ಅಲ್ಲೆಲ್ಲೋ ದೂರ ದೂರ
ಬಹುದೂರದಲ್ಲಿ
ನಾ ಮರೆತ ನನ್ನಯ ನೆನಪು
ಎಲ್ಲಾ ಪರಿಚಯದಂತೆ
ಎಂದೋ ಮೊದಲು ಕಂಡಂತೆ
ಇದೇ ನೆಲ, ಇದೇ ಜಲ
ಇದೆಲ್ಲಾ ನನ್ನದೇ, ನಾನೇ ಆಗಿದ್ದಂತೆ
ಕಲ್ಲುಕಲ್ಲುಗಳು
ಮಣ್ಣು=ಮರಳುಗಳು
ನನ್ನೊಡನೆ ಮಾತಾಡಿದಂತೆ
ಎದೆಯಲ್ಲೆಲ್ಲೋ ಒಳಗೆ
ಸ್ಪಂದನ ತೀವ್ರವಾದಂತೆ
ನೋಡುವ ಕಣ್ಣುಗಳೊಳಗೆ
ಅದೇನೋ ವಿಶ್ವಾಸ
ಮೊದಲೇನಲ್ಲ ಇದೆಲ್ಲಾ
ಕಂಡದ್ದು ಎನ್ನುವಂತೆ
ಅದೇನೋ ಮಾತುಗಳು
ವೀರ ಗಾಥೆಗಳು
ಕಿವಿಯಲ್ಲಿ ಗುನುಗುನಿಸಿದಂತೆ
ಯಾರೋ ಕೈಬೀಸಿ ಕರೆದಂತೆ
ಚಪ್ಪಾಳೆ ತಟ್ಟಿದಂತೆ
ಸಾಕಿನ್ನು, ಈ ದೂರ, ಭಾರ
ಬಳಿ ಬಾ ಬೇಗ ಎಂದಂತೆ
ಅಲ್ಲೊಂದು ಇಲ್ಲೊಂದು
ದಟ್ಟ ಮರದ ಕೊಟ್ಟ ಕೊನೆಯಲ್ಲಿ
ಹಕ್ಕಿಯೊಂದು ಉಲಿದಂತೆ
ನನ್ನ ಅಣಕಿಸಿದಂತೆ
ಕೊನೆಗೊಮ್ಮೆ ದಾಹವಾದಾಗ
ನೀರು ಪ್ರಶ್ನಿಸಿದಂತೆ
ದಿನವೆಷ್ಟು ನೀ ಕಂಡು.....
ಇಲ್ಲ ಇಲ್ಲ ನನಗೇನೂ ಗೊತ್ತಿಲ್ಲ
ಏಕಾದರೂ ಕಾಡುವಿರಿ ನನ್ನ
ಹೀಗೆಂದರೆ
ಇಲ್ಲ ಇಲ್ಲ ನಿನ್ನಿಂದಲೇ ಎಲ್ಲಾ
ಮರೆತವರಾರು ಎಂದಂತೆ
ಇದೇನು ಭಾವವೋ ಜೀವನವೋ
ಇದೇನು ಸುಪ್ತ, ಗುಪ್ತ
ಇದೇನು ಅವ್ಯಕ್ತ?
ಕಥೆಯೋ, ಕವನವೋ
ನಾನೋ? ನೀನೋ? ಏನೋ?
No comments:
Post a Comment