್ಲಿ ಸಿಡಿದೇಳದಂತೆ ಭಾರತ ನೋಡಿಕೊಳ್ಳಬೇಕು.
ಐಪಿಎಲ್‌ನಿಂದ ಭಾರತ ತಂಡಕ್ಕೆ ಅನುಕೂಲ-ಅನಾನುಕೂಲ ಎರಡೂ ಆಗಿದೆ. ತಂಡದ ಹಲವು ಆಟಗಾರರು ವಿಶ್ವಕಪ್‌ಗೆ ಮುನ್ನ ಅತ್ಯಗತ್ಯವಾದ ಆತ್ಮವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಆದರೆ, ಬಿಡುವಿಲ್ಲದ ಕ್ರಿಕೆಟ್‌ ಆಡಿ ದೈಹಿಕವಾಗಿ ದಣಿದಿರುವುದೂ ಸತ್ಯ.
ಐಪಿಎಲ್‌ನಲ್ಲಿ ಭಾರತದ ಆರಂಭಿಕರಾದ ವೀರೇಂದ್ರ ಸೆಹ್ವಾಗ್‌ ಮತ್ತು ಗೌತಮ್‌ ಗಂಭೀರ್‌ ಆದ್ಯಂತವಾಗಿ ಕಳಪೆ ಪ್ರದರ್ಶನ ನೀಡಿದರು. ಇಪ್ಪತ್ತು20 ಮಾದರಿಯಲ್ಲಿ ತಂಡದ ಈವರೆಗಿನ ಯಶಸ್ಸಿನ ಬೆನ್ನೆಲುಬು ಗಂಭೀರ್‌. ಜೊತೆಗೆ ಈ ಮಾದರಿಯಲ್ಲಿ ಉತ್ತಮ ಆರಂಭ ಪಡೆದುಕೊಂಡರೆ, ಅರ್ಧ ಪಂದ್ಯ ಜಯಿಸಿದಂತೆ. ಆದ್ದರಿಂದ ಇವರಿಬ್ಬರು ಬೇಗನೆ ಲಹರಿಗೆ ಮರಳುವುದು ಅಗತ್ಯ.
3ನೇ ಕ್ರಮಾಂಕದಲ್ಲಿ ಸುರೇಶ್‌ ರೈನಾ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರ ಐಪಿಎಲ್‌ನ ಪ್ರಚಂಡ ಫಾರ್ಮ್‌ ಮುಂದುವರಿಯಲಿ ಎಂದು ಆಶಿಸಬೇಕಷ್ಟೇ. ರೋಹಿತ್‌ ಶರ್ಮ ಬ್ಯಾಟಿಂಗ್‌ನಲ್ಲಿ ಚೊಚ್ಚಲ ಐಪಿಎಲ್‌ನಷ್ಟು ಪರಿಣಾಮಕಾರಿಯಾಗಿ ಇರದಿದ್ದರೂ, ಬೌಲಿಂಗ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಯುವರಾಜ್‌ ಸಿಂಗ್‌ ಸಹ ಬ್ಯಾಟಿಂಗ್‌ನಲ್ಲಿ ಹೆಚ್ಚೇನೂ ಸಾಧಿಸದಿದ್ದರೂ, ಬೌಲಿಂಗ್‌ನಲ್ಲಿ ಎರಡೆರಡು ಹ್ಯಾಟ್ರಿಕ್‌ ಸಾಧನೆಯ ಆತ್ಮವಿಶ್ವಾಸ ಅವರೊಂದಿಗಿದೆ. ಆದರೆ, ಅಭಿಮಾನಿಗಳು ಹ್ಯಾಟ್ರಿಕ್‌ವೀರನಿಗಿಂತ ಸಿಕ್ಸರ್‌ ವೀರ ಯುವಿಯನ್ನು ಕಾಣಬಯಸುತ್ತಾರೆ. ಯೂಸುಫ್‌ ಪಠಾಣ್‌ ಜೈಪುರ ತಂಡದ ಬ್ಯಾಟಿಂಗ್‌ ಆಧಾರಸ್ತಂಭವಾಗಿದ್ದವರು. ವಿಶ್ವಕಪ್‌ನಲ್ಲೂ ಅವರಿಂದ ಸ್ಫೋಟಕತೆಯ ಕೆಚ್ಚನ್ನು ನಿರೀಕ್ಷಿಸಲಾಗುತ್ತಿದೆ. ನಾಯಕ ಧೋನಿ ಕಳಪೆ/ ಅತ್ಯುತ್ತಮ ಎರಡೂ ಅಲ್ಲದ ಫಾರ್ಮ್‌ನಲ್ಲಿದ್ದಾರೆ. ಆದರೆ, ಅವರಿಂದ ಆಟಕ್ಕಿಂತ ನಾಯಕತ್ವದ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ. ಬೌಲಿಂಗ್‌ ವಿಭಾಗದಲ್ಲಿ ಜಹೀರ್‌ ಖಾನ್‌ ಸಕಾಲದಲ್ಲಿ ಚೇತರಿಸಿಕೊಳ್ಳುವುದು ಮುಖ್ಯ. ಆದರೆ, ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಕಬಳಿಸಿರುವ ಆರ್‌ಪಿ ಸಿಂಗ್‌ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಇಶಾಂತ್‌ ಶರ್ಮ ಫಾರ್ಮ್‌ನಲ್ಲಿಲ್ಲ.
ಇರ್ಫಾನ್‌ ಪಠಾಣ್‌ ಮತ್ತು ಹರ್ಭಜನ್‌ ಸಿಂಗ್‌ ನಿರೀಕ್ಷೆಗೆ ತಕ್ಕಂತೆ ಆಡಬೇಕಿದೆ. ಉಳಿದವರು ಉತ್ತಮ ಪ್ರದರ್ಶನ ನೀಡಿದರೆ, ಅದು ಬೋನಸ್‌.
ಇಪ್ಪತ್ತು20 ಕ್ರಿಕೆಟ್‌ ಆಟವೇ ಲಾಟರಿಯಿದ್ದಂತೆ. ಅಲ್ಲಿ ಯಾರೂ ಗೆಲ್ಲಬಹುದು. ಒಂದು ಮಾಂತ್ರಿಕ ಸ್ಪೆಲ್‌, ಅಥವಾ, ಒಂದು ದುಬಾರಿ ಓವರ್‌ ಪಂದ್ಯದ ಹಣೆಬರಹವನ್ನೇ ಬದಲಿಸುತ್ತದೆ. ಕೊನೆಯ ಓವರ್‌ನಲ್ಲಿ 21 ರನ್‌ ಹೊಡೆದ ಹಾಗೂ ಕೇವಲ 4 ರನ್‌ ಗಳಿಸಲು ವಿಫಲವಾದ ಎರಡೂ ಬಗೆಯ ಉದಾಹರಣೆಗಳನ್ನು ನಾವು ಐಪಿಎಲ್‌ನಲ್ಲಿ ಕಂಡಿದ್ದೇವೆ. ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಅದೃಷ್ಟದ ಬಲಕ್ಕಿಂತ, ಅತ್ಯುತ್ತಮ ಆಟ ಆಡುವ ತಂಡ ವಿಜಯ ಸಿಂಹಾಸನವೇರಲಿ ಎಂದು ನಾವು ಆಶಿಸಬಹುದು.

No comments:

Post a Comment