ಅತೀ ಹತ್ತಿರ, ಅತೀ ದೂರ...
ಅನಿಲ್ ಕುಂಬ್ಳೆ ಮಾತಿನಲ್ಲೇ ಹೇಳುವುದಾದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಒಂದು ಹೊಡೆತದಷ್ಟು ಹತ್ತಿರವಿತ್ತು (ಅಥವಾ ದೂರವಿತ್ತು).
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತಿತು.
ಪೋಸ್ಟ್ ಮಾರ್ಟಂ ಮಾಡುವುದು ಸುಲಭ. ಹಾಗಾಗಿದ್ದರೆ, ಹೀಗಾಗಿದ್ದರೆ ಎಂದು ವಿಶ್ಲೇಷಣೆಯನ್ನು ಯಾರು ಬೇಕಾದರೂ ಮಾಡಬಹುದು. ಉತ್ತಪ್ಪ ಕೊನೆಯ ಓವರ್‌ನ ಆ ಎರಡು ಎಸೆತಗಳಲ್ಲಿ ರನ್ ಗಳಿಸಲು ವಿಫಲರಾಗದೇ ಇದ್ದಿದ್ದರೆ... ರಾಹುಲ್ ದ್ರಾವಿಡ್, ಆಂಡ್ರ್ಯೂ ಸೈಮಂಡ್ಸ್‌ರ ಆ ಸುಲಭ ಕ್ಯಾಚನ್ನು ನೆಲಕ್ಕೆ ಹಾಕದೇ ಹೋಗಿದ್ದರೆ...
ಅನಿಲ್ ಕುಂಬ್ಳೆ ಟಾಸ್ ಗೆದ್ದರು. ಮೊದಲ ಓವರ್‌ನಲ್ಲೇ ತಾವೇ ಬೌಲಿಂಗ್ ಮಾಡಿ ಪ್ರಳಯಾಂತಕ ಆಡಂ ಗಿಲ್‌ಕ್ರಿಸ್ಟ್‌ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಜೀವದಾನದ ಲಾಭ ಪಡೆದ ಆಂಡ್ರ್ಯೂ ಸೈಮಂಡ್ಸ್ ಅಪಾಯಕಾರಿಯಾಗಿ ಬಿರುಗಾಳಿಯ ಆಟಕ್ಕಿಳಿದಿದ್ದಾಗ ಮತ್ತೊಮ್ಮೆ ಬೌಲಿಂಗ್‌ಗೆ ಆಗಮಿಸಿದ ಕುಂಬ್ಳೆ ಅವರನ್ನು ಔಟ್ ಮಾಡಿದರು. ನಂತರ ತಮ್ಮ ಕೊನೆಯ ಓವರ್‌ನಲ್ಲಿ ರೋಹಿತ್ ಶರ್ಮ ಮತ್ತು ವೇಣುಗೋಪಾಲ ರಾವ್ ವಿಕೆಟ್ ಪಡೆದು, ಹೈದರಾಬಾದ್‌ನ ಹೋರಾಟಕ್ಕೆ ಕತ್ತರಿ ಹಾಕಿದ್ದರು.
ಆದರೂ, ಕುಂಬ್ಳೆಯ ಇಂಥ ವೀರಾವೇಶದ ಹೊರತಾಗಿಯೂ 144 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟುವುದು ಬೆಂಗಳೂರು ತಂಡದಿಂದ ಸಾಧ್ಯವಾಗಲಿಲ್ಲ. ಬ್ಯಾಟ್ಸ್‌ಮನ್‌ಗಳು ಕುಂಬ್ಳೆಯ ನಿರೀಕ್ಷೆಯನ್ನು ಹುಸಿಗೊಳಿಸಿದರು.
ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠರಾಗಿದ್ದ ಬೆಂಗಳೂರು ತಂಡದ ನವತಾರೆ ಮನೀಶ್ ಪಾಂಡೆ 4 ರನ್‌ಗೆ ನಿರ್ಗಮಿಸಿದರು. 19 ವರ್ಷದ ಈ ಹುಡುಗನ ಮೇಲೆ ಹೈದರಾಬಾದ್ ತಂಡ ಎಲ್ಲಾ ರೀತಿಯಿಂದ ಹರಿಹಾಯ್ದಿತು. ಸೈಮಂಡ್ಸ್ ತಮ್ಮ ಜಗಳಗಂಟತನ ಪ್ರದರ್ಶಿಸುವ ಮೂಲಕ ಪಾಂಡೆಯನ್ನು ನಿರಂತರವಾಗಿ ಕೆಣಕಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮಾತಿನ ಬೌನ್ಸರ್ ಸಂಸ್ಕೃತಿಗೆ ಹೊಸಬರಾದ ಪಾಂಡೆ ಸಹಜವಾಗಿ ಏಕಾಗ್ರತೆ ಕಳೆದುಕೊಂಡು ವಿಕೆಟ್ ಒಪ್ಪಿಸಿದರು.
ಆದರೂ, ಬೆಂಗಳೂರು ತಂಡ ಗೆಲುವಿನ ಹಾದಿಯಲ್ಲೇ ಇತ್ತು. ಆದರೆ, ತಂಡ 99 ರನ್ ಮಾಡಿದ್ದಾಗ ರಾಸ್ ಟೇಲರ್ ಮತ್ತು ವಿರಾಟ್ ಕೊಹ್ಲಿ ಸತತ ಎಸೆತಗಳಲ್ಲಿ ವಿಕೆಟ್ ಅರ್ಪಿಸಿದ್ದು ದುಬಾರಿಯಾಯಿತು. ಆನಂತರ ತಂಡ ಚೇತರಿಸಿಕೊಳ್ಳಲೇ ಇಲ್ಲ.
ತಂಡ ಗಲಿಬಿಲಿಗೊಳಗಾಗುವ ಅವಶ್ಯಕತೆ ಇರಲಿಲ್ಲ. ಏಕೆಂದರೆ, ಇನ್ನೂ ರಾಬಿನ್ ಉತ್ತಪ್ಪ, ಮಾರ್ಕ್ ಬೌಷರ್, ಪ್ರವೀಣ್ ಕುಮಾರ್ ಇದ್ದರು. ಆದರೆ, ಕಷ್ಟಕಾಲದಲ್ಲಿ ಯಾರೂ ನೆರವಿಗೆ ಒದಗುವುದಿಲ್ಲ. ಉತ್ತಪ್ಪ ಕೊನೆಯವರೆಗೂ ವಿಕೆಟ್ ಕಾಪಾಡಿಕೊಂಡರೂ, ಅಗತ್ಯ ರನ್‌ಗಳನ್ನು ಹೊಡೆಯಲು ಅವರಿಂದಾಗಲಿಲ್ಲ. ಕೊನೆಯ ಓವರ್‌ನಲ್ಲಿ 15 ರನ್ ಅಗತ್ಯವಿತ್ತು. ಕೊನೆಯ 5 ಎಸೆತಗಳಲ್ಲಿ 14 ರನ್ ಬೇಕಿದ್ದಾಗ ಉತ್ತಪ್ಪ 2 ಎಸೆತಗಳನ್ನು ವ್ಯರ್ಥಗೊಳಿಸಿದರು. ಮುಂದಿನ 3 ಎಸೆತಗಳಲ್ಲಿ 14 ರನ್, 2 ಎಸೆತಗಳಲ್ಲಿ 12 ರನ್ ಹಾಗೂ ಕೊನೆಯ ಎಸೆತದಲ್ಲಿ 8 ರನ್ ಗಳಿಸುವ ಸವಾಲು ಅವರಿಗೆ ಎಟುಕಲೇ ಇಲ್ಲ. ಬೆಂಗಳೂರು ತಂಡವನ್ನು ಗೆಲ್ಲಿಸಿ ಹೀರೋ ಆಗುವ ಸುವರ್ಣಾಕಾಶ ಹೊಂದಿದ್ದ ಉತ್ತಪ್ಪ ಝೀರೋ ಆದರು.
