Sunday, May 24, 2009

ರಾಗ ಲಹರಿ

ದೋಷವಿಲ್ಲದ ಭಾಷೆ ಯಾವುದಯ್ಯಾ?

ಭಾಷೆ ತಮಾ ಷೆಯ ವಿಷ ಯವಲ್ಲ. ಆದರೆ, ಎಷ್ಟೋ ಬಾರಿ ನಾವು ಬಳಸುವ ಭಾಷೆ ತಮಾಷೆಗಳಿಗೆ ಎಡೆ ಮಾಡಿಕೊಡುತ್ತದೆ.
`ನೀನು ವಾತ್ಸವವನ್ನು ಅರ್ಥ ಮಾಡಿಕೊಳ್ಳು ತ್ತಿಲ್ಲ'- ಇದು ಮೆಗಾ ಧಾರಾವಾಹಿಯೊಂದರ ಸಂಭಾಷಣೆಯ ಸಾಲು.
ಕನ್ನಡದಲ್ಲಿ ಪದಗಳು ಅಕ್ಷರ ವ್ಯತ್ಯಾಸಗೊಂಡು ಅಪಭ್ರಂಶಗೊಳ್ಳುವುದನ್ನು ಎಲ್ಲೆಂದರಲ್ಲಿ ಕಾಣಬಹುದು. ವಾಸ್ತವ - ವಾತ್ಸವ ಆಗಿರುತ್ತದೆ. ಉತ್ಸವ - ಉಸ್ತವ ಆಗಿರುತ್ತದೆ. ಕನ್ನಡ ಶಾಲೆಯ ಮಕ್ಕಳು ಆಗಸ್ಟ್‌ 15 ಬಂದಾಗ ಸ್ವಾತಂತ್ರ್ಯೋಸ್ತವ ಎಂದೇ ಹೇಳುತ್ತವೆ. ಏಕೆಂದರೆ, ಅವರಿಗೆ ಉಪಾಧ್ಯಾಯರು ಹೇಳಿ ಕೊಟ್ಟಿರುವುದೇ ಹಾಗೆ.
ಕನ್ನಡ ಭಾಷೆ ಬಹಳ ಸರಳ. ಸುಲಭ. ಸುಲಿದ ಬಾಳೆಯ ಹಣ್ಣಿನಂದದಿ ಎನ್ನುವುದೇನೋ ಸರಿ. ಆದರೆ, ಹಲವರ ಪಾಲಿಗೆ ಸರಳ ಎನ್ನುವುದೂ ಕಠಿಣವೇ. ಏಕೆಂದರೆ, ಅವರು `ಸರಲ' ಎಂದು ಬರಹದಲ್ಲಿ, ಮಾತಿನಲ್ಲಿ ಬಳಸುತ್ತಿರುತ್ತಾರೆ.
ಕೆಲವರಿದ್ದರು. ಹಳೆಯ ಕಾಲದ ಕನ್ನಡ ಮೇಷ್ಟ್ರುಗಳು ಅದೆಷ್ಟು ನಿಷ್ಠುರವಾಗಿರುತ್ತಿದ್ದರೆಂದರೆ, ಮಾತನಾಡು ವಾಗ ಅಲ್ಪಪ್ರಾಣ, ಮಹಾಪ್ರಾಣಗಳ ವ್ಯತ್ಯಾಸ ಗೊತ್ತಾಗದಿದ್ದರೆ, ಕೆನ್ನೆಗೆ ಬಿಗಿಯುತ್ತಿದ್ದರು. ಭಾರತವನ್ನು `ಬಾ'ರತವೆಂದು ಉಚ್ಚರಿಸಿದರೆ, ಅವರು ಸಹಿಸುತ್ತಿ ರಲಿಲ್ಲ. ಆದರೆ, ಇಂದು ಅಷ್ಟೊಂದು ಶಿಸ್ತಿನಿಂದ ಪಾಠ ಹೇಳುವವರು ಎಲ್ಲಿದ್ದಾರೆ? ಕನ್ನಡಿಗರು ಮಾತನಾಡು ವಾಗ ಅ-ಹ, ಕ-ಖ, ಗ-ಘ, ಚ-ಛ, ಲ- ಳ ಮೊದಲಾದ ಅಕ್ಷರ ವ್ಯತ್ಯಾಸಗಳು ತಿಳಿಯುವುದೇ ಇಲ್ಲ. ಕನ್ನಡದ ಕಟ್ಟಾಳುಗಳನೇಕರು ಕನ್ನಡಕ್ಕಾಗಿ `ಓ'ರಾಟ ಮಾಡುತ್ತಿರುತ್ತಾರೆ.
