Monday, June 15, 2009

ರಾಗ ಲಹರಿ


ಜಾರಿ ಬಿದ್ದ ಜಾಣರು

ಎಂಎಸ್‌ ಧೋನಿ ಬ್ರಾಂಡ್‌ ಮೌಲ್ಯ ಏರಿದಷ್ಟೂ, ಅವರ ಬ್ಯಾಟಿಂಗ್‌ ಮೌಲ್ಯ ಕುಸಿಯಿತು.
ಐಪಿಎಲ್‌ ಸಂದರ್ಭದಲ್ಲಿ ಹಚ್‌ನ ಜೂ ಜೂ ಜಾಹೀರಾತು ನೋಡಿ ಆನಂದಿಸಿದ್ದವರಿಗೆ, ಇಪ್ಪತ್ತು20 ವಿಶ್ವಕಪ್‌ ಸಂದರ್ಭದಲ್ಲಿ ಗಳಿಗೆಗೊಮ್ಮೆ ಎಲ್ಲಾ ಜಾಹೀರಾತುಗಳಲ್ಲಿ ಧೋನಿ ಮುಖ ನೋಡಿ ನೋಡಿ ಬೇಜಾರಾಗಿ ಹೋಗಿತ್ತು. ಈಗ ಅವರ ಮುಖ ಕಂಡರೆ ಸಿಟ್ಟು ಬರುತ್ತಿದೆ.
ಭಾರತ ಮತ್ತೊಂದು ವಿಶ್ವಕಪ್‌ನಿಂದ ತಲೆತಗ್ಗಿಸಿಕೊಂಡು ಹೊರಬಿದ್ದಿದೆ.
ಹಾಲಿ ಚಾಂಪಿಯನ್ನರು ಪ್ರಶಸ್ತಿ ಉಳಿಸಿಕೊಳ್ಳದಿದ್ದರೆ, ಹೋಗಲಿ ಕನಿಷ್ಠ ಉಪಾಂತ್ಯ ತಲುಪಿದ್ದರೆ ಗೌರವ ಉಳಿಯುತ್ತಿತ್ತು. ಆದರೆ, ಸೂಪರ್‌-8 ಹಂತದಲ್ಲಿ ಸತತ ಎರಡು ಸೋಲು ಅನುಭವಿಸುವುದರೊಂದಿಗೆ ಎಲ್ಲವೂ ಮುಗಿದು ಹೋಯಿತು.
ಮೂರನೇ ವ್ಯಕ್ತಿಗಳಾಗಿ ಸೋಲನ್ನು ವಿಶ್ಲೇಷಣೆ ಮಾಡುವುದು ಸುಲಭ. ಆಟಗಾರರಾಗಿ ವಿವಿಧ ಕಾರಣ, ಸಬೂಬುಗಳನ್ನು ನೀಡುವುದೂ ಸಹಜ. ಆದರೆ, 2007ರಲ್ಲಿ ಪ್ರಶಸ್ತಿ ಜಯಿಸಿದ್ದ, ಭಯವೇ ಗೊತ್ತಿಲ್ಲದ, ಸವಾಲುಗಳನ್ನು ಇಷ್ಟ ಪಡುವ ಆ ತಂಡ ಈ ತಂಡ ಆಗಿರಲಿಲ್ಲ ಎನ್ನುವುದು ಮಾತ್ರ ವಾಸ್ತವ. ಹೆಚ್ಚುಕಡಿಮೆ, ಎರಡು ವರ್ಷಗಳ ಕೆಳಗೆ ಪ್ರಶಸ್ತಿ ವಿಜೇತ ತಂಡದಲ್ಲಿದ್ದವರೆಲ್ಲರೂ ಈ ಬಾರಿಯೂ ಇದ್ದರು. ಆದರೆ, ಫಲಿತಾಂಶ ಮಾತ್ರ ಬೇರೆಯಾಗಿತ್ತು.