ಹೈದರಾಬಾದ್ ತಂಡದ ಕನಸಿನ ಓಟ ಪ್ರಶಸ್ತಿ ಸಾಧನೆಗೆ ಅರ್ಹವಾಗಿಯೇ ಇತ್ತು. ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ತಂಡ ಈ ವರ್ಷ ಆರಂಭದಲ್ಲಿ ಸತತ 5 ಪಂದ್ಯ ಜಯಿಸಿ ಭರ್ಜರಿಯಾಗಿ ಅಭಿಯಾನ ಆರಂಭಿಸಿತ್ತು. ನಡುವೆ ಆವೇಗ ಕಳೆದುಕೊಂಡರೂ, ಉಪಾಂತ್ಯ ಪ್ರವೇಶಕ್ಕೇನೂ ಅಡ್ಡಿಯಾಗಲಿಲ್ಲ. ಆನಂತರ ತಂಡದ್ದು ಧೀರ ನಡೆ. ಲೀಗ್ ಹಂತದಲ್ಲಿ ಅಭೇದ್ಯ ತಂಡವಾಗಿದ್ದ ದೆಹಲಿಯನ್ನು ಸೆಮಿಫೈನಲ್‌ನಲ್ಲಿ ಬಗ್ಗುಬಡಿದ ಕಾರಣಕ್ಕಾಗಿ ಆ ತಂಡವೇ ಫೈನಲ್‌ನಲ್ಲೂ ಫೇವರಿಟ್ ಎನಿಸಿತ್ತು. ಬುಕಿಗಳೂ ಗಿಲ್‌ಕ್ರಿಸ್ಟ್ ಬಳಗವನ್ನೇ ಬೆಂಬಲಿಸಿದ್ದರು. ಕೊನೆಗೆ ಫಲಿತಾಂಶವೂ ಅದರಂತೇ ಆಯಿತು.
ಭಾರತದಲ್ಲಿ ಮಹಾಚುನಾವಣೆ ಕಾರಣದಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್‌ನ 2ನೇ ಆವೃತ್ತಿ ಆಯೋಜನೆಯ ದೃಷ್ಟಿಯಿಂದ ಭಾರೀ ಯಶಸ್ವಿಯಾಯಿತು. ಇದರಿಂದ ಉತ್ತೇಜಿತರಾಗಿದ್ದ ಟೂರ್ನಿಯ ಆಯುಕ್ತ ಲಲಿತ್ ಮೋದಿ ವರ್ಷಕ್ಕೆರಡು ಲೀಗ್ ಸಂಘಟಿಸುವ ಬಯಕೆ ಹಂಚಿಕೊಂಡರು. ಆದರೆ, ಅದು ಸಾಧ್ಯವಿಲ್ಲದ ಮಾತು.
ಕಳೆದ ವರ್ಷದ ಚಾಂಪಿಯನ್ ಜೈಪುರ ಈ ಬಾರಿ ಉಪಾಂತ್ಯವನ್ನೂ ತಲುಪಲಿಲ್ಲ. ದೇಶಿ ಆಟಗಾರರ ವೈಫಲ್ಯ, ವ್ಯಾಟ್ಸನ್, ಸೊಹೈಲ್ ತನ್ವೀರ್ ಗೈರು, ಗ್ರೇಮ್ ಸ್ಮಿತ್‌ರ ಕಳಪೆ ಫಾರ್ಮ್, ಹಾಗೂ ಯೂಸುಫ್ ಮೇಲಿನ ಅತಿಯಾದ ಅವಲಂಬನೆ ತಂಡದ ವೈಫಲ್ಯಕ್ಕೆ ಕಾರಣಗಳು. ಚೆನ್ನೈ ತಂಡ ಕಳೆದ ವರ್ಷಕ್ಕಿಂತ ಒಂದು ಹೆಜ್ಜೆ ಹಿಂದುಳಿಯಿತು. ಸೆಮಿಫೈನಲ್‌ನಲ್ಲಿ ಕುಂಬ್ಳೆ ನಾಯಕತ್ವದ ಎದುರು ಧೋನಿ ಮಂಕಾದರು. ಉಳಿದಂತೆ ಸಚಿನ್ ತೆಂಡುಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್ ಕಳೆದ ವರ್ಷದ 5ನೇ ಸ್ಥಾನದಿಂದ 7ಕ್ಕೆ ಕುಸಿಯಿತು. ಯುವರಾಜ್ ಸಿಂಗ್‌ರ ಪಂಜಾಬ್ ಆರಕ್ಕೇರದ ಮೂರಕ್ಕಿಳಿಯದ ಸಾಧನೆ ಮಾಡಿತು. ಇನ್ನು ಶಾರುಖ್ ಖಾನ್‌ರ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ್ದು ದುರಂತ ಕತೆ. ಆ ತಂಡ ಮುಂದಿನ ವರ್ಷ ಶೂನ್ಯದಿಂದ ಆರಂಭಿಸಬೇಕಿದೆ.