ಈ ಓಲೆ ತಂದವನಿಗೆ ವಿಷ ಕೊಡಿ ಎಂದು ದುಷ್ಟ ಮಂತ್ರಿ ದುಷ್ಟಬುದ್ಧಿ ಬರೆದು ಕಳಿಸಿದ್ದ.
ಮಾರ್ಗ ಮಧ್ಯದಲ್ಲಿ ಆ ಪತ್ರವನ್ನು ಉಪಾಯವಾಗಿ ಓದಿದ ರಾಜಕುಮಾರಿ, `ವಿಷ'ದ ಪಕ್ಕದಲ್ಲಿ `ಯೆ' ಎಂದು ಸೇರಿಸಿದಳು.
ಆ ಪತ್ರವನ್ನು ಓದಿದ ಮಹಾರಾಜ ಪತ್ರ ತಂದಾತ ನಿಗೆ ತನ್ನ ಮಗಳು ವಿಷಯೆಯನ್ನು ಕೊಟ್ಟು ಮದುವೆ ಮಾಡಿದ.
ಇದು ಚಂದ್ರಹಾಸನ ಕಥೆ.
ಭಾಷೆ ಬಹಳ ಸ್ವಾರಸ್ಯಕರ ವಿಚಾರ. ಸಂಕೀರ್ಣವೂ ಹೌದು.
ಒಂದು ಅಕ್ಷರ ವ್ಯತ್ಯಾಸವಾದರೆ, ಅದಲುಬದ ಲಾದರೆ, ಅರ್ಥವೇ ಭಿನ್ನವಾಗುತ್ತದೆ.
ಆದರೆ, ಇಂಥ ಅನರ್ಥಗಳು ಯಾವಾಗಲೂ ಆಗುತ್ತಲೇ ಇರುತ್ತವೆ. ಬೆಂಗಳೂರಿನ ಯಾವುದೇ ರಸ್ತೆಯಲ್ಲಿ ಒಂದು ಮಾರು ನಡೆದರೆ ಸಾಕು. ಅಂಗಡಿಯ ನಾಮಫಲಕಗಳಲ್ಲಿ, ಗೋಡೆ ಬರಹಗಳಲ್ಲಿ ನೂರು ತಪ್ಪು ಕಂಡು ಹಿಡಿಯಬಹುದು. ಇಂಗ್ಲಿಷ್‌ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಆಗುವ ತಪ್ಪು ಬೇರೆ. ಕನ್ನಡದ್ದೇ ಪದಗಳೂ ಅಲ್ಲಿ ವಿಕೃತಗೊಂಡಿರುತ್ತವೆ. ಹೃಸ್ವದ ಜಾಗದಲ್ಲಿ ದೀರ್ಘ, ಅಲ್ಪ ಪ್ರಾಣದ ಬದಲಿಗೆ ಮಹಾಪ್ರಾಣ... ಇನ್ನೂ ಏನೇನೋ ಆಗಿರುತ್ತದೆ. ವಿಷೇಶ, ವಿಗ್ನೇಷ, ವಿನಯಾಕ, ದನಲಕ್ಷ್ಮಿ, ಬಾರತ್‌ ಇಂಥ ಸಾವಿರ ಸಾವಿರ ಪ್ರಮಾದಗಳು ಕಣ್ಣಿಗೆ ರಾಚುತ್ತವೆ (ಬೆಂಗಳೂರಿನಲ್ಲಿ ನಾಮಫಲಕಗಳು, ಹೋರ್ಡಿಂಗ್‌, ಬ್ಯಾನರ್‌ ಇತ್ಯಾದಿ ಬರಹಗಾರರು ಬಹುತೇಕ ತಮಿಳಿನವರು ಎನ್ನುವುದೊಂದು ಸಬೂಬು).