ನಿರೀಕ್ಷೆಗಳು ಒತ್ತಡಕ್ಕೆ ಕಾರಣವಾಗುತ್ತವೆ. ಒತ್ತಡವನ್ನು ನಾವು ಸೋಲಿಸದಿದ್ದರೆ, ಅದೇ ನಮ್ಮನ್ನು ಸೋಲಿಸುತ್ತದೆ. ಭಾನುವಾರ ಇಂಗ್ಲೆಂಡ್‌ ವಿರುದ್ಧ ಆಟವಾಡುವಾಗ ಭಾರತ ತಂಡದಲ್ಲಿ ಯಾವುದೇ ಒತ್ತಡವಿಲ್ಲದೆ, ನಿರಾಳವಾಗಿ ಬ್ಯಾಟ್‌ ಬೀಸಿದ್ದು ಯೂಸುಫ್‌ ಪಠಾಣ್‌ ಮಾತ್ರ. ಅವರ ಮುಖದಲ್ಲಿ ಯಾವುದೇ ಉದ್ವೇಗವಿರಲಿಲ್ಲ. ಇನ್ನೂ ನಮ್ಮಿಂದ ಗೆಲುವು ಸಾಧ್ಯ ಎಂಬ ಹುಂಬತನವಿತ್ತು. ಆದರೆ, ಅಷ್ಟರಲ್ಲಾಗಲೇ ವಿಜಯಲಕ್ಷ್ಮಿ ತಂಡದಿಂದ ಬಹಳದೂರ ಸರಿದು ಹೋಗಿದ್ದರು.
ನಾಯಕರಾಗಿ ಧೋನಿ ಮಧುಚಂದ್ರ ಕೊನೆಗೊಂಡಿತು. 2007ರ ಗೆಲುವಿನಲ್ಲಿ ಗೌತಂ ಗಂಭೀರ್‌, ಯುವರಾಜ್‌ ಸಿಂಗ್‌, ಆರ್‌ಪಿ ಸಿಂಗ್‌, ಜೋಗಿಂದರ್‌ ಸಿಂಗ್‌ ಇವರೆಲ್ಲರ ವೀರಾವೇಶಕ್ಕಿಂತ ಎದ್ದು ಕಂಡಿದ್ದು ಧೋನಿಯ ನಾಯಕತ್ವ. ಅವರು ನಾಯಕತ್ವದಿಂದಲೇ ಬಹುತೇಕ ಪಂದ್ಯಗಳನ್ನು ಗೆಲ್ಲಿಸಿದ್ದರು. ಆದರೆ, ಆ ಧೋನಿ ಈ ಬಾರಿ ತಂಡವನ್ನು ಮುನ್ನಡೆಸುತ್ತಿರಲಿಲ್ಲ. ಅವರ ನೆರಳು ಮಾತ್ರ ಇಂಗ್ಲೆಂಡ್‌ನಲ್ಲಿತ್ತು.
ಹೀಗೇಕಾಯಿತು.
`ಧೋನಿ ಅದೃಷ್ಟ ಗಟ್ಟಿಯಾಗಿದೆ. ಹಾಗೆಂದೇ, ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಅದು ಕೆಟ್ಟಾಗ ಅವರೂ ಎಲ್ಲರಂತೆ ಸೋಲುತ್ತಾರೆ...' ಈ ಮಾತನ್ನು ಕೆಲವು ತಿಂಗಳ ಹಿಂದೆ ಪಾಕಿಸ್ತಾನದ ಯೂನಸ್‌ ಖಾನ್‌ ಹೇಳಿದ್ದರು. ಅವರು ಮಾತ್ರವಲ್ಲ, ವಿಶ್ವದ ಎಲ್ಲಾ ತಂಡಗಳು ಇದನ್ನೇ ಬಯಸುತ್ತಿದ್ದವು. ಕೊನೆಗೂ ಇಂಗ್ಲೆಂಡ್‌ನಲ್ಲಿ ಧೋನಿಯ ಅದೃಷ್ಟ ಕರಗಿತು.