ತಂಡಗಳು 200ರ ಗಡಿ ದಾಟಿದ್ದು ಒಮ್ಮೆ ಮಾತ್ರ ಎನ್ನುವುದು ಕೊರತೆ. ಆದರೆ, ಕಳೆದ ಆವೃತ್ತಿಗೆ ವ್ಯತಿರಿಕ್ತವಾಗಿ ಈ ಬಾರಿ ಬೌಲರ್‌ಗಳ ಎದುರು ಬ್ಯಾಟ್ಸ್‌ಮನ್‌ಗಳು ಮಸುಕಾದರು. ರೋಹಿತ್ ಶರ್ಮ ಮುಂಬೈ ವಿರುದ್ಧ ಹ್ಯಾಟ್ರಿಕ್ ಗಳಿಸಿದ್ದು ವಿಶೇಷವಾದರೆ, ಯುವರಾಜ್ ಸಿಂಗ್ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಅನಿಲ್ ಕುಂಬ್ಳೆ ಉದ್ಘಾಟನಾ ಪಂದ್ಯದಲ್ಲಿ 5ಕ್ಕೆ5 ವಿಕೆಟ್ ಪಡೆದರೆ, ಸಮಾರೋಪ ಪಂದ್ಯದಲ್ಲಿ 16ಕ್ಕೆ4 ವಿಕೆಟ್ ಕಬಳಿಸಿ ಇಪ್ಪತ್ತು20 ಕೇವಲ ಯುವಕರ ಆಟವಲ್ಲ ಎಂದು ನಿರೂಪಿಸಿದರು. ಹೈದರಾಬಾದ್ ಪರ ಆರ್‌ಪಿ ಸಿಂಗ್ ಗರಿಷ್ಠ 23 ವಿಕೆಟ್ ಕಬಳಿಸಿದರೆ, ಕುಂಬ್ಳೆ 21 ವಿಕೆಟ್ ಪಡೆದರು.
ಕೇವಲ 2 ಶತಕಗಳು ಮಾತ್ರ ದಾಖಲಾದವು. ಒಂದು ದೆಹಲಿ ಪರ ಎಬಿ ಡಿ ವಿಲಿಯರ್ಸ್ ಸಿಡಿಸಿದರೆ, ಹೈದರಾಬಾದ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 114 ರನ್ ಬಾರಿಸುವ ಮೂಲಕ ಮನೀಶ್ ಪಾಂಡೆ ಈ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯನೆನಿಸಿದರು.
ಮ್ಯಾಥ್ಯೂ ಹೇಡನ್ ಗರಿಷ್ಠ 572 ರನ್ ಸಿಡಿಸಿದರೆ, ಆಡಂ ಗಿಲ್‌ಕ್ರಿಸ್ಟ್ 495 ರನ್ ಬಾರಿಸಿ, ವಿಕೆಟ್ ಹಿಂದೆ 18 ಬಲಿ ಪಡೆದು, ನಾಯಕರಾಗಿ ಹೈದರಾಬಾದ್ ತಂಡವನ್ನು ಗೆಲ್ಲಿಸುವ ಮೂಲಕ ಟೂರ್ನಿಯ ಸರ್ವಶ್ರೇಷ್ಠ ಆಟಗಾರರೆನಿಸಿದರು.
No comments:
Post a Comment