ಭಾಷೆ ವಿಕೃತಗೊಳ್ಳುವುದು ಬರವಣಿಗೆಯಲ್ಲಿ ಮಾತ್ರವಲ್ಲ. ಆಡು ಮಾತಿನಲ್ಲಿ, ರೂಢಿಯ ಮಾತುಗಳಲ್ಲಿ ಭಾಷೆ ಅಷ್ಟಾವಕ್ರಗೊಂಡಿರುತ್ತದೆ.
ಸಂಗೀತದಲ್ಲೂ ಅಷ್ಟೇ. ತಾಳಕ್ಕೆ ಮಹತ್ವ ಕೊಡುವ ಎಷ್ಟೋ ಸಂಗೀತಗಾರರು ಸಾಹಿತ್ಯವನ್ನು ಕಡೆಗಣಿಸಿಯೇ ಬಿಡುತ್ತಾರೆ. ಹುಡುಗಿಯನ್ನು ನೋಡಲು ಗಂಡಿನ ಕಡೆಯವರು ಬಂದಿದ್ದರು. ಒಂದು ಹಾಡು ಹೇಳಮ್ಮಾ ಎಂದರು ಹುಡುಗನ ತಾಯಿ.
`ಓಡಿ ಬಾರೋ... ವೈ....ಕುಂಠ ಪತಿ ನಿನ್ನ, ನೋಡುವೆ ಮನದಣಿಯೇ....' ಎಂದು ಹುಡುಗಿ ಹಾಡಿದಳು.
ಆಕೆ ಎರಡು ಮೂರು ಬಾರಿ ವೈ ಹಾಗೂ ಕುಂಠ ಎಂದು ಬೇರೆ ಬೇರೆಯಾಗಿ ಹಾಡುತ್ತಿರುವಾಗ ಹುಡುಗನಿಗೆ ಅನುಮಾನ ಬಂತು. ಆತನಿಗೆ ಕಾಲು ಸ್ವಲ್ಪ ಊನವಿತ್ತು. ಆ ಸಂಬಂಧ ಕುದುರಲಿಲ್ಲ.
ಬೆಂಗಳೂರು ಸಾಂಸ್ಕೃತಿಕ ನಗರಿ. ಇಲ್ಲಿ ನಿತ್ಯ ಹತ್ತುಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ, ಎಷ್ಟೋ ಕಡೆ ಅತಿಥಿಗಳಿಗೆ, ಸಭಾಸದರಿಗೆ ಸಂಘಟಕರು `ಹಾ'ದರದ ಸ್ವಾಗತವನ್ನೇ ಬಯಸುತ್ತಾರೆ.
ಕನ್ನಡ ಪ್ರಾಚೀನ ಭಾಷೆ. ವೈವಿಧ್ಯಮಯವೂ ಹೌದು. ಬೆಂಗಳೂರು, ಮೈಸೂರು, ಮಲೆನಾಡು, ಬಯಲು ಸೀಮೆ, ಹುಬ್ಬಳಿ-ಧಾರವಾಡ, ಬೆಳಗಾವಿ, ರಾಯ ಚೂರು, ಗುಲ್ಬರ್ಗ ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ಭಾಷೆ ಬದಲಾಗುತ್ತಾ ಹೋಗುತ್ತದೆ. ಉಚ್ಚಾರಗಳು ಭಿನ್ನವಾಗಿರುತ್ತವೆೆ. ಈಗಿನವರಿಗೆ ಹಳೆಗನ್ನಡವನ್ನು ಓದಲೇ ಬರುವುದಿಲ್ಲ. ಇನ್ನು ಅರ್ಥ ಮಾಡಿಕೊಳ್ಳು ವುದು ಬೇರೆಯೇ ಪ್ರಶ್ನೆ. ಇನ್ನು ಆಧುನಿಕ ಕನ್ನಡದ ಮೇಲೆ ಅನ್ಯ ಪ್ರಭಾವ ಬಹಳ. ಎಲ್ಲಾ ದಿಕ್ಕು, ಎಲ್ಲಾ ಭಾಷೆ ಗಳ ಆಕ್ರಮಣವನ್ನು ಸಹಿಸಿಕೊಂಡಿರುವ ಕನ್ನಡದಲ್ಲಿಂದು ಅಚ್ಚಕನ್ನಡ ಪದಗಳನ್ನು ಗುರುತಿಸುವುದೇ ಕಷ್ಟ.