ನಿಜ, ಇಲ್ಲಿಯವರೆಗೂ ಪಂದ್ಯದಿಂದ ಪಂದ್ಯಕ್ಕೆ, ಗೆಲುವಿನಿಂದ ಗೆಲುವಿಗೆ ಧೋನಿಯನ್ನು ಮುನ್ನಡೆಸುತ್ತಿದ್ದ ಧೋನಿಯ `ಆ ಕ್ಷಣದ' ನಿರ್ಧಾರಗಳು ಈ ಬಾರಿ ಕೈಕೊಟ್ಟವು. ಚೆನ್ನಾಗಿ ಆಡುತ್ತಾರೆ ಎಂದು ಕೊಂಡವರು ಆಡಲಿಲ್ಲ. ಐಪಿಎಲ್‌ನಲ್ಲಿ ಉಜ್ವಲ ಫಾರ್ಮ್‌ನಲ್ಲಿದ್ದ ಸುರೇಶ್‌ ರೈನಾ ಸಂಪೂರ್ಣವಾಗಿ ವಿಫಲರಾದರು. ರೋಹಿತ್‌ ಶರ್ಮ ಆರಂಭಿಕರಾಗಿ ಉತ್ತಮ ಆಯ್ಕೆ ಎಂದುಕೊಳ್ಳುತ್ತಿರುವಂತೆಯೇ, ಮುಖ್ಯ ಪಂದ್ಯಗಳ ಹೊತ್ತಿಗೆ ಅವರು ಖಾಲಿಯಾಗಿ ಬಿಟ್ಟಿದ್ದರು. ಜೊತೆಗೆ, ಅವರನ್ನು ಆರಂಭಿಕರನ್ನಾಗಿ ಆಡಿಸಿದ್ದರಿಂದ ಓರ್ವ ಅತ್ಯುತ್ತಮ ಪಂದ್ಯ ಮುಗಿಸುಗಾರನ ಸೇವೆಯಿಂದ ತಂಡ ವಂಚಿತವಾಯಿತು. ಸೆಹ್ವಾಗ್‌ ಗೈರಿನಿಂದಂತೂ ತಂಡಕ್ಕೆ ತುಂಬಲಾರದ ನಷ್ಟವಾಯಿತು. ಅವರ ಗಾಯದ ಸುತ್ತ ಉದ್ಭವಿಸಿದ ವಿವಾದ ತಂಡದ ಮನೋಬಲದ ಮೇಲೆ ಕೊಡಲಿ ಪೆಟ್ಟು ನೀಡಿತು. ಸಕಾರಾತ್ಮಕ ಆಲೋಚನೆಗಳಿಗೆ, ಶಾಂತ ಸ್ವಭಾವಕ್ಕೆ ಹೆಸರಾದ ಧೋನಿ ತಮಗೆ ಒಗ್ಗದ ಸ್ವಭಾವ ಪ್ರದರ್ಶಿಸಿ ಅನಗತ್ಯವಾಗಿ ವಿವಾದ ಹಾಗೂ ಒತ್ತಡ ಮೈಮೇಲೆಳೆದುಕೊಂಡರು.
