Wednesday, May 20, 2009

ಲಾಲ್ಬಾಗ್ ಪ್ರೀತಿ


ಲಾಲ್ಬಾಗ್ ಹೂದೋಟದಲ್ಲಿ
ನಾನು ನೀನು ಮತ್ತು ಅವನು
ನಿನ್ನ ಕಡೆಗೆ ನಾನು
ಅವನ ಕಡೆಗೆ ನೀನು
ಮತ್ತೆ ಮತ್ತೆ ನೋಡುತ್ತಾ
ಕನಸು ಕಾಣುತ್ತಾ
ಇದ್ದ ಹೊತ್ತು
ಮುಗಿಲಲ್ಲಿ ಮೋಡ ಮುಸುಕಿತ್ತು
ಮನಸಿಗೆ ಮೋಹ(ಮಾಯೆ) ಕವಿದಿತ್ತು

ಅಲ್ಲೊಂದು ಹೂವು;
ಸುಂದರ ಸುಮ
ತಂದು ಕೊಡಲೇ ಎಂದೆ ನಾನು
ಅದೆಷ್ಟು ಮಧುರ
ಅದರ ಸುವಾಸನೆ
ಎಂದೆ ಅವಗೆ ನೀನು

ಅದೆಷ್ಟು ಪ್ರೇಮಿಗಳು, ಪ್ರಣಯಿಗಳು
ಕನಸುಗಾರರ ಸ್ವರ್ಣ ಭೂಮಿ ಇದು
ಎಂದೆ ನಾನು
ವಿರಹಿಗಳಿಗೂ ಕೊರತೆ ಇಲ್ಲ
ದುಃಖಿಗಳ ರುದ್ರಭೂಮಿ ಇದು
ಎಂದೆ ನೀನು

ಹಾಗೆಯೇ ಸಾಗುತ್ತಿದ್ದೆವು ನಾವು
ನಡೆದಷ್ಟಿದೆ ನೆಲ
ಪಡೆದಷ್ಟಿದೆ ಫಲ ಎಂಬಂತೆ

ಮೌನ ಬರೀ ಬೇಸರ
ನಗೆ ತುಣುಕೊಂದು ಹೇಳಲೇ
ಎಂದೆ ನಾನು
ನಗುವಿನ ಬೆನ್ನಿಗೇ ಅಳುವಿದೆ
ತತ್ವಪದವೊಂದು ಹೇಳು
ಎಂದೆ ಅವಗೆ ನೀನು

ಸ್ವಲ್ಪ ಕಣ್ತೆರೆದು ನೋಡು
ವಿಶಾಲವಾಗಿದೆ ಜಗ
ಪ್ರೇಮವೇ ಬಾಳಿನ ನಗ
ಎಂದೆ ನಾನು
ಸ್ವಲ್ಪ ಕಣ್ಮುಚ್ಚಿ ನೋಡು
ಅನಿರ್ವಚನೀಯ ಆನಂದವಿದೆ
ಅಲೌಕಿಕ ಅನುಭೂತಿಯಿದೆ
ಪ್ರೇಮಕಾಮಗಳ ಹಂಗಿಲ್ಲದ
ತಂಪು ತಂಗಾಳಿಯಿದೆ
ಎಂದೆ ನೀನು

ಇಷ್ಟಾದರೂ ಅವನು
ಮಾತನಾಡಲಿಲ್ಲ ಏನೂ
ಹೇಳಬೇಕಾದುದೆಲ್ಲವನ್ನೂ
ತನ್ನ ಮೌನದಿಂದಲೇ
ಅವಳಿಗೆ
ರವಾನಿಸಿದ್ದ
ಅವನು

No comments:

Post a Comment