ಪತ್ರಿಕೆಗಳಲ್ಲಿ ಕನ್ನಡದ ಕೊಲೆ ನಡೆಯುವುದು ಸಾಮಾನ್ಯವೆಂಬಂತಾಗಿ ಬಿಟ್ಟಿದೆ. ಇದಕ್ಕೆ ಕಾರಣಗಳು ಹಲವು. ದಿನ ಪತ್ರಿಕೆಯೆಂದರೆ, ಅದು ಅವಸರದ ಸಾಹಿತ್ಯ. ಅಲ್ಲಿ ಯಾವುದನ್ನೂ ಎರಡೆರಡು ಬಾರಿ ಪರಾಮರ್ಶಿಸುವುದಕ್ಕೆ ವ್ಯವಧಾನ ಕಡಿಮೆ. ಕಾಲ ಗಡುವಿನ ಒತ್ತಡದಲ್ಲಿ ಕೆಲಸ ನಡೆಯುವ ಪತ್ರಿಕಾ ಕಚೇರಿಗಳಲ್ಲಿ ಹಿಂದಿನಂತೆ ಕರಡು ತಿದ್ದುವವರ ವಿಭಾಗವೂ ಇರುವುದಿಲ್ಲ. ಹಾಗಾಗಿ ಅವರವರಿಗೆ ತೋಚಿದ್ದೇ ನಿಜವಾದ ಕನ್ನಡ. ಹೀಗಾಗಿ, ಭೇದ-ಬೇಧ, ಆ`ಶಾ'-ಉ`ಷಾ' ಹೊತ್ತು-ಒತ್ತು ಇತ್ಯಾದಿ ವ್ಯತ್ಯಾಸ ವಿಲ್ಲದೆ ವರದಿಗಳು ಅಚ್ಚಾಗುತ್ತಿರುತ್ತವೆ. ಹಿಂದೆಲ್ಲಾ ಇಂಥ ಪ್ರಮಾದಗಳನ್ನು ಮುದ್ರಾರಾಕ್ಷಸನ ಮೇಲೆ ಹೊರಿಸಲಾಗುತ್ತಿತ್ತು. ಆದರೆ, ಕಂಪ್ಯೂಟರ್‌ ಯುಗದಲ್ಲಿ, ವೇಗದ ದಿನಮಾನದಲ್ಲಿ, ಕಾಲಿಗೆ ಚಕ್ರ ಕಟ್ಟಿಕೊಂಡಿರುವ ನಮ್ಮೆಲ್ಲರ ಕನ್ನಡ ಜ್ಞಾನ ಕಡಿಮೆ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಭಾಷೆಯ ಬಗ್ಗೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವುದೇಕೆ? ಸಂವಹನ ಆದರೆ ಸಾಕು ಎನ್ನುತ್ತಿದ್ದಾರೆ ಜನ. ಭಾಷೆಭಾಷೆಗಳನ್ನು ಬೆರೆಸಿ ಮಾತನಾಡುವ ಕಂಗ್ಲಿಷ್‌, ಕಂದಿ, ಕಮಿಳು, ಕಲುಗು ಸಂದರ್ಭದಲ್ಲಿ ನಿಜವಾದ ಕನ್ನಡದ ಸೊಗಡು ಅರ್ಥವಾಗಬೇಕಾದರೆ, ಹಳೆಯ ತಲೆಮಾರಿನವರನ್ನೇ ಮಾತನಾಡಿಸಬೇಕು. ಆದರೆ, ಅವರ ಮಾತು ಕೇಳಿಸಿ ಕೊಳ್ಳುವಷ್ಟು ತಾಳ್ಮೆ ನಮಗಿರುವುದಿಲ್ಲ ಎನ್ನುವುದೊಂದು ಸಮಸ್ಯೆ.

No comments:

Post a Comment