ಈ ವೈಫಲ್ಯದಲ್ಲಿ ಮೈಮರೆವಿನ ಪಾಲೂ ಇದೆ. ಹಾಲಿ ಚಾಂಪಿಯನ್‌ ಎಂಬ ಪ್ರಭಾವಳಿ, ಈ ಬಾರಿಯೂ ಬಲಿಷ್ಠ, ಫೇವರಿಟ್‌ ಎಂಬ ಅನುಕೂಲ ತಂಡದ ಆಲೋಚನಾ ಲಹರಿಯನ್ನೇ ಬದಲಿಸಿತ್ತು. ಗುಂಪಿನ ಹಂತದಲ್ಲಿ ಬಾಂಗ್ಲಾ ದೇಶ ಮತ್ತು ಐರ್ಲೆಂಡ್‌ನಂಥ ದುರ್ಬಲ ತಂಡಗಳೊಂದಿಗೆ ಸ್ಥಾನ ಪಡೆದಿದ್ದ ತಂಡ ಸೂಪರ್‌-8 ಪ್ರವೇಶಿಸುತ್ತಿದ್ದಂತೆಯೇ ಏಕಾಏಕಿ ಮಲೆನಾಡಿನಿಂದ ರಾಜಸ್ಥಾನದ ಮರುಭೂಮಿಗೆ ಕಾಲಿರಿಸಿದಂತೆ ಚಡಪಡಿಸಿತು. ವೆಸ್ಟ್‌ ಇಂಡೀಸ್‌ ವಿರುದ್ಧ ಪಂದ್ಯದಲ್ಲಿ ಮೊದಲ ಬಾರಿ ಬಲಾಢ್ಯ ಎದುರಾಳಿಯ ವಿರುದ್ಧ ಆಡುವಾಗ ತಂಡದ ಎಲ್ಲಾ ದೌರ್ಬಲ್ಯಗಳು ಬಯಲಿಗೆಬಂದವು.
ಧೋನಿ ಎಂದೊಡನೆ ಅವರ ಸಿಡಿಗುಂಡಿನಂಥ ಹೊಡೆತಗಳು ಕಣ್ಮುಂದೆ ಸುಳಿಯುವ ಕಾಲವೊಂದಿತ್ತು. ಆದರೆ, ಅವರು ನಾಯಕರಾದ ಮೇಲೆ ಸ್ವಭಾವದಂತೆ, ಬ್ಯಾಟಿಂಗ್‌ ಶೈಲಿ ಸಹ ಶಾಂತವಾಯಿತು. ಆದರೆ, ತಂಡ ಗೆಲ್ಲುತ್ತಿದ್ದ ಕಾರಣ ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಐಪಿಎಲ್‌ನಿಂದೀಚೆಗೆ ಧೋನಿ ಫಾರ್ಮ್‌ ಸಂಪೂರ್ಣ ಕೈಕೊಟ್ಟಿದೆ. ಭಾನುವಾರ ಯೂಸುಫ್‌ ಪಠಾಣ್‌ಗಿಂತ ಮುಂದಾಗಿ ಕ್ರೀಸ್‌ಗೆ ಆಗಮಿಸಿದ ಅವರು ಬೌಂಡರಿಗಳು ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಒಂಟಿ ರನ್‌ಗಳಿಗಾಗಿ ಓಡುತ್ತಿದ್ದರು.
ಇನ್ನು ನಾಯಕರಾಗಿ ಅವರು 4ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾರನ್ನು ಕಳಿಸಿದ್ದೇಕೆ ಎಂಬಿತ್ಯಾದಿ ನಿರ್ಧಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯಲಿವೆ. ಇದುವರೆಗೆ ಇಂಥ ಗ್ಯಾಂಬಲ್‌ಗಳೇ ಅವರ ಕೈಹಿಡಿಯುತ್ತಿದ್ದವು. ಈ ಬಾರಿ ವಿಫಲವಾಯಿತು ಎಂಬುದಷ್ಟೇ ಇದಕ್ಕಿರುವ ಅರ್ಧ ಉತ್ತರ.
ಏರಿದವರು ಕೆಳಗಿಳಿಯಲೇ ಬೇಕು. ಬೇಗನೆ ಯಶಸ್ಸು ಕಂಡವರು, ಅಷ್ಟೇ ಬೇಗ ವೈಫಲ್ಯವನ್ನೂ ಕಾಣುತ್ತಾರೆ. ಧೋನಿ ವೃತ್ತಿಜೀವನದಲ್ಲಿ ನಿಧಾನವೆಂಬುದಕ್ಕೆ ಜಾಗವೇ ಇಲ್ಲ. ಅವರು ತಂಡಕ್ಕೆ ಆಗಮಿಸಿದ ಕೆಲವೇ ವರ್ಷಗಳಲ್ಲಿ ನಾಯಕರಾದರು. ಗಂಗೂಲಿ, ದ್ರಾವಿಡ್‌ರಂಥ ಮಹಾನ್‌ ಆಟಗಾರರಿಗೆ ಒಲಿಯದ, ರಾಷ್ಟ್ರದ ಸರ್ವಶ್ರೇಷ್ಠ ಕ್ರೀಡಾ ಪುರಸ್ಕಾರ ರಾಜೀವ್‌ ಗಾಂಧಿ ಖೇಲ್‌ರತ್ನ ಅವರನ್ನು ಬಹಳ ಬೇಗನೆ ಹುಡುಕಿಕೊಂಡು ಬಂತು. ಜನಪ್ರಿಯತೆಯಲ್ಲಿ, ಸೌಲಭ್ಯಗಳಲ್ಲಿ, ಜಾಹೀರಾತು ಕ್ಷೇತ್ರದಲ್ಲಿ ಅವರು ಸಚಿನ್‌ರನ್ನೂ ಮೀರಿಸಿದರು. ಯಶಸ್ಸು ಕಾಲಬುಡದಲ್ಲಿ ಬಿದ್ದಿರುವಾಗ ತಾವು ಮಾಡಿದ್ದೇ ಸರಿ ಎಂಬ ಭ್ರಮೆಯ ಕೋಟೆಯಲ್ಲಿ ಬಂಧಿಯಾಗುವುದು ಸಹಜ. ತಮ್ಮ ಮಾತನ್ನು ಎಲ್ಲರೂ ಕೇಳುತ್ತಾರೆ ಎಂಬ ಅಹಂ ಬೆಳೆಯುವುದು ಸಹಜ. ಇದೇ ದೊಡ್ಡಸ್ಥಿಕೆಯಲ್ಲೇ ಅವರು `ಪದ್ಮಶ್ರೀ'ಯಂಥ ರಾಷ್ಟ್ರ ಗೌರವವನ್ನು ಕಾಲಕಸವಾಗಿ ಕಂಡರು. ಈ ಪ್ರಶಸ್ತಿ ಪ್ರದಾನ ಸಮಾರಂಭದ ದಿನ ದೇಶದಲ್ಲೇ ಇದ್ದರೂ, ಅದನ್ನು ಸ್ವೀಕರಿಸುವುದಕ್ಕಿಂತ, ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸುವುದೇ ಮುಖ್ಯ ಎಂದು ಅವರು ಭಾವಿಸಿದ್ದರು. ಇಷ್ಟು ದಿನ ಇದನ್ನೆಲ್ಲಾ ಅವರ ಬಳಿ ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ, ಇನ್ನು ಮುಂದೆ ಬರಲಿದೆ.
ರಾಷ್ಟ್ರೀಯ ತಂಡದಲ್ಲೂ ಧೋನಿ, ಮತ್ತೊಬ್ಬ ಗ್ರೆಗ್‌ ಚಾಪೆಲ್‌ ಆಗುತ್ತಿದ್ದಾರೆ ಎಂಬ ಗುಸುಗುಸು ಇವೆ. ಅವರ ಸರ್ವಾಧಿಕಾರದ ಎದುರು ಕೋಚ್‌ ಗ್ಯಾರಿ ಕರ್ಸ್ಟನ್‌ ಕೈಗೊಂಬೆಯಂತಾಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ತಂಡ ಆಯ್ಕೆಯ ವಿಷಯದಲ್ಲಿ ಅವರು ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್‌ ವಿರುದ್ಧ ಕುಪಿತಗೊಂಡಿದ್ದು, ರಾಜೀನಾಮೆಗೆ ಮುಂದಾಗಿದ್ದು, ನಂತರ ರಾಜಿಮಾಡಿಕೊಂಡಿದ್ದು ಎಲ್ಲಾ ಇತಿಹಾಸ. ದ್ರಾವಿಡ್‌, ಗಂಗೂಲಿಯಂಥ ಹಿರಿಯ ಆಟಗಾರರನ್ನು ಅವರು ಯಾವ ರೀತಿ ಬದಿಗೆ ಸರಿಸಿದರು ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೇ. ಬಹುಶಃ ಮುಂದಿನ ಸರದಿ ಸೆಹ್ವಾಗ್‌ರದ್ದಾಗಿರಬಹುದು ಎಂಬ ಭಾವನೆ ಕೆಲವರಲ್ಲಿದೆ.
ಇಂಥ ಸಂಗತಿಗಳೆಲ್ಲಾ ಅಪರಾಧವೆಂಬಂತೆ ಕಾಣುವುದು ತಂಡ ಸೋಲುತ್ತಿರುವಾಗ ಮಾತ್ರ. ಅವರು ಈ ಬಾರಿಯೂ ಇಪ್ಪತ್ತು20 ವಿಶ್ವಕಪ್‌ ಗೆದ್ದು ಬಂದಿದ್ದರೆ, ಯಾರಿಗೂ ಮೇಲಿನ ಸಂಗತಿಗಳು ನೆನಪಾಗುತ್ತಲೇ ಇರಲಿಲ್ಲ.
ಇನ್ನು ಕ್ರೀಡೆಯಲ್ಲಿ ನೆನಪುಗಳು ಕ್ಷಣಿಕ. ಹೊಸ ಗೆಲುವಿನ ಮುಂದೆ, ಹಳೆಯ ಸೋಲು ಮರೆತು ಹೋಗುತ್ತದೆ. ತಂಡ ವೆಸ್ಟ್‌ ಇಂಡೀಸ್‌ಗೆ ಹೋಗಿ ಸರಣಿ ಬಾಚಿದರೆ, ಈಗಿನದೆಲ್ಲಾ ಯಾರಿಗೂ ನೆನಪಿನಲ್ಲುಳಿಯುವುದಿಲ್ಲ. ಕಾಲ ಎಲ್ಲವನ್ನೂ ಮರೆಸುತ್ತದೆ.
ಹಾಗೆಂದು, ಮರೆತು ಹೋಗುವ ಮಾತ್ರಕ್ಕೆ ತಪ್ಪುಗಳೆಲ್ಲವೂ ಸರಿಯಾಗುವುದಿಲ್ಲ. ಸುಧಾರಣೆಯೆನ್ನುವುದು ನಿರಂತರ ಪ್ರಕ್ರಿಯೆ. ಅದು ನಿಂತ ನೀರಾಗದೆ, ಹರಿಯುವ ನದಿಯಂತಿರಬೇಕು.

1 comment:

  1. ನಿಜ, ಧೋನಿ ಬೇಕೆಂದೇ ಸೆಹ್ವಾಗ್ ವಿವಾದವನ್ನು ಮೈ ಮೇಲೆ ಎಳೆದುಕೊಂಡರು ಎನಿಸುತ್ತದೆ. ಇವತ್ತಿನ ಸೋಲಿನ ನಂತರ ಅವರ ಚಾಲಾಕಿತನದ ಬಗ್ಗೆ ಅನುಮಾನ ಪಡುವುದು ಬೇಡವೆನಿಸುತ್ತದೆ. ಬ್ಯಾಟಿಂಗ್, ಫೀಲ್ಡಿಂಗ್ ಕೈಕೊಟ್ಟದ್ದು, ಮುಖ್ಯವಾಗಿ ಕಳೆದ ಬಾರಿ ಉತ್ತಪ್ಪನಂತವರು ತೋರಿದ್ದ ವೀರಾವೇಷ ಇರಲಿಲ್ಲ.
    ನನಗಂತೂ ಈ ಸೋಲು ಮುಂಚೆಯೇ ನಿರೀಕ್ಷೆಯಲ್ಲಿತ್ತು. ಅದು ನಿಜವೂ ಆಗಿದ್ದು ಬೇಜಾರು..........

    ReplyDelete